ತುಳಿತಕ್ಕೊಳಗಾದವರು

ತುಳಿತಕ್ಕೊಳಗಾದವರು

ನಮ್ಮ ದೇಶದಲ್ಲಿ ತುಳಿತಕ್ಕೊಳಗಾದವರ ಬಗ್ಗೆ ಮಾತನಾಡದ ಮಂದಿಯೇ ಕಡಿಮೆ. ವರ್ಣಭೇದ, ಲಿಂಗಭೇದ ಗಳಿಂದ ಹಿಡಿದು ವಿತ್ತಭೇದದ ವರೆಗೆ ಅಸಮಾನತೆಯಲ್ಲಿ ಸಮಾನತೆ ಕಾಣುತ್ತಿರುವ ಈ ಪುಣ್ಯಭೂಮಿಯ ಪಾಡನ್ನು ತಿಳಿಯಬೇಕಾದರೆ ತುಳಿತಕ್ಕೊಳಗಾದವರನ್ನು ನೀನು ನೋಡಿದರೆ ಸಾಕು. ನಿರೀಕ್ಷೆಯ ಕಣ್ಣುಗಳಲ್ಲಿ ಹರಿಯುತ್ತಿರುವ ಅವರ ಕನಸುಗಳನ್ನು ಮಾರಿಕೊಂಡು ಹೊಟ್ಟೆ ಹೊರೆಯುವ ಪುಢಾರಿಗಳು, ಓತಪ್ರೋತ ವ್ಯಾಖ್ಯಾನಗಳ ವೈಖರಿಯಲ್ಲಿ ವಿಜೃಂಭಿಸುವ ಪ್ರಬುದ್ಧರು ಏಕಕಾಲಕ್ಕೆ ತುಳಿತಕ್ಕೊಳಗಾದವರ ಬದುಕನ್ನು ಬಿಟ್ಟಿ ಸಿಕ್ಕಿದ ಸರಕಿನಂತೆ ಬಳಸುತ್ತಿದ್ದಾರೆ. ಪುಢಾರಿಗಳಿಗಾದರೂ ತುಳಿತಕ್ಕೊಳಗಾದವರ ಬಗ್ಗೆ ಒಂದು ಸ್ಪಷ್ಟ ಕಲ್ಪನೆಯಿರುತ್ತದೆ. ಒಟ್ಟಾರೆ ಶೋಷಣೆಗೊಳಗಾದ ಬಡಬಗ್ಗರನ್ನೂ, ದಲಿತರನ್ನು, ಹಿಂದುಳಿದವರನ್ನು, ಮಹಿಳಾ ವರ್ಗವನ್ನೂ ತುಳಿತಕ್ಕೊಳಗಾದವರೆಂದು ಇವರು ಸ್ಥೂಲವಾಗಿ ನಂಬಿ ಅವರ ಬಗ್ಗೆ ಮಾತಾಡುತ್ತಾರೆ; ಕೆಲವು ರಾಜಕಾರಣಿಗಳು ನಿಜಕ್ಕೂ ಪ್ರಾಮಾಣಿಕವಾಗಿ ಮಾತನಾಡುತ್ತಾರೆ; ಕಳಕಳಿಯ ತೀವ್ರತೆ ತೋರುತ್ತಾರೆ; ಕೈಲಾದ ಕೆಲಸ ಮಾಡುತ್ತಾರೆ. ಆದರೆ ಎಲ್ಲ ಪ್ರಬುದ್ಧರ ಬಗ್ಗೆ ಈ ಮಾತನ್ನು ಸಾರಾಸಗಟಾಗಿ ಹೇಳುವಂತಿಲ್ಲ. ಮತ್ತೊಬ್ಬರ ‘ಅಪ್ರಬುದ್ಧತೆ’ಯನ್ನು ಅನಾವರಣಗೊಳಿಸುವ ಅಪೇಕ್ಷೆಯಲ್ಲಿ ತುಳಿತಕ್ಕೊಳಗಾದವರನ್ನು ತರ್ಕದಲ್ಲಿ ತುಂಡರಿಸತೊಡಗುವ ಕೆಲವು ‘ಪ್ರಬುದ್ಧ’ರಿಗೇನೂ ಕಡಿಮೆಯಿಲ್ಲ. ಸಾಮಾಜಿಕ-ಆರ್ಥಿಕ ಶೋಷಣೆಗೆ ತುತ್ತಾದ ಪರಂಪರೆಯುಳ್ಳವರನ್ನು ತುಳಿತಕ್ಕೊಳಗಾದವರು ಎಂಬ ಸಹಜ ಸಾಮಾನ್ಯ ವ್ಯಾಖ್ಯಾನ ಕೆಲವರಿಗೆ ಸರಳವಾಗಿ ಕಂಡುಬಂದರೆ ತುಳಿಯುವವರಲ್ಲೂ ತುಳಿತಕ್ಕೊಳಗಾದವರನ್ನು ಗುರುತಿಸುವ ವಿಶ್ಲೇಷಣೆ ಕೊಟ್ಟುಬಿಡುತ್ತಾರೆ.

ಕೆಲವು ವರ್ಷಗಳ ಹಿಂದಿನ ಮಾತು. ಸಾಹಿತ್ಯದಲ್ಲಿ ಸಾಮಾನ್ಯ ಮನುಷ್ಯನನ್ನು ಕುರಿತಂತೆ (ಕೇಂದ್ರ) ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ರಾಷ್ಟ್ರೀಯ ಸಂವಾದ ಗೋಷ್ಟಿಯೊಂದು ನಡೆಯಿತು. ಆಂಧ್ರದ ಕ್ರಾಂತಿಕವಿ ಶ್ರೀ ಶ್ರೀ, ಕನ್ನಡದ ಖ್ಯಾತ ಕತೆಗಾರ ಮಾಸ್ತಿಯವರಂತಹ ಹಿರಿಯರಿಂದ ಹಿಡಿದು ನಮ್ಮ ದೇಶದ ಕೆಲವು ಪ್ರಮುಖ ಲೇಖಕರು ಪಾಲ್ಗೊಂಡಿದ್ದ ಈ ಗೋಷ್ಟಿ ಆಹ್ವಾನಿತರಿಗೆ ಮಾತ್ರ ಸೀಮಿತವಾಗಿತ್ತು. ನಾನೂ ಒಬ್ಬ ಆಹ್ವಾನಿತ ಲೇಖಕನಾಗಿ ಭಾಗವಹಿಸಿದ್ದೆ. ಮೊದಲ ದಿನದಿಂದ ಕೊನೆಯ ದಿನದ ವರೆಗೆ ‘ಸಾಮಾನ್ಯ ಮನುಷ್ಯ’ ಎಂದರೆ ಯಾರು ಎಂಬ ಪ್ರಶ್ನೆಗೆ ಸರಿ ಉತ್ತರ ಸಿಗಲಿಲ್ಲವೆಂಬಂಥ ವಾತಾವರಣವನ್ನು ಕೆಲವು ಹಿರಿಯರು ಹುಟ್ಟು ಹಾಕಿದರು. ‘ಸಾಮಾನ್ಯ ಮನುಷ್ಯ’ನೆಂದರೆ ವಿಶೇಷ ಸವಲತ್ತುಗಳಿಂದ ವಂಚಿತಗೊಂಡ ಇತಿಹಾಸವುಳ್ಳ ಸಾಮಾಜಿಕ-ಆರ್ಥಿಕ ಶೋಷಣೆಯ ನೆಲೆಯಲ್ಲಿರುವ ಮನುಷ್ಯರೆಂಬ ವಿವರಣೆ ಸಾಮಾನ್ಯವಾಗಿ ಒಪ್ಪಿತ ಸಂಗತಿಯಾಗಿದ್ದರೂ ‘ಅಸಾಮಾನ್ಯರು’ ಸೇರಿದ ಈ ಸಭೆಯಲ್ಲಿ ‘ಸಾಮಾನ್ಯ’ರಾಗುವ ತವಕವೇ ಹೆಚ್ಚಾಗಿ ಕಂಡು ಬಂದು, ಸಾಮಾನ್ಯವಾಗಿ ಒಪ್ಪಿತವಾದ ಸಂಗತಿಗೆ ತಕರಾರು ಎತ್ತಲಾಯಿತು. ‘ಸವಲತ್ತುಗಳ ಶ್ರೀಮಂತಿಕೆಯಲ್ಲಿ ತೇಲುತ್ತಿರುವವನೂ ಅಂತರಂಗದಲ್ಲಿ ಸಾಮಾನ್ಯ ಮನುಷ್ಯನಾಗಿರಬಹುದು, ಸಾಮಾಜಿಕವಾಗಿ ಉನ್ನತ ಸ್ತರದಲ್ಲಿದ್ದು ಸವಲತ್ತುಗಳ ರುಚಿಕಂಡವರ ಒಳಗೆ ಸಾಮಾನ್ಯ ಮನುಷ್ಯನಿರಬಹುದು. ಹೀಗಾಗಿ ಇಲ್ಲಿರುವ ನಮ್ಮಲ್ಲಿ ಅನೇಕರು ಸಾಮಾಜಿಕ-ಆರ್ಥಿಕ ಸವಲತ್ತುದಾರರರಾದರೂ ‘ಸಾಮಾನ್ಯರೇ’ -ಇದೇ ಪದಗಳಲ್ಲದಿದ್ದರೂ ಇದೇ ಧಾಟಿಯ ತರ್ಕವೊಂದನ್ನು ಅನೇಕರು ಮಂಡಿಸುತ್ತ, ಮೂರು ದಿನಗಳ ಚರ್ಚೆಯನ್ನು ಪ್ರಶ್ನೆಯಲ್ಲೇ ನಿಲ್ಲಿಸಲು ಪ್ರಯತ್ನಿಸಿದರು. ಇದು ಒಂದು ರೀತಿಯ ಪ್ರಬುದ್ಧರ ಪ್ರಯತ್ನ!

‘ತುಳಿತಕ್ಕೊಳಗಾದವರು’ ಎಂಬ ಕಲ್ಪನೆ ‘ಸಾಮಾನ್ಯ ಮನುಷ್ಯ’ನ ಕಲ್ಪನೆಗಿಂತ ಹೆಚ್ಚು ಖಚಿತವಾಗಿದೆ. ‘ತುಳಿತ’ ಎನ್ನುವುದು ಇಲ್ಲಿ ಮಾನದಂಡ. ಆದರೂ ಕೆಲವು ಪ್ರಬುದ್ಧರ ಕೈಯಲ್ಲಿ ಸಿಕ್ಕಿ ಎಲ್ಲರೂ ತುಳಿತಕ್ಕೊಳಗಾದವರು ಎಂಬ ವಿಶಾಲ, ವಿಶೇಷ ವ್ಯಾಖ್ಯಾನವನ್ನು ಪಡೆಯಬಹುದೆಂಬ ಅನುಮಾನದಿಂದ ‘ಸಾಮಾನ್ಯ ಮನುಷ್ಯ’ನನ್ನು ಕುರಿತು ಘಟನೆಯನ್ನು ಉಲ್ಲೇಖಿಸಿದೆ. ನಿಜ, ಒಬ್ಬೊಬ್ಬರು ಒಂದೊಂದು ರೀತಿಯ ತುಳಿತಕ್ಕೆ ಒಳಗಾಗಬಹುದು; ವರಮಾನ ತೆರಿಗೆ ವಂಚನೆ ಮಾಡಿದವರಿಗೆ ಮೇಲಧಿಕಾರಿಗಳ ‘ತುಳಿತ’, ಕಳ್ಳ ಕಾಕರಿಗೆ ಪೊಲೀಸರ ತುಳಿತ -ಹೀಗೆ ತುಳಿತದ ಪರಿಕಲ್ಪನೆಯನ್ನು ಪುಡಿ ಮಾಡುವಂತೆ ತುಳಿದರೆ ಮಾತಾಡಿ ಪ್ರಯೋಜನವೇ ಇಲ್ಲ. ಸವಲತ್ತಿನ ಸ್ವಾರ್ಥವನ್ನೇ ಸಂಪ್ರದಾಯವನ್ನಾಗಿಸಿದ ಸಾಮಾಜಿಕ-ಆರ್ಥಿಕ ಶಕ್ತಿಗಳಿಂದ ವಂಚನೆಗೊಳಗಾದ ಪರಂಪರೆಯುಳ್ಳ ಅವರನ್ನು ‘ತುಳಿತಕ್ಕೊಳಗಾದವರು’ ಎಂದು ಭಾವಿಸುವುದು, ಆ ನೆಲೆಯಲ್ಲಿ ಚರ್ಚಿಸುವುದು ಸೂಕ್ತ.

ಮನುಷ್ಯನಲ್ಲಿ ಖಾಸಗಿ ಆಸ್ತಿ ಕಲ್ಪನೆ ಹುಟ್ಟಿದಾಗಿನಿಂದ ತುಳಿತವೂ ಪ್ರಾರಂಭವಾಗಿದೆ. ಆಸ್ತಿಯನ್ನುವುದು ಮನುಷ್ಯನ ಶ್ರಮವಿಲ್ಲದೆ ರೂಪು ಗೊಳ್ಳುವುದಿಲ್ಲ. ತನ್ನಾರಕ್ಕೆ ತಾನು ಬಿದ್ದುಕೊಂಡಿರುವ ಭೂಮಿ ಆಸ್ತಿಯೆನಿಸುವುದಿಲ್ಲ. ಮನುಷ್ಯ ತನ್ನ ಶ್ರಮವನ್ನು ಭೂಮಿಗೆ ವಿನಿಯೋಗಿಸಿದರೆ ಇದು ಹೊಲವಾಗುತ್ತದೆ. ನಿವೇಶನವಾಗುತ್ತದೆ; ಫಲಕೊಡುವ ಸಾಧನವಾಗಿ ‘ಆಸ್ತಿ’ ಎನಿಸಿಕೊಳ್ಳುತ್ತದೆ. ಹಾಗೆ ನೋಡಿದರೆ ಶ್ರಮವೇ ಮನುಷ್ಯ ಸಂಸ್ಕೃತಿಯ ಮೂಲ.

ಮನುಷ್ಯ ತಾನು ಹುಟ್ಟಿ ಬೆಳೆಯುತ್ತಿರುವ ಪ್ರಕೃತಿಯನ್ನು ತನಗೆ ಬೇಕಾದಂತೆ ಒಗ್ಗಿಸಿಕೊಳ್ಳಲು ಪ್ರಯತ್ನಿಸಿದ. ಅದಕ್ಕಾಗಿ ಶ್ರಮವನ್ನು ವಿನಿಯೋಗಿಸಿದ. ಬೆಟ್ಟಗುಡ್ಡಗಳನ್ನು ಹತ್ತಿದ; ದಿಣ್ಣೆಗಳನ್ನು ಕಡಿದ. ಭೂಮಿಯನ್ನು ಸಮತಟ್ಟು ಮಾಡಿದ; ಯದ್ವಾತದ್ವ ಹರಿಯುವ ನೀರಿಗೆ ಏರಿ ಹಾಕಿದ; ಕೆರೆಯಾಗಿಸಿದ; ಕಾಲುವೆಯಾಗಿಸಿದ; ಮರಗಿಡಗಳನ್ನು ಬಳಸಿ ಗುಡಿಸಿಲು ಕಟ್ಟಿದ; ಮಣ್ಣು ಮರಗಳಿಂದ ಮನೆ ಕಟ್ಟಿದ. ಹೀಗೆ ಮನುಷ್ಯ ತನ್ನ ಶ್ರಮದಿಂದ ಒಂದು ಸಂಸ್ಕೃತಿಯನ್ನೇ ಕಟ್ಟಿಕೊಂಡ; ಕಲಿಯುತ್ತ ಬಂದ.

ಮನುಷ್ಯ ಸಂಸ್ಕೃತಿಯ ಮೊದಲ ಹಂತದಲ್ಲಿ ಖಾಸಗಿ ಆಸ್ತಿ ಎಂಬುದೇ ಇರಲಿಲ್ಲ. ಇರುವುದೆಲ್ಲವೂ ಇರುವ ಎಲ್ಲರ ಬಳಕೆಗೆ ಮುಕ್ತವಾಗಿತ್ತು. ಆಗಿನ ಮುಕ್ತ, ನೆಲೆಗೂ ಈಗಿನ ಮುಕ್ತ ನೆಲೆಗೂ ವ್ಯತ್ಯಾಸವಾಗಿದೆ. ಆಗ ಯಾವುದು ಯಾರೊಬ್ಬರ ಸ್ವಂತ ಸ್ವತ್ತಾಗಿರಲಿಲ್ಲ. ಆದ್ದರಿಂದ ಮುಕ್ತ ನೆಲೆ ಅರ್ಥ ಸಾಮೂಹಿಕ ಒಡೆತನ ಮತ್ತು ಸಾಮೂಹಿಕ ಉತ್ಪಾದನೆ ಸ್ವರೂಪದಲ್ಲಿದೆ. ಈಗ ಎಲ್ಲವೂ ಯಾರದೊ ಸ್ವಂತ ಸ್ವತ್ತಾಗಿದೆ. ಆದ್ದರಿಂದ ಈಗ ಮುಕ್ತ ನೆಲೆಯ ಪರಿಣಾಮವೆಂದರೆ ಉಳ್ಳವರಿಗೆ ಮುಕ್ತ ಅವಕಾಶ. ಅವಕಾಶ ವಂಚಿತ ಅಸಂಖ್ಯಾತರಿಗೆ ಮತ್ತಷ್ಟು ತುಳಿತ.

ಖಾಸಗಿಯಾಗಿ ಅಪರಿಮಿತ ಆಸ್ತಿ ಮಾಡಿಕೊಳ್ಳುವ ಅವಕಾಶ ಮನುಷ್ಯ-ಮನುಷ್ಯರ ನಡುವಿನ ಅಂತರವನ್ನು ಹೆಚ್ಚಿಸುತ್ತ, ತುಳಿತದ ಮೂಲ ಅಸ್ತ್ರವಾಗಿದೆ. ಮಾನವಶಾಸ್ತ್ರಜ್ಞ ಸ್ಟೀವರ್ಡ್‌ನ ಪ್ರಕಾರ ಖಾಸಗಿ ಆಸ್ತಿ ಕಲ್ಪನೆ ಬಲವಾದಾಗಲೇ ಶೀಲದ ಕಲ್ಪನೆ ಬಲವಾಗಿ ಏಕ ಪತಿತ್ವ ಬಲಗೊಂಡಿದೆ. ಇದರಿಂದ ಹೆಣ್ಣಿನ ಗರ್ಭದಲ್ಲಿ ಹುಟ್ಟುವ ಶಿಶುವಿನ ತಂದೆ ಯಾರೆಂಬುದು ಖಚಿತವಾಗುತ್ತದೆ. ತಂದೆಯ ಆಸ್ತಿ, ನಂತರ ಆತನಿಗೆ ಸೇರುತ್ತದೆ. ಆಸ್ತಿ ಸಾಮೂಹಿಕ ಒಡೆತನವಿದ್ದ ಕಾಲದಲ್ಲಿ ಏಕಪತ್ನಿತ್ವ ಪದ್ಧತಿ ಇರಲಿಲ್ಲ. ಮಿಶ್ರ ಕುಟುಂಬ ಮತ್ತು ಬಹುಪತಿತ್ವ ಪದ್ಧತಿಗಳು ಇದ್ದವು. ಆಸ್ತಿ ಖಾಸಗಿಯಾಗಿರಲಿಲ್ಲವಾದ್ದರಿಂದ ಆಸ್ತಿ ಮುಂದಿನ ಒಡೆತನಕ್ಕೆ ವಂಶದ ಕುಡಿಯನ್ನು ಗುರುತಿಸುವ ಪ್ರಮೇಯವೇ ಆಗ ಇರಲಿಲ್ಲ. ಖಾಸಗಿ ಆಸ್ತಿಯ ಕಲ್ಪನೆ ಬಂದಮೇಲೆ ಹೆಂಗಸಿಗೆ ವೈವಾಹಿಕ ನಿಯಮಗಳು ಮೂಲಕ ಏಕಪತಿ ನಿಷ್ಠೆಯ ಪಾತಿವ್ರತ್ಯದ ಕಲ್ಪನೆ ಬೆಳೆದು ಬಂತು. ಹೀಗೆ ಹೆಣ್ಣು ಎರಡನೇ ದರ್ಜೆಗೆ ಇಳಿದು ಲಿಂಗಭೇದ ನೀತಿ ಪ್ರಾರಂಭವಾಗಿ ಮುಂದೆ ವಿವಿಧ ರೂಪಗಳನ್ನು ತಾಳಿತು. ಈ ವಿವರಣೆಯಿಂದ ಖಾಸಗಿ ಆಸ್ತಿ ಕಲ್ಪನೆಯು ಹೇಗೆ ‘ಅಂತರ’ವನ್ನು ಹುಟ್ಟು ಹಾಕಿತೆಂಬುದು ಸ್ಪಷ್ಟವಾಗುತ್ತದೆ.

‘ಅಂತರದ ಅಳತೆ’ಯೇ ಇಂಡಿಯಾ ದೇಶದ ಮಾನದಂಡ. ಒಬ್ಬ ಮನುಷ್ಯನನ್ನು ಇನ್ನೊಬ್ಬ ಮನುಷ್ಯನಿಂದ ಎಷ್ಟು ಅಂತರದಲ್ಲಿ ಯಾವ ಕಾರಣಕ್ಕಾಗಿ ನಿಲ್ಲಿಸಲಾಗಿದೆಯೆಂಬುದನ್ನು ಅಳತೆ ಮಾಡಿದರೆ ಇಂಡಿಯಾದ ಸಾಮಾಜಿಕ-ಆರ್ಥಿಕ ವ್ಯಾಖ್ಯಾನವನ್ನು ಮಾಡಿದಂತಾಗುತ್ತದೆ. ಅಸ್ಪೃಶ್ಯತೆಯ ಅಂತರ, ಆರ್ಥಿಕ ಅಂತರ ಎಲ್ಲವನ್ನು ಇದು ಒಳಗೊಳ್ಳುತ್ತದೆ.

ಖಾಸಗಿ ಆಸ್ತಿಯ ಕಲ್ಪನೆಯಿಂದ ಪ್ರಾರಂಭಗೊಂಡ ತುಳಿತವು ಈಗ ಬಾಹ್ಯಾಂತರದ ಅಳತೆ ಮಾತ್ರವಾಗಿ ಉಳಿದಿಲ್ಲ. ಅಂತರದ ಅಳತೆಯ ಅಂತರಂಗಕ್ಕೂ ಪ್ರವೇಶಿಸಿ, ತುಳಿತಕ್ಕೊಳಗಾದವರಲ್ಲಿ ಕೀಳರಿಮೆಯನ್ನು ಹುಟ್ಟು ಹಾಕಿದೆ. ಮಾನಸಿಕವಾಗಿ ನರಳಿಸುತ್ತಿದೆ. ಅಕ್ಷರ, ಅನ್ನ, ಆಶ್ರಯ -ಹೀಗೆ ಎಲ್ಲಾ ಮೂಲಭೂತ ಅಗತ್ಯಗಳಿಗೆ ಒದಗಿದ ವಂಚನೆಯ ಸ್ಥಿತಿಯು ಒಂದು ಸಂಪ್ರದಾಯವಾಗಿ ಬೆಳೆಯುತ್ತ ತುಳಿತಕ್ಕೊಳಗಾದವರ ಮಾನಸಿಕ-ಬೌದ್ಧಿಕ ವಿಕಾಸವನ್ನು ಕಿತ್ತುಕೊಂಡಿದೆ. ಅಂತರಂಗ-ಬಹಿರಂಗಗಳ ಮೇಲೆ ಹಲ್ಲೆ ಮಾಡಿದೆ; ಅಷ್ಟೇ ಅಲ್ಲ, ಇವತ್ತಿನ ಬೌದ್ಧಿಕ ವರ್ಗ ತನ್ನ ಹುಸಿ ಬೌದ್ಧಿಕತೆಯ ಮೂಲಕ ತುಳಿತಕ್ಕೊಳಗಾದವರನ್ನು ಸಂಸ್ಕೃತಿಹೀನರೆಂದು ಭಾವಿಸಿದೆ. ಇದು ತುಳಿತಕ್ಕೊಳಗಾದವರಿಗೆ ಮಾಡಿದ ಮತ್ತೊಂದು ಅಪಚಾರ.

ನಾನು ಮೊದಲೇ ಹೇಳಿರುವಂತೆ ಮೂಲತಃ ಶ್ರಮ ಮತ್ತು ಸಂಸ್ಕೃತಿಗೇ ಸಾವಯವ ಸಂಬಂಧವಿದೆ; ಆಧುನಿಕ ಸಂದರ್ಭದ ಹುಸಿ ಸಂಸ್ಕೃತಿ ವಕ್ತಾರರು ಶ್ರಮವನ್ನು ಸಂಸ್ಕೃತಿಯಿಂದ ಬೇರ್ಪಡಿಸಿ ನೋಡುತ್ತಿರುವುದರಿಂದ ಮೂಲತಃ ಶ್ರಮಜೀವಿ ವರ್ಗಕ್ಕೆ ಸೇರಿದ ತುಳಿತಕ್ಕೊಳಗಾದವರು ‘ಸಂಸ್ಕೃತಿ ಹೀನ’ರಾಗಿ ಬಿಟ್ಟರು! ಎಂಥ ವಿಪರ್ಯಾಸ!

ವಾಸ್ತವವಾಗಿ, ಶ್ರಮ ಮೂಲವಾದ ಸಂಸ್ಕೃತಿಯು ವಿಕಾಸವಾಗುತ್ತ ಬೌದ್ಧಿಕ ವಲಯವನ್ನೂ ಒಳಗೊಂಡು ವಿಶಾಲ ವ್ಯಾಪ್ತಿಯನ್ನು ಪಡೆದಿದೆಯೆಂದು ವ್ಯಾಖ್ಯಾನಿಸುವುದು ಸರಿಯಾದೀತು! ಜೊತೆಗೆ ತುಳಿತಕ್ಕೊಳಗಾದವರ ನೆಲೆಯಿಂದ ಸಂಸ್ಕೃತಿಯನ್ನು ನೋಡುವ ಕ್ರಮವು ಮನುಷ್ಯ ಸಮಾಜಕ್ಕೆ ತೋರಿಸುವ ಗೌರವವೂ ಆಗುತ್ತದೆ. ಸಾಮಾಜಿಕ-ಸಾಂಸ್ಕೃತಿಕ ಅಸಮಾನತೆಯನ್ನು ನೀಗುವ ನಿರೀಕ್ಷೆಯೂ ಆಗುತ್ತದೆ.

ತುಳಿತಕ್ಕೊಳಗಾದವರ ಸ್ಥಿತಿಗತಿಗಳಲ್ಲಿ ಈಗ ಸ್ವಲ್ಪವಾದರೂ ಸುಧಾರಣೆಯಾಗಿದೆಯೆನ್ನುವುದು ನಿಜ. ಆದರೆ ನಮ್ಮ ಸಮಾಜದಲ್ಲಿ ಎಂಥ ಶ್ರೇಣಿಕರಣವಿದೆಯೆಂದರೆ ತುಳಿಯುವವರು ತಮ್ಮ ತುಳಿತಕ್ಕೊಳಗಾದವರು ಎಂದಷ್ಟೇ ವಿಭಾಗಿಸಿ ಕೈತೊಳೆದುಕೊಳ್ಳುವಂತಿಲ್ಲ. ತುಳಿಯುವವರಲ್ಲೂ ಶ್ರೇಣಿಗಳಿವೆ. ತುಳಿಸಿಕೊಳ್ಳುವವರಲ್ಲೂ ಶ್ರೇಣಿಗಳಿವೆ. ತುಳಿತಕ್ಕೊಳಗಾದವರಲ್ಲಿ ಹೆಚ್ಚು ಸವಲತ್ತು ಪಡೆಯುವ ಶ್ರೇಣಿಗಳು ಸೃಷ್ಟಿಯಾಗುತ್ತ ಅವರಲ್ಲೇ ಸಾಂಸ್ಕೃತಿಕ ಅಂತರ ತಲೆ ಹಾಕುತ್ತಿದೆ. ತುಳಿಸಿಕೊಳ್ಳುವವರಲ್ಲೇ ತುಳಿಯುವ ತಲೆಗಳು ಕಾಣಿಸಿಕೊಳ್ಳುವ ಅಪಾಯ ನಮ್ಮೆದುರಿಗಿದೆ. ಆದರೆ ಈ ನೆಪವೊಡ್ಡಿ ತುಳಿಯುವ ವರ್ಗದವರು ಜಾರಿಕೊಳ್ಳುವಂತಿಲ್ಲ.

ಒಂದು ಮಾತಿನಲ್ಲಿ ಹೇಳುವುದಾದರೆ ಶ್ರೇಣಿಗಳ ಅಂತರವನ್ನು ಹೋಗಲಾಡಿಸುವುದೇ ಮನುಷ್ಯ ಸಂಸ್ಕೃತಿಯ ಮೂಲ ತುಡಿತ.
*****
೦೫-೦೩-೧೯೯೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಲವಂತ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೫

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…