ಆಫೀಸಿನಲ್ಲೊಂದು ದಿನ

ಆಫೀಸಿನಲ್ಲೊಂದು ದಿನ

ಇಂದು ಕಛೇರಿಗೆ ಹಾಜರಾಗುವ ಮೊದಲ ದಿನ, ಈವತ್ತಿನಿಂದ ಸರ್ಕಾರಿ ನೌಕರನಾಗುವ ಸೌಭಾಗ್ಯ. ಇನ್ನು ೫೮ ವರ್ಷಗಳವರೆಗೆ ನಿಶ್ಚಿಂತೆ. ಅಂದರೆ ಚಿಂತೆಗಳೇ ಇಲ್ಲವೆಂದಲ್ಲ. ವಯಸ್ಸಾದ ಅಮ್ಮ – ಅಪ್ಪ, ಬೆಳೆದು ನಿಂತ ತಂಗಿಯರು ಬೇರೆ. ಅಮ್ಮ ನಿತ್ಯರೋಗಿ, ಆಕೆ ಮನೆಯಲ್ಲಿರುವುದಕ್ಕಿಂತ ಆಸ್ಪತ್ರೆ ವಾರ್ಡ್‌ಗಳಲ್ಲಿರುವುದೇ ಹೆಚ್ಚು. ಅಮ್ಮನ ಆರೋಗ್ಯಕ್ಕಾಗಿ ಅಪ್ಪ ಖರ್ಚು ಮಾಡಲು ಎಂದೂ ಹಿಂದೆಮುಂದೆ ನೋಡಿದವರಲ್ಲ. ರಿಟೈರ್ ಆದ ಮೇಲೂ ಅಷ್ಟೆ, ಒಷ್ಟೊತ್ತಿನ ಊಟಬಿಟ್ಟರೂ ಸರಿ ಹೆಂಡತಿಯ ಮಾತ್ರೆ, ಟಾನಿಕ್‌ಗಳಿಗೆ ಖರ್ಚು ಮಾಡಲು ಕೈಹಿಡಿದವರಲ್ಲ. ಸಾಲಮಾಡೋದಂತೂ ಅವರಿಗೆ ಸರ್ವ ಸಾಮಾನ್ಯ ಸಂಗತಿ. ಇಂಥ ದುರ್ಭರ ದಿನಗಳಲ್ಲಿ ಕಿಂಚಿತ್ತೂ ಕಾಸು ಖರ್ಚು ಮಾಡದೆ ಕೆ.ಪಿ.ಎಸ್.ಸಿ. ಪರೀಕ್ಷೆ ಬರೆದು ಪಾಸ್‌ಮಾಡಿ ಸರ್ಕಾರಿ ನೌಕರಿ ಗಿಟ್ಟಿಸಿದ ನನ್ನ ಬಗ್ಗೆ ಅಪ್ಪನಿಗೆ ಬಹು ಹೆಮ್ಮೆ. ಸರ್ಕಾರಿ ನೌಕರಿ ಬಗ್ಗೆ ಅವರಲ್ಲಿ ಅಪಾರ ಗೌರವವಿದೆ. ಆದರೆ ಯಾವುದಾದರೂ ಫ್ಯಾಕ್ಟರಿಗಳಲ್ಲಿ ದುಡಿಯುವ ಅಭಿಲಾಷೆ ನನ್ನದಾಗಿತ್ತು. ಅಲ್ಲಾದರೆ ಕೆಲಸಕ್ಕೆ ತಕ್ಕ ಮನ್ನಣೆ, ಗೌರವ, ವೇತನ, ಬಡ್ತಿ, ಅದೃಷ್ಟ ಖುಲಾಯಿಸಿದರೆ ವಿದೇಶಯಾತ್ರೆ ಎಲ್ಲಾ ಲಭ್ಯ. ಮೀಸಲಾತಿಯ ಹಂಗಿಲ್ಲ. ಹೀಗಾಗಿ ಚುರುಕಾಗಿರಬಹುದು. ಏನಾದರೂ ಸೇವೆ ಮಾಡಬಹುದೆಂಬ ಆಶೆ ನನ್ನದು. ಫ್ಯಾಕ್ಟರಿಯಲ್ಲಿ ಇಂಟರ್‌ವ್ಯೂ ಕೂಡ ಆಗಿತ್ತಾದರೂ ನೌಕರಿ ಸಿಗುವ ಖಾತರಿ ಇರಲಿಲ್ಲ. ಡಿಪ್ಲೊಮೊ ಪಾಸ್ ಮಾಡಿದ್ದರೂ ಸಿಕ್ಕ ಗುಮಾಸ್ತನ ಕೆಲಸಕ್ಕೆ ನಾನು ಶರಣಾಗಬೇಕಾದ ಸಂದಿಗ್ಧ.

ಅಪ್ಪನಿಗೋ ಹಿಗ್ಗು. ಸರ್ಕಾರಿ ನೌಕರಿಯಲ್ಲಿ ಸುಭದ್ರತೆ ಹೆಚ್ಚು. ನಿವೃತ್ತಿ ನಂತರವೂ ಪೆನ್‌ಶನ್ ಸೌಲಭ್ಯ, ನೌಕರನ ನಿಧನಾನಂತರ ಫ್ಯಾಮಿಲಿ ಪೆನ್‌ಶನ್ ಹೆಂಡತಿಗೆ, ಮದ್ಯ ಗೋತಾ ಹೊಡೆದರೆ ಮಗನಿಗೋ ಮಗಳಿಗೋ ನೌಕರಿ ಖಾಯಂ. ಸರ್ಕಾರಿ ನೌಕರನಿಗೆ ಹೆಣ್ಣು ಸಿಗುವುದೂ ಸುಲಭ. ಜೊತೆಗೆ ವರದಕ್ಷಿಣೆ ಕೊಡೋರ ‘ಕ್ಯೂ’ ಎಂದೆಲ್ಲಾ ಅಪ್ಪನ ಗುಣಾಕಾರ, ಅಪ್ಪ ಸರ್ಕಾರಿ ನೌಕರನಾಗಿ ಒಳ್ಳೆ ಕೆಲಸಗಾರನೆಂದು ಹೆಸರು ಮಾಡಿದವರು. ರಿಟೈರ್ ಆದ ಮೇಲೆ ಅಂಗಡಿಗಳಲ್ಲಿ ಅಕೌಂಟ್ಸ್ ಬರೆದು ಅಪ್ಪ ದುಡಿಯುತ್ತಿದ್ದುದೂ ಈ ಮಾತಿಗೆ ಸಾಕ್ಷಿಯಾಗಿತ್ತು. ಹಳೆಕಾಲದ ಮೆಟ್ರಿಕ್ ಜ್ಞಾನ, ಡ್ರಾಫ್ಟ್ ಹಾಕೋದರಲ್ಲಿ ಎತ್ತಿದಕೈ. ಲಂಚಕ್ಕೆ ಬಾಯಿಬಿಡದಿದ್ದರೂ ‘ಅವರಾಗಿ ಕೊಟ್ಟರೆ ಅದೂ ಸಂತೋಷದಿಂದ ಕೊಟ್ಟರೆ ತಗೋಬಹುದು’ ಎಂಬಷ್ಟು ರಾಜಿ ಮನೋಭಾವ ಅವರಲ್ಲಿತ್ತಂತೆ. ಅಪ್ಪ ಯಾವಾಗಲೂ ತಮ್ಮ ಸರ್ವಿಸ್ ಬಗ್ಗೆ ಅಭಿಮಾನದಿಂದ ಮಾತನಾಡುತ್ತಿದ್ದರು. ನಾವು ಸಾಹೇಬರ ಎದುರು ನಿಂತು ತಲೆ ಎತ್ತಿ ಮಾತನಾಡಿದವರಲ್ಲ. ಆಫೀಸಿನಲ್ಲೂ ಮೇನೇಜರ್‌ಗಳು ಹೇಳಿದಂತೆ ಕೇಳಿದೋರು; ಎಂದೂ ಲೇಟಾಗಿ ಹೋದವರಲ್ಲ. ಸಂಜೆ ಆರು ಗಂಟೆಯಾದರೂ ಅಂದಿನ ಕೆಲಸ ಮುಗಿಸಿಯೇ ಮನೆಗೆ ಬರುತ್ತಿದ್ದೆವು. ಸಾಹೇಬರೆಲ್ಲಾ ಐ.ಎ.ಎಸ್. ಅಧಿಕಾರಿಗಳು, ತುಂಬಾ ಸ್ಟ್ರಿಕ್ಟ್, ಮಾತೆತ್ತಿದರೆ ಸಸ್ಪೆನ್‌ಶನ್, ಲಂಚ ತಿಂದು ಸಿಕ್ಕಿಬಿದ್ದರೆ, ಕುಡಿದು ಕಛೇರಿಗೆ ಬಂದರೆ ಡಿಸ್ಮಿಸ್ ಮಾಡಿದ್ದೂ ಉಂಟು. ಕಾಫಿಗೆಂದು ಹೊರಹೋಗಲೂ ಅಂಜುತ್ತಿದ್ದೆವು. ಜೋರಾಗಿ ಮಾತಾನಾಡಲೂ ಭಯ. ನಾಗರೀಕರು, ಹಳ್ಳಿಗರು, ದೀನದಲಿತರ ಸೇವೆ ಮಾಡಲು ಅಧಿಕಾರಿ ಅಥವಾ ಮಂತ್ರಿಗಳಾಗಿಯೇ ಹುಟ್ಟಬೇಕಿಲ್ಲ……. ಒಬ್ಬ ಗುಮಾಸ್ತನಾದರೂ ಸಾಕೆಂದು ತುಂಬು ಕಳಕಳಿಯಿಂದ ಹೇಳುವ ಅಪ್ಪ, ತಾವು ನಿಷ್ಠೆಯಿಂದ ಸೇವೆಗೈದ ಬಗ್ಗೆ ಹೇಳುತ್ತಿದ್ದರೆ ನನ್ನಲ್ಲೂ ಅದೊಂದು ಬಗೆಯ ಉತ್ಸಾಹ.

ಈವತ್ತಂತೂ ಉಪದೇಶಕ್ಕೇ ನಿಂತುಬಿಟ್ಟಿದ್ದರು. ದೊಡ್ಡ ಅಧಿಕಾರಿಗಳಿಗೆ ಎದುರಾಡಬಾರದು. ಮೇನೇಜರ್ ಅವರಲ್ಲಿ ನಯವಿನಯವಾಗಿ ವರ್ತಿಸಬೇಕಯ್ಯ, ವಿಶ್ವ. ಸೀನಿಯರ್ ಮಾತ್ನ ‘ಒಬೆ’ ಮಾಡ್ಬೇಕು, ಕುರ್ಚಿ ಬಿಟ್ಟೆಲ್ಲೂ ಹೋಗಬಾರ್‍ದು ಎಂದೆಲ್ಲಾ ಅಪ್ಪಣೆ ನೀಡುವ ಧಾಟಿಯಲ್ಲಿ ಉಪದೇಶ ಸಾಗಿದಾಗ ನನ್ನಲ್ಲಿ ಭೀತಿ ಹುಟ್ಟದಿರಲಿಲ್ಲ. ಆಫೀಸ್ ಎಂದರೆ ಕಾರಾಗೃಹ, ಸಾಹೇಬರ ಛೇಂಬರ್ ಎಂದರೆ ಹುಲಿಬೋನು ಎಂಬ ಭಾವನೆ ನನ್ನಲ್ಲಾಗಲೇ ಒಡಮೂಡಿತ್ತು. ಒಂಥರಾ ಗುಲಾಮಗಿರಿ ಎಂದೇ ಹೇಳಬಹುದಾದ ಗುಮಾಸ್ತಗಿರಿಯಲ್ಲಿ ೫೮ ವರ್ಷ ಏಗುವುದು ನನ್ನಂಥವನಿಗೆ ಸಾಧ್ಯವೆ ಅನ್ನೋ ಭಯ. ಹೈಸ್ಕೂಲ್‌ನಲ್ಲಿ ಓದೋವಾಗ ಒಂದೆರಡು ಸಲ ಅಪ್ಪನನ್ನು ನೋಡಲು ಅವರ ಆಫೀಸಿಗೆ ಹೋಗಿದ್ದ ನೆನಪು. ಅಲ್ಲಿ ಕೋಟು ಟೋಪಿಗಳಿಂದ ಶೋಭಿಸುವ ಮುದಿಗುಮಾಸ್ತರು, ಸೋಡಾಗ್ಲಾಸ್‌ನ ಅಧಿಕಾರಿಗಳು, ಅಲ್ಲಿನ ಕೆಟ್ಟ ನಿಶ್ಯಬ್ದತೆ; ನಾನೇನಾದರೂ ಹೆಚ್ಚು ದನಿ ತೆಗೆದರೆ ‘ಹುಶ್’ ಎಂದು ಕಣ್ಣು ಬಿಡುವ ಜವಾನ; ದೊಡ್ಡದಾಗಿ ಕಣ್ಣರಳಿಸಿ ನೋಡುವ ಡುಮ್ಮನಂತಿದ್ದ ಗುಮಾಸ್ತ, ದೊಡ್ಡ ದೊಡ್ಡ ಬೀರುಗಳು. ಅವುಗಳ ಮೇಲೆ ಧೂಳು ತಿನ್ನುತ್ತಾ ಕೂತ ಫೈಲುಗಳ ರಾಶಿ! ಟೇಬಲ್ಲಿನ ಮೇಲೆಲ್ಲಾ ಫೈಲುಗಳ ಕಂತೆ. ಹಾಳೆ ಪೆನ್ನು ಹಿಡಿದು ಅತ್ತಿತ್ತ ನೋಡದೆ ಗೀಚುವ ಮಂದಿ, ಹೊರಗಿನಿಂದ ಬಂದ ರೈತಾಪಿ ಜನ ಕೂಡ ಮಾತನಾಡದೆ ಕೈಕಟ್ಟಿ ಸೊಂಟ ಬಗ್ಗಿಸಿ ನಿಲ್ಲುವ ಪರಿ, ‘ಈಗಬಾ…… ಆಗಬಾ’ ಎಂದು ಗದರುವ ಗುಮಾಸ್ತರ ವೈಖರಿ. ಏನೆಲ್ಲಾ ನೆನಪಾಗಿ ಕೆಲಸಕ್ಕೆ ಹೋಗುವ ಹುರುಪು ಕ್ಷೀಣಿಸಿ ಭಯದಿಂದ ಕೈಕಾಲುಗಳಲ್ಲಿ ಒಮ್ಮೆಲೆ ನಿತ್ರಾಣ. ‘ಅಪ್ಪಾಜೀ, ಯಾಕೋ ಭಯವಾಗ್ತಿದೆ’ ಅಂದರೆ ಅಪ್ಪ ನಕ್ಕು ಮೈದಡವಿದ್ದರು. ದೇವರಪಟಕ್ಕೆ ಕೈಮುಗಿದು ಅಪ್ಪ, ಅಮ್ಮನ ಕಾಲಿಗೆ ನಮಸ್ಕರಿಸಿ ಹೊರಟು ನಿಂತಾಗ ತಂಗಿಯರು ಗೇಟಿನವರೆಗೂ ಬಂದು ‘ಟಾಟಾ’ ಮಾಡಿದ್ದರು. ‘ಬೇಗ ಹೋಗಪ್ಪಾ, ಆಫೀಸಿಗೆ ಯಾವತ್ತೂ ಲೇಟಾಗಿ ಹೋಗಬಾರ್ದಯ್ಯಾ’ ತಂದೆ ಕೂಗಿ ಹೇಳುವಾಗ ಜೋರಾಗಿ ಹೆಜ್ಜೆ ಹಾಕಿದರೂ ಕಾಲುಗಳಲ್ಲಿ ಕಸುವೇ ಇಲ್ಲ.

ಕಛೇರಿ ಹತ್ತಿರವಾದಂತೆ ಎದೆಯಲ್ಲಿ ನಗಾರಿಮುಖದಲ್ಲೆಲ್ಲಾ ಬೆವರು. ಹತ್ತು ಗಂಟೆಗೆ ಹತ್ತು ನಿಮಿಷ ಮೊದಲೇ ಕಛೇರಿ ಸೇರಿದ್ದೆ. ಎಲ್ಲೆಲ್ಲೂ ನಿಶ್ಯಬ್ಧ, ಕಛೇರಿಯ ಬಾಗಿಲು ತೆರದಿರಲಿಲ್ಲವಾದ್ದರಿಂದ ಮರದಡಿ ನಿಂತೆ. ಹತ್ತು ಗಂಟೆಗೆ ಐದು ನಿಮಿಷವಿರುವಾಗ ಟಿ.ವಿ.ಎಸ್. ಗಳಲ್ಲಿ ಕೆಲವರ ಆಗಮನ, ಕಾಲಿಗೆ ಶೂಸು ಬಿಳಿ ಪ್ಯಾಂಟು ಶರಟು ಟಾಕೂಟೇಕಾಗಿರುವ ಅವರನ್ನು ನೋಡಿ ‘ನಮಸ್ಕಾರ ಸಾರ್’ ಅಂದೆ. ನಮಸ್ಕಾರ ಎಂದವನು ಒಬ್ಬನೆ. ಅವರುಗಳು ನನ್ನತ್ತ ನೋಡದೆ ದಡಬಡನೆ ಬಾಗಿಲು ಕಿಟಕಿಗಳನ್ನೆಲ್ಲಾ ತೆರೆದರು. ಕ್ಷಣದಲ್ಲೇ ಪೊರಕೆ ಹಿಡಿದು ಕಸಗುಡಿಸುವ ಆಟ ಆಡಿ ಮುಗಿಸಿದರು. ಆಗಲೆ ತಿಳಿದಿದ್ದು ಜವಾನರು ಅಂತ. ಉದ್ದನೆ ಬೆಂಚಿನ ಮೇಲೆ ಕೂತು ಹಿಂದಿನ ರಾತ್ರಿ ತಾವು ನೋಡಿದ ಸಿನಿಮಾ ಬಗ್ಗೆ ಹರಟುತ್ತಾ ಬೀಡಿ ಸೇದುತ್ತಾ ಇಹವನ್ನೇ ಮರೆತರು. ಒಳಗಡೆ ಕುರ್ಚಿಗಳು ಖಾಲಿ ಇದ್ದರೂ ಹೋಗಿ ಕುಳಿತುಕೊಳ್ಳಲು ಹಿಂಜರಿಕೆ. ಹತ್ತೂವರೆಯಾದರೂ ಒಬ್ಬರ ಸುಳಿವಿಲ್ಲ. ‘ಯಾವಾಗ ಬರ್ತಾರಪ್ಪಾ ಇವರೆಲ್ಲಾ?’ ತಡೆಯಲಾರದೆ ಒಬ್ಬನನ್ನು ಕೇಳಿದೆ.

‘ಏನಾಗಬೇಕಯ್ಯ ಹುಡ್ಗ ನಿನ್ಗೆ?’ ನನ್ನನ್ನೇ ಮರುಪ್ರಶ್ನಿಸಿದ. ‘ನಾನು ಹೊಸದಾಗಿ ಆಪಾಯಿಂಟ್‌ಮೆಂಟ್ ಆಗಿ ಬಂದಿದೀನಿ’ ಎಂದು ಆರ್‍ಡರ್ ತೋರಿಸಿದೆ. ಒಬ್ಬ ಓದಿಕೊಂಡ. ಇನ್ನೊಬ್ಬ ಜವಾನ, ‘ಯಾವ ಊರು?’ ಅಂತ ಕೇಳಿದ. ಹೇಳಿದೆ. ‘ಹೋಗಿ ಕುಂತ್ಕ ಬತ್ತಾರೆ’ ಅಂದವನೆ ಮತ್ತೆ ನನ್ನ ಕಡೆ ಲಕ್ಷ್ಯವೇ ಕೊಡಲಿಲ್ಲ. ಅವನು ಹೇಳಿದರೂ ನನಗೆ ಒಳಗೆ ಹೋಗಿ ಎಲ್ಲಿ ಕುಳಿತುಕೊಳ್ಳಬೇಕೆಂಬುದೇ ತಿಳಿಯದೆ ಅಲ್ಲೇ ನಿಂತಿದ್ದೆ. ಹತ್ತೂವರೆಯ ನಂತರ ಒಬ್ಬೊಬ್ಬರಾಗಿ ಬರಹತ್ತಿದರು. ದಡಬಡನೆ ಬೀರುಗಳನ್ನು ತೆಗೆದು ಟೇಬಲ್‌ಗಳ ಮೇಲೆ ರಾಶಿರಾಶಿ ಫೈಲುಗಳನ್ನು ಅಲಂಕರಿಸಿಟ್ಟರು. ಧೂಳು ಜಾಡಿಸಿ ಕೆಮ್ಮಿದರು ಶೀನಿದರು. ಹಲವರು ಊದುಬತ್ತಿ ಹಚ್ಚಿ ಬೀರುಮೇಲಿನ ದೇವರ ಸ್ಟಿಕರ್‍ಗೆ ಪೂಜಿಸಿದರು. ಮಹಿಳೆಯರಿಬ್ಬರು ಬಂದು ಟೈಪಿಂಗ್ ಮಿಶಿನ್‌ನ ಮೇಲಿನ ಹೊದಿಕೆಯನ್ನು ಅನಾವರಣ ಮಾಡಿದರು. ಮುಸುಮುಸು ನಗುತ್ತ ಹರಟುತ್ತ ಕೂತರು. ಎಲ್ಲರ ಮಧ್ಯೆ ದೊಡ್ಡ ಟೇಬಲ್, ಗ್ಲಾಸ್, ಪೇಪರ್ ವೆಯಿಟ್, ಪೆನ್‌ಸ್ಟಾಂಡ್, ಕಾಲಿಂಗ್ ಬೆಲ್‌ಗಳು ಕಂಡವು. ಜೊತೆಗೆ ಸಿಡುಕು ಮೋರೆ ದಪ್ಪಕನ್ನಡಕ ನೋಡುತ್ತಲೇ ಮೇನೇಜರನೇ ಇರಬಹುದೆಂಬ ಗುಮಾನಿ ಬಂತು. ‘ಸಾಹೇಬರು ಬಂದರೆ ಸಾಕಪ್ಪಾ’ ಎಂದು ಒಂಟಿಕಾಲಲ್ಲಿ ನಿಂತೆ. ಹನ್ನೊಂದು ಗಂಟೆಯಾದಾಗ ತಳಮಳ, ಜವಾನನ ಬಳಿ ಹೋಗಿ ನಾನಾಗಿಯೇ ಮಾತನಾಡಿಸಿದೆ. ‘ಸಾಹೇಬರು ಯಾವಾಗ ಬರ್ತಾರ್ರಿ?’

‘ಯಾಕಪ್ಪಾ? ಟೈಮಿಗೆ ಸರಿಯಾಗಿ ಬರೋಕೆ ಅವರೇನ್ ನಮ್ಮಂಗೆ ಜವಾನ್ರೆ, ಬತ್ತಾರೆ…… ಬೇಕಾರೆ ಕಾಯಿ’ ತಾತ್ಸಾರದಿಂದ ಗದರಿದ. ನಾನು ಮೆತ್ತಗಾದೆ. ಮತ್ತೆ ನನ್ನ ಅಪಾಯಿಂಟ್‌ಮೆಂಟ್ ಬಗ್ಗೆ ಹೇಳಿಕೊಂಡೆ.

‘ಸಾಹೇಬರ್‍ನ ತಕ್ಕೊಂಡು ಏನ್ಮಾಡ್ತಿ. ಅಲ್ಲಿ ಕುಂತವರಲ್ಲ ಆವಯ್ಯ, ಆತ್ನೆ ಮೇನೇಜರು ಅವರ ಕಾಣು’ ಅಂದ. ಮೇನೇಜರ್ ಬಳಿಹೋಗಿ ನಮಸ್ಕಾರ ಹೇಳಿದೆ. ಯಾರೊಂದಿಗೋ ಹರಟುತ್ತಿದ್ದ ಆತ ಗಮನಿಸಲೇಯಿಲ್ಲ. ತಾವು ನಿನ್ನೆ ಹೋದ ಸಹೋದ್ಯೋಗಿಯೊಬ್ಬನ ಮದುವೆಮನೆಯ ಆದ್ಧೂರಿ ರಿಸೆಪ್ಶನ್ ಭರ್ಜರಿ ಭೋಜನದ ಬಗ್ಗೆ ವರ್ಣಿಸುತ್ತಿದ್ದರು. ಒಂದು ಲಕ್ಷ ವರದಕ್ಷಿಣೆ ಜೊತೆಗೆ ಹೀರೋಹೊಂಡಾ ಬೇರೆ ಕೊಟ್ಟಿದಾರಯ್ಯ ಅವನಿಗೆ ಎಂದು ಹುಬ್ಬು ಕುಣಿಸುತ್ತಿದ್ದರು. ‘ಅದೃಷ್ಟವಂತಾ ಸಾರ್. ಆಫೀಸ್ನಾಗೂ ಒಳ್ಳೆ ಇನ್‌ಕಮ್. ಕಾಸುಬಿಚ್ಚದೆ ಕೆಲ್ಸಾನೇ ಮಾಡೋಲ್ಲ ಬಡ್ಡಿಮಗ, ಮೊನ್ನೆ ನಮ್ಮ ಆಫೀಸಿನ ಟೈಪಿಸ್ಟ್ ಒಬ್ಬಳ ಇನ್‌ಕ್ರಿಮೆಂಟ್ ಮಾಡೋಕೆ ದುಡ್ಡು ಕೇಳಿದ್ನಂತೆ. ಏನ್ಸಾರ್ ಇದು ಅನ್ಯಾಯ! ನೀವು ಸ್ವಲ್ಪ ಬುದ್ದಿ ಹೇಳ್ಬೇಕು ಸಾರ್’ ಪಕ್ಕದ ಟೇಬಲ್ಲಿನ ಗುಮಾಸ್ತ ನೊಂದುಕೊಂಡು ದೂರುತ್ತಿದ್ದ. ಮೇನೇಜರ್ ಗೊಳ್ಳನೆ ನಕ್ಕರು- ಜೋಕ್ ಕೇಳಿದವರಂತೆ. ‘ಬೆಕ್ಕಿನ ಬಾಲಕ್ಕೆ ಬೆಲ್ ಕಟ್ಟೋರ್ ಯಾರಿ?……… ಅವನು ಸಾಹೇಬ್ರನ್ನ ಬುಕ್ ಮಾಡಿದಾನೆ. ಮೇಲಾಗಿ ಒಂದೇ ಜಾತಿಯೋರು. ಕಂಟ್ರಾಕ್ಟರ್‌ಗಳಿಂದ ಬೇರೆ ದುಡ್ಡು ಕೊಡೋ ಮೀಡಿಯೇಟರ್, ಸ್ಟೋರ್‌ನಿಂದ ಅವನ್ನ ಕಿತ್ತು ಹಾಕೋಣ ಸಾರ್ ಅಂದೆ. ಅವನು ಅಲ್ಲಿನ ಕಬ್ಬಿಣ, ಸಿಮೆಂಟು ಮಾರ್‍ಕೊತಾನೆ. ಅವನ ಚರಿತ್ರೆಯಲ್ಲಾ ಲೋಕಲ್ ಪೇಪರಲ್ಲಿ ಬಂದಿದೆ ಸಾರ್ ಅಂತ ಪೇಪರ್ ತೋರಿಸ್ದೆ ಕಣ್ರಿ’.

‘ಏನಂದ್ರು ಸಾರ್‌?’

‘ನಿಮ್ಮ ಮೇಲೂ ಪೇಪರಲ್ಲಿ ಬಂದಿತಲ್ಲಾರೀ. ಲೋಕಲ್ ಪೇಪರ್‌ನವರ್‍ಗೆ ಅವರು ಕೇಳಿದಷ್ಟು ದುಡ್ಡು ಇವನು ಕೊಡಲಿಲ್ವಂತೆ. ಬರ್ದಿದಾರೆ. ಅಷ್ಟಕ್ಕೂ ಈ ಆಫೀಸಿನಲ್ಲಿ ಯಾವನ್ರಿ ಹರಿಶ್ಚಂದ್ರ? ಯಾವನ ಮೇಲೆ ಅಲಿಗೇಶನ್ಸ್ ಇಲ್ಲ ಹೇಳಿ ಅಂತ ನನ್ನೇ ದಬಾಯಿಸಿಬಿಟ್ರು’. ಮೇನೇಜರ್ ಬೋಳುತಲೆ ಸವರಿಕೊಂಡು ನಿಡುಸುಯ್ದರು. ಇವರ ಮಾತು ಮುಗಿಯದೆಂದು ಭಾವಿಸಿದ ನಾನು ‘ಸಾರ್’ ಎಂದು ದನಿ ಏರಿಸಿ ಅಪಾಯಿಂಟ್‌ಮೆಂಟ್ ಆರ್ಡರ್ ಟೇಬಲ್ ಮೇಲಿಟ್ಟೆ. ‘ಏನಯ್ಯಾ ಗೋಳ್ ನಿಂದು?’ ಗದರುತ್ತಲೆ ನನ್ನನ್ನು ಆರ್ಡರನ್ನು ಏಕಕಾಲದಲ್ಲಿ ದಿಟ್ಟಿಸಿದರು. ‘ನನ್ನ ಹೆಸರು ವಿಶ್ವನಾಥ……’ ಎಂದು ಪಿಸುಗಿದೆ. ‘ಓಹೋ! ನೀನೇನೋ…… ಕೂತ್ಕೋ, ಡ್ಯೂಟಿ ರಿಪೋರ್ಟ್ ಬರ್‍ದು ಕೊಡು’ ಎಂದು ಪುನಃ ಮಾತಿನಲ್ಲಿ ಮಗ್ನರಾದರು. ಬರೆದುಕೊಟ್ಟೆ. ‘ಗುಡ್’ ಎಂದು ನನ್ನ ಆರ್ಡರ್ ಡ್ಯೂಟಿ ರಿಪೋರ್ಟ್ ಪಿನ್‌ಮಾಡಿ ಅದೇನೋ ಗೀಚಿ ಟ್ರೇಗೆ ಎಸೆದರು. ‘ಸಾಹೇಬರು ಬರ್‍ಲಿ ಸೈನ್ ತಗೋತೀನಿ, ಅಲ್ಲಿ ಸೀಟು ಖಾಲಿ ಇದೆ ನೋಡು…… ಹೋಗಿ ಕೂತ್ಕೋ’ ಆಜ್ಞಾಪಿಸಿದರು. ಹೋಗಿ ಕೂತೆ. ಒಂದಿಷ್ಟು ನಿರುಮ್ಮಳವೆನಿಸಿತು. ಎಲ್ಲರತ್ತ ಪಿಳಿಪಿಳಿ ನೋಡುತ್ತ ಕೂರುವುದೇ ನನ್ನ ಕೆಲಸವಾಯಿತು. ಕೆಲವರು ‘ನೀವೇ ಏನ್ರಿ ವಿಶ್ವನಾಥ್?’ ಎಂದು ಮಾತಾಡಿ ಮುಗುಳ್ನಗೆ ಹಂಚಿಕೊಂಡರು. ಎಲ್ಲರ ಟೇಬಲ್‌ಗಳ ಮೇಲೆ ಫೈಲ್‌ಗಳ ರಾಶಿ ಇದ್ದರೂ ಯಾರೂ ಅದನ್ನು ಮುಟ್ಟಿದಂತೆ ಕಾಣಲಿಲ್ಲ. ಒಳ ಬಂದು ಬೀರು ತೆಗೆದು ಹೊರಹೋದ ಗುಮಾಸ್ತನೊಬ್ಬ ಬಂದೇ ಇರಲಿಲ್ಲ. ಆತನ ಕುರ್ಚಿಯಲ್ಲೇ ನಾನೀಗ ಟೆಂಪ್ರರಿಯಾಗಿ ಆಸೀನನಾಗಿದ್ದ. ಎಂತದೋ ಎದೆಗುದಿ, ಹೊಟ್ಟೆಯಲ್ಲೆಲ್ಲಾ ಸಂಕಟ, ಪಂಜರದಲ್ಲಿದ್ದಂತೆ ಒಂಥರಾ ಚಡಪಡಿಕೆ. ಮೇನೇಜರ್ ಬೆಲ್ ಕಿರುಗುಟ್ಟಿದಾಗಲೆಲ್ಲಾ ಬೆಚ್ಚಿಬೀಳುವಂತಾಗುತ್ತಿತ್ತು. ಅವರು ಬೆಲ್ ಮಾಡಿದ ಎಷ್ಟೋ ಹೊತ್ತಿನ ಮೇಲೆ ಬರುವ ಜವಾನರು, ಕಾದಂಬರಿ ಓದುವ ಟೈಪಿಸ್ಟಳು, ಕ್ರಿಕೆಟ್ ಬಗ್ಗೆ ಚರ್ಚಿಸುವ ಮಂದಿಯೂ ಕಂಡರು. ಟೈಪ್‌ಗೆಂದು ಡ್ರಾಫ್ಟ್ಗಳನ್ನು ತಂದ ಜವಾನರು ‘ಅರ್ಜೆಂಟ್ ಅಂತ್ರಮ್ಮ’ ಅಂದರೂ ಕೇಳಿಸಿಕೊಳ್ಳದಂತೆ ಕಾದಂಬರಿಯಲ್ಲಿ ತಲ್ಲೀನಳಾದ ಅನ್‌ಮ್ಯಾರಿಡ್ ಟೈಪಿಸ್ಟ್! ಪಕ್ಕದ ಮಿಶಿನ್‌ನಾಕೆ ಮ್ಯಾರಿಡ್, ಕೊರಳಲ್ಲಿನ ತಾಳಿ ಎದೆಯ ಮೇಲೆ ನೇತಾಡುತ್ತಿತ್ತು. ಪಕ್ಕದ ಟೇಬಲ್ಲಿನ ಗುಮಾಸ್ತನೊಡನೆ ತನ್ನ ಗಂಡನ ಇಸ್ಪೀಟ್ ಚಟದ ಬಗ್ಗೆ ದೂರುತ್ತಲೇ ನಿಮ್ಮಂತಹ ಒಳ್ಳೆಯವರು ನೂರಕ್ಕೆ ಒಬ್ಬರೂ ಸಿಗೋಲ್ಲಾರೀ ಅಂತ ಹೊಗಳುತ್ತ ಆಕರ್ಷಿಸುವಂತೆ ಹಲ್ಲುಗಿಂಜುತ್ತ ಕಾಲ ಕಳೆಯುತ್ತಿದ್ದುದನ್ನು ನೋಡುವಾಗ ಅಚ್ಚರಿ ಎನಿಸಿತು. ಹೊರಗಡೆಯಿಂದ ಸಾರ್ವಜನಿಕರು ರೇಷನ್‌ಕಾರ್ಡ್‌ಗೆಂದು, ಕ್ಯಾಸ್ಟ್‌ಸರ್ಟಿಫಿಕೇಟ್‌ಗೆಂದು ಬಂದು ಅಂಗಲಾಚುವುದನ್ನು ಕಾಣುವಾಗ ವಿದ್ಯಾರ್ಥಿ ದಿಸೆಯಲ್ಲಿ ಕ್ಯಾಸ್ಟ್ ಸರ್ಟಿಫಿಕೇಟ್‌ಗೆಂದು ಬಂದು ವಾರಗಟ್ಟಲೆ ಪರದಾಡುತ್ತಿದ್ದದು ನೆನಪಿಗೆ ಬಂತು. ಯಾರೇ ಬರಲಿ ‘ನಾಳೆ ಬನ್ನಿ…… ಸಾಹೇಬರು ಇಲ್ಲ’ ಎಂಬ ಸಿದ್ಧ ಉತ್ತರ.

ಹನ್ನೊಂದೂವರೆ ಗಂಟೆಯಾಗುತ್ತಲೇ ಎಲ್ಲರೂ ದಡದಡನೆ ಎದ್ದು ಹೋಗುವವರೆ! ಎಲ್ಲಿ ಹೋಗುತ್ತಿದ್ದಾರೆ ಎಂಬ ಜಿಜ್ಞಾಸೆ ನನ್ನದು. ಅರ್ಧಗಂಟೆಯಾದರೂ ಹೋದವರು ಪತ್ತೆ ಇಲ್ಲ. ಹೊರಗಿನಿಂದ ಬರುವ ಕಂಟ್ರಾಕ್ಟರ್‌ಗಳಿಗೆ, ‘ಅವರು ಕಾಫಿಗೆ ಹೋಗಿದಾರ್ರಿ’ ಎಂದು ಸಬೂಬು ಹೇಳುವ ಮೇನೇಜರ್ ಸಿಡಿಮಿಡಿಗುಟ್ಟುತ್ತಿದ್ದರು. ‘ನೀವೂ ಬನ್ನಿ ಸಾರ್ ಕಾಫಿಗೆ’ ಕಂಟ್ರಾಕ್ಟರ್‌ಗಳ ಒತ್ತಾಯ. ‘ಇಲ್ಲಿಗೆ ತರಿಸಿಬಿಡ್ರಪ್ಪ, ನನ್ಗ ಮಂಡಿನೋವು, ಹೆಚ್ಚು ನಡೆದ್ರೆ ಪ್ರಾಣಹೋಗುತ್ತೆ’ ಮೇನೇಜರ್ ತಮ್ಮ ಅನಾರೋಗ್ಯದ ಕಡತ ಬಿಚ್ಚಿದರು. ತಮಗಿರುವ ಬಿ.ಪಿ., ಶುಗರ್, ಅದಕ್ಕಾಗಿ ನುಂಗುವ ಮಾತ್ರೆಗಳು ತಿನ್ನುವ ಆಹಾರ, ಆಗುವ ಡಿಪ್ರೆಶನ್ನುಗಳ ಬಗ್ಗೆ ವಿವರವನ್ನೇ ಶುರುಹಚ್ಚಿಕೊಂಡರು. ಕಂಟ್ರಾಕ್ಟರ್ ಒಬ್ಬ ಕಾಫಿ ತರಲು ಜವಾನನಿಗೆ ಹೇಳಿದ. ಕಾಫಿಗೆ ಹೋದ ಟೈಪಿಸ್ಟ್‌ಗಳು ತಿರುಗಿ ಬಂದು ಕೂತರು. ಜವಾನನೂ ಕಾಫಿ ತಂದ. ‘ಆ ಹುಡ್ಗನಿಗೂ ಕೊಡ್ರಯ್ಯ’ ಅಂದರು ಮೇನೇಜರ್, ನನಗೂ ಕಾಫಿ ಸಿಕ್ಕಿತು. ಟೈಪಿಸ್ಟ್ಗಳು ಮತ್ತೆ ಕಾಫಿ ಕುಡಿದರು. ಒಬ್ಬೊಬ್ಬರಾಗಿ ಗುಮಾಸ್ತರು ಬಂದು ಪುನರ್ ಪ್ರತಿಷ್ಠಾಪಿತರಾದರು. ಕಂಟ್ರಾಕ್ಟರ್‌ಗಳು ಅವರ ಮೇಲೆ ಹದ್ದಿನಂತೆ ಎರಗಿದರೂ ಶಾಂತವಾಗಿಯೇ ಉತ್ತರ ಹೇಳುವ ಗುಮಾಸ್ತರ ನಿರ್ಭಿಡೆ ಚೋದ್ಯವೆನಿಸಿತು. ‘ತಿಂಗಳಿಂದ ಅಲಿತಾ ಇದೀವಲ್ಲಾರೀ….. ಫ್ಲೀಸ್ ಬಿಲ್ ಮಾಡ್ರಪ್ಪ’ ಕಂಟ್ರಾಕ್ಟರ್‌ಗಳ ಪ್ರಾರ್ಥನೆ, ಭಾರಿ ಕೆಲಸವಿದ್ದವರಂತೆ ಫೈಲುಗಳನ್ನೆಲ್ಲಾ ತೆರೆದು ನೋಡುತ್ತ ಯೋಚಿಸುವುದೇನು, ಹಾಳೆಗಳ ಮೇಲೆ ಟಿಪ್ಪಣಿ ಮಾಡುವುದೇನು, ಅವರಷ್ಟು ‘ಬಿಜಿ’ ಇರೋವಾಗ ಬಡಪಾಯಿ ಕಂಟ್ರಾಕ್ಟರ್‌ಗಳಾದರೂ ಮಾಡಬೇಕೇನು? ‘ಏನಪ್ಪಾ ಯಾವಾಗ ಮಾಡಿಕೊಡ್ತಿರ್ರೀ ಸಾಹೇಬ್ರಾ’ ಅಂತ ಕಂಟ್ರಾಕ್ಟರ್‌ಗಳು ಅಂಗಲಾಚುವಾಗ ದುರುಗುಟ್ಟುವ ಗುಮಾಸ್ತ, ‘ಮಾಡಿಕೊಡೋಣ ಹೇಳಿ. ಈ ದುಡ್ಡಿನಿಂದೆ ನಿಮ್ಮ ಬೆಳಕು ಹರಿಬೇಕೇನ್ರಿ? ಬಿಲ್‌ನಲ್ಲಿ ಭಾಳ ಅಬ್ಜಕ್ಷನ್‌ಗಳಿವೆ, ಸಾಹೇಬರು ಹಂಗೆಲ್ಲಾ ಒಪ್ಪೋದಿಲ್ಲ’ ಎಂದು ಸಬೂಬು ಹೇಳಿದ. ‘ಈಗ ಅರ್ಜೆಂಟ್ ಫೈಲ್‌ಗಳಿವೆ, ಸಾಹೇಬರು ಮೀಟಿಂಗ್ ಹೋಗ್ತಾರೆ, ರೆಡಿಮಾಡೋದಿದೆ…… ನೀವೆಲ್ಲಾ ಮಧ್ಯಾಹ್ನ ಬನ್ನಿ’ ಇನ್ನೊಬ್ಬ ಗುಮಾಸ್ತನ ಉತ್ತರ.

‘ಸಾಹೇಬರ ಮನೇಲಿ ಹೋಗಿ ಕಾಣಿ…… ಅರ್ಥವಾಯ್ತಲ್ಲ’ ಕಣ್ಣುಮಿಟುಕಿಸಿದ ಗುಮಾಸ್ತ. ‘ನಿಮಗೇನ್ ಸಾರ್ ಸರ್ಕಾರಿ ನೌಕ್ರಿ ನೆಳ್ಳಾಗೆ ಕುಂತು ತಿಂಗಳಾಗುತ್ಲು ಎಣಿಸ್ಕೋತಿರಾ…. ಮಳೆ ಇಲ್ಲದ ಬೆಳೆ ತೆಗಿತೀರಿ’ ನಕ್ಕನೊಬ್ಬ ಕಂಟ್ರಾಕ್ಟರ್, ಎಲ್ಲರೂ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಎದ್ದು ಹೋದರು. ಮರುಕವೆನ್ನಿಸಿತು. ಅವರತ್ತ ಹೋದೊಡನೆ ಆರಾಮವಾಗಿ ಕೂತವರೆ ಹೆಚ್ಚು. ಅಷ್ಟರಲ್ಲಿ ಸ್ಮಗಲ್ಡ್‌ಗೂಡ್ಸ್ ಮಾರುವವನೊಬ್ಬ ದೊಡ್ಡ ಲೆದರ್ ಬ್ಯಾಗ್ ಹೊತ್ತು ಪ್ರವೇಶ ಮಾಡಿದ. ‘ಎಲ್ಲಾ ಫಾರಿನ್ ಮೆಟೀರಿಯಲ್ಸ್ ಸಾ. ಬಜಾರ್‌ನಲ್ಲಿ ಸಿಗೋದಕ್ಕಿಂತ ಚೀಪು’ ಎಂದು ನಿಂತ. ಎಲಾ ಇವನ! ಇವನಿಗೆಷ್ಟು ಧೈರ್ಯ? ಇದನ್ನು ಆಫೀಸ್ ಅಂದುಕೊಂಡನೋ ಬಜಾರ್ ಅಂದುಕೊಂಡನೋ ಎಂದು ನನಗೇ ಭಯ. ಮೊದಲೇ ಕೋಪಿಷ್ಠ ಮೇನೇಜರ್; ಉಗಿದಟ್ಟುತ್ತಾರೆಂದು ಅಂಜಿದೆ. ಆ ವ್ಯಾಪಾರಿ ತನ್ನ ಬ್ಯಾಗ್‌ನಿಂದ ಸಾಂತಾಕ್ಲಾಸ್ ತರಹ ತರಾವರಿ ವಾಚುಗಳು ಅಲಾರಾಂ ಗಡಿಯಾರಗಳು, ಸೆಂಟ್ ಬಾಟಲಿ, ಶೇವಿಂಗ್ ಮಿಶನ್, ಕಾಲ್ಕುಕ್ಯುಲೇಟರ್, ಟಾರ್ಚ್ ಏನೇನೋ ತೋರಹತ್ತಿದ. ಟೇಪ್‌ರಿಕಾರ್ಡರ್, ಟ್ಯೂಬ್‌ಲೈಟ್, ಫ್ಯಾನ್, ರೇಡಿಯೊ, ಟಾರ್ಚ್ ಒಂದರಲ್ಲೇ ಇರುವ ಫೈವ್ ಇನ್ ಒನ್ ಎಂದು ಪುಟ್ಟ ಐಟಮ್ಮನ್ನು ತೋರಿದ. ಎಲ್ಲರೂ ಮುಗಿಬಿದ್ದರು. ಮೇನೇಜರ್‌ ಸ್ಥಿತಪ್ರಜ್ಞ, ಹಲ್ಲಲ್ಲಿ ಗುಂಡು ಪಿನ್ ಹಾಕಿ ಕಸ ತೆಗೆದು ಅಲ್ಲಲ್ಲೇ ಥುತ್ ಮಾಡುತ್ತ ಕೂತಲ್ಲಿಂದಲೆ ಅವರ ವ್ಯಾಪಾರವನ್ನು ವೀಕ್ಷಿಸುತ್ತಿದ್ದರು. ಅನ್‌ಮ್ಯಾರಿಡ್ ಟೈಪಿಸ್ಟಳು ಫಾರಿನ್ ಪೌಡರ್ ಡಬ್ಬಿ, ಸೆಂಟ್‌ಬಾಟಲ್ ಕೊಂಡಳು. ಮ್ಯಾರಿಡ್ ಟೈಪಿಸ್ಟ್‌ಗೆ ಪಕ್ಕದ ಟೇಬಲ್ಲಿನವ ಲಿಪ್‌ಸ್ಟಿಕ್ ಕೊಡಿಸಿ ಧನ್ಯನಾದ. ಕುತೂಹಲದಿಂದ ನೋಡುತ್ತಾ ಕುಳಿತೆ. ಯಾರುಯಾರೋ ಏನೇನೋ ಕೊಂಡರು. ಹನ್ನೆರಡೂವರೆ ಸುಮಾರಿಗೆ ವ್ಯಾಪಾರಿ ಹೋಗುವ ಮುನ್ನ ಮೇನೇಜರ್‍ಗೆ ಒಂದುಪೆನ್ ಗಿಫ್ಟ್ ಕೊಟ್ಟು ಹೋದ. ಅವರು ಪ್ರಸನ್ನವದನರಾದರು. ‘ಸಾಹೇಬರು ಬಂದ್ರು’ ಎಂದು ಜವಾನ ಗದ್ದಲವೆಬ್ಬಿಸಿದ. ಕಾರು ಬಂದು ನಿಂತ ಶಬ್ದ. ಹಿಂದೆಯೇ ಒಳಬಂದ ಸಾಹೇಬರು ಯಾರತ್ತಲೂ ನೋಡದೆ ಯಾರ ನಮಸ್ಕಾರಕ್ಕೂ ಪ್ರತಿಕ್ರಿಯಿಸದೆ ನೇರವಾಗಿ ಛೇಂಬರಿಗೆ ಹೋದರು. ಅದೆಲ್ಲಿದ್ದರೋ ಬಂದ ಕಂಟ್ರಾಕ್ಟರ್‌ಗಳು ಸಾಹೇಬರ ಛೇಂಬರಿಗೆ ನುಗ್ಗಿದರು. ನನಗೋ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ. ಸಣ್ಣಗೆ ಬೆವರು. ಸಾಹೇಬರ ಬೆಲ್ ಕುರುಗುಟ್ಟಿದ ತಕ್ಷಣ ಜವಾನ ಒಳಹೋಗಿ ಬಂದು ‘ಸಾಹೇಬ್ರು ಕರೀತಾರೆ’ ಎಂಬಂತೆ ಮೇನೇಜರತ್ತ ನೋಡಿ ಕೈಸನ್ನೆ ಮಾಡಿದ. ಎರಡು ಮೂರು ಸಲ ಮೇನೇಜರ್ ಫೈಲುಗಳನ್ನು ಹಿಡಿದು ಒಳಹೋಗಿ ಬಂದು ಆರಾಮಾಗಿ ಕೂತರು. ಈಗ ಟೈಪಿಣಿಯರಿಬ್ಬರು ಮಿಶಿನ್ನಿಗೆ ಪೇಪರ್, ಕಾರ್ಬನ್ ಹಾಕಿ ಸಿಲೆಂಡರ್ ತಿರುವಿ ಒಂದೆರಡು ಸಾಲು ಟೈಪ್ ಮಾಡಿದರು. ಮತ್ತೆ ಅಲ್ಲಿಗೇ ಬಿಟ್ಟು ಅವರವರೆ ಹೊರಗೆದ್ದು ನಡೆದರು. ‘ಎಲ್ಲಿಗ್ರಮ್ಮ?’ ಮೇನೇಜರರ ಆತಂಕ, ‘ಇವರು ಅದೇನೋ ಲೋನ್ ಹಾಕಿದಾರಂತೆ. ಕೆ.ಜಿ.ಐ.ಡಿ. ಆಫೀಸಿಗೆ ಹೋಗಿ ಫೈವ್ ಮಿನಿಟ್ಸ್‌ನಲ್ಲಿ ಬಂದ್ಬಿಡ್ತೀವಿ ಸಾರ್’ ಎಂದೊಬ್ಬಳು ಇನ್ನೊಬ್ಬಳನ್ನು ತೋರಿಸಿ ಹೊರಟೇ ಹೋದರು. ಸಾಹೇಬ ಬಂದರೂ ಯಾರೂ ಚುರುಕಾಗಲಿಲ್ಲ. ಮೆಲುದನಿಯಲ್ಲಿ ಕಾಡಹರಟೆ ನಡದೇಯಿತ್ತು. ನಾನೇ ಈಗ ಎದ್ದು ಮೇನೇಜರ್‌ ಬಳಿ ಹೋದೆ. ‘ಸಾಹೇಬರನ್ನ ಕಾಣೋಣ್ವೆ ಸಾರ್?’ ಸಣ್ಣದನಿಯಲ್ಲಿ ಬಿನ್ನವಿಸಿಕೊಂಡೆ. ಅವರೀಗ ಮೀಟಿಂಗ್‌ನಲ್ಲಿದ್ದಾರೆ…… ಕೂತ್ಕೊ ಹೋಗಿ’ ಎಂದಾತ ಗದರಿಬಿಟ್ಟ. ಮತ್ತೆ ಬಂದು ಕೂತೆ. ಈ ಸೀಟಿನಲ್ಲಿ ಕೂರಬೇಕಾದ ಗುಮಾಸ್ತ ಬರಲೇ ಇಲ್ಲವೆ! ಬೀರು ತೆರೆದಿಟ್ಟು ಹೋಗಿದ್ದಾನೆಯೆ ಅನ್ನಿಸಿ ಕಳವಳವಾಯಿತು. ಈತನ್ನ ಕೇಳುವವರು ಯಾರು ಇಲ್ಲವೆ ಅನ್ನಿಸಿ ಬೇಸರವೂ ಆಯಿತು.

ಸಾಹೇಬರು ರೇಗಾಡುವುದನ್ನು ಕೇಳುವಾಗ ಮತ್ತೆ ಹೊಟ್ಟೆಯಲ್ಲೆಲ್ಲಾ ತೊಳಸಿದಂತೆ ಸಂಕಟ. ಬಾಯಾರಿಕೆ, ಹೊರಗೆದ್ದು ಹೋಗಿ ಬರಲೂ ಅಂಜಿಕೆ. ‘ಎಲ್ಲಿ ಹೋಗಿದಾರ್ರಿ ಟೈಪಿಸ್ಟ್‌ಗಳು? ಈ ಲೆಟರ್ ಅರ್ಜೆಂಟಾಗಿ ಟೈಪ್ ಆಗಬೇಕ್ರಿ. ಅವರನ್ನು ಬಂದ ತಕ್ಷಣ ಒಳಾಗ್ ಕಳಿಸ್ರಿ……… ನಾನ್‌ಸೆನ್ಸ್’ ಅವರು ಆರ್ಭಟಿಸುವಾಗ ಬೈಸಿಕೊಂಡು ಹೊರಬಂದ ಮೇನೇಜರ್‌ ಟೈಪ್‌ಮಿಶಿನ್‌ಗಳ ಮೇಲೆ ಉರಿಗಣ್ಣು ಬಿಟ್ಟರು. ಒಂದೂಕಾಲು ಗಂಟೆಯಾಗುತ್ತಾ ಬಂದಿತ್ತು. ಒಂಥರಾ ಸಮಾಧಾನ. ಟೈಪಿಸ್ಟ್‌ಗಳ ಆಗಮನವಾಯಿತು. ‘ಹೋಗಿ ಹೋಗಿ……… ಸಾಹೇಬರು ಕರಿತಾರೆ’ ಅಂತ ಮೇನೇಜರ್ ಸಿಡುಕಿದರು. ಒಳಹೋದರು ಟೈಪಿಸ್ಟಮ್ಮಗಳು. ಏನಾಗುವುದೋ ಎಂಬ ದಿಗಿಲು ನನಗೆ ಸ್ವಲ್ಪ ಹೊತ್ತಿನಲ್ಲೇ ಒಳಗಿನಿಂದ ನಗು ಕೇಳಬಂತು. ಜವಾನ ಕಾಫಿ ಹೊಯ್ದ. ಕಾಫಿ ಕುಡಿದು ಕರವಸ್ತ್ರದಿಂದ ಮೆದುವಾಗಿ ತುಟಿ ಒರೆಸಿಕೊಳ್ಳುತ್ತ ಬಂದ ಟೈಪಿಸ್ಟಮ್ಮಗಳು ನಿರಾಳವಾಗಿ ಕೂತರು. ಇನ್ನೂ ಕಾಲು ಗಂಟೆ ಇರುವಾಗಲೆ ಬೀರು ಮುಚ್ಚಿ ಹೊರಟರು ಕೆಲವರು. ಟೈಪಿಸ್ಟ್‌ಗಳು ಹೆಗಲಿಗೆ ಬ್ಯಾಗ್ ನೇತುಹಾಕಿದವರೆ ಅಂತರ್ಧಾನರಾದರು. ಒಂದೂವರೆ ಆಗುವುದರೊಳಗೇ ಆಫೀಸೆಲ್ಲಾ ಖಾಲಿ. ಮೇನೇಜರ್ ಹೊರಟ ಮೇಲೆ ನಾನೂ ಎದ್ದೆ. ‘ಊಟಕ್ಕೆ ಹೋಗಿ ಬೇಗ ಬಾರಯ್ಯ’ ಎಂದು ವೃಥಾ ನನ್ನ ಮೇಲೆ ಕಿಡಿಕಾರಿದರು. ಸಾಹೇಬರ ಮೀಟಿಂಗ್ ನಡದೇ ಇತ್ತು. ಮನೆ ದೂರವಾದ್ದರಿಂದ ಹೋಗಿ ಬರುವುದು ಲೇಟಾಗುತ್ತದೆಂದು ಹೆದರಿದ ನಾನು ಪಕ್ಕದ ಹೋಟೆಲ್‌ನಲ್ಲೇ ಇಡ್ಲಿ ತಿಂದು ಬಂದು ಕೂತೆ.

ಎರಡೂವರೆಯಾದರೂ ಒಬ್ಬರೂ ಪತ್ತೆ ಇಲ್ಲ. ಕಂಟ್ರಾಕ್ಟರ್‌ಗಳ ಸಂಗಡ ಬ್ರೀಫ್‌ಕೇಸ್ ಹಿಡಿದು ನಗುನಗುತ್ತಾ ಛೇಂಬರ್‌ನಿಂದ ಹೊರಬಂದರು ಸಾಹೇಬರು. ನಾನು ದಿಗ್ಗನೆ ಎದ್ದುನಿಂತೆ. ‘ಯಾರೂ ಇನ್ನೂ ಬಂದಿಲ್ವೇನಯ್ಯ?’ ಜವಾನನತ್ತ ನೋಡಿದರು. ಅವನು ಸುಮ್ಮನೆ ನಕ್ಕ. ಅದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳದವರಂತೆ ಕಾರಿನಲ್ಲಿ ವಿಜೃಂಭಿಸಿದರು. ‘ಶಾಂತಲಾ ಬಾರ್‌ಗೆ ಹೋಗೋಣ ಸಾರ್; ಅಲ್ಲಿ ಚಿಕನ್ ಬಿರಿಯಾನಿ ಸಖತ್ ಆಗಿ ಇರುತ್ತೆ….. ಬೆಸ್ಟ್ ಸರ್ವಿಸ್, ಪ್ಯೂರ್ ಡ್ರಿಂಕ್ಸು’ ಕಂಟ್ರಾಕ್ಟರ್‌ಗಳು ಬಣ್ಣಿಸುತ್ತ ತಮ್ಮ ಕಾರುಗಳಲ್ಲಿ ಕೂತರು.

ಮೂರುಗಂಟೆಗೆ ಒಬ್ಬೊಬ್ಬರ ಆಗಮನ. ಮತ್ತೆ ಬೀರು ತೆಗೆವ ಗದ್ದಲ, ಗಡಿಬಿಡಿ. ಎಲೆ ಅಡಿಕೆ ಜಗಿಯುತ್ತಾ ಮಾವನಮನೆಗೆ ಬಂದಂತೆ ಒಬ್ಬ ಬಂದರೆ ಮತ್ತೊಬ್ಬ ಗುಟ್ಕಾ ಅಗಿಯುತ್ತ ಉಗುಳುತ್ತಲೇ ಬಂದ. ಟೈಪಿಸ್ಟ್‌ಗಳೂ ಬಂದರು. ಬಂದವರೆ ಟಾಯಿಲೆಟ್‌ಗೆ ಹೋಗಿ ಮೇಕಪ್ ಸರಿಮಾಡಿಕೊಂಡು ಬಂದು ವಿರಾಜಮಾನರಾದರು. ಅಷ್ಟರಲ್ಲಿ ಸೀರೆ ಪ್ಯಾಂಟ್ ಪೀಸ್‌ಗಳ ದೊಡ್ಡ ಗಂಟನ್ನು ಹೊತ್ತು ಬಂದನೊಬ್ಬ ತಮಿಳಿಯನ್, ಟೇಬಲ್‌ಗಳ ಮೇಲೆಲ್ಲಾ ಸೀರೆ ಪ್ಯಾಂಟ್ ಪೀಸ್‌ಗಳನ್ನು ಹರಡಿದ. ಇದ್ದಕ್ಕಿದ್ದಂತೆ ಆಫೀಸು, ಬಟ್ಟೆ ಅಂಗಡಿಯಾಗಿ ನಡೆಯಿತು. ‘ಲೋನ್ ಬೇಸಿಸ್ ಮೇಲೆ ಕೊಡ್ತೀನಿ ತಕ್ಕಳಿಸಾ’ ಎಂದವನು ಉಬ್ಬಿಸಿದಾಗ ಎಲ್ಲರೂ ಚೌಕಾಸಿಗೆ ನಿಂತರು. ಸಾವಿರ ರೂಪಾಯಿ ಬೆಲೆ ಹೇಳಿದ ಸೀರೆಯನ್ನು ನೂರಾ ಐವತ್ತು ರೂಪಾಯಿಗೆ ಕೊಟ್ಟ ತಮಿಳಿಯನ್! ರೇಮಂಡ್ ಪ್ಯಾಂಟ್‌ಪೀಸ್‌ ಬರಿ ಇನ್ನೂರು ರೂಪಾಯಿಗೆ ಮಾರಾಟವಾಯಿತು. ಆಫೀಸಂತೋ ಸಂತೆಯಾಯಿತು. ನಾಲ್ಕು ಗಂಟೆವರೆಗೂ ಜವಳಿ ವ್ಯಾಪಾರ ನಡೆಸಿದ ವ್ಯಾಪಾರಿ ತೊಲಗಿದ. ಆ ಗದ್ದಲಕ್ಕೂ ತನಗೂ, ತನಗೂ ವ್ಯಾಪರಕ್ಕೂ, ವ್ಯಾಪಾರಕ್ಕೂ ಆಫೀಸಿಗೂ, ಆಫೀಸಿಗೂ ತನಗೂ ಸಂಬಂಧವೇ ಇಲ್ಲವೆಂಬಂತೆ ದೊಡ್ಡ ಹೊಟ್ಟೆಯ ಗುಮಾಸ್ತನೊಬ್ಬ ನಿದ್ರೆಯಲ್ಲಿ ತಲ್ಲೀನನಾಗಿದ್ದದ್ದು ಕಂಡಿತು. ಈತ ಕರಿಬಟ್ಟೆ ತೊಟ್ಟಿದ್ದ. ಅಯ್ಯಪ್ಪನ ಭಕ್ತನಿರಬಹುದು. ವಿಭೂತಿ ಬಳಿದುಕೊಂಡು ಕುಂಕುಮ ಹಚ್ಚಿಕೊಂಡು ಗಡ್ಡ ಬಿಟ್ಟ ಈತ ಭಯಂಕರವಾಗಿದ್ದ. ನನಗೆ ನಗುಬಂತು. ‘ಪಾಪ….. ಈ ವರ್ಷ ರಿಟೈರ್ ಆಗ್ತಾರೆ ಕಣಯ್ಯ’ ನನ್ನ ಪಕ್ಕದ ಟೇಬಲ್ಲಿನ ಎಷ್ಟಾಬ್ಲಿಷ್‌ಮೆಂಟ್ ಕ್ಲರ್ಕ್ ನನ್ನತ್ತ ನೋಡಿ ಅನುಕಂಪ ತೋರಿದ. ಟೈಪಿಂಗ್ ಮಿಶಿನ್‌ಗಳೀಗ ಸದ್ದು ಮಾಡುವುದು ಕೇಳಿತು. ಪಕ್ಕದ ಟೇಬಲ್ಲಿನ ಮಧ್ಯವಯಸ್ಕ ‘ಉಪೇಂದ್ರ’ ಸಿನಿಮಾವನ್ನು ವರ್ಣಿಸುತ್ತ ಅವರೊಂದಿಗೆ ಅವನಾಡುವ ಡಬ್ಬಲ್ ಮೀನಿಂಗ್ ಮಾತುಗಳಿಗೆ ಟೈಪಿಣಿಯರು ಟೈಪಿಸುವುದಕ್ಕಿಂತ ಕುಲುಕುಲು ನಗುವುದೇ ಹೆಚ್ಚಾಗಿ ಕೇಳುವಾಗ ಅಸಹ್ಯ ಹುಟ್ಟಿತು. ನಾನೂ ಕೂತು ಕುತೂ ತೂಕಡಿಕೆ ಬರುವ ಸ್ಥಿತಿಯಲ್ಲಿದ್ದೆ. ಮತ್ತೆ ಕೆಲವರೆಲ್ಲಾ ಎದ್ದು ಮಧ್ಯಾಹ್ನದ ಕಾಫಿಗೆ ಹೋದರು. ಅರ್ಧಗಂಟೆಯ ನಂತರ ನಿಧಾನವಾಗಿ ಬಂದು ಫೈಲುಗಳಲ್ಲಿ ಏನೇನೋ ಗೀಚಿ ಮೇನೇಜರ್‌ ಟೇಬಲ್ಲಿಗೆ ಸಾಗುಹಾಕಿ ಕಾಲು ಮೇಲು ಕಾಲು ಹಾಕಿ ಕೂತರು. ಐದು ಗಂಟೆ ಸುಮಾರಿಗೆ ಸಾಹೇಬರ ಸವಾರಿ ಚಿತ್ತೈಸಿತು.

ನಾನು ಮೇನೇಜರ್‌ ಬಳಿ ಹೋಗಿ ನಿಂತೆ. ‘ನಿಮ್ಮದೇನ್ ಆತುರಾರೀ…. ಕರಿತೀನಿ ಹೋಗ್ರಿ’ ಎಂದಾತ ರೇಗಿದ. ಜೋರಾಗಿ ಬೆಲ್ ಮಾಡಿ ‘ಸೈಲೆನ್ಸ್’ ಎಂದರಚಿದ. ಒಂದಿಷ್ಟು ಗದ್ದಲ ಅಡಗಿತು. ಈ ವರ್ಷ ರಿಟೈರ್ ಆಗಲಿರುವ ಅಯ್ಯಪ್ಪನ ಭಕ್ತನಿಗೆ ಡಿಸ್ಟರ್ಬ್ ಆಗಿ ಎಚ್ಚರವಾಯಿತು. ಹೊರಗಡೆ ಹೋಗಿ ಬಂದು ಮೇನೇಜರ್‌ ಬಳಿ ಮಾತಿಗೆ ಕೂತರು. ‘ಏನ್ಸಾರ್ ಇದು ಆಫೀಸು? ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಬಿಡಿ. ಲೇಟಾಗಿ ಬರೋರ್‍ಗೆ ‘ಮೆಮೊ’ ಕೊಡ್ಬೇಕು ಸಾರ್. ಯಾವಾಗ್ಲೋ ಬರ್ತಾರೆ, ಯಾವಾಗೋ ಹೋಗ್ತಾರೆ. ಒಂದು ಮೂವ್‌ಮೆಂಟ್ ರಿಜಿಸ್ಟರ್ ಮಡಗಬೇಕು ಸಾರ್ ಇವಕ್ಕೆ’ ಆತನ ಮಾತಿನಲ್ಲಿ ಕಾಳಜಿಯಿತ್ತು. ‘ನೋಡ್ರಿ ಈಶಣ್ಣ. ಮನೆಯ ಯಜಮಾನ ಬಿಗಿ ಇರಬೇಕ್ರಿ. ನಾವು ಮೆಮೊ ಕೊಟ್ಟರೂ ಸಾಹೇಬ ಸರಿಯಾದ ಆಕ್ಷನ್ನೇ ತಗೊಳೋದಿಲ್ಲವೆ?’ ಮೇನೇಜರ್ ಪೇಚಾಡಿದರು.

‘ಆತ ಆಫೀಸಿಗೆ ಬರೋದು ದುಡ್ಡು ತಗೊಳ್ಳೋಕೆ. ಅದರ ಕಡೆ ಧ್ಯಾನ ಇದ್ದವರಿಗೆ ಆಡಳಿತದ ಕಡೆ ಗ್ಯಾನ ಇರೋಕಿಲ್ಲ ಸಾರ್. ಕಾಲಕೆಟ್ಟು ಹೋಯ್ತು. ಐದು ಗಂಟೆ ಆಯ್ತು. ನಂಗೆ ಪೇಟೇಲಿ ಸ್ವಲ್ಪ ಕೆಲ್ಸ ಇದೆ. ವಿತ್ ಯುವರ್ ಕೈಂಡ್ ಪರಿಶನ್ ಬತ್ತೀನಿ ಸಾ……. ಸ್ವಾಮಿ ಶರಣು’ ಎಂದಾತ ಹೊರಟೇ ಬಿಟ್ಟ. ಸಾಹೇಬರು ಕರಿತಾರೆ ಎಂದಾಗ ಮೇನೇಜರ್ ನನ್ನನ್ನೂ ಕರೆದೊಯ್ದು ಪರಿಚಯಿಸಿದರು. ಛೇಂಬರೆಲ್ಲಾ ಗಬ್ಬುನಾತ ಹೊಡೆಯುತ್ತಿತ್ತು. ಸಾಹೇಬ ತಲೆ ಎತ್ತಿಯೂ ನೋಡದೆ ನನ್ನ ಡ್ಯೂಟಿ ರಿಪೋರ್ಟ್ ಮೇಲೆ ಗೀಚಿ ಎಸೆದರು. ‘ಈ ಹುಡ್ಗನ್ನ ಆ ಮಾದೇಗೌಡನಿಗೆ ಅಸಿಸ್ಟೆಂಟ್ ಆಗಿ ಹಾಕ್ರಿ’ ಅಂತ ಸೂಚಿಸಿದರು. ಅವನಿಗೇ ಸರಿಯಾಗಿ ಕೆಲ್ಸ ಇಲ್ಲ ಸಾರ್’ ಗೊಣಗಿದರು, ಮೇನೇಜರ್. ‘ಅವನು ಮೂರು ಹೊತ್ತೂ ಸೀಟಲ್ಲೇ ಇರೋಲ್ಲವಲ್ಲ. ಯಾರಾದ್ರೂ ಬಂದು ಕೇಳಿದರೆ ಈಗ ಬರ್ತಾನೆ ಅಂತ ಹೇಳೋಕಾದ್ರೂ ಇವನ್ನಲ್ಲಿ ಕೂಡ್ಸಿ’ ಎಂದು ಸಿಂಗಿಲರ್ ಆಗಿಯೇ ತೊದಲಿದ ಸಾಹೇಬ. ‘ಯಸ್ ಸಾರ್’ ಎಂದು ಹೊರಬಂದ ಮೇನೇಜರ್. ಹಿಂದೆಯೇ ನಾನೂ ಬಂದೆ. ಐದುಕಾಲೂ ಗಂಟೆಯಾಗುತ್ತಾ ಬಂದಿತ್ತು. ಕೆಲವರಾಗಲೆ ದಡದಡನೆ ಸದ್ದು ಮಾಡುತ್ತ ಫೈಲುಗಳನ್ನು ಬೀರಿಗೆ ತುಂಬಿ ಬೀಗ ಜಡಿದು ಹೊರಡುತ್ತಿದ್ದರು. ‘ಬೇಗ ಹೋಗಬೇಕ್ರಿ, ಇಲ್ಲದಿದ್ದರೆ ಸಿಟಿಬಸ್ ಮಿಸ್ ಆಗುತ್ತೆ’ ಟೈಪಿಣಿಯರು ಗೊಣಗುತ್ತಿದ್ದರು.

‘ನಾಳೆ ಸಾಹೇಬರ ಟೂರ್ ಇದೆ. ಇವತ್ತಿನಷ್ಟು ಕೆಲ್ಸ ಇರೋದಿಲ್ಲ. ಆರಾಮಾಗಿರೋದು’ ಅನ್ನುತ್ತಿದ್ದನೊಬ್ಬ ರೆಕಾರ್ಡ್ ಕೀಪರ್, ವಿಸ್ಮಯವೆನಿಸಿತು. ಆಗಲೆ ಬಂದ ಧಡೂತಿ ಮನುಷ್ಯನೊಬ್ಬ ‘ಯಾರಿ ನೀವು? ಹಾಂ? ಈ ಕಡೆ ಬನ್ನಿ’ ಎಂದು ನನ್ನ ಮೇಲೆ ರೇಗಿಕೊಂಡ. ‘ಈತ ಹೊಸದಾಗಿ ಬಂದಿದಾನೆ ಗೌಡ್ರೆ, ಸಾಹೇಬ್ರು ನಿಮಗೆ ಅಸಿಸ್ಟೆಂಟ್ ಆಗಿ ಹಾಕಿದರೆ’ ಎಂದು ಮೇನೇಜರ್ ಪರಿಚಯಿಸಿದಾಗ ಆತ, ‘ಐ ಸೀ…… ಫೈಲುಗಳೆಲ್ಲಾ ಒಳಾಗ್ ಮಡಗಿ ಲಾಕ್ ಮಾಡು’ ಎಂದಪ್ಪಣಿಸಿದ. ನಾನು ಇಷ್ಟಾದರೂ ಆಫೀಸ್ ಕೆಲಸ ಮಾಡುವ ಅವಕಾಶ ಸಿಕ್ಕಿತಲ್ಲಾ ಎಂದು ಖುಷಿಯಿಂದ ಫೈಲುಗಳನ್ನು ಸ್ವಸ್ಥಾನದಲ್ಲಿರಿಸಿ ಲಾಕ್ ಮಾಡಿ ‘ಕೀ’ ಆತನಿಗೊಪ್ಪಿಸಿದೆ. ಆತ ‘ಮೀಟ್ಯು ಟುಮಾರೋ’ ಎಂದು ಹೋಗಿಯೇ ಬಿಟ್ಟ. ನಾನು ದಿಗ್ಭ್ರಾಂತನಾದುದನ್ನು ಕಂಡ ಮೇನೇಜರ್ ನಕ್ಕರು. ‘ನಮ್ಮ ಮಾದೇಗೌಡ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕಣಯ್ಯ’ ಅಂದರು. ಸಾಹೇಬರು ಹೋಗುತ್ತಲೆ ಜವಾನರು ಕ್ಷಣಾರ್ಧದಲ್ಲಿ ಕಿಟಕಿ ಬಾಗಿಲುಗಳನ್ನು ಹಾಕಹತ್ತಿದರು. ಮೇನೇಜರ್ ಅಟೆಂಡೆನ್ಸ್‌ಗೆ ಹೆಸರು ಬರೆದು ನನ್ನ ರುಜು ಪಡೆದರು. ಈಚೆ ಬಂದು ಲಡಾಸ್ ಎದ್ದ ಟಿ.ವಿ.ಎಸ್. ಏರಿದರು. ಕ್ಷಣದಲ್ಲಿ ಎಲ್ಲರೂ ಮಾಯ. ಏಕಾಂಗಿಯಾಗಿ ನಿಂತ ಬೋಳು ಸುರಿವ ಬೀಗ ಜಡಿದ ಕಲ್ಲಿನ ಕಟ್ಟಡದ ನೋಡಿದೆ. ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಅಕ್ಷರಗಳು ಕಣ್ಣಿಗೆ ರಾಚಿದವು. ಅಪ್ಪ ನನ್ಯಾಕೆ ಅಷ್ಟೊಂದು ಸುಳ್ಳು ಸುಳ್ಳು ಹೇಳಿ ಹೆದರಿಸಿದರು ಅನ್ನಿಸುವಾಗ ನಗು ಬಂತು. ಕೊಪವೂ ಬಂತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೋವಿಂದ
Next post ಪ್ರೇಮಕೂ ಸುಳ್ಳಿಗೂ ಎಂತಹ ನಂಟು!

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…