ಪ್ರೇಮಕೂ ಸುಳ್ಳಿಗೂ ಎಂತಹ ನಂಟು
ಕವಿಯ ಕೇಳಬೇಕು
ಹಾಗಲ ಕಾಯಿಗೆ ಬೇವಿನ ಕಾಯಿ
ಸಾಕ್ಷಿ ಹೇಳಬೇಕು //ಪ//
ಇವಳಿಗೆ ಅವನು ಹುಣ್ಣಿಮೆ ಚಂದ್ರ
ಅವನಿಗೆ ಇವಳು ನೈದಿಲೆಯು
ಇವರ ಮಿಲನವೆ ಮಧುಮಹೋತ್ಸವ
ಇದಕೆ ಯಾವುದು ಎಣೆಯು!
ಜಗತ್ತು ಎಂದರೆ ಅವನಿಗೆ ಇವಳು
ಇವಳಿಗೂ ಅವನೇ ಎಲ್ಲ
ಇದರಾಚೆಗೆ ನರಪಿಳ್ಳೆಯೂ ಇಲ್ಲ
ಹಗಲು ರಾತ್ರಿಯೂ ಇಲ್ಲ
ಹೃದಯ ನುಡಿವ ಮಾತೆಲ್ಲವೂ ಸುಳ್ಳು
ಎನ್ನಬಹುದು ಮಿದುಳು
ಮಿದುಳು ಇರುವ ಜನ ಕೂಡ ಒಪ್ಪುವರು
ಹೃದಯದ ಸವಿಮಾತು;
ಅದರ ಒಳ ಮಾತು
*****