ಪಡುವಣ ಕಡಲಿನ ಮೂಡಣಕ್ಕೊಂದು ಬೆಟ್ಟ. ಬೆಟ್ಟದ ಸುತ್ತಮುತ್ತಲೆಲ್ಲಾ ಹಚ್ಚ ಹಸಿರು. ಆ ಹಸಿರಿನ ಮಧ್ಯದಲ್ಲೊಂದು ಕೇರಿ. ಆ ಕೇರಿ ಹೊರಗೊಂದು ಬಯಲು. ಆ ಬಯಲಿನ ತುದಿಯಲ್ಲೊಂದು ಆಲದ ಮರ. ಆ ಮರದ ಸುತ್ತಲೂ ಒಂದು ಕಟ್ಟೆ. ಆ ಕಟ್ಟೆಯ ಮೇಲೊಂದು ದೇವರು. ಆ ದೇವರಿಗೆ ನಾಲ್ಕು ಕೈ, ಒಂದು ದೊಡ್ಡ ಹೊಟ್ಟೆ ಮತ್ತು ಬಾಯಿಯ ಎದುರಲ್ಲೊಂದು ಸೊಂಡಿಲು. ಆ ದೇವರು ಕಾಣಿಸಿ ಕೊಂಡಿದ್ದೇ ಒಂದು ಕತೆ. ಆ ಕತೆಯನ್ನು ಆ ಊರಿನ ಹಿರಿಯರು ಹೇಳೋದೇ ಚೆಂದ. ಅವರು ಹೇಳಿದ್ದನ್ನು ನಾವು ಕೇಳೋದೇ ಆನಂದ.
ಕಾರೆಂಬ ಕತ್ತಲು, ಬೋರೆಂಬ ಗಾಳಿ, ಜೀರ್ ಎಂಬ ಮಳೆ, ಎರಡು ದಿನ ಎರಡು ರಾತ್ರಿ ಸುರಿಯಿತೋ ಸುರಿಯಿತು. ಹೊಳೆ, ಹಳ್ಳ, ತೋಡು, ನದಿ ತುಂಬಿತೋ ತುಂಬಿತು. ತುಂಬಿದ ನೀರೆಲ್ಲಾ ಹರಿಯಿತೋ ಹರಿಯಿತು. ಹರಿದ ನೀರೆದುರಿಗೆ ಬಂದದ್ದೆಲ್ಲಾ ಮುಳುಗಿತೋ ಮುಳುಗಿತು. ಬೋರೆಂಬ ಗಾಳಿಗೆ ಎದುರಾದ ಮರಗಳೆಲ್ಲ ಬಿದ್ದಿತೋ ಬಿದ್ದಿತು. ಊರ ಆಲದ ಮರ ಮಾತ್ರ ಹಾಗೇ ನಿಂತಿತೋ ನಿಂತಿತು. ಅದರ ಕಟ್ಟೆ ಮಾತ್ರ ಮಳೆಗೆ ಕುಸಿಯಿತೋ ಕುಸಿಯಿತು. ಬುಡದ ಮಣ್ಣೊಳಗಿಂದ ದೇವರ ಉಧ್ಭವ ಆಯಿತೋ ಆಯಿತು.
ಕಟ್ಟೆಯ ಎದುರಿನ ಬಯಲು, ಅದರಾಚೆಯ ಕೇರಿಯಲ್ಲಿ ಹದಿನೆಂಟು ಮನೆಗಳು. ಮನೆಗಳಲ್ಲಿ ಕಪ್ಪು ಕಪ್ಪು ಕಡ್ಡೀ ಜನ. ಕಡ್ಡೀಜನ ಕಟ್ಟೆ ಬಳಿ ಬಂದಾಗ ಅಲ್ಲಿ ದೇವ್ರು!. ದೇವ್ರ ಬಳಿ ಕಡ್ಡೀಜನ, ಹೋಗೋದಿಲ್ಲ. ಇಟ್ಟ ಮುಟ್ಟಾಳೆ, ಕಟ್ಟಿದ ಕೋಮಣದಲ್ಲಿ ಕೇರಿ ಜನ ಊರಿಗೆ ಓಡಿದ್ರು. ಊರ ಜನ ಬಯಲಿಗೆ ಓಡಿದ್ರು. ಬಯಲಿನಿಂದಾಚೆಗೆ ಎಲ್ಲಾ ಒಟ್ಟಾಗಿ ಕೈ ಕೈ ಹಿಡಿದು ನಿಧಾನವಾಗಿ ಮರದ ಹತ್ರ ಬಂದ್ರು. ಬಂದವ್ರು ದೇವ್ರನ್ನು ನೋಡಿದ್ರು. ದೇವ್ರನ್ನ ನೋಡಿದವರು ಮುಖ ಮುಖ ನೋಡ್ಕೂಂಡ್ರು. ಮುಖ ಮುಖ ನೋಡ್ದೋರು ಬಾಯಿ ತೆರೆದ್ರು. ತೆರೆದ ಬಾಯಿಯನ್ನು ಪಟೇಲ್ರು ಮುಚ್ಚಿಸಿದ್ರು. ದೇವರೆದ್ರು ಬಾಯಿ ತೆರೀಬೇಡಿ. ದೇವರೆದ್ರು ನಾಲಿಗೆ ಚಾಚಬೇಡಿ. ದೇವ್ರಿಲ್ಲದ ನಮ್ಮೂರಿಗೆ ದೇವ್ರು ಬರ್ಲಿಲ್ಲ. ದೇವ್ರಿಗಾಗದ ಕೇರಿ ಹತ್ರ ಬಂದಿದ್ದಾರೆ. ಕೇರಿ ಹತ್ರ ದೇವ್ರು ಬಂದ್ರೆ ಇಷ್ಟವೋ, ಅನಿಷ್ಟವೋ? ಅನಿಷ್ಟ ಎಂದಾದ್ರೆ ನೀವು ಏನು ಮಾಡ್ಬೇಕು? ನಾವು ಏನು ಮಾಡ್ಬೇಕು? ನಮಗಿದು ಹೊಳಿಯೋದಿಲ್ಲ. ನಾವು ನೀಲೇಶ್ವರಕ್ಕೆ ಹೋಗಿ ಬರ್ತೇವೆ. ಬರುವಾಗ ವೇದಬ್ರಹ್ಮರನ್ನು ಕರಕೊಂಡು ಬರ್ತೇವೆ. ಇದಕ್ಕೆ ಅವರಲ್ಲಿ ಉತ್ತರ ಸಿಗುತ್ತದೆ. ಕಟ್ಟೆ ಸುತ್ತ ಬೇಲಿ ಹಾಕಿ. ಮೈಲಿಗೆಯವರು ಮೈಲಿ ದೂರ, ಕೇರಿಯವರು ಹರದಾರಿ ದೂರ ನಿಲ್ಲಬೇಕು. ಯಾರೂ ದೇವ್ರನ್ನ ಮುಟ್ಟಬೇಡಿ. ಮುಟ್ಟಿ ಸುಟ್ಟುಹೋಗಬೇಡಿ.
ವೇದಬ್ರಹ್ಮರು ಬಂದರು. ಬಂದವರು ತಮ್ಮ ಬಟ್ಟೆ ಗಂಟು ಇಳಿಸಿದ್ರು. ಇಳಿಸಿದವ್ರು ಅದನ್ನು ಬಿಚ್ಚಿದರು. ಬಿಚ್ಚಿದವ್ರು ಅದ್ರಿಂದ ಶಾಸ್ತ್ರ ತೆಗೆದ್ರು. ಶಾಸ್ತ್ರ ತೆಗೆದವ್ರು ಅದಕ್ಕೆ ಕಡ್ಡೀ ಹಾಕಿದ್ರು. ಕಡ್ಡೀ ಹಾಕಿ ಪುಟ ಬಿಡಿಸಿದ್ರು. ಪುಟ ಬಿಡಿಸಿ ಕಣ್ಣು ಮುಚ್ಚಿ ಮಣಮಣ ಮಾಡಿದ್ರು. ಮಣಮಣ ಮಾಡಿ ಕೈ ಆಡಿಸಿದ್ರು. ಕೈ ಆಡಿಸಿ ಕವಡೆ ಹಾಕಿದ್ರು. ಕವಡೆ ಹಾಕಿ ಗುಣಿಸಿದ್ರು. ಗುಣಿಸಿ ಕೂಡಿಸಿದ್ರು. ಕೂಡಿಸಿ ಭಾಗಿಸಿದ್ರು. ಭಾಗಿಸಿ ಕಳೆದ್ರು. ಕಳ್ದು ತಲೆ ಎತ್ತಿದ್ರು. ಎತ್ತಿ ಜನರನ್ನು ನೋಡಿದ್ರು. ನೋಡಿ ನಗಾಡಿದ್ರು. ನಗಾಡಿ ಮಾತಾಡಿದ್ರು. ಇದು ಊರಿಗೆ ಶುಭ ಲಕ್ಷಣ. ಇವ ಗಣಪತಿ. ಸಾಧಾರಣದ ದೇವರು ಅಲ್ಲ. ಸಾಕ್ಷಾತ್ ಕಾಶೀ ವಿಶ್ವನಾಥನ ಮಗ. ಇವನನ್ನು ಮರದ ಬುಡದಲ್ಲಿ ಪ್ರತಿಷ್ಠಾಪಿಸಬೇಕು. ಮಂತ್ರ, ತಂತ್ರ, ಹೋಮ, ನೇಮ ಆಗಬೇಕು. ಅದಕ್ಕೆ ವ್ಯವಸ್ಥೆ ಮಾಡಿ. ಮತ್ತೆ ನ್ನಾನಿದ್ದೇನೆ.
ದೇವ್ರಿಲ್ಲದ ಊರಿಗೊಂದು ದೇವರ ದಿಕ್ಕಾಯಿತು. ದೇವರ ದಿಕ್ಕಾದ್ದಕ್ಕೆ ಜನಕ್ಕೆಲ್ಲಾ ಸಂತೋಷವಾಯಿತು. ಸಂತೋಷವಾದ್ದಕ್ಕೆ ಪ್ರತಿಷ್ಠಾಪನೆಗೆ ಸಾಕಷ್ಟು ಹಣ ಕೂಡಿತು. ಹಣ ಕೂಡಿಯೂ ತನನ್ನ್ನು ಕರೆಯದ್ದಕ್ಕೆ ಊರ ಜೋಯಿಸರಿಗೆ ಸಿಟ್ಟು ಬಂತು. ಸಿಟ್ಟು ಬಂದದ್ದಕ್ಕೆ ಅವರು ಕವಡೆ ಹಾಕಿದ್ರು. ಕವಡೆ ಹಾಕಿದ್ದಕ್ಕೆ ದೇವ್ರ ಕತೆ ಅವರ ಬಾಯಿಯಿಂದಲೂ ಬಂತು. ಕತೆ ನಿಂತು ಮಾತು ಬಂತು. ಇವ ಗಣಪತಿ ಹೌದು. ಇವ ಕಾಶಿಯ ವಿಶ್ವನಾಥನ ಮಗನೂ ಹೌದು. ಇವನನ್ನು ಕಟ್ಟೆಯಲ್ಲಿ ಪ್ರತಿಷ್ಠಾಪಿಸುವುದಲ್ಲ. ಬಯಲಲ್ಲಿ ದೇವಸ್ಥಾನ ಕಟ್ಟಬೇಕು. ದೇವಸ್ಥಾನ ಕಟ್ಟದಿದ್ದರೆ ನಾವೆಲ್ಲಾ ರಕ್ತಕಾರಿ ಸಾಯುತ್ತೇವೆ. ನಾನಿದ್ದೇನೆ, ನೀವು ದೇವಸ್ಥಾನಕ್ಕೆ ವ್ಯವಸ್ಥೆ ಮಾಡಿ.
ದೇವ್ರಿಲ್ಲದ ಊರಿಗೆ ದೇವ್ರಾಯಿತು. ದೇವ್ರಿಗೊಂದು ದೇವಸ್ಥಾನ ಆಗ್ಲಿ ಎಂದು ಜನ ಹಣಕೊಟ್ಟರು. ಹಣ ಕೊಟ್ಟುದ್ದನ್ನು ಕಂಡು ಪಟೇಲ್ರು ನೀಲೇಶ್ವರಕ್ಕೆ ಓಡಿದ್ರು. ಓಡಿದವರು ವೇದಬ್ರಹ್ಮರನ್ನು ಕರ್ಕೊಂಡು ಬಂದ್ರು. ಬಂದವ್ರು ಎಲ್ಲರನ್ನೂ ಆಲದ ಮರದ ಹತ್ರ ಸೇರಿಸಿದ್ರು. ಸೇರಿಸಿದವ್ರು ಪುಸ್ತಕ ಬಿಚ್ಚಿದ್ರು. ಬಿಚ್ಚಿದವರು, ಬೆಚ್ಚುವಂತೆ ಮಾತಾಡಿದ್ರು. “ಗಣಪತಿ ಹೇಳುತ್ತಾನೆ. ನಾನು ಕಾಶಿ ವಿಶ್ವನಾಥನ ಮಗನೇ ಹೌದು. ನನಗೆ ಗುಡಿ ಕಟ್ಟೋದಾದ್ರೆ ಕಟ್ಟಿ. ನೀವು ಕಟ್ಟಿದ ಗುಡಿಯ ಗೋಪುರ ಕಾಶಿಗೆ ಕಾಣದೆ ಇದ್ರೆ ಗುಡಿ ಕಟ್ಟಿದವರು ರಕ್ತಕಾರಿ ಸಾಯ್ತಾರೆ. ದನಕರುಗಳು ವಿಲವಿಲ ಒದ್ದಾಡಿ ಹೊಟ್ಟೆ ಉಬ್ಬರಿಸಿ ಸಾಯುತ್ತವೆ. ಊರಿಗೆ ಮಾರಿ ಬಡಿಯುತ್ತದೆ. ಕೆಂಡದ ಮಳೆ ಸುರಿಯುತ್ತದೆ. ಆದ್ರಿಂದ ನಾನು ಹೇಳುತ್ತೇನೆ. ಗಣಪತಿಗೆ ಗುಡಿ ಬೇಡ. ಮರದ ಬುಡದಲ್ಲೇ ಪ್ರತಿಷ್ಠಾಪನೆ ಸಾಕು.
ವೇದಬ್ರಹ್ಮರು ಒಂದು ವಾರ ಊರಲ್ಲೇ ನಿಂತ್ರು. ನಿಂತವ್ರು ಸೇರಿದ ಹಣದಿಂದ ಗಣಪತಿಯ ಪ್ರತಿಷ್ಠಾಪನೆ ಮಾಡಿದ್ರು. ಪ್ರತಿಷ್ಠಾಪನೆ ದಿನ ಮೂಡಪ್ಪ ಸೇವೆ ಮಾಡ್ಸಿದ್ರು. ರಾತ್ರೆ ರಂಗಪೂಜೆ ನಡೆಸಿದ್ರು. ಮರುದಿನ ಸತ್ಯನಾರಾಯಣ ಪೂಜೆ ನಡೆಸಿದ್ರು. ಮತ್ತಿನ ದಿನ ತ್ರಿಕಾಲ ಪೂಜೆ ಮಾಡಿಸಿದ್ರು. ಮತ್ತಿನ ದಿನ ಸಂಕಷ್ಟಹರ ಗಣಪತಿ ಪೂಜೆ ಮಾಡಿಸಿದ್ರು. ಮತ್ತಿನ ದಿನ ಪ್ರಸನ್ನ ಗಣಪತಿ ಪೂಜೆ ಮಾಡಿಸಿದ್ರು. ಮರುದಿನ ಸಾಮೂಹಿಕ ಶನಿಪೂಜೆ ಮಾಡಿಸಿದ್ರು. ಸಹಸ್ರನಾಮಾರ್ಚನೆ ನಡೆಸಿದ್ರು. ಒಂದು ಸಾವಿರದ ಎಂಟು ಬ್ರಾಹ್ಮಣರಿಗೆ ಅನ್ನಸಂತರ್ಪಣೆಯಾಯಿತು. ಹನ್ನೆರಡು ವೈದಿಕರಿಗೆ ವಸ್ತ್ರದಾನ, ಸುವರ್ಣದಾನ, ಗೋದಾನವಾಯಿತು. ಊರಿನ ಅನಿಷ್ಟವೆಲ್ಲಾ ನಿವಾರಣೆಯಾಯಿತು. ಊರಿನವರಿಗೆಲ್ಲಾ ಸಂತೋಷವಾಯಿತು. ಮರುದಿನ ಪ್ರತಿಷ್ಠಾಪನೆಯ ಹೆಸರಲ್ಲಿ ಊಟವೂ ಸಿಕ್ಕಿತು. ಉಳಿದದ್ದೆಲ್ಲಾ ಕೇರಿಗೆ ದಕ್ಕಿತು. ಆದ್ರೆ ಸಂಗೀತದಲ್ಲೊಂದು ಅಪಸ್ವರ ಹೊರಟಿತು. ತನಗಿಂತ ಪರ ಊರಿನ ವೇದಬ್ರಹ್ಮರು ಇವರಿಗೆ ಹೆಚ್ಚಾದ್ರೇ ಎಂದು ಊರ ಜೋಯಿಸರಿಗೆ ಸಿಟ್ಟು ಬಂತು. ಸಿಟ್ಟು ಬಂದು ಅವರು ಮನೆಯಲ್ಲೇ ಕೂತ್ರು. ಕೂತವ್ರಿಗೆ ಮೂಡಪ್ಪ ಸೇವೆ ತಪ್ಪಿಹೋಯ್ತು. ರಂಗಪೂಜೆ ತಪ್ಪಿ ಹೋಯ್ತು. ಸತ್ಯನಾರಾಯಣ ಪೂಜೆ ತಪ್ಪಿಹೋಯ್ತು. ಸಂಕಷ್ಟಹರ ಗಣಪತಿ ಪೂಜೆ ತಪ್ಪಿಹೋಯ್ತು. ಪ್ರಸನ್ನ ಗಣಪತಿ ಪೂಜೆ ತಪ್ಪಿಹೋಯ್ತು. ಶನಿ ಪೂಜೆ ತಪ್ಪಿ ಹೋಯಿತು. ಒಂದು ದಿನ ಜೋಯಿಸರ ಸಣ್ಣ ಕರು ಹೊಟ್ಟೆ ಉಬ್ಬರಿಸಿ ಸತ್ತೇ ಹೋಯ್ತು. ಜೋಯಿಸರು ಸ್ನಾನ ಮಾಡಿದ್ರು. ಸ್ನಾನ ಮಾಡಿ ಮಡಿ ಉಟ್ರು. ಮಡಿ ಉಟ್ಟು ಪೂಜೆ ಮಾಡಿದ್ರು. ಪೂಜೆ ಮಾಡಿ ಶಂಖ ಊದಿದ್ರು. ಶಂಖ ಊದಿ ಜಾಗಟೆ ಬಡಿದ್ರು. ಜಾಗಟೆ ಬಡಿದು ಜಗಲಿಗೆ ಬಂದ್ರು. ಜಗಲಿಗೆ ಬಂದು ಕವಡೆ ಹಾಕಿದ್ರು. ಕವಡೆ ಹಾಕಿ ಲೆಕ್ಕ ಮಾಡಿದ್ರು. ಲೆಕ್ಕ ಮಾಡಿ ಬೊಬ್ಬೆ ಹೊಡೆದ್ರು. “ಗಣಪತೀ… ತಪ್ಪಾಯಿತು. ನಿನ್ನ ಪೂಜೆಗೆ ಬಾರದ ಸಿಟ್ಟನ್ನು ಹೀಗೆ ತೋರಿಸಿದೆಯಾ ತಂದೆ? ತಪ್ಪಾಯಿತು.”
“ತಪ್ಪಾಯಿತು…. ತಪ್ಪಾಯಿತು” ಎನ್ನುತ್ತಾ ಆಲದ ಕಟ್ಟೆಯತ್ರ ಓಡಿದ್ರು. ಓಡಿದವರೇ ದೇವರ ಎದುರು ಅಡ್ಡ ಬಿದ್ರು. ಅಡ್ಡ ಬಿದ್ದವರೇ ತಪ್ಪಾಯ್ತು, ತಪ್ಪಾಯ್ತು ಎಂದು ಗಲ್ಲಗಲ್ಲ ಬಡಕೊಂಡರು. ಬಡಕೊಂಡವರೇ ಅಲ್ಲೇ ನಿಂತಿದ್ದ ವೇದಬ್ರಹ್ಮರತ್ತ ನೋಡಿದರು. ವೇದಬ್ರಹ್ಮರು ನಕ್ಕರು. ನಕ್ಕವರೇ ಹೇಳಿದ್ರು. ಒಂದು ಪ್ರಾಯಶ್ಚಿತ್ತ ಹೋಮ, ಮತ್ತೊಂದು ಮೂಡಪ್ಪ ಸೇವೆ ಮಾಡಿಸಿಬಿಡಿ. ಪ್ರಸನ್ನ ಗಣಪತಿ ಪೂಜೆ ನಡೆದರೆ ಉತ್ತಮ. ಜೋಯಿಸರು ಒಪ್ಪಿದ್ರು. ಒಪ್ಪಿದವರೇ ಹೋಮ, ಪೂಜೆ, ಸೇವೆ ನಡೆಸಿದ್ರು. ನಡೆಸಿದ್ದಕ್ಕೆ ಅವ್ರಿಗೆ ಪೂಜೆಯ ಹಕ್ಕು ಸಿಕ್ಕಿತು.
ಕಾಶಿ ವಿಶ್ವನಾಥನ ಮಗ ಗಣಪತಿಯ ಪ್ರತಿಷ್ಠಾಪನೆ ಆದ ಮೇಲೆ ಊರಲ್ಲಿ ಮಳೆ ಸರಿಯಾಗಿ ಬೀಳುತ್ತದೆ. ಮಳೆ ಸರಿಯಾಗಿ ಬೀಳುವುದಕ್ಕೆ ಬೆಳೆ ಸರಿಯಾಗಿ ಬೆಳೆಯುತ್ತದೆ. ಬೆಳೆ ಸರಿಯಾಗಿ ಬೆಳೆಯುವುದಕ್ಕೆ ಜನರ ಹೊಟ್ಟೆ ತುಂಬುತ್ತದೆ. ಹೊಟ್ಟೆ ಸರಿಯಾಗಿ ತುಂಬುವುದಕ್ಕೆ ಮೂಡಪ್ಪ ಸೇವೆ ನಡೆಯುತ್ತದೆ. ಮೂಡಪ್ಪ ಸೇವೆ ನಡೆಯುವುದಕ್ಕೆ ಮಳೆ ಸರಿಯಾಗಿ ಬೀಳುತ್ತದೆ. ಮಳೆ ಸರಿಯಾಗಿ ಬೀಳುವುದಕ್ಕೆ……
* * *
ಕೇರಿಯ ಕೊರಗನ ಮಗ ಮಣ್ಚನಿಗೂ ಈ ಕತೆಯೆಲ್ಲ ಹೇಳಲು ಬರುತ್ತದೆ. ಕತೆ ಹೇಳಲು ಬರುವುದಕ್ಕೆ ಕಾರಣ ಕೊರಗನೆ. ಕೊರಗನದ್ದೇ ಕೆಲವು ಕತೆಗಳಿವೆ. ಕತೆಯಲ್ಲ ಸತ್ಯ, ಸತ್ಯವಲ್ಲ ಪವಾಡ. ಪವಾಡವೆಂದರೆ ಅಧ್ಭುತ ಪವಾಡ. ಮದುವೆಯಾಗಿ ಹತ್ತು ವರ್ಷವಾದರೂ ಮಕ್ಕಳಾಗದ ದೊಡ್ಡಮನೆ ಮಾದೇವಿಯಕ್ಕ ಹೆತ್ತದ್ದು ಮೂಡಪ್ಪ ಸೇವ ಮಾಡಿದ್ದರಿಂದಲೇ. ಕೆಳಗಿನ ಕಾನದ ಭಾಗೀರಥಿಗೆ ಮದುವೆಯಾದದ್ದೂ ಮೂಡಪ್ಪ ಸೇವೆ ಮಾಡಿದ್ದರಿಂದಲೇ. ಬೆಳ್ಳಿಕಜೆ ಮುಂಡಪ್ಪಣ್ಣ ಓಟಿನಲ್ಲಿ ಗೆದ್ದದ್ದು ಮೂಡಪ್ಪ ಸೇವೆ ಮಾಡಿದ್ದರಿಂದಲೇ. ಕಾಣೆಯಾದ ತನ್ನ ಹಂದಿಕುರ್ಲೆ ಮತ್ತೆ ಮನೆಗೆ ಬಂದದ್ದು ಹರಿಕೆ ಹೇಳಿದ್ದರಿಂದಲೇ. ಕೋಳಿಕಟ್ಟದಲ್ಲಿ ತನ್ನ ಮೈರೆ ಗೆದ್ದದ್ದು ಪಂಚಕಜ್ಜಾಯ ಮಾಡಿಸಿದ್ದರಿಂದಲೇ. ಒಂದೇ…. ಎರಡೇ….?
ಮಣ್ಚನಿಗೆ ಗಣಪತಿ ಇಷ್ಟದ ದೇವ್ರು. ದೇವ್ರು ಅಂದ್ರೆ ಏನು? ತನ್ನ ಮನೆಯ ಪಂಜುರ್ಲಿಗಿಂತ ದೊಡ್ಡವರು. ದೊಡ್ಡವರು ಅಂದ್ರೇನು, ವಾರಕ್ಕೊಂದು ಬಾರಿ ಮೂಡಪ್ಪ ಸೇವೆ ಮಾಡಿಸಿಕೊಳ್ಳುವವರು. ಮಾಡಿಸಿಕೊಳ್ಳುವವರು ಅಂದ್ರೇನು? ಯಾವ್ಯಾವ ಊರಿಂದ ಜನ ಇಲ್ಲಿಗೆ ಬರುವ ಹಾಗೆ ಮಾಡುವವರು. ಮಾಡುವವರು ಅಂದ್ರೇನು? ಮೂಡಪ್ಪ ಸೇವೆ ಮಾಡುವಂತೆ ಮಾಡುವವರು. ಕಟ್ಟೆಯಿಂದ ದೂರ ನಿಂತು ಅಪ್ಪಕ್ಕಾಗಿ ಕಾದ ತನ್ನಂತವರಿಗೆ, ಮೂಡಪ್ಪ ನೀಡುವಂತೆ ಬುದ್ಧಿ ಕೊಡುವವರು. ಮೂಡಪ್ಪ ಅಂದ್ರೇನು? ಘಮಘಮ ತುಪ್ಪದಲ್ಲಿ ಹುರಿದದ್ದು, ತಮಗೆ ಸಿಗುವುದೆಂದರೇನು ?
ಮಣ್ಚನಿಗೂ ನೆನಪುಂಟು. ನೆನಪೆಂದ್ರೇನು? ಅದು ಮರೆತು ಹೋಗ್ಲಿಕ್ಕುಂಟಾ? ನಾಲ್ಕು ವರ್ಷದ ಹಿಂದೆ ಗುತ್ತಿನ ರಾಮಣ್ಣಸೆಟ್ರ ಮೂಡಪ್ಪ ಸೇವೆ. ಗುತ್ತಿನವರು ಅಂದ್ರೇನು, ಅವರ ಮೂಡಪ್ಪ ಸೇವೆಯ ಗತ್ತೇನು? ಊರಿಗೆ ಊರೇ ಕಟ್ಟೆಯ ಸುತ್ತ ಸೇರಿದ್ದೇನು? ಮಣ್ಚನನ್ನೂ ಮೂಡಪ್ಪ ಸೆಳೆದದ್ದೇನು? ಅವನು ಬಂದು ಬಂದು ಕಟ್ಟೆಯ ಹತ್ತಿರಕ್ಕೆ ಮುಟ್ಟಿದ್ದೇನು? ಅದನ್ನು ಪೂಜೆ ಮಾಡುತ್ತಿದ್ದ ಜೋಯಿಸರು ಮೊದಲು ಕಂಡು ಅಬ್ಬರಿಸಿದ್ದೇನು? “ಏ ಬೇವಾರ್ಸಿ, ಮಾರಿ ಹೊ…..! ನಮ್ಮ ಮಡಿಯೆಲ್ಲಾ ಹಾಳಾಯ್ತು. ಗಣಪತಿಗೆ ಅಶುದ್ಧವಾಗುತ್ತದೆ. ನಡಿಯೋ ನಾಯಿಗೆ ಹುಟ್ಟಿದವನೆ.”
ಪೂಜೆ ನೋಡುತ್ತಿದ್ದ ರಾಮಣ್ಣಸೆಟ್ರು ಈಚೆ ನೋಡಿದರು. ನೋಡಿದವರ ಕಣ್ಣಲ್ಲಿ ಕೆಂಡ. ಬಾಯಲ್ಲಿ ಅಬ್ಬರ. “ಏ ಕಂಡ್ರಕುಟ್ಟಿ, ಗಣಪತಿಗೆ ಅಸುದ್ಧ ಮಾಡ್ತಿ. ನಿನ್ನಮ್ಮನ ಪೂ…. ಗೆ ನಾನು ಪೋ…..ಲಿಕ್ಕೆ! ಸನಿ ನಡಿ, ಇಲ್ಲದಿದ್ದರೆ ತಲೆ ಕಡಿದು ಬಲಿ ಕೊಡುತ್ತೇನೆ. ಹಡಬ್ಬೆ ಮುಖದವನೆ, ಅಬ್‌ಜಾಲಿ ಪೀಂಕಾಣಿಯವನೆ, ಹಂಬಾಕ್ ಸೂಳೆ ಮಗ್ನೇ.” ರಾಮಣ್ಣಸೆಟ್ರ ಬೈಗಳು ಅಂದ್ರೆ ಬೈಗಳು. ಬೈಗಳು ಅಂದ್ರೇನು, ಮೂರು ಮೈಲಿಗೆ ಕೇಳಬೇಕು. ಕೇಳುವುದೆಂದರೇನು, ಕಿವಿ ಕಿವುಡಾಗಬೇಕು. ಕಿವಿ ಕಿವಿಡು ಅಂದ್ರೇನು, ಕೇಳಿದವರು ಮೆಚ್ಚಬೇಕು. ಮೆಚ್ಚುವುದು ಅಂದ್ರೇನು. ಮಕ್ಕಳು ಬೆಚ್ಚಬೇಕು. ಬೆಚ್ಚಿದವರು ಓಡಬೇಕು.
ಹಾಗೆ ಓಡಿದ ಮಣ್ಚ ಕೇರಿ ಮುಟ್ಟುವಾಗ ಲಂಗೋಟಿ ಎಲ್ಲೋ ಹಾರಿ ಹೋಗಿತ್ತು. ಅವನೊಟ್ಟಿಗೇ ಬಂದ ಮಣ್ಚುವಿನ ಮುಖ ನೋಡಬೇಕಿತ್ತು. “ಮಂಗ ಮುಸುಡಿನವನೆ. ನಮ್ಮ ಮರ್ಯಾದೆ ತೆಗೆದೆ. ಮರ್ಯಾದೆ ಜತೆಗೆ ಮೂಡಪ್ಪ ಇಲ್ಲದ ಹಾಗೆ ಮಾಡಿದೆ. ಗಣಪತಿಗೆ ಸಿಟ್ಟು ಬಂದ್ರೆ ನಿನ್ನ ಗತಿಯೇನು?”
ಮಣ್ಚನಿಗೆ ಹೆದರಿಕೆಯಾಯ್ತು. ಹೆದ್ರಿದವನಿಗೆ ಜ್ವರ ಬಂತು. ಜ್ವರ ಬಂದವ ಮಲಗಿ ಕೊಂಡ. ಮಲಗಿಕೊಂಡವ ಹೊದ್ದುಕೊಂಡ. ಅಪ್ಪನಿಗೆ ಸುದ್ದಿ ಹೋಯ್ತು. ಸುದ್ದಿ ಹೋಗಿ ಅಪ್ಪ ಬಂದ. ಬಂದವ ಮಣ್ಚನ ತಲೆ ಸವರಿದ. ತಲೆಯನ್ನು ಸವರಿ ಮೆಲ್ಲನೆ ನುಡಿದ. ಅದು ದೇವರ ಕಟ್ಟೆ. ದೇವರ ಬಳಿಗೆ ಕೇರಿಯವರು ಹೋಗಬಾರದು. ದೇವರ ಕಟ್ಟೆ ಏರಲೇಕೂಡದು. ಆ ಮರವನ್ನಂತೂ ಮುಟ್ಟಲೇಬಾರದು. ದೇವರಿಗೆ ನಮ್ಮ ನೆರಳು ಬೀಳಬಾರದು. ಉಳ್ಳಯಗಳು, ಬಾಣಾರುಗಳು ಇರುವಲ್ಲಿಗೆ ಕೇರಿಯವರು ಹೋಗಬಾರದು. ಅಪ್ಪಿತಪ್ಪಿ
ಅವರನ್ನು ಮುಟ್ಟಬಾರದು. ಅವರು ಬಂದಾಗ ದಾರಿ ಬಿಟ್ಟು ಕೊಡಬೇಕು. ಸಂದಿಮೈಲಿಗೆ ಮಾಡಕೂಡದು.”
* * *
ಮಣ್ಚ ಈಗ ಬೆಳೆದಿದ್ದಾನೆ. ಅವನ ಬಾಡು ಎತ್ತರವಾಗಿದೆ. ಮಣ್ಚನಿಗೆ ಮೂಡಪ್ಪ ಸೇವೆಯ ದಿನಗಳೆಲ್ಲಾ ಗೊತ್ತು. ಬಾಡುವಿಗೆ ಮಣ್ಚನೊಟ್ಟಿಗೆ ಓಡುವುದು ಗೊತ್ತು. ಮಣ್ಚನಿಗೆ ಮೂಡಪ್ಪ ಸಿಗುವ ಸಮಯ ಗೊತ್ತು. ಅವನ ಬಾಡುವಿಗೆ ಅದರಲ್ಲಿ ಪಾಲು ಸಿಗೋದು ಗೊತ್ತು. ಮಣ್ಚ ಮೂಡಪ್ಪ ಸಿಗುವವರೆಗೆ ಕಾಯುತ್ತಾನೆ. ಬಾಡು ಬಾಲ ಅಲ್ಲಾಡಿಸುತ್ತದೆ.
ಬೆಳಿಗ್ಗೆ ಮಣ್ಚ ಬೇಗ ಎದ್ದ. ಮುಂಡಪ್ಪಣ್ಣನ ಮೂಡಪ್ಪ ಸೇವೆ ಎಂದು ಕುಣಿದ. ಬೆಳಗ್ಗಿನ ತಂಗಳನ್ನು ಬಾಡುಗೆ ಸುರಿದ. ಪೂಜೆಯ ಸಮಯಕ್ಕೆ ಕಟ್ಟೆಯಲ್ಲಿಗೆ ಓಡಿದ. ಬಾಡು ತಂಗಳನ್ನು ಮೂಸಲೂ ಇಲ್ಲ. ಮಣ್ಚನಿಗಿಂತ ಮೊದಲೇ ಅದು ಕಟ್ಟೆಯ ಬಳಿ ಇತ್ತು. ಮಣ್ಚ ಸಾಕಷ್ಟು ದೂರವೇ ನಿಂತ. ಅಪ್ಪ ಹೇಳಿದ್ದು ನೆನಪು ಮಾಡಿಕೊಂಡ. “ದೇವರ ಕಟ್ಟೆಗೆ ಹತ್ತಬಾರದು. ಆಲದ ಮರವನ್ನು ಮುಟ್ಟಬಾರದು. ದೇವರಿಗೆ ನೆರಳು ಬೀಳಬಾರದು. ಉಳ್ಳಯಗಳು, ಬಾಣಾರುಗಳು ಬಂದಾಗ ದಾರಿಬಿಟ್ಟು ಕೊಡಬೇಕು.”
ಮುಂಡಪ್ಪಣ್ಣನ ಮೂಡಪ್ಪ ಸೇವೆ ಅಂದ್ರೆ ಊರಿಗೆ ಊರೇ ನೆರೆಯುತ್ತದೆ. ಜೋಯ್ಸರಿಗೆ ಹೊಸ ಹುರುಪು ಬರುತ್ತದೆ. ಪೂಜೆ ಅರ್ಧ ಗಂಟೆ ಹೆಚ್ಚಾಗುತ್ತದೆ. ಎಲ್ಲರಿಗೂ ಕೈತುಂಬಾ ಮೂಡಪ್ಪ ಸಿಗುತ್ತದೆ. ಸಿಗುತ್ತದೆಂದು ಮಣ್ಚ ಕಾದಿದ್ದಾನೆ. ಮಣ್ಚನೊಟ್ಟಿಗೆ ಅವನ ಬಾಡು. ಬಾಡುನ ಹಿಂದೆ ಅಂಗಾರು, ಅಂಗಾರು ಹಿಂದೆ ಚಣ್ಣು, ಚಣ್ಣು ಹಿಂದೆ ಚೋಂಕ್ರ, ಚೋಂಕ್ರನ ಹಿಂದೆ ಮಾಯಿಲ….. ಕಣ್ಣು ಬಿಟ್ಟಂತೆ…. ನೋಟ ನೆಟ್ಟಂತೆ.
ಪೂಜೆ ನಿಂತಿತು. ಪ್ರಸಾದ ನೀಡಿಕೆ ಶುರುವಾಯ್ತು. ಕಟ್ಟು ಕಟ್ಟು ಮೂಡಪ್ಪ ಬಾಣಾರುಗಳಿಗೆ ಹೋಯಿತು. ಬಾಣಾರುಗಳಿಗೆ ಆಗಿ ಉಳ್ಳಯಗಳಿಗೆ. ಕಟ್ಟು ಕಟ್ಟು ಪ್ರಸಾದ ಉಳ್ಳಯಗಳಿಗೆ ಹೋಯಿತು. ಇನ್ನು ಸ್ವಲ್ಪ ಹೊತ್ತಲ್ಲಿ ತಮಗೆ….. ತಮಗೇ. ಮಣ್ಚನ ಬಾಯಿಯಿಂದ ನೀರು ಬರತೊಡಗಿತು. ಬಾಡುವಿನ ಚಾಮರಸೇವೆ ಹೆಚ್ಚಾಗತೊಡಗಿತು. ಇನ್ನೇನು ಸ್ವಲ್ಪ…. ಸ್ವಲ್ಪವೇ ಹೊತ್ತು ಎಂದುಕೊಳ್ಳುತ್ತಿರುವಾಗ ಜೋಯ್ಸರು ಬೊಬ್ಬಿಟ್ಟರು. “ಹೋ ಹೋ ಹೋ ಆಯ್ತು… ಆಯ್ತು…. ಮುಗ್ದೇ ಹೋಯ್ತು…. ಮೂಡಪ್ಪ ಮುಗ್ದೇ ಹೋಯಿತು. ಯಾರೂ ಅಪ್ಪಕ್ಕಾಗಿ ಬರಬೇಡಿ. ತೀರ್ಥಪ್ರಸಾದ ಬೇಕಿದ್ರೆ ಬನ್ನಿ.”
ಮಣ್ಚ ಬಾಡುವನ್ನು ನೋಡಿದ. ಬೆಳಿಗ್ಗೆ ಅದಕ್ಕೆ ಹಾಕಿದ ತನ್ನ ತಂಗಳನ್ನು ನೆನೆದು ಕೊಂಡ. ಜನ ಚದುರತೊಡಗಿದರು. ಮುಂಡಪ್ಪಣ್ಣ ಪಂಚೆ ಎತ್ತಿದರು. ಪಂಚೆ ಎತ್ತಿ ಅಂಡರ್‌ವೇರ್ ಕೆಳಗೆ ಎಳೆದರು. ಕೆಳಗೆ ಎಳೆದು ಜೋಬಿಗೆ ಕೈ ಹಾಕಿದರು. ಕೈ ಹಾಕಿ ಪರ್ಸು ತೆಗೆದರು. ಪರ್ಸು ತೆಗೆದು ನೋಟು ಎಣಿಸಿದರು. ನೋಟು ಎಣಿಸಿ ಜೋಯಿಸರ ಕೈಗೆ ಹಾಕಿದರು. ಕೈಗೆ ಹಾಕಿ ನೆಲ ಮುಟ್ಟಿದರು. ನೆಲ ಮುಟ್ಟಿ ನಮಸ್ಕಾರ ಮಾಡಿದರು. ನಮಸ್ಕಾರ ಮಾಡಿ ಅಪ್ಪದ ದೊಡ್ಡ ಗಂಟು ತಗೊಂಡರು. ಗಂಟು ತಗೊಂಡು ಜೀಪಿದ್ದಲ್ಲಿಗೆ ಬಂದರು. ಬಂದು ಗಂಟಿಟ್ಟು ಜೀಪನ್ನೇರಿದರು. ಜೀಪನ್ನೇರಿ ಅದನ್ನು ಸ್ಟಾರ್ಟ್ ಮಾಡಿದರು. ಸ್ಟಾರ್ಟು ಮಾಡಿ ಊರಿನತ್ತ ಓಡಿಸಿದರು.
ಜೋಯಿಸರು ಅಪ್ಪದ ದೊಡ್ಡ ಕಟ್ಟನ್ನು ಬೈರಾಸಿನಲ್ಲಿ ಕಟ್ಟಿಕೊಂಡರು. ಕಟ್ಟಿಕೊಂಡು ಅದನ್ನು ಹೆಗಲಲ್ಲಿ ಸಿಕ್ಕಿಸಿಕೊಂಡರು. ಸಿಕ್ಕಿಸಿಕೊಂಡು ಕಟ್ಟೆಯಿಂದ ಕೆಳಗೆ ಇಳಿದರು. ಇಳಿದವರು ಒಮ್ಮೆ ತಿರುಗಿ ನೋಡಿ ಕಚ್ಚೆ ಸಿಕ್ಕಿಸಿಕೊಂಡರು. ಸಿಕ್ಕಿಸಿಕೊಂಡು ಈಚೆ ಬಂದಾಗ ಮಣ್ಚನನ್ನು ಕಂಡರು. ಕಂಡು ಬಾಯಿ ಬಿಟ್ಟರು. ಮಾನಗೆಟ್ಟ ಶನಿ ಸಂತಾನ. ಏನು ನಿಂತದ್ದು? ನಡೆಯಿರಿ ಬೇವಾರ್ಸಿಗಳು. ಅಬ್ಬರಕ್ಕೆ ಕೇರಿಯವರು ಓಡಿದರು. ಮಣ್ಚ ಮಾತ್ರ ಅವರನ್ನೇ ನೋಡಿದ. ಜೋಯ್ಸರಿಗೆ ಸಿಟ್ಟು ಬಂತು. “ಏನು ದುರು ದುರು ನೋಡುತ್ತಿ? ನನ್ನನ್ನು ನುಂಗುತ್ತೀಯಾ? ನಿನ್ನನ್ನು… ನಿನ್ನನ್ನು…” ಎಂದು ಕೈ ಎತ್ತಿದರು. ಮಣ್ಚ ಮಾತಾಡಲಿಲ್ಲ. ಬಾಡು ಗುರ್ರ್ ಎಂದಿತು. ಎತ್ತಿದ ಕೈ ಕೆಳಕ್ಕಿಳಿಯಿತು. ಹಾಳಾಗಿ ಹೋಗು ರಂಡೆ ಮಗ್ನೆ ಎಂದು ಜೋಯಿಸರು ಕೆಳಕ್ಕೆ ನೋಡಿದರು. ಬಿಚ್ಚಿದ್ದ ಕಚ್ಚೆಯನ್ನು ಎತ್ತಿ ಸಿಕ್ಕಿಸಿಕೊಂಡರು. ಸಿಕ್ಕಿಸಿಕೊಂಡು ಊರಿನ ದಾರಿ ಹಿಡಿದರು.
ಮಣ್ಚ ಸ್ವಲ್ಪ ಹೊತ್ತು ಅವರನ್ನೇ ನೋಡುತ್ತಿದ್ದ. ನಡೆಯುವಾಗ ಅಲ್ಲಾಡುವ ಜುಟ್ಟು, ದುಳುಕ್, ದುಳುಕ್ ಎಂದು ಕುಣಿಯುವ ಬ್ರಹ್ಮಾಂಡ ಹೊಟ್ಟೆ, ಅವರ ಬೃಹತ್ತಾದ ನಿತಂಬ ನೋಡುತ್ತಾ ಅವುಡುಗಚ್ಚಿದ. ಅಲ್ಲಿ ಅವನನ್ನು ಮತ್ತು ಬಾಡುವನ್ನು ಬಿಟ್ಟರೆ ಬೇರಾರೂ ಇರಲಿಲ್ಲ. ಅವನು ಕಟ್ಟೆಯ ಬಳಿ ನಡೆದ. ಬಾಡು ಹಿಂಬಾಲಿಸಿತು. ಮೂಡಪ್ಪ ಸೇವೆಯಿಂದಾಗಿ ವಿಗ್ರಹದಿಂದ ಬಾಯಲ್ಲಿ ನೀರೂರಿಸುವ ಪರಿಮಳ ಬರುತ್ತಿತ್ತು. ಕಟ್ಟೆಯಲ್ಲಿ ಅಲ್ಲಲ್ಲಿ ಅಪ್ಪದ ತುಂಡುಗಳು ಬಿದ್ದಿದ್ದವು. ಮಣ್ಚನಿಗೆ ಆಸೆಯಾಯಿತು. ಜತೆಯಲ್ಲೇ ಅಪ್ಪನ ಮಾತು ಕಿವಿಯಲ್ಲಿ ಅನುರಣಿಸಿತು: “ದೇವರ ಕಟ್ಟೆ ಹತ್ತಬಾರದು. ಆಲದ ಮರವನ್ನು ಮುಟ್ಟಬಾರದು. ದೇವರಿಗೆ ನೆರಳು ಬೀಳಬಾರದು. ಬಾಣಾರುಗಳು, ಉಳ್ಳಾಯಗಳು ಬಂದಾಗ ದಾರಿ ಬಿಡಬೇಕು.”
ಮಣ್ಚ ಆಲೋಚಿಸುತ್ತಿರುವಂತೆ ಬಾಡು ಕಟ್ಟೆ ಹತ್ತಿತು. ಮಣ್ಚನಿಗೆ ಗಾಬರಿ ಯಾಯಿತು. “ಏ….. ಏ…. ಬಾಡು ಬಾಡು…. ಎಂದು ಕರೆದ. ಬಾಡು ಅಲ್ಲಲ್ಲಿ ಬಿದ್ದಿದ್ದ ಅಪ್ಪದ ಚೂರುಗಳನ್ನು ಮೂಸಿ ಮೂಸಿ ತಿನ್ನುತ್ತಾ ವಿಗ್ರಹದ ಹತ್ತಿರ ಹೋಯಿತು. ಮಣ್ಚನಿಗೆ ಹೆದರಿಕೆ ಯಾಯಿತು. ನಾಯಿಯನ್ನು ಹೇಗೆ ಓಡಿಸುವುದು? ತಾನು ಕಲ್ಲೆಸೆದರೆ ಅದು ವಿಗ್ರಹಕ್ಕೆ ತಾಗೀತು. ಪುನಃ ಅಪ್ಪನ ಮಾತುಗಳು ಕಿವಿಯಲ್ಲಿ ಧ್ವನಿಸಿದವು. ನಾಯಿ ಮೂಸಿ ಮೂಸಿ ನೆಕ್ಕಿ ಕಾಲೆತ್ತ ತೊಡಗಿದ್ದನ್ನು ಕಂಡು ಅವನಿಗೆ ವಿಪರೀತ ಸಿಟ್ಟು ಬಂತು. ಎಲ್ಲಿಲ್ಲದ ಸಿಟ್ಟಿನಿಂದ ಮನೆಗೆ ಓಡಿದ. ಮೂಲೆಯಲ್ಲಿದ್ದ ಪುಟ್ಟ ಕತ್ತಿಯನ್ನು ಹಿಡಿದು ಕೊಂಡು ಓಡುತ್ತಾ ಬಂದ. ಬಂದವನೇ ನೇರವಾಗಿ ಕಟ್ಟೆ ಹತ್ತಿದ. ಕಟ್ಟೆ ಹತ್ತಿದವನು ಸಿಟ್ಟಿನಿಂದ ಒಂದೇ ಸವನೆ ಆಲದ ಮರವನ್ನು ತನ್ನ ಪುಟ್ಟ ಕತ್ತಿಯಿಂದ ಕಡಿಯತೊಡಗಿದ.
*****
೧೯೮೧