ಕೋಮುವಾದ – ಈಗ ಮನೋನ್ಮಾದ

ಕೋಮುವಾದ – ಈಗ ಮನೋನ್ಮಾದ

ಕೋಮುವಾದವು ‘ಏಕ’ ನೆಲೆಯನ್ನು ಪಡೆದ ಪ್ರತಿಪಾದನೆಯಾದರೆ, ಕೋಮುವಾದದ ವಿರೋಧಿವಲಯವು ‘ಅನೇಕ’ ನೆಲೆಯ ತಾತ್ವಿಕ ಪ್ರತಿಪಾದನೆಯಾಗಿದೆ. ಕೋಮುವಾದವು ಏಕಧರ್ಮ, ಏಕಸಂಸ್ಕೃತಿ ಮತ್ತು ಏಕ ಸಾಮಾಜಿಕ-ಸಾಂಸ್ಕೃತಿಕ ನಾಯಕತ್ವವನ್ನು ಶ್ರೇಷ್ಠವೆಂದು ಭಾವಿಸಿದ ಬೀಜರೂಪ. ಕೋಮುವಾದದ ವಿರೋಧಿ ವಲಯವು ಅನೇಕ ಧರ್ಮ, ಅನೇಕ ಸಂಸ್ಕೃತಿ ಮತ್ತು ಅನೇಕ ಸಾಮಾಜಿಕ- ಸಾಂಸ್ಕೃತಿಕ ನಾಯಕತ್ವದ ಸಮಾನತೆಯೇ ಶ್ರೇಷ್ಠವೆಂದು ಭಾವಿಸುವ ಸಿದ್ಧಾಂತ ರೂಪ. ‘ಏಕ’ ಶ್ರೇಷ್ಠತೆಯಲ್ಲಿ ಕನಿಷ್ಠತೆಗೆ ಜಾಗವಿದ್ದರೆ ಅನೇಕ ಶ್ರೇಷ್ಠತೆಯಲ್ಲಿ ಯಾವುದೇ ಧರ್ಮ-ಸಂಸ್ಕೃತಿಗಳು ಕನಿಷ್ಠವಲ್ಲ. ಹೀಗಾಗಿ ‘ಏಕ’ ಮತ್ತು ‘ಅನೇಕ’ಗಳ ನಡುವೆ ಸೈದ್ಧಾಂತಿಕ ಮುಖಾಮುಖಿ ಅನಿವಾರ್ಯವಾಗಿದೆ. ಒಂದು ವಿಪರ್ಯಾಸವೆಂದರೆ, ‘ಏಕ’ ಪ್ರತಿಪಾದಕರಲ್ಲಿ ಭಿನ್ನಾಭಿಪ್ರಾಯ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಆಗಾಗ್ಗೆ ಭಿನ್ನಾಭಿಪ್ರಾಯಗಳು ಸ್ಫೋಟಗೊಂಡಂತೆ ಕಂಡರೂ ಅವು ಅಧಿಕಾರದ ಒಳಬೇಗುದಿಯಿಂದ ಹುಟ್ಟಿದ ಆಂತರಿಕ ಅಸಹನೆಗಳಾಗಿರುತ್ತವೆ; ಆದರೆ ‘ಅನೇಕ’ದ ಪ್ರತಿಪಾದಕರಲ್ಲಿ ಕೋಮುವಾದದ ಹುಟ್ಟು-ವಿಕಾಸದಿಂದ ಹಿಡಿದು ಹೋರಾಟದ ವಿಧಾನದವರೆಗೆ ಅನೇಕ ಅಭಿಪ್ರಾಯಗಳಿವೆ; ತಾತ್ವಿಕ ಗ್ರಹಿಕೆಯ ಭಿನ್ನಾಭಿಪ್ರಾಯಗಳಿವೆ.

ನಮ್ಮ ದೇಶದ ಎಡಪಂಥೀಯರ ಬಗ್ಗೆ ಬೇರೆ ಯಾವುದೇ ಟೀಕೆ-ಟಿಪ್ಪಣಿಗಳಿರಬಹುದು; ಅವರು ಕೋಮುವಾದದ ಕಟ್ಟಾ ವಿರೋಧಿಗಳೆಂಬ ವಿಷಯದಲ್ಲಿ ಎರಡನೇ ಮಾತಿಗೆ ಅವಕಾಶವಿಲ್ಲ. ಆದರೆ ಎಡಪಂಥೀಯ ಚಿಂತಕರಲ್ಲೂ ಕೋಮುವಾದದ ಉಗಮ-ವಿಕಾಸಗಳನ್ನು ಕುರಿತು ವಿದ್ವತ್ಪೂರ್ಣ ವ್ಯತ್ಯಾಸಗಳಿವೆ; ಇವು ವಿದ್ವತ್ ಪೂರ್ಣವಾಗಿಯೇ ಚರ್ಚಿತವಾಗಿವೆ. ದೇಶದ ಹಿರಿಯ ಚಿಂತಕರಲ್ಲೊಬ್ಬರಾದ ಡಾ. ಬಿಪಿನ್ ಚಂದ್ರ ಅವರು ಕೋಮುವಾದ ಮತ್ತು ರಾಷ್ಟ್ರೀಯ ವಾದದ ಸಂಬಂಧಾಂತರಗಳನ್ನು ವಿಶ್ಲೇಷಿಸಿದ್ದಾರೆ. ಅವರ ಅಭಿಪ್ರಾಯದಲ್ಲಿ ಆಳವಾದ ರಾಷ್ಟ್ರೀಯವಾದದ ಅಭಾವದಿಂದ ನಮ್ಮ ಕೋಮುವಾದೀ ಸಿದ್ಧಾಂತ ನೆಲೆಯೂರಿದೆ. ನಮ್ಮ ದೇಶದಲ್ಲಿ ರಾಷ್ಟ್ರೀಯವಾದವು ಪ್ರಬಲವಾಗಿದ್ದಾಗ ಕೋಮುವಾದವು ದುರ್ಬಲವಾಗಿತ್ತು ಮತ್ತು ರಾಷ್ಟ್ರೀಯವಾದವು ದುರ್ಬಲವಾಗಿದ್ದಾಗ ಕೋಮುವಾದವು ಪ್ರಬಲವಾಗಿತ್ತು ಎಂದು ಡಾ. ಬಿಪಿನ್ ಚಂದ್ರ ಅವರು ಪ್ರತಿಪಾದಿಸುತ್ತಾರೆ. ಕೋಮುವಾದವು ಒಂದು ‘ಹುಸಿ ಪ್ರಜ್ಞೆ (False Consciousness) ಎಂದು ಕರೆಯುವ ಅವರು ಕೋಮುವಾದವನ್ನು ಆಧುನಿಕ ವಿದ್ಯಮಾನವೆಂದು ಪರಿಗಣಿಸುತ್ತಾರೆ. (Communalism in Modern India by Bipin Chandra) ಆದರೆ ಹೆಸರಾಂತ ಇತಿಹಾಸತಜ್ಞೆ ಡಾ. ರೊಮಿಲಾಥಾಪರ್‌ ಅವರು ‘ಆಧುನಿಕ ಕೋಮುವಾದೀ ಸಿದ್ಧಾಂತವನ್ನು ಗಮನಿಸಿದರೆ ಅದು ಗತ ಚರಿತ್ರೆಯಿಂದ ಸಮರ್ಥನೆಗಳನ್ನು ಪಡೆದಿರುವುದು ಸ್ಪಷ್ಟವಾಗುತ್ತದೆ’ ಎಂದು ವಿಶ್ಲೇಷಿಸಿದ್ದಾರೆ. ಕೋಮುವಾದೀ ದೃಷ್ಟಿಕೋನವು ಕೇವಲ ಮಧ್ಯಕಾಲೀನ ಮತ್ತು ಆಧುನಿಕ ಭಾರತದ ಚರಿತ್ರೆಯ ಸಂದರ್ಭಕ್ಕೆ ಸೀಮಿತವಾಗಿಲ್ಲವೆಂದು ಪ್ರತಿಪಾದಿಸಿದ್ದಾರೆ. ಡಾ. ಬಿಪಿನ್ ಚಂದ್ರ ಅವರ ಪ್ರತಿಪಾದನೆಗಳನ್ನು ತುಂಬಾ ಕಟುವಾಗಿ ವಿರೋಧಿಸಿದವರು ಪ್ರೊ. ರಣಧೀರ್‌ಸಿಂಗ್ ಅವರು (Theorising Communalism by Randhir Singh) ಡಾ. ಬಿಪಿನ್ ಚಂದ್ರರ ವಿಚಾರಗಳನ್ನು ‘ತಾತ್ವಿಕ ಬೋಳೆತನ’ವೆಂದು ಹೀಗಳೆದು ಇವರು ರಾಷ್ಟ್ರೀಯವಾದವು ಸರ್ವೋತ್ಕೃಷ್ಟವೂ ಅಲ್ಲ; ಸಾರ್ವಕಾಲಿಕವೂ ಅಲ್ಲವೆಂದು ವಾದಿಸುತ್ತಾರೆ. ಕೋಮುವಾದವನ್ನು ರಾಷ್ಟ್ರೀಯವಾದದ ಹಿನ್ನೆಲೆಯಲ್ಲಿ ಅರ್ಥೈಸುವ ವಿಧಾನ ಇವರಿಗೆ ಸುತರಾಂ ಒಪ್ಪಿಗೆಯಿಲ್ಲ. ಇವರ ಪ್ರಕಾರ-ಕೋಮುವಾದವು ಊಳಿಗಮಾನ್ಯ, ವಸಾಹತುಶಾಹಿ ಮತ್ತು ಬಂಡವಾಳಶಾಹಿ ಬೆಳವಣಿಗೆಗಳ ರಾಜಕೀಯದ ಅವಿಭಾಜ್ಯ ಅಂಗ. ಇಂಡಿಯಾದ ಬೂರ್ಶ್ವಾ ಪ್ರಜಾಪ್ರಭುತ್ವವನ್ನು “The Painful Transition” ಎಂದು ಕರೆದ ಮತ್ತು ಬರೆದ ಅಚಿನ್ ವನಾಯಿಕ್ ಅವರ ಅಭಿಪ್ರಾಯದಲ್ಲಿ ಕೋಮುವಾದವು ವಸಾಹತುಶಾಹಿ ಆಳ್ವಿಕೆಯ ಸ್ವತಂತ್ರ ಸೃಷ್ಟಿಯಲ್ಲ; ಡಾ. ಬಿಪಿನ್ ಚಂದ್ರರು ಕರೆಯುವಂತೆ ‘ಹುಸಿಪ್ರಜ್ಞೆಯೂ’ ಅಲ್ಲ. ‘ಭಾರತೀಯ ಸಮಾಜದ ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶದಲ್ಲಿಯೇ ಕೋಮುವಾದದ ಬೇರುಗಳಿವೆ’ ಯೆಂಬುದು ಅಚಿನ್ ವೆನಾಯಿಕ್ ಅವರ ಸಿದ್ಧಾಂತ. ಒಟ್ಟು ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶದ ಆಂತರ್ಯದಲ್ಲಿ ಕೋಮುವಾದದ ಬೀಜರೂಪಗಳನ್ನು ಗುರುತಿಸುವ ವೆನಾಯಿಕ್ ಅವರ ವಿಶ್ಲೇಷಣೆಯು ನಮ್ಮ ದೇಶದ ಸಂದರ್ಭದಲ್ಲಿ ಮಹತ್ವಪೂರ್ಣವಾದುದು. ಯಾಕೆಂದರೆ, ‘ಕೋಮುವಾದ’ವೆಂಬ ಹೆಸರಿನಿಂದ ಕರೆಯದೇ ಇದ್ದರೂ ಅದರ ಲಕ್ಷಣಗಳನ್ನೊಳಗೊಂಡ ಸನ್ನಿವೇಶವನ್ನು ನಮ್ಮ ಸಾಮಾಜಿಕ-ಸಾಂಸ್ಕೃತಿಕ ಇತಿಹಾಸದಲ್ಲಿ ಗುರುತಿಸಬಹುದಾಗಿದೆ. ಕರ್ನಾಟಕದ ಸಂದರ್ಭಕ್ಕೆ ಬಂದರೆ ಜೈನರು ಮತ್ತು ವೀರಶೈವರ ನಡುವೆ, ವೈಷ್ಣವರು ಮತ್ತು ಜೈನರ ನಡುವೆ ಮತೀಯ ಮೂಲಭೂತವಾದೀ ಘರ್ಷಣೆಗಳು ನಡೆದದ್ದಕ್ಕೆ ಶಾಸನಾಧಾರಗಳಿವೆ. ೧೨ನೇ ಶತಮಾನದ ಒಂದು ಶಾಸನವು ವೀರಶೈವರ ದೇವಾಲಯಕ್ಕೆ ಜೈನರು ಚಪ್ಪಲಿ ಎಸೆದದ್ದನ್ನೂ ವೀರಶೈವರು ಜಿನಾಲಯವನ್ನು ಶಿವಾಲಯ ಮಾಡಿದ್ದನ್ನೂ ತಿಳಿಸುತ್ತದೆ. ೧೪ನೇ ಶತಮಾನದ ಬುಕ್ಕನ ಶಾಸನದಲ್ಲಿ ಜೈನ ಮತ್ತು ವೈಷ್ಣವರ ನಡುವಿನ ಘರ್ಷಣೆಗೆ ರಾಜನು ಪ್ರಾಯಶ್ಚಿತ್ತರೂಪದಲ್ಲಿ ಪರಸ್ಪರ ಸಾಮರಸ್ಯವನ್ನುಂಟುಮಾಡಿದ ವಿವರಗಳಿವೆ. ಜೈನರು ವೈಷ್ಣವ ದೇವಾಲಯಕ್ಕೆ ಸುಣ್ಣ ಬಣ್ಣ ಬಳಿಯುವುದು, ವೈಷ್ಣವರು ಜಿನಾಲಯದಲ್ಲಿ ಪಂಚವಾದ್ಯ ಬಾರಿಸುವುದು- ಸಾಮರಸ್ಯದ ಪ್ರಾಯಶ್ಚಿತ್ತ. ಘಜ್ನಿ ಮಹಮದನ ವಿಗ್ರಹ ಭಂಜಕತೆಯ ಬಗ್ಗೆ ಇತಿಹಾಸದ ಪಾಠಗಳು ಸಾಕಷ್ಟು ಹೇಳಿವೆ. ಈತನ ಹಿಂದೂಧರ್ಮಿಯ ವಿಗ್ರಹಗಳನ್ನು ಛಿದ್ರಗೊಳಿಸಿದನೆಂದೂ ಮತೀಯದ್ವೇಷವು ಇದಕ್ಕೆ ಕಾರಣವೆಂದೂ ಸಾಮಾನ್ಯವಾಗಿ ನಂಬಲಾಗಿದೆ. ರಾಜನೊಬ್ಬನ ಆಕ್ರಮಣಶೀಲತೆ ಮತ್ತು ಮತೀಯತೆ ಎರಡೂ ಕಾರಣವಿರಬಹುದು. ಆದರೆ ವಿಗ್ರಹಭಂಜಕತೆಯ ಬಗ್ಗೆ ಡಾ. ರೊಮಿಲಾ ಥಾಪರ್ ಅವರು ಉದಾಹರಿಸಿ ವಿಶ್ಲೇಷಿಸಿರುವ ಒಂದು ಪ್ರಸಂಗ ವಿಶೇಷವಾಗಿದೆ. ಇದು, ಕವಿ ಕಲ್ಹಣನ ‘ರಾಜ ತರಂಗಿಣಿ’ಯಲ್ಲಿ ನಿರೂಪಿತವಾದ ಪ್ರಸಂಗ. ೧೧ನೇ ಶತಮಾನದ ಕಾಶ್ಮೀರದ ದೊರೆ ಹರ್ಷನಿಗೆ ದೇವಾಲಯಗಳ ನಾಶವು ಒಂದು ವ್ಯವಸ್ಥಿತ ಚಟುವಟಿಕೆಯಾಗಿತ್ತು. ಈತ ದೇವಾಲಯ ನಾಶ ಮತ್ತು ವಿಗ್ರಹ ಭಂಜಕ ಕಾರ್ಯಗಳ ಉಸ್ತುವಾರಿಗಾಗಿ ‘ದೇವೋತ್ಪಾಟನ ನಾಯಕ’ ಎಂಬ ವಿಶೇಷಾಧಿಕಾರಿಯನ್ನು ನೇಮಿಸಿಕೊಂಡಿದ್ದ. ಹಿಂದೂರಾಜನೊಬ್ಬ ಹಿಂದೂ ವಿಗ್ರಹಗಳನ್ನು ಒಡೆದದ್ದು, ದೇವಾಲಯಗಳನ್ನು ಲೂಟಿ ಮಾಡಿದ್ದನ್ನು ಏನೆನ್ನಬೇಕು? ಇದು ಡಾ. ರೊಮಿಲಾ ಥಾಪರ್ ಅವರು ಎತ್ತುವ ಪ್ರಶ್ನೆ, ಈ ಮೂಲಕ ಮತೀಯತೆಯನ್ನು ಮೀರಿದ ರಾಜ್ಯಾಧಿಕಾರದ ವಿಧ್ವಂಸಕತೆಯ ಬಗ್ಗೆ ಅವರು ಗಮನ ಸೆಳೆಯುತ್ತಾರೆ. ಗೋಲ್ಕೊಂಡದ ಸುಲ್ತಾನನ ದಳಪತಿಯಾಗಿದ್ದ ಮುರಹರಿನಾಥ ಎಂಬ ಮರಾಠಿ ಬ್ರಾಹ್ಮಣ ೧೫೭೯ರಲ್ಲಿ ಅಹೋಬಲ ನರಸಿಂಹ ದೇವಾಲಯವನ್ನು ಕೊಳ್ಳೆಹೊಡೆದಿದ್ದ ವಿಷಯವನ್ನು ನೀಲಕಂಠಶಾಸ್ತ್ರಿಗಳು ತಮ್ಮ ‘ಪೂರ್ವೋಕ್ತ’ ಕೃತಿಯಲ್ಲಿ ತಿಳಿಸಿದ್ದಾರೆ. ಇಂತಹ ಅನೇಕ ಉದಾಹರಣೆಗಳಿವೆ.

ಅದೇನೇ ಇರಲಿ, ನಮ್ಮ ದೇಶದ ಇತಿಹಾಸದುದ್ದಕ್ಕೂ ಮತೀಯ ಮೂಲಭೂತವಾದ ಮತ್ತು ಅದನ್ನು ಮೀರಿದ, ವಿರೋಧಿಸಿದ ಪ್ರಗತಿಪರವಾದ- ಎರಡೂ ಪ್ರತ್ಯೇಕ ಪರಂಪರೆಗಳಾಗಿ ಬೆಳೆದುಬಂದಿವೆ. ವಿವಿಧ ಮತಧರ್ಮಗಳ ಸಂತ ಸಮೂಹ, ರಾಜಕೀಯ ನಾಯಕತ್ವ ಮತ್ತು ಸಾಹಿತ್ಯಾದಿ ಸಾಂಸ್ಕೃತಿಕ ಕ್ಷೇತ್ರಗಳು ಪ್ರತಿಪಾದಿಸಿದ ಸಾಮರಸ್ಯ ತತ್ವದ ಪರಂಪರೆ ಪ್ರಬಲವಾಗುತ್ತ ಬಂದದ್ದರಿಂದ ನಮ್ಮ ಬದುಕು ಇಷ್ಟಾದರೂ ಸಹ್ಯವಾಗಿದೆ. ನಮ್ಮ ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶದಲ್ಲೇ ಕೋಮುವಾದ ಅಥವಾ ಮತೀಯ ಮೂಲಭೂತವಾದದ ಬೇರುಗಳಿದ್ದವು ಎನ್ನುವುದನ್ನು ಒಪ್ಪುತ್ತ, ಅದೇ ಸಂದರ್ಭದಲ್ಲಿ ವಿಷಬೇರುಗಳಿಗೆ ವಿರುದ್ಧವಾಗಿ ಅಮೃತಪುಷ್ಪಗಳನ್ನು ಅರಳಿಸುವ ಪ್ರಯತ್ನಗಳು ಪ್ರಬಲವಾಗುತ್ತ ಬಂದ ಇತಿಹಾಸವನ್ನು ಗಮನಿಸಬೇಕಾಗುತ್ತದೆ. ಹೀಗಾಗಿ, ನಮ್ಮ ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶಗಳು ಏಕಧಾರೆಯ ಇತಿಹಾಸವಲ್ಲವೆಂಬುದು ಸ್ಪಷ್ಟ.

ಕೋಮುವಾದದ ಮೂಲ ಸ್ವಭಾವ-ಮತೀಯ ಅಸಹನೆ ಮತ್ತು ಅಸಮಾನತೆ; ಅನ್ಯಧರ್ಮ ವಿರೋಧ, ಸ್ವಧರ್ಮ ಶ್ರೇಷ್ಠತೆಯ ಅತಿರೇಕ, ಏಕಶಿಲಾ ಸಂಸ್ಕೃತಿಯ ಪ್ರತಿಪಾದನೆ ಮತ್ತು ಪ್ರತಿಷ್ಠಾಪನೆ – ಈ ಅಂಶಗಳನ್ನು ಅಂತರ್ಗತ ಮಾಡಿಕೊಂಡ ಕರಾಳತೆ; ಇದು ಕೋಮುವಾದದ ಸ್ವರೂಪ, ಮಾನವೀಯ ಮೌಲ್ಯಗಳನ್ನು ಮತೀಯ ಮೂಲಭೂತವಾದದ ಮೂಲಕ ಮಣ್ಣು ಮುಕ್ಕಿಸುವ ಕೋಮುವಾದವು ನಮ್ಮ ಇತಿಹಾಸದ ಒಂದು ಖಾಯಂ ಅಧ್ಯಾಯವಾಗಿ ಬೆಳೆಯುತ್ತ ಬಂದಿದೆ. ಆದ್ದರಿಂದ ಕೋಮುವಾದಿಗಳು ಹಿಂದೂಗಳಾಗಲಿ, ಮುಸ್ಲಿಮರಾಗಲಿ, ಯಾವುದೇ ಧರ್ಮದವರಾಗಲಿ, ಮೂಲ ಕಾರಣಗಳು ಏನೇ ಇರಲಿ ವಿರೋಧಕ್ಕೆ ಅರ್ಹರಾಗುತ್ತಾರೆ.

ನಮ್ಮ ದೇಶದ ಸಂದರ್ಭದಲ್ಲಿ ಹೆಚ್ಚು ಚರ್ಚಿತವಾಗುತ್ತಿರುವುದು, ಹೆಚ್ಚು ವಿರೋಧಕ್ಕೆ ಒಳಗಾಗುತ್ತಿರುವುದು ಹಿಂದೂ ಮೂಲದ ಕೋಮುವಾದ. ಅಲ್ಪಸಂಖ್ಯಾತರ ಕೋಮುವಾದವನ್ನು ಒಪ್ಪದೆ ಇರುವವರು ಸಹ ಅದಕ್ಕಿಂತ ಹೆಚ್ಚಾಗಿ ಬಹುಸಂಖ್ಯಾತ ಹಿಂದೂ ಕೋಮುವಾದವನ್ನು ಪ್ರಬಲವಾಗಿ ವಿರೋಧಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಹುಸಂಖ್ಯಾತ ಹಿಂದೂ ಕೋಮುವಾದವು ದೇಶದಾದ್ಯಂತ ಸಾಮರಸ್ಯಕ್ಕೆ ಧಕ್ಕೆ ತರುವ ಮೂಲಭೂತವಾದೀ ಚಟುವಟಿಕೆಗೆಳನ್ನು ವಿಸ್ತರಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವೆಂದು ಕಾಣುತ್ತದೆ. ಹಿಂದೂ ಕೋಮುವಾದವನ್ನು ಅಧಿಕಾರ ಹಿಡಿಯುವ ಹುನ್ನಾರವಾಗಿ ಬಳಸುತ್ತಿರುವುದೂ ಮತ್ತೊಂದು ಕಾರಣವಾಗಿದೆ. ಬಾಬರಿ ಮಸೀದಿಯ ಧ್ವಂಸವು ಹಿಂದೂ ಕೋಮುವಾದದ ಕರಾಳಕಳಶವಾಗಿದೆ. ಹೀಗಾಗಿ ಬಹುಸಂಖ್ಯಾತ ಹಿಂದೂ ಕೋಮುವಾದದ ವಿರುದ್ಧದ ಆಂದೋಲನಗಳು ಪ್ರಖರಗೊಳ್ಳುತ್ತಿವೆ. ಇದರರ್ಥ ಅಲ್ಪಸಂಖ್ಯಾತರ ಕೋಮವಾದವನ್ನು ಈ ಆಂದೋಲನಗಳು ಒಪ್ಪುತ್ತವೆ ಅಥವಾ ಸಮರ್ಥಿಸುತ್ತವೆ ಎಂದಲ್ಲ. ಹಾಗೆ ಸಮರ್ಥಿಸುವುದು ಸರಿಯೂ ಅಲ್ಲ. ಆದರೆ, ದೇಶವಿಭಜನೆಯ ಸಂದರ್ಭದ ಕರಾಳ ಅಧ್ಯಾಯಗಳು ಮರುಕಳಿಸುವಂತೆ ಮಾಡುವ ಬಹುಸಂಖ್ಯಾತರ ಕೋಮುವಾದಕ್ಕೆ ಎದುರಾಗುವ ವಿರೋಧ ಪ್ರಖರವಾಗಿರುವುದು ಮತ್ತು ಪ್ರಮುಖವಾಗಿರುವುದು, ಸಮಕಾಲೀನ ಸಂದರ್ಭದ ಸಹಜ ಅಧ್ಯಾಯವಾಗಿದೆ.

ವಿಚಿತ್ರವೆಂದರೆ-ಕೋಮುವಾದದ ವಿರೋಧಿಗಳಲ್ಲಿ ಒಂದೇ ರೀತಿಯ ಗ್ರಹಿಕೆಗಳಿಲ್ಲ. ಕೋಮುವಾದದ ಉಗಮ ಮತ್ತು ವಿಕಾಸವನ್ನು ಕುರಿತ ವಿಶ್ಲೇಕ್ಷಣಾತ್ಮಕ ಭಿನ್ನಾಭಿಪ್ರಾಯಗಳನ್ನು ಈ ಲೇಖನದ ಆರಂಭದಲ್ಲೇ ಪ್ರಸ್ತಾಪಿಸಲಾಗಿದೆ. ಈಗ ಪ್ರಸ್ತಾಪಿಸುತ್ತಿರುವುದು ಕೋಮುವಾದ ವಿರೋಧಿ ಹೋರಾಟದಲ್ಲಿರುವ ವಿಭಿನ್ನ ವಲಯಗಳನ್ನು ಕುರಿತು. ಕರ್ನಾಟಕದ ಆಧಾರದಲ್ಲಿ ಹೇಳುವುದಾದರೆ ಕೋಮುವಾದ ವಿರೋಧಿವಲಯವು ಪ್ರಧಾನವಾಗಿ ಮೂರು ಒಳವಲಯಗಳನ್ನು ಹೊಂದಿದೆ.

೧. ಜಾತಿ ಮತ ಧರ್ಮಗಳನ್ನು ಮೀರಿದ ಸೈದ್ಧಾಂತಿಕ ವಲಯ, ಕೋಮುವಾದವನ್ನು ವಿರೋಧಿಸುವ ಈ ವಲಯವು ಯಾವುದೇ ಸಂಕುಚಿತ ದೃಷ್ಟಿಕೋನವನ್ನು ಹೊಂದಿಲ್ಲ, ತಾತ್ಕಾಲಿಕ ತಿಳುವಳಿಕೆಗಳ ಬದಲು ತಾತ್ವಿಕ ತಿಳುವಳಿಕೆಯನ್ನು ಕೇಂದ್ರಪ್ರಜ್ಞೆಯಾಗಿ ಪಡೆದಿರುವ ಈ ವಲಯಕ್ಕೆ ಖಚಿತತೆಯಿದೆ; ಬಹುಸಂಖ್ಯಾತರ ಕೋಮುವಾದ ಮತ್ತು ಅಲ್ಪಸಂಖ್ಯಾತರ ಕೋಮುವಾದಗಳ ಉಗಮ, ವಿಕಾಸ ಮತ್ತು ಸಮಕಾಲೀನ ಸ್ವರೂಪದ ಬಗ್ಗೆ ಸ್ಪಷ್ಟತೆಯಿದೆ. ಅಲ್ಪಸಂಖ್ಯಾತರ ಕೋಮುವಾದಕ್ಕಿಂತ ಭಯಾನಕವಾಗಿ ಬಹುಸಂಖ್ಯಾತರ ಕೋಮುವಾದ ಬೆಳೆಯುತ್ತಿರುವುದನ್ನು ಗಮನಿಸಿ ಸೈದ್ಧಾಂತಿಕ ಮತ್ತು ಕ್ರಿಯಾತ್ಮಕವಾಗಿ ಕೋಮುವಾದವನ್ನು ಈ ವಲಯವು ವಿರೋಧಿಸುತ್ತಿದೆ. ಇಲ್ಲಿ ಬ್ರಾಹ್ಮಣ, ಶೂದ್ರ, ದಲಿತ-ಎಲ್ಲರೂ ಇದ್ದಾರೆ.

೨. ಬ್ರಾಹ್ಮಣರಾಗಿದ್ದೂ ಅಲ್ಪಸಂಖ್ಯಾತರ ಪರವೆಂದು ವಿಜೃಂಭಿಸಿಕೊಳ್ಳುವ ಒತ್ತಾಸೆಯ ಬ್ರಾಹ್ಮಣ ವಲಯ : ಈ ವಲಯಕ್ಕೆ ಸೈದ್ಧಾಂತಿಕ ತಿಳುವಳಿಕೆಯೇ ಇಲ್ಲವೆಂದು ಹೇಳಲಾಗದು. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ಪ್ರಕಟಗೊಳ್ಳುವ ಹಿಂದೂ ಕೋಮುವಾದದ ವಿರೋಧದಲ್ಲಿ ಇವರ ಸಾಮಾಜಿಕ ಮೂಲದ ತಳಮಳವೂ ಕೆಲಸ ಮಾಡುತ್ತಿರುವ ಸಾಧ್ಯತೆಯಿದೆ. ಅಲ್ಪಸಂಖ್ಯಾತರ ಪರವಾಗಿ, ಕೋಮುವಾದದ ವಿರುದ್ಧವಾಗಿ ಆದರ್ಶಪ್ರಾಯವಾಗಿಯೇ ಮಾತನಾಡುವ ಈ ‘ಬ್ರಾಹ್ಮಣವಲಯ’ವು ಜಾತಿಮೂಲ ವಾಸನೆಯನ್ನು ಪೂರ್ಣವಾಗಿ ಬಿಟ್ಟಿದೆಯೆಂದು ಹೇಳಲಾಗದು. ಮೆದುಳಲ್ಲಿ ಕೋಮುವಾದದ ವಿರೋಧ, ಮನಸಲ್ಲಿ ಜಾತಿವಾದದ ವಾಸನೆಗಳನ್ನು ಒಟ್ಟಿಗೆ ಇಟ್ಟುಕೊಂಡ ವೈರುಧ್ಯವನ್ನು ಈ ವಲಯದಲ್ಲಿ ಕಾಣಬಹುದು; ವಿಶೇಷವಾಗಿ, ಸಾಂಸ್ಕೃತಿಕ ಕ್ಷೇತ್ರದ ನಿರ್ಣಯಗಳಲ್ಲಿ ಇದು ಪ್ರಕಟಗೊಳ್ಳುತ್ತದೆ. ಇವರು ಯಾರ ಪುಸ್ತಕಗಳನ್ನು ಓದುತ್ತಾರೆ ಮತ್ತು ಮೆಚ್ಚುತ್ತಾರೆ, ಯಾರ ಸಿನಿಮಾಗಳನ್ನು ಇಷ್ಟಪಡುತ್ತಾರೆ ಮತ್ತೆ ವೈಭವೀಕರಿಸುತ್ತಾರೆ, ಯಾರ ಸಂಗೀತಕ್ಕೆ ತಲೆದೂಗುತ್ತಾರೆ ಮತ್ತೆ ಹಾಡಿ ಹೊಗಳುತ್ತಾರೆ- ಇತ್ಯಾದಿ ಅಂಶಗಳನ್ನು ಅನುಭವಿಸಿದವರು ಚನ್ನಾಗಿ ಅನಾವರಣಗೊಳಿಸಬಲ್ಲರು. ಜಾತಿಮೂಲ ಅನುಭವ ಮತ್ತು ಅಭಿರುಚಿಗಳನ್ನು ‘ಶ್ರೇಷ್ಠತೆ’ಯ ಮಸ್ಲಿನ್ ಮುಸುಕಿನಲ್ಲಿ ಮರೆಮಾಚಲು ಸಾಧ್ಯವಿರುವುದರಿಂದ ಜಾತಿಯ ಪ್ರಕಟಿತ ರೂಪದಲ್ಲಿ ಕಾಣಿಸುವುದಿಲ್ಲ. ಒಟ್ಟಿನಲ್ಲಿ ಕೋಮುವಾದದ ವಿರೋಧಿಗಳಾದವರೆಲ್ಲ ಜಾತಿವಾದದ ವಿರೋಧಿಗಳಾಗಿರುತ್ತಾರೆಂದು ಹೇಳಲಾಗದು ಅಥವಾ ಕೋಮುವಾದವನ್ನು ವಿರೋಧಿಸುವವರಲ್ಲಿ ಅನೇಕರು ಅಷ್ಟೇ ಪ್ರಬಲವಾಗಿ ಜಾತಿವಾದವನ್ನು ವಿರೋಧಿಸುತ್ತಿಲ್ಲ.

೩. ಕೋಮುವಾದವನ್ನು ಕೇವಲ ವೈದಿಕವಾದವೆಂದು ಭಾವಿಸಿ ವಿರೋಧಿಸುವ ಶೂದ್ರವಲಯ : ಸಂಘ ಪರಿವಾರದ ಆಯಕಟ್ಟಿನ ಅಧಿಕಾರಸ್ಥಾನಗಳಲ್ಲಿ ಬ್ರಾಹ್ಮಣರೇ ಹೆಚ್ಚಾಗಿದ್ದಾರೆಂಬ ಕಾರಣದಿಂದ ಹಿಂದೂ ಕೋಮುವಾದವನ್ನು ವಿರೋಧಿಸುವ ಶೂದ್ರವಲಯವೊಂದು ಜಾಗೃತವಾಗಿದೆ. ಈ ವಲಯಕ್ಕೆ ಕೋಮುವಾದವೆಂದರೆ ವೈದಿಕವಾದ ಎಂಬ ತಿಳುವಳಿಕೆಯೇ ಆಧಾರವಾಗಿದೆ. ಸಂಘ ಪರಿವಾರದಲ್ಲಿ ಶೂದ್ರರಿದ್ದರೂ ಅವರಿಗೆ ಉನ್ನತ ಸ್ಥಾನಮಾನಗಳಿಲ್ಲವೆಂದೂ, ಶೂದ್ರರನ್ನು ಕೋಮುವಾದಕ್ಕಾಗಿ ವೈದಿಕರು ಬಳಸಿಕೊಳ್ಳುತ್ತಿದ್ದಾರೆಂದೂ ಈ ವಲಯದ ಒಂದು ಸಾಮಾನ್ಯ ಗ್ರಹಿಕೆಯಾಗಿದೆ. ಅಮಾಯಕ ಶೂದ್ರರನ್ನೋ, ಮುಗ್ಧ ದಲಿತರನ್ನೋ, ವೈದಿಕರು ಬಳಸಿಕೊಳ್ಳುತ್ತಿದ್ದಾರೆಂದರೆ ಒಪ್ಪಬಹುದು. ಆದರೆ ವಿದ್ಯಾವಂತರೂ ಬುದ್ದಿವಂತರೂ ಆದ ಶೂದ್ರರು ಮತ್ತು ದಲಿತರು ಅಮಾಯಕರಂತೆ ವೈದಿಕರ ಹುನ್ನಾರಗಳಿಗೆ ಬಲಿಯಾಗುತ್ತಾರೆಂದು ಹೇಳಲಾಗದು. ಶೂದ್ರರಲ್ಲಿ ಪ್ರಸಿದ್ದರಾದ ಕೆಲವು ಸಾಂಸ್ಕೃತಿಕ ವ್ಯಕ್ತಿಗಳು ಸಹ ಅಲ್ಪಸಂಖ್ಯಾತರ ಬಗ್ಗೆ ಅಸಹನೆಯಿಂದ ಮಾತಾಡುವುದಲ್ಲದೆ, ಹಿಂದೂ ಮೂಲಭೂತವಾದಿಗಳಂತೆ ವರ್ತಿಸುವುದನ್ನು ನಾನು ಕಂಡಿದ್ದೇನೆ. ಇಂಥವರು, ವೈದಿಕರ ಸಾಮಾಜಿಕ-ಸಾಂಸ್ಕೃತಿಕ ಸವಲತ್ತು ತಮಗೆ ಸಿಗುವುದಾದರೆ ಸಂಘ ಪರಿವಾರವೇ ಸೈ ಎನ್ನಬಹುದು. ಇನ್ನೊಂದು ಮುಖ್ಯ ಅಂಶವೆಂದರೆ ವೈದಿಕವಾದವೇ ಕೋಮುವಾದವೆಂದು ಭಾವಿಸಿ ವಿರೋಧ ವ್ಯಕ್ತಪಡಿಸುವ ಶೂದ್ರವಲಯದವರಲ್ಲೂ ಜಾತಿವಾದಿಗಳಿದ್ದಾರೆ. ತಂತಮ್ಮ ಜಾತಿಗಳ ವಿಷಯ ಬಂದಾಗ ಕೋಮುವಾದ ವಿರೋಧಿ ಮಠಾಧೀಶರು ಹೇಗೆ ನಡೆದುಕೊಳ್ಳುತ್ತಾರೆಂಬುದನ್ನು ನೋಡಿದರೆ ಸಾಕು, ನನ್ನ ಮಾತಿಗೆ ಅದು ತಕ್ಕೆ ಸಮರ್ಥನೆಯಾಗುತ್ತದೆ. ಕೋಮುವಾದವನ್ನು ವಿರೋಧಿಸುವ ಶೂದ್ರ ಮಠಾಧೀಶರಲ್ಲಿ ಅನೇಕರು ತಂತಮ್ಮ ಜಾತಿವಲಯವನ್ನು ಮೀರಿಲ್ಲ. ಮೀರಿದರೂ ಅದು ತಮ್ಮ ಮಠದ ವಿಸ್ತರಣೆಯಾಗಿರುತ್ತದೆ; ಅಷ್ಟೆ. ಇದು ಬೌದ್ಧಿಕ ವಲಯಕ್ಕೂ ಅನ್ವಯಿಸುವ ಮಾತಾಗಿದೆ. ಕೋಮುವಾದ ವಿರೋಧಿ ಮಠಾಧೀಶರಲ್ಲಿ ವೈದಿಕ ವಿರೋಧಿ ವೀರಶೈವರೇ ಹೆಚ್ಚಾಗಿದ್ದಾರೆಂಬ ಅಂಶವೂ ಇಲ್ಲಿ ಗಮನಾರ್ಹ; ವಿರೋಧದ ಮಿತಿ ಸೂರ್ಯ ಸ್ಪಷ್ಟ.

ಕೋಮುವಾದ ವಿರೋಧಿ ವಲಯದಲ್ಲಿರುವ ಈ ಮೂರು ಒಳವಲಯಗಳು ನಮ್ಮ ಸಂದರ್ಭದ ವೈರುಧ್ಯಗಳನ್ನು ಹೇಳುತ್ತವೆ. ಕೋಮುವಾದೀ ಪಕ್ಷವೆಂದು ಕರೆಯಲ್ಪಡುತ್ತಿರುವ ಬಿ.ಜೆ.ಪಿ.ಯಲ್ಲಿ Hardliners ಜೊತೆಗೆ ಕೆಲವು Moderateಗಳು ಇದ್ದಾರೆಂದು ಸಮಾಧಾನ ಪಡುವ ಜಾತ್ಯಾತೀತವಾದಿಗಳೂ ನಮ್ಮಲ್ಲಿದ್ದಾರೆ. ಈ ಎಲ್ಲ ಅಂಶಗಳಿಂದ ಸ್ಪಷ್ಟವಾಗುವುದು ಇಷ್ಟು: ಕೋಮುವಾದದ ಸಮಸ್ಯೆ ಸರಳವಲ್ಲ; ಸಂಕೀರ್ಣವಾದುದು.

ಕೋಮುವಾದವು ಉಚ್ಪ್ರಾಯಸ್ಥಿತಿಯನ್ನು ತಲುಪುವುದಕ್ಕೆ ಮುಂಚೆ, ಅದರ ವಿರೋಧಿ ವಲಯದಲ್ಲಿದ್ದ ಆದ್ಯತೆಗಳನ್ನು ಗಮನಿಸಿ; ಕೋಮುವಾದವನ್ನು ವಿರೋಧಿಸುವ ಪ್ರಗತಿಪರರಿಗೆ ಸಾಮಾಜಿಕ-ಆರ್ಥಿಕ ಸಮಾನತೆ ಮುಖ್ಯವಾಗಿತ್ತು; ಜಾತಿ ಮತ್ತು ವರ್ಗಮೂಲ ಶೋಷಣೆಯನ್ನು ವಿರೋಧಿಸುವುದು ಅದ್ಯತೆಯಾಗಿತ್ತು. ಧರ್ಮ ಮತ್ತು ದೇವರುಗಳು ಮುಂಚೂಣಿಯ ವಿಷಯಗಳಾಗಿರಲಿಲ್ಲ, ವಿಚಾರವಾದಿಗಳೆನ್ನಿಸಿಕೊಂಡವರು ನಾಸ್ತಿಕವಾದವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ಎಡಪಂಥೀಯರಿಗೆ ನಾಸ್ತಿಕವಾದದ ಪ್ರತಿಪಾದನೆ ಪ್ರಧಾನ ವಿಷಯವಲ್ಲದಿದ್ದರೂ ನಾಸ್ತಿಕತೆಯನ್ನು ನಂಬಿದ್ದರು. ಪ್ರಗತಿಪರರೆಲ್ಲರೂ ಸಾಮಾನ್ಯವಾಗಿ ಮಠಮಾನ್ಯಗಳ ವಿರೋಧಿಗಳಾಗಿದ್ದರು; ಧರ್ಮ ಮತ್ತು ದೈವಕೇಂದ್ರಿತ ಸಾಹಿತ್ಯ-ಸಂಸ್ಕೃತಿ ವಿನ್ಯಾಸಗಳ ನಿರಾಕರಣೆ ಅಥವಾ ಅವಗಣನೆ ಮಾಡುತ್ತಿದ್ದರು. ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಸಮಾನತೆಯ ಆಶಯಗಳು, ಆದ್ಯತೆಯನ್ನು ಪಡೆದಿದ್ದವು.

ಆದರೆ, ಕೋಮುವಾದವು ಉಚ್ಪ್ರಾಯ ಸ್ಥಿತಿಯನ್ನು ತಲುಪಿದ ಮೇಲೆ ಈ ಚಿತ್ರ ಬದಲಾಯಿತು. ಆದ್ಯತೆಗಳು ಏರುಪೇರಾದವು. ಆದ್ಯತೆಗಳ ಪಲ್ಲಟವು ಕೋಮುವಾದದ ಒಂದು ಕ್ರಿಯಾಲಕ್ಷಣವಾಗಿದೆ. ಅದರಂತೆ, ಪ್ರಗತಿಪರರು ತಮ್ಮ ಎಂದಿನ ಆದ್ಯತೆಗಳನ್ನು ಬದಲಾಯಿಸಿ ಕೊಳ್ಳಬೇಕಾಯಿತು. ಸಾಮಾಜಿಕ-ಆರ್ಥಿಕ ಸಮಾನತೆಯ ಆಶಯವು ಅಸ್ತಿತ್ವದಲ್ಲಿದ್ದರೂ ಹಿನ್ನಡೆಯನ್ನೂ ಅನುಭವಿಸಿತು. ಕೋಮುವಾದದ ವಿರೋಧವೇ ಪ್ರಧಾನವಾಗಿ ಅದಕ್ಕನುಗುಣವಾದ ಕಾರ್ಯತಂತ್ರಗಳು ರೂಪುಗೊಂಡವು. ಧರ್ಮ ಮತ್ತು ದೇವರ ವಿಷಯಗಳ ಮಾತು ಮುಂಚೂಣಿಗೆ ಬಂದಿತು. ಸಾಮಾನ್ಯವಾಗಿ ನಾಸ್ತಿಕತೆಯನ್ನು ನಂಬಿದ್ದ ಎಡಪಂಥೀಯರು ಮತ್ತು ವಿಚಾರವಾದಿಗಳಿಗೆ ಈಗ ಅದು ಮುಖ್ಯವಾಗಿಲ್ಲ. ಆಸ್ತಿಕತೆ ಮತ್ತು ನಾಸ್ತಿಕತೆಯ ಅಂತರವು ತಾನಾಗಿ ಕಡಿಮೆಯಾಗಿ ಅವರವರ ನಂಬಿಕೆ ಅವರವರಿಗೆ ಎಂಬ ಮಾತು ಮುನ್ನೆಲೆಗೆ ಬಂದಿದೆ. ಮಠಾಧೀಶರ ಹತ್ತಿರ ಸುಳಿಯದಿದ್ದವರು ಕೋಮುವಾದದ ವಿರೋಧಕ್ಕಾಗಿ ‘ಪ್ರಗತಿಪರ’ ಮಠಾಧೀಶರನ್ನು ಆದರದಿಂದ ಆಹ್ವಾನಿಸುತ್ತಿದ್ದಾರೆ. ಈ ಮಠಾಧೀಶರಲ್ಲಿ ಅನೇಕರ ‘ಪ್ರಗತಿಪರತೆ’ಯು ವೈದಿಕ ವಿರೋಧಕ್ಕೆ ಮಾತ್ರ ಮೀಸಲಾಗಿದ್ದು ಒಳಗಿನ ಜಾತಿವಾಸನೆಯನ್ನು ಗೌಣವಾಗಿ ಕಾಣಲಾಗುತ್ತಿದೆ; ಹಿಂದೆ ಇದ್ದ ಕಾಂಗ್ರೆಸ್ ವಿರೋಧಿ ರಾಜಕಾರಣವು ಬಿ.ಜೆ.ಪಿ. ವಿರೋಧಿಯಾಗಿ ಸ್ಥಿತ್ಯಂತರಗೊಳ್ಳುತ್ತಿದೆ. ಅಧಿಕಾರ ಗ್ರಹಣದ ದ್ರುವೀಕರಣಕ್ಕಾಗಿ ಕೋಮುವಾದವನ್ನು ಕೇಂದ್ರಸ್ಥಾನಕ್ಕೆ ತರಲಾಗಿದೆ. ಹೀಗಾಗಿ ಪಕ್ಷ ರಾಜಕೀಯದ ಪ್ರಭಾವವನ್ನು ಕೋಮುವಾದ ವಿರೋಧಿ ಹೋರಾಟದಲ್ಲಿ ಕಾಣಬಹುದಾಗಿದೆ.

ಭಾರತೀಯ ಜನತಾಪಕ್ಷವು (ಬಿ.ಜೆ.ಪಿ) ‘ಕೋಮುವಾದಿ’ ಪಕ್ಷವೆಂದು ಹೆಸರಾಗಿದೆ. ಆದರೂ ಬಿ.ಜೆ.ಪಿ.ಯು ಅಧಿಕಾರಗ್ರಹಣಕ್ಕಾಗಿ ಕೆಲವೊಮ್ಮೆ ರಾಜಿಯ ಮುಖವನ್ನು ಮುಂದೆ ಮಾಡುತ್ತದೆ. ಆಂತರ್ಯದಲ್ಲಿ ಮೂಲವಾಸನೆಯನ್ನು ಉಳಿಸಿಕೊಂಡಿರುತ್ತದೆ. ಕೆಲವು ಸಂದರ್ಭಗಳಲ್ಲಿ ವಿಶ್ವಹಿಂದೂ ಪರಿಷತ್ತು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳಂತೆ ವರ್ತಿಸಲು ಹಿಂಜರಿಯುತ್ತದೆ; ಅನಂತರ ಬೇರೊಂದು ರೂಪದಲ್ಲಿ ಹಿಂದೂ ಮೂಲಭೂತವಾದಿಗಳನ್ನು ಸಮಾಧಾನಿಸುತ್ತದೆ. ಇತರೆ ಪಕ್ಷಗಳ ಸಹಕಾರವಿಲ್ಲದೆ ಅಧಿಕಾರವನ್ನು ಗಳಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಅಸಾಧ್ಯವಾದ ಸನ್ನಿವೇಶವನ್ನು ಅರ್ಥಮಾಡಿಕೊಂಡ ಬಿ.ಜೆ.ಪಿ. ಯು ‘ತಂತಿ ನಡಿಗೆಯ ತತ್ವವನ್ನು ಪರಿಪಾಲಿಸುತ್ತ ಬಂದಿದೆ. ಹಾಗೆಂದು ಬಿ.ಜೆ.ಪಿ.ಯೊಂದರಲ್ಲೇ ಕೋಮುವಾದಿಗಳೆಲ್ಲ ಕೇಂದ್ರೀಕೃತವಾಗಿದ್ದಾರೆಂದೂ ಇತರೆ ಪಕ್ಷಗಳಿಗೆ ಕೋಮುವಾದದ ಸೋಂಕು ಇಲ್ಲವೇ ಇಲ್ಲವೆಂದು ಹೇಳಲಾಗದು. ಬಿ.ಜೆ.ಪಿ.ಯೇತರ ಮಧ್ಯಪಂಥೀಯ ಪಕ್ಷಗಳಲ್ಲೂ ಕೋಮುವಾದಿ ಮನಸ್ಸಿನ ಕೆಲವರಿದ್ದಾರೆ. ಪಕ್ಷವಾಗಿ ಕೋಮುವಾದದ ವಿರೋಧಿಯಾಗಿದ್ದು, ವ್ಯಕ್ತಿಯಾಗಿ ಕೋಮುವಾದದ ವಾಸನೆಯನ್ನು ಹುದುಗಿಟ್ಟುಕೊಂಡ ಅನೇಕರಿದ್ದಾರೆ. ಅಷ್ಟೇ ಅಲ್ಲ ಈಗ ಕೋಮುವಾದವು ಪಕ್ಷ ರಾಜಕೀಯದಾಚೆಗಿನ ಸಮುದಾಯವನ್ನೂ ಆವರಿಸಿಕೊಳ್ಳ ತೊಡಗಿದೆ. ಬಿ.ಜೆ.ಪಿ ಅಥವಾ ಯಾವುದೇ ಪಕ್ಷಕ್ಕೆ ಸೇರದೇ ಇರುವ ಜನಸಮೂಹವನ್ನು ಕೋಮುವಾದವು ಒಳಗೊಳ್ಳುತ್ತಿದೆ. ಮುಸ್ಲಿಂ ಸಮುದಾಯಕ್ಕೂ ಇದು ಅನ್ವಯಿಸುತ್ತದೆ. ಕೋಮು ವಾದವನ್ನು ವಿರೋಧಿಸುವ ಮುಸ್ಲಿಮರಿದ್ದಂತೆ, ಮುಸ್ಲಿಂ ಮೂಲಭೂತವಾದಕ್ಕೆ ಮೊರೆಹೋದವರೂ ಇದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುಸಂಖ್ಯಾತ ಹಿಂದೂ ಕೋಮುವಾದೀ ವಲಯವು ಪಕ್ಷ ರಾಜಕೀಯವನ್ನು ಮೀರಿದ ಮನೋಧರ್ಮವಾಗಿ ವ್ಯಾಪಕಗೊಳ್ಳುತ್ತಿರುವುದು ಹೆಚ್ಚು ಆತಂಕಕಾರಿಯಾಗಿದೆ.

೧೯೯೨ರ ಡಿಸೆಂಬರ್ ೬ ರಂದು ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಸಂದರ್ಭವನ್ನು ಕಣ್ಣಾರೆ ಕಂಡ ಆಶೀಶ್ ನಂದಿಯವರ ನೇತೃತ್ವದ ತಂಡವು ಸಿದ್ಧಪಡಿಸಿ ಪ್ರಕಟಿಸಿದ ವರದಿಯ ಈ ಭಾಗವನ್ನು ಗಮನಿಸಿ: “ಸುಮಾರು ೨ ಲಕ್ಷದಷ್ಟು ಜನ ಸೇರಿದ್ದ ಆ ಸಮಾವೇಶದಲ್ಲಿ ಎಲ್ಲರೂ ಸಂಘ ಪರಿವಾರದ ಸದಸ್ಯರಾಗಿರಲಿಲ್ಲ. ಅದರ ಸಿದ್ದಾಂತದ ಬಗ್ಗೆ ಏನೇನೂ ತಿಳಿಯದೆಯೂ ಮಸೀದಿ, ಹಿಂದೂಗಳ ಸ್ವಾಭಿಮಾನಕ್ಕೆ ಸವಾಲು ಎಂದು ಭಾವಿಸಿದ ಸೀದಾಸಾದಾ ಜನಗಳು ಸಾಕಷ್ಟಿದ್ದರು…. ಜಟಾಧಾರಿ ಸನ್ಯಾಸಿಗಳ ಜೊತೆಗೆ ಜೀನ್ಸ್ ತೊಟ್ಟ ಯುವಕರಿದ್ದರು. ಅವರಲ್ಲಿ ಹಲವರು ನಿರುದ್ಯೋಗಿಗಳು, ಕೆಲವರು ಹಾದಿ ತಪ್ಪಿದ ಆದರ್ಶವಾದಿಗಳು. ಇನ್ನು ಕೆಲವರು ಜಗತ್ತನ್ನೇ ಕೇಸರೀಕರಣಗೊಳಿಸಲು ಸಿದ್ದರಾದ ಉನ್ಮತ್ತರು…” (‘ಕೋಮುವಾದದ ಕರಾಳ ಮುಖಗಳು’ – ಪುಸ್ತಕದಿಂದ ಉದ್ಧೃತ).

ಅಯೋಧ್ಯೆ ರಾಮಮಂದಿರ ನಿರ್ಮಾಣದ ವಿಷಯವೂ ಪಕ್ಷ ರಾಜಕೀಯವನ್ನು ಮೀರಿದ ಉನ್ಮತ್ತ ಸ್ಥಿತಿಯನ್ನು ನಿರ್ಮಾಣ ಮಾಡಿರುವುದಕ್ಕೆ ಈ ವರದಿಯಲ್ಲಿ ಮತ್ತಷ್ಟು ಆಧಾರಗಳಿವೆ. ನಮ್ಮ ಕಣ್ಣೆದುರಿನ ಜೀವಂತ ಸಾಕ್ಷಿಗಳೇ ಸಾಕಷ್ಟಿರುವಾಗ ಅಕ್ಷರಸ್ಥ ದಾಖಲೆಯನ್ನೇ ಅವಲಂಬಿಸುವ ಅನಿವಾರ್ಯತೆಯೂ ಇಲ್ಲ. ಆದರೆ, ಆಶೀಶ್ ನಂದಿಯವರ ಪ್ರತ್ಯಕ್ಷದರ್ಶಿ ವರದಿಯು ನಮ್ಮ ಪ್ರತ್ಯಕ್ಷ ದರ್ಶನವನ್ನು ಸಮರ್ಥಿಸುವ ಪ್ರಮುಖ ಪುರಾವೆಯಾಗಿರುವುದು ವಿಷಯ ಪ್ರತಿಪಾದನೆಗೆ ಪುಷ್ಟಿಕೊಡುತ್ತದೆ.

ಕೋಮುವಾದ ಈಗ ಒಂದು ಮನೋನ್ಮಾದ. ಕೋಮುವಾದಿ ಪಕ್ಷ, ಪರಿವಾರಗಳನ್ನು ಒಳಗೊಂಡು ಅದರಾಚೆಗೂ ವ್ಯಾಪಿಸಿದ ಈ ಪಕ್ಷಾತೀತ ಮನೋನ್ಮಾದವು ಮನೋಧರ್ಮವಾಗಿ ಮತ್ತು ಮನೋಮೌಲ್ಯವಾಗಿ ನೆಲೆಯೂರುತ್ತಿದೆ. ಇಂಥದೊಂದು ಪ್ರಕ್ರಿಯೆ ನಡೆದಿರುವಾಗಲೇ ಪಕ್ಷ ರಾಜಕೀಯದಲ್ಲಿ ಕೆಲವು ವೈಪರೀತ್ಯಗಳು ಸಂಭವಿಸುತ್ತಿವೆ. ‘ಮನುವಾದಿ’ಗಳನ್ನು ಉದ್ದಕ್ಕೂ ಹೀಗಳೆಯುತ್ತ ಬೆಳೆದ ಬಹುಜನ ಸಮಾಜ ಪಕ್ಷದ (ಬಿ.ಎಸ್.ಪಿ) ನೇತಾರರಾದ ಮಾಯಾವತಿ ೯-೬-೨೦೦೫ ರಂದು ಬ್ರಾಹ್ಮಣ ಘಟಕದ ಸಮಾವೇಶವನ್ನು ನಡೆಸಿದ್ದಾರೆ. ಇದೇ ದಿನಗಳಲ್ಲಿ ಬಿ.ಜೆ.ಪಿ ಯ ನೇತಾರರಾದ ಅದ್ವಾನಿಯವರು ತಮ್ಮ ಪಾಕಿಸ್ತಾನ ಪ್ರವಾಸದಲ್ಲಿ ಮಹಮದಾಲಿ ಜಿನ್ನಾ ಅವರ ‘ಜಾತ್ಯತೀತ’ ನಿಲುವನ್ನು ಹೊಗಳಿದ ಕಾರಣಕ್ಕೆ ಸಂಘಪರಿವಾರದ ಪ್ರಖರ ವಿರೋಧಕ್ಕೆ ತುತ್ತಾಗಿದ್ದಾರೆ. ಬ್ರಾಹ್ಮಣರ ಪರ ಎಂದೂ ಮಾತಾಡದವರು ಬ್ರಾಹ್ಮಣ ಸಮಾವೇಶ ಮಾಡುವುದು, ಜಾತ್ಯತೀತ ಶಕ್ತಿಗಳನ್ನು ಸೋಗಿನವರೆಂದು ಜರೆಯುತ್ತಿದ್ದವರು ಜಾತ್ಯತೀತ ನೀತಿಯ ಬಗ್ಗೆ ಉತ್ಸಾಹಿತರಾಗಿ ಹೇಳಿಕೆ ನೀಡುವುದು ಅಧಿಕಾರ ಕೇಂದ್ರಿತ ಪಕ್ಷ ರಾಜಕೀಯ ವಿಪರ್ಯಾಸವೊ ವಾಸ್ತವವೊ ಅಥವಾ ಎರಡೂ ಸೇರಿದ ವ್ಯಂಗ್ಯವೋ ಎಂಬ ಬಗ್ಗೆ ಹೆಚ್ಚಿನ ವಿವರಣೆ ಬೇಕಾಗಿಲ್ಲ. ಕೋಮುವಾದದ ವಿಷಯವು ಸಂಕೀರ್ಣವಾಗಿರುವುದಕ್ಕೆ ಇದೂ ಒಂದು ಉದಾಹರಣೆಯಾಗಿದೆ.

ಕೋಮುವಾದ ವಿರೋಧಿ ಹೋರಾಟದಲ್ಲಿ ಸಾಂಸ್ಕೃತಿಕ ಸಂಘಟನೆಗಳು ತೊಡಗಿದ್ದರೂ ಪಕ್ಷ ರಾಜಕೀಯದ ಪ್ರಭಾವ ಪ್ರಧಾನವಾಗಿ ಕಾಣಿಸುತ್ತಿದೆ. ಈ ಹೋರಾಟದಲ್ಲಿ ಕ್ರಿಯಾಶೀಲವಾಗಿರುವ ಅನೇಕ ಸಂಘಟನೆಗಳು ಒಂದಲ್ಲ ಒಂದು ರಾಜಕೀಯ ಪಕ್ಷದ ಅಂಗ ಸಂಸ್ಥೆಗಳಾಗಿರುವುದು ಅಥವಾ ನಿಕಟ ಸಂಬಂಧ ಹೊಂದಿರುವುದು ಇದಕ್ಕೆ ಕಾರಣವಾಗಿದೆ. ಹೀಗಾಗಿ, ಎಷ್ಟೇ ಸಾಂಸ್ಕೃತಿಕ ಸಂಗತಿಗಳನ್ನು ಪ್ರಸ್ತಾಪ ಮಾಡಿದರೂ ಪಕ್ಷ ರಾಜಕೀಯದ ಕಾರ್ಯಸೂಚಿಯು ಹೋರಾಟದ ಒಂದು ಮುಖ್ಯಾಂಗವಾಗಿದೆ. ಇದರ ಫಲವಾಗಿ ಕೋಮುವಾದ ವಿರೋಧಿ ಹೋರಾಟವು ಬಿ.ಜೆ.ಪಿ. ಮತ್ತು ಸಂಘ ಪರಿವಾರವನ್ನು ಮಾತ್ರ ಗುರಿಯಾಗಿಟ್ಟುಕೊಂಡಿದೆ. ಆದರೆ ಮೊದಲೇ ಪ್ರಸ್ತಾಪಿಸಿದಂತೆ ಕೋಮುವಾದವು ಬಿ.ಜೆ.ಪಿ. ಮತ್ತು ಸಂಘ ಪರಿವಾರವನ್ನು ದಾಟಿ ಜನಸಮುದಾಯದ ಮನೋನ್ಮಾದವಾಗಿಬಿಟ್ಟಿದೆ. ಆದ್ದರಿಂದ ಕೋಮುವಾದ ವಿರೋಧಿ ಹೋರಾಟವು ಬಿ.ಜೆ.ಪಿ. ಮತ್ತು ಸಂಘಪರಿವಾರವನ್ನು ಗುರಿಯಾಗಿಟ್ಟುಕೊಳ್ಳುವುದು ಮತ್ತು ‘ವಿರೋಧ’ವೊಂದೇ ಕಾರ್ಯ ನೀತಿಯಾಗುವುದು ಸಾಲದು. ಜನರ ಮನಸ್ಸಿನಲ್ಲಿ ಬೇರೂರುತ್ತಿರುವ ಕೋಮುವಾದವನ್ನು ಕಿತ್ತೆಸೆಯಲು ಬೇರೆಯದೇ ಮಾರ್ಗೊಪಾಯಗಳನ್ನು ಯೋಜಿಸಬೇಕಾಗುತ್ತದೆ. ಜನಸಮುದಾಯದ ಪ್ರಶ್ನೆ ಬಂದಾಗ ‘ವಿರೋಧಿ ರಾಜಕೀಯ’ವು ಅನುಪಯುಕ್ತವೆಂಬುದನ್ನು ಮನಗಂಡು, ಸಾಂಸ್ಕೃತಿಕ ಕ್ರಿಯೆಯ ಮೂಲಕ ಮನವರಿಕೆಯ ಕಾರ್ಯಾಚರಣೆಗೆ ಮುಂದಾಗಬೇಕಾಗುತ್ತದೆ. ಯಾವುದೇ ರಾಜಕೀಯ ಪಕ್ಷಕ್ಕೆ ಬದ್ಧವಾಗದ ತಟಸ್ಥ ಸಮುದಾಯದ ಮನಸ್ಸನ್ನು ಧರ್ಮ, ದೈವ, ದೇಶ, ಸಂಸ್ಕೃತಿ ಮುಂತಾದ ಕಲ್ಪನೆಗಳ ಮೂಲಕ ಕೋಮುವಾದವು ಪ್ರವೇಶಿಸಿರುವುದರಿಂದ, ಇದಕ್ಕೆ ಸಾಂಸ್ಕೃತಿಕ ಉತ್ತರಗಳನ್ನೇ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಕೋಮುವಾದ ವಿರೋಧಿ ಹೋರಾಟವು ಪಕ್ಷ ರಾಜಕೀಯದ ಮಿತಿಯಿಂದ ಸೊರಗುತ್ತದೆ. ಅಚಿನ್ ವೆನಾಯಿಕ್ ಅವರು ಹೇಳಿದಂತೆ ಕೋಮುವಾದದ ಬೇರುಗಳು ನಮ್ಮ ಸಾಮಾಜಿಕ ಸಾಂಸ್ಕೃತಿಕ ಸನ್ನಿವೇಶದಲ್ಲಿ ಇರುವುದರಿಂದ, ನಮ್ಮ ಹೋರಾಟದ ಉತ್ತರಗಳು ಸಾಮಾಜಿಕ-ಸಾಂಸ್ಕೃತಿಕ ನೆಲೆಯಿಂದಲೇ ಹೊರಡಬೇಕು.

ಸಾಂಸ್ಕೃತಿಕ ಉತ್ತರಗಳನ್ನು ಕೊಡುವ ವಿಧಾನ ಹೇಗೆ – ಎಂಬ ಪ್ರಶ್ನೆಯನ್ನು ಶೋಧಿಸಿಕೊಳ್ಳುವುದು ಅಗತ್ಯ. ನಮ್ಮ ಸಾಮಾಜಿಕ – ಸಾಂಸ್ಕೃತಿಕ ಪರಂಪರೆಯ ಮಾನವೀಯ ಮುಖಗಳನ್ನು ತಾತ್ವಿಕ ನಿಲುವುಗಳ ಮೂಲಕ ವಿವರಿಸುತ್ತ ಕೋಮುವಾದಕ್ಕೆ ಎದುರಾಗಿ ನಿಲ್ಲಿಸುವುದು ಒಂದು ವಿಧಾನ. ಜೈನ ಧರ್ಮಾನುಯಾಯಿಯಾಗಿದ್ದೂ ಜೈನ ಧರ್ಮವನ್ನು ಮೀರಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ತಾತ್ವಿಕತೆಗೆ ತಲುಪಿದ ಪಂಪ ಮಹಾಕವಿ, ವೈದಿಕನಾಗಿದ್ದೂ ಅದನ್ನು ಮೀರಿದ ಧರ್ಮಜಿಜ್ಞಾಸೆ ಮತ್ತು ರಾಜಕೀಯ ತಲ್ಲಣಗಳನ್ನು ಚಿತ್ರಿಸಿದ ಕುಮಾರವ್ಯಾಸ, ಧಾರ್ಮಿಕಪಲ್ಲಟಕ್ಕೆ ಕಾರಣವಾದ ವಚನ ಚಳವಳಿ, ಭಕ್ತಿ ಪಾರಮ್ಯದ ದಾಸಸಾಹಿತ್ಯ, ಸರ್ವಜ್ಞ, ವೈಚಾರಿಕ ಸಾಮರಸ್ಯ ಸಂವೇದನೆಯ ಶಿಶುನಾಳ ಶರೀಫ, ಸೂಫಿಸಂತರು – ಹೀಗೆ ಹತ್ತು ಹಲವು ಉದಾಹರಣೆಗಳ ಮೂಲಕ ಸಾಂಸ್ಕೃತಿಕ ಉತ್ತರಗಳನ್ನು ಕೊಡಬಹುದಾಗಿದೆ.

ಹೀಗೆಂದ ಕೂಡಲೆ ನಮ್ಮ ಪರಂಪರೆಯ ಪ್ರಗತಿಪರ ಪರಿಕಲ್ಪನೆಗಳನ್ನೆಲ್ಲ ಪೂಜನೀಯವಾಗಿಸಿ ಪ್ರತಿಪಾದಿಸಬೇಕಾಗಿಲ್ಲ. ಹೀಗೆ ಮಾಡಿದರೆ ಕೋಮುವಾದಿಗಳ ಹಾದಿಯಲ್ಲೇ ಅದರ ವಿರೋಧಿಗಳೂ ಸಾಗಿದಂತಾಗುತ್ತದೆ. ಅಂದಿಗೆ ಪ್ರಸ್ತುತವೆನ್ನಿಸಿದ ಕೆಲವು ಪ್ರಗತಿಪರ ಕಲ್ಪನೆಗಳು ಇಂದಿಗೆ ಅಪ್ರಸ್ತುತವೆನ್ನಿಸಬಹುದು. ಆದ್ದರಿಂದ ಅಂದಿಗೆ ಪ್ರಸ್ತುತವಾದ ಚಾರಿತ್ರಿಕ ಮಹತ್ವವನ್ನು ಗುರುತಿಸಿ, ಗೌರವಿಸಿ, ಇಂದಿಗೆ ಪ್ರಸ್ತುತವಾಗುವ, ಸಮಕಾಲೀನವಾಗುವ ಅಂಶಗಳನ್ನು ಮಾತ್ರ ಸ್ವೀಕರಿಸಿ ಪ್ರತಿಪಾದಿಸುವ ಪ್ರಜ್ಞಾವಂತಿಕೆ ನಮ್ಮದಾಗಬೇಕು. ಸ್ಪಷ್ಟನೆಗಾಗಿ ಹೇಳುವುದಾದರೆ ವಚನ ಚಳವಳಿಯ ಏಕದೇವೋಪಾಸನೆಯ ತತ್ವ ಇಂದಿಗೆ ಹೊಂದುವುದಿಲ್ಲ. ಏಕಧರ್ಮ, ಏಕಸಂಸ್ಕೃತಿಯ ಪ್ರತಿಪಾದನೆಯ ಕೋಮುವಾದವನ್ನು ವಿರೋಧಿಸುವವರು ಏಕದೇವೋಪಾಸನೆಯ ತತ್ವವನ್ನು ಆದರ್ಶವಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಯಾವುದೇ ‘ಏಕ ನಿಷ್ಠೆ’ಗಳು ಮುಂದೊಂದು ದಿನ ಧಾರ್ಮಿಕ ಉಗ್ರಗಾಮಿತನಕ್ಕೆ, ಒತ್ತಾಸೆಯಾಗುತ್ತವೆ. ಭಜರಂಗದಳದಂತೆ ಬಸವದಳಗಳೂ ಹುಟ್ಟುತ್ತವೆ. ಈ ಎಚ್ಚರ ನಮಗಿರಲೇಬೇಕು. ಅದೇ ಸಂದರ್ಭದಲ್ಲಿ, ವೈದಿಕ ಧರ್ಮವು ದೂರವಿಟ್ಟ ಹಿಂದುಳಿದ ಹಾಗೂ ಅಸ್ಪೃಶ್ಯ ಜನಾಂಗಗಳನ್ನು ಪರ್ಯಾಯ ಧರ್ಮದ ನೆಲೆಗೆ ತರುವ ಒಂದು ಧಾರ್ಮಿಕ ಸಾಧನವಾಗಿ ಏಕದೇವೋಪಾಸನೆಯ ತತ್ವದ ಚಾರಿತ್ರಿಕ ಮಹತ್ವವನ್ನು ಗಮನಿಸಬೇಕು. ಇಂದಿಗೂ ಪ್ರಸ್ತುತವಾದ ಪರಿಕಲ್ಪನೆಗಳನ್ನು ಮಾತ್ರ ವಚನ ಚಳವಳಿಯಿಂದ ಸ್ವೀಕರಿಸಬೇಕು; ಪ್ರಬಲವಾಗಿ ಪ್ರತಿಪಾದಿಸಬೇಕು. ಈಗ ‘ದೇಹವೇ ದೇವಾಲಯ’ವೆಂಬ ಪರಿಕಲ್ಪನೆಯನ್ನು ನೋಡಿ, ಇದು ಒಂದು ವೈಚಾರಿಕ ವಿಪ್ಲವ. ವಚನ ಚಳವಳಿಯ ಅದ್ಭುತ ಕೊಡುಗೆ. ದೇವಾಲಯವನ್ನು ನಿರಾಕರಿಸಿ, ದೈವ ಮತ್ತು ದೇಗುಲಗಳನ್ನು ದೇಹಕ್ಕೆ ಸ್ಥಳಾಂತರಿಸುವ ಈ ತತ್ವ ಅನನ್ಯವಾದುದು. ಇಂದು ದೇವಾಲಯ ನಿರ್ಮಾಣಕ್ಕಾಗಿ ಬಾಬರಿ ಮಸೀದಿ ಕೆಡವಿದ ಕೋಮುವಾದಿಗಳಿಗೆ ‘ದೇಹವೇ ದೇವಾಲಯ’ವೆಂಬ ಪರಿಕಲ್ಪನೆ ತಕ್ಕ ಉತ್ತರವನ್ನು ನೀಡಬಲ್ಲದು. ಭಕ್ತಿಯ ಕಲ್ಪನೆಯೂ ಅಷ್ಟೆ. ‘ಭಕ್ತಿಯೆಂಬುದು ತೋರುಂಬ ಲಾಭ’ವೆಂದು ಹೇಳಿದ ಅಲ್ಲಮಪ್ರಭುವಿನ ಅರಿವಿನ ನೆಲೆಯೊಂದಿಗೆ, ಭಕ್ತಿ ಬಹಿರಾಡಂಬರವಾಗದೆ ಅಂತರಂಗದ ಅನುಬಂಧವೆನ್ನುವ ‘ಶರಣಸತಿ ಲಿಂಗಪತಿ’ಯ ಕಲ್ಪನೆಯೂ ವಿಶಿಷ್ಟವಾದುದು. ಈ ಅಂಶಗಳನ್ನು ಕೋಮುವಾದಕ್ಕೆ ಎದುರಾಗಿಸುವುದರ ಜೊತೆಗೆ, ಜೈನ ಮತ್ತು ವೀರಶೈವರ ಘರ್ಷಣೆ, ವೈಷ್ಣವ ಮತ್ತು ಜೈನರ ಜಗಳಗಳ ಚರಿತ್ರೆಯಿಂದ ಪಾಠ ಕಲಿಯಬೇಕೆಂಬುದನ್ನೂ ಪ್ರತಿಪಾದಿಸಬೇಕು.

ಮುಸ್ಲಿಮ್ ಮೂಲರಾದ ಸೂಫಿಸಂತರು ಸಾಮರಸ್ಯದ ಸಾಕ್ಷಿ ಪ್ರಜ್ಞೆಯಾಗಿದ್ದಾರೆ; ಕೋಮುವಾದದ ವೈಪರೀತ್ಯಗಳಿಗೆ ತಂತಾನೆ ಎದುರಾಗುತ್ತಾರೆ. ಇಲ್ಲಿ ಪರ್ಷಿಯನ್ ಕವಿ ಮೌಲಾನಾ ರೂಮಿಯ ಪ್ರಸಿದ್ದ ಅನುಭವ ವಾಣಿಯನ್ನು ಉದಾಹರಿಸಬಹುದು. ಈ ಕವಿ ವಾಣಿ ಹೀಗಿದೆ: “ನಾನು ಜೆರುಸಲೇಮಿಗೆ ಹೋದೆ, ಅಲ್ಲಿ ದೇವರಿರಲಿಲ್ಲ; ಮೆಕ್ಕಾಗೆ ಹೋದೆ, ಅಲ್ಲಿ ದೇವರಿರಲಿಲ್ಲ; ಬನಾರಸ್ಸಿಗೆ ಹೋದೆ, ಅಲ್ಲಿಯೂ ದೇವರಿರಲಿಲ್ಲ; ಕಡೆಗೆ ನನ್ನ ಎದೆಯ ಬಾಗಿಲುಗಳನ್ನು ತೆಗೆದೆ; ದೇವರು ಒಳಗೇ ಇದ್ದ” – ಮಂದಿರ, ಮಸೀದಿಗಳಲ್ಲಿ ಮಾತ್ರವೇ ದೇವರನ್ನು ಕಾಣಬೇಕೆಂದು ಹೇಳುತ್ತ ವಿಧ್ವಂಸಕರಾಗುವ ಮತಾಂಧ ಮನಸ್ಸುಗಳಿಗೆ ರೂಮಿಯ ನುಡಿಗಳಲ್ಲಿರುವ ಸೂಕ್ಷ್ಮವೇ ಒಂದು ಸಾಂಸ್ಕೃತಿಕ ಉತ್ತರವಾಗಬಲ್ಲದು.

ಅಯೋಧ್ಯೆಯ ಬಾಬರಿ ಮಸೀದಿಯಲ್ಲೇ ಶ್ರೀರಾಮನ ಜನ್ಮವನ್ನು ಕಾಣುವವರು ಆಂಜನೇಯನ ಭಕ್ತರೂ ಆಗಿದ್ದಾರೆ. ನಮ್ಮ ಪುರಾಣಕಾವ್ಯ-ಕತೆಗಳಲ್ಲಿ ಶ್ರೀರಾಮನನ್ನು ಆಂಜನೇಯ ತೋರಿಸಿದ್ದು ಹೇಗೆ ? ತನ್ನ ಎದೆ ಬಗೆದು ತೋರಿಸಿದ. ಹಾಗಾದರೆ ಈ ಕೋಮುವಾದಿಗಳೇ ನಂಬುವ ಪೂಜಿಸುವ ಆಂಜನೇಯನ ‘ಶ್ರೀರಾಮದರ್ಶನ’ ಮಹತ್ವದ್ದೊ ಬಾಬರಿ ಮಸೀದಿಯಲ್ಲಿ ಶ್ರೀರಾಮನ ಜನ್ಮ ಹುಡುಕುವುದು ಮಹತ್ವದ್ದೋ? ಇದು ಕೋಮುವಾದಿಗಳಿಗೆ ಎದುರಾಗಬೇಕಾದ ಮುಖ್ಯ ಪ್ರಶ್ನೆ. ವಾಲ್ಮೀಕಿಯ ಶ್ರೀರಾಮನನ್ನು ಹೈಜಾಕ್ ಮಾಡಿ ಹೈರಾಣ ಮಾಡುತ್ತಿರುವ ಮತಾಂಧಶಕ್ತಿಗಳಿಗೆ ಕನಕದಾಸರ ‘ರಾಮಧಾನ್ಯ ಚರಿತೆ’ಯಲ್ಲಿ ಬಡವರ ಪರವಾಗಿ ನಿಲ್ಲುವ ಶ್ರೀರಾಮ ಉತ್ತಮ ಉತ್ತರವಾಗಬಲ್ಲ. ಶ್ರೀ ಕೃಷ್ಣನ ಜನ್ಮಸ್ಥಾನದಲ್ಲೂ ವಿವಾದವೆಬ್ಬಿಸುವವರಿಗೆ ತಾನು ಎಲ್ಲರಂತೆ ಮನುಷ್ಯನೇ ಎಂದು ಒತ್ತಾಯಪೂರ್ವಕವಾಗಿ ಹೇಳುವ ಮತ್ತು ಮನುಷ್ಯನೆಲೆಯಲ್ಲೇ ಕ್ರಿಯಾಶೀಲನಾಗುವ ಕುಮಾರವ್ಯಾಸಕವಿಯ ಶ್ರೀ ಕೃಷ್ಣ ಸಾಂಸ್ಕೃತಿಕ ಎದುರಾಳಿಯಾಗಬಲ್ಲ. ಹೀಗೆ ಉದಾಹರಿಸುತ್ತ ಹೋಗಬಹುದು.

ಕೋಮುವಾದ ವಿರೋಧಿ ವಲಯವು ಸಾಂಸ್ಕೃತಿಕವಾಗಿ ಮಾಡಬೇಕಾದ ಒಂದು ಮುಖ್ಯ ರಚನಾತ್ಮಕ ಕೆಲಸವೆಂದರೆ- ಪುರಾಣಗಳ ಪುನರ್ ವ್ಯಾಖ್ಯಾನ. ಎಲ್ಲ ಧರ್ಮಗಳಲ್ಲೂ ಮೂಲಭೂತವಾದಿಗಳು ಪುರಾಣಗಳ ಗುತ್ತಿಗೆದಾರರಾಗುತ್ತಾರೆ. ತಮ್ಮ ಸಂಕುಚಿತ ಹಿತಾಸಕ್ತಿಗೆ ಬಳಸಿಕೊಳ್ಳುತ್ತಾರೆ. ಪುರಾಣಗಳು, ಬದುಕಿನ ಪ್ರತೀಕಗಳು ಎನ್ನುವುದನ್ನು ನಿರ್ಲಕ್ಷಿಸಿ ಅಥವಾ ಅಲ್ಲಗಳೆದು ಚರಿತ್ರೆಯೆಂಬಂತೆ ವಿಜೃಂಭಿಸುತ್ತಾರೆ; ಪುರಾಣವನ್ನು ಚರಿತ್ರೆಯನ್ನಾಗಿಸುತ್ತಾರೆ; ಚರಿತ್ರೆಯನ್ನು ಪುರಾಣವಾಗಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪುರಾಣ ಮತ್ತು ಚರಿತ್ರೆಗಳ ಸರಿಯಾದ ನಿರ್ವಚನ ಮತ್ತು ಮರು ವ್ಯಾಖ್ಯಾನಗಳ ಮಹತ್ವವನ್ನು ಪ್ರಗತಿಪರರು ಅರ್ಥಮಾಡಿಕೊಳ್ಳಬೇಕು; ಪುರಾಣಗಳನ್ನು ಬದುಕಿನ ಪ್ರತೀಕಗಳಾಗಿ ನೋಡುವ ವಿವೇಕವನ್ನು ವಿಸ್ತರಿಸಬೇಕು. ಚರಿತ್ರೆಯ ವಾಸ್ತವಗಳನ್ನು ವಿಶ್ಲೇಷಿಸಬೇಕು. ಪುರಾಣದಲ್ಲಿ ಚರಿತ್ರೆಯ ಅಂಶಗಳು ಇರಬಹುದು. ಆದರೆ ಪುರಾಣ ಪಾತ್ರಗಳೆಲ್ಲ ಚಾರಿತ್ರಿಕ ವ್ಯಕ್ತಿಗಳಲ್ಲ; ಪುರಾಣವು ಪೂರ್ಣ ಚರಿತ್ರೆಯಲ್ಲ, ಚರಿತ್ರೆಯಲ್ಲಿ ಪುರಾಣದ ಪ್ರಭಾವ ಇರಬಹುದು. ಆದರೆ ಚಾರಿತ್ರಿಕ ವ್ಯಕ್ತಿಗಳೆಲ್ಲ ಪುರಾಣಪುರುಷರಲ್ಲ. ಪುರಾಣದಲ್ಲಿರುವುದು ಸಾಮಾಜಿಕ-ಸಾಂಸ್ಕೃತಿಕ ಚರಿತ್ರೆಯ ಹೆಜ್ಜೆ ಗುರುತುಗಳೇ ಹೊರತು ಚರಿತ್ರೆಯ ವಿವರಗಳಲ್ಲ. ಪುರಾಣಗಳು ಕೇವಲ ಧರ್ಮಗ್ರಂಥಗಳಲ್ಲ. ಜೀವನೇತಿಹಾಸದ ರೂಪಕಗಳು. ಇಂತಹ ತಿಳುವಳಿಕೆಯಿಂದ ಪುರಾಣಗಳ ಪುನರ್ ವ್ಯಾಖ್ಯಾನ ಮಾಡುತ್ತ ಅವುಗಳು ಕೋಮುವಾದಿಗಳ ಖಡ್ಗವಾಗುವುದನ್ನು ತಪ್ಪಿಸುವ ಸಾಂಸ್ಕೃತಿಕ ಕೆಲಸ ನಡೆಯಬೇಕಾಗಿದೆ. ಇದು ಪುರಾಣಗಳನ್ನು ಪೂಜಾಸ್ಥಾನದಿಂದ ಪ್ರಜ್ಞೆಯ ಪಾತಳಿಗೆ ತರುವ ಪ್ರಕ್ರಿಯೆ. ಚರಿತ್ರೆಯ ವಿಷಯದಲ್ಲೂ ನಮ್ಮ ವಿವೇಕ ಜಾಗೃತವಾಗಬೇಕು; ಚರಿತ್ರೆಯ ವೈಭವೀಕರಣದ ಜಾಗದಲ್ಲಿ ಚರಿತ್ರೆಯ ವಾಸ್ತವ ನೆಲೆಯೂರಬೇಕು.

ಒಟ್ಟಿನಲ್ಲಿ, ಕೋಮುವಾದ ವಿರೋಧಿ ಹೋರಾಟವು ಮುಖ್ಯವಾಗಿ ಸಾಂಸ್ಕೃತಿಕ ಹುಡುಕಾಟದ ವೇದಿಕೆಯಾಗಬೇಕು.
*****
(‘ಅಗ್ನಿ’ ಪತ್ರಿಕೆ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೊಡ್ಡವರಾಗಿಹೆವು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೭

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…