ದೊಡ್ಡವರಾಗಿಹೆವು ನಾವು ದೊಡ್ಡವರಾಗಿಹೆವು
ಅಷ್ಟನು ದೋಚಿ ಇಷ್ಟನು ಹಂಚಿ
ದೊಡ್ಡವರಾಗಿಹೆವು ನಾವು ದೊಡ್ಡವರಾಗಿಹೆವು
ನೋಟನು ಕೊಟ್ಟಿಹೆವು ಜನರ ಓಟನು ಕೊಂಡಿಹೆವು
ದೋಚಲು ಎಲ್ಲವ ಐದು ವರ್ಷಕೆ
ಕಾಂಟ್ರ್ಯಾಕ್ಟ್ ಪಡೆದಿಹೆವು ನಾವು ಕಾಂಟ್ರ್ಯಾಕ್ಟ್ ಪಡೆದಿಹೆವು
ಟೋಪಿಯ ಹಾಕಿದ್ದೆವು ಹಿಂದೊಮ್ಮೆ ಟೋಪಿಯ ಹಾಕಿದ್ದೆವು
ಅದನ್ನು ಈಗ ಜನಕ್ಕೆ ಹಾಕಿ
ನಿರಾಳರಾಗಿಹೆವು ಜೊತೆಗೆ ಜೈಕಾರ ಪಡೆದಿಹೆವು
ಗದ್ದುಗೆ ಏರಿಹೆವು ನಾವು ಗದ್ದುಗೆ ಏರಿಹೆವು
ಹಿಂದಿನ ಕತೆ ಇನ್ನೇತಕೆ ಎನ್ನುತ
ಸ್ವರ್ಗವ ಕಂಡಿಹೆವು ಜನಕೆ ನರಕವ ಬಿಟ್ಟಿಹೆವು
ಧರ್ಮವ ಮಾಡುವೆವು ನಾವು ಕರ್ಮವ ಹೇಳುವೆವು
ಹಸಿದಿಹ ಜನರ ತಲೆ ನೇವರಿಸುತ
ದೇಗುಲ ತೋರುವೆವು ನಾವು ಸೇಫ್‌ಗಾರ್ಡಾಗುವೆವು
ಕುರ್ಚಿಯ ಕಾಯುವೆವು ಅದಕೇನಾದರೂ ಮಾಡುವೆವು
ಮೂರೂ ಬಿಟ್ಟವ ಊರಿಗೆ ದೊಡ್ಡವ
ಮಾತೇನೇ ಇರಲಿ ನಮಗೆ ಕುರ್ಚಿ ಖಾಯಮ್ಮಿರಲಿ
ತಲೆ ಇದ್ದರೆ ಖಚಿತ ಅದಕೆ ತಲೆನೋವೆನ್ನುವುದು
ಅದಕ್ಕೆ ತಲೆಗಿಲೆ ಬೇಡವೆ ಬೇಡ
ಟೋಪಿಯಷ್ಟೆ ಸಾಕು ನಮಗೆ ತೋರಲು ಮತ್ತು ಹಾಕಲು
*****