ಆಫೀಸಿನಿಂದ ಮರಳಿ ಬಂದು ಸುಸ್ತಾಗಿ ರೂಮಿನಲ್ಲಿ ಮಂಚದ ಮೇಲೆ ಕುಳಿತು ಬೂಟುಗಳನ್ನು ಕಳಚಿ ಎದೆಯನ್ನು ಸೀಲಿಂಗ್ ಫ್ಯಾನಿಗೊಡ್ಡಿ ಸುಧಾರಿಸಿಕೊಳ್ಳುತ್ತಿದ್ದೆ. ನನ್ನಾಕೆ ಸೀತ ಕಾಫಿ ತಿಂಡಿಯೊಂದಿಗೆ ರೂಮಿಗೆ ಬಂದು ಸ್ಟೂಲಿನ ಮೇಲಿಟ್ಟು ಅಲ್ಲೇ ಇದ್ದ ಗೂಡಿನಿಂದ ಪಾರ್ಸಲ್ ಒಂದನ್ನು ತಂದು ನನ್ನ ಪಕ್ಕಕ್ಕಿಟ್ಟು, “ಮಧ್ಯಾನ್‌ದ ಪೋಸ್ಟ್‌ನಲ್ ಬಂತು” ಎಂದಳು. ನನಗದನ್ನು ಬಿಚ್ಚಿ ನೋಡುವ ಉತ್ಸಾಹವಿಲ್ಲದಷ್ಟು ಸುಸ್ತು. ಪಾರ್ಸಲ್ ಕವರ್ ಮೇಲೆ ವಿದೇಶಿ ಸ್ಟಾಂಪುಗಳಿದ್ದುದು ಕಂಡು ಕುತೂಹಲವಾಯ್ತು. “ಏನದು?” ಎಂದು ಕೇಳಿದೆ ಕಾಫಿ ಕುಡಿಯುತ್ತಾ. “ನಿಮಗಿನ್ನೇನು ಬರುತ್ತೆ ಪುಸ್ತಕ ಬಿಟ್ಟು” ಎಂದು ಖಾಲಿಯಾದ ತಟ್ಟೆ ಲೋಟಗಳನ್ನು ತೆಗೆದುಕೊಂಡು ರೂಮಿನಿಂದ ಹೊರಹೋದಳು.
ನಾನು ಕವರಿನಿಂದ ಪುಸ್ತಕವನ್ನು ತೆಗೆದೆ. ‘Vestiges of Anglicised India’ ಆ ಪುಸ್ತಕದ ಹೆಸರು. ಕಸಿವಿಸಿಯಾಯ್ತು. ಲೇಖಕರಾರೆಂದು ನೊಡಿದೆ, ಕ್ಯಾತರಿನ್ ಪಾಲ್-ಡಿ.ಲಿಟ್.ಸೋಸಿಯಾಲಜಿ ಎಂದಿತ್ತು. ಹೆಸರು ನೋಡಿದಾಗ ಆದ ಭಾವನೆ ನೆನಪಾಗುತ್ತಿಲ್ಲ. ಪುಸ್ತಕವನ್ನು ಬಿಡಿಸಿದೆ. ಮೂರನೆ ಪುಟದಲ್ಲಿ “ಸಂಸ್ಕೃತಿ ಸ್ತುತ್ಯಾರ್ಹರಾದ ಗುಲಾಮರಿಗೆ- ಅರ್ಪಣೆ” ಎಂದಿತ್ತು. ಅದರ ಮುಂದಿನ ಪುಟದಲ್ಲಿ ಲೇಖಕಿ ಪುಸ್ತಕವನ್ನು ಬರೆಯುವ ಮುನ್ನ ಆಕೆ ಇತರರೊಂದಿಗೆ ನಡೆಸಿದ ಚರ್ಚೆಗಳು, ತನ್ನ ಪುಸ್ತಕದ ವಿಷಯ ಹಾಗು ಕ್ರಮರಹಿತವಾದ ಮಾಹಿತಿಗಳನ್ನು ಸ್ಪಷ್ಟಗೊಳಿಸಲು ಹೇಗೆಲ್ಲಾ ಸಹಕಾರಿಯಾಗಿದ್ದವು ಎಂದು ಆಕೆಯೊಂದಿಗೆ ಚರ್ಚಿಸಿದವರುಗಳ ಪಟ್ಟಿಯನ್ನು ಕೊಟ್ಟು ಕೃತಜ್ಞತೆಗಳನ್ನು ಸೂಚಿಸಿದ್ದಳು. ಅದರಲ್ಲಿ ನನ್ನ ಹೆಸರೂ ಕಂಡುಬಂತು! ಆರು ಪೌಂಡ್ ಬೆಲೆಯ ಆ ಪುಸ್ತಕದ ಹಿಂದಿನ ರಕ್ಷಾಪುಟದಲ್ಲಿ ಲೇಖಕಿ ಮುದ್ದಿನ ಬೆಕ್ಕಿನೊಂದಿಗೆ ಹಿಡಿಸಿಕೊಂಡಿದ್ದ ಭಾವ ಚಿತ್ರದೊಂದಿಗೆ ಆಕೆಯ ಬಗೆಗೆ ಸಂಕ್ಷಿಪ್ತ ವಿವರ…
ಆ ಪುಸ್ತಕದೊಂದಿಗೆ ಇದ್ದ ಇಂಗ್ಲಿಷ್‌ನಲ್ಲಿ ಟೈಪ್ ಮಾಡಿದ್ದ ಐದಾರು ಸಾಲಿನ ಪತ್ರದ ಮೇಲೆ ಕಣ್ಣಾಡಿಸಿದೆ:
ಚಂದ್ರು,
ಅಳುಕು, ಸಂಬಂಧಗಳನ್ನು ಮುರಿಯಲು, ವ್ಯಕ್ತಿಗಳು ಮೌನವಾಗಿ ಸಂಬಂಧಗಳಿಂದ ವಿಮುಖರಾಗಲು ಕಾರಣವಾಗುತ್ತೆ. ಎರಡು ವರ್ಷಗಳಿಂದ ನನ್ನ ಪತ್ರಗಳಿಗೆ ನೀನು ನಿರುತ್ತರನಾಗಿ ಮೌನಿಯಾಗಿರುವುದು ಈ ಹಿನ್ನೆಲೆಯಲ್ಲಿ ಶೋಧನಾರ್ಹ. ಪುಸ್ತಕದ ಬಗೆಗೆ ನಿನ್ನ ವಿಮರ್ಶೆಯ ನಿರೀಕ್ಷೆಯೊಂದಿಗೆ….
ಅಳುಕಿನ,
ಕ್ಯಾತರಿನ್ ಪಾಲ್‌ಕ್ವೀನ್ಸ್ ಕಾಲೇಜ್ – ಕೇಂಬ್ರಿಡ್ಜ್
ವಿ.ಸೂ: ಈ ಪುಸ್ತಕದ ಪ್ರಕಟಣೆಗೆ ಮಂದಣ್ಣನ ಹಣವೇ ಬಳಸಿರುವುದು.
ಪತ್ರವನ್ನು ಓದಿ ಮುಗಿಸುತ್ತಿದ್ದಂತೆ ಸೀತ ರೂಮಿಗೆ ಬಂದಳು. “ಯಾರದ್ರೀ ಕಾಗ್ದ?” ಎಂದು ಕೇಳಿದಾಗ ಏನೂ ಹೇಳಲಿಕ್ಕೆ ತೋಚದೆ ಸ್ನೇಹಿತರದು ಎಂದಷ್ಟೆ ಹೇಳಿ ಬಚ್ಚಲಿಗೆ ಹೋಗಿ ಮುಖ ತೊಳೆದು ಉಡುಪು ಬದಲಿಸಿ ಮನೆಯಿಂದಾಚೆ ಬಂದೆ.
ಯಾವುದೇ ವಿಧದಲ್ಲು ನನಗೆ ನೇರ ಸಂಬಂಧವಿರದ ಘಟನೆಗಳ ಅಸ್ಪಷ್ಟ ನೆನೆಪುಗಳ ತಾಕಲಾಟಕ್ಕೆ ಅಂತರ್ಮುಖಿಯಾಗುತ್ತಿದ್ದಂತೆ ಈ ಬಾರಿಯ ಅವಳ ಕಾಗದದಲ್ಲಿ ನನ್ನ ಮೇಲೆ ಅವಳು ಅಳುಕಿನ ಆರೋಪ ಹೊರಿಸಿರುವುದರ ಬಗೆಗೆ ಯವುದೇ ತೀರ್ಮಾನಕ್ಕೆ ಬರದಾದೆ.
ಇದೆಲ್ಲ ನಡೆದುದು ಸುಮಾರು ವರ್ಷಗಳ ಹಿಂದೆ ಕೊಡಗಿನಲ್ಲಿ. ಅಂದರೆ ಆಗ ಹಾರಂಗಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದ ಸಮಯ. ಬೆಂಗಳೂರಿನ ನಾನು ಸಂಪ್ರದಾಯಬದ್ಧ ಕಟುಶಿಸ್ತಿನ ವಾತಾವರಣಕ್ಕೆ ಹೇಸಿ ನಿರುದ್ಯೋಗಿಯಾಗಿ ಕೊಡಗನ್ನು ಸೇರಿದ್ದೆ. ಹೇಗೇಗೊ ಯಯಾರನ್ನೊ ಹಿಡಿದು ದಿನಗೂಲಿಯ ಮೇಲೆ ಗ್ರೂಪ್‌ಲೀಡರ್ ಮೇಸನ್ [ಮೇಸ್ತ್ರಿ] ಆಗಿ ಕೆಲಸ ಸಿಕ್ಕಿತು. ಹಾರಂಗಿಯಿಂದ ಹಾಸನದ ದಿಕ್ಕಿಗೆ ಕಾಡಿನ ಮುಖಾಂತರವೆ ಹೋಗಬೇಕಾಗಿದ್ದ ನಾಲೆ ತೋಡುವಿಕೆಯ ಮೇಲ್ವಿಚಾರಣೆಗಾಗಿ ನನ್ನ ನೇಮಕವಾಗಿತ್ತು. ಕೆಲಸ-ಕಾಡು ಎರಡೂ ರಮ್ಯ ಹೊಸ ಅನುಭವದ ತಾಣವಾಗಿತ್ತು.
ಕ್ರಮೇಣ ಕಾಡಿನ ರೊಮಾಂಚಕಾರಿ ಅನುಭವಗಳ ಉತ್ಸಾಹ ಕುಗ್ಗುತ್ತಿದ್ದಂತೆ, ಬೇಸರ ಒಂಟಿತನ ಕಾಡಲಾರಂಭಿಸಿದಾಗ ಹುಚ್ಚನಂತೆ ಅಲ್ಲಿ-ಇಲ್ಲಿ ಅಲೆದಾಡತೊಡಗಿದೆ. ಮುನಾಲ್ಕು ಎಸ್ಟೇಟುಗಳು ಗಮನ ಸೆಳೆದಿದ್ದವು. ಅದರಲ್ಲೂ ಪರಂಪರೆಯ ಚರಿತ್ರೆಯನ್ನು ನುಂಗಿರುವಂತೆ ಕಂಡುಬರುತ್ತಿದ್ದ ಬಂಗಲೆಯೊಂದು ತನ್ನ ಸ್ತಬ್ಧತೆಯ ಗುಣದೊಂದಿಗೆ ನನಗೆ ಸಾಮಾನ್ಯಕ್ಕಿಂತ ವಿಶೇಷವಾಗಿ ಕಂಡುಬಂದಿತ್ತು. ಆ ಬಂಗಲೆಯ ಬಗೆಗಿನ ನನ್ನ ಕುತೂಹಲವನ್ನು ತಣಿಸುವ ಮಾರ್ಗವಾವುದೂ ಇರಲಿಲ್ಲ. ಬಹಳ ದಿನಗಳ ನಂತರ ಆ ಎಸ್ಟೇಟ್ ಬಂಗಲೆಯೊಡೆಯನಾದ ಮಂದಣ್ಣ ತೀರಾ ಕುಡುಕನೆಂದೂ, ಆತನ ಪತ್ನಿ ವಿದೇಶಿಯಳೆಂದೂ, ಅವರಿವರಿಂದ ಅಪ್ರಯತ್ನವಾಗೆ ತಿಳಿಯಿತು. ಒಂದೆರಡು ಬಾರಿ ಮಂದಣ್ಣ ತನ್ನ ಜೀಪಿನಲ್ಲಿ ನಮ್ಮ ನಾಲೆಯ ಕೆಲಸದ ಬಳಿ ಕಾಲುದಾರಿಯಲ್ಲಿ [ಮಡಿಕೇರಿಗೆ ಹೋಗುತ್ತಿತ್ತು] ಹೋಗಿ ಬರುವುದು ಮಾಡುತ್ತಿದ್ದುದನ್ನು ನೋಡಿದೆ. ಆತ ನನ್ನನ್ನೂ, ಕೆಲಸವಿಲ್ಲದೆ ಯಾವುದಾದರು ಬಂಡೆಯ ಮೇಲೆಯೊ, ಮರದ ನೆರಳಲ್ಲೋ ಏನನ್ನಾದರು ಓದುತ್ತಲೋ, ಬರೆಯುತ್ತಲೋ ಕುಳಿತಿರುತ್ತಿದ್ದುದನ್ನು ಗಮನಿಸಿದ್ದ. ಅವನೂ, ಅವನ ಬಂಗಲೆಯೂ ಒಂದೇ ತರಹ, ಯಾವಾಗಲೂ ಏನನ್ನೋ ದುರ್ದಾನ ಪಡೆದಂತೆ.
ಒಂದು ದಿನ ಹುಣ್ಣಿಮೆಯ ಬೆಳದಿಂಗಳಿನಲ್ಲಿ ಕಾಡು ನೋಡಲು ಸುಂದರವಾಗಿರುತ್ತದೆಂದನ್ನಿಸಿ ನನ್ನ ಕೊಠಡಿಗೆ ಬೀಗ ತಗುಲಿಸಿ ಸುರಿಯುತ್ತಿದ್ದ ತೆಳು ಹಿಮದಿಂದ ರಕ್ಷಿಸಿಕೊಳ್ಳಲು ಶಾಲು ಹೊದ್ದು ಸ್ವಲ್ಪ ದೂರದಲ್ಲಿದ್ದ ಒಂದು ಸಣ್ಣ ಮಣ್ಣಿನ ಗುಡ್ಡವನ್ನು ಹತ್ತಿದೆ. ಅಲ್ಲೇ ನಾಲೆಯ ಕೆಲಸ ನಡೆಯುತ್ತಿದ್ದುದರಿಂದ, ಜನ ವಾಸ ಮಾಡುತ್ತಿದ್ದುದರಿಂದ ಕ್ರೂರ ಪ್ರಾಣಿಗಳ ಹೆಚ್ಚಿನ ಕಾಟವಿರುತ್ತಿರಲಿಲ್ಲ. ಆಗಾಗ್ಯೆ ದಿನಗೂಲಿಗಳ ಗುಡಿಸಲುಗಳ ಮೇಲೆ ನುಗ್ಗುತ್ತಿದ್ದ ಆನೆಗಳ ಹಿಂಡಿನದು ಬಿಟ್ಟರೆ. ಗುಡ್ಡದ ಮೇಲೆ ಮೈ ಮರೆತಿದ್ದೆ. ಎಷ್ಟು ಹೊತ್ತು ಹಾಗಿದ್ದೆನೊ… ಮಂಜು ಬೀಳುವುದು ಜಾಸ್ತಿಯಾದ್ದರಿಂದ ಗುಡ್ಡ ಬಿಟ್ಟು ಇಳಿಯತೊಡಗಿದೆ. ಅರ್ಧ ಇಳಿದಿದ್ದೆ. ಸ್ವಲ್ಪ ದೂರದಲ್ಲಿ ಜೀಪು ಬರುತ್ತಿರುವ ಸದ್ದು ಕೇಳಿಸಿತು. ಒಂದೆರಡು ನಿಮಿಷಕ್ಕೆಲ್ಲ ಜೀಪು ಗಕ್ಕನೆ ಎಲ್ಲಿಗೋ ಗುದ್ದಿದ ಸದ್ದೂ ಕೆಳಿಸಿತು. ನಾನು ಸರಸರ ಗುಡ್ಡ ಇಳಿದೆ..ಸ್ವಲ್ಪ ದೂರದಲ್ಲಿ ಮರಕ್ಕೆ ಜೀಪು ಮುತ್ತಿಟ್ಟಂತೆ ಹೆಚ್ಚು ಜಖಂಗೊಳ್ಳದೆ ನಿಂತಿತ್ತು. ಡ್ರೈವ್ ಮಾಡುತ್ತಿದ್ದ ಮಂದಣ್ಣನಿಗೆ ಏನೂ ಗಾಯಗಳಾಗಿರಲಿಲ್ಲ. ಆತ ಕುಡಿದಿದ್ದ ವಾಸನೆ ನನ್ನ ಹೊಟ್ಟೆ ತೊಳೆಸುವಷ್ಟು ಕೆಟ್ಟದಾಗಿತ್ತು. ಪ್ರಜ್ಞಾಶೂನ್ಯನಾಗಿದ್ದವನನ್ನು ಅಲುಗಾಡಿಸಿದೆ. ಎಚ್ಚರಾಗುವಂತೆ ಕಾಣಲಿಲ್ಲ. ಗುಡಿಸಿಲಿನ ಕೂಲಿಯಾಳುಗಳ ಸಹಾಯವನ್ನಾದರು ಪಡೆಯೋಣವೆಂದು ಯೋಚಿಸಿದೆ. ಅವರುಗಳೂ ಮಂದಣ್ಣನ ಸ್ಥಿತಿಯಲ್ಲೇ ಇರುತ್ತಿದ್ದರು. ಯೋಚಿಸುತ್ತಾ ನಿಂತುಕೊಳ್ಳುವಷ್ಟು ಸಾವಕಾಶವಿರಲಿಲ್ಲ. ಮಂದಣ್ಣನ ಎಸ್ಟೇಟಿನ ಬಂಗಲೆಯತ್ತ ಹೆಜ್ಜೆ ಹಾಕಿದೆ.
ಬಂಗಲೆಯ ಮುಂದೆ ಬಂದಾಗ ನಾಯಿಗಳು ಊಳಿಡಲಾರಂಭಿಸಿದವು. ಬಂಗಲೆಯ ಬಾಗಿಲು ಹಾಕಿದ್ದು ಮತ್ತು ನನಗೆ ಅಭ್ಯಾಸವಿರದ ಸ್ತಬ್ಧತೆಯ ಗಾಢ ವಾತಾವರಣ ಗಪ್ಪನೆ ಮುಖಕ್ಕೆ ರಾಚಿ ಹೊಡೆಯುವಂತಿತ್ತು. ಯೋಚಿಸದೆ ಬಾಗಿಲ ಬಳಿ ಇದ್ದ ಕರೆಗಂಟೆ ಒತ್ತಿದೆ. ಯಾರೂ ಬರದೆ ಪುನಃ ಒತ್ತಿದೆ.
ಗಂಟೆ ಶಬ್ಧ ಇನ್ನೂ ಕೇಳುತ್ತಿದ್ದಂತೆಯೆ ಬಾಗಿಲು ತೆಗೆದ ವ್ಯಕ್ತಿಯಲ್ಲಿ ಅಸಹನೆ ಪುಟಿದಿತ್ತು. ವಿದೇಶಿ ಹುಡುಗಿ. ಹಾಕಿದ್ದ ಉಡುಪು, ಗುಂಗುರುಗುಂಗುರಾದ ಕತ್ತರಿಸಿದ ಕೂದಲಿನ ರೀತಿ ಮತ್ತು ಆಕೆಯ ಇನ್ನಿತರ ವಿವರಗಳನ್ನು ಗುರುತಿಸಿ ಬ್ರಿಟನ್ನಿನವಳಿರಬೇಕೆಂದು, ಅಕೆಯೆ ಮಂದಣ್ಣನಾಕೆ ಇರಬೇಕೆಂದು ತೋಚಿತು. “ಏನು ಬೇಕು?” ಬಾಣದಂತೆ ಬಂದ ಪ್ರಶ್ನೆಯಲ್ಲಿ ತಿರಸ್ಕಾರ -ಅಸಹನೆ- ಅಧಿಕಾರಯುತ ಧೋರಣೆಯ ಸ್ವರ ನನ್ನನ್ನು ಇರಿಸುಮುರಿಸುಗೊಳಿಸಿತು. ನಾನು ಆಕೆಯಷ್ಟು ನಿರರ್ಗಳವಾಗಿ ಬ್ರಿಟನ್ನಿನ ಇಂಗ್ಲಿಷ್ ಧಾಟಿಯನ್ನನುಸರಿಸಿ ಆಕೆಯ ಗಂಡ ಅಪಘಾತಕ್ಕೀಡಾಗಿರುವುದನ್ನು ತಿಳಿಸಿದೆ. ಅಪಘಾತದ ವಿಷಯ ನಿತ್ಯ ಘಟಿಸುವ ಸಾಧಾರಣವೆಂಬಂತೆ ಆಕೆ ದಿಗ್ಭ್ರಾಂತಳೂ ಆಗಲಿಲ್ಲ, ವಿಚಲಿತಳೂ ಆಗಲಿಲ್ಲ. ಬದಲಿಗೆ ನನ್ನ ಇಂಗ್ಲೀಷ್ ಧಾಟಿಯನ್ನು ಅಭಿನಂದಿಸಿದಳು. ಆಳುಗಳು ಯಾರೂ ಇಲ್ಲವೆಂದು ಹೇಳಿ ಭದ್ರತೆಗೆಂದು ಎರಡು ನಾಳದ ಬಾರುಕೋವಿಯೊಂದನ್ನು ಹಿಡಿದು ನನ್ನನ್ನನುಸರಿಸಿ ಬಂದಳು. ದಾರಿಯಲ್ಲಿ ನನ್ನ ಬಗ್ಗೆ ಸಂಕ್ಷಿಪ್ತವಾಗಿ ವಿಚಾರಿಸಿ ತಿಳಿದು ಕೊಂಡಳು. ಏಳೆಂಟು ನಿಮಿಷಗಳಲ್ಲಿ ಅಪಘಾತ ನಡೆದ ಸ್ಥಳದಲ್ಲಿದ್ದೆವು. ಬೀಸುತ್ತಿದ್ದ ಥಂಡಿ ಗಾಳಿಗಾಗಲೆ ಅರೆಪ್ರಜ್ಞೆ ಮರಳಿದ್ದ ಮಂದಣ್ಣ ತನ್ನ ಭಾಷೆಯಲ್ಲಿ ಏನೇನೊ ಒದರುತ್ತಿದ್ದ. ಅವನನ್ನು ಬಂಗಲೆಗೆ ಸಾಗಿಸಲು ದೈನ್ಯತೆಯ ಧ್ವನಿಯಲ್ಲಿ ನನ್ನ ಸಹಾಯವನ್ನು ಕೇಳಿದ ಆಕೆ ನನ್ನ ಸಮ್ಮತಿಯ ನಂತರ ಜೀಪನ್ನು ತಾನು ಡ್ರೈವ್ ಮಾಡಲಾರಂಭಿಸಿದಳು. ದಾರಿಯಲ್ಲಿ ಆಕೆಯ ಹೆಸರನ್ನು ಕೇಳಿದಾಗ ಕ್ಯಾತರಿನ್ ಎಂದು ಅರೆಮನಸ್ಕಳಾಗಿಯೆ ಉತ್ತರಿಸಿದಳು.
ಡ್ರೈವ್ ಮಾಡುತ್ತಾ ಇಂಗ್ಲಿಷ್ ಭಾಷೆಯ ಮೇಲಿನ ನನ್ನ ಪ್ರಭುತ್ವವನ್ನು ಮೆಚ್ಚಿಕೊಳ್ಳುವುದು ತನ್ನ ಕರ್ತವ್ಯವೆಂಬಂತೆ ನಿರಾಸಕ್ತಿಯಿಂದ ಒಂದೆರಡು ಮಾತುಗಳನ್ನಾಡಿದಳು. ಧ್ವನಿಯಲ್ಲಿ ಕೃತಕತೆ ಒಡೆದು ಕಂಡು ಆ ಕ್ಷಣದ ಕಿರುಪರಿಚಯದಲ್ಲೆ ಸ್ನೇಹ ಪೂರ್ಣ ವಿಶ್ವಾಸ ವ್ಯಕ್ತಪಡಿಸುವ ಮಾತುಗಳು ಹೊರಬಿದ್ದರು, ತನ್ನ ಅಧಿಕಾರಯುತ ಧೋರಣೆ, ನೋಟಗಳನ್ನು ಸ್ವಲ್ಪವೂ ಸಂಕುಚಿತಗೊಳಿಸಿರಲಿಲ್ಲ.
ಬಂಗಲೆ ತಲುಪಿದ ನಂತರ ಮಂದಣ್ಣನನ್ನು ಬಂಗಲೆಯ ಮಹಡಿಯಲ್ಲಿ ಕೋಣೆಯ ಮಂಚದ ಮೇಲುರುಳಿಸಿ ಕೆಳಗಿಳಿದು ಬಂದೆವು. “ಕುಡಿಯುತ್ತೀಯ?” ಆಕೆ ಕೇಳಿದ ಪ್ರಶ್ನೆಗೆ ಅಭ್ಯಾಸವಿಲ್ಲವೆಂದೆ. ಆನಂತರ ಆಕೆ ಅಡಿಗೆಮನೆಗೆ ಹೋಗಿ ತನಗೆ ಸ್ಕಾಚ್ ತುಂಬಿದ್ದ ಪೆಗ್ ಗ್ಲಾಸನ್ನು, ನನಗೆ ಟೀಯನ್ನು ತಂದು ಆತಿಥ್ಯ ತೋರಿದಳು. “ಆಳುಗಳಾರು ಇಲ್ಲವೇಕೆ?” ನಾನು ಕೇಳಿದ ಪ್ರಶ್ನೆಗೆ “ಯಾರು ರಾತ್ರಿವೇಳೆ ಉಳಿಯುವುದಿಲ್ಲ. ಇರುವ ಮುದುಕ ಜೀಪಿನ ಷೆಡ್ಡಿನಲ್ಲಿ ಕುಡಿದು ಮಲಗಿಬಿಡುತ್ತಾನೆ.” ಎಂದು ಹೇಳಿ ಪುನಃ “ಭಾರತೀಯರು ಆರೋಗ್ಯಕ್ಕೆ ಕುಡಿಯದೆ, ಲಘು ಮೋಜಿಗೆ ಕುಡಿಯದೆ, ಚಟವಾಗಿಸಿಕೊಂಡುಬಿಡುತ್ತಾರೆ. ಮಂದಣ್ಣ ಪ್ರಾರಂಭದಲ್ಲಿ ಕುಡಿಯುತ್ತಿದ್ದವರು ನನ್ನ ಮದುವೆಯಾದ ಮೇಲೆ ಬಿಟ್ಟುಬಿಟ್ಟಿದ್ದರು. ಆದ್ರೆ ಈಗ ಪುನಃ ಅತಿ ಮಾಡಿಕೊಂಡುಬಿಟ್ಟಿದ್ದಾರೆ…” ಕ್ಯಾತರಿನ್ ಅದೆಲ್ಲಾ ಹೇಳಲು ನಾನು ತನ್ನ ಗಂಡನ ಬಗೆಗೆ ಅನ್ಯಥ ಭಾವಿಸಬಾರದೆಂಬುದಕ್ಕಿರಬೇಕು.
ಆ ರಾತ್ರಿ ಆಕೆಯ ಸಲಹೆ ಮೇರೆಗೆ ಹೊರಗೆ ಜೀಪು ಶೆಡ್ಡಿಗೆ ಹೊಂದಿಕೊಂಡಂತೆ ಇದ್ದ ಔಟ್‌ಹೌಸ್ನಲ್ಲೆ ಉಳಿದುಕೊಂಡೆ.
ಬೆಳಿಗ್ಗೆ ಆ ಮನೆಯ ಆಳು ಎಂದು ಹೇಳಿಕೊಂಡು ಬಂದವ ಡೈನಿಂಗ್ ಹಾಲ್‌ಗೆ ಬರಬೇಕೆಂದು ಕರಕೊಟ್ಟು ಹೋದ. ನಾನು ಅಲ್ಲೆ ಇದ್ದ ಸಿಂಕಿನಲ್ಲಿ ಮುಖ ತೊಳೆದುಕೊಂಡು ಡೈನಿಂಗ್ ಹಾಲ್‌ಗೆ ಬಂದಾಗ ಕ್ಯಾತರಿನ್ ಹಾಗು ಮಂದಣ್ಣ ಇಬ್ಬರು ಟೇಬಲ್ ಮುಂದೆ ಕುಳಿತು ಪಕ್ಕದಲ್ಲೆ ಇದ್ದ ಬೆಂಕಿಗೂಡಿಗೆ ಕೈ ಒಡ್ಡಿ ಚಳಿ ಕಾಯಿಸಿಕೊಳ್ಳುತ್ತಿದ್ದರು. ನಾನು ಅಲ್ಲಿಗೆ ಬಂದುದನ್ನು ಗಮನಿಸಿದ ಕ್ಯಾತರಿನ್, ಮಂದಣ್ಣನಿಗೆ ರಾತ್ರಿ ನಡೆದ ವಿಚಾರವನ್ನು ತಿಳಿಸಿ ಸಾಂಪ್ರದಾಯಿಕವಾಗಿ ಇಬ್ಬರಿಗೂ ಪರಿಚಯ ಮಾಡಿಕೊಟ್ಟಳು. ಮಂದಣ್ಣ ಪರಿಚಯಕ್ಕೆ ಉತ್ತರವೆಂಬಂತೆ “ಹೌದಾ..” ಎಂದು ಹೇಳಿ ಮೌನಿಯಾದ. ಕ್ಯಾತರಿನ್ ನನಗೂ ಟೀ ಕೊಟ್ಟಳು. ಮೂವರ ನಡುವಿನ ಮೌನದಲ್ಲಿನ ಸ್ತಬ್ಧತೆ, ನಿರ್ವಾತ ವಾತಾವರಣ, ಆ ಬಂಗಲೆ ಹೊರ ಪಾರ್ಶ್ವದ ಶೂನ್ಯತೆಯ ವಾತಾವರಣಕ್ಕೆ ಹೊಂದಿದಂತಿದ್ದು ನನಗಾಗಲೆ ಇರಿಸುಮುರಿಸಾಗಿತ್ತು. ನನಗೆ ಅಪರಿಚಿತವಾದ ಶ್ರೀಮಂತಿಕೆಯ ಗತ್ತಿನ ಮೌನದಿಂದಾಗಿ ಮತ್ತಷ್ಟು ಇರಿಸುಮುರಿಸು. ಮಂದಣ್ಣ ಶೂನ್ಯತೆಯನ್ನು ಶಬ್ಧಗಳಿಂದಲಾದರು ತುಂಬಲೆಂಬಂತೆ “ನಾನಿವರನ್ನು ನೋಡಿದ್ಡೇನೆ, ಚಾನಲ್ ಕೆಲಸದ ಬಳಿ.. ಯಾವಾಗಲು ಏನಾದರು ಓದ್ತಾ ಬರೀತಾ ಇತಾರೆ..”- ಕನ್ನಡದಲ್ಲಿ ಹೇಳಿದ ಅವನ ಮಾತುಗಳನ್ನು ಅರ್ಥ ಮಾಡಿಕೊಂಡಳೆಂಬಂತೆ ಆಶ್ಚರ್ಯವನ್ನು ಸೂಚಿಸುತ್ತಾ “ಹೌದಾ? ಏನೇನು ಓದುತ್ತಿ?” ಎಂದು ಕೇಳಿದಳು. ನಾನು ಅಮೆರಿಕದ ಐದಾರು ಸಮಾಜ ಶಾಸ್ತಜ್ಞರ ಹೆಸರುಗಳನ್ನು ಹೇಳುತ್ತಿದ್ದಂತೆ ಆಕೆ ಮುಖ ಕಿವುಚಿದಂತೆ ಮಾಡಿ ಆ ಲೇಖಕರು ತನ್ನ ಮಟ್ಟಕ್ಕೆ ಕೀಳೆಂಬಂತೆ.. “ಅವರ ಪುಸ್ತಕಗಳನ್ನ ಓದ್ತೀಯ..? ಅಪ್ರಬುದ್ಧರು, ಇಂಗ್ಲೆಂಡಿನಿಂದ ಪ್ರಭಾವಿತರಾದವರು.” ಎಂದು ಹೇಳಿದಳು. ಮಂದಣ್ಣ ಅಸಮಾಧಾನದಿಂದ ಮುಖ ಸಂಕುಚಿಸಿದಂತೆ ಮಾಡಿ ಆಕೆಯ ಕುರಿತಂತೆ ನನ್ನ ಕಡೆ ತಿರುಗಿ “ಈಕೆ ಬನಾರಸ್ಸಿನಲ್ಲಿ ಸಮಾಜ ಶಾಸ್ತ್ರದ ಹಿನ್ನೆಲೆಯಿಂದ ಭಾರತವನ್ನು ಅಭ್ಯಸಿಸಿದವಳು” ಎಂದ. ಅವನ ಮಾತಿನಲ್ಲಿ ವ್ಯಂಗ್ಯವನ್ನು, ಅದರ ತೀಕ್ಷ್ಣತೆಯನ್ನು ಗುರುತಿಸಿದ ಕ್ಯಾತರಿನ್ “ಯಾಕೆ ಹೀಗಾಡುತ್ತಿ? ಈತ ನಮ್ಮ ಅತಿಥಿಯಷ್ಟೆ.” ಎಂದಳು, ವ್ಯಗ್ರ ನೋಟವನ್ನು ಆತನ ಕಡೆಗೆ ಎಸೆದವಳಂತೆ ಮಾಡಿ.
ನಾನು ಮತ್ತೂ ಅಲ್ಲಿರಲು ಇಷ್ಟ ಪಡದೆ ಹೊರಟಾಗ ಬಂಗಲೆ ಕಾಂಪೌಂಡಿನ ಗೇಟಿನ ತನಕ ಕಳುಹಿಸಿಕೊಡಲು ಬಂದ ಅವರಿಬ್ಬರು ಬಿಡುವಿದ್ದಾಗ ತಮ್ಮಲ್ಲಿಗೆ ಆಗಾಗ್ಯೆ ಬಂದು ಹೋಗುವಂತೆ ಮಾಡಲು ತಿಳಿಸಿದರು. ನಾನು ಆ ಎಸ್ಟೇಟಿನಿಂದಾಚೆ ಬಂದನಂತರ ಕಟ್ಟಿದ್ದ ಅಸಮಧಾನದ ಉಸಿರನ್ನೆಲ್ಲ ಬಿಟ್ಟು ಸಮಧಾನಗೊಂಡೆ.
ಕುತೂಹಲ, ಆ ಬಂಗಲೆಯ ನಿಶ್ಚಲ ಗಾಢ ಸ್ತಬ್ಧತೆಗಂಟಿಕೊಂಡಿದ್ದಂತೆ ನಾನು ಅಲ್ಲಿಗೆ ಬಿಡುವಿದ್ದಾಗಲೆಲ್ಲಾ ಹೋಗಿ ಬರಲಾರಂಭಿಸಿದೆ. ಆದರೆ ಇದ್ದ ಕುತೂಹಲವನ್ನು ನಾನೆಂದೂ ವ್ಯಕ್ತ ಪಡಿಸುವ ಆತುರಕ್ಕೆ ಹೋಗದೆ ಅವರಿಗೆಲ್ಲ ದೂರವೆ ಇರಬಯಸಿದ್ದೆನಾದ್ದರಿಂದ ಅವರು ಮಾತನಾಡುವುದು ನಾನು ಕೇಳುವುದಷ್ಟೇ ನಡೆಯುತ್ತಿತ್ತು. ಹೆಚ್ಚಿನ ಬಾಗ ಕ್ಯಾತರಿನ್‌ಳೊಂದಿಗಿನ ಚರ್ಚೆ ಮಟ್ಟದ್ದಾದ ಸಂಭಾಷಣೆಯೆ ಒಳಗೊಳ್ಳುತ್ತಿತ್ತು. ಇದರ ನಡುವೆ ಆ ಎಸ್ಟೇಟ್ ಮ್ಯಾನೇಜರ್ ಪೊಣ್ಣಪ್ಪನ ಪರಿಚಯವೂ ಆಯ್ತು. ಮಲೆಯಾಳಿಯಂತೆ ಕಾಣುತ್ತಿದ್ದ ಅವನು ಕುಸ್ತಿ ಪಟುವಿನಂತೆ ದೃಢಕಾಯನಾಗಿದ್ದ. ಚೆನ್ನಾಗಿ ಮಾತನಾಡುತ್ತಿದ್ದ. ಆದರೆ ಸಾಹಿತ್ಯವೆಂದರೆ ದೂರ. ಸಾಹಿತ್ಯ ಮೂರು ಕಾಸಿಗೂ ಪ್ರಯೋಜನವಿಲ್ಲವೆಂದು ಅವನ ದೂರು. ಸಾಹಿತ್ಯದ ಬಗೆಗೆ ಮಾತುಬಂದಾಗಲೆಲ್ಲಾ ಸಿಡಿಮಿಡಿಗೊಳ್ಳುತ್ತಿದ್ದ. ಅತಿ ಚುರುಕಿನ ಓಡಾಟ, ಪ್ರತಿಯೊಂದನ್ನು ತೂಗಿನೋಡುವ ಬುದ್ಧಿಯ ಅವನ ಮುಖದಲ್ಲಿ ಒರಟುತನ, ಆ ಒರಟುತನದಲ್ಲೂ ನಯಗಾರಿಕೆ. ಒಟ್ಟಾರೆ ಅವನನ್ನು “ಇಂತಹವನೆಂದು” ಖಡಾಖಂಡಿತವಾಗಿ ಹೇಳಲು ಬಾರದು.
ಒಮ್ಮೊಮ್ಮೆ ನನಗೆ ಮಂದಣ್ಣ ಪ್ರತ್ಯೇಕವಾಗಿ ಸಿಗುತ್ತಿದ್ದ. ಅದೂ ನಾನಲ್ಲಿ ಹೋದ ಐದಾರು ವಾರಗಳ ನಂತರ. ತಾನು ಮಲಗುವುದನ್ನು ಮಹಡಿಯಿಂದ ಕೆಳಗಿನ ಕೋಣೆಯೊಂದಕ್ಕೆ ವರ್ಗಾಯಿಸಿದ್ದ. ನನ್ನನ್ನು ನೋಡಿದ ಗಳಿಗೆಯಿಂದ ಬೇಗನೆ ಬಿಟ್ಟುಕೊಡದೆ ತನ್ನ ಕೋಣೆಯಲ್ಲೆ ಕೂಡಿಸಿಕೊಳ್ಳುತ್ತಿದ್ದ. ತಾನು ಕುಡಿಯುತ್ತಿದ್ದ. ಮಾಂಸ ಕಚ್ಚುತ್ತಿದ್ದ. ಸುಮ್ಮನೆ ನನ್ನನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದ. ನಾನು ಬಲವಂತವಾಗಿ ಬಿಡಿಸಿಕೊಂಡುಬರುತ್ತಿದ್ದೆ. ಒಮ್ಮೊಮ್ಮೆ “ನೀನೂ ಕುಡಿದರೆ ಚೆನ್ನಿತ್ತು. ಅಭ್ಯಾಸ ಮಾಡು.” ಎಂದು ಬೋಧಿಸುತ್ತಿದ್ದ. ನಾನು ಇಡೀ ಬಂಗಲೆಗೆ ಒಮ್ಮೆಗೆಯೆ ಹತ್ತಿರದವನಾಗಿ- ದೂರದವನಾಗಿ ಉಳಿದುಕೊಂಡಿದ್ದೆ. ನನ್ನ ಹಾಗು ಬಂಗಲೆಯವರ ಭೇಟಿ ಅಧಿಕವಾಗುತ್ತಿದ್ದಂತೆ ಪೊಣ್ಣಪ್ಪ ನನ್ನಲ್ಲಿ ಇದ್ದಕ್ಕಿದ್ದಂತೆ ಅವಿಶ್ವಾಸ ವ್ಯಕ್ತಪಡಿಸಲಾರಂಭಿಸಿದ್ದ. ನನ್ನ ಕೆಲಸಕ್ಕೆ ಎರಡು ದಿನ ರಜೆ ಬಂದಾಗ ಮಂದಣ್ಣ ಮಡಿಕೇರಿ ಭಾಗಮಂಡಲಕ್ಕೆ ವಿಹಾರ ಕಾರ್ಯಕ್ರಮವನ್ನು ಏರ್ಪಡಿಸಿದ. ಬೆಳಿಗ್ಗೆಯೆ ಹೊರಟು ಮಡಿಕೇರಿ ಭಾಗಮಂಡಲವನ್ನೆಲ್ಲ ನೋಡಿಕೊಂಡು ಬಂದನಂತರ ಅಲ್ಲಿಯೆ ಪ್ರವಾಸಿಮಂದಿರದಲ್ಲುಳಿದುಕೊಂಡೆವು. ರಾತ್ರಿ ಭೋಜನಾನಂತರ ತಿರುಗಾಡಿಕೊಂಡು ಬರಲು ಹೊರಟೆ. “ನಾನು ನಿಮ್ಮೊಂದಿಗೆ ಬರಬಹುದೆ?” ಎಂದು ಕೃತಕ ಸೌಜನ್ಯದಿಂದ ಪ್ರಶ್ನಿಸಿ ನನ್ನೊಡನೆ ಬಂದ ಪೊಣ್ಣಪ್ಪ “ಏನ್ಸಮಾಚಾರ?” ಎಂದ ತಮಾಷೆಗೆಂಬಂತೆ. ಕಣ್ಣುಗೀಟಿ. ನಾನು ಸಂಗತಿ ತಿಳಿಯದವನಂತೆ ಅವನ ಕಡೆ ನೋಡಿದಾಗ “ಕ್ಯಾತರಿನ್ ನಿಮ್ಮನ್ನು ಬಹಳ ಹೊಗಳುತ್ತಾಳೆ…ಏನೇನೋ ಚರ್ಚಿಸ್ತೀರಂತೆ…” ಎಂದಾಗ ನಾನು ವ್ಯಂಗ್ಯವಾಗಿ “ಪ್ರಯೋಜನಕ್ಕೆ ಬಾರದುದು..” ಎಂದೆ.
“ನಿಮಗೂ ಮಂದಣ್ಣನವರಿಗೂ ಹೇಗೆ ಸಂಬಂಧ?” ಎಂದು ಕೇಳಿದೆ. ಅವನು ಉತ್ಸಾಹಿತನಾಗಿ ಹೆಗ್ಗಳಿಕೆಯ ಪ್ರಾಮಾಣಿಕ ಧ್ವನಿಯಲ್ಲಿ “ಹತ್ತೆಂಟು ವರ್ಷಗಳ ಹಿಂದೆ ಮಂದಣ್ಣ ಯಾರೂಂತಲೆ ಗೊತ್ತಿರಲಿಲ್ಲ. ತೀರಾ ಬಡತನದಲ್ಲಿದ್ದ ನನ್ನನ್ನು ಕಾಲೇಜಿನಿಂದ ಬಿಡಿಸಿ , ತಮ್ಮ ಎಸ್ಟೇಟಿಗೆ ಹಾಕಿಕೊಂಡರು. ಆಗಿನಿಂದಲೂ ಕ್ಯಾತರಿನ್ ಬರೊತನಕ ಅವರ ವೈಯಕ್ತಿಕ ಕೆಲಸಗಳನ್ನೆಲ್ಲ ನಾನೆ ಮಾಡ್ತಿದ್ದೆ. ಕ್ರಮೇಣ ಅವರೇ ನನಗೆ ಎಸ್ಟೇಟಿನ ವಹಿವಾಟನ್ನೆಲ್ಲ ವಹಿಸಿದರು. ಅವತ್ತಿನಿಂದ ಇವತ್ತಿನವರೆಗೂ ವಿಶ್ವಾಸಿಯಾಗೆ ಉಳಿದುಕೊಂಡಿದ್ದೇನೆ.”
“ಮಂದಣ್ಣನ ತಂದೆ ತಾಯಿ..?”
“ಅವರಾ..ತಾಯಿ ಚಿಕ್ಕ ವಯಸ್ಸಿನಲ್ಲೆ ತೀರಿಕೊಂಡರಂತೆ. ತಂದೆ ಮತ್ತು ಮಂದಣ್ಣನ ಸೋದರತ್ತೆ ಮಂದಣ್ಣನ್ನ ಬೆಳೆಸಿದರಂತೆ. ಮಂದಣ್ಣನ ತಂದೆ ಸದಾ ಎಸ್ಟೇಟ್ ಕೂಲಿ ಹೆಣ್ಣಾಳುಗಳ ಮೋಜಿನಲ್ಲೆ ಇರುತ್ತಿದ್ದುದರಿಂದ ಎಸ್ಟೇಟ್ ವಹಿವಾಟೆಲ್ಲಾ ಮಂದಣ್ಣನ ಅತ್ತೇನೆ ನೊಡ್ಕೋತಿದ್ದರಂತೆ. ಆಕೆ, ಮಂದಣ್ಣನ್ನ ಬಾಳಾ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಳಂತೆ. ಆಗ ಬ್ರಿಟೀಷ್‌ನವರಿದ್ದ ಕಾಲ. ಯಾರೋ ಪರಂಗಿಯವನ ಜತೆ ಎಸ್ಟೇಟಿನ ದುಡ್ಡೆಲ್ಲಾ ದೋಚಿಕೊಂಡು ಇಂಗ್ಲೆಂಡಿಗೆ ಒಡಿಹೋದಳಂತೆ. ಆಸ್ತಿ, ಗೌರವ, ಒಲವಿನ ತಂಗಿ ಸೇರಿದಂತೆ ಎಲ್ಲವನ್ನು ಕಳೆದುಕೊಂಡ ಮಂದಣ್ಣನವರ ತಂದೆ ತೀರಿಕೊಂಡರಂತೆ. ಕ್ಯಾತರಿನ್ ಮಂದಣ್ಣನ ಸೋದರತ್ತೆ ಮಗಳೆ. ಎರಡು ವರ್ಷ ಆಯ್ತು ಭಾರತಕ್ಕೆ ಬಂದು. ಬನಾರಸ್ಸಿನಲ್ಲಿದ್ದ ಆಕೆಯನ್ನು ನೋಡಲು ಇವರು ಆಗಾಗ್ಯೆ ಹೋಗುತ್ತಿದ್ದರು. ಮದುವೆಯೂ ಆಯ್ತು. ಎಸ್ಟೇಟನ್ನು ಪುನಃ ಒಂದು ಸ್ಥಿತಿಗೆ ತಂದಿದ್ದ ಮಂದಣ್ಣನವರು ಆಕೆಯನ್ನು ಮದುವೆಯಾದ್ದರಿಂದ ಇಲ್ಲಿನ ಕೂಲಿಯಾಳುಗಳು ಕೈಬಿಟ್ಟರು. ನಮ್ಮ ಕೂರ್ಗಿಗಳಿಗೆ ಪರಂಗಿಗಳ ಬಗ್ಗೆ ಮೋಹ-ದ್ವೇಷ ಎರಡೂ ವಂಶಪಾರಂಪರ್ಯವಾಗಿ ಬಂದದ್ದು….”
ಪೊಣ್ಣಪ್ಪ ಹೇಳಿದುದನ್ನು ಕೇಳಿದ ಮೇಲೆ ನಾನು ಅದರ ಹಿನ್ನೆಲೆಯಲ್ಲಿ ಯೋಚಿಸಲಾರಂಭಿಸಿದಾಗ ಬೇರೆಯದೆ ಆದ ಸಂಸ್ಕೃತಿಯ ಪ್ರಭಾವವನ್ನು ಜೀರ್ಣಿಸಿಕೊಳ್ಳಲಿಕ್ಕಾಗದ ಜೊತೆಗೆ ವಂಶ ಪಾರಂಪರ್ಯವಾಗಿ ಬಂದ ಸ್ವಾಭಿಮಾನವನ್ನು- ಧರ್ಮವನ್ನು ಬಿಡಲಾಗದೆ ನರಳಿದ ಒಂದು ಪರಂಪರೆಯ ಮೂಲಚಿತ್ರ ಮನಸ್ಸಿನಲ್ಲಿ ಸ್ಪಷ್ಟಗೊಳ್ಳತೊಡಗಿತು. ಈ ರೀತಿಯ ನಾಗರಿಕತೆಯ ಜಟಿಲತೆ ನಾಡಿನುದ್ದಗಲಕ್ಕು ಹಬ್ಬಿದೆ ಎಂದನ್ನಿಸತೊಡಗಿದಂತೆ, ಇದನ್ನೆಲ್ಲಾ ಕ್ಯತ್ರಿನ್ ಜೊತೆ ಚರ್ಚಿಸಿದರೆ ಹೇಗೆ ಎಂಬ ಅಭಿಪ್ರಾಯವೂ ಮೂಡತೊಡಗಿತು. ಅದರ ಹಿಂದೆ ಆಕೆಯೊಡನೆ ಚರ್ಚಿಸಿದ್ದ ವಿಷಯಗಳಲ್ಲಿ ಆಕೆ ತನ್ನ ವಿಚಾರವನ್ನೇ ನನ್ನ ಮುಂದೆ ಮಂಡಿಸಲು ಅವಕಾಶ ಕೊಟ್ಟಿದ್ದೆನೆಯಾಗಲಿ ನಾನು ಆಗೊಮ್ಮೆ ಈಗೊಮ್ಮೆ ಬಾಯ್ತೆರೆದುದು ಬಿಟ್ಟರೆ ಬೇರೇನೂ ಆಗಿರಲಿಲ್ಲ. ಆಕೆ ಚರ್ಚೆಯಲ್ಲಿ, ನಾನು ಆಕೆಯ ಮಾತುಗಳ ಮೂಲಕ ಮೀರಿಹೋಗಲು ಅವಕಾಶ ಕೊಟ್ಟಿರಲಿಲ್ಲ. ಅದಕ್ಕೆ ಕಾರಣ, ಆಕೆಯ ಗತ್ತು – ಹಮ್ಮು ಮಾತ್ರ ಕಾರಣವಲ್ಲ. ನನಗೆ ಶಾಲಾ ವಿದ್ಯಾಭ್ಯಾಸದ ಶಿಕ್ಷಣ ಇಲ್ಲದುದು – ಬಡತನ ಸ್ವಾಭಿಮಾನಶೂನ್ಯತೆಯನ್ನು ಬಿಚ್ಚಿ ತೊರಿಸಿಕೊಳ್ಳಲು ಸಂಕೋಚ ಹಾಗು ಕೀಳರಿಮೆ ನನ್ನಲ್ಲಿ ಮನೆ ಮಾಡಿದ್ದುದು ಸ್ಪಷ್ಟವಾಗಿ ನನಗೆಯೇ ನಾಚಿಕೆಯಾಗಿತ್ತು.
ಪ್ರವಾಸಿ ಮಂದಿರಕ್ಕೆ ಹೋದಾಗ ಕೋಣೆಯಲ್ಲೇ ಇದ್ದ ಅವರಿಬ್ಬರಿಗೂ ಏನೋ ವಾಗ್ಯುದ್ಧ ನಡೆದುದರ ಚಿನ್ಹೆಗಳಿದ್ದವು. ನನ್ನನ್ನು ನೋಡಿದ ಮಂದಣ್ಣ, “ಚಂದ್ರು, ನಾನು ಹೊರಗೆ ಹೋಗ್ತಾ ಇದ್ದೀನಿ. ಕಂಪನಿ ಕೊಡ್ತೀರ? ” ಎಂದು ಕೇಳಿದಾಗ ನಾನು ಕ್ಯಾತರಿನ್‌ಳತ್ತ ನೋಡಿದೆ. ಮುಖ ತಿರುಗಿಸಿದಳು. ಪೊಣ್ಣಪ್ಪನನ್ನು ಕೋಣೆಯಲ್ಲೆ ಬಿಟ್ಟು ನಾವಿಬ್ಬರು ಆಚೆ ಬಂದೆವು. ಮಂದಣ್ಣ ಕಾರು ಸ್ಟಾರ್ಟ್ ಮಾಡಿ ನೈಟ್ ಬಾರ್ ಕಡೆಗೆ ಬಿಟ್ಟ. ಹೆಚ್ಚಾಗಿ ಬೆಳಕಿಲ್ಲದ ಒಂದು ಮೂಲೆಯಲ್ಲಿ ಕುಳಿತು ತನಗೆ ಬೀರ್, ಕರಿದ ಮೀನು, ಸಿಲೋನ್ ಪರೋಟ ಎಲ್ಲಾ ಹೇಳಿ ನನಗೆ ಚೌಚೌ ಹೇಳಿ ಸಿಗೆರೇಟ್ ಪ್ಯಾಕ್ ನನ್ನತ್ತ ಎಸೆದಾಗ ನಾನು ಅದರಿಂದ ಒಂದು ತೆಗೆದು ಹಚ್ಚಿದೆ. ಕುಡಿಯುತ್ತಾ ಕುಡಿಯುತ್ತಾ ಖಿನ್ನನಾದ ಮಂದಣ್ಣ ದಿಡೀರನೆ ಇಂಗ್ಲೀಷ್‌ನಲ್ಲಿ “ಚಂದ್ರು, ನಾನು ಜೀವಿಸಿರಬೇಕು. ಜೀವಿಸಿರುವುದೆಂದರೆ ಅಗೋಚರ ಸಂಕಷ್ಟಗಳತ್ತ ನಡೆಯುವುದು ಎಂದರೂ ಸರಿಯೆ. ಇತ್ತೀಚೆಗೆ ಆತ್ಮಹತ್ಯೆಯ ಬಗೆಗಿನ ಆಲೋಚನೆ ಬಂದಾಗಲೆಲ್ಲ ಸಾವು ಸಮಸ್ಯೆಗೆ ಪರಿಹಾರವಲ್ಲ ಅಂತನ್ನಿಸ್ತಿದೆ. ಅದು ಏನನ್ನೂ ಕೊಡೋಲ್ಲ. ಜೀವಿಸಿರಬೇಕನ್ನೊ ಆಸೆ ಇದ್ದರು ಅಲ್ಲೇನೊ ಅವ್ಯಕ್ತ ಭಯವೂ ಇದೆ….” ಎಂದು ಬಾಯಿಗೆ ಬಂದಂತೆಲ್ಲಾ ಮಾತಾಡಿ ಅಳತೊಡಗಿದ. ನನಗೆ ಕನಿಕರ ಮೂಡಿತು. ಇಷ್ಟು ದೊಡ್ಡ ಆಳು ಹೀಗೆ ಖಿನ್ನ ಮನಸ್ಕನಾಗಿ ಅಳುವುದೆ.. ಛೆ ಎಂದನ್ನಿಸಿತಾದರೂ ನಾನು ಹೆಚ್ಚಿಗೆ ಏನನ್ನೂ ಹೇಳಲು ಹೋಗಲಿಲ್ಲ. ಕೆದಕಿ ಕೇಳಲಿಕ್ಕೂ ಹೋಗಲಿಲ್ಲ…ಆತ ಮುಂದುವರಿದು-
“ನನಗೆ ಅಪ್ಪ ಅಮ್ಮ ಚಿಕ್ಕ ವಯಸ್ಸಿನಿಂದಲೇ ಇರಲಿಲ್ಲ. ಇದ್ದ ತಂದೆ ಬೇಜವಬ್ದಾರಿಯಿಂದ ಬದುಕಿದ. ನನ್ನ ಜೀವನದಲ್ಲಿ ಕ್ಯಾತರಿನ್ ಬಂದಾಗ ಅವಳ ಪ್ರೀತಿ ನನಗೇನೊ ಹೊಸ ಪ್ರಪಂಚವನ್ನೆ ತೋರಿತು. ಆದರೆ ಆಕೆ ಬೌದ್ಧಿಕ ದಾಹದಿಂದ ಕೂಡಿದವಳು. ಅಂತಹ ಆಲೋಚನೆಗಳಿಂದ ಹುಟ್ಟುವ ನೀತಿ ಸಂಹಿತೆಗಳನ್ನು ಜೀವನದಲ್ಲಿ ಪ್ರಾಯೋಗಿಕ ಮಟ್ಟದಲ್ಲಿ ಕ್ರಿಯಾತ್ಮಕವಾಗಿ ಕಾಣಲು ಬಯಸುವವಳು. ಅವಳ ಆ ಭಾಗ ನನಗೆ ಅಪರಿಚಿತವಾಗೆ ಉಳಿಯಿತು. ನೀವು ಶುದ್ಧ ಭಾರತೀಯರು. ಕ್ಯಾತರಿನ್ ರೋಸಿಕೊಂಡು ಹೇಳುವ ಪ್ರಕಾರ ಮೇಧಾವಿಗಳು, ಬುದ್ಧಿಜೀವಿಗಳು, ಆದರೆ ಕ್ಯಾತರಿನ್‌ಳಂತೆ ತನ್ನೆಲ್ಲಾ ವಿಚಾರವನ್ನು ಬೇರೊಬ್ಬರ ಇಷ್ಟಕ್ಕೆ ವಿರೋಧವಾಗಿ ಆ ಬೇರೊಬ್ಬರ ಮೇಲೆ ಹೇರುವ ಪ್ರಭುತ್ವದ ಧೋರಣೆ ನಿಮಗಿಲ್ಲ. ನೀವು ಕ್ಯಾತರಿನ್ ಮಾತನಾಡುವಾಗ ನೀವು ಬಾಯ್ತೆರೆದುದೆ ಅಪರೂಪ… ಅದಕ್ಕೆ ಇತ್ತೀಚೆಗೆ ಕ್ಯಾತರಿನ್‌ಗಿಂತ ನೀವೆ ನನಗೆ ಆಪ್ತರಾಗಿ ಕಾಣುತ್ತೀರಿ.” ಆತ ಕುಡಿದು ಕುಡಿದು ತೀರಾ ಭಾವೋದ್ವೇಗನಾಗಿ ನನ್ನನ್ನಪ್ಪಿ ಮುದ್ದಿಸಿದ. ಕ್ಯಾತರಿನ್‌ಳನ್ನು ಬಯ್ಯತೊಡಗಿದ. ಆತನನ್ನು ಅಲ್ಲಿಂದ ಬಲವಂತವಾಗಿ ಎಬ್ಬಿಸಿ ಕಾರ್ ಡ್ರೈವ್ ಮಾಡಲು ಬಿಡದೆ ಹೆಗಲು ಆಸರೆ ಕೊಟ್ಟು ಪ್ರವಾಸಿಮಂದಿರಕ್ಕೆ ನಡೆಸಿಕೊಂಡೇ ಕರೆತಂದೆ.
ಪೊಣ್ಣಪ್ಪ ಆಗಲೆ ಕುಡಿದು ತನ್ನ ಕೋಣೆಯ ದೀಪವನ್ನಾರಿಸಿ ಗಾಢ ನಿದ್ದೆಯಲ್ಲಿದ್ದುದು ಸ್ಪಷ್ಟವಿತ್ತು. ಕ್ಯಾತರಿನ್‌ಳೆ ಬಾರಿನಿಂದ ಕಾರನ್ನು ತಂದಳು. ಬಾರಿಗೆ ಹೋಗುವಾಗ ದಾರಿಯಲ್ಲಿ ಏನನ್ನೂ ಮಾತಾಡಲಿಲ್ಲ. ಅವಳು ಬೇರೆಲ್ಲರ ಹಾಗೆ ವೈಯಕ್ತಿಕ ವಿಚಾರಗಳನ್ನು ಸಲೀಸಾಗಿ ಬಿಟ್ಟುಕೊಡುವಷ್ಟು ಸುಲಭದ ಹೆಣ್ಣಾಗಿರಲಿಲ್ಲ. ತನ್ನ ಮಾತುಗಳಲ್ಲಿ ವೈಯಕ್ತಿಕ ವಿಚಾರ ನುಸುಳಲು ಅವಕಾಶ ಕೊಡದಷ್ಟು ಜಾಗೃತೆ ವಹಿಸುತ್ತಿದ್ದುದರಿಂದಲೆ ಆಕೆಗೆ ಬೇರೆಯವರ ಮೇಲೆ ಹಿಡಿತ ಸಾಧಿಸುವಂತಾಗಿತ್ತು. ದಾರಿಯಲ್ಲಿ ಮಡಿಕೇರಿಯ ಮೇಲೆ ಬ್ರಿಟೀಷರ ಪ್ರಭಾವದ ಅವಶೇಷಗಳ ಶೇಷ ಭಾಗವನ್ನು ಚರ್ಚಿಸಿದೆವು. ರಸ್ತೆ, ಕಟ್ಟಡ, ನಗರಯೋಜನೆ, ಜನಜೀವನದ ನಡವಳಿಕೆ ಇತ್ಯಾದಿಗಳನ್ನು ನಾನು ಉದಾಹರಿಸಿ ಮಾತನಾಡುತ್ತಿದ್ದುದನ್ನು ಕೇಳಿದಳು, ಮೊದಲಬಾರಿಗೆ ನಾನು ಮಾತನಾಡುವಾಗ ಸುಮ್ಮನೆ ಇದ್ದ ಆಕೆಯ ಮೌನದಲ್ಲಿ ನಗ್ನವಿಚಾರದೊಂದಿಗೆ ಸಮ್ಮತಿಯ ಬದಲು ತಿರಸ್ಕರಿಸುವ ಕಾಠಿಣ್ಯತೆ ಇತ್ತು. ಕಾರು ಪ್ರವಾಸಿಮಂದಿರಕ್ಕೆ ಬಂದ ಮೇಲೆ ತನ್ನ ಕೋಣೆಗೆ ಹೋಗುವಾಗ ನನ್ನ ಕಡೆ ಕ್ರೋಧದಿಂದ ನೋಡಿ ಮಾತಿನ ತುಣುಕೊಂದನ್ನು ಎಸೆದಳು: “ನೀನು ಬಹಳ ಬುದ್ಧಿವಂತ, ಘಾಟಿ. ನಾನಂದುಕೊಂಡಿದ್ದಕ್ಕಿಂತಲೂ ಹೆಚ್ಚಿನವ…”
ಮಡಿಕೇರಿಯಿಂದ ಪುನಃ ಹಿಂತಿರುಗಿ ಹೊರಟ ಮೇಲೆ ದಾರಿಯಲ್ಲಿ ನನ್ನ ಬಳಿ ಪೊಣ್ಣಪ್ಪನನ್ನು ಬಿಟ್ಟರೆ ಅವರಿಬ್ಬರೂ ಏನೊಂದನ್ನೂ ಮಾತನಾಡಲಿಲ್ಲ. ಪರಸ್ಪರ ಅವರಿಬ್ಬರೂ ಮಾತನಾಡಲಿಲ್ಲ. ಆಕೆಯಂತೂ ಕಾರಿನಲ್ಲಿ, ಪುಸ್ತಕದಲ್ಲಿ ಮುಖ ಹುದುಗಿಸಿದವಳು ಮೇಲೆತ್ತಲಿಲ್ಲ.
ನಾನು ಮತ್ತೆ ಪುನಃ ಎರಡು ದಿನದನಂತರ ಮೂರು ದಿನ ಮಡಿಕೇರಿಗೆ ಹೋದವನು ಅಲ್ಲೇ ಉಳಿದುಕೊಳ್ಳಬೇಕಾಯ್ತು. ಹಿಂತಿರುಗಿ ಬಂದಾಗ ಬಂಗಲೆಯಲ್ಲಿ ಒಂದೇ ರಗಳೆಯೆಂದು ಸುದ್ಧಿ ತಿಳಿಯಿತು. ಆ ಸಂಜೆ ಬಂಗಲೆಯ ಕಡೆ ಹೊರಟಾಗ ದಾರಿಯಲ್ಲಿ ಸಿಕ್ಕ ಪೊಣ್ಣಪ್ಪ – ಮಂದಣ್ಣ ಬುದ್ಧಿ ಸ್ಥಿಮಿತದಲ್ಲಿಲ್ಲದವನಂತೆ ಆಡುತ್ತಿದ್ದಾನೆಂತಲೂ, ಹಿಂದಿನ ದಿನ ಎಸ್ಟೇಟಿಗೆ ನುಗ್ಗಿದ ಸಲಗವನ್ನು ಓಡಿಸದೆ ಸುಟ್ಟು, ಪೊಲೀಸಿನವರದು ರೇಂಜ್ ಅಧಿಕಾರಿಗಳ ತಾಪತ್ರಯ ಅತಿಯಾಗಿದೆಯೆಂದೂ , ಮಂದಣ್ಣ ಲಂಚ ಕೊಡಲು ನಿರಾಕರಿಸುತ್ತಿದ್ದಾನೆಂತಲು, ತಾನು ಎಲ್ಲಾ ವ್ಯವಹಾರವನ್ನು ಸರಿದೂಗಿಸಲು ಪ್ರಯತ್ನಿಸುತ್ತಿರುವುದಾಗಿ ನಾನೊಂದೆರಡು ಮಾತುಗಳನ್ನು ಮಂದಣ್ಣನಿಗೆ ಹೇಳಬೇಕೆಂತಲೂ ಹೇಳಿ ಹೋದ.
ನಾನು ಬಂಗಲೆಗೆ ಹೋದಾಗ ಮಂದಣ್ಣನಿಗೆ ವೈದ್ಯರು ನಿದ್ರೆ ಔಷಧಿಯ ಇಂಜೆಕ್ಷನ್ ಕೊಟ್ಟಿದ್ದರಿಂದ ನಿದ್ದೆ ಹೋಗಿದ್ದ. ಕ್ಯಾತರಿನ್ ಕೋಣೆಗೆ ಹೋದೆ. ಅವಳ ಕಠಿಣವಾದ ಮುಖದ ಸಪ್ಪೆ ಕಣ್ಣುಗಳಲ್ಲಿ ನೀರು ತುಂಬಿತ್ತು. ನನ್ನನ್ನು ನೋಡಿ ಒರೆಸಿಕೊಂಡಳು. ನಾನು ಸುಮ್ಮನೆ ಅವಳೆದುರಿಗೆ ಕುಳಿತೆ. ಅಂದು ಅವಳು ಮಾತನಾಡಿದುದು ಪೂರ್ತಿ ವೈಯಕ್ತಿಕವಾಗಿತ್ತು. ಅದೂ ಸಹ ನಾನು ಕೇಳದೆಯೆ.
“ನಮ್ಮಮ್ಮ ಭಾರತೀಯಳು. ಬಾರತವನ್ನ ನೋಡಬೇಕಂತ ಬಂದವಳು ಇಲ್ಲಿಯೇ ಉಳಿದುಕೊಂಡೆ. ಸಂಶೋಧನೆಗೆಂದು. ಒಂಟಿಯಾಗಿ ಅನಾಥನಂತೆ ಕಾಡಿನಲ್ಲಿ ಬೆಳೆದಿದ್ದ ಮಂದಣ್ಣ ಅನಪೇಕ್ಷಿತವಾಗಿ ನನಗೆ ಅಂಟಿಕೊಂಡ. ನನ್ನ ಸಾಂಗತ್ಯ ಅವನಿಗೆ ಅನಿವಾಯವಾಗಿದ್ದುದನ್ನು ಗುರುತಿಸಿದ ನಾನೇ ಅವನನ್ನು ಮದುವೆಯಾದೆ. ಎಳೆ ಮಗುವಿನಂತೆ ನನ್ನ ಹಿಂದೆ ಸುತ್ತುತ್ತಿದ್ದ. ಹಾಗೆ ಹೇಳಲು ಹೋದರೆ ಗುಲಾಮನಾಗಿದ್ದ. ಹೀಗೆ ಸ್ಪರ್ಧೆಯೇ ಇಲ್ಲದ ಆಸಕ್ತಿರಹಿತವಾದ ಬದುಕು ದುರ್ಬರವೆನಿಸತೊಡಗಿದಂತೆ ನನ್ನ ಅವನ ನಡುವೆ ಕಂದರ ಅಗಾಧವಾಗತೊಡಗಿತು. ಅದನ್ನು ಅವನೂ ಗುರುತಿಸಿದ. ಆದರೆ ಅವನು ನನ್ನಿಂದ ಸ್ಪರ್ಧೆಯನ್ನು ಎದುರು ನೋಡದೆ ಒಣ ಪ್ರೀತಿಯನ್ನು ಎದುರು ನೋಡಿದ್ದು ಅವನ ಸ್ಥಿತಿಗೆ ಅನಿವಾರ್ಯವಿರಬಹುದು, ಪುನಃ ಕುಡಿಯಲಾರಂಭಿಸಿದ. ಅನುಚಿತವಾಗಿ ನಡೆದುಕೊಳ್ಳತೊಡಗಿದ. ಲೈಂಗಿಕವಾಗಿ ಹಿಂಸಿಸಲಾರಂಭಿಸಿದ. ಅವನ ಕಡೆಯಿಂದ ನನ್ನ ಬಗ್ಗೆ ಧ್ವೇಷಭರಿತವಾದ ಪ್ರೀತಿಯ ಸಂಬಂಧ ರೂಪುಗೊಳ್ಳುತ್ತಿದ್ದುದನ್ನು ಕಂಡು ಬೇಸರವಾಯ್ತು…. ಮೊನ್ನೆ ಮಡಿಕೇರಿಯಲ್ಲಿ ನಾನು ಇದನ್ನೆಲ್ಲ ವಿವರಿಸಿ ವಿವಾಹರದ್ಧನ್ನು ಸೂಚಿಸಿದೆ. ಅಂದಿನಿಂದ ಅವನು ಈ ರೀತಿಯಾಗಿದ್ದಾನೆ… ನನ್ನ ಸ್ಥಿತೀನ ನೀನು ಅರ್ಥ ಮಾಡಿಕೊಳ್ಳಬಹುದು…” ಎಂದು ಅಡಗಿಸಿಟ್ಟಿದ್ದನ್ನೆಲ್ಲ ಹೊರ ಕಕ್ಕಿದಳು.
“ಹೌದು ಅರ್ಥವಾಗುತ್ತಿದೆ. ಎಷ್ಟೇ ಆಗಲಿ ನೀನು ಬ್ರಿಟೀಷ್ ತಂದೆಗೆ ಜನಿಸಿದವಳು…” ಎಂದೆ. ನನ್ನ ಧ್ವನಿಯಲ್ಲಿ ಅವಳ ಬಗ್ಗೆ ಕನಿಕರವಿರಲಿಲ್ಲ. ಕ್ರೌರ್ಯವಿತ್ತು.
“ಭಾರತೀಯರೆ ಹೀಗೆ.. ಛೆ” ಅವಳ ಧ್ವನಿಯಲ್ಲಿನ ತಿರಸ್ಕಾರಕ್ಕೆ ಕೋಪ ಭುಗಿಲ್ಲನೆ ಹತ್ತಿ ಉರಿದರೂ ಬೇರೇನಾದರು ಮಾತನಾಡುವುದು ಅನುಚಿತಪ್ರವೇಶವಾಗುತ್ತದೆಂದು ನಾನು ಅವಳ ಕೋಣೆಯಿಂದ, ಬಂಗಲೆಯಾಚೆ ಬಂದಾಗ, ಹೌದು ನಾನು ಆ ಬಂಗಲೆಯ ಕುಟುಂಬಕ್ಕೆ ಹತ್ತಿರದವನಾಗಲೇ ಬಾರದಿತ್ತು. ಇದೆಲ್ಲಿಯ ಕರ್ಮ. ನನ್ನ ಪ್ರಪಂಚವೆ ಬೇರೆ. ಇನ್ನು ಅಲ್ಲಿಗೆ ಹೋಗಲೇಬಾರದೆಂದುಕೊಂಡೆ.
ಮತ್ತೆ ನಾನು ಅಲ್ಲಿಗೆ ಹೋಗಲೇ ಇಲ್ಲ.
ಪೊಣ್ಣಪ್ಪ ಆಗಾಗ್ಗೆ ನಾಲೆ ಕೆಲಸದ ಬಳಿಯೇ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದ. ಈಗವನು ಒಂದು ರೀತಿಯಲ್ಲಿ ಸಮಾಧಾನಗೊಂಡಿದ್ದ. ಮಂದಣ್ಣನ ಜೀಪಾಗಲಿ, ಕಾರಾಗಲಿ ಆ ದಾರಿಯಲ್ಲಿ ಮತ್ತೆ ಕಾಣಲಿಲ್ಲ.
ಐದಾರು ವಾರದನಂತರ ಒಂದು ದಿನ ಕೂಲಿಗಾರರೆಲ್ಲ ಹೋ ಎಂದು ಹುಯಿಲಿಡಲಾರಂಭಿಸಿದರು. ದೂರದಲ್ಲಿ ಒಬ್ಬ ವ್ಯಕ್ತಿ ಬೆಂಕಿಯಲ್ಲಿ ಉರಿದು ಬೆಂದು ಹೋಗುತ್ತಿದ್ದ. ಉರಿ ತಾಳಲಾರದೆ ಆ ವ್ಯಕ್ತಿ ಆ ನಡು ಮದ್ಯಾಹ್ನದ ಬಿಸಿಲಿನಲ್ಲಿ ಗಿರಗಿರನೆ ಗಾಳಿಯಲ್ಲಿ ಸುತ್ತುತ್ತಿದ್ದ. ಗಾಳಿ ಇನ್ನೂ ಜೋರಾಗಿ ಬೆಂಕಿ ಚೆನ್ನಾಗಿ ಕಚ್ಚಿಕೊಂಡಿತು . ನಾನು ಸ್ಟೋರಿನಿಂದ ಕಂಬಳಿ ತರುವಂತೆ ಹೇಳಿ ಅತ್ತ ಓಡಿದಾಗ ಉರಿಯುತ್ತಿದ್ದ ವ್ಯಕ್ತಿ ತನ್ನ ಶರೀರಕ್ಕೆ ಚೆನ್ನಾಗಿ ಬಟ್ಟೆ ಸುತ್ತಿಕೊಂಡಿದ್ದುದು ಕಂಡಿತು. ಕೂಲಿಯಾಳು ತಂದ ಕಂಬಳಿಯನ್ನು ಉರಿಯುತ್ತಿದ್ದ ವ್ಯಕ್ತಿಯ ಮೇಲೆ ದೂರದಿಂದ ಎಸೆದು ನಂತರ ತಬ್ಬಿ ಹಿಡಿದು ಅವನನ್ನು ನೆಲಕ್ಕುರುಳಿಸಿದೆವು. ಬೆಂಕಿ ನಂದಿದನಂತರ ಕಂಬಳಿ ಬಿಚ್ಚಿದಾಗ ಮಂದಣ್ಣ ಪೂರ್ತಿ ಸುಟ್ಟು ಕರಕಲಾಗಿಹೋಗಿದ್ದ. ಕ್ಯಾತರಿನ್‌ಳ ನೈಲಾನ್ ಉಡುಪು ಕರಗಿ ದ್ರವವಾಗಿ ಮಂದಣ್ಣನ ಸುಟ್ಟ ಶರೀರದೊಂದಿಗೆ ಬೆಸೆದುಕೊಂಡಿತ್ತು. ಎಸ್ಟೇಟಿಗೆ ಆಳನ್ನು ಅಟ್ಟಿದೆ…
ಸುದ್ದಿ ತಿಳಿದು ಬಂದ ಸಬ್‌ಇನ್ಸ್‌ಪೆಕ್ಟರ್ ತನ್ನ ಅಧಿಕಾರಯುತ ತನಿಖೆಗಾರಂಭಿಸಿದ. ಈ ಭಾರಿ ಕ್ಯಾತರಿನ್ ಅಪಸ್ಮಾರ ಬಡಿದವಳಂತೆ ನಿಂತಿದ್ದಳು. ಆಕೆಯ ಬಗೆಗೆ ನಾನು ಕಳೆದ ಬಾರಿ ವ್ಯಕ್ತಪಡಿಸಿದ್ದ ಕ್ರೋಧದ ನ್ಯಾಯವನ್ನು ಮನಗಂಡಿದ್ದರೂ ತನ್ನ ಕಾಠಿಣ್ಯತೆಯನ್ನು ತಗ್ಗಿಸಿರಲಿಲ್ಲ.
ಮಂದಣ್ಣ ನನಗೊಂದು, ಇನ್ಸ್‌ಪೆಕ್ಟರಿಗೊಂದು ಪತ್ರವನ್ನು ಬಿಟ್ಟಿದ್ದ. ಇನ್ಸ್‌ಪೆಕ್ಟರಿನ ಪತ್ರದಲ್ಲಿ ತನ್ನ ಆತ್ಮಹತ್ಯೆಗೆ ತಾನೆ ಬಾಧ್ಯಸ್ಥನೆಂದಷ್ಟೆ ತಿಳಿಸಿದ್ದ. ನನಗೆ ಬರೆದಿದ್ದ ಪತ್ರದಲ್ಲಿ ತನ್ನ ದಾರುಣಮಯ ನಿರ್ಧಾರಕ್ಕೆ ಕಾರಣ ತನಗೆ ಅಸ್ಪಷ್ಟವೆಂದೂ ತಾನಿನ್ನೂ ಜೀವಂತವಾಗಿರಬಯಸಿದ್ದನೆಂದೂ ತಿಳಿಸಿದ್ದ. ತನಗೆ ಯಾರನ್ನು ಲೆಕ್ಕಕ್ಕೆ ತೆಗೆದುಕೊಂಡು ಪ್ರೀತಿಸಬೇಕೊ ತಿಳಿಯದೆಂದೂ, ಕಡೆಗೆ ನನ್ನನ್ನು, ಕ್ಯಾತರಿನ್‌ಳನ್ನು, ಪೊಣ್ಣಪ್ಪನನ್ನು ನಂಬದೆ ಕೇವಲ ಪ್ರೀತಿಸಿದ್ದನೆಂದು; ಅದು ತನಗೆ ಹಿಂತಿರುಗಿ ಬರಲಿಲ್ಲವೆಂದೂ ತಿಳಿಸಿ, ಅವ್ಯಕ್ತ ಕಾರಣಗಳಿಗಾಗಿ ನಮ್ಮನ್ನು ಕೃತಘ್ನರೆಂದು ಕರೆದಿದ್ದ!!
ನಾನು ಆ ಊರನ್ನು ಬಿಟ್ಟು ಬಂದೆ. ಮಂದಣ್ಣ ತನ್ನೆಲ್ಲ ಒಟ್ಟು ಆಸ್ತಿಯನ್ನು ಕ್ಯಾತರಿನ್‌ಳಿಗೆ ಬರೆದಿದ್ದ. ಕ್ಯಾತರಿನ್ ಅದನ್ನೆಲ್ಲಾ ಒಬ್ಬ ಬ್ರಿಟೀಷ್ ಮಿಲಿಟರಿ ಕಮಾಂಡರಿಗೆ [ರಿಟೈರ್ಡ್] ಮಾರಿ ಇಂಗ್ಲೆಂಡಿಗೆ ಹೊರಟುಹೋದಳು. ಆನಂತರ ಪ್ರೊಫೆಸರ್ [ಪಾಲ್] ಒಬ್ಬನನ್ನು ಮದುವೆಯಾಗಿರುವುದಾಗಿ ಪತ್ರ ಬರೆದಳು. ಪೊಣ್ಣಪ್ಪ ಈಗೆಲ್ಲೋ ನೀಲಗಿರಿಯಲ್ಲಿ ಏನೋ ವ್ಯಾಪಾರ ಮಾಡಿಕೊಂಡಿದ್ದಾನಂತೆ.
ನಾನು ನಿಮಗೆ ತಿಳಿಸಿರುವ ದಾರುಣಮಯ ಘಟನೆಯ ಮೇಲ್ಮೈ ವಿವರ ಅದರ ಬಂಧದ ಮೂಲದಲ್ಲಿ ಆಗಾಗ ನೆನೆಪಿಗೆ ಬಂದರೂ, ಅದರ ಬಗೆಗೆ ವಿಶ್ಲೇಷಿಸಲು ಸಮಯವಿಲ್ಲದೆ… ಕಡೆಗೆ ಪ್ಯಾಕ್ಸ್ ಓ ಬ್ರಿಟನ್ ಎಂದು ಹೇಳಲೂ ಸಹ ಸಮಯವಿಲ್ಲದೆ ಈ ನಗರದ ಪ್ರಯೋಜನಕ್ಕೆ ಬಾರದ ಅನೇಕಾನೇಕ ಚಟುವಟಿಕೆಗಳ ಇತಿಮಿತಿಗಳಲ್ಲಿ ಕರಗಿಹೋಗಿದ್ದೇನೆ, ಒಂದುರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ…
*****
ತುಷಾರ [ಜುಲೈ,೧೯೮೦] ಮಾಸಿಕದಲ್ಲಿ ಪ್ರಕಟ. ಪ್ರಕಟಿಸಿದ ಈಶ್ವರಯ್ಯನವರಿಗೆ ನನ್ನ ಕೃತಜ್ಞತೆಗಳು.