Home / ಕಥೆ / ಸಣ್ಣ ಕಥೆ / ಕನಸೊಡೆದು ರಾಡಿಯಾಗಿ…

ಕನಸೊಡೆದು ರಾಡಿಯಾಗಿ…

ಶೋಭಾ,

ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ.

ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾಗಿತ್ತು. ನಿರ್ಧಾರದ ನೀರು ಹಾಕಿ ಆಸೆಯ ಚಿಗುರನ್ನು ಬೆಳೆಸುತ್ತಾ ಇದ್ದೇನೆ. ಯಾಕೆ ಗೊತ್ತಾ? ಇನ್ನೂ ನಾನು ಬಹಳ ವರ್‍ಷಗಳು ಬದುಕಬೇಕಾಗಿದೆ. ಜೀವನ ಮಾಡಬೇಕಾಗಿದೆ.

“ಅಂತೂ ನಿನ್ನ ಪ್ರಕಾರವೇ ಆಡಂಬರವಿಲ್ಲದೆ, ಓಲಗವಿಲ್ಲದೆ ಸರಳವಾಗಿ ರಿಜಿಸ್ಟರ್‍ಡ್ ಮದುವೆಯನ್ನು, ಅದೂ ಮೆಚ್ಚಿದವನೊಂದಿಗೆ ಮಾಡಿಕೊಂಡೆ. ನಿನ್ನ ಗಂಡ ಹೇಗಿದ್ದಾನೆ? ತುಂಬಾ ಪ್ರೀತಿಸ್ತಾನಾ? ನೋಡಲು ತುಂಬಾ ಸುಂದರವೇನು? ಹನಿಮೂನ್ ಗದ್ದಲದಲ್ಲಿ ಶೋಭಾಳನ್ನು ಮರೆತು ಬಿಟ್ಟಿದ್ದೀಯಲ್ಲೆ” ಎಂದು ದೂರಿದ್ದೀಯಾ. ನಿನ್ನ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬಹುದು.

ಹೌದು ಶೋಭಾ, ನನ್ನಂತೆಯೇ ನನ್ನ ಆಸೆಯಂತೆಯೇ ನನ್ನ ಮದುವೆ ಆಯಿತು. ಆದರೆ ನನ್ನ ಗಂಡ ಎಲ್ಲರಂಥವನಲ್ಲ ಕಣೆ!

ಒಂದೇ ಕಾಲೇಜಿನಲ್ಲಿ ನಾವಿಬ್ಬರೂ ಉಪನ್ಯಾಸಕರು. ಪ್ರತಿ ವಾರ ಸಾಹಿತ್ಯಗೋಷ್ಠಿ ವಿಚಾರಗೋಷ್ಠಿಗಳ ನೆಪದಿಂದ ತುಂಬಾ ಹತ್ತಿರವಾದೆವು. ಅವರ ಮಾತಿನ ವೈಖರಿ, ಧೈರ್‍ಯ, ಬಂಡಾಯ ಪ್ರವೃತ್ತಿಗೆ ಮೆಚ್ಚಿ ಮರುಳಾಗಿಬಿಟ್ಟಿದ್ದೆ. ಹೇಳಲಾಗದ ಅವ್ಯಕ್ತ ಭಾವನೆ, ಎಂದೂ ಆರದಿದ್ದ ಆಕರ್ಷಣೆಯ ಸೆಳೆತಕ್ಕೆ ಸಿಕ್ಕಿದ್ದೆ. ಮಾತುಗಳ ಮಧ್ಯೆ ಅಕಸ್ಮಾತ್ ಅವರ ಬೆರಳುಗಳು ತಾಗಿದರೆ ವಿದ್ಯುತ್ ತಗುಲಿದವಳಂತೆ ಬೆಚ್ಚಿ ಬೀಳುತ್ತಿದ್ದೆ. ಕಾಲೇಜು, ಲೈಬ್ರರಿ, ಕಾಲೇಜಿನ ಪಾರ್ಕು ಎಲ್ಲಾ ಕಡೆಯೂ ಓಡಾಡುತ್ತಿದ್ದೆವು. ಅವರ ನೆನಪನ್ನು ಒಂದು ಕ್ಷಣವೂ ಕಿತ್ತೊಗೆಯಲಾರದಂತಾಗಿದ್ದೆ. ಆಗೆಲ್ಲಾ ಯೋಚಿಸುತ್ತಿದ್ದೆ! ಓಹ್ ನಾನೆಷ್ಟು ಸುಖಿ, ನಾನೀಗ ಅವರನ್ನು ಪ್ರೀತಿಸುತ್ತಿದ್ದೇನೆ, ಎಷ್ಟು ಸುಂದರ ಎಷ್ಟು ಅದ್ಭುತ! ಎಂದುಕೊಳ್ಳುತ್ತಿದ್ದೆ.

ಒಂದು ಕ್ಷಣ ಅಷ್ಟೆ! ಪುನಃ ಅಗಾಧ ನಿರಾಶೆಯ ಕೂಪದಲ್ಲಿ ಬೀಳುತ್ತಿದ್ದ ನನಗದು ಗೊತ್ತಿತ್ತು. ಅವರಿಗೆ ಮದುವೆಯಾಗಿದೆ. ವಿವಾಹಿತನನ್ನು ಆಶಿಸುತ್ತಿರುವುದು ತಪ್ಪು, ತೀರಾ ಹಾಸ್ಯಾಸ್ಪದ ಎಂಬುದೂ ತಿಳಿದಿತ್ತು. ಆದರೆ ಅವರನ್ನು ಮನಸ್ಸಿನಿಂದ ಹೊರಗೆ ದೂಡಲು ಸಾಧ್ಯವಾಗುತ್ತಿರಲಿಲ್ಲ. ತನ್ನ ನಿರ್‍ಮಲ ಸ್ನೇಹ, ಪ್ರೀತಿ, ವಿಶ್ವಾಸದಿಂದ ನನ್ನಲ್ಲಿದ್ದ ಒಂಟಿತನದ ಭೂತವನ್ನು ಹೊಡೆದೋಡಿಸಿ ಜೀವನದಲ್ಲಿ ಬಣ್ಣ ಬಣ್ಣದ ಕನಸುಗಳನ್ನು ನನಸು ಮಾಡುತ್ತಿದ್ದರು. ಎಲ್ಲರೆದುರಿಗೆ ಧೈರ್ಯವಾಗಿಯೇ ಬರುತ್ತಿದ್ದರು, ಮಾತನಾಡುತ್ತಿದ್ದರು, ನಗುತ್ತಿದ್ದರು. ನಗಿಸುತ್ತಿದ್ದರು. ಎಲ್ಲವನ್ನೂ ನನಗಾಗಿ ಮಾಡುತ್ತಿದ್ದರು. ಎಂದೂ ಯಾರ ಮೇಲೆಯೂ ಬಾರದ ಮಧುರ ಭಾವನೆಗಳು ಮೂಡಿಬರುತ್ತಿದ್ದವು. ಅವರ ಹೆಂಡತಿ ಸುಂದರಿ, ತುಂಬಾ ಐಶ್ವರ್‍ಯವಂತೆ ಎಂದೂ ಕೇಳಿದ್ದೆ. ಆದರೂ ಅನೇಕ ಬಾರಿ ಅಂದುಕೊಳ್ಳುತ್ತಿದ್ದೆ “ರಾಮು ನೀವು ನಂಗೆ ಬೇಕು. ನನ್ನೊಂದಿಗೆ ಇರಬೇಕು. ನೀವು ಬೇಕೇ ಬೇಕು.”

ಅದೊಂದು ದಿನ ಯಾರೂ ನಿರೀಕ್ಷಿಸಿರದ ಘಟನೆ ನಡೆದು ಹೋಯಿತು. ನಿರ್ಮಲ ಸ್ನೇಹ ವಿದ್ಯುತ್ಗೆ ತಗುಲಿ ಸುಟ್ಟು ಹೋಗಿತ್ತು.

ಆ ದಿನ ರಾತ್ರಿ,

ಕರೆಂಟ್ ಹೋದುದರಿಂದ ಮೇಜಿನ ಮೇಲೆ ಮೇಣದ ಬತ್ತಿ ಹಚ್ಚಿಕೊಂಡು ಓದುತ್ತಾ ಕುಳಿತಿದ್ದರು. ನಾನು ರೂಮಿನೊಳಗೆ ಬಂದು ಅವರೆದುರಿಗೆ ನಿಂತಿದ್ದೆ.

ಮೇಣದ ಬತ್ತಿಯ ಮಂದ ಬೆಳಕು ಮೆಲುವಾಗಿ ಅಲುಗಾಡುತ್ತಿತ್ತು. ಆ ನೆರಳು ಬೆಳಕಿನಾಟದಲ್ಲಿ ಸುಂದರವಾಗಿ ಕಾಣುತ್ತಿದ್ದ ಅವರ ಮುಖವನ್ನೇ ದಿಟ್ಟಿಸಿದೆ.

ಅವರ ಕಣ್ಣುಗಳಲ್ಲಿನ ಹೊಳಪು, ತೀವ್ರತೆ ಕಣ್ಣು ಕೋರೈಸುವಂತಾಗಿ ಒಮ್ಮೆಲೇ ಇಡೀ ದೇಹ ನಿಧಾನವಾಗಿ ಕಂಪಿಸಿತು. ಕಣ್ಣು ಮುಚ್ಚಿಕೊಂಡೆ.

“ಜಾನಕೀ” ಪಿಸುಗುಟ್ಟಿದರು.

ನನಗೆ ಉಸಿರು ಕಟ್ಟಿದಂತಾಯಿತು. ಕಿವಿಯ ಬಳಿ ಬಂದ ಅವರ ದನಿ, ಆ ಬಿಸಿಯುಸಿರು – ಬವಳಿ ಬಂದಂತಾಯಿತು.

“ಏನು?” ಎನ್ನುವಂತೆ ಕಣ್ಣುಗಳನ್ನು ಅರೆತೆರೆದು ನೋಡಿದೆ.

“ದೀಪ ಆರಿಸಲಾ?”

“ಆಂ”

ಉರಿಯುತ್ತಿದ್ದ ಮೇಣದ ಬತ್ತಿಯ ಬೆಳಕು ಆರಿತು. ಆಶ್ಚರ್ಯದಿಂದ ಅರೆತೆರೆದಿದ್ದ ನನ್ನ ತುಟಿಗಳನ್ನು ತಮ್ಮ ತುಟಿಗಳಿಂದ ಬಲವಾಗಿ ಮುಚ್ಚಿದರು. ನನಗೆ ಸ್ಮೃತಿ ತಪ್ಪುವಂತಾಯಿತು. ಸಮತೋಲನ ಕಳೆದುಕೊಂಡವಳಂತೆ ಹಿಂದಕ್ಕೆ ವಾಲಿದ ನನ್ನೊಂದಿಗೆ ಮಂಚದ ಮೇಲೆ ಉರುಳಿದರು. ನನಗೆ ಯಾವುದೂ ಕೇಳಿಸುತ್ತಿರಲಿಲ್ಲ. ಯಾವುದೂ ಕಾಣಿಸುತ್ತಿರಲಿಲ್ಲ. ಮಂತ್ರ ಶಕ್ತಿಗೊಳಗಾದವಳಂತೆ ನಿಧಾನವಾಗಿ ಕತ್ತಲೆಯಲ್ಲೇ ಕಣ್ಣು ತೆರೆಯಲು ಪ್ರಯತ್ನಿಸುತ್ತಿದ್ದೆ.

ಅವರ ದೃಢಕಾಯ, ಒಮ್ಮೆ ಒರಟಾಗಿ, ಮತ್ತೊಮ್ಮೆ ಮೃದುವಾಗಿ ನನ್ನ ದೇಹವನ್ನು ಅಪ್ಪಿ ಹಿಡಿಯುತ್ತಿತ್ತು.

“ರಾಮು… ಬಿಡಿ… ಫ್ಲೀಸ್” ಬಹು ಪ್ರಯಾಸದಿಂದ ನುಡಿದು ಮೇಲೇಳಲು ಯತ್ನಿಸಿದೆ.

“ಜಾನಕಿ-ಜಾನಿ ಡಿಯರ್ ಐ ಲವ್ ಯೂ-ಐ ವಾಂಟ್ ಯೂ‌ಐ ವಾಂಟ್ ಯೂ ಮೈ ಏಂಜಲ್”

ಅವರ ಉನ್ಮಾದ ಏರುತ್ತಿತ್ತು. ಅದರೊಂದಿಗೆ ಅವರ ಹಿಡಿತ-ಆ ಬಿಸಿಯುಸಿರು.

“ನಾನು-ಮುಳುಗುತ್ತಿದ್ದೇನೆ-ಕಳೆದು ಹೋಗುತ್ತಿದ್ದೇನೆ.”

ನನ್ನ ಹೃದಯ ನರಳಿತು. ನಾಲಿಗೆ ಚಲಿಸಲಿಲ್ಲ. ನನಗರಿವಿಲ್ಲದೆ ನನ್ನ ಕೈಗಳು ಅವರ ವಿಶಾಲವಾದ ಬೆನ್ನನ್ನು ತಬ್ಬಿ ಹಿಡಿದಿದ್ದವು. ಆ ತೀವ್ರತೆ ಉನ್ಮಾದ ಇಳಿಯುವಂತೆಯೇ ಕಾಣಲಿಲ್ಲ. ಪುನಃ ಪುನಃ ಚುಂಬಿಸುತ್ತಿದ್ದರು. ಇಡೀ ದೇಹವನ್ನು ಮೇಣದ ಗೊಂಬೆಯಂತೆ ಮಾಡಿದ್ದರು. ಹುಚ್ಚು ಹೊಳೆಯಲ್ಲಿ ನಾನು ತೇಲಿ ಹೋಗಿದ್ದೆ.

ಎಷ್ಟೋ ಹೊತ್ತಿನ ನಂತರ, ಹಗುರಾಗಿ ಮೈಚೆಲ್ಲಿ ಮಲಗಿದ್ದ ಅವರತ್ತ ತಿರುಗಿ

“ರಾಮು” ಮೆಲ್ಲನೆ ಕರೆದೆ.

“ಹೂಂ”

“ನಿದ್ದೆ ಮಾಡ್ತಾ ಇದ್ದೀರಾ?”

“ಊಹೂಂ, ಏನೋ ಅಮಲು, ಯಾವುದೋ ಲೋಕದಲ್ಲಿರುವಂತೆ ಅನ್ನಿಸ್ತಾ ಇದೆ. ಕಣ್ಣು ಬಿಡಲು ಮನಸ್ಸೇ ಆಗ್ತಾ ಇಲ್ಲ.”

ನಾನು ನಿಧಾನವಾಗಿ ಮೇಲೆದ್ದೆ. ಅಸ್ತವ್ಯಸ್ತನಾಗಿದ್ದ ಸೀರೆಯನ್ನು ಸರಿಪಡಿಸಿಕೊಂಡು ಕೆದರಿದ ಕೂದಲ ರಾಶಿಯನ್ನು ಕತ್ತಲೆಯಲ್ಲೇ ತೀಡಿ ಸರಿಪಡಿಸಿಕೊಳ್ಳುತ್ತಾ,

“ಇನ್ನೂ ಕರೆಂಟ್ ಬಂದಿಲ್ಲಾಂತ ಕಾಣುತ್ತೆ” ಎನ್ನುತ್ತಾ ಕಿಟಕಿಯ ಬಾಗಿಲು ತೆರೆದೆ.

ಹೊರಗಿನ ಬೆಳಕು ಕಣ್ಣು ಚುಚ್ಚಿದಂತಾಗಿ ಹಿಂದೆ ಸರಿದೆ.

“ರಾಮು ಕರೆಂಟ್ ಬಂದಿದೆ ನೋಡಿ, ಏಯ್ ರಾಮು.”

ಹತ್ತಿರ ಹೋದ ನನ್ನನ್ನು ಬಳಸಿ ಹಿಡಿದು ಮೈಮೇಲೆ ಎಳೆದುಕೊಂಡು,

“ನಾನೇ ಸ್ವಿಚ್ ಆರಿಸಿದ್ದೆ.” ಎಂದರು ನಿಧಾನವಾಗಿ

“ಆಂ”

“ಹೌದು ಜಾನಿ, ನಿನ್ನ ಚತುರತೆ, ಜಾಣ್ಮೆ ಮಾತು ಎಲ್ಲವನ್ನೂ ಕಣ್ಣುಗಳಲ್ಲೇ ಹೀರಿದರೂ ಸಾಲದಾಗಿತ್ತು. ನಂಗೆ ನೀನು ಬೇಕೇ ಬೇಕು ಎಂಬ ಅನಿಸಿಕೆ ಬಲವಾದಾಗ ಈ ಉಪಾಯ ಯೋಚಿಸಬೇಕಾಯಿತು. ಹೌದು, ನಾನು ವಿವಾಹಿತನಿರಬಹುದು. ನನ್ನ ಶಕ್ತಿಯ ಅರಿವು ನನಗೆ ಈಗ ಆಗ್ತಾ ಇದೆ. ನನ್ನ ದೇಹಕ್ಕೆ ಯಾವುದೋ ಚೈತನ್ಯ ತುಂಬಿತು, ಜೀವ ಬಂದಿತು. ಉಸಿರು ಬಂದಿತು ಅನ್ನಿಸ್ತಾ ಇದೆ.”

ಯಾಕೋ ಒಮ್ಮೆಲೆ ನನಗೆ ಅಳು ನುಗ್ಗಿ ಬಂದಿತು.

“ಯಾಕೆ ನಂಗೀರೀತಿ ಮೋಸ ಮಾಡಿದ್ರಿ?”

“ಏನಾಯ್ತು? ಏ ಜಾನಕಿ ಯಾಕಳ್ತೀಯಾ?”

“ನಾನೀಗ ಏನನ್ನೂ ಉಳಿಸಿಕೊಂಡಿಲ್ಲ.”

ನನ್ನ ಅಳು-ದುಃಖ ಬಿಕ್ಕಳಿಕೆ ನಿಲ್ಲುವ ಸೂಚನೆ ತೋರದಿದ್ದಾಗ ಅವರಿಗೆ ಗಾಬರಿಯಾಯಿತು.

“ನೀನು ಕಳೆದುಕೊಂಡಿಲ್ಲ. ಹುಚ್ಚಿ ದಾನ ಮಾಡಿದ್ದೀಯಾ.”

“ಹೌದು ಮೈ ದಾನ ಮಾಡಿದ್ದೇನೆ.”

ಅವರಿಂದ ದೂರ ಸರಿದು ಮೇಲೇಳಲು ಯತ್ನಿಸಿದಾಗ ಜೋಲಿ ತಪ್ಪಿ ಬೀಳುವಂತಾಯಿತು. ಜಾರಿದ ಸೆರಗನ್ನು ಎದೆಗೆ ಒತ್ತಿ ಹಿಡಿದು ಕೊಂಡೆ. ಕೆದರಿದ ಕೂದಲು-ದುಗುಡ ತುಂಬಿದ ಮುಖ-ಉರಿಯುತ್ತಿದ್ದ ತುಟಿಗಳು ಕೆಂಪೇರಿದ್ದ ಕೆನ್ನೆಗಳು, ಮುಂದೆ ನೋಡಿಕೊಳ್ಳುವ ಧೈರ್ಯ ನನಗಿರಲಿಲ್ಲ. ಅಂಗೈಯಿಂದ ಬಲವಾಗಿ ಮುಖವನ್ನು ಮುಚ್ಚಿಕೊಂಡೆ. ಹೆಚ್ಚು ಹೊತ್ತು ನಿಲ್ಲಲಾರದೇ ಕುಸಿದು ಕುಳಿತೆ.

ಏನಾಗಿ ಹೋಯಿತು? ತಾನೆಂತಹ ಕಾರ್ಯ ಮಾಡಿಬಿಟ್ಟೆ? ಕಂಡೂ ಕಂಡೂ ಪ್ರಪಾತಕ್ಕೆ ಬಿದ್ದೆನೆ? ಇಷ್ಟು ದಿನಗಳೂ ‘ಶೀಲ’ದ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡುತ್ತಿದ್ದ ತಾನು ಮಾಡಿದ್ದಾದರೂ ಏನು? ತನಗೂ ಇದರ ಅಗತ್ಯವಿತ್ತೆ?

“ಕಾಮ ಪ್ರೇಮಕ್ಕೆ ಪೂರಕ, ಪ್ರೇಮ ಬೇರೆ. ಕಾಮ ಬೇರೆ” ಎಂದು ವಿಚಾರಗೋಷ್ಠಿ ಮಾಡುತ್ತಾ ವಾರಗಳನ್ನು ಕಳೆಯುತ್ತಿದ್ದ ತಾನು ‘ಪ್ರೇಮ’ ಎಂದರೇನು ಎನ್ನುವ ಮೊದಲೇ ಕಾಮಕ್ಕೆ ಬಲಿಯಾದೆನಲ್ಲ! ನಾನು ಅವರನ್ನು ನಂಬಿಬಿಟ್ಟಿದ್ದೆ. ತುಂಬಾ ಪ್ರೀತಿಸಿದ್ದೆ. ಮಾತುಗಳಿಗೆ ಮರುಳಾಗಿದ್ದೆ. ಆ ವೇಗದಲ್ಲಿ ಏನೂ ಮಾಡಿದರೂ ಕಡಿಮೆಯೆಂಬ ಬಾವುಕತೆಯಲ್ಲಿ ಎಲ್ಲವನ್ನೂ ಅರ್ಪಿಸಿಬಿಟ್ಟಿದ್ದೆ. ಒಂದು ಕ್ಷಣದಲ್ಲಿ ನನಗೆ ನನ್ನ ದೇಹಕ್ಕೆ, ವ್ಯಕ್ತಿತ್ವಕ್ಕೆ, ಘನತೆಗೆ ನಾನೇ ಕೈಯಾರೆ ಕೊಳ್ಳಿ ಇಟ್ಟುಕೊಂಡಿದ್ದೆ.

ನನ್ನ ಗಂಟಲು ಕಟ್ಟಿ ಬರುತ್ತಿತ್ತು. ದುಃಖ ಉಮ್ಮಳಿಸಿ ಬರುತ್ತಿತ್ತು.

‘ಜಾನಕಿ, ನನ್ನ ನಂಬು, ನಿಂಗೆ ಮೋಸ ಮಾಡಿಲ್ಲ. ಮಾಡಲಾರೆ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ.’ ನನ್ನನ್ನು ಸಂತೈಸಲು ಬಹಳ ಪ್ರಯತ್ನ ಮಾಡುತ್ತಿದ್ದರು.

“ನನಗೆ ಮದುವೆಯಾಗಿದ್ದರೇನಾಯಿತು? ನಾನಾಗಿಯೇ ನಿನ್ನನ್ನು ಬಯಸಿ ಬಂದಿದ್ದೇನೆ. ನನ್ನ ಪ್ರೀತಿ, ಮಾತು ಎಲ್ಲಾ ಸುಳ್ಳು ಎಂದುಕೊಂಡೆಯಾ?”

ನನ್ನ ಕಣ್ಣುಗಳಿಂದ ಕಂಬನಿ ಹನಿಹನಿಯಾಗಿ ಅವರ ಕೈಗಳ ಮೇಲೆ ಬೀಳುತ್ತಿತ್ತು.

“ನಿಜ ಹೇಳು, ನಿನಗೂ ನನ್ನ ಅವಶ್ಯಕತೆ ಇರಲಿಲ್ಲವಾ? ನಿನ್ನ ದೇಹದ ಅಣು ಅಣುವೂ ನನಗೆ ಉತ್ತರ ಕೊಟ್ಟಿದೆ ಜಾನಿ. ನನ್ನ ಭಾವನೆಗಳಿಗೆ… ಉದ್ರೇಕಕ್ಕೆ ಸ್ಪಂದಿಸದೆ.”

ಒಂದು ಕ್ಷಣ ನಿಲ್ಲಿಸಿದರು.

“ನಿಂಗೆ ದ್ರೋಹ ಮಾಡೇಕೂಂತ ನಾನು ನಿನ್ನ ಸ್ನೇಹ ಬಯಸಲಿಲ್ಲ. ಹೊಸ ಆನಂದ ನನಗಾಗುತ್ತಿತ್ತು. ಈ ‘ಘಳಿಗೆ’ ನಿನಗೆ ಕೆಟ್ಟದೆನಿಸಿರಬಹುದು ಆದರೆ ನೀನು ಪೂರ್ತಿ ನನ್ನವಳಾಗಿದ್ದೆ. ನಿನ್ನನ್ನು ನೋಡಿದರೆ ಮಾತನಾಡಿದರೆ ಆಗುವ ಆನಂದ ನನಗೆ ಬೇರೆಲ್ಲಿಯೂ ಸಿಗದು. ನನ್ನ ನಂಬು. ನಿನ್ನನ್ನು ಅವಮಾನಿಸಿಲ್ಲ. ನೀನು ಮೈಯನ್ನು ದಾನ ಮಾಡಿದೇಂತ ಏನೇನಾದ್ರೂ ಅಂದ್ಯೊ ಆ ದಾನ ಸ್ವೀಕರಿಸಿದ ‘ಯೋಗ’ ನನ್ನದೂಂತ ನಂಗೆ ಹೆಮ್ಮೆ. ನೀನು ಅಪಾತ್ರ ದಾನ ಮಾಡಿಲ್ಲ.”

ಪರವಶತೆಯಿಂದ ಹೇಳುತ್ತಿದ್ದರು.

“ಸಮಾಜ ಸೃಷ್ಟಿಸಿದ ಈ ಕುರುಡು ಬಂಧನದ ಅಗತ್ಯವಿದೆಯಾ? ‘ಹೆಣ್ಣು ಅಬಲೆ’ ಎಂದರೆ ಸಿಡಿದುಬೀಳುತ್ತಿದ್ದ ನೀನೇಕೆ ಸಾಮಾನ್ಯ ಹೆಣ್ಣಿನಂತೆ ಅಳುತ್ತಿದ್ದೀಯಾ? ಯು ಆರ್ ವೆರಿ ಇಂಟೆಲಿಜೆಂಟ್ ಆಂಡ್ ಬೋಲ್ಡ್. ನಿಜಜೀವನದಲ್ಲಿ ನೀನೇ ಪ್ರಮುಖಳು. ಉಳಿದವೆಲ್ಲಾ ನಿನಗೆ ಪಕ್ಕವಾದ್ಯಗಳಿದ್ದಂತೆ.”

ನಿಧಾನವಾಗಿ ಬಾಗಿ ದಿಂಬಿನಲ್ಲಿ ಹುದುಗಿದ್ದ ಕಣ್ಣೀರು ತುಂಬಿದ ನನ್ನ ಮುಖವನ್ನು ಬೊಗಸೆಯಲ್ಲಿ ಹಿಡಿದು, ಕಣ್ಣಲ್ಲಿ ಕಣ್ಣಿಟ್ಟು ಹೇಳಿದರು.

“ಜಾನಿ… ಏಯ್ ಜಾನಕಿ… ನೋಡಿಲ್ಲಿ” ಪೂರ್‍ತಿ ಕಣ್ಣು ಬಿಡು, ತಾಳಿ ಕಟ್ಟಿದರೆ ಮಾತ್ರ ಹೆಂಡತಿಯೇನು? ಶಾಸ್ತ್ರಿಗಳ ಮುಂದೆ ನಡೆಯುವ ಶಾಸ್ತ್ರಗಳು ಮದ್ವೆ ಅನಿಸಿಕೊಳ್ಳಲ್ಲ. ನನ್ನ ಮಟ್ಟಿಗೆ, ನಾನು ನಿನ್ನ ಎಂದೋ ವರಿಸಿಬಿಟ್ಟಿದ್ದೇನೆ. ಪೂರ್ಣ ತೃಪ್ತಿ ಈ ಪರಿಪೂರ್ಣತೆಯನ್ನು ಯಾರೂ ಕೊಡಲಾರರು. ಮದುವೆಯೇ ಮುಖ್ಯ ಅಗತ್ಯ ಅನ್ನಿಸಿದರೆ ಕಂಡಿತಾ ಆಗೋಣ, ಏನಂತೀಯಾ?”

“ಏನು ಹೇಳಲಿ?”

ಒಂದು ದಿನ ಬೆಳಗಾಗುವುದರಲ್ಲಿ ಮನೆಯವರನ್ನೆಲ್ಲಾ ದೂರ ಮಾಡಿಕೊಂಡು ಅವರನ್ನು ಗಂಡನನ್ನಾಗಿ ಮಾಡಿಕೊಂಡಿದ್ದೆ. ಅವರು ಮಾಡಿದ ಎಂಜಲನ್ನು ಅವರಿಗೇ ಅರ್ಪಿಸಿಬಿಟ್ಟಿದ್ದೆ. ಅಮ್ಮ ಸಿಟ್ಟಾದರೂ ಅಪ್ಪನಿಂದ ಕಾಗದದ ಮೂಲಕ ಆಶೀರ್ವಾದ ಸಿಕ್ಕಿತ್ತು. ನನ್ನ ಆತಂಕ ಸ್ವಲ್ಪ ಮರೆಯಾಗಿ ಸಮಾಧಾನದ ಉಸಿರು ಬಿಟ್ಟಿದ್ದೆ.

“ಹೇಮಮಾಲಿನಿಯನ್ನು ಅನುಕರಣೆ ಮಾಡ್ತಾ ಇದ್ದಾಳೇಂತ ಕಾಣುತ್ತೆ.”

“ಜೀವನ ಬೇರೆ, ಸಿನಿಮಾ ಬೇರೆ.”

“ಇವಳಿಗೇನಾಗಿತ್ತು ಕೇಡು. ಮುದ್ದೆಯಾಗಿರೋನ್ನ ಮದ್ವೆ ಮಾಡ್ಕೋ ಬೇಕಾಗಿತ್ತಾ?”

“ಅನ್ಯಾಯ ಮಾಡಿಕೊಂಡಳು ಹುಚ್ಚಿ” ನಾನಾ ವಿಧದ ಮಾತುಗಳು, ಕೊಂಕು ನುಡಿಗಳು, ಕಿಸುನೋಟಕ್ಕೆ ತತ್ತರಿಸುವಂತಾಗುತ್ತಿದ್ದರೂ ಅವರ ಜೊತೆಯಿರುವಾಗ ಧೈರ್ಯದಿಂದ ಓಡಾಡುತ್ತಿದ್ದೆ. ಕೆಚ್ಚಿನಿಂದ ನೋಡುತ್ತಿದ್ದೆ. ದಿಟ್ಟತನದಿಂದ ಮಾತನಾಡುತ್ತಿದ್ದೆ.

ಹೀಗೆ ನನ್ನ ಸಂಸಾರನೌಕೆ ಸಾಗಿತ್ತು. ಶೋಭಾ, ಉಕ್ಕಿಬರುತ್ತಿದ್ದ ಸಮುದ್ರದಲ್ಲಿ ದೋಣಿ ಹತ್ತಿ ಯಾನ ಮಾಡುವ ಹುಂಬ ಧೈರ್ಯ ಮಾಡಿದ್ದೆ, ಆದರೆ ನಾನು ಹತ್ತಿದ್ದೂ ತೂತು ದೋಣಿಯಾಗಿತ್ತು!

ಇದ್ದಕ್ಕಿದ್ದ ಹಾಗೆಯೇ ಸುದ್ದಿ ಬಂದಿತು. ನನ್ನವರಿಗೆ ಬೆಂಗಳೂರಿಗೆ ಪ್ರಮೋಷನ್ ಕೊಟ್ಟು ವರ್ಗ ಮಾಡಲಾಗಿತ್ತು. ಒಂದು ವಿಧದ ಸಂತೋಷ ಒಂದು ವಿಧದ ನೋವು.

“ನಾನೂ ಅಲ್ಲಿಗೆ ಟ್ರಾನ್ಸ್‌ಫರ್ ಮಾಡಿಸಿಕೊಳ್ಳುತ್ತೇನೆ” ಎಂದು ಪ್ರಾರಂಭಿಸಿದೆ.

“ಊಹುಂ ಬೇಡಾ. ಇನ್ನು ಕೆಲವು ತಿಂಗಳುಗಳಲ್ಲಿ ನಿನಗೂ ಪ್ರಮೋಷನ್ ಸಿಗುತ್ತೆ. ಡಾಕ್ಟರೇಟ್ ಮಾಡಿದ್ದು ಅನ್ಯಾಯವಾಗಬಾರದು, ಬೆಂಗಳೂರು ಏನು ಮಹಾ ದೂರ.”

ಎಂದು ಹೋದವರು ವಾರಕ್ಕೊಂದು ಬಾರಿ ಬಂದು ಹೋಗತೊಡಗಿದರು.

“ಅವರ ಮಾವನಿಗೆ ಜಾನಿಕಿಯ ಮದ್ವೆ ವಿಷಯ ಗೊತ್ತಾಗಿ ವರ್ಗ ಮಾಡಿಸಿದ್ದಾರಂತೆ. ಹೆಂಡತಿ ಹೆರಿಗೆಗಾಗಿ ಹೋಗಿದ್ದವಳು ಬಂದಿದ್ದಾಳಂತೆ. ಬೆಂಗಳೂರಿನಲ್ಲೇ ದೊಡ್ಡ ಮನೆಯೊಂದನ್ನು ಹಿಡಿದಿದ್ದಾರೆ” ಎಂದು ನನ್ನ ಸಹೋದ್ಯೋಗಿಗಳೊಬ್ಬರು ಹೇಳಿದ್ದರಂತೆ. ಶೈಲಾ ಒಂದು ಗುಟ್ಟಿನ ಮಾತು ಎನ್ನುವಂತೆ ಹೇಳಿದ್ದಳು.

“ಈ ಅಂತೆ ಕಂತೆಗೆಲ್ಲಾ ನಾನು ಕೇರ್ ಮಾಡೋಲ್ಲ.” ಎಂದು ಬಂದಿದ್ದೆ. ಮುಂದೆ ಕೆಲವು ದಿನಗಳಲ್ಲಿ ನನ್ನ ಗಂಡ ಹಿಂಜರಿಯುತ್ತಾ ಕೈ ಹತ್ತಿರ ಬಂದಿದ್ದರು.

“ಜಾನಿ ಡಿಯರ್.”

ಜೇನಿಗಿಂತಲೂ ಮಧುರವಾದ ಧ್ವನಿ.

“ನನ್ನ ನಿನ್ನ ಮದ್ವೆ ವಿಷಯಾನ ಇನ್ನೂ ಮನೆಯವರಿಗೆ ಹೇಳೋಕಾಗ್ಲಿಲ್ಲ. ಆದರೂ ಸುಳಿವು ಸಿಕ್ಕಿದೆ.”

“…”

“ಅವಳು ಊರಿನಿಂದ ಬರ್ತಾ ಇದ್ದಾಳೆ. ಬೆಂಗಳೂರಲ್ಲಿದ್ದ ರೂಮು ಬದಲಾಯಿಸಿ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡಿದ್ದೇನೆ…”

“ಆಗಲಿ ಬಿಡಿ, ಬೆಂಗಳೂರಲ್ಲಿ ಹೋಟೆಲಲ್ಲಿ ಊಟ ಮಾಡೋದು ತಪ್ಪಿತಲ್ಲ.”

“ನಿಂಗೆ ತಮಾಷೆ ಅಲ್ವಾ?”

“ಮತ್ತೆ ಸಂತೋಷದ ಸುದ್ದಿ ಹೇಳ್ತಾ ಇರೋವಾಗ ಅಳ್ಬೇಕಾ? ಎಷ್ಟೇ ಹೊಲ ಮೇಯ್ದು ಬಂದರೂ ನನ್ನ ದನ ನನ್ನ ಮನೆಗೆ ಬರುತ್ತೆ… ಅಲ್ವಾ…?”

“ಓದಿದ್ದು ಜಾಸ್ತಿಯಾಯಿತು.”

“ಊಹೂಂ, ನೀವು ನನ್ನನ್ನು ಪ್ರೀತಿಸಿದ್ದು ಜಾಸ್ತಿಯಾಯಿತು. ಅರ್ಥ ಮಾಡಿಕೊಂಡಿದ್ದು ಜಾಸ್ತಿಯಾಯಿತು.

ನಾನು ಎಷ್ಟೇ ಪ್ರಯತ್ನಪಟ್ಟರೂ ಉದ್ವೇಗ ದುಃಖವನ್ನು ಭರಿಸಿಕೊಳ್ಳಲಾಗಲಿಲ್ಲ. ಅಳುತ್ತಿದ್ದವಳನ್ನು ತೋಳುಗಳಲ್ಲಿ ಹುಡುಗಿಸಿಕೊಂಡರು. ಏನೇನೋ ಸಮಾಧಾನದ ನುಡಿಗಳನ್ನಾಡಿದರು. ನಂಬಿಸಲು ಯತ್ನಿಸಿದರು. ನನಗೆ ಅರ್ಥವಾದದ್ದು ಇಷ್ಟೆ ‘ಇನ್ನು ಮೇಲೆ ಪ್ರತಿವಾರ ಬರೋಕಾಗಲ್ಲ, ನೀನೇ ಬಂದುಬಿಡು… ಇಲ್ಲವಾದರೆ ವೇಳೆ ಸಿಕ್ಕಾಗ ಬರ್‍ಬೇಕಾಗುತ್ತೆ…”

ನನ್ನ ಭಾವನೆಗಳು ಹೆಪ್ಪುಗಟ್ಟಿದವು. ನನ್ನ ಮುಖ ರಕ್ತ ಹೀರಿಸಿಕೊಂಡವರಂತೆ ನಿಸ್ತೇಜವಾಗಿತ್ತು. ಸಾವರಿಸಿಕೊಂಡು ಕೇಳಿದೆ.

“ನನ್ನ ಬಳಿ ಬರಲು ಅಷ್ಟೊಂದು ಕಷ್ಟವೆ?…”

“ಜಾನಿಕಿ… ನಿಂಗೆ ತುಂಬಾ ನೋವಾಗುತ್ತೆ, ಕ್ಷಮಿಸುತ್ತೀಯಾ?”

“…”

“ಅವಳೀಗ ಒಂದು ಮಗುವಿನ ತಾಯಿ, ಇಡೀ ಮನೆಗೆ ಒಬ್ಬಳನ್ನೇ ಬಿಟ್ಟು ಬರಲು ಧೈರ್ಯ ಸಾಲದು…”

ದೈನ್ಯದಿಂದ, ಆತಂಕದಿಂದ ಹೇಳುತ್ತಿದ್ದರು.

ನಿರ್‍ವಿಕಾರಳಾಗಿ ಕಣ್ಣುಬಿಟ್ಟು ಕೇಳುತ್ತಿದ್ದೆ. ನೋವಿನ ತಂತಿಯೊಂದು ನಿಧಾನವಾಗಿ, ನಂತರ ತೀವ್ರವಾಗಿ ಮಿಡಿಯಲಾರಂಭಿಸಿತ್ತು. ಹೃದಯವನ್ನೊತ್ತಿಕೊಂಡು ಅವರೆದೆಯಲ್ಲಿ ಮುಖವಿಟ್ಟು ಕಣ್ಣು ಮುಚ್ಚಿ ಮಲಗಲು ಯತ್ನಿಸಿದೆ. ಮೊದಲ ಬಾರಿಗೆ ಅವರಿದ್ದೂ ನನಗೆ ನಿದ್ದೆ ಹತ್ತಿರ ಸುಳಿದಿರಲಿಲ್ಲ.

ನನ್ನ ಮುಂದಿನ ದಿನಗಳನ್ನು ಕತೆಗಾರ್ತಿಯಾದ ನೀನೇ ಊಹಿಸಿಕೋ. ಬರೆದರೆ ದೊಡ್ಡ ಕಾದಂಬರಿಯಾದೀತು… ಭಾವನೆಗಳನ್ನು ಹತ್ತಿಕ್ಕಿ ಹತ್ತಿಕ್ಕಿ ಒಮ್ಮೆಲೆ ಎಲ್ಲಿ ಸ್ಫೋಟವಾಗುವುದೋ ಎನ್ನುವ ಹೆದರಿಕೆ ಈಗ ಕಡಿಮೆಯಾಗ್ತಾ ಇದೆ.

ಇಡೀ ರಾತ್ರಿಗಳಲ್ಲಿ ನಾನು ಒಂಟಿ ಎನ್ನಿಸಿ ಭಯವಾಗುತ್ತಿತ್ತು. ಒಂಟಿತನದ ಬೂತ ವಿಕಾರವಾಗಿ ನಗುತ್ತಾ ಬೃಹದಾಕಾರವಾಗಿ ಬೆಳೆಯುತ್ತಾ ಅಪ್ಪಿಕೊಳ್ಳಲು ಬರುತ್ತಿತ್ತು. ಆಗೆಲ್ಲಾ ಅಪ್ರಯತ್ನವಾಗಿ ದುಃಖ ಉಕ್ಕಿಬಂದು ಕಣ್ಣುಗಳಲ್ಲಿ ನೀರು ತುಂಬಿ ಬರುತ್ತಿತ್ತು. ಅಳುತ್ತಾ ಹಾಸಿಗೆಯ ಮೇಲೆ ಉರುಳುತ್ತಿದ್ದೆ. ನಿದ್ದೆ ಯಾವಾಗ ಬರುತ್ತಿತ್ತೋ ತಿಳಿಯುತ್ತಿರಲಿಲ್ಲ.

“ಯಾಕೆ ಹೀಗಿದ್ದೀಯಾ?”

“ಚೆನ್ನಾಗಿದ್ದೇನಲ್ಲ…”

“ಊಟ… ನಿದ್ದೆ… ಎಲ್ಲಾ ಬಿಟ್ಟುಬಿಟ್ಟಿದೀಯಾ?”

“ಅಂಥದ್ದೇನಿಲ್ಲ…”

“ಮದ್ವೆಯಾದ ಮೇಲೆ ದಿನಾ ದಿನಾ ಸೊರಗ್ತಾ ಇದ್ದೀಯಾ…”

“…”

“ವಿರಹ ವೇದನೆಯಿಂದ ಏನೆ? ನೀನೂ ಅಲ್ಲಿಗೆ ವರ್ಗ ಮಾಡಿಸಿಕೊಂಡುಬಿಡು…”

ಶೈಲಾ ಹೇಳುತ್ತಲೇ ಇದ್ದಳು. ಸಮಯ ಸಿಕ್ಕಾಗಲೆಲ್ಲಾ ಮೆದುಳು ಕೊರೆಯುವಂತೆ ಉಪದೇಶ ಮಾಡುತ್ತಿದ್ದಳು.

ಬದುಕಿನಾಟದಲ್ಲಿ ನಾನು ಗೆದ್ದಿದ್ದೆ ಎಂದುಕೊಂಡು ಬೀಗಿದ್ದೆ. ಆದರೆ ನಾನು ಸೋತಿದ್ದೆ ಶೋಭಾ, ನನ್ನನ್ನು ತುಂಬಾ ಕೆಳಮಟ್ಟಕ್ಕೆ ತಳ್ಳಿಕೊಂಡಿದ್ದೆ, ಅವಮಾನಿಸಿಕೊಂಡಿದ್ದೆ. ಬದುಕನ್ನು ನಮ್ಮದೇ ಆದ ರೀತಿಯಲ್ಲಿ ಹೊಸಕಿಹಾಕಿಕೊಂಡಿದ್ದವು. ನಾನು ಅವರ ಜೀವನದಲ್ಲಿ ಉತ್ಸವ ಮೂರ್‍ತಿಯಾಗಿದ್ದೆ. ಮೆರವಣಿಗೆಗೆ ಅಗತ್ಯವಾದ ಗೊಂಬೆಯಂತಿದ್ದ. ಅವಳನ್ನು ಮನೆದೇವತೆಯಂತಿಟ್ಟು ನೋಡಿದ್ದರು. ನನ್ನ ಹೃದಯ ಹತ್ತಿ ಉರಿಯುತ್ತಿತ್ತು. ಆದರೆ ತಪ್ಪು ನನ್ನದಾಗಿತ್ತು. ಮುಳ್ಳಿನ ಪೊದೆ ಮೇಲೆ ಸೆರಗು ಹಾಸಿಯಾಗಿತ್ತು. ಭೂತ, ಭವಿಷ್ಯ, ವರ್‍ತಮಾನ ಎಲ್ಲವನ್ನೂ ಮರೆತು ಅವನ ತೋಳೊಂದೇ ಶಾಶ್ವತವೆಂದು ನುಸುಳಿದ್ದೆ. ಮುಂದಿನದನ್ನು ಯೋಚಿಸದೆ ಎದೆಗೊರಗಿದ್ದೆ. ಎಲ್ಲವನ್ನು ಅರ್‍ಪಿಸಿಕೊಂಡಿದ್ದೆ. ಹುಚ್ಚು ನಿರ್ಧಾರಕ್ಕೆ ಅಂಟಿಕೊಂಡಿದ್ದೆ. ದಿನೇ ದಿನೇ ಅಂತರ್‍ಮುಖಿಯಾಗತೊಡಗಿದ್ದೆ. ಬುದ್ಧಿಗೆ ಮಂಕು ಕವಿಯತೊಡಗಿತ್ತು.

“ಜಾನ್ಕಿ…”

“ಹೂಂ.”

“ಯಾಕೆ ಮಂಕಾಗಿದ್ದೀಯಾ?”

“…”

“ಯಾರನ್ನು ಕೇಳ್ತಾ ಇರೋದು?”

“ಇಲ್ಲವಲ್ಲ, ನಂಗೇನೂ ಆಗಿಲ್ಲ…”

“ತಪ್ಪು ಮಾಡಿದೇಂತ ಅನ್ನಿಸ್ತಾ ಇದೆಯಾ? ಇದ್ದಕ್ಕಿದ್ದ ಹಾಗೆ ಮೌನ ಗೌರಿಯಾಗ್ತಾ ಇದ್ದೀಯಲ್ಲ.”

“ಹಾಗೇನೂ ಇಲ್ಲ…” ಮಾತು ಬದಲಿಸಲು ಯತ್ನಿಸಿದೆ.

ಅವರ ಸ್ಪರ್ಶ ಮುಳ್ಳು ತುಂಬಿದ ಗೊಂಚಲಿನಿಂದ ಬೆತ್ತಲೆ ಮೈಯನ್ನು ನೇವರಿಸಿದಂತಾಗಿ ನೋವು, ಹೆದರಿಕೆಯಿಂದ ಬಲವಾಗಿ ಕಣ್ಣು ಮುಚ್ಚಿದೆ.

“ನಿದ್ದೆ ಬರ್‍ತಾ ಇದೆಯಾ?”

“ಹೂ.”

ಅವರು ಪಕ್ಕದಲ್ಲಿದ್ದರೂ ಬೆಳಗಿನತನಕವೂ ಕತ್ತಲಲ್ಲಿ ಶೂನ್ಯದತ್ತ ನೋಡುತ್ತಾ ಕಣ್ಣು ಬಿಟ್ಟು ಮಲಗುವ ಅಭ್ಯಾಸ ಮಾಡಿಕೊಂಡಿದ್ದೆ.

ಒಂದು ದಿನ ಬೆಳಿಗ್ಗೆ ಊರಿಗೆ ಹೊರಟಿದ್ದರು.

“ಜಾನಿ…”

“ಸೂಟ್ ಕೇಸಿನೊಳಗೆ ಅವರ ಬಟ್ಟೆಗಳನ್ನು ತುಂಬಿಸಿಡುತ್ತಿದ್ದವಳು ತಲೆ ಎತ್ತಿ ನೋಡಿದೆ. ಅವರಿಗೆ ಈ ಘಳಿಗೆಯಲ್ಲಿ ಏನನ್ನಿಸಿತೋ ಏನೋ, ಹತ್ತಿರ ಬಂದು ಮೃದುವಾಗಿ ಬಳಸಿ ಹಿಡಿದು,

“ನೀನೂ ಬರ್‍ತೀಯಾ ಬೆಂಗ್ಳೂರಿಗೆ?” ಕೇಳಿದರು.

ನಾನು ಮೌನವಾಗಿದ್ದೆ.

“ಹೇಗೂ ರಜೆಯಿದೆಯಲ್ಲ, ಒಂದೆರಡು ದಿನ ಇದ್ದು ಬರುವಿಯಂತೆ ನೀನು ಹೊಂದಿಕೊಳ್ತೀಯಾ. ಒಮ್ಮೆ ಬಂದರೆ ಸರಿಯಾಗುತ್ತೆ…”

ನನಗೂ ‘ಒಮ್ಮೆ ಹೋಗಬಾರದೇಕೆ?’ ಎನ್ನಿಸಿತು. ಅವಳನ್ನು ನೋಡಿದ ಹಾಗೂ ಆಗುತ್ತೆ.. ಹೊಂದಿಕೊಂಡರೆ ಒಟ್ಟಿಗೆ ಇರಬಹುದಲ್ಲ ಎಂದೋ ಯೋಚಿಸಿ ಅವರೊಡನೆ ಬೆಂಗಳೂರು ಬಸ್ಸು ಹತ್ತಿದೆ.

ಬೆಂಗಳೂರು ತಲುಪುವವರೆಗೂ ಮಾತನಾಡುತ್ತಲೇ ಇದ್ದರು. ಅವಳು ಅಂದರೆ ಸರೋಜ ಸ್ವಲ್ಪ ಮುಂಗೋಪಿ. ನಾನು ಅವಳೂ ಯಾವ ಮನಸ್ತಾಪಕ್ಕೂ ಎಡಗೊಡದೆ ಹೊಂದಿಕೊಂಡರೆ ನನ್ನನ್ನು ಬೆಂಗಳೂರಿಗೆ ವರ್‍ಗ ಮಾಡಿಸಿ ಜೊತೆಯಲ್ಲೇ ಇಟ್ಟುಕೊಳ್ಳುವ ಆಸೆ, ನಿರ್ಧಾರ ವ್ಯಕ್ತಪಡಿಸಿದರು.

ಬಾಯಿ ಮುಚ್ಚಿ ಕಿವಿ ತೆರೆದು ಕುಳಿತಿದ್ದೆ. ಎಲ್ಲಿಯೋ ಹರಿದು ಹೋಗುವಂತಿದ್ದ ಎಳೆಯನ್ನು ಎಳೆದು ಎಳೆದು ಸರಿಪಡಿಸುವ ಯತ್ನ ಮಾಡುತ್ತಿದ್ದೆ. ನಾವು ಬೆಂಗಳೂರು ತಲುಪಿದಾಗ ರಾತ್ರಿ ಏಳು ಗಂಟೆಯಾಗಿತ್ತು. ಆಟೋ ಹಿಡಿದು ಮನೆಯ ಒಳಗೆ ಬಂದೆವು.

ಅವರ ಉದ್ವೇಗ, ಆತಂಕ, ಚಡಪಡಿಕೆ ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತಿತ್ತು. ನಾನು ಅವರ ಮನೆಗೆ ಬಂದ ಸಂಭ್ರಮವಂತೂ ಕಂಡಿತಾ ಅವರ ಮುಖದಲ್ಲಿರಲಿಲ್ಲ. ಮನೆ ಹತ್ತಿರ ಬಂದಂತೆ ಚಡಪಡಿಕೆ ಹೆಚ್ಚಾಗಿತ್ತು.

“ಯಾಕೆ ನಾನು ಬರುತ್ತಿರುವುದು ನಿಮ್ಮಾಕೆಗೆ ತಿಳಿಸಲಿಲ್ಲವೇನು?” ಕೇಳಿದೆ.

“ಊಹೂಂ… ನನ್ನ ಮನೆಗೆ ಕರೆಯಲು ಯಾರನ್ನಾದರೂ ಯಾಕೆ ಕೇಳಬೇಕು..” ಎಂದು ಹೇಳುತ್ತಿದ್ದರೂ ಯಾವುದೋ ಅವ್ಯಕ್ತ ಭೀತಿ ಆತಂಕ ಅವರ ಮುಖದಲ್ಲಿತ್ತು.

“ಹಲೋ… ರಾಮು ಈಗ ಬರ್‍ತಾ ಇದೀಯಾ? ಈಕೆ ಯಾರು?” ಎದುರಿಗೆ ಬರುತ್ತಿದ್ದವರು ನಿಲ್ಲಿಸಿ ಮಾತನಾಡಿಸಿದರು. ಅವರ ಸ್ನೇಹಿತರಿರಬೇಕು ಎಂದುಕೊಳ್ಳುತ್ತಿರುವಾಗಲೇ ನನ್ನವರ ಮಾತುಗಳು ನನಗೆ ಸಿಡಿಲಿನಂತೆ ಬಡಿದವು.

“ಇವರಾ?… ಫ್ಯಾಮಿಲಿ ಫ್ರೆಂಡ್. ಮಗೂನ ನೋಡಲು ಬಂದಿದ್ದಾರೆ.”

ನನ್ನ ಕುತ್ತಿಗೆಯಲ್ಲಿ ಮಿರಮಿರನೆ ಮಿಂಚುತ್ತಿದ್ದ ತಾಳಿಯತ್ತ ನೋಡುತ್ತಾ,

“ಹೌದಾ?” ಎನ್ನುತ್ತಾ ಅವರು ಮರೆಯಾದ ಕೂಡಲೇ ನನ್ನ ಗಂಡನತ್ತ ನೋಡಿದೆ. ಅವರೂ ನನ್ನತ್ತ ನೋಡಿದರು. ಒಂದು ಕ್ಷಣ ಅಷ್ಟೆ, ಮಿಂಚಿನ ವೇಗದಲ್ಲಿ ಮುಖದ ಭಾವನೆಗಳನ್ನು ಗೋಸುಂಬೆಯಂತೆ ಬದಲಾಯಿಸುತ್ತಾ ಆದಷ್ಟು ನನ್ನ ಕಣ್ಣು ತಪ್ಪಿಸುತ್ತಾ.

“ಈ ಜನಕ್ಕೆ ಬೇಡದ ಉಸಾಬರಿ ಎಲ್ಲಾನೂ ಹೇಳ್ಬೇಕು”

ಅಸಹನೆಯಿಂದ ಹೇಳುತ್ತಾ ಎದುರಿಗಿದ್ದ ಮನೆಯೊಂದರ ಮುಂದೆ ನಿಂತು ಕರೆಗಂಟೆಯನ್ನೊತ್ತಿದರು.

“ಬಂದೇ” ಎಂಬ ಸ್ವರದೊಂದಿಗೆ ಬಾಗಿಲು ತೆರೆದುಕೊಂಡಿತು.

“ಸರೂ ಜಾನಕೀನೂ ಬಂದಿದ್ದಾಳೆ. ನಿನ್ನನ್ನೂ ಮಗುವನ್ನೂ ನೋಡ್ಬೇಕೂಂತ.” ಮಾತನಾಡುತ್ತಾ ನನ್ನೊಂದಿಗೆ ಒಳಗೆ ಕಾಲಿಟ್ಟರು.

ತೆಳುಕಾಯದ ಬಿಳಿ ಬಣ್ಣದ ಆಕೆಯನ್ನು ಬಹು ಕಷ್ಟದಿಂದ ಸುಂದರಿಯರ ಗುಂಪಿಗೆ ಸೇರಿಸಬಹುದಾಗಿತ್ತು. ಕೊಂಚ ಮುಂದೆ ಬಂದಿದ್ದ ಹಲ್ಲುಗಳು ಅತಿ ಚಿಕ್ಕದಾದ ಕಂದು ಬಣ್ಣದ ಕಣ್ಣುಗಳು, ಅಬ್ಬಾ! ಏನು ತೀಕ್ಷ್ಣತೆ!!

ನನಗರಿವಿಲ್ಲದೆ ನನ್ನ ದೇಹ ಕಂಪಿಸಿತು. ಮೊದಲ ಬಾರಿಗೆ ಅಧೈರ್ಯದ ಅಲೆ ಎದ್ದಿತು. ನಮ್ಮ ನಡುವಿನ ಮೌನವನ್ನು ಪರೀಕ್ಷಿಸುವವಳಂತೆ ನಿಂತಿದ್ದೇ. ನಾನು ಮುಗುಳ್ನಗಲು ಪ್ರಯತ್ನಿಸಿದೆ.

ಆಕೆ ಬಂದ ವೇಗದಲ್ಲಿ ಬುಸುಗುಟ್ಟುತ್ತಾ ಒಳಗೆ ಹರಿದು ಹೋಗಿದ್ದಳು.

“ನೋಡಿ ನಂಗೂ ನಿಮ್ಮನ್ನು ಸುಧಾರಿಸಿ ಸಾಕಾಯ್ತು. ಮಗುವಾದ ಮೇಲೂ ನಾನು ಬಂದ ಮೇಲಾದರೂ ಬದಲಾಗ್ತೀರ ಎಂದುಕೊಂಡಿದ್ದೆ. ನಿಮ್ಮ ಈ ಬುದ್ಧಿ ಗೊತ್ತಿದ್ದರೆ ನಾನೇಕೆ ಈ ಮನೆಗೆ ಬರ್‍ತಿದ್ದೆ? ಇನ್ನು ನಿಮ್ಮ ಸೂಳೆ ಬಂದಿದ್ದಾಳೆ. ಓಹ್! ಕ್ಷಮಿಸಿ, ಆಕೆ ನಿಮ್ಮ ಹೆಂಡತಿ ಅಲ್ವಾ? ಇತ್ತೀಚೆಗೆ ರಿಜಿಸ್ಟರ್ಡ್ ಮದ್ದೆಯಾಗಿದ್ದೀರಾ. ಕಾನೂನಿನ ಪ್ರಕಾರ ಆಕೆಯೇ ನಿಮ್ಮ ನಿಜವಾದ ಹೆಂಡತಿ ಅಲ್ವಾ?”

ವಿಷವನ್ನುಗುಳುವ ಸರ್‍ಪದಂತೆ ಕಂಡಳು. ತಟ್ಟನೆ ಹೊರಗೆ ಬರುವ ಶಕ್ತಿ ಸಾಲದೆ ಸೋಫಾದ ಮೇಲೆ ಕುಸಿದು ಕುಳಿತೆ. ಒಳಗೆ ಮಗು ಎಚ್ಚರವಾಗಿ ಅಳುತ್ತಿತ್ತು.

“ನನಗಿಂತ ಏನು ಚೆಂದಾ ಇದ್ದಾಳ್ರೀ? ದುಡ್ಡು ಸಂಪಾದನೆ ಮಾಡ್ತಾ ಇದ್ದಾಳೇಂತಾನಾ? ಇಷ್ಟು ದಿನ ಕಣ್ಣು ಮುಚ್ಚಾಲೆ ಆಡ್ತಿದ್ರಿ, ಈಗ ಮನೇಗೇ ಕರೆದುಕೊಂಡು ಬಂದಿದ್ದೀರಾ ಎಷ್ಟು ಧೈರ್‍ಯ?”

“ಸರೂ.. ಸ್ವಲ್ಪ ಮೆತ್ತಗೆ ಮಾತಾಡು..”

ನನ್ನವರ ಅಸಹಾಯಕ ಪಿಸು ನುಡಿಗಳು. ಮಗುವನ್ನು ತಟ್ಟಿ ಮಲಗಿಸುವ ಪ್ರಯತ್ನ ನಡೆದಿತ್ತು.

“ಇದೊಂದು ಪೀಡೆ, ರಾತ್ರಿ ಎಲ್ಲಾ ಮಕ್ಳು ಮಲಗಿದ್ರೂ ಇದಕ್ಕೆ ನಿದ್ದೆ ಬಂದಿಲ್ಲ. ಯಾಕಾದ್ರೂ ನನ್ನ ಜೀವ ತಿಂತಾವೋ ಏನೋ?”

ಮಗುವನ್ನು ಧೊಪ್ಪನೆ ಮಲಗಿಸಿದ ಸದ್ದು. ಹಿಂದೆಯೇ ಮಗುವಿನ ಆಕ್ರಂದನ.

“ಇಲ್ಲಿ ಕೊಡು ಮಗೂನ”

“……”

“ಹಾಗೆ ಕುಕ್ಕಬೇಡ್ವೆ, ಅದು ಕಲ್ಲಲ್ಲ”

ಎನ್ನುತ್ತಾ ಒಳಗಿನಿಂದ ಅಳುತ್ತಿದ್ದ ಮಗುವನ್ನು ಎತ್ತಿಕೊಂಡು ಹೊರಬಂದರು. ಇದ್ದಕ್ಕಿದ್ದ ಹಾಗೆ ಅವರ ಬಗ್ಗೆ ಇಟ್ಟುಕೊಂಡಿದ್ದ ಪ್ರೀತಿ, ನಂಬಿಕೆ, ಗೌರವ, ಅದರ ಎಲ್ಲವೂ ಒಮ್ಮೆಲೆ ಕುಸಿದು ಬಿದ್ದಂತೆ ಅನ್ನಿಸಿತು. ಒಳಗಡೆ ಪಾತ್ರೆಗಳ ಸದ್ದು ಕೇಳಿ ಬರುತ್ತಿತ್ತು.

ಮಗು ಮುದ್ದಾಗಿತ್ತು. ಮುಖ ಕಣ್ಣು ಮೂಗು ಎಲ್ಲಾ ಅತ್ತು ಅತ್ತು ಕೆಂಪಾಗಿತ್ತು. ನನ್ನತ್ತ ಬಾಗಿದ ಮಗುವನ್ನು ಎತ್ತಿಕೊಂಡೆ.

“ಅಳ್ಬೇಡಾ ಮರಿ, ಆಂಟಿ… ಚಾಕ್ಲೇಟ್ ಕೊಡ್ತಾಳೆ… ಇಲ್ನೋಡು…”

ಅವರ ವಾಕ್ಯವಿನ್ನೂ ಪೂರ್‍ತಿಯಾಗಿರಲಿಲ್ಲ.

“ನಂಗಿರೋದು ಒಂದೇ ಮಗೂರಿ” ಎಂದು ಒಳಗಿನಿಂದ ಬಂದವಳೇ ರಭಸದಿಂದ ಕೈಲಿದ್ದ ಮಗುವನ್ನು ಕಿತ್ತುಕೊಂಡಳು.

ಆ ಮಾತುಗಳ ಹಿಂದಿದ್ದ ಕಠೋರತೆ, ನಂಜು, ರೋಷ ಕಂಡು ಬೆಚ್ಚಬಿದ್ದೆ.

“ಸ್ರೋಜ್…”

“ನೀವು ಸುಮ್ಮನಿರಿ… ನಂಗೆಲ್ಲಾ ತಿಳಿಯುತ್ತೆ”

ಎಂತಹ ಬಿರುನುಡಿಗಳು! ಇಡೀ ದೇಹದ ರಕ್ತವೆಲ್ಲಾ ಜರ್ರನೆ ಹರಿದು ಹೋದ ಅನುಭವ ಅಸಹಾಯಕರಂತೆ ಗರ ಬಡಿದವರಂತೆ ನಿಂತಿದ್ದರು ನನ್ನವರು.

ಬದಲಾಗುವ ಯಾವ ಲಕ್ಷಣಗಳು ಕಾಣಲಿಲ್ಲ. ಇಲ್ಲ, ಇವಳ ಜೊತೆ ಹೊಂದಿಕೊಳ್ಳಲು ಸಾಧ್ಯವೇ ಇಲ್ಲ. ಖಂಡಿತಾ ಸಾಧ್ಯವಿಲ್ಲ.

ಮರುಕ್ಷಣದಲ್ಲಿ ನಾನು ಆ ಮನೆಯ ಹೊರಗೆ ಕಾಲಿಟ್ಟಿದ್ದೆ. ಮೈಯೆಲ್ಲಾ ಬೆವರು ಸುರಿಸುತ್ತಿರುವ ಅನುಭವ. ಉಸಿರು ಕಟ್ಟಿದಂತಿದ್ದ ಮನೆಯಿಂದ ಹೊರಗೆ ಬೀಸಿ ಬಂದ ಗಾಳಿಗೆ ಮೈಯೊಡ್ಡಿ ನೀಳವಾಗಿ ಉಸಿರೆಳೆದುಕೊಂಡೆ.

ಶೋಭಾ ಈಗಲೂ ನನಗೆ ಆಶ್ಚರ್ಯವಾಗುತ್ತಿದೆ. ಯಾವ ಅದ್ಭುತ ಶಕ್ತಿ ಯಾವ ತಾಳ್ಮೆ ನನ್ನನ್ನು ಅಲ್ಲಿಯವರೆಗೆ ಒಯ್ದಿತ್ತು? ನಾನು ಹೇಗೆ ಎಲ್ಲವನ್ನೂ ಸಹಿಸಿಕೊಂಡೆ!

ಅನಿರೀಕ್ಷಿತವಾಗಿ ಎನ್ನುವಂತೆ ನನ್ನ ತಂದೆ ಬಸ್ ನಿಲ್ದಾಣದಲ್ಲಿ ಸಿಕ್ಕಿದರು.

ಅಲ್ಲಿ ರೆಪ್ಪೆಯಲುಗಿಸದೆ, ದೇಹ ಅಲುಗಾಡಿಸದೆ ಹೆಪ್ಪುಗಟ್ಟಿದ ದುಃಖ ಭಾವನೆಗಳೊಂದಿಗೆ ಕಲ್ಲಿನಂತೆ ಕುಳಿತಿದ್ದ ನಾನು ಈಗ ಕರಗಿದ ಮೇಣದಂತಾಗಿದ್ದೆ. ಅದು ನೂರಾರು ಜನರು ಸೇರಿರುವ ಜಾಗವೆಂದು ತಿಳಿದಿದ್ದರೂ ಮುಜುಗರವಾಗಲಿಲ್ಲ.

ಚಿಕ್ಕ ಮಗುವಿನಂತೆ ಅಪ್ಪನ ಕೈಗಳಲ್ಲಿ ಮುಖ ಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅತ್ತೆ. ನನ್ನ ತಂದೆ ಮೂಕ ಪ್ರೇಕ್ಷಕರಾಗಿದ್ದರು. ನನ್ನ ಕನಸು ಒಡೆದಿತ್ತು. ಭ್ರಮೆ ಹರಿದುಹೋಗಿತ್ತು. ಹರಿಯುತ್ತಿರುವ ನೀರಿನ ಮೇಲೆ ಬರೆದ ಹಾಗೆ ಬಣ್ಣ ಬಣ್ಣದ ಕನಸುಗಳು ಕದಡಿ ರಾಡಿಯಾಗಿ ಹರಿಯತೊಡಗಿದ್ದವು.

ನನಗೆ ವಾಸ್ತವದ ಪ್ರಜ್ಞೆ ಮೂಡಿತ್ತು. ನಾನು ದುಡುಕಿದ್ದೆ, ತಪ್ಪು ಮಾಡಿದ್ದೆ. ಹಣ, ಅಂತಸ್ತು, ಯೌವನ, ಸೌಂದರ್ಯ ಎಲ್ಲಾ ಇದ್ದರೂ ಸಾಮಾಜಿಕ ಭದ್ರತೆಗಾಗಿ ಅವರನ್ನು ಆಶ್ರಯಿಸಿದ್ದೆ. ಅವರು ಮತ್ತಾವುದೋ ಕೋಟೆಯೊಳಗೆ ಬಂದಿ. ತೋಳು ಬಲವಿಲ್ಲದ ಬಾಯಿ ಮಾತಿನ ನಿರ್ಬಲ ವ್ಯಕ್ತಿಯೆಂದು ಆಗಲೆ ಅರಿವಾಗಿತ್ತು. ಅವರ ಬೆತ್ತಲೆ ಮುಖ ನಿಶ್ಚಳವಾಗಿ ಕಂಡಿತ್ತು.

ಆಸೆಯಾಗಿ ಪ್ರೀತಿಯಾಗಿ ನನ್ನನ್ನು ಕಟ್ಟಿಕೊಂಡಿದ್ದರೂ ದಕ್ಕಿಸಿಕೊಳ್ಳುವ ಧೈರ್ಯ ಅವರಲ್ಲಿರಲಿಲ್ಲ. ಸಪ್ತಪದಿ ತುಳಿದು ಬಂದ ಸರೋಜಳಿಗೆ ಗುಲಾಮರಂತಿದ್ದರು. ವಿಧೇಯ ಪತಿಯಾಗಿದ್ದರು. ಆದರ್ಶ ತಂದೆಯಾಗಿದ್ದರು. ನನ್ನನ್ನು ಕೊಂಕು ಮಾತು ವಕ್ರ ದೃಷ್ಟಿಯಿಂದ ನೋಡುತ್ತಿದ್ದ ಸಮಾಜ, ಅದೇ ಅನುಕಂಪ ತೋರಿಸತೊಡಗಿತ್ತು. ನಾನು ಎಲ್ಲರ ದೃಷ್ಟಿಯಲ್ಲೂ ಒಂದು ಸುಂದರ ಸಂಸಾರ ಒಡೆದ ಖಳನಾಯಕಿಯಾಗಿದ್ದೆ. ಹಾಗಾದ್ರೆ ಕಾನೂನಿನ ಮದ್ವೆಗ ಬೆಂಬಲವಿಲ್ಲವೆ? ಅರ್ಥವಿಲ್ಲವೆ? ಎಂತಹ ವಿಚಿತ್ರ – ವಿಕೃತ ನೀತಿ!

ಊರಿಗೆ ಹೊರಟು ನಿಂತಿದ್ದೆವು. ಅವರು ಆತುರದಿಂದ ನಾನು ಬಿಟ್ಟು ಬಂದಿದ್ದ ಸೂಟ್‌ಕೇಸನ್ನು ಹಿಡಿದು ಧಾವಿಸಿ ಬಂದರು.

“ಅವಳ ಮಾತಿನಿಂದ ನೋವಾಗಿದ್ದರೆ ಕ್ಷಮಿಸು”

ನಾನು ತಲೆ ಎತ್ತಿ ನೋಡಿದೆ. ಅವರ ಹಣೆಯ ಮೇಲೆ ಈ ರಾತ್ರಿಯಲ್ಲೂ ಬೆವರು ಹನಿಗಳು ಮೂಡಿದ್ದವು. ನನಗರಿವಿಲ್ಲದೆ ಒಂದು ಹೆಜ್ಜೆ ಹಿಂದೆ ಸರಿದಿದ್ದೆ.

“ಹೀಗಾಗುತ್ತೇಂತ ನಿರೀಕ್ಷಿಸಿರಲಿಲ್ಲ…”

“…”

“ನೀನಾದ್ರೂ ಸುಧಾರಸ್ತೀಯ, ಸಹಿಸಿಕೊಳ್ತೀಯಾ?”

ನಾನು ಮಾತನಾಡಲಿಲ್ಲ.

“ಅವಳು ವಿದ್ಯಾವಂತಳಲ್ಲ…”

“ನೀವು?” ಎಂದು ಕೇಳಬೇಕೆನಿಸಿತು. ಆದರೆ, ನಾಲಿಗೆ ಹೊರಳಲಿಲ್ಲ. ಇನ್ನು ಯಾವ ಮಾತಿಗೂ ಪ್ರಶ್ನೆಗೂ ಅವಕಾಶವಿಲ್ಲ, ಬೆಲೆಯೂ ಇಲ್ಲ.

“ಹುಚ್ಚು ನಿರ್‍ಧಾರ ತಗೋಬೇಡಾ. ಪತ್ರ ಬರಿತಾ ಇರು.. ನಾನು ಮುಂದಿನ ವಾರ ಬರ್‍ತೇನೆ.”

“ಅಗತ್ಯವಿಲ್ಲ…” ಎಂದೆ ನಿರ್‍ವಿಕಾರವಾಗಿ ಅವರು ನನ್ನ ಮುಖವನ್ನೇ ದಿಟ್ಟಿಸಿ ನೋಡಿದರು.

“ಅಪ್ಪಾ, ಇನ್ನು ಹೋಗೋಣ್ವಾ…”

“ನೋಡು… ಯೋಚಿಸು… ದುಡುಕಬೇಡ…”

“ಊಹೂಂ, ಇನ್ನು ಮೇಲೆ ದುಡುಕುವುದಿಲ್ಲ” ನಾನಾಗಲೇ ಯೋಚಿಸಿದ್ದೆ. ನಿರ್ಧಾರ ತೆಗೆದುಕೊಂಡಿದ್ದೆ.

“ಜಾನಕೀ…”

ಕರುಣೆಯಿಂದ ಅವರತ್ತ ನೋಡಿದೆ. ಹಿಂದೆಯೇ ನಿಟ್ಟುಸಿರು ಬಂದಿತು. ಪ್ರೀತಿಯ ನಂಬಿಕೆಯ ಸೆಲೆ ಬತ್ತಿಹೋಗಿತ್ತು. ಒಂದು ಹನಿಯೂ ಉದ್ಭವಿಸುವ ಸಂಭವವಿರಲಿಲ್ಲ.

“ನೀನೇ ನನ್ನಿಂದ ದೂರ ಹೋಗ್ತಾ ಇದ್ದೀಯ.”

ಗಂಡ ಬಿಟ್ಟವಳೂಂತ ಅನ್ನಿಸಿಕೊಂಡರೂ ಪರವಾಗಿಲ್ಲ, ನಿಮ್ಮ ಹೆಂಡತೀಂತ ಮಾತ್ರ ಅನ್ನಿಸಿಕೊಳ್ಳಲಾರೆ…”

ಅವರ ಮುಖ ಹತ್ತಿಯಂತೆ ಬಿಳಿಚಿಕೊಂಡಿತು.

“ಕೋರ್‍ಟಿನಲ್ಲಿ ನಮ್ಮ ಸಂಸಾರ ಬಯಲಾಗುವುದು ಬೇಡಾ. ಪ್ಲೀಸ್ ಯೋಚಿಸು..”

ನಾನು ಒಂದು ವಿಧವಾಗಿ ನಕ್ಕೆ.

“ಹೆದರಬೇಡಿ, ನಿಮ್ಮ ಹೆಸರು ಬಯಲಾಗೋಲ್ಲ. ಹೇಡಿಗಳಿಗೆ ಹೆದರಿಕೆ ಯಾಕೆ?”

ನಿಂತಿದ್ದ ಅಪ್ಪನನ್ನು ಎಳೆದುಕೊಂಡು ಹೊರಟು ನಿಂತಿದ್ದ ಬಸ್ಸು ಹತ್ತಿದೆ. ಬಸ್ಸು ಹೊರಟಾಗ ಅಳಬೇಕೆನಿಸಿತು. ಆದರೆ ಅಳು ಬರಲಿಲ್ಲ.

ಅಲ್ಲಿಂದ ಬಂದ ಎಷ್ಟೋ ದಿನಗಳ ನಂತರ ಆಂದೋಲನದಿಂದ ಹೊರಗೆ ಬಂದಿದ್ದೆ. ಮೊದಲ ಬಾರಿಗೆ ಗೂಡಿನಿಂದ ಹೊರಬಿದ್ದ ರೆಕ್ಕೆ ಮೂಡತೊಡಗಿದ್ದ ಪುಟ್ಟ ಹಕ್ಕಿಯಂತೆ ಗಾಬರಿಯಾಗಿದ್ದೆ. ಹೊಯ್ದಾಡಿದ್ದೆ, ದುಃಖಿಸಿದ್ದೆ. ಈಗ ಎಲ್ಲದಕ್ಕೂ ವಿರಾಮ ಕೊಡುತ್ತಿದ್ದೇನೆ. ಕಳೆದು ಹೋಯ್ತಲ್ಲಾಂತ ಅಳುತ್ತಾ ಕೂಡುವ ಬದಲು ತಾನು ಕಳೆದುಕೊಂಡುದಾದರೂ ಎಂತಹದು? ಬೆಲೆ ಕಟ್ಟುವಂತಹದೆ? ಎಂದು ಯೋಚಿಸಿ ನಿರ್‍ಧಾರಕ್ಕೆ ಬಂದಿದ್ದೇನೆ. ಆಘಾತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ನಿನ್ನ ಎಲ್ಲಾ ಪತ್ರಗಳಿಗೂ ಉತ್ತರ ಬರೆಯಲು ಕುಳಿತೆ.

ಭಾರವಾಗಿದ್ದ ಹೃದಯ ಹಗುರಾಗುತ್ತಾ ಇದೆ. ಪಶ್ಚಾತ್ತಾಪದಿಂದ ಬೆಂದು ಅಗ್ನಿಪರೀಕ್ಷೆ ಮಾಡಿ ಬಂದ ಸೀತೆಯಂತೆ ನಿರ್‍ಮಲವಾಗುತ್ತಿದ್ದೇನೆ ಅನ್ನಿಸ್ತಾ ಇದೆ. ನನ್ನ ವೃತ್ತಿಯಲ್ಲೇ ಎಲ್ಲವನ್ನೂ ಮರೆಯಲು ಯತ್ನಿಸ್ತಾ ಇದ್ದೇನೆ.

ಶೋಭಾ, ನನ್ನ ಗಂಡ ಶ್ರೀರಾಮನಂತಿರದಿದ್ದರೂ ನಾನು ಸೀತೆಯಂತೆ ಬದುಕಬೇಕೆಂದಿದ್ದೇನೆ.

ನಿನಗೆ ಈ ಕಾಗದ ಬರೆಯುತ್ತಿರುವ ಸಮಯದಲ್ಲೇ ನನಗೆ ಅವರಿಂದ ಫೋನು ಬಂದಿತ್ತು.

“ಹಲೋ…” ಎಂದೆ.

“ಜಾನಿ… ಜಾನಿ ಡಿಯರ್”

“ಪ್ರೊಫೆಸರ್ ಜಾನಕಿ ಮಾತಾಡ್ತಾ ಇರೋದು.”

“ಜಾನಿ ನಾನು… ಗುರ್‍ತು ಹಿಡೀಲಿಲ್ವಾ?”

“ರಾಂಗ್ ನಂಬರ್…” ಎಂದು ಫೋನು ತಟ್ಟನೆ ಕೆಳಗಿಟ್ಟೆ.

ನಂಗೆ ಈಗ ನಿದ್ದೆ ಬರ್‍ತಾ ಇದೆ. ಇನ್ನು ಪತ್ರ ಮುಗಿಸಲಾ? ಉತ್ತರ ಬರಿ.

ಇಂತಿ ನಿನ್ನ,

ಜಾನಕಿ
*****

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...