“ಒಂದಿಷ್ಟೂ ಕರುಣೆಯಿಲ್ಲದವಳು ಅಂತೀರಲ್ಲಾ ನನ್ನ? ನಿಮಗೊಂದಿಷ್ಟು ಮುಂದಿನ ವಿಚಾರ ಯಾಕೆ ಬರಲೊಲ್ಲದೂ ಅಂತೇನೆ ನಾನು! ನಾಗು ನಿಮ್ಮ ತಂಗೀನೂ ಹೌದು; ಗಂಡನ್ನ ಕಳಕೊಂಡು ನಿರ್ಗತಿಕಳಾಗಿ ಕೂತಿರೋದೂ ನಿಜ; ನಾವೇನಾದರೂ ಕೈಲಾದಷ್ಟು ಸಹಾಯಮಾಡಬೇಕೆಂಬೋದೂ ನ್ಯಾಯವೆ. ಆದರೆ ನಮಗೇ ತಿಂಗಳದ್ದು ತಿಂಗಳಿಗೇ ಸಾಕಾಗೋದಿಲ್ಲ ಎಂಬಂತಿರುವಾಗ….”
“ಹಾಗಂದರೇನೆ? ತಿಂಗಳಿಗೆ ಒಂದು ನೂರಂತೂ ಬರುತ್ತಾ ಇಲ್ವೆ? ಇರೋದು ನಾವಿಬ್ಬರು, ಎರಡು ಮಕ್ಕಳು, ಸಣ್ಣ ಸಂಸಾರ!…..”
“ಸಂಸಾರ ಸಣ್ಣದೂಂತ ಇನ್ನೊಬ್ಬರನ್ನು ತಂದು ತುಂಬಿಸಿ ಕೊಂಡು ಪೇಚಾಡಬೇಕೂಂತೀರಾ? ಅದೂ ಒಂದೆರಡು ದಿನವೇ? ಒಂದೆ ರಡು ತಿಂಗಳೆ? ಅವಳಾದರೂ ಒಂದು ಜೀವಾಂತ ಉಂಟೆ? ಬೆನ್ನ ಹಿಂದೇ ಇದ್ದಾವೆ…. ಒಂದು ಹೆಣ್ಣು, ಒಂದು ಗಂಡು! ಬಂದ ಮೇಲೆ ಹಿಟ್ಟು, ಬಟ್ಟೆಯೆಲ್ಲ ನಮಗಾದಂತೆ ನಮ್ಮ ಮಕ್ಕಳಿಗಾದಂತೆ, ಅವರಿಗೂ ಆಗ್ಬೇಕು. ಮಾತ್ರವೆ? ನಾಳೆ ಆ ಹುಡುಗನಿಗೆ ವಿದ್ಯೆ! ಆ ಹೆಣ್ಣಿಗೆ ಮದುವೆ! ಅಷ್ಟರಲ್ಲಿ ನಿಮ್ಮ ಈ ‘ಸಣ್ಣ ಸಂಸಾರ’ ಎಂಬೋದು ಸಣ್ಣದಾಗಿಯೇ ಇದ್ದು ಬಿಡುತ್ತೆಯೇ? ಆಗ ನಿಮ್ಮ ಈ ಒಂದು ನೂರು ಏನೆಲ್ಲ ಮಾಡೀತು? ಏನೋ ಮನೆಯಲ್ಲಿ ಒಂದಿಷ್ಟು ನೆಮ್ಮದಿ ಇತ್ತು ಇಷ್ಟರ ತನಕ. ಮುಂದೆ ಈ ಮನೆ, ಈ ಸಂಸಾರ ಎಂಬೋದರಲ್ಲಿ ಒಂದು ರವಷ್ಟು ಸುಖಶಾಂತಿ ನಾನು ಬೇರೆ ಕಾಣೆ ಅನ್ನೋ ಹಾಗಿನ ಗೋಳಿನ ಬಾಳಲ್ಲಿ ಹೊರಳಾಡಬೇಕೂಂತ ಬ್ರಹ್ಮ ನನ್ನ ಹಣೇಲಿ…..” (ಕಣ್ಣೀರು!)
ಶಂಕರರಾಯನು ತನ್ನ ಹೆಂಡತಿಯ ಮಾತಿನ ಸರಣಿಗೆ ಮೆಚ್ಚಲಿಲ್ಲ. ತನ್ನ ತಂಗಿಯನ್ನೂ ಅವಳ ಮಕ್ಕಳನ್ನೂ ಕರೆದುಕೊಂಡು ಬರುವುದರಿಂದ ತಮ್ಮ ಅಚ್ಚುಕಟ್ಟಿನ ಸಂಸಾರದ ಸವಿಗಟ್ಟು ತುಸು ಕೆಡುವುದಿದ್ದರೂ, ಅನಾಥಳಾಗಿ ಸಂಕಷ್ಟದಲ್ಲಿ ಬಿದ್ದಿರುವ ಸೋದರಿಯನ್ನು ಕೈಬಿಟ್ಟು ಬಿಡುವುದು ಅವನಿಗೆ ಸರಿದೋರಲಿಲ್ಲ. ಆದುದರಿಂದ, ಮುಂದೆ ಅಂತಹ ಬಿಕ್ಕಟ್ಟಿನ ಪ್ರಸಂಗ ಬಂದಾಗ ಏನಾದರೊಂದು ದಾರಿ ಯೋಚಿಸಿದರಾಯಿತು. ಈಗೇಕೆ ಕರಕರೆ ಹಚ್ಚಿಕೊಳ್ಳುವೆ?” ಎಂದು ಸಮಾಧಾನವಾಗದ ಹೆಂಡತಿಗೆ ಸಮಾಧಾನ ಹೇಳಿ ಮರುದಿನ ಬೆಳಿಗ್ಗೆ ನಾಗುವಿದ್ದ ಊರಿಗೆ ಹೊರಟು ಹೋದ ಆತ.
* * *
ತಂಗಿಯು ಅಣ್ಣನ ಮೋರೆ ನೋಡಿದುದೇ ತಡ… ಕಟ್ಟಿಟ್ಟ ಅಳುವು ಏರಿಮುರಿದು ಹರಿಯಿತು. ಅಣ್ಣನ ಕಣ್ಣೂ ನೀರಾಯಿತು. ಇವರನ್ನು ಕಂಡು ಮಕ್ಕಳೂ ಮರುಗಿದುವು. ಕೊನೆಗೆ ಅಣ್ಣನೇ ಎದೆಗಟ್ಟಿ ಮಾಡಿ ಕೊಂಡು, ನಾಗೂ, ಈ ಮಕ್ಕಳನ್ನು ನೋಡಿ ದುಃಖವನ್ನು ಮರೆ. ಇವರಿಗಾಗಿ ಬಾಳು!” ಎಂದ.
“ಇವರಿಲ್ಲದಿದ್ದರೆ ಅಂದೇ ಅವರೊಂದಿಗೆ ನಡೆಯುತ್ತಿದ್ದೆ. ಆ ದಿನ ಅಳಿಯಲಾರದೆ ಉಳಿದುದು ಇವರಿಗಾಗಿಯೇ. ಆದರೆ ಅಂದು ಮುಗಿಸಲಾರದ ಈ ಬಾಳನ್ನು ಮುಂದೆ ಹೇಗೆ ಸಾಗಿಸುವುದೆಂಬುದು ಮಾತ್ರ ಇನ್ನೂ ನಿರ್ಧಾರವಾಗಿಲ್ಲ” ಎಂದು ನಿಟ್ಟುಸಿರುಬಿಟ್ಟಳು ಆಕೆ.
“ಅದೇನೂ ಅಂತಹ ಬಿಡಿಸಲಾಗದ ಸಮಸ್ಯೆಯಲ್ಲ. ಮಕ್ಕಳೊಡನೆ ನನ್ನೊಟ್ಟಿಗೆ ಹೊರಟು ಬಾ, ಇನ್ನು ಮುಂದೆ ನಿನ್ನದೂ ನನ್ನದೂ ಎಲ್ಲ ಎಲ್ಲ ಒಟ್ಟು ನನ್ನದೊಂದು ಸಂಸಾರ!”
“ಅಣ್ಣ, ಬೇಡ, ನಾನೆಲ್ಲಾದರೂ ಇಲ್ಲಿಯೇ ಇದ್ದು ಕೊಳ್ಳುತ್ತೇನೆ.”
“ಅದು ಹೇಗಾದೀತು? ಬಾವನೇನಾದರೂ ದುಡ್ಡು ಕೂಡಿಟ್ಟಿರಲಾರ; ಈ ಮಕ್ಕಳನ್ನು ಕಟ್ಟಿಕೊಂಡು ಹೇಗೆ ಜೀವಿಸಲಾಪೆ ನಾಗೂ?”
“ಕಟ್ಟಿಟ್ಟ ಕಾಸಿಲ್ಲದಿದ್ದರೂ ರೆಟ್ಟೆಯಲ್ಲಿ ಕಸುವಿದೆ. ಹೊತ್ತುಗಳೆಯುವುದಕ್ಕಾಗಿ ಅವರೇ ಕಲಿಸಿಕೊಟ್ಟ ವಿದ್ಯೆ ಮುಂದೆ ಹೊಟ್ಟೆ ಹೊರುವುದಕ್ಕೂ ನೆರವಾದೀತು. ಆದೇನೆಂಬೆಯಾ? ರಾಟೆ! ಸಾಕಾಗದಿದ್ದರೆ ಬೀಸುಗಲ್ಲೂ ಇದೆ!”
“ಅಯ್ಯೋ, ನಾಗೂ, ನಾನಿರುತ್ತ ನೀನು ಹಾಗೂ ದುಡಿದು, ಜೀವಿಸ ಬೇಕಾಗಿದೆಯೇ? ಈ ಹುಚ್ಚುತನ ಬಿಡು. ನನ್ನೊಡನೆ ಹೊರಡು.”
“ಇಲ್ಲಣ್ಣ, ನಾನು ಬರಲಾರೆ ನೀನು ಕೋಪಿಸಿಕೊಳ್ಳ ಬೇಡ. ಅನ್ಯಥಾ ಯೋಚಿಸಬೇಡ, ನಿನ್ನ ಹೃದಯ ಬಲ್ಲೆ; ನಮ್ಮದೊಂದು ಕರುಳು ನಿಜ. ಆದರೆ. . . . . . ಆದರೆ. . . . . .ಬೇಡ, ಅಣ್ಣ ನಾನು ಬರಲಾರೆ. ತೌರು ಎಷ್ಟೇ ಒಳ್ಳೆಯದ್ದಿರಲಿ, ಸಿರಿವಂತಿಕೆಯದ್ದಿರಲಿ, ಗತಿಗೆಟ್ಟು ತೌರು ಸೇರಬಾರದು, ದೂಡಿದಷ್ಟು ದಿನ ದೂಡುತ್ತೇನೆ. ಆದರೆ ಎಲ್ಲಾದರೂ ನಾನೂ ಅವರ ದಾರಿ ಹಿಡಿದರೆ, ಆಗ ಮಾತ್ರ, ಅಣ್ಣಾ, ಈ ಮಕ್ಕಳನ್ನು ನಿನ್ನ ಸೆರಗಿನಲ್ಲಿ ಹಾಕಿ ಹೋಗಿದ್ದೇನೆಂದು ತಿಳಿದು ಓಡಿಬಂದು ಕರೆದು ಕೊಂಡು ಹೋಗು. ನಿನ್ನ ಮಕ್ಕಳೇ ಎಂತ ತಿಳಿ! ಎಂತಹ ಸಂದರ್ಭದಲ್ಲಿಯೂ ಮರೆಯಬೇಡ. . . . . . .”(ಕಣ್ಣೀರು)
* * *
ಶಂಕರರಾಯನು ಅನಿರೀಕ್ಷಿತವಾಗಿ ಒಬ್ಬನೇ ಹಿಂತಿರುಗಿ ಬಂದುದು ಅವನ ಹೆಂಡತಿಗೆ ಆಶ್ಚರ್ಯವಾಯಿತು. ಮಾತ್ರವಲ್ಲ, ತುಸು ಸಮಾಧಾನವೂ ಆಗಿದ್ದಿರಬೇಕು. ಆದರೆ ಸಮಾಚಾರವೇನೆಂದು ತಾನಾಗಿ ಕೇಳಲು ಧೈರ್ಯ ಬರಲಿಲ್ಲ. ಅಂತೂ ಉಣಬಡಿಸುತ್ತಿದ್ದಾಗ ಆತನ ಪ್ರಸನ್ನ ಮುಖಮುದ್ರೆಯನ್ನು ಕಂಡು, ಬಂದು ಇಷ್ಟು ಹೊತ್ತಾದ್ರೂ ಅಲ್ಲಿನ ಸಮಾಚಾರವೇನೂಂತ ತುಟಿಯೆತ್ತಬೇಕೇ! ಅಷ್ಟು ಬೇಸರ ನನ್ನ ಮೇಲೆ!” ಎಂದು ಕೊಂಕುನುಡಿದಳು.
ಬೇಸರವೇನೂ ಇಲ್ಲ. ಅವಳು ಎಷ್ಟಕ್ಕೂ ಬರೋದಿಲ್ಲಾಂದ್ಳು. ಅಲ್ಲೇ ಇರುವಂತೆ ಏನಾದರೂ ಒಂದಿಷ್ಟು ವ್ಯವಸ್ಥೆ ಮಾಡಿಕೊಟ್ಟು ಬಂದೆ. ಇನ್ನು ಕೆಲವು ದಿನ ಬಿಟ್ಟು ತಿರುಗಿ ಹೋಗಬೇಕಾಗಿದೆ.”
“ಚೆನ್ನಾಯ್ತು! ಇಷ್ಟು ದಿನ ಒಂದು ಮನೆ, ಒಂದು ಸಂಸಾರ ಅಂತ ಇತ್ತು. ಇನ್ನು ಎರಡು ಮನೆ, ಎರಡು ಸಂಸಾರ! ಅತ್ತ ಐವತ್ತು; ಇತ್ತ ಐವತ್ತು! ಬೇಡಪ್ಪಾ ಈ ಪೀಕಲಾಟ; ಎಲ್ಲ ಇಲ್ಲಿಗೇ ಬರ್‍ಲೀ. ನೀವು ಹೋದ ಮರುದಿನವೇ ಆ ಅಡಿಗೆ ಹೆಂಗ್ಸೂ ಬಿಟ್ಟು ಹೋದ್ಳು: ಮಕ್ಕಳನ್ನು ಹಿಡಿಯೋ ಹುಡುಗನೂ ಮೈ ಚೆನ್ನಾಗಿಲ್ಲಾಂತ ಊರಿಗೆ ಹೋಗಿಬಿಟ್ಟ!”
“ಅದೇನು! ಬರುವವರಿಗೆ ಮೊದಲಾಗಿ ಜಾಗಾ ಸಿದ್ಧ ಮಾಡಿಟ್ಟ ಹಾಗಿದೆಯಲ್ಲ? ಆದರೆ ಅವಳು ಬರೋದೂ ಇಲ್ಲ; ಅತ್ತ ಐವತ್ತು ಇತ್ತ ಐವತ್ತು ಆಗಬೇಕಾಗಿಯೂ ಇಲ್ಲ! ಬಾವನ ಲೆಕ್ಕದ ಪುಸ್ತಕ ತೆಗೆದು ನೋಡಿ ಯಾರದಾದರೂ ಋಣವಿದ್ದರೆ ತನ್ನ ಚಿನ್ನಾಭರಣ ಮಾರಿ ತೀರಿಸಿಕೊಡು ಅಂದ್ಳು. ಲೆಕ್ಕದ ಪುಸ್ತಕ ತೆರೆದು ನೋಡಿದಾಗ ಅದರಲ್ಲೇನಿತ್ತು ಬಲ್ಲೆಯಾ? ಐದು ಸಾವಿರ ರೂಪಾಯಿನ ಲೈಫ್ ಇನ್‌ಷ್ಯೂರೆನ್ಸ್ ಪಾಲಿಸಿ! ಅದು ಬಂದು ಹೆಚ್ಚು ದಿನ ಆಗಿದ್ದಿಲ್ಲ; ನಾಗೀಗೂ ಕೂಡಾ ಗೊತ್ತಿದ್ದಿಲ್ಲ! ಅವಳಿಗೇನೋ ಆ ಹಣ ಸಿಕ್ಕಿಬಿಡುತ್ತೆ. ಆ ಸಂಬಂಧ ತಿರುಗೊಮ್ಮೆ ಹೊಗೋಕೂಂದೆ. ವ್ಯವಸ್ಥೇಂದ್ರೆ ಅದು! ಅತ್ತ ಐವತ್ತು, ಇತ್ತ ಐವತ್ತಲ್ಲ, ತಿಳೀತೆ! ಅಂತೂ ನಿನ್ನಿಂದಾಂತ ಬಾವನಿಂದಾಂತ ಸಂಸಾರಿಯಾದವರೆಲ್ಲ ಒಂದು ಪಾಠ ಕಲಿಯೋಕಿದೆಯೆಂದು ತೋರಿತು ನನಗೂವ! ಹಾಗೇ ಆ ಇನ್‌ಷ್ಯೂರೆನ್ಸ್ ಕಂ ಏಜಂಟರ ಆಫೀಸಿಗೆ ಹೋದವನೇ ನಾನೂ ಒಂದೈದು ಸಾವಿರ ರೂಪಾಯಿನ ವಿಮಾ ಅರ್ಜಿ ಕೊಟ್ಟು ಬಂದು ಬಿಟ್ಟೆ. ಆಪದ್ಧನವಾಗಿ ಇದ್ದುಕೊಂಡು ಬಿಡ್ಲಿ ! ಈಗಿನ ಕಾಲದಲ್ಲಿ ಆಪದ್ಭಾಂಧವಾಂದ್ರೆ ಲೈಫ್ ಇಸ್ಕೂರೆನ್ಸ್ ಪಾಲಿಸಿ!”
*****