ಬೇರು ಕಿತ್ತ ಮರ, ನಾರು ನನ್ನ ನರ
ಹಗ್ಗವಾಯಿತು ನಿಮಗೆ ಉರುಳು ನನಗೆ
ಸಾವ ನೇಯುವ ನೂಲು, ಭಾವ ಬತ್ತಿದ ಮಾಲು
ಬಣ್ಣ ಬಣ್ಣದ ನೇಯ್ಗೆ ಬಿದ್ದೆ ಬಲೆಗೆ.
ನಿಮ್ಮ ಅನ್ನದ ಅಗುಳು, ಯಾರೂ ತಿನ್ನದ ಉಗುಳು
ಕಾಲು ಒತ್ತುವ ಕಾಲ-ಎಲ್ಲ ನಾನು
ಹುಟ್ಟು ಹಬ್ಬದ ಕಾಳು, ಸತ್ತ ಸೂಚನೆ ಕೂಳು
ನಡುವೆ ನಡ ಮುರಿದಂಥ ನಗುವು ನಾನು.
ಕಲ್ಲುಕೋಟೆಯ ಬೆವರು, ಗುಡಿಯ ಗೋಪುರ ಸೂರು
ಆಣೆಕಟ್ಟ ನಿಟ್ಟುಸಿರು, ನೀರಾದ ನಂಬಿಗನು
ಓಣಿ ಓಣಿಯ ಪೊರಕೆ, ಶುದ್ಧ ಬಯ್ಗಳ ಹರಕೆ
ಗುಡಿಸುತ್ತ ಗುಡಿ-ಸುತ್ತ ತಾನೇ ಕಸವಾದವನು.
ಯುದ್ಧಕಾಲದ ಕವಚ, ನಿದ್ದೆ ಕಾಲದ ಕಾವಲು
ಕಾಲದ ಕಾಲಿಗೆ ಮೆಟ್ಟು ಮೈಯ್ಯಾದೆನು
ಈಜು ಬುರುಡೆಯ ರೀತಿ ಮೇಲೆದ್ದು ಬರುವಂಥ
ಕನಸುಗಳು ಸುಟ್ಟು ಕರುಕಾದೆನು.
ನಿಮ್ಮ ಕನಸಿನ ಮನಸು, ಸುಳ್ಳ ಹಿಂದಿನ ಸತ್ಯ
ಕಾನೂನು ಕಂಬಿಗಳ ಕರುಳು ನಾನು
ಚಳಿಗೆ ಉಣ್ಣೆಯ ಉಡುಪು, ಬಿಸಿಲು ಕಾಲದ ಕೊಡೆ
ಗುಡುಗು ಸಿಡಿಲುಗಳ ಕೊರಳು ನಾನು.
ನಿಮ್ಮ ಮದುವೆಗೆ ತಾಳಿ, ಹಾಸಿಗೆಯು ಪ್ರಸ್ತಕೆ
ಜೀವರಸ ಧಾರೆಯ ಎರೆದು ಕೊಟ್ಟಾಯ್ತು
ಜೋಲಿ ಹೊಡೆಯದ ನಾನು ಜೋಗುಳದ ಹಾಡು
ಅತ್ತು ಕರೆದರೆ ಇಲ್ಲಿ ಕತ್ತು ಹೋದೀತು.
ಏನ ಹೇಳಲಿ ನಾನು ಕಣ್ಣ ಕಸಿದರೊ ನನ್ನ
ಹೇಳುತ್ತ ಬಂದದ್ದೆ ನೋಟವಾಯ್ತು
ನಾಲಗೆಯ ಕಿತ್ತು ನೆತ್ತರ ಕುಡಿದರೊ
ಅಮಲಲ್ಲಿ ಅಂದದ್ದೆ ವೇದವಾಯ್ತು.
ಹುಲಿಯ ವೇಷಕೆ, ನನ್ನ ಚರ್‍ಮ ತಮಟೆ
ನೋವ ಕಾಯಿಸಿದಾಗ ಕೆರಳುಶಬ್ದ
ಗಬ್ಬ ಹತ್ತಿದ ಗೀತೆ ಹೇಗೆ ಹಾಡಲಿ ನಾನು
ನಿಮ್ಮ ಕಾಲ್ತುಳಿತಕ್ಕೆ ಜೀವ ಸ್ತಬ್ಧ.
ಒತ್ತೆಯಾದವು ಚಿತ್ತ ಮಾತು ಮೈ ಮುನಿಸು,
ತಿನಿಸುಗಳ ರಾಜ್ಯದಲಿ ಮೇವು ನಾನು
ಗೋಳ ಗೀತೆಯು ಇಲ್ಲಿ ಗುಲಾಮ ಗುರುವೆ
ಮುಕುತಿಯೆಂದರೆ ನಮ್ಮ ಮಣ್ಣು ಹುಣ್ಣು.
ಉದ್ದ ಹಾಸಿದ ನಿಮ್ಮ ಹೆಬ್ಬಾವ ಇತಿಹಾಸ
ಸೀಳಿ ಬಂದೀತು ಸತ್ಯ ನಾಳೆ ಬೆಳಕು
ಹೂತ ಭೂತದ ಬೆವರು ವರ್‍ತಮಾನದ ನೀರು
ಹರಿದೀತು ನೆಲ ತುಂಬ ತೆನೆಯು ತೂಗೀತು.
*****