ಬುರ್ಖಾ ಬಿಟ್ಟು ಹೊರಗೆ ಬಾರವ್ವ – ಓ ತಂಗಿ
ಹೊಸಿಲ ದಾಟಿ ಲೋಕ ನೋಡವ್ವ
ತಲೆಯ ಮ್ಯಾಗಿನ ಸೆರಗ ತೆಗಿಯವ್ವ – ಓ ತಂಗಿ
ಅದನ್ನೆತ್ತಿ ಸೊಂಟಕೆ ಸಿಕ್ಕಿಸವ್ವ
ನೀನು ಬಣ್ಣದ ಗೊಂಬಿ ಅಲ್ಲವ್ವ – ಓ ತಂಗಿ
ನಿನ್ನ ಸೂತ್ರ ನನ್ನಲ್ಯಾಕವ್ವ
ಕೆರೆಗೆ ಹಾರ ನೀನು ಆದ್ಯವ್ವ – ಅದೇ ಪಾತ್ರಕೆ
ನನಗೆ ನೀನು ಕೇಳದೆ ಹೋದ್ಯವ್ವ
ಪಾತಿವ್ರತ್ಯ ನಿನಗೆ ಮಾತ್ರಾನೆ – ಅದೇ ನೀತಿ
ಗಂಡಿಗೆ ಇಲ್ಲ ಕೇಳೋದಿಲ್ವೇನೆ!
ಸಾವಿರ ಸಖಿಯರು ಕೃಷ್ಣನಿಗಲ್ವೇನೆ – ಹಾಗಿದ್ಮೇಲೆ
ಸಖಿಯರು ಕೂಡ ಕೃಷ್ಣರೆ ಅಲ್ವೇನೆ?
ನವಿಲ ಹೆಜ್ಜೆ ಇನ್ನು ಸಾಕವ್ವ – ಓ ತಂಗಿ
ಹುಲಿ ಹೆಜ್ಜೆ ಸ್ವಲ್ಪ ಹಾಕವ್ವ
ಇನ್ನೂ ಯಾಕೆ ನೀನು ಸುಕುಮಾರಿ – ನುಗ್ಗೆ ಮರ
ಹತ್ತಿಸುವವರು ನಿನಗೆ ಹೇಗೆ ಸರಿ?
ನಾನು ಕಲಿತು ಮಾತಾಡುತ್ತಿರುವೆ – ಅನುಭವದ್ಹೆಣ್ಣೆ
ನೀನು ಯಾಕೆ ಇನ್ನೂ ಮೌನಾನೆ?!
*****