ನಾಳೆ ಬೆಳೆ ಅಂದರೆ….
ಇವತ್ತೇ ಬೆಳೆದೆನಮ್ಮಾ
ಹೆಣ್ಣಾಗಿ ನಿಂತೆನಮ್ಮಾ… ಹೆಣ್ಣಾಗಿ ನಿಂತೆನಮ್ಮಾ.!
ಒಳ್ಳೆದಿರಲಿ ಕೆಟ್ಟದ್ದಿರಲಿ
ಕಾಲ ಎಂಗೆ ನಿಲ್ಲುತ್ತಮ್ಮಾ! ಕಾಲ ಎಂಗೆ ನಿಲ್ಲುತ್ತಮ್ಮಾ!
ಏನೇನೋ ತೊಳಕೆ
ಏನೇನೋ ಕನಸು
ಇನ್ನಂತಾಕಾಲ ಇನ್ನೆಲ್ಲಿ ಬರಬೇಕಮ್ಮಾ… ಇನ್ನೆಲ್ಲಿ ಬರಬೇಕಮ್ಮಾ..!
ಮನಗೆದ್ದ ಮನ್ಮಥ
ಕುದುರೆ ಏರಿ ಬಂದಂತೆ
ಪ್ರೀತೀಲಿ ಮನವೊಲಿಸಿ
ಕರೆದು ಕೊಂಡು ಹೋದಂತೆ
ಅಯ್ಯೋ!… ಹುಚ್ಚು ಮೂಳಿ ನಾನು
ಇಲ್ಲದ್ದ ಅಂದು ಕೊಂಡೆ
ಈಗೆಷ್ಟು ಸಂಕಟ ನೋಡು.
ಹೆಣ್ಣು ಮಕ್ಕಳೆಂದರೆ
ಸಾಕಿದ ದನಗಳಿವರಿಗೆ
ಕೊಟ್ಟಲ್ಲಿಗೆ ಹೋಗಬೇಕು
ಕಂತೆ ಒಗೆಯೋತನಕ ಕತ್ತೆ ಚಾಕರಿ ಮಾಡಬೇಕು,
ಈ ಹಾಳು ಮನಸ್ಸೊಂದಿಲ್ಲದಿದ್ದು
ತಿಂದುಂಡು ಓಡಾಡುವುದೇ ಬದುಕಾಗಿದ್ದಿದ್ದರೇ…
ಎಂಗಿರುತಿತ್ತೊ ಏನೋ!
ಮಕ್ಕಳಿಲ್ಲದಿದ್ದರೇನು?
ಜಗವು ಕುವುಚಿ ಕೊಳ್ಳುವುದೇ?
ಹೀಗೆ ಎಳೆಪ್ರಾಯದ ಹುಡುಗಿಯರ ತಂದು
ಕೊಲೆ ಕೊಡುವುದು ಸರಿಯೆ?
ಯಾರಿಗೋ ಹಡೆದದ್ದಾಯ್ತು
ಯಾರನ್ನೋ ಹುಡುಕೋದಾಯ್ತು
‘ಇದೇ ನೋಡಿ ನಾನು ಬೇಡಿ ಬಂದಿದು’
ನೆಮ್ಮದಿ ಮಾತ್ರ
ಅಂಗೂ ಇಲ್ಲ! ಇಂಗೂ ಇಲ್ಲ!
ಎಷ್ಟೆಷ್ಟೊ ಒದ್ದಾಡ್ತೀನಿ
ಈ ಬದುಕು, ಈ ಮನೆ ನನ್ನದು ಅನ್ನಿಸುವುದೇ ಇಲ್ಲ.
ಹಾಲು ಬಾನ ಉಣ್ಣುವಿರಿ
ಹೆಣ್ಣು ಗಂಡು ಹೆತ್ತಿರುವಿರಿ
ಮೈಮನಸು ನಿಮಗೂ ಇದೆ
ನನ್ನ ಸಂಗತಿ ಹೇಳಿರುವೆ
ಇದಕೆ ನೀವೇನು ಹೇಳುವಿರಿ?
*****