ಸುಲಭ ಅಥವಾ ಕಷ್ಟದ
ಮಾತಲ್ಲ-
ಅವ ಸುಮ್ಮನೇ ಕೂತಿದ್ದ
ಸಂಜೆಯೂ ಆಗುತ್ತ ಇತ್ತು
ಆಗಲೇ ಗಡಿಯಾರ
ಆರರ ಹತ್ತಿರ ಬಂದಿತ್ತು
ಎದ್ದು
ಕಿಟಕಿಯ ತೆರೆದು ಬಂದ
ಇದ್ದ
ಬೆಳಕೂ ಒಳ ಬಂತು
ಅದು
ನದೀ ಮೇಲಿಂದ ಬಂತು
* * *
ಅವ ಆರಾಮ ಕುರ್ಚಿಯಲಿ
ಇದ್ದಾನೆ
ಅವ ಈಗಲೇ
ಬರಲಿದ್ದಾನೆ
ನೆರೆಮನೆ ಪಾತ್ರೆಯ
ಸದ್ದು ? ಅಥವ
ಗೋಡೆಯ ಮೇಲಿಂದ ಬೆಕ್ಕು
ಕೆಳ ಹಾರಿದ್ದು ?
ಅಥವ ಯಾರೋ
ನೀರಿಗೆ ಬಿದ್ದು…
ಅವಸರವೇನು
ನಿಧಾನ
* * *
ಬಹುದಿನಗಳಿಂದಲೂ
ಒಬ್ಬ ಸಿಗರೇಟು ತೆಗೆದರೆ
ಇನ್ನೊಬ್ಬ ಕಡ್ಡಿಗೀರುವನು
ಹಾಗಿತ್ತು
ತುಸು ಸಂಗೀತವೂ ಇತ್ತು
ಅದು ಆಗೀಗ
ನೀರ ಝುರಿಯಂತೆ
ಹರಿದು ಬರುತಿತ್ತು
ಮುಂದೆ ಹೋದಂತೆ
ಹಿಂದೆಯೂ ಬರುತಿತ್ತು
ನದಿ ದಾಟಿದವರಿಗೆ
ಇದು ಗೊತ್ತು
ನದೀ ಮಧ್ಯದಲೇ
ತಲೆ ಸುತ್ತು
ಆಗ
* * *
ಆಗಲೇ ಆರು ಹೊಡೆಯಿತು
ಕೊನೇ ಉಗಿಬಂಡಿಯೂ
ವರ್ಧಿಸಿತು ವೇಗ
ಆಗಲೇ
ಅಸ್ಪಷ್ಟ ಬೆಳಕಿನಲಿ
ನೀ ಎದ್ದು ನಿಂತಿ
ಎರಡೂ ಕೈಯಲಿ ಕಲ್ಲ
ಎತ್ತಿ ಹೊಡೆದಿ
ಆಮೇಲೆ ಕಿಟಕಿಯ
ಹೊರಕ್ಕೆ ದೂಡಿದಿ
ಧಡ್ಡೆಂದು ಸದ್ದು
ಒಮ್ಮೆ ಕೇಳಿಸಿತು
ಉಗಿ ಬಂಡಿಯ ಸದ್ದು
ಅದನ್ನು ಅಳಿಸಿತ್ತು
* * *
ಅವ ಬಾಗಿಲ ಬಳಿ
ಹೋಗುವನು
ಒಂದು ಕ್ಷಣ ಏನೋ
ಯೋಚಿಸಿ ನಿಲ್ಲುವನು
ಆಮೇಲೆ ಬಾಗಿಲ
ತೆರೆಯುವನು
ಅವನೇ ! ಅವ
ಒಂದು ಕ್ಷಣ ಏನೋ
ಯೋಚಿಸಿ ನಿಲ್ಲುವನು
ಆಮೇಲೆ ಕಾಲ
ಮನೆಯೊಳಗೆ ಇರಿಸುವನು
* * *
“ಸಂಜೆಯ ಕಿಟಕಿ ?”
“ಹೌದು”
“ಸರಿಯಾದ ಕಡೆಗೆ”
“ನನ್ನದೆ ಯೋಚನೆ”
“ಆ ಕಲ್ಲು ?”
“ಅದೂ ನನ್ನದೆ”
“ಚೆನ್ನಾಗಿದೆ. ಕಬ್ಬಿಣ ಅಥವ…”
“ಯುರೇನಿಯದಂತೆ ?”
“ಬಹಳ ಭಾರವಿರಬೇಕು”
“ಇದೆ”
* * *
ಅವಸರದ ಮಾತಲ್ಲ
ಅದರ ಅಗತ್ಯವೂ ಇಲ್ಲ
ಒಂದೆರಡು ದಿನಗಳೆ ?
ಆರಾಮ ಕುರ್ಚಿಯಲಿ
ನೀನು ಕುಳಿತಿರುವಿ
ಬಾಗಿಲಿನ ಬಡಿತಕ್ಕೆ
ಎದ್ದು ಬರುವಿ
ಒಂದು ಕ್ಷಣ ಯೋಚನೆಗೆ
ಸಿಕ್ಕಿದಂತಿರುವಿ
ಆಮೇಲೆ ನಿಧಾನ
ತೆರೆದೇ ತೆರೆಯುವಿ
ಒದ್ದೆಯಾಗಿಲ್ಲ ಮೈ
ಒದ್ದೆಯಾಗಿಲ್ಲ ಕೂದಲೂ
ಆದರೂ
ಹಳೇ ಹಾವಸೆಯ ವಾಸನೆ
ಮತ್ತೊಮ್ಮೆ ನಾನು
ಒಳಕ್ಕೆ ಕಾಲಿಡುವೆ
*****