ನಾವು ಬ್ಯಾಟರಿಗಳನ್ನು ಕೆಲವೇ ಕಾಲದವರೆಗೆ ಬಳಸಿ ಎಸೆದು ಬಿತುತ್ತೇವೆ. ಆದರೆ ೫೦ ವರ್ಷಗಳ ವರೆಗೆ ಬಾಳಿಕೆ ಬರಬಲ್ಲ ಬ್ಯಾಟರಿಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅಮೆರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಸಂಶೋಧನೆಯನ್ನು ಮಾಡಿದ್ದಾರೆ. ಈ ವಿದ್ಯುತ್‌ಕೋಶ (cell) ಗಳನ್ನು ಬಳೆಸುವಲ್ಲಿ ಸಂಶೋಧನೆಯ ವಿವರ ಈ ರೀತಿ ಇದೆ. ರೇಡಿಯೋ ಆಕ್ಟಿವ್ (ವಿಕಿರಣ ಶೀಲ) ವಸ್ತುಗಳನ್ನು ಬಳಸಿ ತಯಾರಿಸಲಾಗುವ ಇಂತಹ ಬ್ಯಾಟರಿಯ ಬಳಕೆಯಿಂದ ದೀರ್ಘ ಅವಧಿಯವರೆಗೆ ಕಡಿಮೆ ಶಕ್ತಿಯನ್ನು ಬಳೆಸುವ ಗಡಿಯಾರದಂತಹ ಚಿಕ್ಕ ಎಲೆಕ್ಟ್ರಾನಿಕ್ ವಸ್ತುಗಳಿಗೆ ಶಕ್ತಿಯನ್ನು ಪೂರೈಸಬಹುದೆಂದು ಹೇಳಲಾಗಿದೆ. ಅತ್ಯಂತ ಕಡಿಮೆ ಮಟ್ಟದ ವಿಕಿರಣವನ್ನು ಹೊರ ಸೂಸುವ ನಿಕೆಲ್-63 (Nickel-93) ರಂತಹ ಐಸೋಟೋಪ್ (ಐಸೋಟೋಪ್ ಪರಮಾಣು ತೂಕಬೇರೆಯಾಗಿರುವ ಆದರೆ ರಾಸಾಯನಿಕ ಗುಣಗಳು ಒಂದೇ ಇರುವ ಒಂದೇ ಧಾತುವಿನ ಎರಡು ಅಥವಾ ಹೆಚ್ಚು ರೂಪಗಳು) ಬಳಸುವುದರಿಂದ ವಿಕಿರಣ ಶೀಲತೆ ದುಷ್ಟರಿಣಾಮಗಳನ್ನು ತಡೆಯಬಹುದೆಂಬ ವಿಶ್ವಾಸವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.
ತಾಮ್ರದ ಹಾಗೂ ನಿಕೆಲ್‍ನ ಪದರವೊಂದನ್ನು ಹೊಂದಿರುವ ಈ ಬ್ಯಾಟರಿಗಳಲ್ಲಿ ನಿಕಲ್ ಐಸೋಟೋಪ್ ಹೊರಸೂಸುವ ವಿಕಿರಣದಿಂದ ಶಕ್ತಿಯ ಉತ್ಪಾದನೆಯಾಗುತ್ತದೆ. ಅತ್ಯಂತ ಚಿಕ್ಕಗಾತ್ರದಲ್ಲಿಯೂ ಕೂಡ ನಿರ್ಮಿತವಾಗಬಲ್ಲ ಇಂತಹ ಬ್ಯಾಟರಿಗಳು ನಿಕೆಲ್ ಐಸೋಟೋಪದ ಅರ್ಧಾಯುಷ್ಯ ಅವಧಿಯಾದ ನೂರು ವರ್ಷಗಳವರೆಗೂ ಕಾರ್ಯನಿರ್ವಹಿಸಬಲ್ಲವು. ಅದರ ನಿಗದಿತ ಪ್ರಮಾಣಶಕ್ತಿ ಕನಿಷ್ಟವೆಂದರೂ ಐವತ್ತು ವರ್ಷಗಳವರೆಗೂ ಯಾವ ತೊಂದರೆಯೂ ಇಲ್ಲದಂತೆ ಕಾರ್ಯನಿರ್ವಹಿಸುತ್ತದೆ.
ಆದರೆ ಇಂತಹ ಟ್ಯಾಟರಿಯು ಹೊರಸೂಸುವ ವಿಕಿರಣ ಮಾನವನ ಮೇಲೆ ಉಂಟು ಮಾಡಬಲ್ಲ ದುಷ್ಪರಿಣಾಮ ಎಷ್ಟರಮಟ್ಟದ್ದು ಎಂಬ ಬಗೆಗೆ ಇನ್ನು ಚರ್ಚೆ ನಡೆಯುತ್ತವೆ. ಇವು ಹೊರಸೂಸುವ ಅತ್ಯಲ್ಪ ಮಟ್ಟದ ವಿಕಿರಣದಿಂದ ಕೆಟ್ಟ ಪರಿಣಾಮವೇನು ಉಂಟಾಗಲಾರದೆಂದು ಈ ಬ್ಯಾಟರಿಯನ್ನು ಕಂಡು ಹಿಡಿದ ವಿಜ್ಞಾನಿಗಳು ಹೇಳಿದರೆ ಇನ್ನು ಕೆಲ ವಿಜ್ಞಾನಿಗಳು ವಿಕಿರಣ ಎಷ್ಟೇ ಕಡಿಮೆಯಾದರೂ ಅದರಿಂದ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಖಂಡಿತವಾಗಿಯೂ ಉಂಟಾಗಲಿದೆ ಎನ್ನುತ್ತಾರೆ.
*****