ಬಂದವನು ಅವನೆ

ಬಂದವನು ಅವನೆ

ಚಿತ್ರ: ಅಪೂರ್ವ ಅಪರಿಮಿತ

ರಶ್ಮಿಗೆ ಆ ಮದುವೆ ಇಷ್ಟ ಇರಲಿಲ್ಲ, ಹಾಗಂತ ಮದುವೆಯೇ ಬೇಡವೆಂದವಳಲ್ಲ ಅವಳು. ಆದರೆ ಸೈನಿಕನನ್ನು ಮದುವೆ ಯಾದರೆ ವರ್ಷದಲ್ಲಿ ಒಂದೆರಡು ತಿಂಗಳು ಮಾತ್ರ ಸಂಸಾರ ಮಾಡಲು ದೊರೆಯುವುದು. ಉಳಿದ ತಿಂಗಳುಗಳಲ್ಲಿ ಪತಿರಾಯ ಯಾವಾಗ ಬಂದನೆಂದು ತಾನು ಕಾಯಬೇಕು. ಅತ್ತೆ-ಮಾವಂದಿರು ಒಳ್ಳೆಯವರಾಗಿದ್ದರೆ ತೊಂದರೆಯಿಲ್ಲ. ಸಿಡುಕರೋ, ಕೋಪಿಷ್ಟರೋ ಆಗಿದ್ದರೆ ದೇವರೇ ಗತಿ.

ಆದರೆ, ಅವಳ ಅಪ್ಪನದ್ದು ಒಂದೇ ಹಠ. “ಎಷ್ಟು ಜನರನ್ನು ನೀನು ನಿರಾಕರಿಸಿದ್ದಿ? ಹೀಗೆ ಆದರೆ ನಿನಗೆ ಈ ಜನ್ಮದಲ್ಲಿ ಮದುವೆ ಆಗಲಿಕ್ಕುಂಟಾ? ನಾನು ಮೊಮ್ಮಗನನ್ನು ನೋಡಲಿಕ್ಕುಂಟಾ? ಈ ಪ್ರಪಂಚದಲ್ಲಿ ಸೈನಿಕರನ್ನು ಯಾರೂ ಮದುವೆ ಆಗುವುದಿಲ್ಲವೇ? ನಿನ್ನದು ಒಬ್ಬಳದ್ದೇನು ಹೆಚ್ಚುಗಾರಿಕೆ” ಎಂದು ದಬಾಯಿಸಿದ್ದರು.

ಅಮ್ಮನೂ ಅದಕ್ಕೆ ದನಿ ಸೇರಿಸಿದ್ದಳು. “ನನಗೆ ಮದುವೆ ಆಗುವಾಗ ನನ್ನಲ್ಲಿ ಯಾರು ಕೇಳಿದ್ದರು? ನಾನು ಇವರನ್ನು ಕಟ್ಟಿಕೂಂಡು ಏಗಲಿಲ್ಲವೇ? ಮದುವೆ ಆದಮೇಲೆ ಎಲ್ಲವೂ ಸರಿಯಾಗುತ್ತದೆ. ಸುಮ್ಮನೆ ಹಠ ಮಾಡಬೇಡ. ಪ್ರಾಯ ಇರುವಾಗ ಮದುವೆ ಆಗಬೇಕಪ್ಪಾ.” ಎಂದಾಗ ರಶ್ಮಿ ತಣ್ಣಗಾಗಿದ್ದಳು.

ವಿಕಾಸನೊಂದಿಗೆ ತನ್ನ ಮದುವೆ ವೈಭವದಲ್ಲಿ ನಡೆದು ಹೊಯ್ತು. ಪತಿ ಬಲಾಢ್ಯ ನಾಗಿದ್ದ. ಮಾತು-ಮಾತಿಗೆ ಅವನ ಬಾಯಿಯಿಂದ ಹಿಂದಿ ಶಬ್ದಗಳು ಉದುರುತ್ತಿದ್ದವು. ತನ್ನನ್ನು ಅವನು ಕರೆಯುತ್ತಿದ್ದುದ್ದೇ ಚೋಕರಿ ಎಂದು. “ಏ!ಚೋಕರಿ ಆವೋ ಇದರ್” ಎಂದು ಕರೆದಾಗ ತಾನು ಹೋಗದಿದ್ದರೆ, “ನಾನು ಮಿಲಿಟರಿಯವ. ಬೇಗ ಬರದಿದ್ದರೆ ಫಿರಂಗಿ ಉಡಾಯಿಸಿ ಬಿಡುತ್ತೇನೆಂ”ದು ಗದರಿಕೆಯ ದನಿಯಲ್ಲಿ ತಮಾಷೆ ಮಾಡುತ್ತಿದ್ದ. ತಾನು ಮುನಿಸಿಕೊಂಡಾಗ  “ಅಲ್ಲಿ ಮಿಲಿಟರಿಯಲ್ಲಿ ನಾನು ಎಲ್ಲರ ಮಾತು ಕೇಳಬೇಕು.ಇಲ್ಲಾದರೂ ನನ್ನ ಮಾತು ಕೇಳು.” ಎಂದು ರಮಿಸುತ್ತಿದ್ದ. ಅವಳಾಗ ಕರಗಿ ಹೋಗುತ್ತಿದ್ದಳು.

ಎಂಥಾ ದಿನಗಳು ಕಳೆದು ಹೋದವು. ಅವೆಲ್ಲಾ ಈಗ ನೆನಪುಗಳು ಮಾತ್ರ. ಎರಡು ತಿಂಗಳ ರಜೆ ಮುಗಿಯುತ್ತಾ ಬಂದಂತೆ ಅವನ ಮುಖದಲ್ಲಿ ವಿರಹದ ನೋವು. ತನಗೂ ಅದೇ ಭಾವ. ನೀವು ಆ ಕೆಲಸ ಬಿಟ್ಟು ಇಲ್ಲೇ ಇರಬಾರದಾ? ನಾನು ನಿಮ್ಮನ್ನು ಬಿಟ್ಟು ಇನ್ನು ಏಳೆಂಟು ತಿಂಗಳು ನೆನಪಲ್ಲೇ ದಿನದೊಡಬೇಕು ಎಂದಾಗ ಅವನು ಅವಳನ್ನು ಅಪ್ಪಿ, ಮುದ್ದಿಸಿ “ಹಾಗೆಲ್ಲ ಬಿಟ್ಟು ಬರಲಾಗುವುದಿಲ್ಲ.ಎಲ್ಲರೂ ಹಾಗೆ ಬಿಟ್ಟು ಬಂದರೆ ಈ ದೇಶ ಕಾಯುವವರು ಯಾರು? ಹೆದರಬೇಡ. ಅಲ್ಲಿ ಕ್ವಾರ್ಟರ್ಸ್ ಸಿಗುತ್ತದಾ ಎಂದು ಯತ್ನಿಸುತ್ತೇನೆ. ನಿನ್ನ ಅದೃಷ್ಟವಿದ್ದ ಹಾಗಾಗುತ್ತದೆ” ಎಂದಿದ್ದ.

ಉಳಿದ ನಾಲ್ಕು ದಿನಗಳು ಅದು ಹೇಗೆ ಕಳೆದು ಹೋದವೋ? ಒಂದು ನಿಮಿಷ ವನ್ನೂ ಆತ ವ್ಯರ್ಥ ಮಾಡಲಿಲ್ಲ. ಜೋಡಿ ಹಕ್ಕಿಗಳ ಹಾಗೆ ಗುಡ್ಡೆಯೇರಿದ್ದು, ಊರು ಸುತ್ತಿದ್ದು, ನದಿಯಲ್ಲಿ ಮಿಂದದ್ದು, ತನ್ನ ಯೌವನವನ್ನು ಪೂರ್ತಿಯಾಗಿ ಸೊರೆಗೊಂಡದ್ದು, ಶರೀರ ಇರುವುದೇ ಸುಖಕ್ಕಾಗಿ ಎಂಬ ಸತ್ಯ ಅವಳಿಗೆ ಅರಿವಾದದ್ದೇ ಆಗ. ಅವನ ಕೈಯಲ್ಲಿ ತಾನೊಂದು ವೀಣೆ ಯಾದಂತೆ, ಅವನು ತನ್ನಿಂದ ನಾದ ಮಾಧುರ್ಯವನ್ನು ಹೊರಡಿಸಿದಂತೆ, ಅವನು ಕರಗಿ ನೀರಾಗಿ ತನ್ನೊಳಗೆ ಹರಿದಂತೆ, ತನ್ನ ಜನ್ಮ ಸಾರ್ಥಕ ಆದಂತೆ.

ಅವೆಲ್ಲ ಬರಿಯ ನೆನಪುಗಳು. ಅವನು ಹೋದ ಮೇಲೆ ಮನೆ, ಮನಸ್ಸು ಎಲ್ಲವೂ ಖಾಲಿಖಾಲಿಯಾಗಿ ಹೋಯ್ತು. ಅವನ ಪತ್ರಕ್ಕಾಗಿ ಕಾಯುವುದೇ ತನ್ನ ದಿನಚರಿಯಾಗಿತ್ತು. ಅವನಿಂದ ವಾರಕ್ಕೆ ನಾಲ್ಕು ಕಾಗದ ಬರುತ್ತಿತ್ತು. ಅವನ್ನು ಪ್ರೀತಿಯೆಂಬ ರಸದಲ್ಲಿ ಅದ್ದಿ ಬರೆದಂತಿತ್ತು. ರಜೆ ಸಿಕ್ಕಿದ ತಕ್ಷಣ ಬರುತ್ತೇನೆ ಎನ್ನುವುದು ಪ್ರತೀ ಪತ್ರದ ಕೊನೆಯ ಒಕ್ಕಣೆ ಆಗಿತ್ತು. ನಿರೀಕ್ಷೆಗಳು ಅವಳನ್ನು ಬದುಕಗೊಟ್ಟಿದ್ದವು. ಅವನು ಬಂದಾಗ ಏನಾಗಬಹುದೆಂಬ ಕಲ್ಪನೆ ಅವಳನ್ನು ಪುಳಕಿತಳನ್ನಾಗಿ ಮಾಡುತ್ತಿತ್ತು.

ಇದ್ದಕ್ಕಿದಂತೆ ಅವನ ಪತ್ರಗಳು ನಿಂತು ಹೋದಾಗ ಅವಳಿಗೆ ಏನು  ಮಾಡಬೇಕೆಂದೇ ತೋಚಲಿಲ್ಲ. ತನಗೆ ಗೊತ್ತಿರುವವರನ್ನೆಲ್ಲಾ ಸಂಪರ್ಕಿಸಿದಳು. ಅವನ ರಿಜಿಮೆಂಟಿನ ಮುಖ್ಯಸ್ಥನಿಗೆ ಪತ್ರ ಬರೆದಳು. ನಾಲ್ಕು-ಐದು ತಿಂಗಳ ಬಳಿಕ ಉತ್ತರ ಬಂತು. “ನಿನ್ನ ಗಂಡ ಕಣ್ಮರೆ ಯಾಗಿದ್ದಾನೆ. ಹುಡುಕಾಟ ಸಾಗಿದೆ.”

ಅವಳು ಭೀತಿ ಯಿಂದ ತತ್ತರಿಸಿ ಹೋದಳು. ಕಾಣೆಯಾಗಿದ್ದಾನೆಂದರೆ, ಅದೂ ಗಡಿಯಲ್ಲಿ, ಏನಾಗಿರಬಹುದೆಂಬ ಕಲ್ಪನೆ ಅವಳನ್ನು ನಡುಗಿಸಿತು. ವಿಷಯ ಊರಿನವರಿಗೆ ಗೊತ್ತಾಗಿ ತಲೆಗೊಂದರಂತೆ ಮಾತಾಡ ತೊಡಗಿದರು. ಅಂತಿಮ ತೀರ್ಮಾನ ಒಂದೆ, ಆತ ಎಲ್ಲೋ ಸತ್ತು ಹಿಮದ ಪಾಲಾಗಿರಬೇಕು.

ಅವಳಿಗೀಗ ದಿನದೊಡುವುದೇ ಕಷ್ತವಾಯ್ತು. ವೃದ್ಧ ಮಾವ-ಅತ್ತೆ ಯಂದಿರನ್ನು ಬಿಟ್ಟು ತವರಿಗೆ ಹೋಗಿ ಇದ್ದು ಬಿಡಲು ಮನಸ್ಸು ಒಪ್ಪಲಿಲ್ಲ. ಇಲ್ಲಿ ಇರಲೂ ಕಷ್ಟವಾಗುತ್ತಿತ್ತು. ಮದುವೆ ಯಾಗಿ ನಾಲ್ಕೈದು ತಿಂಗಳಲ್ಲೇ ಗಂಡನನ್ನು ಕಳಕೊಂಡಿದ್ದಾಳೆ ಎನ್ನುವ ವಿಷಯ ಎಲ್ಲರಿಗೂ ತಿಳಿದು ಹೋಯಿತು. ಅವಳು ರಸ್ತೆಯಲ್ಲಿ ಓಡಾಡುವಾಗ ಹಸಿದ ಕಣ್ಣುಗಳು ಅವಳನ್ನು ನುಂಗುವಂತೆ ನೋಡತೊಡಗಿದವು. ಕೆಲವರು ಮೆಲ್ಲ ಹಿಂಬಾಲಿಸಿ ಬರುವವರಿದ್ದರು. ರಾತ್ರೆ ಬೇಕೆಂದೇ ಬಾಗಿಲು ಬಡಿದು ತನ್ನ ಹೆಸರು ಕೂಗುವವರಿಂದ ಅವಳಿಗೆ ಮಾನಸಿಕ ಹಿಂಸೆಯಾಗ ತೊಡಗಿತು.

ಅನಿರೀಕ್ಷಿತವಾಗಿ ತನ್ನ ಗಂಡನ ದೂರದ ಸಂಬಂಧಿ ಆ ಮನೆಗೆ ಬಂದಾಗ ವಾತಾವರಣ ಬದಲಾಯ್ತು. ಮಾವ, ಅತ್ತೆ ಕಣ್ಣೀರ ಕೋಡಿ ಹರಿಸಿದರು. ಇದ್ದ ಒಬ್ಬ ಮಗ ಹೋಗಿಬಿಟ್ಟ. ಇಲ್ಲಿ ಇರುವ ಹೊಲಗದ್ದೆ ನೋಡಿಕೊಳ್ಳುವವರಿಲ್ಲ. ಸಾಯುವ ಕಾಲಕ್ಕೆ ಮಗನೂ ಇಲ್ಲ. ಹೊಟ್ಟೆಗೂ ಇಲ್ಲದಂತಾಯಿತಲ್ಲ ಶಿವ ಎಂದು ಮತ್ತೆ ಮತ್ತೆ ಹೇಳಿಕೊಂಡು ಬಿಕ್ಕಿದರು.

“ನಿನಗೂ ಯಾರೂ ಇಲ್ಲ. ನೀನ್ಯಾಕೆ ಇಲ್ಲೇ ಇರಬಾರದು” ಎಂದು ಅವನನ್ನು ಅಂಗಲಾಚಿದರು.

ನೆಂಟನಾಗಿ ಬಂದವ ಗಟ್ಟಿಯಾಗಿ ತಳವೂರಿದ. ರಕ್ಷಣೆಯಿಲ್ಲದ ಹೊಲ, ಗದ್ದೆಗಳಿಗೆ ಬೇಲಿ ಹಾಕಿದ. ರಾತ್ರಿಯ ಬಾಗಿಲು ಬಡಿತಗಳು ನಿಂತವು. ಅವಳಲ್ಲಿ ಹೊಸ ಭಾವಗಳು ಮೂಡಲಾರಂಭಿಸಿದವು. ಅದಕ್ಕೆ ತಕ್ಕಂತೆ ಮಾವನೇ ಒಂದು ದಿನ ವಿಷಯ ಪ್ರಸ್ತಾಪಿಸಿದ. “ನೀನೀಗ ನಮ್ಮ ಮಗನಾಗಿ ಬಿಟ್ಟೆ ಸಂತೋಷ. ರಶ್ಮಿಗೆ ಯಾಕೆ ಗಂಡನಾಗಬಾರದು?”

ಅವನು ಆಶ್ಚರ್ಯದಿಂದ ಮುದುಕನನ್ನೇ ನೋಡಿದ. ರಶ್ಮಿಯನ್ನೂ ನೋಡಿದ. ಅವಳು ತಲೆ ತಗ್ಗಿಸಿ ನೇರ ಒಳಗೆ ಹೋಗಿಬಿಟ್ಟಳು. ಅವನ ಮಾತು ಅವಳಿಗೆ ಕೇಳುತ್ತಿತ್ತು. “ನೋಡಿ, ತಾತ! ನಾನು ಹಾಗೆ ಈವರಗೆ ಯೋಚಿಸಿದವನಲ್ಲ. ಮನೆಯಲ್ಲಿ ಕೇಳೋಣವೆಂದರೆ ನನ್ನದೆನ್ನುವ ಮನೆಯೂ ಇಲ್ಲ. ಹಿರಿಯರೂ ಇಲ್ಲ. ಆದರೆ, ರಶ್ಮಿಗೆ ಬೇರೆ ಯಾರನ್ನಾದರೂ ಮದುವೆಯಾಗಬೇಕೆಂದಿದ್ದರೆ ಆಗಲಿ. ನೀವು ಯಾಕೆ ನಿಮ್ಮ ಅಭಿಪ್ರಾಯವನ್ನು ಅವಳ ಮೇಲೆ ಹೇರಬೇಕು?”

ಒಂದಷ್ಟು ದಿನಗಳು ಕಳೆದವು. ಒಂದು ದಿನ ಅತ್ತೆ ರಶ್ಮಿಯೊಡನೆ ವಿಷಯ ಪ್ರಸ್ತಾಪಿಸಿದಳು. “ಸತ್ತವನ ನೆನಪಲ್ಲಿ ಎಷ್ಟು ದಿನ ಬದುಕುತ್ತೀಯಾ? ನಾವು ಸತ್ತ ಮೇಲೆ ಈ ಸಂತೋಷನೂ ಇಲ್ಲಿಂದ ಹೋಗಿ ಬಿಟ್ಟರೆ ಮತ್ತೇನು ಮಾಡುತ್ತೀಯಾ? ಅವನನ್ನು ನಾವು ಮಗನೆಂದು ಒಪ್ಪಿಯಾಗಿದೆ. ನೀನ್ಯಾಕೆ ಗಂಡನಾಗಿ ಸ್ವೀಕರಿಸಬಾರದು?”

’ಅವಳು ಹ್ಞಾಂ ಅನ್ನಲಿಲ್ಲ ಹ್ಞೂಂ ಅನ್ನಲಿಲ್ಲ. ಅವಳಿಗೀಗ ತನ್ನ ಗಂಡನ ಮುಖವೇ ಮರೆತು ಹೋಗಿತ್ತು. ಅಲ್ಲಿ ಸಂತೋಷನ ಮುಖ ಅಚ್ಚೊತ್ತಿತ್ತು. ಗಂಡನೊಡನೆ ಕಳೆದ ಸುಖ ಸಂತೋಷನಿಂದ ತಾನು ಪಡೆದಂತೆ ಭಾಸವಾಗುತ್ತಿತ್ತು. ಕೊನೆಗೊಂದು ದಿನ ತನ್ನ ತುಮುಲಕ್ಕೆ ಅಂತ್ಯ ತಂದುಕೊಂಡಳು. ಸಂತೋಷ-ರಶ್ಮಿಯರ ಮದುವೆ ಸರಳವಾಗಿ ಊರ ಹಿರಿಯರ ಉಪಸ್ಥಿತಿಯಲ್ಲಿ ನಡೆದು ಹೋಯಿತು.

ಐದು ವರ್ಷಗಳು ಉರುಳಿದವು. ಒಂದು ದಿನ ಬೆಳಗ್ಗೆ ತನ್ನ ಸಿಂಬಳ ಸುರುಕ ಮಗನನ್ನು ತಟ್ಟಿ ಎಬ್ಬಿಸಲು ವಿಫಲ ಯತ್ನ ಮಾಡುತ್ತಿದ್ದ ರಶ್ಮಿಗೆ ಯಾರೋ ಬಾಗಿಲು ಬಡಿದ ಸ್ವರ ಕೇಳಿಸಿತು. ಅರೆ, ಇದಾರಪ್ಪ ಇಷ್ಟು ಬೆಳಿಗ್ಗೆ ಎಂದು ಯೋಚಿಸುತ್ತ ಹೊರಬಂದು ಬಾಗಿಲು ತೆರೆದಳು. ಉದ್ದಾನೆ ಗಡ್ಡದ ವ್ಯಕ್ತಿ ಯೊಬ್ಬ ನಿಂತಿದ್ದ. ಗುರುತು ಸಿಗಲಿಲ್ಲ. ಸೀದಾ ಒಳಗೆ ಧಾವಿಸಿದವಳೇ ಸಂತೋಷನನ್ನು ಎಬ್ಬಿಸಿ, “ನೋಡಿ ಯಾರೋ ಬಂದಿದ್ದಾರೆ ಮಾತಾಡಿಸಿ.” ಎಂದಳು.

ಅಷ್ಟು ಹೊತ್ತಿಗೆ ಆ ವ್ಯಕ್ತಿ ಒಳಗೆ ಬಂದಿದ್ದ. ಆ ಮನೆಯಿಡೀ ತನಗೆ ಸೇರಿದ್ದೆಂಬಂತೆ ಅತ್ತಿತ್ತ ದಿಟ್ಟಿಸಿದ. ಈಗ ಅತ್ತಿ-ಮಾವ ಚಾವಡಿಗೆ ಬಂದು ಅವನನ್ನು ನೋಡ ತೊಡಗಿದರು. ಎಚ್ಚರವಾದ ಗೊಣ್ಣೆ-ಸುರಕ ಮಗನು ತಾಯಿಯ ಸೆರಗಿಗೆ ಅಂಟಿಕೊಂಡು ಭೀತಿಯಿಂದ ಆಗಂತುಕನನ್ನು ನೋಡತೊಡಗಿದ.

ಆಗಂತುಕ ಎಲ್ಲರನ್ನೂ ದಿಟ್ಟಿಸಿದ. “ನನ್ನನ್ನು ನೀವು ಕ್ಷಮಿಸಬೇಕು. ನಾನು ವಿಕಾಸ ನೊಡನೆ ಗಡಿ ಕಾಯುತ್ತಿರುವಾಗ ಶತ್ರುಗಳು ದಾಳಿ ಮಾಡಿದರು. ನಾವು ಬಿಡಲಿಲ್ಲ. ಆದರೆ, ಅವರ ಸಂಖ್ಯೆ ನಮಗಿಂತ ಏಳೆಂಟು ಪಾಲು ಹೆಚ್ಚಿತ್ತು. ನಮ್ಮನ್ನು ಸೆರೆ ಹಿಡಿದು ಅವರ ಜೈಲಿಗೆ ತಳ್ಳಿದರು. ವಿಕಾಸ್ ಅಲ್ಲೇ ಕೊನೆಯುಸಿರೆಳೆದ. ಸಾಯುವ ಮುನ್ನ ನನ್ನಲ್ಲೊಂದು ಮಾತು ಹೇಳಿದ್ದ. “ನಿನಗೆ ಬಿಡುಗಡೆಯಾದರೆ ನಮ್ಮ ಮನೆಗೆ ಹೋಗು. ಒಳ್ಳೆಯ ಗಂಡ ನೊಬ್ಬನನ್ನು ನೋಡಿ ಮದುವೆಯಾಗಲು ರಶ್ಮಿಗೆ ತಿಳಿಸು. ಅವಳು ನೆಮ್ಮದಿಯಾಗಿ ಬದುಕಲಿ” ಎಂದು. ಈಗ ಅವನ ಆತ್ಮಕ್ಕೆ ನೆಮ್ಮದಿಯಾಗಿರಬಹುದು. ರಶ್ಮಿಗೆ ಒಬ್ಬ ಒಳ್ಳೆಯ ಗಂಡ ಸಿಕ್ಕಿದ್ದಾನೆ. ಮಗುವೂ ಆಗಿದೆ. ಸರಿ. ನಿಮಗೆಲ್ಲ ಒಳ್ಳೆಯದಾಗಲಿ ನಾನಿನ್ನು ಬರುತ್ತೇನೆ.” ಎಂದು ಹೊರಟ.

ಆಗ ಸಂತೋಷ. “ಕಾಫಿ, ತಿಂಡಿ ಮುಗಿಸಿಕೊಂಡು ಹೋಗಬಾರದಾ” ಎಂದು ಕೇಳಿದ. ಆಗಂತುಕ ವಿಷಾದದ ನಗೆ ಚೆಲ್ಲಿ “ಅದೆಲ್ಲ ಬೇಡ. ವಿಕಾಸನ ಮಾತನ್ನು ಮುಟ್ಟಿಸಲಿಕ್ಕೆಂದೇ ಬಂದವ ನಾನು. ಇನ್ನು ನನಗಿಲ್ಲಿ ಯಾವ ಕೆಲಸವೂ ಉಳಿದಿಲ್ಲ. ನಿಮಗೆಲ್ಲ ಒಳ್ಳೆಯದಾಗಲಿ.” ಎಂದು ಹೊರಟು ಬಿಟ್ಟ. ಅವನ ಕಣ್ಣಂಚಿನಲ್ಲಿ ನೀರಾಡುತ್ತಿತ್ತು.

ವಿಕಾಸನ ನೆನಪಲ್ಲಿ ಮನೆಯಲ್ಲೊಂದು ವಿಷಾದದ ಕ್ಷಣ ಮೂಡಿತು. ಆಗಂತುಕ ಇವರಿಗೆ ಬೆನ್ನು ಹಾಕಿ ರಸ್ತೆಯ ಉದ್ದಕ್ಕೆ ನಡೆದು ಕಣ್ಮರೆಯಾದ. ಅವನ ಮನಸ್ಸಿನಲ್ಲೊಂದು ಪ್ರಸನ್ನತೆಯ ಭಾವವಿತ್ತು. ತನಗೆ ತಾನೇ ಅವನು ಹೇಳಿಕೊಂಡ. “ಸದ್ಯ ಯಾರೂ ನನ್ನನ್ನು ವಿಕಾಸ್ ಎಂದು ಗುರುತಿಸಲಿಲ್ಲವಲ್ಲ!”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿಂಹದ ಮದುವೆ
Next post ಪೂರ್ಣಚಂದ್ರ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…