ಜೀ… ಗಾಂಧೀ

ಜೀ… ಗಾಂಧೀ

ಅರುಣ್‌ಗಾಂಧಿ ಹೆಗಲಿನಿಂದ ಲ್ಯಾಪ್‌ಟಾಪಿನ ಚೀಲವನ್ನು ಕೆಳಗಿಳಿಸಿ ತಿರುಗುವ ಕುರ್ಚಿಯಲ್ಲಿ ಕೂರುತ್ತಿದ್ದಂತೆಯೇ ಬಿಳಿಯ ಸಮವಸ್ತ್ರ ಧರಿಸಿದ್ದ ಸೇವಕ ಬಂದು ಒಂದು ಕವರನ್ನು ಕೊಟ್ಟು ಸಹಿ ಮಾಡಿಸಿಕೊಂಡು ಹೋದ. ಪ್ರತಿದಿನ ಹೀಗೆ ಲೆಟರ್‌ಗಳು ಬರುತ್ತಿದ್ದುದು ಸಹಜವಾಗಿದ್ದರೂ, ಅಸಹಜವಾಗಿ ಕವರಿನ ಮೇಲೆ ತನ್ನ ಹೆಸರು ಇದ್ದುದನ್ನು ನೋಡಿ ಕುತೂಹಲದಿಂದ ಒಡೆದು ಓದಿದ.

ಇದೀಗ ತಾನೇ ಎ.ಸಿ.ಯಿದ್ದ ಹೋಂಡ ಸಿವಿಕ್ ಕಾರಿನಿಂದ ಇಳಿದು ಬಂದಿದ್ದರೂ ಮೈ ಬೆವರಲಾರಂಭಿಸಿತು. ಅದೇಕೋ ಕಣ್ಣಿಗೆ ಕತ್ತಲಾವರಿಸಿದಂತಾಯಿತು. ಮುಂದಿನದೆಲ್ಲಾ ಒಂದು ರೀತಿಯ ನಿರ್ವಾತದಂತೆ, ಖಾಲಿ ಖಾಲಿಯಂತೆ ಕಾಣಲಾರಂಭಿಸಿತು. ಇಂಥದೊಂದು ಸಾಧ್ಯತೆಯನ್ನು ನಿರೀಕ್ಷಿಸಿದ್ದನಾದರೂ ಅದು ಇಷ್ಟು ಬೇಗ ತನ್ನ ಬುಡಕ್ಕೇ ಬಂದು ಕೂರುತ್ತದೆಂದು ನಿರೀಕ್ಷಿಸಿರಲಿಲ್ಲ.

‘ಅಮೆರಿಕಾದ ರಿಸೆಷನ್‌ಗೂ ಕರ್ನಾಟಕದ ಕಂಪೆನಿಗೂ ಏನು ಸಂಬಂಧ.. ಇಂಡಿಯನ್ ಎಕಾನಮಿ ತುಂಬಾ ಸ್ಟೇಬಲ್ಲಾಗಿದೆ..’ ಎಂದು ನೆನ್ನೆ ತಾನೆ ಲಂಚ್‌ನಲ್ಲಿ ಗೆಳೆಯರೊಂದಿಗೆ ಹರಟುತ್ತಿದ್ದ. ಮೊನ್ನೆ ತಾನೆ ಐವತ್ತು ಜನರನ್ನು ಇಂಟರ್‌ವ್ಯೂ ಮಾಡಿ ಹತ್ತು ಜನರನ್ನು ಆಯ್ಕೆ ಮಾಡಿಕೊಂಡ ಕಮಿಟಿಗೆ ಆತನೇ ಎರಡನೇ ಅತಿ ದೊಡ್ಡ ಹುದ್ದೆಯಲ್ಲಿದ್ದ ವ್ಯಕ್ತಿಯಾಗಿದ್ದ. ಅವರೆಲ್ಲ ತಮಗೆ ಕೆಲಸ ಕೊಡುವಂತೆ ಶಿಫಾರಸ್ಸು ಮಾಡಲಿ ಎಂದು ಇವನನ್ನು ಎಷ್ಟೊಂದು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದರು. ಅದರಲ್ಲಿ ಕೆಲವರು ಅರುಣ್‌ಗಾಂಧಿಯ ತೀರ್ಮಾನವೇ ಅಂತಿಮ ಎಂದು ಗೊತ್ತಿದ್ದು, ಬೇರೆಬೇರೆ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಪರಿಚಯದವರಿಂದ ಹಾಗೆ ಸುಮ್ಮನೆ ಎನ್ನುವಂತೆ ಫೋನು ಮಾಡಿಸಿದ್ದರು. ಯಾರು ಯಾರು ಹಾಗೆ ಫೋನು ಮಾಡಿಸಿದ್ದರೋ ಅವರ ಹೆಸರನ್ನೆಲ್ಲಾ ನೋಟ್ ಮಾಡಿಕೊಂಡು, ತನ್ನ ಚಾಕಚಕ್ಯತೆಯಿಂದ, ಅವರು ಈ ಕಂಪೆನಿಗೆ ನಿಜವಾಗಿಯೂ ಯೋಗ್ಯರೇ ಅಲ್ಲ ಎಂದು ಅವರಿಗೇ ಅನ್ನಿಸಿಬಿಡುವಂತೆ ಮಾಡಿದ್ದ. ಆದರೆ ಈಗ…

ಹಾಳೆ ತಿರುಗಿಸಿದ. ಒಂದು ಚೆಕ್. ತನ್ನ ಇಷ್ಟು ದಿನದ ಸಂಬಳವನ್ನು ಲೆಕ್ಕ ಹಾಕಿ ಫೈನಲ್ ಸೆಟಲ್‌ಮೆಂಟ್ ಮಾಡಿದ್ದರು. ಹದಿನಾಲ್ಕು ದಿನದ ಸಂಬಳ ೭೦೦೦೦/-ರೂಪಾಯಿ. ಅಂದರೆ ತಿಂಗಳಿಗೆ ಒಂದೂವರೆ ಲಕ್ಷ. ನಿನ್ನೆತಾನೇ ಕೆಲಸಕ್ಕೆ ತೆಗೆದುಕೊಂಡ ಹತ್ತು ಜನರ ಒಟ್ಟು ಸಂಬಳ ತಿಂಗಳಿಗೆ ಒಂದು ಲಕ್ಷ ಮೀರುತ್ತಿರಲಿಲ್ಲ. ಅಂದರೆ ತನ್ನೊಬ್ಬನನ್ನು ತೆಗೆದಿದ್ದರಿಂದ ಹತ್ತುಜನಕ್ಕೆ ಕೆಲಸ ಕೊಟ್ಟು, ಇನ್ನೂ ಐದು ಜನರ ಸಂಬಳ ಉಳಿತಾಯವಾದಂತಾಯಿತು.

ಎಂ.ಡಿ. ಮುಖದ ಮೇಲೆ ಕವರನ್ನು ಎಸೆದು ನೀನೇನು ಕೆಲಸದಿಂದ ತೆಗೆಯುವುದು, ನಿನ್ನಂತಹ ತಗಡು ಕಂಪೆನಿಯಲ್ಲಿ ಕೆಲಸ ಮಾಡಲು ನನಗೇ ಇಷ್ಟವಿರಲಿಲ್ಲ ಎಂದು ತಾನೇ ರಾಜೀನಾಮೆ ಬಿಸಾಕಿದರೆ ಹೇಗೆ ಎಂದು ವಿಚಾರ ಮಾಡಿದ. ಆದರೂ ಏಳು ವರ್ಷದ ಹಿಂದೆ ಬರಿಗೈಯ್ಯಲ್ಲಿ ಬೆಂಗಳೂರಿಗೆ ಬಂದವನಿಗೆ ಆಶ್ರಯ ನೀಡಿ, ಕೋಟಿ ಬೆಲೆ ಬಾಳುವ ಅಪಾರ್ಟ್‌ಮೆಂಟು, ಮಿಲಿಯನ್ ಬೆಲೆ ಬಾಳುವ ಐಷಾರಾಮಿ ಕಾರು ಇವನ್ನೆಲ್ಲ ಸಂಪಾದಿಸಲು ದಾರಿಮಾಡಿಕೊಟ್ಟ ಕಂಪೆನಿಯನ್ನು ಹಾಗೆ ನಿಕೃಷ್ಟವಾಗಿ ಬಯ್ದರೆ ತಾನು ಕೃತಘ್ನ ಅನ್ನಿಸಿಕೊಳ್ಳಲಾರೆನೇ ಅನಿಸಿತು. ಆದರೆ ಕಾರು-ಮನೆ ನೆನಪಾಗುತ್ತಿದ್ದಂತೆಯೇ ಇನ್ನೆಷ್ಟು ಇನ್‌ಸ್ಟಾಲ್‌ಮೆಂಟ್ ಬಾಕಿಯಿದೆಯೋ ಎಂದು ಬ್ಯಾಂಕಿಗೆ ರಿಂಗಿಸಿದ. ಅರ್ಧದಷ್ಟು ಸಾಲ ತೀರಿದೆಯೆಂಬ ಉತ್ತರದಿಂದ ಸಮಾಧಾನಗೊಂಡ. ಆದರೆ ಇನ್ನೂ ಅರ್ಧಪಾಲು ಕಂತು ಕಟ್ಟದಿದ್ದರೆ ಆ ಬ್ಯಾಂಕಿನಿಂದ ಸಾಲ ವಸೂಲಾತಿಯ ಸುಪಾರಿ ಪಡೆದಿರುವ ರೌಡಿಗಳಂತಹವರು ಹುಡುಕಿಕೊಂಡು ಬಂದು ಮುಟ್ಟುಗೋಲು ಹಾಕಿಕೊಳ್ಳಲಾರರೇ ಎಂದೂ ಚಿಂತಿತನಾದ.

ಇದುವರೆಗೂ ತಮ್ಮ ಬಾಸ್ ಆಗಿದ್ದವನು ರಿಸೆಷನ್‌ಗೆ ಬಲಿಯಾಗಿದ್ದಾನೆಂದು ತಿಳಿದ ಸಹೋದ್ಯೋಗಿಗಳೆಲ್ಲ ತಮಗೆ ಏನೇನೂ ಗೊತ್ತೇ ಇಲ್ಲವೇನೋ ಎಂಬಂತೆ ನಟಿಸುತ್ತ, ಒಂದು ವಾರೆ ಕಣ್ಣನ್ನು ಇವನ ಮೇಲಿಟ್ಟು, ಇವನ ಎಲ್ಲ ತಲ್ಲಣ-ತಳಮಳಗಳನ್ನ ಖುಷಿಯಿಂದ ಅನುಭವಿಸುತ್ತ ತಮ್ಮ ಕೆಲಸದಲ್ಲಿ ತಾವು ತಲ್ಲೀನರಾದಂತೆ ಕುಳಿತಿದ್ದರು. ಈ ಕ್ಷಣದಲ್ಲೋ ಇನ್ನೊಂದು ಕ್ಷಣದಲ್ಲೋ ತಮಗೂ ಟರ್ಮಿನೇಷನ್ ಲೆಟರ್ ಬಂದುಬಿಡಬಹುದೆಂಬುದನ್ನೇ ಮರೆತು, `ನಮ್ಮ ಮೇಲೇ ಬಾಸಿಜಂ ಮಾಡ್ತಿದ್ದ ಬಡ್ಡೀಮಗ, ಈಗ ಯಾರ ಮೇಲೆ ಮಾಡ್ತಾನೋ ಮಾಡಲಿ, ನೋಡೋಣ..’ ಎಂದು ಸಿಟ್ಟಿನಿಂದ ಆಗಾಗ್ಗೆ ಇವನತ್ತ ಒಂದು ಕೊಂಕುನೋಟ ಹರಿಸುತ್ತಿದ್ದರು.

ಅರುಣ್‌ಗಾಂಧಿಗೆ ಯಾಕೋ ಯಾರಾದರೂ ತನ್ನನ್ನು ಗಮನಿಸುತ್ತಿದ್ದಾರೇನೋ ಅನ್ನಿಸಲಾರಂಭಿಸಿತು. ಒಮ್ಮೆ ಹಾಗೇ ದೃಷ್ಟಿ ಹಾಯಿಸಿದ. ಯಾರೂ ತನ್ನತ್ತ ನೋಡುತ್ತಿಲ್ಲ, ಆದರೆ ಎಲ್ಲರೂ ತನ್ನತ್ತಲೇ ನೋಡುತ್ತಿದ್ದಾರೆ ಎನ್ನಿಸಿ, ಮುಳ್ಳಿನ ಕುರ್ಚಿಯ ಮೇಲೆ ಕೂತಂತಹ ಅನುಭವವಾಗಿ, ಯಾರಿಗೂ ಕಾಣದಂತೆ ಎದ್ದು ಓಡಿಹೋಗಿಬಿಡಬೇಕು ಎನ್ನಿಸಿತು.

ಆದಾಗ್ಯೂ ಎಂ.ಡಿ.ಯನ್ನು ಒಮ್ಮೆ ಮಾತಾಡಿಸಿದರೆ ಹೇಗೆ ಅನ್ನಿಸಿ ಆ ಕೋಣೆಗೆ ಹೋದ. ಆತ ತಲೆಯೆತ್ತಿ ತನಗೆ ಎಲ್ಲಾ ಗೊತ್ತಿದೆ, ನೀನು ಹೇಳಬೇಕಾದ್ದು ಏನೂ ಇಲ್ಲ ಎನ್ನುವಂತೆ ಒಂದೇ ಒಂದು ತಿಳಿನಗೆ ಬೀರಿದ. ಗಾಂಧಿಗೆ ಇವನೊಂದಿಗೆ ಮಾತನಾಡುವುದರಿಂದ ಏನೂ ಪ್ರಯೋಜನವಿಲ್ಲ ಅನ್ನಿಸಿ ತಿರಸ್ಕಾರದಿಂದ ಎದ್ದುಬಂದ.
***

ಸೂಟ್‌ಕೇಸಿನಂತ ಲ್ಯಾಪ್‌ಟಾಪ್ ಚೀಲವನ್ನು ಟೀಪಾಯಿಯ ಮೇಲೆ ಎಸೆದು ಸೋಫಾದ ಮೇಲೆ ಕುಸಿದು ಕುಂತ. ಎದುರಿನ ಗೋಡೆಯ ಮೇಲೆ ನೇತುಹಾಕಿದ್ದ ಬೊಚ್ಚುಬಾಯಲ್ಲಿ ನಗುವ ಗಾಂಧಿಯ ಚಿತ್ರ ಕಣ್ಣಿಗೆ ಬಿತ್ತು. ತನ್ನ ಮಾಜಿ ಎಂ.ಡಿ.ಯಂತೆ ಗಾಂಧಿಯೂ ತನ್ನನ್ನು ಕಂಡು ತಿರಸ್ಕಾರದ ನಗೆ ನಕ್ಕಂತೆ ಭಾಸವಾಗಿ ಅವಮಾನವೆನಿಸಿತು.

ಈ ಗಾಂಧಿಯಿಂದಲೇ ಅಲ್ಲವೇ ತಾನು ಎಷ್ಟೆಲ್ಲಾ ಅವಮಾನ ಅನುಭವಿಸುವಂತಾಗಿದ್ದು ಎಂದು ಆ ಫೋಟೋವನ್ನೇ ಹೊಡೆದುಹಾಕಿಬಿಡುವಷ್ಟು ಸಿಟ್ಟುಬಂತು. ತಾನು ಪ್ರೈಮರಿಯಿದ್ದಾಗಿನಿಂದ ಹಿಡಿದು ಬಿ.ಇ. ಮಾಡುವವರೆಗೆ ಎಲ್ಲಾ ಕಡೆ, ಅಂತ ಗಾಂಧಿ.. ಇಂತ ಗಾಂಧಿ.. ಎಂದು ಗೆಳೆಯರು ಅಪಹಾಸ್ಯ ಮಾಡುತ್ತಿದ್ದರು.
ಒಂದು ಸಲ, ಈ ಹೆಸರು ತನಗೆ ಹೇಗೆ ಅಂಟುಕೊಂಡಿತು ಎಂಬ ಬಗ್ಗೆ ಸಂಶೋಧನೆ ಮಾಡಬೇಕೆಂಬ ಉಮೇದು ಬಂದಿತ್ತು. ಕೊರಳಪಟ್ಟಿ ಹಿಡಿದು ಕೇಳೋಣವೆಂದರೆ ಅಪ್ಪ ಸತ್ತು ಇಪ್ಪತ್ತು ವರ್ಷವಾಯಿತಂತೆ. ಅಮ್ಮ ಹೇಳಿದ್ದೇನೆಂದರೆ, ಏಳನೇ ಮಗನಾಗಿ ಗಾಂಧಿ ಹುಟ್ಟಿದ್ದರಿಂದ ಇವತ್ತು ಹೆಸರಿಡೋಣ, ನಾಳೆ ಹೆಸರಿಡೋಣ ಎಂದು ಹಂಗೇ ದಿನಗಳು ಜಾರಿಹೋಗಿ, ಮನೆಯಲ್ಲಿ ಪ್ರೀತಿಯಿಂದ ಕರೆಯುತ್ತಿದ್ದ ಪಾಪಚ್ಚಿ ಎಂಬ ಹೆಸರೇ ಉಳಿದುಬಿಟ್ಟಿತ್ತಂತೆ.

ಮನೆಮನೆಗೆ ಬಂದು ಶಾಲೆಗೆ ಸೇರಿಸಿಕೊಳ್ಳುವ ಅಭಿಯಾನದಲ್ಲಿ, ಆಟ ಆಡುತ್ತಿದ್ದ ಈತನನ್ನು ಹಿಡಿದ ಮೇಸ್ಟರು ಆರು ವರ್ಷ ಆಗಿದೆಯೇ ಎಂದು ಪರೀಕ್ಷಿಸಲು ಬಲಗೈಯ್ಯಿಂದ ಎಡಕಿವಿಯನ್ನು ಮುಟ್ಟಿಸಿ ನೋಡಿ, ಬರೆದುಕೊಳ್ಳಲು ಹೆಸರೇನೆಂದು ಕೇಳಿದಾಗಲೇ, ತನಗೆ ಹೆಸರೇ ಇಟ್ಟಿರದಿದ್ದುದರ ಅರಿವಾಗಿದ್ದಂತೆ. ಡೇಟ್ ಆಫ್ ಬರ್ತ್ ಕಾಲಂ ಬರೆದುಕೊಳ್ಳುವಾಗ ಹೆಸರೇ ಗೊತ್ತಿಲ್ಲ ಅಂದ ಮೇಲೆ ಡೇಟ್ ಇನ್ನೇನು ಗೊತ್ತಿರುತ್ತೆ ಅಂತ ಪಕ್ಕದವನೊಂದಿಗೆ ಮೇಸ್ಟರು ತಮಾಷೆ ಮಾಡುತ್ತಿದ್ದಾಗ, `ನನಗೆ ಗೊತ್ತು..’ ಅಂತ, ಆತನ ಅಣ್ಣ ಓಡಿಹೋಗಿ ತನ್ನ ಎಕ್ಸೈಜ್ ಪುಸ್ತಕದಲ್ಲಿ ತಮ್ಮ ಹುಟ್ಟಿದ್ದ ದಿನಾಂಕ ಬರೆದು ಇಟ್ಟಿದ್ದನ್ನು ಹುಡುಕಿ ತಂದುಕೊಟ್ಟನಂತೆ. ಈತನ ಬರ್ತ್‌ಡೇ ಅಕ್ಟೋಬರ್ ಎರಡು ಎಂದಿರುವುದನ್ನು ಆಶ್ಚರ್ಯದಿಂದ ನೋಡಿದ ಹಳೇಕಾಲದ ಆ ಮೇಸ್ಟರು, `ಈ ಪ್ರಜಾಪ್ರಭುತ್ವದಲ್ಲಿ ಯಾರ್‍ಯಾರು ಏನೇನು ಆಗ್ತಾರೋ ಯಾರಿಗೆ ಗೊತ್ತು..’ ಎಂದು ಗೊಣಗಿಕೊಂಡು, ಈ ಹುಡುಗನೂ ಮುಂದೆ ದೊಡ್ಡವ್ಯಕ್ತಿಯೇ ಆಗಿಬಿಡಲಿ ಎನ್ನುವಂತೆ `ಗಾಂಧಿ’ ಎಂದು ನಾಮಕರಣ ಮಾಡಿಬಿಟ್ಟರಂತೆ.

ಮುಂದೆ ದೊಡ್ಡವನಾಗಿ ಕಾಲೇಜು ಓದುವಾಗ ಒಮ್ಮೆ ಗಾಂಧಿ ಎಂಬ ಈ ಹೆಸರಿನಿಂದ ಬಹಳ ಮುಜುಗರವಾಗಿ ಹೆಸರನ್ನು ಬದಲಾಯಿಸಿಕೊಂಡುಬಿಡೋಣವೆಂದು ನಿರ್ಧರಿಸಿ ನೋಟರಿ ಬಳಿಗೆ ಹೋಗಿದ್ದನಂತೆ. `ಗಾಂಧಿ ಎಂದಿರುವ ನನ್ನ ಹೆಸರನ್ನು ಅರುಣ್ ಎಂದು ಬದಲಾಯಿಸಿಕೊಂಡಿರುತ್ತೇನೆ’ ಎಂದು ಬಾಂಡ್‌ಪೇಪರ್‌ನಲ್ಲಿ ಅಫಿಡೆವಿಟ್ ಬರೆದುಕೊಂಡು ನೋಟರಿಯ ಮುಂದೆ ಇಟ್ಟಾಗ ಅವರು ಇವನ ಮುಖವನ್ನೊಮ್ಮೆ ನೋಡಿ ಆ ಹೆಸರಿಗಿರುವ ಗೌರವಗಳನ್ನೆಲ್ಲ ಪಟ್ಟಿಮಾಡಿ ಉಪದೇಶಿಸಿ, `ಅರುಣ್‌ಗಾಂಧಿ’ ಎಂದು ಬೇಕಾದರೆ ಬದಲಾಯಿಸಿಕೋ ಎಂದು ಸಲಹೆ ನೀಡಿದರಂತೆ. ಅಂದಿನಿಂದಲೇ ಈ ಗಾಂಧಿ ಅರುಣ್‌ಗಾಂಧಿ ಆದದ್ದಂತೆ.

ನೆಲದಲ್ಲಿ ಓಡಾಡಲು ವಾಹನವಿಲ್ಲದೇ ಬೆಳೆದ ಅರುಣ್‌ಗಾಂಧಿ ಆಗಸದಲ್ಲಿ ತೇಲುವ ಆ ವಿಮಾನದಲ್ಲಿ ಎಂದಾದರೊಂದು ದಿನ ವಿದೇಶಕ್ಕೆ ಹಾರಬಹುದೆಂಬುದರ ಕಲ್ಪನೆಯನ್ನೇ ಮಾಡಿರಲಿಲ್ಲ. ಆದರೆ ಕೊನೆಯ ವರ್ಷದಲ್ಲಿ ಓದುವಾಗಲೇ ಜ್ಞಾನದ ಬಲದಿಂದ ಕ್ಯಾಂಪಸ್ ಸೆಲೆಕ್ಷನ್ ಮಾಡಿಕೊಂಡ ಕಂಪೆನಿಯೊಂದು ನಿನ್ನ ಬಳಿ ಕಾರಿದೆಯಾ? ಬೈಕಿದೆಯಾ? ಎಂದು ಕೇಳಿರಲಿಲ್ಲ. ವಿಮಾನದಲ್ಲಿ ಹಾರಿಸಿ ವಿದೇಶಕ್ಕೆ ಕಳುಹಿಸಿತ್ತು.

ಇಲ್ಲಿ ಗಾಂಧಿ ಎಂಬ ಈ ಹೆಸರಿನಿಂದ ಎಷ್ಟೇ ಅವಮಾನ ಆಗಿದ್ದರೂ, ಅಲ್ಲೆಲ್ಲಾ ಎಷ್ಟೊಂದು ಗೌರವ ಸಿಗುತ್ತಿತ್ತೆಂದರೆ ಅದನ್ನು ವರ್ಣಿಸಲೇ ಸಾಧ್ಯವಿಲ್ಲ. ಆ ಗಾಂಧಿಯ ವಂಶದ ಕುಡಿಯೇ ಇರಬಹುದೆಂದುಕೊಂಡು ಅನೇಕರು ಅಭಿಮಾನ ತೋರುತ್ತಿದ್ದರು. ಇನ್ನು ಕೆಲವರು ಇಂದಿರಾಗಾಂಧಿಯ ಫ್ಯಾಮಿಲಿಯವರಿರಬೇಕು ಎಂದು ಗೌರವ ತೋರುತ್ತಿದ್ದರು. ಒಟ್ಟಿನಲ್ಲಿ ಬಹುಪಾಲು ಕೆಲಸಗಳು ಸುಲಲಿತವಾಗಿ ಆಗಿಬಿಡುತ್ತಿದ್ದವು.

ಗಾಂಧಿಯ ಫೋಟೋವನ್ನು ಮತ್ತೊಮ್ಮೆ ಹಾಗೆಯೇ ದಿಟ್ಟಿಸಿನೋಡಿದ.. ಏಕತಾನತೆಯಿಂದ ನೋಡಿದ.. ಫೋಟೋದ ಆ ನಗುವಿನಲ್ಲಿ ಏನೋ ಒಂದು ರೀತಿಯ ಆತ್ಮೀಯತೆ ಇತ್ತು, ಪ್ರೀತಿ ಇತ್ತು, ಶಾಂತಿ ಇತ್ತು.. ಬುದ್ಧನ ಮಂದಹಾಸದಲ್ಲಿ, ಬಾಹುಬಲಿಯ ಸ್ಥಿತಪ್ರಜ್ಞತೆಯಲ್ಲಿ, ಬಸವಣ್ಣನ ಅಂತರ್ಮುಖತೆಯಲ್ಲಿ ಏನೆಲ್ಲಾ ಇರಬಹುದೋ ಅಂಥದೆಲ್ಲಾ ಗಾಂಧಿಯ ಆ ನಗುವಿನಲ್ಲೂ ಕಾಣಲಾರಂಭಿಸಿತು..

ಯಾಕೋ ಗಾಂಧಿ ಎಂದಿಗಿಂತಲೂ ಇಂದು ಹೆಚ್ಚು ಆಕರ್ಷಿತನಾಗಿ ಕಂಡ. ಯಾವತ್ತೂ ಗಾಂಧಿಯನ್ನು ನೋಡಿರಲಿಲ್ಲವೇನೋ ಎನ್ನುವಂತೆ ಮತ್ತೆ ಮತ್ತೆ ನೋಡಲಾರಂಭಿಸಿದ. ನೋಡಿದಷ್ಟೂ ಇನ್ನೂ ಇನ್ನೂ ನೋಡಬೇಕೆನಿಸುವಂತೆ, ಆತನ ನಗುವಿನ ಆಳದಲ್ಲಿ ಇನ್ನೂ ಏನೇನೋ ಇರಬಹುದೆನ್ನಿಸುವಂತೆ ಭಾಸವಾಗಲಾರಂಭಿಸಿತು.. ಗಾಂಧಿಯ ಆ ಚಿತ್ರದಲ್ಲಿ ತನ್ನನ್ನೇ ತಾನು ಕಾಣಲಾರಂಭಿಸಿದ.. ತಾನು ಕೆಲಸ ಕಳೆದುಕೊಂಡಿರುವ ಈ ಸಂದರ್ಭದಲ್ಲಂತೂ ಆ ಗಾಂಧಿ ಯಾಕೋ ಇನ್ನೂ ಹೆಚ್ಚು ಹೆಚ್ಚು ಆತ್ಮೀಯವೆನ್ನಿಸಲಾರಂಭಿಸಿದ..

***

ಹೊರಗೆಬಂದರೆ ಅವಮಾನವೆಂದು ವಾರಗಟ್ಟಲೆ ಮನೆಯಲ್ಲಿ ಕುಂತ ಗಾಂಧಿ ಇಂಟರ್‌ನೆಟ್‌ನ್ನೆಲ್ಲಾ ಶೋಧಿಸಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ತನ್ನ ರೆಜ್ಯೂಮ್ ಜತೆ ಅರ್ಜಿಹಾಕಿದ. ವಿದೇಶಗಳಲ್ಲಿರುವ ಅವಕಾಶಗಳನ್ನೆಲ್ಲಾ ತಡಕಾಡಿದ. ಆದರೆ ಎಲ್ಲೆಲ್ಲೂ ಕೆಲಸ ಸಿಗದೇ ಪರದಾಡಿದ. ಮನೆಯಿಂದ ಹೊರಗೆ ಬಂದು ಪರಿಚಯವಿರುವ ಕಡೆಗಳಲ್ಲೆಲ್ಲಾ ಅಲೆದು ಕೆಲಸ ಹುಡುಕೋಣವೆಂದರೆ, ಹಿಂದೆ ತಾನಿದ್ದ ಕಂಪೆನಿಯ ಓನರ್ ತಾನೇ ಎನ್ನುವಂತೆ ಆ ಕಂಪೆನಿಗಳಿಗೆಲ್ಲ ಸ್ಪರ್ಧೆಯೊಡ್ಡಿದ್ದ. ಈಗ ಕೆಲಸ ಕೇಳಲು ಹೋದರೆ ಬಿಡುತ್ತಾರಾ.. ಅವಮಾನ ಮಾಡುತ್ತಾರೆ.. ಒಂದು ವೇಳೆ ಅವಮಾನ ಮಾಡುವುದಿಲ್ಲವೆಂದುಕೊಂಡರೂ, ನಾಳೆ ಆ ಕಂಪೆನಿಯೂ ಮುಚ್ಚಲಾರದೆಂಬ ಖಾತ್ರಿಯೇನು?

ಈ ತಿಂಗಳು ಮನೆಯ ಕಂತನ್ನು ಕಟ್ಟಲಿಲ್ಲವೆಂದು ಹೆಂಡತಿ ನೆನಪು ಮಾಡಿದಳು. ಬಂದ ಸಂಬಳದ ಕೊನೆಯ ಕಂತನ್ನು ಸಾಲಕ್ಕೆ ಕಟ್ಟಿಬಿಟ್ಟರೆ ಮುಂದೆ ಕೆಲಸ ಸಿಗುವವರೆಗೆ ಹೊಟ್ಟೆಗೇನು ತಿನ್ನುವುದು? ಹೆಂಡತಿಯನ್ನು ಹೇಗೆ ಸಾಕುವುದು? ಹೋದವರ್ಷ ತಾನೇ ಅದ್ದೂರಿಯಾಗಿ ಮದುವೆಯಾಗಿದ್ದ. ವಿದೇಶೀ ಕಂಪೆನಿಯಲ್ಲಿ ಕೆಲಸ, ಒಂದೂವರೆ ಲಕ್ಷ ಸಂಬಳ ಎಂದು ಅಮ್ಮ ಹೆಣ್ಣಿನವರ ಮುಂದೆ ಕೊಚ್ಚಿಕೊಂಡು ಇಷ್ಟುದಪ್ಪ ವರದಕ್ಷಿಣೆ ಕೊಡಲೇಬೇಕೆಂದು ಪಟ್ಟುಹಿಡಿದಿದ್ದಳು. ಆದರೆ ಹುಡುಗಿಯ ತಂದೆ ಮುಗುಳ್ನಕ್ಕು, ತನ್ನ ಜೀವಮಾನದಲ್ಲಿ ಕಂಡು ಕೇಳರಿಯದಷ್ಟು ಕೊಡುತ್ತೇನೆಂದು ಸ್ವತಃ ಘೋಷಿಸಿದಾಗ ಅವ್ವ ತಬ್ಬಿಬ್ಬಾಗಿ ಸಣ್ಣವಳೆನಿಸಿಬಿಟ್ಟಿದ್ದಳು. ಬರೀ ಬಾಯಲ್ಲಿ ಹೇಳುತ್ತಾರಷ್ಟೇ, ನಿಜವಾಗಿಯೂ ಕೊಡುತ್ತಾರಾ.. ಎಂದು ಮಗನ ಮುಂದೆ ಆತಂಕ ತೋಡಿಕೊಂಡಿದ್ದಳು.

ಬ್ಯಾಂಕಿನಿಂದ ಫೋನು ಮಾಡಿದ ಮ್ಯಾನೇಜರ್ ಕಾರಿನ ಕಂತು ಬರಲಿಲ್ಲವೆಂದ. ಇವನು ತಡವರಿಸುತ್ತ ಮುಂದಿನ ವಾರ ಕಟ್ಟುತ್ತೇನೆಂದ. ಆದರೆ ಆತ, `ನಿಮ್ಮನ್ನ ಕೆಲಸದಿಂದ ತೆಗೆದುಹಾಕಿದರಂತೆ, ಹೌದಾ ಸಾರ್..?’ ಎಂದು ಕೊಂಕು ಬೇರೆ ಸೇರಿಸಿದ. ಇವೆಲ್ಲ ಇವನಿಗೇಕೆ ಬೇಕು ಅನ್ನಿಸಿ, ಕೈಗೆ ಸಿಕ್ಕಿದರೆ ನಾಲ್ಕು ತದುಕಿಬಿಡಬೇಕೆನಿಸಿತು.

ಮನೆಯಲ್ಲಿ ಕುಂತುಕುಂತು ಏಕತಾನತೆಯಿಂದ ಮಂಕು ಹಿಡಿದಂತಾಯಿತು. ಒಂದು ದಿನಪೂರ್ತಿ ಹೊರಗೆ ಹೋಗದೇ ಮನೆಯೊಳಗೇ ಇದ್ದರೆ ತನಗೇ ಹೀಗಾಗುತ್ತಲ್ಲ, ಇನ್ನು ಮನೆಯೊಳಗಿನ ಹೆಂಗಸರಿಗೆ, ಜೈಲಲ್ಲಿರುವ ಕೈದಿಗಳಿಗೆ ಹೇಗನ್ನಿಸುತ್ತದೆಯೋ ಎಂದು, ತನ್ನನ್ನು ಇತರರಿಗೆ ಹೋಲಿಸಿಕೊಂಡು ಸಮಾಧಾನಪಟ್ಟುಕೊಂಡ. ಪರಿಚಯವಿದ್ದ ಯಾರಿಗಾದರೂ ತಕ್ಷಣಕ್ಕೆ ಗುರುತು ಸಿಕ್ಕದಂತಿರಲಿ ಎಂದು ತಲೆಗೆ ಟೋಪಿ, ಕಣ್ಣಿಗೆ ಕನ್ನಡಕ ಹಾಕಿಕೊಂಡು ಹೊರಹೊರಟ. ಆದರೆ ಬೆಂಗಳೂರಂತ ಬೆಂಗಳೂರಿನ ಜನ ಇವನನ್ನು ಕೇರೇ ಮಾಡಲಿಲ್ಲ. ಅಂತಹ ದೊಡ್ಡ ಕಂಪೆನಿಯೊಂದರ ಡೆಪ್ಯುಟಿ ಮ್ಯಾನೇಜರ್ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆಂದರೆ ಯಾರೊಬ್ಬರೂ ಕನಿಷ್ಟ ಸೌಜನ್ಯಕ್ಕಾಗಿಯಾದರೂ ತನ್ನ ಕಡೆ ಮುಖ ತಿರುಗಿಸಿಯೂ ನೋಡದೇ, ತಮಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ, ತಮ್ಮ ಪಾಡಿಗೆ ತಾವು ಇನ್ನೊಬ್ಬರನ್ನು ಹಿಂದೆ ಹಾಕುವ ಭರದಲ್ಲಿ ಓಡುತ್ತಲೇ ಇದ್ದಾರಲ್ಲ ಅನ್ನಿಸಿತು. ಆದರೂ ಒಂದು ಥರಾ ನೆಮ್ಮದಿ, ಸಮಾಧಾನ ಎನಿಸಿತು. ಆದರೆ ಸತತವಾಗಿ ಯಾರೂ ತನ್ನನ್ನು ಮಾತನಾಡಿಸದಾದಾಗ ಕೋಟಿ ಜನರಿರುವ ಬೆಂಗಳೂರಿನಲ್ಲಿ ತಾನೊಬ್ಬನೇ ಒಂಟಿ ಎನಿಸಲಾರಂಭಿಸಿತು. ಟೋಪಿ, ಕನ್ನಡಕ ಎಲ್ಲವನ್ನೂ ತೆಗೆದುಹಾಕಿ ಯಾರಾದರೂ ತನ್ನನ್ನು ಮಾತನಾಡಿಸಬಾರದೇ ಎಂದು ಹಪಹಪಿಸಲಾರಂಭಿಸಿದ.

ಅಪಾರ್ಟ್‌ಮೆಂಟಿನ ಹದಿನಾರನೇ ಮಹಡಿಯಲ್ಲಿರುವ ತನ್ನ ಮನೆಗೆ ಬಂದು ಕುಕ್ಕರಿಸಿ ಕುಂತ. ಫ್ಯಾನು ಹಾಕುವಂತೆ ಹೆಂಡತಿಗೆ ಹೇಳಿದ. ಆದರೆ ಬೆಸ್ಕಾಂನವರು ಕರೆಂಟ್‌ಬಿಲ್ ಕಟ್ಟಿಲ್ಲವೆಂದು ಫ್ಯೂಜ್ ಕಿತ್ತುಕೊಂಡುಹೋಗಿರುವುದಾಗಿ ಹೆಂಡತಿ ಹೇಳಿದಾಗ, `ಈ ನನ್ಮಕ್ಕಳದು ಬಹಳ ರೂಲ್ಸು. ಬಂದು ಕಟ್ಟಕ್ಕೆ ಪುರುಸೊತ್ತಾಗಿಲ್ಲ, ಕಟ್ಟುಸ್ತೀನಿ ಅಂತ ಹೇಳಕ್ಕಾಗಲಿಲ್ಲವಾ..’ ಎಂದು ಹೆಂಡತಿಗೆ ರೇಗಿದ. ಆದರೆ ಆಕೆ `ನಿಮಗೇ ಬಿಲ್ ಕಟ್ಟೋಕ್ಕೆ ಯೋಗ್ಯತೆಯಿಲ್ಲ.. ಅವರ ಬಗ್ಗೆ ಮಾತಾಡ್ತೀರಾ..’ ಎಂದು ರಪ್ಪನೆ ಮುಖಕ್ಕೆ ಹೊಡೆದಂತೆ ಮಾತಾಡಿಬಿಟ್ಟಳು. ಇತ್ತೀಚೆಗೆ ಕೆಲಸವಿಲ್ಲದ ತನ್ನನ್ನು ತನ್ನ ಹೆಂಡತಿಯೂ ನಿಕೃಷ್ಟವಾಗಿ ಕಾಣಲಾರಂಭಿಸಿದ್ದಾಳೆ ಅನ್ನಿಸಲಾರಂಭಿಸಿತು.

ಗಾಂಧಿಫೋಟೋ ಯಾಕೋ ಮತ್ತೆ ತನ್ನನ್ನೇ ನೋಡಿ ನಕ್ಕಂತಾಯಿತು. ಎತ್ತ ಹೋದರೆ ಅತ್ತ ತಿರುಗಿ ನೋಡುತ್ತಿರುವಂತೆನಿಸಿತು. ಸಿಟ್ಟಿನಿಂದ ದಿಟ್ಟಿಸಿ ನೋಡಿದ. ಗಾಂಧಿ ಏನಾದರೂ ತನ್ನ ಅಪ್ಪನೋ ತಾತನೋ ಆಗಿದ್ದರೆ ಕೊರಳಪಟ್ಟಿ ಹಿಡಿದು ಕೇಳಬಹುದಿತ್ತು ಅನಿಸಿತು. ಲಂಚ್ ವೇಳೆ ಬಿಚ್ಚಿಕೊಂಡ ಟಿಫನ್‌ಬಾಕ್ಸ್‌ಗಳ ಮುಂದೆ ಗೆಳೆಯರು ಮಾತಾಡುವಾಗ ಈ ಗಾಂಧಿಯಿಂದಲೇ ನಮ್ಮ ದೇಶ ಹಾಳಾಗಿದ್ದು ಎಂದು ವಿತಂಡವಾದ ಮಾಡುತ್ತಿದ್ದುದು ನೆನಪಾಯಿತು. ನಿಜವಾಗಿಯೂ ಗಾಂಧಿಯಿಂದ ನಮ್ಮ ದೇಶಕ್ಕೆ ಎಷ್ಟು ಲಾಭವಾಯಿತು, ಎಷ್ಟು ನಷ್ಟವಾಯಿತು ಎಂದು ಒಂದು ಸಮೀಕ್ಷೆಯನ್ನೇ ಮಾಡಿಬಿಡಬೇಕೆಂಬ ಮನಸ್ಸಾಯಿತು.

***

ಪ್ರತಿದಿನ ತಪ್ಪದೇ ಗಾಂಧಿಭವನಕ್ಕೆ ಬರಲಾರಂಭಿಸಿದ ಅರುಣ್‌ಗಾಂಧಿ, ಗಾಂಧಿಸಾಹಿತ್ಯವನ್ನೆಲ್ಲಾ ತಿಂದುಬಿಡುವಂತೆ ಓದಲಾರಂಭಿಸಿದ. ತನ್ನ ಕ್ಷೇತ್ರಕ್ಕೆ ಸಂಬಂಧಿಸಿದ್ದು ಎಂಬ ಕಾರಣಕ್ಕೋ ಏನೋ ಗಾಂಧಿಯ ಆರ್ಥಿಕ ಚಿಂತನೆಗಳ ಬಗ್ಗೆ ಆಸಕ್ತನಾದ. ಗಾಂಧಿಯ ಬಗ್ಗೆ ಇನ್ನೂ ಏನೇನೋ ಓದಿದ. ಒಬ್ಬ ಆಧುನಿಕ ಮನೋಧರ್ಮದ ತನ್ನಂತಹವನನ್ನು ಸೆಳೆಯಲು ಆ ಗಾಂಧಿಗೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಅರುಣ್‌ಗಾಂಧಿಯಂತಹ ಅರುಣ್‌ಗಾಂಧಿಯೇ ಜೀ.. ಎಂದು ಮಾರುಹೋಗಿಬಿಟ್ಟ.

ಕಂತುಗಳನ್ನು ಸರಿಯಾಗಿ ಕಟ್ಟಲಿಲ್ಲವೆಂದು ಮನೆಯನ್ನು, ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕಿನವರು ಬಂದಾಗ ಆಶ್ಚರ್ಯವೆಂಬಂತೆ ತಾನೇ ಮುಂದೆ ನಿಂತು ಅವನ್ನೆಲ್ಲಾ ಅವರಿಗೆ ಬಿಟ್ಟುಕೊಟ್ಟ. ಅಡ್ಡಬಂದ ಹೆಂಡತಿಗೆ, ಇಲ್ಲಿಗೆ ಬರುವಾಗ ಏನನ್ನೂ ತಂದಿರಲಿಲ್ಲ, ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ.. ಏನನ್ನಾದರೂ ಗಳಿಸಿದ್ದರೆ ಅದು ಇಲ್ಲಿಯೇ, ಏನನ್ನಾದರೂ ಕಳೆದುಕೊಂಡರೂ ಅದು ಇಲ್ಲಿಯೇ.. ಎಂದು ಭಗವದ್ಗೀತೆಯ ಉಪದೇಶ ಮಾಡಿದ. ಆದರೆ ಈಗಾಗಲೇ ಕಟ್ಟಿರುವ ಕಂತಿನ ವ್ಯತ್ಯಾಸದ ಮೊತ್ತವನ್ನಾದರೂ ಹಿಂದಿರುಗಿಸುವಂತೆ ಬ್ಯಾಂಕಿನವರೊಂದಿಗೆ ಜಗಳ ಮಾಡಿ ಆಕೆ ಒಪ್ಪಿಸಿಕೊಂಡಳು.

***

ಗಾಂಧಿಜಯಂತಿಯ ದಿನ ಗಾಂಧೀಭವನದ ಸಭಾಭವನದಲ್ಲಿ ಖಾದಿ ಅಂಗಿ ತೊಟ್ಟು ಬಂದ ಯುವಕನನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಅಲ್ಲೆಲ್ಲಾ ಗಾಂಧಿಯ ಒಡನಾಟದಲ್ಲಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿದ್ದರು. ಅವರೆಲ್ಲರ ವಯಸ್ಸು ಕನಿಷ್ಟ ಎಪ್ಪತ್ತೈದನ್ನು ಮೀರಿತ್ತು. ಆದರೆ ಗಾಂಧಿ ಸತ್ತು ಮುವತ್ತು ವರ್ಷ ಆದಮೇಲೆ ಹುಟ್ಟಿರಬಹುದಾದ ಏಕೈಕ ಯುವಕ ಇವತ್ತು ತಮ್ಮ ಕಾರ್ಯಕ್ರಮಕ್ಕೆ ಬಂದಿದ್ದು ತುಂಬಾ ಖುಷಿಯಾಗಿದೆ ಎನ್ನುತ್ತಾ, ಎಲ್ಲರೂ ತಮ್ಮ ಹಳೆಯಕಾಲದ ನೆನಪಿನ ಬುತ್ತಿಯನ್ನು ಬಿಚ್ಚಿ, ಬೇಡಬೇಡವೆಂದರೂ ಒತ್ತಾಯಪೂರ್ವಕವಾಗಿ ತುರುಕುತ್ತಾ ಬೋರು ಹೊಡೆಸುತ್ತಿದ್ದರು. ರೋಸಿಹೋದ ಅರುಣ್‌ಗಾಂಧಿ ಎದ್ದುನಿಂತ. ನಿಜವಾಗಲೂ ಗಾಂಧಿಯನ್ನು ಕೊಂದದ್ದು ನೀವೇ ಎಂದು ನೇರ ಆರೋಪ ಮಾಡಿದ. ಗಾಬರಿಗೊಂಡ ಅವರೆಲ್ಲ ಈತ ಯಾವುದಾದರೂ ಸಂಘದ್ದೋ ಪರಿವಾರದ್ದೋ ಕಟ್ಟಾಬೆಂಬಲಿಗನೇ ಇರಬೇಕೆಂದು ಒಂದು ಕ್ಷಣ ಹೌಹಾರಿದರು.

`ಗಾಂಧಿ ನೀವು ತಿಳಿದಂತೆ ಹುಟ್ಟುತ್ತಲೇ ಬಹಳ ದೊಡ್ಡ ವ್ಯಕ್ತಿಯೇನಾಗಿರಲಿಲ್ಲ.. ಆದರೆ ಸಂದರ್ಭ ಅವರನ್ನು ದೊಡ್ಡವರನ್ನಾಗಿ ಮಾಡಿತು. ಅವತ್ತು ಭಾರತಕ್ಕೆ ಸ್ವಾತಂತ್ರ್ಯದ ದರ್ದು ಇರದಿದ್ದರೆ ಗಾಂಧಿ ಕೇವಲ ಒಬ್ಬ ಒಳ್ಳೆಯ ಲಾಯರ್ ಆಗಿದ್ದುಕೊಂಡು ಸತ್ತುಹೋಗಿರುತ್ತಿದ್ದರು. ಅಷ್ಟೇ.. ನಿಮಗೆ ಯಾರಿಗೂ ಗಾಂಧಿ ಅರ್ಥವೇ ಆಗಿಲ್ಲ. ನೀವು ಯಾರೂ ಗಾಂಧಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿಯೂ ಇಲ್ಲ..’ ಎಂದು ಮಾತು ಆರಂಭಿಸಿದವನು ತನಗೇ ಅರಿವಿಲ್ಲದೇ ಮೈಮರೆತು ಮಾತನಾಡಿಬಿಟ್ಟ. `ಗಾಂಧಿ ಇಡೀ ರಾಷ್ಟ್ರವನ್ನು, ರಾಷ್ಟ್ರದ ಭವಿಷ್ಯವನ್ನು ಕಣ್ಣಮುಂದೆ ಇಟ್ಟುಕೊಂಡಿದ್ದರು. ಹಾಗೆ ಸಮಗ್ರವಾಗಿ ನೋಡಿದಾಗ ಮಾತ್ರ ಒಂದು ಸ್ಪಷ್ಟ ಚಿತ್ರಣ ಸಿಗಲು ಸಾಧ್ಯ. ಇನ್ನೂರೈವತ್ತು ವರ್ಷಗಳ ಹಿಂದೆಯೇ ಹುಟ್ಟಿದ ಅಮೆರಿಕಾದಂತಹ ರಾಷ್ಟ್ರವೊಂದು ಒಂದೇ ಒಂದು ಆರ್ಥಿಕ ಹಿಂಜರಿತವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿರುವಾಗ, ಭಾರತಕ್ಕೆ ಅದರ ಬಿಸಿಯೇ ತಟ್ಟಿಲ್ಲವೆಂದರೆ ಅದು ಗಾಂಧೀಜಿಯವರ ದೂರದೃಷ್ಟಿಯಿಂದ ಮಾತ್ರ ಸಾಧ್ಯವಾದದ್ದು.. ಈವತ್ತು ನಾವು ನಮ್ಮ ಮೇಲೆ ಅವಲಂಬಿತರಾಗಿದ್ದೇವೆ, ಆದರೆ ಇತರರು ಇನ್ನಿತರರ ಮೇಲೆ ಅವಲಂಬಿತರಾಗಿದ್ದಾರೆ. ಅಷ್ಟೇ..’

`ಇದುವರೆಗೆ ನಾನೂ ಇನ್ನೊಬ್ಬರ ಮೇಲೆ ಅವಲಂಬಿತನಾಗಿ ಫ್ಲಾಟು, ಕಾರು ಎಲ್ಲವನ್ನೂ ಮಾಡಿಕೊಂಡಿದ್ದು ನಿಜ. ಆದರೆ ನಾನು ನಂಬಿದ್ದ ಒಂದು ಸಣ್ಣ ಕೆಲಸ ಕೈತಪ್ಪುತ್ತಿದ್ದಂತೆಯೇ ನನ್ನದಾಗಿದ್ದ ಎಲ್ಲವೂ ನನ್ನದಾಗಲಿಲ್ಲ. ನಾನು ಸಾಲವನ್ನು ತೀರಿಸಲಾಗದಿದ್ದರಿಂದ, ಬ್ಯಾಂಕಿನ ಹೆಸರಿನಲ್ಲಿದ್ದ ಎಲ್ಲವೂ ಅವರ ಪಾಲಾಯಿತು. ನಾನು ಎಂಬುವ ನಾನು ನನ್ನ ಮೇಲೆ ಅವಲಂಬಿತನಾಗಿದ್ದರೆ ಹೀಗಾಗುತ್ತಿತ್ತೆ? ಇದು ಒಂದು ಸಣ್ಣ ಉದಾರಹಣೆಯಷ್ಟೇ..

`ಹೀಗಾಗಿ ಗಾಂಧಿ ನನಗೆ ಕೇವಲ ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿ, ಒಬ್ಬ ರಾಜಕಾರಿಣಿಯಾಗಿ ಮಾತ್ರ ಕಾಣುತ್ತಿಲ್ಲ.. ಬದಲಾಗಿ ಒಬ್ಬ ಅರ್ಥಶಾಸ್ತ್ರಜ್ಞನಂತೆ ಕಾಣುತ್ತಿದ್ದಾನೆ.. ಒಬ್ಬ ಸಮಾಜಶಾಸ್ತ್ರಜ್ಞನಂತೆ ಕಾಣುತ್ತಿದ್ದಾನೆ.. ಹೀಗೇ.. ಏನೆಲ್ಲ ಆಗಿ ಕಾಣುತ್ತಿದ್ದಾನೆ..

`ಒಂದೇ ಗೆರೆಯಲ್ಲಿ ಗಾಂಧಿಯನ್ನು ಬರೆಯಿರಿ ಎಂದರೆ ಕಲಾವಿದರು ಒಂದು ಕ್ವೆಶ್ಚನ್‌ಮಾರ್ಕ್ ಬರೆದುಬಿಡುತ್ತಾರೆ.. ನಿಜವಾಗಿಯೂ ಗಾಂಧಿ ಪ್ರಶ್ನಾರ್ಥಕ ಚಿಹ್ನೆಯೇ! ಆದರೆ ಬರೀ ಪ್ರಶ್ನೆಯಾಗಿ ಮಾತ್ರ ಉಳಿದುಬಿಡುವುದಿಲ್ಲ… ಬದಲಾಗಿ ಎಲ್ಲರಿಗೂ, ಎಲ್ಲದಕ್ಕೂ ಉತ್ತರವಾಗಿಯೂ ಕಾಣಲಾರಂಭಿಸುತ್ತಾರೆ.. ಕಾಡಲಾರಂಭಿಸುತ್ತಾರೆ.. ಅದೇ ಅವರ ಶಕ್ತಿ…’ ಎಂದು ಭಾಷಣ ಮಾಡಿ ಕುಳಿತ.

ಗಾಂಧಿಯನ್ನು ಮುಂದುವರೆಸಿಕೊಂಡು ಹೋಗಲು ಪರ್ಯಾಯ ಸಿಕ್ಕಂತಹ ಧನ್ಯತಾಭಾವ ವಯೋವೃದ್ಧರ ಮುಖದಲ್ಲೆಲ್ಲ ಕುಣಿಯಲಾರಂಭಿಸಿತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾದ ಪೂಜೆಯಾದುದೇನಿದು ಪ್ರಭುವರನ ಕಾಣದೆ
Next post ನೋಡೋಣ ಬಾರಾ ಹಂಪಿ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…