ಪಾದ ಪೂಜೆಯಾದುದೇನಿದು
ಪ್ರಭುವರನ ಕಾಣದೆ ||ಪ||
ಮೇಧಿನಿಯೊಳು ಸಂಶಿಯ ಜನ
ವಿನೋದದಿಂದು ಮಾಡಿದಂಥಾ ||ಅ. ಪ.||
ಧರಿಗೆ ಸಂಶಿ ಮರೆವ ಮೋಜಿನ ಪರಿ
ಬಾರೆ ಪ್ಯಾಟಿ ಮಳಗಿ ಸಾಲ್ಗಳೆರದು ಬಾಜಿನ
ನೆರೆ ಶುಭದಿ ಅದರೊಳಗಿರುವರೈ ಅನೇಕ-
ತರ ಜನ ಸರಿಗಾಣೆ ನಾ
ಪಿರಿದು ಕಾಂಬುದುದೀಗ ಭಾಗ್ಯ
ಸಿರಿಗೆ ಸಿಲ್ಕಿ ಶಿವನ ಚರಣ
ಮರೆತು ಮಾಯೆಯೊಳಿರಲು ಪುರಕೆ
ಪರಮಗುರು ನಿರಾಲ ಬಾರದೆ ||೧||
ಭೂಮಿಯೊಳು ನಿಸ್ಸೀಮಪ್ರೌಢರು ಈ
ಗ್ರಾಮದೊಳು ಧಾಮ ಶಾನುಭೋಗ ಗೌಡರು ಬಹು
ನಾಮವಿಡಿದು ಪಣಿ ಜನರು ಸು-
ಪ್ರೇಮ ರೈತರು ಸಮಸ್ತರು
ಕಾಮಿತಾರ್ಥ ಫಲವ ಬೇಡಿ
ನೇಮ ಹಿಡಿದು ನಿಜಕೆ ನಿಲುಕುತೆ
ಎಮಗೆ ವಿಚಿತ್ರ ಗಣಸಮೂಹ ನೆರಪಿ ಸ್ವಾಮಿ ಇಲ್ಲದೆ ||೨||
ಜಗದೊಳಗಿದು ಮಿಗಿಲುವಾಗಿರೆ
ಈಗಳಿದು ಇಂದ್ರನಗರ ಪೊಲ್ವಶೋಭನಾಗಿರೆ
ಬಗೆವಡಿದು ಸೌಖ್ಯ ಸೊಗಸಿನಿಂದ
ನಗುವಳಿಂದಕಿ ಹೀಗಿರುತಿರೆ
ಪೊಗಲ್ವನಂತಸ್ಥಲವ ಕಂಡನಂತಾಪುರದ ಒಡಿಯರುಗಳು
ನೆಗಪಿಸಿದ ಪುರಾತ ಶಿವಗೆ
ಅಘಹರನಂ ಸಿಗದ ಬಳಿಕ ||೩||
ಊರ ಹೊರಗೆ ಉತ್ರ ದಿಶೆಯೊಳು ನಿರ್ಮಿಸಿದ ಮೂಲ
ಚಾರುತರದ ಚೌಕಬಾಗಿಲೊಳು ಈರೈದುದ್ವಾರ
ಸಾರುಗಟ್ಟಿದ ಮಂಟಪಗಳೋಳ್ ನಿರ್ಬಯಲಿನಲ್ಲಿ
ಆರು ಮೂರು ಹಾದಿ ಮೀರಿ ವೀರಸಿಂಹಾಸನವನೇರಿ
ಮಾರಹರನ ಮಂತ್ರಜಪಿಸಿ ಮಾಯಾಭಂಗ ಮಾಡೋತನಕಾ ||೪||
ಮಂಡಲಾಗ್ರ ಮಧ್ಯನಾಡಿನೋಳ್ ಮಾಡಿಸಿದಮೋಹ
ಖಂಡಿಗನ್ನ ದಾನ ವಸ್ತ್ರಗಳ್ ಕೊಂಡಿಟ್ಟು ಚೌಕು
ಭಾಂಡ ಜೀನಸನ್ನು ಬಟ್ಟಲೊಳು ಕೊಡುತ್ತಿರಲು ಕೇಳಿ
ಉಂಡು ಉಣ್ಣಲಾರದೆ ಜಂಗಮರ್‍ಹಿಂಡುಗಟ್ಟಿ ತಿರುಗುತಿರ್ದ
ಪುಂಡಶಿಶುನಾಳಧೀಶನ ಕಂಡು ಕೈಮುಗಿಯುವತನಕಾ ||೫||
****