ಅರಾಸೇ ಹಾಸ್ಯ

ಅರಾಸೇ ಹಾಸ್ಯ

ಈಗ ಎಲ್ಲೆಲ್ಲೂ ಹಾಸ್ಯಗೋಷ್ಠಿಗಳು ನಡೆಯುತ್ತಿರುವ ಹೊತ್ತಿನಲ್ಲಿ ಹಾಸ್ಯಬರೆಹಗಳ ಅಭಿರುಚಿಯನ್ನು ಉಂಟು ಮಾಡಿದ್ದ ಹಳೆಯ ತಲೆಮಾರಿನ ಲೇಖಕರು ಮರೆಗೆ ಸರಿದು ಹೋದಂತಿದ್ದಾರೆ. ಮೊದಲಿಗೆ ವಿಶೇಷಾಂಕಗಳು, ಪತ್ರಿಕೆಗಳ ಪುರವಣಿಗಳು ಹಾಸ್ಯ ಬರಹಗಳಿಲ್ಲದಿದ್ದಲ್ಲಿ ಬಿಕೋ ಅನ್ನಿಸುತ್ತಿದ್ದವು. ಇಂತಹಾ ಹೊತ್ತಿನಲ್ಲಿ ಅರಾಸೇ ನೆನಪಾಗುತ್ತಾರೆ. ಅವರ ನಿಜನಾಮ ಸೇತೂರಾಮ್ ಎನ್ನುವುದು ಅರಾಸೇ ಹೆಸರಿನಲ್ಲಿ ಉಜ್ವಲವಾಗಿದೆ. ಅರಾಸೇ ಹಾಸ್ಯದ ಪ್ರಚಂಡಮತಿ. ಅವರು ಬಳಸುತ್ತಿದ್ದ ವಿಲಕ್ಷಣ ಸನ್ನಿವೇಶಗಳು, ಅಸಾಧಾರಾಣ ಬುದ್ಧಿಮತ್ತೆಯಿಂದ ಉಂಟು ಮಾಡುತ್ತಿದ್ದ ಪಂಚ್‌ಗಳು ಅವರ ಹಾಸ್ಯವನ್ನು ಅನನ್ಯಗೊಳಿಸುತ್ತಿದ್ದವು. ವರ್‍ಬಲ್ ವಿಟ್ ಅನ್ನು ನೆಚ್ಚಿ ಬರೆಯುವಂತೆ ಕಂಡರೂ ಅವರು ಸೃಷ್ಟಿಸುತ್ತಿದ್ದ ಸಾಂದರ್‍ಭಿಕ ಹಾಸ್ಯವು ಕಾಣುತ್ತಿತ್ತು. ಕೇವಲ ಪನ್ ಮಾಡಲೆಂದೇ ಪೆನ್ ಎತ್ತುವ ಹಾಸ್ಯ ಲೇಖಕರಾಗದೆ ತಮ್ಮದೇ ವಿಶಿಷ್ಟತೆಯನ್ನು ತೋರಿಸಿದವರು ಅರಾಸೇ ಅವರು. ಇದಕ್ಕೊಂದು ಉದಾಹರಣೆಯೆಂದರೆ ಶಬ್ದಮಣಿದರ್‍ಪಣವೆಂದರೆ ಕನ್ನಡ ಪಂಡಿತರಿಗೇ ಕಬ್ಬಿಣದ ಕಡಲೆಯಂತಿದ್ದು ಅದರಲ್ಲಿ ಅರಾಸೇ ಹಾಸ್ಯವನ್ನು ಹುಡುಕಿದ್ದು, ಕೇಶಿರಾಜನು ಲಿಂಗಗಳ ಬಗ್ಗೆ ಬರೆಯುತ್ತಾ ‘ಜನಮ್ ಶಬ್ದಮದು ನಪುಂಸಕಲಿಂಗ’ ಎನ್ನುತ್ತಾನೆ. ಈ ಮಾತನ್ನು ಇಟ್ಟುಕೊಂಡು ಅರಾಸೇ ‘ಕೇಶಿರಾಜ ಬಹು ಜಾಣ; ಅವನಿಗೆ ಮುಂದೆ ಇಂದಿರಾಗಾಂಧಿ ತುರ್‍ತು ಪರಿಸ್ಥಿತಿ ತಂದು ಜನರನ್ನೆಲ್ಲಾ ನಪುಂಸಕಲಿಂಗಿಗಳನ್ನಾಗಿಸುತ್ತಾಳೆಂದು ಮೊದಲೇ ಗೊತ್ತಿತ್ತು. ಆದುದರಿಂದ ಅವನು ಭವಿಷ್ಯದ ದೃಷ್ಟಿಯಲ್ಲಿ ಲಿಂಗವನ್ನು ವಿವರಿಸಿದ್ದಾನೆ’ ಎಂದು ಪಂಚ್ ಮಾಡುತ್ತಾರೆ. ಕನ್ನಡ ವಿದ್ವಾಂಸರುಗಳಲ್ಲಿ ಪಂಪನ ಸಮಾಧಿಯ ಬಗ್ಗೆ ಚರ್‍ಚೆ ಎದ್ದ ಸಂದರ್‍ಭದಲ್ಲಿ ಅವನ ಸಮಾಧಿ ಹುಡುಕಲು ಸ್ಥಳಗಳನ್ನು ಹುಡುಕುವುದು ಯಾಕೆ? ಪ್ರತಿ ಕನ್ನಡದ ವಿದ್ಯಾರ್‍ಥಿಯ ಉತ್ತರ ಪತ್ರಿಕೆಗಳಲ್ಲಿ ಪಂಪನ ಸಮಾಧಿ ಇದೆ ಎಂದು ಹಾಸ್ಯಗೈದಿದ್ದರು.

ಈ ಬಗೆಯ ಹಾಸ್ಯವು ಸಾಮಾನ್ಯ ಜನಕ್ಕೆ ಒಗ್ಗದು. ಎಷ್ಟೋಬಾರಿ ಹಳಗನ್ನಡದ ಜುಟ್ಟು ಹಿಡಿದು ದುಡಿಸಿಕೊಂಡು ಹಾಸ್ಯ ಸೃಷ್ಟಿಸುವವರು ಅರಾಸೇ. ಹೀಗಾಗಿ ಅವರ ಕನ್ನಡವು ಕಬ್ಬಿಣದ ಕಡಲೆಯನ್ನೇ ಕಬ್ಬಿಣವಾಗಿಸುವ ಪರಿಯದು, ರಾಜಕೀಯ, ಕ್ರಿಕೆಟ್, ಸಮಾಜದ ಓರೆಕೋರೆಗಳನ್ನು ಅವರು ಎಷ್ಟೋ ಬಾರಿ ಹಳಗನ್ನಡದ ಭಾಷೆ ಬಳಸಿ ವಿಡಂಬನೆಗೈದುದುಂಟು. ಅವು ವಿಚಿತ್ರ ಶೈಲಿಯಿಂದ ಗಮನ ಸೆಳೆದದ್ದೂ ಉಂಟು. ಉದಾಹರಣೆಗೆ ಅವರು ಕ್ರಿಕೆಟ್ ಬಗ್ಗೆ ಬರೆದ ‘ಡಾಲರಿನ ಡಿಂಗರಿಗರ್’ ಎಂಬ ಪದ್ಯದ ಸಾಲುಗಳನ್ನು ನೋಡಬೇಕು:

ಮಂಕಿನ ಗಾಳಿ ಸೋಂಕಿದೊಡಂ; ಕಳ್ನುಡಿಗೇಳ್ದೊಡಂ; ಹಾರ್‍ಮೋನಿಯಂ
ಭೋಂಕನೆ ಕಿವಿಗೊರೆದೊಡಂ; ಬಿರಿದ ದತ್ತುರಿಗಂಡೊಡಂ; ಮೇಣ್
ತಾಂಕುವ ಸುಂಟರ್ ಬೀಸಿದೊಡಂ; ಮದಮಹೋತ್ಸವ ಮಾದೊಡೇನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನಮನಂ ಡಾಲರಿನ ಡಿಂಗರಿಗರಂ

ಕುಮಾರವ್ಯಾಸನಂತೆ ಭಾಷೆಯನ್ನು ಲೀಲಾಜಾಲವಾಗಿ ಬಳಸಿ ಒಡ್ಡುತನವನ್ನೇ ಮಧುರವಾಗಿಸುವ ಕಲೆ ಅರಾಸೇ ಅವರಿಗೆ ಚೆನ್ನಾಗಿ ಗೊತ್ತಿತ್ತು (ಅಂದ ಹಾಗೆ ಅರಾಸೇ ಅವರ ನೆಚ್ಚಿನ ಕವಿ ಕುಮಾರವ್ಯಾಸನೆ. ಅವನ ಪದ್ಯಗಳ ವ್ಯಾಖ್ಯಾನವನ್ನು ಅವರೇ ಮಾಡಿ ಬೃಹದ್ ಗ್ರಂಥವನ್ನು ರಚಿಸಿದ್ದಾರೆ). ಅವರ ಭಾಷೆಯ ಬಳಕೆಯಲ್ಲಿ ಎಷ್ಟೋ ಸಾರಿ ಅನರ್‍ಥವೇ ಹಾಸ್ಯವನ್ನು ಸೃಷ್ಟಿಸುತ್ತಿದ್ದುದುಂಟು. ‘ಗುಲ್ಡುಮಿಯಾ’, ‘ಅಯ್ಯೋ ದೊಂಗಾಕೊಡಕೆ’, ‘ಹೋಗು ಹೋಗಲೆ ಟಿಂಗೊ ನನ್ ಮಗನೆ’, ‘ಡಿಂಗೊ ನನ್ ಮಗನೆ’-ಹೀಗೆ ಸರಾಗವಾಗಿ ಬಳಸಿ ಈ ಪದಗಳ ಮೂಲಕ ಕಚಗುಳಿಯಿಡುತ್ತಿದ್ದರು.

ಭರಮಸಾಗರದಲ್ಲಿ ಬಹಳ ಕಾಲ ನೆಲೆಸಿದ್ದ ಅರಾಸೇ ಅವರಿಗೆ ಭರಮಸಾಗರವೇ ಪ್ರಪಂಚ; ಅದೇ ಅವರ ಹಾಸ್ಯ ಸೃಷ್ಟಿಯ ಮೂಲವಸ್ತು! ಶಾಲಾಮಾಸ್ತರರಾಗಿದ್ದ ಅರಾಸೇ ತಮ್ಮ ಸರ್‍ವಿಸಿನ ಬಹುಭಾಗ ಕಳೆದಿದ್ದು ದುರ್‍ಗ ದಾವಣಗೆರೆಯ ನಡುವಿನ ರಸ್ತೆಯಲ್ಲಿ! ಆದುದರಿಂದ ಈ ಸೀಮೆಯ ಸೊಗಡು ಅವರ ಹಾಸ್ಯವನ್ನು ಮತ್ತಷ್ಟು ರುಚಿಕಟ್ಟಾಗಿಸಿತು. ಮಂಡಕ್ಕಿ ಮೆಣಸಿನಕಾಯಿ ಸಂಭ್ರಮ, ಜನ ತುಂಬಿಕೊಂಡು ಕಷ್ಟಪಟ್ಟು ಚಲಿಸುವ ಸಾವ್ಕಾರಿ ಬಸ್ಸು, ಬಸ್ಸಿನ ಸ್ಟ್ಯಾಂಡ್ ಏಜೆಂಟ್ ಮತ್ತು ಲೈನ್ ಏಜೆಂಟ್ ಗಳಾದ ಬಸ್ಯಾ ಮತ್ತು ಕಲ್ಲಜ್ಜ ಇವರು, ಮ್ಯಾಕ್‌ಬೆತ್ ಪಾಸಾಗದೆ ಡಿಗ್ರಿ ಪಡೆಯಲಾಗದ ಶೂರ ಶಿಷ್ಯ, ‘ಲೇ ರಾಯಾ..’ ಎನ್ನುವ ದಾವಣಗೆರೆಯ ಮಂದಿ-ಇವರನ್ನೆಲ್ಲ ಅರಾಸೇ ಹಾಸ್ಯ ಅರಗಿಸಿಕೊಂಡಿತ್ತು. ಈ ಎಲ್ಲ ಪಾತ್ರಗಳ ಪುನರ್ ಸೃಷ್ಟಿ ಪದೇ ಪದೇ ಆಗುತ್ತಲೇ ಇತ್ತು. ಇವನ್ನು ಬಿಟ್ಟರೆ ಉರಿಯುವ ರಾಜಕಾರಣ ಮತ್ತು ಕ್ರಿಕೆಟ್ ಇವು ಹಾಸ್ಯಕ್ಕೆ ತಕ್ಕ ವಸ್ತುಗಳು ಎನ್ನುವುದನ್ನು ಅವರು ಅರಿತಿದ್ದರು. ಹೀಗಾಗಿ ಅವರು ಬರೆದ ಕವನಗಳಲ್ಲಿ ಹೆಚ್ಚಿನವು ರಾಜಕೀಯ ವಿಡಂಬನೆಗಳು, ಅತಿಜಾಣರಾಗಿದ್ದ ಅರಾಸೇ ತಮ್ಮದೇ ಆದ ಜಾಡು ನಿರ್‍ಮಿಸುವುದರಲ್ಲಿ ಸಫಲರಾಗಿದ್ದರು.

ಶುದ್ಧಪೆಕರನ ಅವತಾರಿಯಾಗಿ ಹಾಸ್ಯ ಬರೆಯುತ್ತಿದ್ದ ಅರಾಸೇ ಅವರಿಗೆ ಅನೇಕ ಮುಖಗಳಿವೆ. ಅವರೊಬ್ಬ ಆಧ್ಯಾತ್ಮವಾದಿ. ಅವರೊಳಗೆ ಇದ್ದ ಜ್ಞಾನದ ತಹತಹ ಮೇಲ್ನೋಟಕ್ಕೆ ಅಸಂಗತವೆನಿಸುವ ಅಭಿವ್ಯಕ್ತಿಯನ್ನು ಪಡೆದಂತಿದ್ದರೂ ಅವರೊಳಗೆ ಒಬ್ಬ ಬ್ರಹ್ಮಜ್ಞಾನಿಯ ಕುತೂಹಲವನ್ನು ಜೀವಂತವಾಗಿಟ್ಟಿತ್ತು. ಕನ್ನಡದಲ್ಲಿ ಅನುಭಾವ ಸಾಹಿತ್ಯ ಬರುವ ಮುನ್ನವೇ ಅವರು ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಕನ್ನಡಕ್ಕೆ ಒಂದು ಅಧ್ಯಾತ್ಮದ ಪರಿಭಾಷೆಯ ನಿಘಂಟನ್ನು ಕೊಟ್ಟಿದ್ದರು. ‘ಬ್ರಹ್ಮಸೂತ್ರ’ಗಳ ಬಗ್ಗೆ ವ್ಯಾಖ್ಯಾನ ಬರೆದಿದ್ದರು. ಭಗವಾನ್ ಶಂಕರಲಿಂಗರ ಶಿಷ್ಯರಾಗಿದ್ದ ಅರಾಸೇ ಅವರ ಬಗೆಗೂ ಒಂದು ಪುಸ್ತಕ ಬರೆದಿದ್ದಾರೆ. ನಾಗಲಿಂಗನ ಕನ್ನಡ ಭಗವದ್ಗೀತೆಗೆ ಹೊಸರೂಪ ಕೊಟ್ಟಿದ್ದಾರೆ. ತತ್ವಪದಕಾರರಾದ ಶಿಶುನಾಳ ಷರೀಫರ ಬಗೆಗೂ ಒಂದು ಮೌಲಿಕವಾದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅವರೊಳಗೊಬ್ಬ ಕವಿಯೂ ಇದ್ದ. ಆ ಕವಿತ್ವದ ಬಗ್ಗೆ ಅವರಿಗೇ ಅಪಾರವಾದ ಹೆಮ್ಮೆಯಿತ್ತು. ವಿಲಕ್ಷಣವೆನ್ನಿಸುವಂತಿದ್ದ ಅವರ ಕಾವ್ಯ ಎಲ್ಲರಿಗು ಮುಟ್ಟಿರುವ ಬಗ್ಗೆ ಅನುಮಾನಗಳಿವೆ. ಅರಾಸೇ ಅವರ ಒಂದು ಛೇಡನೆಯ ಧಾಟಿಯ ಪದ್ಯಗಳು ಇಲ್ಲಿ ನೆನಪಿಗೆ ಬರುತ್ತಿವೆ. ಊರ ಸುದ್ದಿಯನ್ನೆಲ್ಲ ಮಾತಾಡುವ ಮನಸ್ಸಿನೊಳಗೆ ಧ್ವನಿಸುತ್ತಿದ್ದುದು ‘ಕಾಫಿ ಕುಡಿಸುವ ಧಾತರಿಲ್ಲವೇ? ಹೋಟಲಿಲ್ಲವೆ ಹತ್ತಿರ?’ ಎನ್ನುವ ತಹತಹ. ‘ಕೆದರುಕೇಶದ ಸುಂದರಿ, ಬೆದರುಗಣ್ಣಿನ ಮೋಹಿನಿಯರಾದ ಹಸೀನ, ಗೀತ ಸೀತ ಇವರೆಲ್ಲಾ ಏನಾದರೂ?’ ಎಂಬ ಪ್ರಶ್ನೆಗೆ ಕವಿ ಕೊಡುವ ಉತ್ತರ ಎಂದರೆ; ‘ಮದುವೆಯಾದರು ಹೋದರು’ ಎಂದು. ಈ ಸಾಲು ಎಷ್ಟೊಂದು ಮಾರ್‍ಮಿಕವಾಗಿದೆ! ಮದುವೆಯೆಂಬುದು ಕೊನೆಯ ಭಾಗ್ಯದ ಗುರಿಯಾಗಿರುವ ಹೆಣ್ಣುಗಳ ಬಾಳಿಗೆ ಅವರ ಅಂದ ಚೆಂದ, ಹೆಸರು, ಸ್ವಭಾವ ಏನಿದ್ದರೂ ಕೊನೆಗೆ ಸೇರುವುದು ಮದುವೆಯೆಂಬ ಕಡಲನ್ನು ತಾನೆ? ಸ್ತ್ರೀವಾದ ಬರುವುದಕ್ಕೂ ಬಹಳ ಹಿಂದೆಯೇ ಹೇಳಿದ ಅರಾಸೇಗೆ ನಮಸ್ಕಾರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇವಾರ್‍ಸಿಗೆ
Next post ನವಯುಗಾರಂಭ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…