(ಭಾರತ ಸ್ವಾತಂತ್ರ ದಿನದಂದಿನ ಉಲ್ಲಸಿತಭಾವನೆಯ ಉತ್ಸಾಹ ಪ್ರಗಾಥ)
೧
ಇಂದಿನುದಯ ರವಿ ತಂದಿಹನೈ, ತ-
ನ್ನೊಂದಿಗೆ ನವಯುಗವ,
ಇಂದಿನ ಮಧುರಸಮೀರ ಹರಡುತಿಹ
ಸ್ವಾತಂತ್ರ್ಯದ ಸೊಗವ!
ಇಂದಿನ ಉಸಿರಾಟಕೆ ತಡೆಯಿಲ್ಲವು
ಕಳಚಿ ಕೊರಳ ನೊಗವ-
ಹೊಂದಿಹವೈ ಮನ-ಮನವು ರೆಕ್ಕೆಗಳ,
ಮೀರಿಸಿಹವು ಖಗವ!
ಪ್ರಳಯದಿಳೆಯ ತಮ ಮರೆಯಾಯ್ತೋ-ಕಡ-
ಲೊಳಗಿನ ನೌಕೆಯು ಕರೆಗಾಯ್ತೋ-ಮನು-
ಕುಲದ ಬಾಳ ಗೋಳದು ಹೋಯ್ತೊ….!
ಉಳಿದಿವೆ ಶಕ್ತಿಯ ಬೀಜಗಳೆಲ್ಲವು ;
ಕಂಡೆವು ನವಯುಗವ….
ಬೆಳೆಯ ಕೊಂಡು ನಾವಿನ್ನು ಬಲಿಯ ಬೇ-
ಕಾಗಿದೆ ಹೊಸಜಗವ !
ಇಂದಿನುದಯರವಿ ತಂದಿಹನೈ, ತ-
ನ್ನೊಂದಿಗೆ ನವೆಯುಗವ-
ಮಂದಿ ಕಾಣುತಿದೆ ಭಾರತಮಾತೆಯ
ಚೆಂದದ ನಗೆಮೊಗವ !
೨
ಇಂದು ಹುಟ್ಟಿದಣುಗನಿಗೆ ಇಲ್ಲವೈ,
ಪರದಾಸ್ಯದ ಹೊಲೆಯು !
ಬೆಂದುಹೋಯ್ತು ದೆಸೆದೆಸೆಗಳಲ್ಲಿಯೂ
ಹಗೆಯು ಹೆಣೆದ ಬಲೆಯು !
ಹಿಂದೆ ತಿಂದ ಕೂಳೇನ ಕೊಟ್ಟಿ ತೋ-
ಬರಿಯೆ ಹಂದೆತನವ;
ಇಂದು ಉಂಡ ಊಟವಿದು ತುಂಬುತಿದೆ
ಮನದಿ ಮನುಜಗುಣವ.
ತುಂಡುಗೊಂಡ ಎದೆ ಬೆಸೆದಿಹುವೋ-ಜನ-
ಮಂಡಲದಸುಗಳ ಹೊಸೆದಿಹವೋ-ರಣ-
ಚಂಡಿಯ ಕಂಗಳ ಕೊಸೆದಿಹವೊ….!
ಯಾವ ಭಾವ ಕಂಡಿರುವ ಕನಸು ಮೈ-
ಗೊಳುತಲಿಂದು ಬಂತೋ…
ಯಾವ ಯೋಗ ಸಾಧನವು ನಮಗೆ ಸಂ-
ಸಿದ್ಧಿಯನ್ನು ತಂತೋ !
ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಕುಂದದಿರುವ ಪ್ರಭೆಯಿಂದ ಬೆಳಗುವನು
ಭಾಗ್ಯೋದಯನಗವ.
೩
ದೇವನು ಮೀನಿನ ಮಾನಕಿಳಿದು ಆ
ಪ್ರಳಯ ಕಳೆದನಂದು ;
ಮಾನವ ದೇವನ ಸ್ಥಾನಕೇರಿ ಈ
ಪ್ರಳಯವಳಿದನಿಂದು !
ದೇವನೊಬ್ಬನೇ ತಂದ ಯುಗಗಳವು
ವೈಷಮ್ಯದ ಒಡಲು,
ಮಾನವನೇ ಮೂಡಿಸಿದೀ ನವಯುಗ
ಸಮತೆಯ ಸವಿಗಡಲು !
ಭಾರತಶಕ್ತಿಯು ದುಡಿ-ದುಡಿದು,-ಕರೆ-
ತಂದಿದೆ ಕಾಲದ ಕೈಹಿಡಿದು-ಇದೆ
ಲೋಕದ ಕಂಗಳ ತೆರೆಸುವುದು….!
ದಾನವತೆಯ ಮೂಲವನೇ ಮುರಿಯುವೆ-
ನೆನ್ನುವುದೀಯುಗವು ;
ಮಾನವರೆದೆಯೊಳೆ ದೇವನಿರುವುದನು
ಕಾಂಬುದಿನ್ನು ಜಗವು !
ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಇಂದಿನ ಗಾಳಿಯು ಗೀತಿಸುತಿರುವುದು
ಸ್ವಾತಂತ್ರ್ಯದ ಸೊಗವ !
೪
ತಾರಾಲೋಕದ ಮೇಗಣಿಂದ ಋಷಿ-
ವೃಂದವು ಹರಸುತಿದೆ;
ಭಾರತಕುಲಪಿತೃಗಣವು ಸ್ವರ್ಗದಿಂ
ಹೂಮಳೆಯೆರಚುತಿದೆ.
ಬೆಳ್ಳಿಯ ಬೆಟ್ಟದ ಮೇಲೆ ತ್ರಿಶೂಲಿಯು
ತಾಂಡವ ತೊಡಗಿರುವ-
ಯಕ್ಷ-ರಕ್ಷ ಗಂಧರ್ವ ಕಿನ್ನರರ
ಮೇಳ ಕೂಡಿಸಿರುವ.
ಪೂರ್ವ-ಪಶ್ಚಿಮದ ಕಡಲುಗಳು-ಉ-
ಬ್ಬೇರಿ ಕುಣಿಯುತಿವೆ ಲಹರಿಗಳು-ದನಿ
ಬೀರುತಿಹವು ದಿಗ್‌ಭೇರಿಗಳು….!
ಕೃತ-ತ್ರೇತಾ-ದ್ವಾಪರದ ಯುಗಂಗಳು
ಕಾಣಿಕೆ ತಂದಿಹವೋ!
ನವಯುಗಪುರುಷನ ಭವ್ಯಭವಿಷ್ಯವ-
ನುದ್ಘೋಷಿಸುತಿಹವೋ !
ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಇಂದಿನ ಪಾವನ ಪವನ ಹರಡುತಿಹ
ಸ್ವಾತಂತ್ರ್ಯದ ಸೊಗವ!
*****