ಸುಡು ನಿನ್ನ ಸಿಂಗರವ,
ನಿನ್ನ ಸೊಗವ.
ಬಿಡು ನಿನ್ನ ಬೆಡಗ ಹಾ-
ಳಾಗಿಸಿತು ಜಗವ!
ಆಳಾಗಿಸಿತು ನೂರು
ದೇಹಗಳನು,
ತೊಳಲಾಡಿಸಿತ್ತೆನಿತೊ
ಗೇಹಗಳನು!
ನಿನ್ನ ಮಖಮಲು ಮುಖವ
ಬಣ್ಣಿಸಿದ ವೆಂಪು,-
ಕಳೆಯಲದು ನಿಲ್ಲುವವು
ನೂರು ಸಂಪು!
ಓ ಸುವಾಸಿನಿ! ನೀನು
ತೈಲಿಸಿದ ಕೇಶ,-
ಅದಕೆ ಬರಿದಾಯ್ತು ಜನ
ಶಂಕರಿಯ ಕೋಶ!
ಸುಡು ನಿನ್ನ ಸಿಂಗರವ,
ನಿನ್ನ ನೊಗವ.
ಬಿಡು ನಿನ್ನ ಬೆಡಗ, ಹಾ-
ಳಾಗಿಸಿತು ಜಗವ!
ನಿನ್ನ ಧಮನಿಯಲಿರುವ
ರಾಜರಕ್ತ
ಅನ್ಯಾಯಗಳ ತೀರ್‍ಥ-
ವೆಂದು ವ್ಯಕ್ತ
ಕೆಲಸವಿಲ್ಲದೆ ರಾಣಿ-
ವಾಸದಲ್ಲಿ
ಕುಳಿತರಳಿಸಿದ ಮಂದ-
ಹಾಸದಲ್ಲಿ
ನಿನ್ನ ಕುಲಕೋಟಿಯಾ
ಹೆಂಗಳೆಯರು
ಕಂಡಿಹರು ಸ್ವರ್‍ಗವನ್ನು,-
ನೆಲಕಿಳಿಯರು!
ನೂರು ಹೆಣ್ಣಿನ ಹೆಣ್ಣು-
ತನವೆ ಹೋಗಿ,-
ಕೂಲಿ ಹೆಣ್ಣಾಗಿ ಬರಿ
ಯಂತ್ರವಾಗಿ
ಸಾಯುತಿರೆ ಕೂಡಿಟ್ಟ
ಹಣದ ಗಂಟು,-
ಅದರಿಂದ ನಿನ್ನ ಚೆಲು
ವಿಕೆಗೆ ಉಂಟು,-
ನರಕದಾ ಮುಗಿಲಿಂದ
ಬಂದ ಮಿಂಚು,-
ನಿನ್ನ ಕೆಂದುಟಿಯ ನಗೆ,
ರಕ್ಕಸರ ಹೊಂಚು!
ಸುಡು ನಿನ್ನ ಸಿಂಗರವ,
ನಿನ್ನ ಸೊಗವ.
ಬಿಡು ನಿನ್ನ ಬೆಡಗ ಹಾ-
ಳಾಗಿಸಿತು ಜಗವ.
ದಿವ್ಯ ಸುಂದರಿಯಹುದು
ನೀನು ಬಾಲೆ.
ಸೆರೆಗೊಳುವ ಸೆರೆ ನೀನು;
ಹೆಂಡ. ಹಾಲೆ ?
ನಿತ್ಯ ಸಂಕಟ ಪಡಲು
ನೂರು ನರಪ್ರಾಣಿ,-
ಮೆರೆಯಲೆಳಸುವಿಯಲ್ಲ,
ಆಗಿ ಇಂದ್ರಾಣಿ?
ಬಾ ಇತ್ತ ಶಪಿಸುತ್ತ
ನಿನ್ನ ಕುಲಕೋಟಿ,-
ಬಾ ಇತ್ತ ಸಂವದದ
ಸೆರೆಮನೆಯ ದಾಟಿ!
ನೂರು ಗುಡಿಸಲಗಳಲಿ
ಮೀರಿ ನರಳಾಟ,-
ಕಾಸಿಲ್ಲ-ಈಸಿಲ್ಲ-
ವೆಂದು ಹೊರಳಾಟ!
ದೇವ ಕೊಟ್ಟಿಹ ಚೆಲುವ-
ದೊಂದೆ ಸಾಕು,
ಚಲು ಗುಲಾಬಿಗೆ ಬಣ್ಣ –
ನೆಯದೇಕೆ ಬೇಕು?
ಮೀಸಲಿಡು ಆ ಹಣವ
ಕಾಸಿಲ್ಲದರಿಗೆ.
ಇಳಿಯಾಣ್ಮಗೀವುದಿದೆ,-
ಇದೆ ಸುಂಕ, ತೆರಿಗೆ!
ಸುಡು ನಿನ್ನ ಸಿಂಗರವ,
ನಿನ್ನ ನೊಗವ.
ಬಿಡು ನಿನ್ನ ಬೆಡಗ, ಹಾ-
ಳಾಗಿಸಿತು ಜಗವ.
*****