ಕಪಿಲಾನದಿಯ ತೀರದಲ್ಲಿ ಒಂದು ಕಾಡು. ಬಡಗಿಗಳು ಅಲ್ಲಿ ಮರವನ್ನು ಕುಯ್ಯುತ್ತಿದ್ದರು. ಎಲ್ಲರೂ ತಮ್ಮ ತಮ್ಮ ಪಾಡಿಗೆ ತಾವು ತಾವು ಕೆಲಸ ಮಾಡುತ್ತಿದ್ದರು. ಆಗ ಆನೆಯು ಘೀಳಿಟ್ಟಿಂತೆ ಆಗಲು ಎಲ್ಲರಿಗೂ ಹೆದರಿಕೆ ಆಯಿತು. ಮತ್ತೂ ಒಂದು ಸಲ ಹಾಗೆಯೇ ಅದೇ ಶಬ್ದ ಕೇಳಿಸಿತು. ಎಲ್ಲಿಯವರು ಅಲ್ಲಲ್ಲೇ ಅಡಗಿಕೊಂಡು ಬಿಟ್ಟರು.
ಒಂದು ದೊಡ್ಡ ಕೊಂಬಿನಾನೆ ಕುಂಟುತ್ತಾ ಬಂತು. ಅದಕ್ಕೆ ಬಲಗಡೆಯ ಮುಂಗಾಲು ಮುಂದಕ್ಕೆ ಇಡುವುದಕ್ಕೂ ಆಗದಷ್ಟು ಗಾತ್ರ ಬಾತುಕೊಂಡಿತ್ತು. ಬಲು ಕಸ್ಟದಿಂದ ಆನೆಯು ಆ ಬಡಗಿಗಳು ಇರುವ ತಾವಿಗೆ ಬಂತು. ಇನ್ನು ಮುಂದೆ ಹೋಗಲಾರದೆ ಮಲಗಿಕೊಂಡು ಬಿಟ್ಟಿತು. ಅದು ನೋವಿನಿಂದ ನರಳುತ್ತಿತ್ತು.
ಆನೆಯು ಬಾಧೆ ಪಡುತ್ತಿರುವುದು ಬಡಗಿಗಳಿಗೆ ತಿಳಿಯಿತು. ಮನಸ್ಸು ನಿಲ್ಲದೆ ಆದುದು ಆಗಲಿ ಎಂದು ಅವಿತಿದ್ದವನು ಆನೆಯ ಬಳಿಗೆ ಹೋದನು. ಅವನು ಹತ್ತಿರ ಬಂದರೂ ಆನೆಯು ಏನೂ ಮಾಡಲಿಲ್ಲ. ಅವನಿಗೆ ಧೈರ್‍ಯವಾಗಿ, ಇನ್ನೂ ಹತ್ತಿರಕ್ಕೆ ಹೋದನು. ಆನೆಯು ಅವನ ಮುಖವನ್ನು ನೋಡಿ, ಕಣ್ಣೀರು ಬಿಟ್ಟಿತು. ಅದನ್ನು ನೋಡಿದರೆ “ನೀನು ಬಂದು ಏನಾಗಿದೆ ನೋಡು” ಎಂದು ಹೇಳುವ ಹಾಗೆ ತೋರಿತು. ಅದೂ ಒಂದು ಸಲ ನರಳಿತು. ಇನ್ನು ಸೈರಿಸುವುದು ಅಸಾಧ್ಯವಾಗಿ, ಊದಿದ ಕಾಲಿನ ಬಳಿಗೆ ಹೋದನು. ಎಡಗೈಯಲ್ಲಿ ಜೀವವನ್ನು ಹಿಡಿದುಕೊಂಡು, ಆ ಕಾಲನ್ನು ಹಿಡಿದು ನೋಡಿದರೆ. ಸುಮಾರು ಒಂದು ಗೇಣುದ್ದ, ಒಂದು ಹೆಬ್ಬೆರಳು ದಪ್ಪ ಇರುವ ಸಿಬಿರು ಚುಚ್ಚಿಕೊಂಡಿರುವುದು ಕಂಡು ಬಂತು. ಆದರಿಂದ ಆನೆಗೆ ಎಷ್ಟು ನೋವಾಗಿರಬಹುದೋ ಎಂದು ಅವನಿಗೆ ಕಣ್ಣಿನಲ್ಲಿ ನೀರು ಬಂತು. ಕೂಡಲೇ ತನ್ನವರನ್ನು ಕರೆದು ಬಿಸಿ ನೀರು ಕಾಯಿಸಿ ತರಿಸಿ ಅದನ್ನು ಹಾಕಿ ತೊಳೆದನು. ಆನೆಗೂ ಕೊಂಚ ಹಿತವಾಗಿ, ಒಂದು ನಿಟ್ಟುಸಿರು ಬಿಟ್ಟಿತು. ಹಾಗೇ ಇನ್ನೂ ಸ್ವಲ್ಪ ಬಿಸಿನೀರು ಹಾಕುತ್ತಿದ್ದು, ಕೊನೆಗೆ ಆ ಸಿಬಿರನ್ನು ಕಿತ್ತುಬಿಟ್ಟಿನು. ಸಿಬಿರು ಈಚೆಗೆ ಬಂದು ಬಿಟ್ಟಿತು. ಆ ವೇಳೆಗೆ ಧೈರ್‍ಯಗೊಂಡು ಎಲ್ಲರೂ ಅಲ್ಲಿಗೆ ಬಂದರು. ಆ ಗಾಯದಲ್ಲಿದ್ದ ಕೀವು ರಕ್ತಗಳನ ಚೆನ್ನಾಗಿ ತೊಳೆದು ಅದಕ್ಕೆ ತಮ್ಮಲ್ಲಿದ್ದ ಔಷಧಿಯನ್ನು ಹಾಕಿದರು.
ಆ ಹುಣ್ಣು ಆರುವುದಕ್ಕೆ ಒಂದು ತಿಂಗಳು ಹಿಡಿಯಿತು, ಅದುವರೆಗೂ ಆನೆಯು ಅಲ್ಲಿಯೇ ಇತ್ತು. ಬಡಗಿಗಳೂ ಅದಕ್ಕೆ ಅಲ್ಲಿಗೇ ಸೊಪ್ಪು ತಂದು ಹಾಕುತ್ತಿದ್ದರು. ಜತೆಗೆ ‘ಪಾಪ!’ ಎಂದು ತಾವು ತಂದಿದ್ದ ಬುತ್ತಿಯಲ್ಲೂ ಕೊಂಚಕೊಂಚ ಕೊಡುತ್ತಿದ್ದರು. ಆನೆಗೆ ಬಡಗಿಗಳಲ್ಲಿ ಪ್ರೀತಿ ಹುಟ್ಟಿತು. ಆನೆಯು ಅವರನ್ನು ಬಿಟ್ಟು ಹೋಗಲಾರದೆ ಆಲಿಯೇ ನಿಂತು ಬಿಟ್ಟಿತು. ಅವರಿಗಾಗಿ ಏನಾದರೂ ಕೆಲಸ ಮಾಡಿಕೊಡಬೇಕೆಂದು ದಿಮ್ಮಿಗಳನ್ನು ಸಾಗಿಸುವುದು, ಮರ ಎಳೆಯುವುದು ಮೊದಲಾದ ಕೆಲಸಗಳನ್ನು ಮಾಡಿಕೊಡುತ್ತಿತ್ತು. ಬಡಗಿಗಳ ಮಕ್ಕಳು ಯಾವತ್ತಾದರೂ ಬಂದರೆ ಅವರನ್ನು ಬೆನ್ನಿನ ಮೇಲೆ ಕೂಡಿಸಿಕೊಂಡು ಓಡಾಡಿಸುತ್ತಿತ್ತು.
*****