ಶಿಲಾದಿತ್ಯ ವಲ್ಲಭಿಯ ದೊರೆಯು. ಆತನ ಅರಮನೆಯಲ್ಲಿ ಒಂದು ಸರೋವರವಿತ್ತು. ಆತನು ಯುದ್ಧಕ್ಕೆ ಯೋಗಬೇಕಾದರೆ ತಾನು ಮಿಂದು ಮಡಿಯುಟ್ಟು ಶುಚಿಯಾಗಿ ಬಂದು ಆ ಕೊಳವನ್ನು ಪೂಜಿಸುವನು. ಆಗ ಅಲ್ಲಿಂದ ಏಳುಬಣ್ಣದ ಕುದುರೆಯು ಎದ್ದು ಮೇಲಕ್ಕೆ ಬರುವದು. ಆತನು ಅದನ್ನು ಹತ್ತಿ ಯುದ್ಧಕ್ಕೆ ಹೋಗುವನು. ಅಲ್ಲಿ ಯಾರ ಆಯುಧವೂ ಆತನನ್ನು ಗಾಯ ಪಡಿಸಲಾರದು. ಆತನು ಎಲ್ಲರನ್ನೂ ಗೆದ್ದು ಬಿಡುವನು. ಹೀಗೆಯೇ ಆತನು ಎಷ್ಟೋ ಯುದ್ಧಗಳನ್ನು ಗೆದ್ದು ಚಕ್ರವರ್‍ತಿಯಾಗಿದ್ದನು.
ಒಂದು ಸಲ ಅರಸನು ಅಲ್ಲಿ ಪೂಜೆಗೆ ಹೋಗುವಾಗ ಹಗೆಯವನು ಒಬ್ಬನು ಬಂದು ಕೊಳಕು ಬಟ್ಟೆಯ ಚೂರು ಒಂದನ್ನು ಇಟ್ಟುಕೊಂಡಿದ್ದು, ಅದನ್ನು ಆತನಿಗೆ ಕಾಣದಂತೆ ಉಡಿಯಲ್ಲಿ ಹಾಕಿಬಿಟ್ಟನು. ಅರಸನು ಎಂದಿನಂತೆ ಭಕ್ತಿಯಿಂದ ಪೂಜೆ ಮಾಡಿದರೂ ಏಳು ಬಣ್ಣದ ಕುದುರೆಯು ಬರಲಿಲ್ಲ. ಓಹೋ! ಏನೋ ಮೈಲಿಗೆಯಾಗಿರಬಹುದೆಂದು ನೋಡಲು, ಆತನು ಆರಿಯದಂತೆಯೇ ಆತನ ಉಡಿಯಲ್ಲಿ ಒಂದು ಚೂರು ಮೈಲಿಗೆ ಬಟ್ಟೆಯಿತ್ತು. ಅರಸನಿಗೆ ಆಗ ಕೊಳದಿಂದ ಕುದುರೆಯು ಬರದೆ ಇರಲು ಕಾರಣವೇನು ಎಂಬುದು ತಿಳಿಯಿತು. ಮತ್ತೆ ಮಿಂದು ಮಡಿಯುಟ್ಟು ಪೂಜಿಸಿದನು. ಆದರೂ ಕುದುರೆಯು ಬರಲಿಲ್ಲ. ಒಂದು ಸಲ ಮೈಲಿಗೆ ಸೋಕಿ, ಕೊಳದ ಮಹಿಮೆಯೇ ಹೋಗಿಬಿಟ್ಟಿತು.
ಅಂದಿನ ದಿನವೂ ಯುದ್ಧವಿತ್ತು. ಶಿಲಾದಿತ್ಯನೂ ಹೋದನು. ಆದರೆ ಆತನಿಗೆ ಅಂದಿನ ಯುದ್ಧವೇ ಕೊನೆಯಾಯಿತು. ಆತನು ಅಂದಿನ ರಣರಂಗದಿಂದ ಹಿಂತಿರುಗಲೇ ಇಲ್ಲ. ಆತನು ಅಲ್ಲಿಯೇ ಮಡಿದು ಹೋದನು.
*****