ಮುತ್ತುಗಳ ಕಾವಣದಿ ಮುತ್ತಜ್ಜ ಕುಳಿತಿದ್ದ
ಬೇಡಿದೆನು ಮುತ್ತನೊಂದು.
‘ಹೋದ ಮುತ್ತುಗಳೆಂತು ತಿರುಗಿ ಬರುವವು, ರಸಿಕ!
ಅವು ನನ್ನ ಪ್ರಾಣಬಿಂದು!’
ಹೂವರಳ್ದ ತೋಟದಲ್ಲಿ ಹೂವರಸ ಕುಳಿತಿದ್ದ.
ಹಾತೊರೆದೆ ಹೂವಿಗೆಂದು,
‘ಶೋಭೆಯಳಿಯದೆ ಹೇಳು, ಹೂವೆದೆಯ ಹಾದಿಗನೆ!
ಕೊಡಲಾರೆ ಹೂವನಿಂದು!’
ತಾರೆಗಳ ತಿಂತಿಣಿಯು ಮುಗಿಲಲ್ಲಿ ನೆರೆದಿತ್ತು
ಸಿಗಲೆಂದೆ ತಾರೆಯೊಂದು
ನೂರು ಕ್ರೋಶಗಳಾಚೆ ಬಿದ್ದು ಮಣ್ಣಾಗಿತ್ತು
ನಗುತಿರುವ ತಾರೆಯೊಂದು!
*****