– ಪಲ್ಲವಿ –
ಇದೋ ಬಂದ ಭಾನು ತಂದ
ಸ್ವಾತಂತ್ರ್ಯದ ಕಾಂತಿಯ,
ಅದೋ ಓಡಿ ಹೋಯ್ತು ನೋಡಿ
ಬಲಿದ ನಿಶಾಭ್ರಾಂತಿಯ !
೧
ಓ!-ಮೂಡಣದೀ ನಭದಿ ಹೊನ್ನ
ಯುಗದ ಮೊಳಕೆ ಮೂಡಿತೋ ?
ಆ-ಮೊಳಕೆಯದೇ ಬಳೆದು ನಿಶೆಯ
ಜತೆಗೆ ಕದನ ಹೂಡಿತೋ !
ಮಂಗಲಮಯಿ ಉಷಾಸರಸಿ
ಭೃಂಗಕುಲದ ಸೆರೆಯ ಹರಿಸಿ
ಸಂಗೀತದಿ ಸುಧೆಯ ಬೆರಸಿ
ಗಾಳಿಗಳಲಿ ತೇಲಿಸೆ-
ಮುಂಗಡೆ ಜನವೆದ್ದು ಬಂತು
ಗೀತದ ಶ್ರುತಿಯಾಲಿಸೆ.
ಇದೋ ಬಂದ ಭಾನು ತಂದ
ಸ್ವಾತಂತ್ರ್ಯದ ಕಾಂತಿಯ,
ಅದೋ ಓಡಿ ಹೋಯ್ತು ನೋಡಿ
ಬಲಿದ ನಿಶಾಭ್ರಾಂತಿಯ!
೨
ಇಗೊ!-ಬೀತು ಹೋದ ತರು ಮರವೂ
ಚಿಗುರಿ ತಳಿತು ನಿಂತಿವೆ,
ಅಗೊ!-ಸೋತು ಬಿಳ್ದ ಲತಲತೆಯೂ
ನಗೆಯಲರಾನ್ನಾಂತಿವೆ
ಪ್ರಾಣವಾಯು ಬೀಸುತಿದೆ.
ತ್ರಾಣಶರಧಿ ಸೂಸುತಿದೆ,
ಹಿಗ್ಗು ಹವಯೊಳೀಸುತಿದೆ-
ಎಂತಹದಿದು ಕ್ರಾಂತಿ!
ಜಾಗೃತ ಭಾರತದೊಳಿನ್ನು
ನೆಲೆಗೈವಳು ಶಾಂತಿ !
ಇದೋ ಬಂದ ಭಾನು ತಂದ
ಸ್ವಾತಂತ್ರ್ಯದ ಕಾಂತಿಯ,
ಅದೋ ಓಡಿ ಹೋಯ್ತು ನೋಡಿ
ಬಲಿದ ನಿಶಾಭ್ರಾಂತಿಯ !
*****