ಕನ್ನಡದ ಕತೆಗಾರರೆಂದು ಮಾತ್ರ ನನಗೆ ಪರಿಚಿತವಿದ್ದ ಡಿ.ಎಸ್.ಚೌಗಲೆಯವರು ನಾಟಕಕಾರರೂ ಚಿತ್ರಕಲಾವಿದರೂ ಎಂದು ತಿಳಿದಿದ್ದು ಅವರ ನಾಟಕ ಪ್ರದರ್ಶನವನ್ನು ನೋಡುವಾಗ, ಒಂದೇ ಮನುಷ್ಯನಲ್ಲಿ ವಿಭಿನ್ನ ಕಲೆಗಳು ಸಂಗಮಿಸುವುದು ಅಪರೂಪ ಅಥವಾ ಕಲೆಗಳ ಹವ್ಯಾಸ ಹಲವಾರು ಇದ್ದರೂ ಅವು ಉತ್ಕೃಷ್ಟವಾಗಿ ಇರುವುದು ಅಪರೂಪದ ಸಂಗತಿ ಎನ್ನಬಹುದೇನೊ. ಮೊನ್ನೆ ಮೊನ್ನೆ ತಾನೆ ತಮ್ಮ ಚಿತ್ರಕಲಾ ಪ್ರದರ್‍ಶನ ಮಾಡಿದ ಚೌಗಲೆ ಬೆಳಗಾವಿಯ ನೆಲದಿಂದ ಬಂದ ಉತ್ತಮ ಪ್ರತಿಭೆ ಎನ್ನುವುದರಲ್ಲಿ ಅನುಮಾನವಿಲ್ಲ. ವೃತ್ತಿಯಿಂದ ಕನ್ನಡ ಅಧ್ಯಾಪಕರಾಗಿರುವ ಚೌಗಲೆ ಗಡಿ ಭಾಗದಲ್ಲಿರುವ ಕಾರಣದಿಂದ ಮರಾಠಿಯನ್ನೂ ಬಲ್ಲವರು. ಎರಡು ಸಂಸ್ಕೃತಿಗಳನ್ನು ಒಟ್ಟೋಟ್ಟಿಗೆ ನೋಡುವ ಅವಕಾಶ ಅವರಿಗೆ ಸಿಕ್ಕಿರುವುದರಿಂದ ಕನ್ನಡ-ಮರಾಠಿ ಬಾಂಧವ್ಯವನ್ನು ಅವರು ವೃದ್ಧಿಗೊಳಿಸುತ್ತಿದ್ದಾರೆ.
ಚೌಗಲೆಯವರಿಗೆ ಹೆಸರು ತಂದುಕೊಟ್ಟಿದ್ದು ‘ಗಾಂಧಿ ವಿರುದ್ಧ ಗಾಂಧಿ’ ಎನ್ನುವ ಮರಾಠಿ ನಾಟಕದ ಅನುವಾದ. ಚೌಗಲೆಯವರಿಗೆ ನಾಟಕದ ಬಗ್ಗೆ ಆಸಕ್ತಿ ಮೂಡಿದ್ದು ಒಂದು ಆಕಸ್ಮಿಕ ಎಂದು ಅವರೇ ಹೇಳಿಕೊಂಡಿದ್ದಾರೆ. ಅವರೊಳಗಿನ ನಾಟಕಕಾರ ಚಿಗುರಿದ್ದು ‘ಗಾಂಧಿ ವಿರುದ್ಧ ಗಾಂಧಿ’ ನಾಟಕವನ್ನು ಅನುವಾದ ಮಾಡುವುದರೊಂದಿಗೆ ಮರಾಠಿ ರಂಗಭೂಮಿಗೆ ತನ್ನದೇ ಆದ ವೈಶಿಷ್ಟ್ಯವಿದೆ. ಅಲ್ಲಿ ರಂಗಭೂಮಿ ಎಂದರೆ ಜನಸಂವಾದ. ಪ್ರಚಲಿತ ಸಂಗತಿಗಳು, ಪ್ರಮುಖ ಐಡಿಯಾಲಾಜಿಗಳು ಮಥನಗೊಂಡು ಜನರ ಮುಂದೆ ಬರುತ್ತವೆ. ಸಮಕಾಲೀನ ಜಗತ್ತಿನೊಡನೆ ಸಂಬಂಧವೇರ್‍ಪಡುವ ಈ ಡಯಲಾಜಿಕ್ ಎನ್ನಿಸುವ ಪ್ರಯೋಗಗಳು ಮರಾಠಿಯಲ್ಲಿ ಬಳಕೆಯಲ್ಲಿದೆ. ಈ ದಿಸೆಯಲ್ಲಿ ಗುಜರಾತಿ ಕಾದಂಬರಿಯನ್ನು ಮರಾಠಿ ರಂಗಭೂಮಿಗೆ ಒಗ್ಗಿಸುವ ‘ಗಾಂಧಿ ವರ್ಸಸ್ ಗಾಂಧಿ’ ಎಂಬ ಅಜಿತ್ ದಳವಿಯವರ ಪ್ರಯೋಗವನ್ನು ಚೌಗಲೆಯವರು ಕನ್ನಡಕ್ಕೆ ತಂದರು. ಕನ್ನಡ ರಂಗಭೂಮಿ ಮತ್ತೊಮ್ಮೆ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದ ಕಾಲದಲ್ಲಿ ಇದೊಂದು ವಿಶಿಷ್ಟ ವಸ್ತುವುಳ್ಳ ಹೊಸ ಪ್ರಯೋಗವಾಗಿ ಹೊಮ್ಮಿತು.
ಸ್ವಾತಂತ್ರ್ಯಪೂರ್‍ವ ಗಾಂಧಿ ದೇವಮಾನವನಾಗಿ ಹೊರಹೊಮ್ಮಿದ್ದಾರೆ. ಆ ಇಮೇಜು ಸ್ವಾತಂತ್ರ್ಯಾ ನಂತರದ ಕೆಲವು ವರ್‍ಷಗಳೂ ಮುಂದುವರೆಯಿತು. ಆದರೆ ಸ್ವಾತಂತ್ರೋತ್ತರ ಕಾಲದ ಮನಸ್ಸು ಛೇದಗೊಂಡ ಮನಸ್ಸು. ಆಧುನಿಕತೆ ಮತ್ತು ಸ್ವರಾಜ್‌ಗಳ ನಡುವಿನ ಅಂತರದಲ್ಲಿ ತೊಯ್ದಾಡುತ್ತಿದ್ದ ಮನಸ್ಸದು. ಈ ನಡುವೆ ರಾಷ್ಟ್ರೀಯತೆಯ ಬಗೆಗಿನ ಭ್ರಮನಿರಸನಗಳು ಬಾಧಿಸತೊಡಗಿದವು. ಗಾಂಧಿಯನ್ನು ನಿರಚನೆ ಮಾಡಿಕೊಳ್ಳುವ ಇನ್ನೊಂದು ತುದಿಯಲ್ಲಿ ಅವರ ಮಗ ಹರಿಲಾಲ ಗಾಂಧಿ ಇದ್ದ. ಗಾಂಧಿಯವರ ಆದರ್‍ಶಗಳನ್ನು ವಿಮರ್‍ಶೆ ಮಾಡುತ್ತಲೇ ತನ್ನ ದುರಂತವನ್ನು ಆಹ್ವಾನ ಮಾಡಿಕೊಳ್ಳುವ ಈ ಪಾತ್ರ ಸ್ವಾತಂತ್ರೋತ್ತರ ಕಾಲದಲ್ಲಿ ಒಂದು ಆದರ್‍ಶ ಪಾತ್ರವೇ ಆಯಿತು! ಈ ವಿಪರ್‍ಯಾಸಗಳನ್ನು ಅರಗಿಸಿಕೊಳ್ಳುತ್ತಲೇ ಗಾಂಧಿಯನ್ನು ಹೊಸ ಹೊಸ ಕಣ್ಣುಗಳಿಂದ ನೋಡಬೇಕಿದೆ ಎನ್ನುವ ಆಶಯ ಇಂದು ನಮ್ಮ ಮುಂದಿದೆ. ಹರಿಲಾಲ ಗಾಂಧಿಯವರನ್ನು ವಾಸ್ತವಕ್ಕೆ ಎಳೆಯುತ್ತಿರುತ್ತಾನೆ. ಗಾಂಧಿಯವರ ಆದರ್‍ಶ ಮೇರೆ ಮೀರಿ ಹೋದಾಗ ಅವನಿಗೆ ತಪ್ಪು ಎನ್ನುವುದನ್ನು ಪ್ರತಿಯೊಬ್ಬರೂ ಮಾಡಿ ತಾವೇ ಅದಕ್ಕೆ ಉಪಾಯಗಳನ್ನು ಕಂಡುಕೊಳ್ಳಬೇಕೆನ್ನುವ ಸತ್ಯ ಹೊಳೆಯುತ್ತದೆ. ಅವನು ಹೇಳುತ್ತಾನೆ; ‘ನಮಗೂ ತಪ್ಪು ಮಾಡಲು ಬಿಡಿರಲ್ಲ ಬಾಪು, ಅವು ತಪ್ಪು ಅಂತ ಅರಿತುಕೊಳ್ಳಲು ಬಿಡಿರಿ. ಸರಿಯಾದ ಮಾರ್‍ಗ ಯಾವುದು ಎನ್ನುವುದನ್ನು ಸ್ವಂತ ಅನುಭವದಿಂದ ತಿಳಿದುಕೊಳ್ಳಲು ಬಿಡಿರಿ. ನೀವು ಮಾಂಸ ತಿಂದಿರಿ, ಸೆರೆ ಕುಡಿದಿರಿ.. .. ತೃಪ್ತ ಮನಸ್ಸಿನಿಂದ ಫಕೀರತ್ವ ಪಡೆದಿದ್ದೀರಿ’. ಈ ದಿಸೆಯಲ್ಲಿ ಹೊರಟ ಹರಿಲಾಲ ಅನುಭವವಾದಿ. ಇನ್ನೊಬ್ಬರ ಪಾದದಲ್ಲಿ ತನ್ನ ಪಾದ ಇಡಲು ಒಲ್ಲದ ವ್ಯಕ್ತಿಯಂತೆ ಕಾಣುತ್ತಾನೆ. ತಪ್ಪುಗಳನ್ನೇ ಮಾಡುತ್ತಾ ಹೋದರೂ ಅದು ತನ್ನ ಜೀವನ ಎಂಬ ಸ್ವಾತಂತ್ರ್ಯದಲ್ಲಿ ಬದುಕುತ್ತಾನೆ. ಇದರಿಂದಲೇ ಗಾಂಧಿಗೆ ಅವನು ಪ್ರತಿ ಪಾತ್ರವಾಗುತ್ತಾನೆ. ಗಾಂಧಿ ವಿರುದ್ಧ ಅವನ ದೂರು ಏನೆಂದರೆ ಅವರು ನೈಸರ್‍ಗಿಕ ಸಂಗತಿಗಳನ್ನೆಲ್ಲ ಅನೈಸರ್‍ಗಿಕ ಎಂಬ ಭಾವ ಮೂಡಿಸಿ ಜೀವನವನ್ನು ಅನಾವಶ್ಯಕವಾಗಿ ಕಠಿನಗೊಳಿಸುತ್ತಿದ್ದಾರೆ ಎನ್ನುವುದು. ಮಣಿಲಾಲ ಇಷ್ಟಪಟ್ಟ ಲಲಿತಾಳ ಕೂದಲನ್ನು ಕತ್ತರಿಸುವ ಬಾಪು ಅವರ ಕಾರ್‍ಯ ಹರಿಲಾಲನಿಗೆ ತೀರಾ ಅನೈಸರ್‍ಗಿಕ ಎನ್ನಿಸುತ್ತದೆ. ಮೋಹ ಕಾಮಗಳನ್ನು ತಡೆಯಲು ಗಾಂಧಿ ವಿಧಿಸಿಕೊಳ್ಳುವ ವ್ರತಗಳು ಅವರ ಮಕ್ಕಳ ದೃಷ್ಟಿಯಲ್ಲಿಯೇ ಹಾಸ್ಯಾಸ್ಪದ ಮತ್ತು ಕ್ರೌರ್‍ಯ ಎನ್ನಿಸುವಂತಾಗಿದೆ. ಮಣಿಲಾಲ ಮತ್ತು ದೇವದಾಸ ಇಬ್ಬರೂ ಬಾಪುವನ್ನು ಈ ಬಗ್ಗೆ ಆಡಿಕೊಳ್ಳುತ್ತಾರೆ- ನೈತಿಕ ಶಿಕ್ಷಣ ಅಂದರೆ ತೋಟದಲ್ಲಿ ಕೆಲಸ ಮಾಡೋದು, ಒರಟು ಒರಟಾದ ಕಟ್ಟಿಗೆ ಮೇಲೆ ಮಲಗೋದು ಕಷ್ಟದ ವ್ರತ ಕೈಗೊಳ್ಳೋದು ಎಂದು. ಈ ದಿಸೆಯಲ್ಲಿ ಗಾಂಧಿಯವರ ಆದರ್‍ಶಗಳು ನೆಲ ಮುಟ್ಟಲಾರದೆ ಹೋದವೆ? ಎಂದೆಂಬ ಪ್ರಶ್ನೆ ಹುಟ್ಟುತ್ತದೆ. ಶಿವರಾಮಕಾರಂತರು ತಮ್ಮ ಹುಚ್ಚು ಮನಸ್ಸಿನ ಹತ್ತುಮುಖಗಳಲ್ಲಿ ಈ ಸಂಬಂಧ ಒಂದು ಅನುಭವ ಹೇಳುತ್ತಾರೆ. ಕೆಲವು ದೇವದಾಸಿ ಮಹಿಳೆಯರಿಗೆ ಮದುವೆ ಮಾಡಬೇಕೆಂದಿರುವ ತಮ್ಮ ಆಶಯವನ್ನು ಗಾಂಧಿಯವರಿಗೆ ವಿವರಿಸಿ ಪತ್ರ ಬರೆಯುತ್ತಾರೆ. ಅದಕ್ಕೆ ಗಾಂಧಿ ಮದುವೆ ಅವಶ್ಯವಾಗಿ ಮಾಡಬಹುದೆಂದೂ ಆದರೆ ಅವರು ಬ್ರಹ್ಮಚರ್‍ಯ ವ್ರತ ಹಿಡಿಯಬೇಕೆಂದೂ ತಿರುಗಿ ಪತ್ರ ಬರೆಯುತ್ತಾರೆ. ಇದರಿಂದ ಕಾರಂತರು ಅಂದುಕೊಂಡರಂತೆ ಗಾಂಧಿಯವರಿಗೆ ಮನುಷ್ಯ ಜೀವನದ ಬಗ್ಗೆ ಕಲ್ಪನೆಯೇ ಇಲ್ಲವಲ್ಲ ಎಂದು.
ಚೌಗಲೆಯವರು ಅನುವಾದಿಸಿದ ಇನ್ನೊಂದು ನಾಟಕ-‘ಗಾಂಧಿ ಮತ್ತು ಅಂಬೇಡ್ಕರ್’. ರಾಷ್ಟ್ರನಿರ್‍ಮಾಣದ ಸಂದರ್‍ಭದಲ್ಲಿ ಕಾಂಗ್ರೆಸ್ ಮತ್ತು ಗಾಂಧಿ ಸ್ವರಾಜ್ಯವನ್ನು ಒಂದು ಇಡಿಯಾಗಿ ನೋಡಿದರು. ಅದನ್ನು ಛೇದಿಸುವ ಅಂಶಗಳನ್ನು ಆದ್ಯತೆಯ ಮೇಲೆ ಪರಿಹರಿಸುವ ಮಾತುಗಳನ್ನೂ ಆಡುತ್ತಿದ್ದರು. ರಾಷ್ಟ್ರೀಯತೆಯ ಜೊತೆಯಲ್ಲಿಯೇ ಬೆಳೆಯುತ್ತಿದ್ದ ಉಪರಾಷ್ಟ್ರೀಯತೆಯ ಅಸ್ಮಿತೆಗಳನ್ನು ಅವರು ಒಪ್ಪುತ್ತಲೇ ಇರಲಿಲ್ಲ. ಉಪರಾಷ್ಟ್ರೀಯತೆಯು ದೇಶವನ್ನು ಒಡೆಯುವ ಅಸ್ಮಿತೆಯಾಗಬಾರದೆಂದೇ ಅವರ ಹೋರಾಟದ ಮತವಾಗಿತ್ತು. ಇದು ಮೂಲಭೂತವಾಗಿ ಅಂಬೇಡ್ಕರ್ ಅವರಿಗೂ ಗಾಂಧಿಯವರಿಗೂ ಭಿನ್ನಾಭಿಪ್ರಾಯವನ್ನು ತಂದಿತ್ತು. ಈ ನಾಟಕ ಗಾಂಧಿ ಮತ್ತು ಅಂಬೇಡ್ಕರ್ ಅವರ ವಿಭಿನ್ನ ಆಲೋಚನೆಗಳನ್ನು ಏಕಕಾಲದಲ್ಲಿ ತೆರೆದಿಡುತ್ತದೆ. ಮನಸ್ಸು ಮಾಡಿದ್ದರೆ ಇದರ ಶೀರ್ಷಿಕೆ ಗಾಂಧಿ ವರ್‍ಸಸ್ ಅಂಬೇಡ್ಕರ್ ಎಂದಾಗಬಹುದಿತ್ತು. ಆದರೆ ಗಾಂಧಿಯ ಸತ್ವ ಮತ್ತು ಅಂಬೇಡ್ಕರರ ತತ್ವ ಎರಡೂ ಸಮಾನ ನೆಲೆಯಲ್ಲಿಯೇ ಮುಖಾಮುಖಿಯಾಗುವುದನ್ನು ನಾಟಕ ಕಟ್ಟಿಕೊಡುತ್ತದೆ. ಅಂಬೇಡ್ಕರ್ ಹೇಳುತ್ತಾರೆ. ‘ನನಗೆ ಮಾತೃಭೂಮಿ ಇಲ್ಲ, ಅಯ್ ಹ್ಯಾವ್ ನೋ ಹೋಂಲ್ಯಾಂಡ್’, ಆದರೆ ಇದಕ್ಕೆ ಗಾಂಧಿ ಸಮಾಧಾನದಿಂದಲೇ ‘ನಿಮಗೂ ಮಾತೃಭೂಮಿ ಅದ ಡಾ.ಅಂಬೇಡ್ಕರ್’ ಎನ್ನುತ್ತಾರೆ. ಒಂದು ಹಂತದಲ್ಲಿ ಅಂಬೇಡ್ಕರ್ ಅವರು ಗಾಂಧಿಯ ಬಗ್ಗೆ ಅವರ ಸೂಲಗಿತ್ತಿ ಪ್ರೀತಿ ಮತ್ತು ತಾಯಿ ಪ್ರೀತಿಯೊಳಗ ಶ್ರೇಷ್ಠ ಯಾವುದು ಎಂದು ಕೇಳಿಕೊಳ್ಳುತ್ತಲೇ ಗಾಂಧಿ ಸೂಲಗಿತ್ತಿಯಂತೆ ಪ್ರೀತಿಯಿಂದ ತಲೆ ಸವರುತ್ತಾರೆ, ಆದರೆ ತಾಯಿ ವಾತ್ಸಲ್ಯದಿಂದ ಮಡಿಲು ಸೇರಿಸಿಕೊ ಎಂದು ಬಂದಾಗ ದೂರ ಓಡುತ್ತಾರೆ ಎನ್ನುತ್ತಾರೆ.
‘ಗಾಂಧಿ ವರ್ಸಸ್ ಗಾಂಧಿ’ ನಾಟಕದ ಇನ್ನೊಂದು ನೆಲೆಯಲ್ಲಿ ಗಾಂಧಿ ಅಂಬೇಡ್ಕರ್ ಸಂಘರ್‍ಷ ನಡೆಯಲೇಬೇಕಿದೆ. ಗಾಂಧಿಯನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ನಿರಚನೆ ಮಾಡಿಕೊಳ್ಳಬೇಕಿದೆ. ಚೌಗಲೆಯವರು ಈ ನಾಟಕಗಳನ್ನು ಅನುವಾದ ಮಾಡಿರುವುದು ಒಂದು ರೀತಿ ಸೈದ್ಧಾಂತಿಕವಾಗಿ ಸೇತುಬಂಧವನ್ನು ಒದಗಿಸಿದಂತಾಗಿದೆ.
ಚೌಗಲೆಯವರ ‘ಕಸ್ತೂರ ಬಾ’ ಎನ್ನುವ ಸ್ವತಂತ್ರ ನಾಟಕವು ಈ ದಿಸೆಯಲ್ಲಿಯೇ ಸಾಗುತ್ತದೆ. ಈ ನಾಟಕದಲ್ಲಿ ಗಾಂಧಿಯವರ ನಿರಚನೆ ಇನ್ನೊಂದು ಆಯಾಮದಲ್ಲಿ ಸಾಧ್ಯವಾಗಿದೆ. ಸಾಮಾನ್ಯವಾಗಿ ಸಾಧಕರನ್ನು ನಾವು ಅವರ ಬಾಳಸಂಗಾತಿಯ ದೃಷ್ಟಿಯಿಂದ ನೋಡುವುದಿಲ್ಲ. ಹಾಗೆ ನೋಡಿದಾಗ ಲಿಂಗತ್ವದ ಅನೇಕ ಘರ್ಷಣೆಗಳು ಮತ್ತು ಹೊಂದಾಣಿಕೆಯ ಸಾಧ್ಯತೆಗಳು ಎಷ್ಟು ಮಹತ್ವದವು ಎಂದು ತಿಳಿಯಬಹುದು. ಕಸ್ತೂರ ಬಾ ಎಂಬ ಸಾಧಾರಣ ಗುಜರಾತಿ ಹೆಣ್ಣು ಗಾಂಧಿಯವರ ಹೆಂಡತಿಯಾಗಿ ಸಾಧಿಸುವುದು ಅಪಾರ. ಗಾಂಧಿ ತಮ್ಮ ಪ್ರಯೋಗಗಳಲ್ಲಿ ಕಸ್ತೂರ ಬಾರನ್ನು ಅವರಿಗೆ ಇಷ್ಟವಿರಲಿ ಬಿಡಲಿ ತೊಡಗಿಸಿಕೊಳ್ಳುತ್ತಿದ್ದರು. ಗಾಂಧಿಯವರಲ್ಲಿರುವ ಈ ಪಿತೃಪ್ರಧಾನತೆಯ ಅಂಶವನ್ನು ಈಗಾಗಲೇ ಸ್ತ್ರೀವಾದಿ ಚಿಂತಕಿಯರು ಗುರುತಿಸಿದ್ದಾರೆ. ಅದರಂತೆ ಈ ನಾಟಕದಲ್ಲಿ ಸಹ ಕಸ್ತೂರ ಬಾ ನೆಲೆಯಿಂದ ಗಾಂಧಿಯವರು ಅನಾವರಣಗೊಳ್ಳುತ್ತಾ ಹೋಗುತ್ತಾರೆ. ಗಾಂಧಿ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆಂದು ಹೊರಡುವಾಗ ಬಾ ಅವರನ್ನು ಒಡವೆ ಕೊಡುವಂತೆ ಕೇಳುತ್ತಾರೆ. ತಮ್ಮ ಮಾವ ತಮಗೆಂದು ಮಾಡಿಸಿಕೊಟ್ಟ ಕೆಲವೇ ಕೆಲವು ಒಡವೆಗಳನ್ನು ಬಿಟ್ಟು ಉಳಿದೆಲ್ಲವನ್ನೂ ಬಾ ನೀಡುತ್ತಾರೆ. ಇದು ಬಾ ಅವರ ಮೊದಲ ತ್ಯಾಗ. ಆನಂತರ ಮಲಹೊರುವ ಪ್ರಸಂಗ ನಡೆಯುತ್ತದೆ. ಗಾಂಧಿ ತಮ್ಮ ಆದರ್‍ಶಕ್ಕಾಗಿ ಬಾರನ್ನು ಮಲ ಹೊರುವಂತೆ ಒತ್ತಾಯಿಸುತ್ತಾರೆ. ಊಟಕ್ಕೆ ಕೂತ ಎಲ್ಲ ಜನರ ತಾಟುಗಳನ್ನು ತೆಗೆಯಲು ಹೇಳುತ್ತಾರೆ. ಅದನ್ನು ಮಾಡಲೊಲ್ಲದ ಬಾ ಅವರನ್ನು ಮನೆ ಬಿಟ್ಟು ಹೊರಡುವಂತೆ ಆಚೆ ತಳ್ಳುತ್ತಾರೆ. ವಿಧಿಯಿಲ್ಲದೆ ಬಾ ಈ ಕೆಲಸಗಳನ್ನು ಮಾಡಬೇಕಾಗುತ್ತದೆ. ಹೀಗೆ ಗಾಂಧಿಯವರ ಒಂದೊಂದು ಸಿದ್ಧಾಂತಗಳಿಗೂ ಬಾ ಸಿದ್ಧರಾಗಬೇಕಾಗುತ್ತದೆ. ಉಪ್ಪು ಸಕ್ಕರೆಗಳ ನಿರಾಕರಣೆಯು ಮನೆಮಂದಿಗೆಲ್ಲಾ ವಿಧಿಸಿದ ನಿಯಮವಾಗುತ್ತದೆ. ದೂರದಿಂದ ಬಂದ ಹರಿಲಾಲನಿಗೆ ಸಕ್ಕರೆ ಹಾಕಿದ ಚಹಾ ಕೊಟ್ಟಿದ್ದಕ್ಕೆ ಬಾ ಅವರು ಗಾಂಧಿಯ ನಿಂದೆಗೆ ಒಳಗಾಗಬೇಕಾಗುತ್ತದೆ. ಇಷ್ಟಾದರೂ ಬಾ ಹೇಳುವುದು ತಾನು ಇಂದಿನ ಕಾಲದ ಹೆಣ್ಣುಮಕ್ಕಳ ಹಾಗೆ ವಿಭಕ್ತಳಾಗಿರೋ ಯೋಚನೆಯವಳಲ್ಲ. ಎಲ್ಲರೂ ಕೂಡಿ ಬಾಳುವ ಸುಖಿ ಬದುಕಿನ ಕಲ್ಪನೆಯವಳು. ಈ ಅಂಶದಲ್ಲಿ ಅವರು ಗಾಂಧಿಯ ಹೆಂಡತಿಯೇ ಸತತವಾಗಿ ಗಾಂಧಿಯವರ ಆದರ್‍ಶಗಳ ಜೊತೆ ಹೊಡೆದಾಡುತ್ತಾ, ಸತ್ಯಾಗ್ರಹಗಳಲ್ಲಿ ಭಾಗವಹಿಸುತ್ತಾ ತಮ್ಮ ವ್ಯಕ್ತಿತ್ವದ ಮೂಲಕ ಗಾಂಧಿಯನ್ನೆ ತಲುಪಿ ಬಿಡುವ ಬಾ ಅವರ ಬಗ್ಗೆ ನಾಟಕದ ಕೊನೆಯಲ್ಲಿ ಗಾಂಧಿ ಹೇಳುತ್ತಾರೆ; ಆಫ್ರಿಕಾದಲ್ಲಿ ಅರೆವಳಿಕೆಯಿಲ್ಲದೆಯೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಾಕೆಗೆ ಇಂದ್ರಿಯ ನಿಗ್ರಹ ಸುಲಭದ ಮಾತು. ನನ್ನ ಸತ್ಯದ ಹುಡುಕಾಟದಲ್ಲಿ ಕೈದೀಪ ಹಿಡಿದು ನೆರವಾದ ಅವಳನ್ನು ಅನೇಕ ಬಾರಿ ಅವಮಾನಿಸಿದ್ದೇನೆ. ಶಿಸ್ತಿಗಾಗಿ ಶಿಕ್ಷೆ ನೀಡಿದ್ದೇನೆ. ಅವನ್ನೆಲ್ಲ ಪ್ರಾಂಜಲ ಮನಸ್ಸಿನಿಂದ ಮರೆತು ಅಪವಾದ, ಆರೋಪ, ಹಿರಿಮೆ, ಗರಿಮೆಗಳನ್ನು ಸಮಚಿತ್ತದೀ ಸ್ವೀಕರಿಸಿದಳು.. ..ನನ್ನ ಕಸ್ತೂರ ಖರೇ ಅರ್‍ಥದಲ್ಲಿ ನನ್ನೊಳಗಿನ ಬೆಳಗು, ಸಂಗಾತಿ, ಅವಿಭಾಜ್ಯ ಅಂಗ. ಮತ್ತೆ ಒಂದು ದಿವ್ಯ ಶಕ್ತಿ.
ಚೌಗಲೆಯವರು ಗಾಂಧಿಯವರನ್ನು ಕುರಿತ ನಾಟಕಗಳನ್ನು ಅನುವಾದಿಸಿರುವುದು ಮತ್ತು ಸ್ವತಂತ್ರ ರಚನೆಯನ್ನು ಮಾಡಿರುವುದು ಅಷ್ಟೇನೂ ಆಕಸ್ಮಿಕವಿರಲಾರದು. ವಸಾಹತೋತ್ತರ ಸಮಾಜದ ಬೆಳಕಲ್ಲಿ ಗಾಂಧಿಯನ್ನು ನಿರಚನೆ ಮಾಡಿಕೊಳ್ಳುವ ದೃಷ್ಟಿಯಿಂದ ಅವರ ಅನುವಾದಗಳು ಹಾಗು ಸ್ವತಂತ್ರ ರಚನೆಗಳೆರಡೂ ಸಹಾಯ ಮಾಡುತ್ತವೆ. ಕನ್ನಡದಲ್ಲಿ ಗಾಂಧಿ ಪ್ರಭಾವದಿಂದ ಉಂಟಾದ ಸಾಹಿತ್ಯ ಸಮಾಲೋಚನೆ ಒಂದು ಹಂತಕ್ಕೆ ನಡೆದಿದ್ದು ಅದರ ಮುಂದಿನ ಹಂತದಲ್ಲಿ ಈ ರೀತಿಯ ನಾಟಕಗಳು ಪ್ರೇರೇಪಣೆ ಮಾಡುತ್ತವೆ.
*****