ರಾಮೂ ಶ್ಯಾಮೂ ಇಬ್ಬರೂ ಒಳ್ಳೆಯ ಸಂಗಾತಿಗಳು. ಯಾವಾಗಲು ಅವರು ಜತೆಯಲ್ಲೇ ಇರುವರು. ಅಡುವಾಗ ಇಬ್ಬರೂ ಒಟ್ಟಿಗೆ ಆಡುವರು. ಓದುವಾಗ ಇಬ್ಬರೂ ಓದುವರು ಆದರೂ ಇವರಿಬ್ಬರಿಗೂ ಒಂದು ಭೇದವಿತ್ತು. ರಾಮು ಹೊತ್ತಿಗೆ ಸರಿಯಾಗಿ ಶಾಲೆಗೆ ಬರುವನು. ಶ್ಯಾಮು ಹೊತ್ತು ಹೋಗಿಯೇ ಬರುವನು. ಎಂಟು ಘಂಟೆಗೆ ಬರಬೇಕಾದರೆ ಎಂಟೂವರೆಗೆ ಬರುವನು.
ಮಹಾರಾಜರ ವರ್‍ಧಂತಿ ಬಂತು. ಉಪಾಧ್ಯಾಯರು ಬಂದು “ಈ ದಿನ ಎಲ್ಲರಿಗೂ ಲಾಡು ಕೊಡುತ್ತದೆ. ಎಲ್ಲರೂ ಮೂರು ಘಂಟೆಯ ವೇಳೆಗೆ ಸರಿಯಾಗಿ ಇಲ್ಲಿಗೆ ಬಂದು ಇರಬೇಕು” ಎಂದು ಹೇಳಿದರು.
ರಾಮೂಗೆ ಗೊತ್ತು ಶ್ಯಾಮು ಹೊತ್ತಾಗಿ ಬರುತ್ತಾನೆ ಎಂದು. ಆದರೆ ಶ್ಯಾಮೂಗೆ ಲಾಡು ತಪ್ಪಿ ಹೋಗುವುದು ಅವನಿಗೆ ಇಷ್ಟವಿಲ್ಲ. ಅದಕ್ಕಾಗಿ ಅವನು ಶ್ಯಾಮು ಮನೆಗೆ ಒಂದೂವರೆಗೇ ಹೋದನು, ಅವನು ಇನ್ನೂ ಊಟವೇ ಮಾಡಿರಲಿಲ್ಲ. “ಶಾಲೆಗೆ ಬರುವುದಿಲ್ಲವೇನೋ? ಲಾಡು ಕೊಡುತ್ತಾರೆ” ಎಂದನು. “ಹೌದಪ್ಪ! ಬೇಗ ಹೋಗಬೇಕು” ಎಂದು ಶ್ಯಾಮೂ ಅವಸರಪಟ್ಟು, ಬೇಗ ಬೇಗ ಊಟಮಾಡಿದನು. ಮಡಿಬಟ್ಟೆಗಳನ್ನು ಉಟ್ಟು ತೊಟ್ಟು ಕೊಂಡನು. ರಾಮೂ ಜತೆಯಲ್ಲಿ ಶಾಲೆಗೆ ಬಂದನು. ಅವನಿಗೆ, ಏನೋ ಬಹಳ ಜಾಗ್ರತೆ ಬಂದಂತೆ ಇದ್ದರೂ, ಎರಡೂ ಮುಕ್ಕಾಲು ಘಂಟೆಯಾಗಿತ್ತು. ಶ್ಯಾಮು ಹೊತ್ತಿಗೆ ಸರಿಯಾಗಿ ಬಂದುದು ಎಲ್ಲರಿಗೂ ಆಶ್ಚರ್‍ಯ. ಮೂರು ಘಂಟೆಗೆ ಸರಿಯಾಗಿ ಘಂಟೆಯು ಬಾರಿಸಿತು. ಹುಡುಗರೆಲ್ಲರೂ ಬಂದು ಶಾಲೆಯ ಅಂಗಳದಲ್ಲಿ ಸೇರಿದರು. ಉಪಾಧ್ಯಾಯರು ಬಾಗಿಲಲ್ಲಿ ನಿಂತು, ಒಬ್ಬೊಬ್ಬರಿಗೆ ಒಂದೊಂದು ಲಾಡು ಕೊಟ್ಟು ಕಳುಹಿಸಿದರು.
ರಾಮೂ ಶ್ಯಾಮೂ ಲಾಡುವನ್ನು ಈಸಿ ಕೊಂಡು ಈಚೆಗೆ ಬಂದರು. ಬಾಗಿಲಲ್ಲಿ ಭೀಮನು ಅಳುತ್ತ ನಿಂತಿದ್ದನು. ಉಪಾಧ್ಯಾಯರು “ನಿನಗೆ ಅದೇ ಶಿಕ್ಷೆ! ಕೊಡುವುದಿಲ್ಲ ಹೋಗು” ಎನ್ನುತ್ತಿದ್ದರು. ಭೀಮನು ಅಳುತ್ತಿದ್ದನು. ರಾಮುವು “ಶ್ಯಾಮೂ! ನೋಡಿದೆಯಾ? ನಿನಗೂ ಹೀಗೆ ಆಗಬೇಕಾಗಿತ್ತು. ನೀನು ನಿತ್ಯ ಬರುತ್ತಿದ್ದ ಹಾಗೆ ಇವನು ಹೊತ್ತುಮೀರಿ ಬಂದನು. ಇವನಿಗೆ ಲಾಡು ತಪ್ಪಿ ಹೋಯಿತು” ಎಂದನು.
ಆವತ್ತು ಅವನಿಗೆ ತಾನು ಮಾಡುತ್ತಿದ್ದ ತಪ್ಪು ತಿಳಿಯಿತು. “ನಿತ್ಯವೂ ಹೊತ್ತಿಗೆ ಸರಿಯಾಗಿ ಶಾಲೆಗೆ ಹೋಗು” ಎಂದು ತಂದೆ ತಾಯಿಗಳು ಹೇಳುತ್ತಿದ್ದರು ಅವನೂ ಹೂ ಎಂದುಕೊಂಡಿದ್ದನು ಅಷ್ಟೆ. ಆದರೆ ಆವತ್ತು ಅವನಿಗೆ ತಿಳಿಯಿತು. ಇನ್ನು ಮೇಲೆ ಯಾವತ್ತೂ ಹೊತ್ತುಹೋಗಿ ಶಾಲೆಗೆ ಹೋಗುವುದಿಲ್ಲ ಎಂದು ಮಸ್ಸಿನಲ್ಲಿ ಗಟ್ಟಿ ಮಾಡಿದನು. ಅದೇ ಮೇರೆಗೆ ಹೊತ್ತಿಗೆ ಸರಿಯಾಗಿ ಬರಲಾರಂಭಿಸಿದನು.
ಈಗ ಅದೇ ಶ್ಯಾಮು ದೊಡ್ಡ ವ್ಯಾಪಾರಿಯಾಗಿದ್ದಾನೆ. ಈಗ ಅವನನನ್ನು ಕೇಳಿದರೆ “ಹುಡುಗರು ಯಾವಾಗಲೂ ಹೊತ್ತು ಮೀರಿ ಹೋಗಬಾರದು” ಎಂದು ತನ್ನ ಕಥೆಯನ್ನು ಹೇಳುತ್ತಾನೆ.
*****