ಓದುತ್ತಿದ್ದಂತೆ ಮನೋಹರನ ಉಸಿರು ಬಿಗಿಯಾಯಿತು. ನಾಡಿಯಲ್ಲೆಲ್ಲ ನೆತ್ತರು ಧುಮ್ಮಿಕ್ಕೆ ಹರಿಯುತ್ತಿರುವ ಅನುಭವ. ಎಲ್ಲವನ್ನೂ ಮತ್ತೊಮ್ಮೆ ಜೀವಿಸಿದಷ್ಟು ಆಯಾಸ. ಡೆಸ್ಕಿ ನಿಂದ ಸಿಗರೇಟು ಎತ್ತಿಕೊಂಡ. ಸೇದಬಾರದು ಎಂದಿದ್ದರು ಡಾಕ್ಟರರು. ಉದ್ವೇಗಗೊಳ್ಳಬಾರದು. ಮನಸ್ಸಿಗೆ ಏನನ್ನೂ ಹಚ್ಚಿಕೊಳ್ಳಬೇಡಿ. ಇತ್ಯಾದಿ. ಎಲ್ಲವೂ ಒಮ್ಮೆಲೆ ಅರ್ಥಹೀನವಾದಂತೆ ಎನಿಸಿತು. ಇಂಥ ಕ್ಷಣಗಳು ಮರುಕಳಿಸುವುದಾದರೆ ನನಗೆ ದೀರ್ಘಾಯುಸ್ಸು ಬೇಕಾಗಿಲ್ಲ ಅಂದುಕೊಂಡು ಸಿಗರೇಟು ಹಚ್ಚಿದ. ಜೋರಾಗಿ ಕೆಮ್ಮತೊಡಗಿದ.
ಮತ್ತೆ ಮತ್ತೆ ಓದಿದ. ಅದೇ ಹಸ್ತಾಕ್ಷರ. ಅದೇ ಶೈಲಿ. ಅದೇ ಸಂಕ್ಷಿಪ್ತತೆ. ಅವಳು ಬರೆದಿದ್ದಳು: ಹೈದರಾಬಾದಿಗೆ ಹೋಗುವ ದಾರಿಯಾಗಿ ಬೆಂಗಳೂರಿಗೆ ಇಂಥ ದಿನ ಬರುತ್ತೇನೆ. ಟ್ರೇನು ಸಂಜೆ ಐದರೆ ಸುಮಾರಿಗೆ. ಅಷ್ಟರತನಕ ನನಗೆ ಬಿಡುವು ಇದೆ. ನಿಮ್ಮನ್ನೂ ನಿಮ್ಮ ಫ್ಯಾಮಿಲಿಯನ್ನೂ ನೋಡಬೇಕೆಂಬ ಆಸೆ. ಆಫ಼ೀಸಿಗೆ ಬರುತ್ತೇನೆ, ಬರಲೆ ? ನಿಮ್ಮ – ಹೆಸರು ಬರೆಯದೆ, ಸಹಿ ಹಾಕದೆ ಬಿಟ್ಟಿದ್ದಳು.
ನಿಮ್ಮ –
ಅದು ಒಕ್ಕಣೆಯ ರೀತಿಯೆಂದು ಗೊತ್ತಿದ್ದೂ ಮನೋಹರ ವಿವಶನಾದ, ಆ ಒಂದು ಶಬ್ದದಲ್ಲಿ ಅವನು ಅನೇಕ ಅರ್ಥಗಳನ್ನು ಕಲ್ಪಿಸಿಕೊಂಡೇ ಹುಚ್ಚನಾಗಿದ್ದುದು. ಇಪ್ಪತ್ತು ವರ್ಷಗಳ ನಂತರ ಮತ್ತೆ ಅವಳ ಪತ್ರ !
ವಸುಂಧರೆ ಎಂದು ಅವನಿಗೆ ಬರದ ಪತ್ರಕ್ಕೆ ಸಹಿ ಹಾಕುತ್ತಿರಲಿಲ್ಲ. ಯಾಕೆ ಎಂಬ ಕುರಿತು ಅವನೆಂದೂ ತಲೆಕೆಡಿಸಿಕೊಂಡಿರಲಿಲ್ಲ. ನಂತರ ಒಂದು ದಿನ ಹೊಳೆಯಿತು. ನಾನು ಈ ಪತ್ರಗಳನ್ನು ಅವಳ ವಿರುದ್ಧ ಉಪಯೋಗಿಸದಿರಲಿ ಎಂದು, ಹೀಗೆ ತಕ್ಕ ರಕ್ಷಣೋಪಾಯಗಳನ್ನು ಮಾಡಿಕೊಂಡೇ ಅವಳು ನನ್ನೊಂದಿಗೆ ಸುತ್ತಾಡುತ್ತಿದ್ದಳೆ? ಅವನ ಮಟ್ಟಿಗಾದರೆ ಇದೆಲ್ಲ ಊಹಗೂ ನಿಲುಕದ ವಿಚಾರವಾಗಿತ್ತು.
ಆದರೆ ಒಂದು ದಿನ ಅವಳು ಇದ್ದಕ್ಕಿದ್ದಂತೆ ಆಸ್ಫೋಟಿಸಿದಳು.
“ಎಂದಾದರೂ ನಿಮ್ಮನ್ನು ಪ್ರೀತಿಸುತ್ತಿದ್ದೇನೆ. ಮದುವೆಯಾಗುತ್ತೇನೆ ಎಂದಿದ್ದೆನೆ?”
ನಿಜ. ಪ್ರೀತಿಯ ಮಾತು ತಪ್ಪಿಯೂ ಅವಳ ಬಾಯಿಯಿಂದ ಬಂದಿರಲಿಲ್ಲವಲ್ಲ!
“ಅಂದರೆ ಇಷ್ಟು ಕಾಲ ನಾವು ಒಟ್ಟಿಗೆ ಓಡಾಡಿದ್ದು, ಇದಕ್ಕೆಲ್ಲ ಏನರ್ಥ?”
“ಮೆಚ್ಚುವುದೇ ಬೇರೆ, ಪ್ರೀತಿಸುವುದೇ ಬೇರೆ.”
“ನಾನು ಹಾಗೆ ತಿಳಿದುಕೊಂಡಿಲ್ಲ, ವಸು.”
“ಚರ್ಚಿಸಿ ಒಂದು ಹೆಣ್ಣಿನ ಪ್ರೀತಿಯನ್ನು ಪಡೆಯೋದು ಸಾಧ್ಯವೆ?”
ಅಲ್ಲಿಗೆ ಅವನ ಬಾಯಿ ಕಟ್ಟಿಹೋಗಿತ್ತು.
ಈಗ ಇಷ್ಟು ವರ್ಷಗಳ ನಂತರ ವಸುಂಧರೆ ಮತ್ತೆ ತನ್ನನ್ನು ಕಾಣಬಯಸುತ್ತಿದ್ದಾಳೆ, ಎಂಬ ವಿಚಾರ ಅವನನ್ನು ಗೊಂದಲಕ್ಕೊಳಗು ಮಾಡಿತು. ಯಾಕೆ? ಇಷ್ಟು ಕಾಲದ ಮೇಲೆ ಇದರ ಅಗತ್ಯವೇನು? ತನ್ನನ್ನು ಮರೆತುಬಿಡಬೇಕಾಗಿದ್ದವಳು ಇನ್ನೂ ಮರೆತಿಲ್ಲವೆಂದು ಇದರ ಅರ್ಥವೆ? ಇದೇ ನನ್ನ ಖುಷಿಗೆ ಕಾರಣವೆ?
ಆಕೆ ಯಾರೋ ಇಂಜಿನೀಯರನೊಬ್ಬನನ್ನು ಮದುವೆಯಾಗಿದ್ದಳು. ಶ್ರೀಮಂತ, ಸ್ವಂತ ಫ಼್ಯಾಕ್ಟರಿ ಇಟ್ಟುಕೊಂಡಿದ್ದ.ಆದರೂ ವಸುಂಧರೆ ಸುಖವಾಗಿಲ್ಲವೆಂಬ ಸುದ್ದಿ ಕೇಳಿದ, ಕೇಳಿದಾಗ ಉಂಟಾದ ಮಿಶ್ರಪ್ರತಿಕ್ರಿಯೆಯ ಅರ್ಥವನ್ನು ಬಿಡಿಸುವ ಗೊಡವೆಗೆ ಅವನು ಹೋಗಿರಲಿಲ್ಲ. ಕಳೆದುಹೋದ ವರ್ಷಗಳನ್ನು ಮತ್ತೆ ದೊರಕಿಸಿಕೊಳ್ಳುವುದು ಅಸಾಧ್ಯದ ಮಾತು – ಎಂದೆಲ್ಲ ತನಗೆ ತಾನೇ ಸಮಾಧಾನ ಹೇಳಿದ.
ಅವನೂ ತಾನು ವಸುಂಧರೆಯನ್ನು ಮರೆತಿದ್ದೇನೆಂದು ಭ್ರಮಿಸಿದ್ದ. ಇಪ್ಪತ್ತು ವರ್ಷಗಳ ದೀರ್ಘಾವಧಿಯಲ್ಲಿ ಆತನ ಬದುಕಿನಲ್ಲೂ ಅನೇಕ ಘಟನೆಗಳು ನಡೆದುಹೋಗಿದ್ದುವು. ಕೆಲಸ ಹುಡುಕುತ್ತ ಬೆಂಗಳೂರಿಗೆ ಬಂದಿದ್ದ. ಕೆಲವು ವರ್ಷ ಅಲೆದಾಡಿದ ಮೇಲೆ ಕೊನೆಗೆ ಪರವಾಯಿಲ್ಲ ಎನ್ನಬಹುದಾದ ಕೆಲಸವೊಂದನ್ನು ದೊರಕಿಸಿಕೊಕ್ಂಡಿದ್ದ. ದೈನಿಕ ವೊಂದರಲ್ಲಿ ಉಪಸಂಪಾದಕನ ಕೆಲಸ. ಕಳೆದ ಹದಿನೈದು ವರ್ಷಗಳಿಂದಲೂ ಉಪಸಂಪಾದಕನಾಗಿಯೇ ಇದ್ದಾನೆ.
ಮದುವೆಯೇ ಆಗುವುದಿಲ್ಲವೆಂದು ಕೊಂಡಿದ್ದವನು ಕೊನೆಗೂ ಮದುವೆ ಆಗಿದ್ದ. ಎಲ್ಲೋ ಸಮಾರಂಭವೊಂದರಲ್ಲಿ ಆಕಸ್ಮಿಕವಾಗಿ ಭೇಟಿಯಾದವಳನ್ನು.
“ಹೆಸರು?”
“ಲಕ್ಷ್ಮಿ”
“ಕೆಲಸ?”
“ಸೆಕ್ರೆಟೇರಿಯೆಟ್ ನಲ್ಲಿ”
“ಯಾವ ಸಿನಿಮಾ ಇಷ್ಟ?”
ಮಾತಿಗೆ ವಿಷಯವಿಲ್ಲದೆ ಕೇಳಿದ ಪ್ರಶ್ನೆ.
“ಹಿಂದಿ.”
ನಂತರ ತಿಳಿಯಿತು – ಅದು ಅಷ್ಟೇನೂ ಆಕಸ್ಮಿಕವಾದ ಭೇಟಿಯಾಗಿರಲಿಲ್ಲ ಎಂದು, ಮದುವೆಯಾದರು. ಮಕ್ಕಳಾದುವು. ತನ್ನ ತಾಯಿ ಮೂಕಿಯಾಗಿದ್ದಳೆಂಬ ಸಂಗತಿಯನ್ನು ಲಕ್ಷ್ಮಿ ಮರೆಮಾಚಿದ್ದಳು. ಎರಡನೆ ಮಗು – ಹುಡುಗಿ – ಗೆ ನಾಲ್ಕು ವರ್ಷಗಳಾದರೂ ಮಾತು ಬರದಿರುವಾಗಲೇ ಅವನಿಗದು ಗೊತ್ತಾದುದು. ದೊಡ್ಡ ಹುಡುಗನಿಗೇನೂ ಮಾತು ಬರುತ್ತಿತ್ತು. ಆದರೆ ಸದಾ ಅನಾರೋಗ್ಯದಿಂದ ನರಳುತ್ತಿದ್ದ. ವಸುಂಧರೆ ನೋಡಬಯಸುವ ಫ಼್ಯಾಮಿಲಿ ಇದು.
ಮನೋಹರ ಅಂದುಕೊಂಡ – ನಾನು? ನಾನೂ ಬದಲಾಗಿದ್ದೇನೆ. ಇಪ್ಪತ್ತು ವರ್ಷಗಳ ಬಿಸಿಲುಮಳೆ ನನ್ನ ಮೇಲೂ ಹಾದುಹೋಗಿದೆ. ನಿಜವಾದ ವಯಸ್ಸಿಗಿಂತ ಹತ್ತು ವರ್ಷ ಹೆಚ್ಚೇ ಕಾಣಿಸುತ್ತಿದೆ. ಯೌವನದ ರೆವೊಲ್ಕೂಶನರಿ ಗಡ್ಡದಲ್ಲಿ ಕ್ರಮೇಣ ಬಿಳಿಗೂದಲುಗಳು ಕಾಣಿಸಿಕೊಂಡಿದ್ದುವು. ತಲೆಗೂದಲಂತೂ ನರೆತೇ ಹೋಗಿದೆ. ಪಕ್ಕದ ಒಂದು ಹಲ್ಲು ಯಾವ ಕಾರಣಕ್ಕೋ ಉದುರಿಹೋಗಿದೆ. ಹೊಸಹಲ್ಲು ಇಡಿಸಿಕೊಳ್ಳಬೇಕೆಂಬ ಪ್ಲಾನು ಇನ್ನೂ ಕೈಗೂಡಿಲ್ಲ. ಹೀಗೆ ಈ ಸ್ಥಿತಿಯಲ್ಲಿ ವಸುಂಧರೆಯೆದುರು ನಾನು ಬಯಲಾಗಬೇಕೆ? ನನ್ನನ್ನು ತೋರಿಸಿ ಇಕೋ ನೋಡು – ಎನ್ನಬೇಕೆ?
ಬೆಳಿಗ್ಗೆ ಊಟ ಮುಗಿಸಿ ಲಕ್ಷ್ಮಿ ಮಕ್ಕಳನ್ನು ಕರೆದುಕೊಂಡು ಹೊರಟು ಹೋದಳು. ಅವಳು ಮಗಳನ್ನು ಬಾಲವಾಡಿಯಲ್ಲಿ ಬಿಡುತ್ತಾಳೆ. ಮಗನನ್ನು ಸ್ಕೂಲಿನಲ್ಲಿ ಬಿಡುತ್ತಾಳೆ. ನಂತರ ಬಸ್ಸು ಹಿಡಿದು ಸೆಕ್ರೆಟೇರಿಯೇಟ್ ಗೆ ತೆರಳುತ್ತಾಳೆ.
ಮನೋಹರ ಸಿಂಕಿನಲ್ಲಿದ್ದ ಮುಸುರೆಯನ್ನು ಒಂದೊಂದಾಗಿ ತಿಕ್ಕಿ ತೊಳೆದು ಉಜ್ಜಿ ಶೆಲ್ಫ಼್ ನಲ್ಲಿ ಜೋಡ್ಡಿಸಿಟ್ಟ. ಮನೆಗೆಲಸಕ್ಕೆ ಯಾರನ್ನೂ ಇಟ್ಟುಕೊಂಡಿರಲಿಲ್ಲ. ಲೋನ್ ತೆಗೆದು ಕಟ್ಟಿದ ಮನೆ. ತಿಂಗಳು ತಿಂಗಳು ಲೋನ್ ನ ಕಂತನ್ನು ಕಟ್ಟುವುದಕ್ಕೆ ಎಂದು ಉಳಿದ ಖರ್ಚನ್ನೆಲ್ಲ ಬಿಗಿಹಿಡಿಯುವುದು ಅನಿವಾರ್ಯವಾಗಿತ್ತು.
ಮನೆಗೆ ಬೀಗ ಹಾಕಿ ಹೊರಗಿಳಿದ. ಕೈಯಲ್ಲಿ ಲಂಚ್ ಬಾಕ್ಸ್ . ಅಭ್ಯಾಸ ಬಲದಿಂದ ಬಸ್ ಸ್ಟಾಪಿಗೆ ಬಂದ. ಜೇಬಿನಲ್ಲಿ ಸೀಸನ್ ಟಿಕೇಟು. ಕ್ಯೂನಲ್ಲಿ ನಿಂತ. ಪರಿಚಯದ ಜನರನ್ನು ನೋಡಿ ಪರಿಚಯದ ನಗೆನಕ್ಕ. ಬಸ್ಸಿನಲ್ಲಿ ಕುಳಿತ ಮೇಲೆ ಕೇಳಿಕೊಂಡ, ಎಲ್ಲಿಗೆ? ಆಫ಼ೀಸಿಗೆ ಆ ದಿನ ಹೋಗುವುದಿಲ್ಲವೆಂದು ತೀರ್ಮಾನಿಸಿದ್ದ. ಹಿಂದಿನ ದಿನವೇ ಏನೋ ಕಾರಣ ಹೇಳಿ ರಜೆ ಹಾಕಿ ಬಂದುದಾಗಿತ್ತು.
ಇಲ್ಲ. ವಸುಂಧರೆಗೆ ಈ ಮುಖ ತೋರಿಸಲಾರೆ, ಅವಳಿಗಾದರೂ ನನ್ನ ಮನಸ್ಸಿನ ಗಾಯವನ್ನು ಕೆದಕುವುದಕ್ಕೆ ಹಕ್ಕೇನಿದೆ?
ಒಂದು ಥಿಯೇಟರಿನೆದುರು ಇಳಿದ. ದೊಡ್ಡ ಪೋಸ್ಟರ್ ಹಾಕಿದ್ದರು, ಪೋಸ್ಟರಿನಲ್ಲಿರುವ ಹೆಣ್ಣಿನ ತೊಡೆಗಳು ಮರದ ದಿಮ್ಮಿಯಂತೆ ಬೃಹತ್ತಾಗಿದ್ದುವು. ಕ್ಯೂನಲ್ಲಿ ನಿಂತು ಟಿಕೇಟು ಕೊಂಡು ಒಳಗೆ ಹೋಗಿ ಕುಳಿತ. ಒಳಗೆ ಹೆಚ್ಚೇನೂ ಜನರಿರಲಿಲ್ಲ. ಯಾವುದೋ ಹಳೆ ಸ್ಟಂಟ್ ಫ಼ಿಲ್ಮ್. ಚಿತ್ರ ಬಿಡುವಾಗ ಮಧ್ಯಾಹ್ನದ ಊಟದ ಹೊತ್ತು. ಊಟ ಮಾಡಲೆಂದು ಹತ್ತಿರದ ಪಾರ್ಕಿಗೆ ಹೋಗಿ ಕುಳಿತ. ಲಂಚ್ ಬಾಕ್ಸಿನ ಮುಚ್ಚಳ ತೆಗೆದೊಡನೆ ಹತ್ತಾರು ವರ್ಷಗಳ ಸುಪರಿಚಿತ ಆಹಾರದ ವಾಸನೆ. ತಿನ್ನಲಾರದೆ ಮುಚ್ಚಿಟ್ಟು ಬೀದಿ ಬದಿಯ ಚಹಾದಂಗಡಿಯಿಂದ ಚಹಾ ಕುಡಿದು ಮತ್ತೆ ಪಾರ್ಕಿಗೆ ಬಂದು ಕುಳಿತು ಸಿಗರೇಟು ಸೇದತೊಡಗಿದ.
ಎದುರಿನ ಗೋಡೆಯ ಮೇಲೆ ವಿದ್ಯಾರ್ಥಿಗಳು ಬರೆದ ಸ್ಲೋಗನ್ನುಗಳು. ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿತ್ತು. ವರ್ಷಗಳ ಕೆಳಗೆ ತಾನು ಅಪರಾಧಿಯಂತೆ ಪ್ರಿನ್ಸಿಪಾಲರ ಚೇಂಬರಿನಲ್ಲಿ ನಿಂತ ನೆನಪು.
“ಸ್ಲೋಗನ್ನುಗಳನ್ನು ಬರೆದರೆ ಕ್ರಾಂತಿ ಆಗುತ್ತದೆಯೆ?”
“ಇಲ್ಲ.”
“ಘೋಷಣೆಗಳನ್ನು ಕೂಗಿದರೆ ಕ್ರಾಂತಿ ಆಗುತ್ತದೆಯೆ?”
“ಇಲ್ಲ.”
“ಮತ್ತೆ?”
“ಇದೆಲ್ಲ ನಾವು ಸಿಟ್ಟನ್ನು ಪ್ರಕಟಪಡಿಸುವ ವಿಧಾನ.”
“ಸಿಟ್ಟು? ಯಾರ ಮೇಲೆ?”
“ಸರಕಾರದ ಮೇಲೆ, ಸಮಾಜದ ಮೇಲೆ.”
ಪ್ರಿನ್ಸಿಪಾಲರು ಕನಿಕರದಿಂದ ಅವನ ಕಡೆ ನೋಡಿದ್ದರು.
“ಇದೇ ಮಾತನ್ನು ಹತ್ತು ವರ್ಷಗಳ ನಂತರವೂ ಹೇಳುತ್ತೀಯಾ?”
ಅವರ ತಲೆ ಬಕ್ಕವಾಗಿ ಕಿವಿಯ ಮೇಲೆ ಮಾತ್ರ ಬ್ರಶ್ಮಿನಂತಹ ಕೂದಲುಗಳು ಉಳಿದಿದ್ದವು.
ವಸುಂಧರೆ ಆಗ ಅವನ ಜತೆಯಿದ್ದಳು – ಅವನ ವಿಚಾರಗಳಿಗೆ ತಲೆದೂಗುತ್ತ. ಪ್ರೇರೇಪಿಸುತ್ತ ಅವಳು ಬಿಟ್ಟು ಹೋದಾಗ ಅವನು ಅಂದುಕೊಂಡಿದ್ದ.
ಆದರೇನಾಯಿತು? ಬದುಕುವುದಕ್ಕೆ ನನಗೆ ನನ್ನ ಧ್ಯೇಯಗಳಿವೆ. ನನ್ನ ಹೋರಾಟ, ನನ್ನ ಮಾತು, ರಾಜಕೀಯ ಒಲವುಗಳು, ಮೌಲ್ಯಗಳು, ಗೆಳೆಯರು, ಈ ದೇಶ…..
ಸಂಜೆಯ ತನಕ ಹೊತ್ತು ಕಳೇಯುವುದು ಹೇಗೆ? ಮಧ್ಯಾಹ್ನದ ಬಿಸಿಲು ಮರಗಳೆಡೆಯಿಂದ ಬೀಳುತ್ತಿತ್ತು. ನೆರಳಿನಡಿಯಲ್ಲಿ ನಡೆಯುತ್ತ ಇನ್ನೊಂದು ಥಿಯೇಟರನ್ನು ಹುಡುಕಿಕೊಂಡು ಹೊರಟ. ಥಿಯೇಟರಿನೊಳಗೆ ಕುಳಿತಾಗ ತಂಪೆನಿಸಿತು.
ಆದರೆ ಮನಸ್ಸು ಮಾತ್ರ ಪ್ರಕ್ಷುಬ್ಧವಾಗಿತ್ತು. ವಸುಂಧರೆ ಆಫ಼ೀಸಿಗೆ ಬಂದು ವಿಚಾರಿಸಿರಬಹುದೆ? ತಾನಿಲ್ಲ ಅಂದಾಗ ಅವಳ ಪ್ರತಿಕ್ರಿಯೆ ಹೇಗಿದ್ದಿರಬಹುದು? ನಾನು ಅವಳ ಕೋರಿಕೆಯನ್ನು ಮನ್ನಿಸದೆ ಇದ್ದುದು ಸರಿಯೆ? ಇಪ್ಪತ್ತು ವರ್ಷಗಳನಂತರವೂ ಮರೆಯಲಾಗದ ಅಪರಾಧವಿದೆಯ ? ಜೀವನ ಅಷ್ಟು ದೀರ್ಘವಾಗಿದೆಯೆ?
ಚಿತ್ರ ಮುಗಿಯುವು ಮೊದಲೆ ಥಿಯೇಟರಿನಿಂದ ಹೊರಬಂದ. ಹತ್ತಿರದೆ ಅಂಗಡಿಯೊಂದರಿಂದ ಆಫ಼ೀಸಿಗೆ ಫೋನ್ ಮಾಡಿದ.
“ಹಲೊ ” ಸಹೋದ್ಯೋಗಿ ಶಿವಣ್ಣನ ಧ್ವನಿ.
“ಶಿವಣ್ಣನೆ?”
“ಹೌದು.”
“ಮನೋಹರ ಮಾತಾಡ್ತಿರೋದು….ನನ್ನನ್ನು ಕೇಳಿಕೊಂಡು ಯಾರಾದ್ರೂ ಬಂದಿದ್ರೆ?”
“ಹೌದು, ಒಬ್ಬಾಕೆ ಹೆಂಗಸು ಬಂದಿದ್ದರು. ನೀವಿಲ್ಲ ಅಂದಾಗ ಮನೆ ವಿಳಾಸ ಕೇಳಿದ್ರು.
“ಎನಿ ಮೆಸೇಜ್?”
“ಏನೋ ಮಾತಾಡೋದಿತ್ತಂತೆ. ಬರುತ್ತೇನೆಂದು ಪತ್ರ ಬರದಿದ್ದೆ. ಸಿಕ್ಕಿರಲಾರದು ಅಂದ್ರು.”
“ಆ ಮೇಲೆ?”
“ಹೊರಟುಹೋದ್ರು.”
ಮನೋಹರ ನಿಂತಲ್ಲೆ ದ್ರವಿಸಿದ.
ತಕ್ಷಣ ಅವನಿಗೆ ವಸುಂಧರೆಯನ್ನು ನೋಡಲೇ ಬೇಕು. ಅವಳನ್ನು ನೋಡಿದರೆ ಸಾಕು. ಅವಳನ್ನು ನೋಡುವುದಕ್ಕಿಂತ ಮಿಗಿಲಾದ್ದು ಏನೂ ಇಲ್ಲ ಎನಿಸಿ ಆಟೋ! ಆಟೋ! ಎನ್ನುತ್ತ ಒಂದು ಆಟೋದ ಹಿಂದೆ ಓಡತೊಡಗಿದ.
ಸ್ಟೇಷನ್ ತಲುಪಿದಾಗ ಗಾಡಿ ಹೊರಟು ನಿಂತಿತ್ತು. ಪ್ಲಾಟ್ ಫ಼ಾರ್ಮ್ ತುಂಬ ಜನ, ವಸುಂಧರೆ ಎಲ್ಲಿ ಕುಳಿತಿದ್ದಾಳೆಂದು ತಿಳಿಯುವುದು ಹೇಗೆ? ಈಗ ಹೇಗೆ ಕಾಣಿಸುತ್ತಿರಬಹುದು ಅವಳು? ಅವನಿಗೆ ಗೊತ್ತಿದ್ದ ವಸುಂಧರೆ ಇಪ್ಪತ್ತು ವರ್ಷಗಳ ಹಿಂದಿನವಳು. ಗಾಡಿ ಚಲಿಸತೊಡಗಿದಂತೆ ಮನೋಹರ ಜನರ, ಕೂಲಿಗಳ, ಹೆಣ್ಣಿನ ಗಾಡಿಗಳ ಮಧ್ಯೆ ದಾರಿ ಮಾಡಿಕೊಂಡು ಧಾವಿಸತೊಡಗಿದ. ಇನ್ನೇನು ಗಾಡಿ ಪ್ಲಾಟ್ ಫ಼ಾರ್ಮ್ ಬಿಟ್ಟು ಹೋಗಬೇಕು ಎಂದಾಗ ಅವನಿಗವಳ ಮುಖ ಕಾಣಿಸಿದಂತಾಯಿತು. ಕೈ ಬೀಸುತ್ತಿದ್ದಳು. ನನ್ನನ್ನು ನೋಡಿದಳೆ? ಗುರುತಿಸಿದಳೆ? ನನಗೋಸ್ಕರ ಹುಡುಕುತ್ತಿದ್ದಳೇ? ಕಾಯುತ್ತಿದ್ದಳೆ? ಅಥವಾ ಇನ್ಯಾರಿಗೋ ಕೈಬೀಸುತ್ತಿದ್ದಾಳೆಯೇ? ಬೀಳ್ಕೊಡಲು ಬಂದವರೆಲ್ಲ ಈಗ ಕೈಬೀಸುತ್ತಲೇ ಇದ್ದರು.
ಮನೋಹರ ಜನರನ್ನು, ಹಣ್ಣಿನ ಗಾಡಿಗಳನ್ನು ತಳ್ಳಿಕೊಂಡು ಓಡಿದ. ಅದು ವಸುಂಧರೆಯ ಮುಖವೆಂಬುದರಲ್ಲಿ ಅವನಿಗೆ ಸಂದೇಹವೇ ಇರಲಿಲ್ಲ. ಅವಳು ಕೈಬೀಸುತ್ತಿದ್ದಾಳೆಯೆ? ಕೈಚಾಚುತ್ತಿದ್ದಾಳೆಯೆ? ನಾನು ಎಟುಕಬಲ್ಲೆನೆ ಅವಳಿಗೆ?
ಇಲ್ಲ. ಅವನಿಂದ ಅದು ಸಾಧ್ಯವಾಗಲಿಲ್ಲ. ಜೀವನದ ಅನೇಕ ಸೋಲುಗಳಲ್ಲಿ ಇದೂ ಒಂದು. ದೊಪ್ಪನೆ ನೆಲದ ಮೇಲೆ ಬಿದ್ದಿದ್ದ. ಕೈಯಲ್ಲಿದ್ದ ಲಂಚ್ ಬಾಕ್ಸ್ ಅಷ್ಟು ದೂರಕ್ಕೆ ನೆಗೆದು ಅದರೊಳಗಿದ್ದ ಚಪಾತಿ ಪಲ್ಯ ಹೊರ ಚೆಲ್ಲಿದ್ದುವು.
“ಏನ್ರಿ! ಒಳ್ಳೆ ಕಾಲೇಜು ಹುಡುಗರ ಥರ ಓಡುತ್ತಿದ್ದೀರಲ್ಲ!”
ಯಾರೋ ಎತ್ತಿ ಕಲ್ಲುಬೆಂಚಿನ ಮೇಲೆ ಕುಳ್ಳಿರಿಸಿದರು, ಮನೋಹರ ಅಲ್ಲೇ ಅಡ್ಡಾದ. ತಲೆ ಸುತ್ತಿಬರುತ್ತಿತ್ತು. ಕಣ್ಣುಗಳ ಕತ್ತಲೆ ಬೆಳಕುಗಳಲ್ಲಿ ಅವನು ವಸುಂಧರೆಯ ಮುಖವನ್ನು ಹಿಡಿದಿಡಲು ಹೋರಾಡುತ್ತಿದ್ದ.
*****