“ನೀವೂನು ಯಾಕೆ ಜೊತೆಗೆ ಬರಬಾದು? ಸಂದರ್ಶನಕ್ಕೆ ಅಡ್ಡಿ ಇಲ್ದಂತೇನೆ ಮಾತಾಡ್ತ ಹೋಗೋಣ ಬನ್ನಿ….” ಎಂದು ಸೆನ್ ಹೇಳಿದಾಗ, ನನಗೂ ಆ ಕ್ಷಣಕ್ಕೆ ಮಾಡಲು ಬೇರೇನೂ ಕೆಲಸವಿಲ್ಲದ್ದರಿಂದ ಟೇಪ್‌ರಿಕಾರ್ಡರ್ ಆರಿಸಿ ‘ಎಲ್ಲಿಗೆ -ಏನೂ’ ಎಂದೂ ಸಹ ಕೇಳದೆ ಅಶ್ವತ್ಥ್ ಸೆನ್‌ರನ್ನು ಹಿಂಬಾಲಿಸಿದೆ.
ಹೋಟೆಲ್ ಪೋರ್ಟಿಕೋದಲ್ಲಿ ಎರಡು ಕಾರುಗಳು ತಯಾರಿದ್ದವು. ಒಂದರಲ್ಲಿ ನಾನು, ಸೆನ್‌ರವರು ಇನ್ನೊಂದರಲ್ಲಿ ಸೆನ್ ಚಿತ್ರಗಳ ಕೆಮೆರಾಮೆನ್ ಗುಪ್ತಾ, ಸಹ ನಿರ್ದೇಶಕ ಸನ್ಮಿತ್ರಪಾಲ್ ಇನ್ನಿತರರೂ ಕುಳಿತೆವು. ಬಹುಶಃ ಇವರುಗಳೆಲ್ಲರ ಪ್ರಯಾಣ ಪೂರ್ವಯೋಜಿತವಿದ್ದಿರಬೇಕೆಂದಿಕೊಂಡು ‘ಎಲ್ಲಿಗೆ’ ಎಂದು ಕೇಳುವುದು ಸಹ ಅಧಿಕಪ್ರಸಂಗವಾದೀತೇನೊ ಎಂಬ ಅನ್ನಿಸಿಕೆ ಮೂಡಿತು. ಆದರೆ ಸೆನ್‌ರೊಡನೆ ಮಾತನಾಡಲು ಸಿಕ್ಕಿರುವ ಈ ಸುವರ್ಣಾವಕಾಶವನ್ನು ಪೂರ್ತಿ ಬಳಸಿಕೊಳ್ಳಬೇಕೆಂದು ಯೋಚಿಸಿ ಕಾರು ಹೋಗುತ್ತಿದ್ದಂತೆಯೆ ಬ್ಯಾಗಿನಲ್ಲಿದ್ದ ಷಾರ್ಟ್ ಹ್ಯಾಂಡ್‌ಬುಕ್ ಮತ್ತು ಪೆನ್ಸಿಲ್ ತೆಗೆದುಕೊಂಡು ಸೆನ್‌ರತ್ತ ನೋಡಿದೆ.
ಆತ್ಮ ವಿಶ್ವಾಸದ ಗಾಢತೆಯನ್ನು ಸೂಸುತ್ತಿದ್ದ ಮುಖದ ಉಕ್ಕಿನ ವ್ಯಕ್ತಿ. ಅರೆದಾಡಿಯ ಮುಖದಲ್ಲಿ ಎಂಟೂ ದಿಕ್ಕಿನ ಪರಿಸರವನ್ನು ಅಭ್ಯಸಿಸುವ ತೀಕ್ಷ್ಣ ನೋಟದ, ರಾಷ್ಟ್ರೀಯ ಅಂತಾರಾಷ್ಟ್ರೀಯ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದ ಆ ವ್ಯಕ್ತಿ ನನ್ನ ಸಂದರ್ಶನಕ್ಕೆ ಸಂಬಂಧಿಸಿದಂತೆ ಅದೇ ವರ್ಷ ಅಂತಾರಾಷ್ಟ್ರೀಯ ಚಿತೋತ್ಸವಗಳಲ್ಲಿ ಪ್ರಶಸ್ತಿಗಳಿಸಿದ್ದ ಬಗ್ಗೆ ಮಾತನಾಡಲಾರಂಭಿಸಿ ಕೊನೆಗೆ “ಇತ್ತೀಚೆಗೆ ಪ್ರಾದೇಶಿಕ ಚಿತ್ರಗಳೂ ಸಹ ಹೆಚ್ಚಿನ ಕಲಾತ್ಮಕ ಅಂಶಗಳೊಡನೆ ತಯಾರಾಗುತ್ತಿರುವುವು. ಅದರಲ್ಲೂ ನಿಮ್ಮ ಕರ್ನಾಟಕದವರಂತೂ ಪ್ರಯೋಗಗಳಲ್ಲಿ ಮುಂದಾಗುತ್ತಿರುವುದಂತೂ ಸಂತೋಷ. ಶ್ರೇಷ್ಠ ಅಭಿರುಚಿಯ ಸಂಕೇತ ಮಾತ್ರವಲ್ಲ, ಕಲಾಶ್ರೀಮಂತಿಕೆಗೆ ಹೊಸ ಆಯಾಮ..” – ಎನ್ನುತ್ತ ತಮ್ಮ ಕೋಟಿನ ಜೇಬಿನಲ್ಲಿದ್ದ ಸಿಗಾರ್ ತೆಗೆದಂಟಿಸಿ ನನ್ನತ್ತ ನೋಡಿದಾಗ-
“ಸಾರ್ , ನೀವು ಚಿತ್ರಗಳು ತಯಾರಿಸುವ ಗುರಿಯೇನು?” – ಎಂದು ಕೇಳಿದೆ.
ದಿಢೀರನೆ ಸೆನ್‌ರವರು ಇಂಗ್ಲಿಷ್‌ನಲ್ಲಿಯೆ ರೇಗಿದ ಧ್ವನಿಯಲ್ಲಿ “ನನಗೆ ಈ ಪ್ರಶ್ನೆ ಯಾರೆ ಕೇಳಿದ್ರೂ ಆಗೋಲ್ಲ. ಹೋದ ಬಾರಿ ನಾನು ಬರ್ಲಿನ್ ಚಿತ್ರೋತ್ಸವಕ್ಕೆ ಹೋದಾಗಲೂ ಪತ್ರಕರ್ತರು ಇದೇ ಪ್ರಶ್ನೇನ ಕೇಳಿ ಕೇಳಿ ಸುಸ್ತು ಮಾಡಿದರು. ಎಲ್ಲರಿಗೂ ಗೊತ್ತು. ನಾನೊಬ್ಬ ಲೆಫ್ಟಿಸ್ಟ್ ಅಂತ. ಸಮಾಜ ಬದಲಾಗಬೇಕನ್ನೋರು ಸಮಾಜಕ್ಕೇನಾದರು ಕಾಣಿಕೆ ಕೊಡಬೇಕು. ನಾನು ಚಲನಚಿತ್ರಾನ ಆಯ್ದುಕೊಂಡಿದ್ದೇನೆ. ‘ಆದರೆ ಯಾರಿಗೋಸ್ಕರ’ ಚಿತ್ರ ತಯಾರಿಸ್ತೀನೊ ‘ಅವರಿಗೆ’ ಚಿತ್ರ ತಲುಪಬೇಕೂನ್ನೋದೆ ಗುರಿ. ನಿರಾಶವಾದಿಗಳಿಗೆ ಕಲಾಕ್ಷೇತ್ರದಲ್ಲಿ ಸ್ಥಾನವಿಲ್ಲ. ಅವರುಗಳ ಕೆಲಸಕ್ಕೆ ಅರ್ಥವೂ ಇಲ್ಲ. ಲೆಫ್ಟಿಸ್ಟ್ ಯಾವತ್ತೂ ಆಪ್ಟಿಮಿಸ್ಟ್ ಆಗಿರಬೇಕು. ಹೊಸದಾಗಿ ಬಂದಿರೋ ಎಳೇ ಹುಡುಗರಿಗೆ ಇದೇ ನನ್ನ ಬುದ್ಧಿವಾದ…” – ಎಂದು ನೀಳವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತ, ಅಲ್ಲಲ್ಲಿ ತಮ್ಮ ಮಾತನ್ನು ನಿಲ್ಲಿಸುತ್ತ, ಹೇಳುತ್ತಿರುವುದು ನನಗೆ ಅರ್ಥವಾಗಿದೆಯೆ ಎಂದು ಸಂದೇಹದಲ್ಲಿ ನನ್ನತ್ತ ನೋಡಿ “ಓಕೆ?” ಎಂದು ಪ್ರಶ್ನಿಸಿ ನನ್ನ ಅನುಮೋದನೆಯ ನಂತರವೆ ಮುಂದುವರಿಯುತ್ತಿದ್ದರು.
ಕಾರುಗಳೆರಡು ಒಂದು ಬಂಗಲೆಯೊಳಗೆ ಪ್ರವೇಶಿಸಿದವು. ಚಲನಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ಎನಿಸಿಕೊಡಿದ್ದ ನಟ ನಟರಾಜ್ ಕಾರಿಡಾರಿನಲ್ಲಿ ಕಾಯುತ್ತಿದ್ದ. ಅವನು ಸೆನ್‌ರವರತ್ತ ಬಂದಾಗ ಸೆನ್ ನನಗೂ ಅವನಿಗೂ ಪರಿಚಯ ಮಾಡಿಸಿದರು. ಅವನು ನಮ್ಮ ಕಾರಿನಲ್ಲಿ ಕುಳಿತನಂತರ ಕಾರುಗಳು ಬಂಗಲೆಯಾಚೆ ಬಂದು ಮುಂದುವರೆದವು.
ನಟರಾಜ್ ಸೆನ್‌ರವರತ್ತ ನೋಡಿ- “ಮಿ.ರೆಡ್ಡಿಯವರು, ಕ್ವಾರಿಯಿಂದ ಫೋನ್ ಮಾಡಿದ್ದರು. ಕರುಪ್ಪಯ್ಯ ಇಲ್ಲಿಗೆ ಬರೋಲ್ಲಾಂತಿದ್ದಾನಂತೆ. ಕೊನೆಗೆ ಹೆದರಿಸಿ ಬೆದರಿಸಿಯೂ ಆಯ್ತಂತೆ…”- ಎಂದ.
“ಹಾಗೆಲ್ಲ ಹೆದರಿಸಿದರೆ ನಮ್ಮ ಕೆಲಸ ಆಗೋಲ್ಲ..”- ಎಂದ ಸೆನ್ ನನ್ನತ್ತ ತಿರುಗಿ ನೋಡಿ ಮಿ.ಚಂದ್ರು, ಮುಂದಿನ ನಮ್ಮ ಚಿತ್ರ ‘ಶೋಷಣೆ’ . ಶೋಷಿತ ವರ್ಗದ ಬಗ್ಗೆ. ಕಲ್ಲು ಬಂಡೆಯ ಕ್ವಾರಿಯಲ್ಲಿ ಕೆಲಸ ಮಾಡುವ ಕಲ್ಲು ಕುಟಿಗರ ಪ್ರಾಬ್ಲಂ ಬಗೆಗೆ ಅನಲೈಸ್ ಮಾಡೋಕ್ಕೆ ಪ್ರಯತ್ನ ಪಟ್ಟಿದ್ದೀನಿ. ನಮ್ಮ ಈ ನಟರಾಜಂದೆ ಮೈನ್ ರೋಲ್, ಈಗ ಕ್ವಾರಿಯೊಂದರ ಬಳಿಗೇನೆ ಹೋಗ್ತಿರೋದು..”- ಎಂದರು.
ನನಗಾಗಲೆ ಸಂದರ್ಶನ ಬೇರೆ ಹಾದಿ ಹಿಡಿಯುತ್ತಿರುವುದು ಅರಿವಿಗೆಟುಕಿತು. ಆದರೂ ಸೆನ್‌ರವರ ಆತ್ಮೀಯ ಮೋಡಿಯಲ್ಲಿ ಸಿಲುಕಿಕೊಂಡಿದ್ದೆ. ಹಲವಾರು ಪ್ರತಿಷ್ಠಿತರೊಂದಿಗಿನ ಪ್ರತಿ ಬಾರಿಯ ಸಂದರ್ಶನ ಹೊಸತನದಿಂದ ಮೂಡಿಬರಬೇಕೆಂದುಕೊಂಡರೂ ಮಾಮೂಲು ಜಾಡು ಬಿಟ್ಟು ಆಚೆ ಎಂದೂ ಬಂದಿಲ್ಲ. ಇಂತಹವರ ಜೊತೆ ಮಾತನಾಡುತ್ತಿದ್ದರೆ ಅವರುಗಳ ಗಿಣಿಬುದ್ಧಿಯ ಮಾತುಗಳನ್ನು ಕೇಳುತ್ತಿದ್ದಂತೆಯೆ ನಮ್ಮ ನರಿ ಬುದ್ಧಿಗೆ ಅನೇಕ ಸಂದೇಹ ತಲೆ ಎತ್ತುತ್ತದೆ. ಆದುದರಿಂದಲೆ ಸೆನ್ ಮುಂದೆ ಇನ್ನೊಂದು ಪ್ರಶ್ನೆ ಮುಂದಿಟ್ಟೆ. “ನೀವು ಲೆಫ್ಟಿಸ್ಟ್ ಎನ್ನುತ್ತಿರಲ್ಲ, ಆದರೆ ಈ ರೀತಿಯ ಭಾರಿ ಬಡ್ಜೆಟ್ ಸಿನಿಮಾ ತೆಗೆಯೋಕ್ಕೆ ಹೊರಟಿರೋದು ಅಲ್ಲದೆ “ಸ್ಟಾರ್”ಗಳನ್ನು ಕ್ಯಾಸ್ಟಿಂಗ್‌ಗೆ ತೆಗೆದುಕೊಂಡಿದ್ದೀರಲ್ಲ. ಇದು ವಿರೋಧಾಭಾಸವಲ್ಲವೆ? – ನಟರಾಜ ನನ್ನತ್ತ ನೋಡಿ ತೀಕ್ಷ್ಣವಾಗಿ ನಕ್ಕ. ಸೆನ್‌ರವರಿಗೆ ಹಿಡಿಸಲಿಲ್ಲವೋ ಏನೋ – ಆದರೂ ನಗುತ್ತ-
“ನಿಮಗೆ ಜ್ಞಾಪಕ ಇರಬೇಕು. ನಟರಾಜನನ್ನ ನಾನೆ ಮೊದಲು ನನ್ನ ಚಿತ್ರವೊಂದರಲ್ಲಿ ಸಣ್ಣ ಪಾತ್ರವೊಂದು ಕೊಟ್ಟು ಪರಿಚಯಿಸಿದೆ. ಎಲ್ಲರೂ ಅವನ ಪ್ರತಿಭೆ ಗುರುತಿಸಿದರು. ಈಗವನು ದೊಡ್ಡ ಸ್ಟಾರ್, ಮೊನ್ನೆ ‘ನನ್ನ ನಟನೆ ಎಲ್ಲ ಮನಾಟನಸ್ ಆಗ್ಬಿಟ್ಟಿದೆ. ವೈವಿಧ್ಯವೇ ಇಲ್ಲ ಸಾರ್’ ಅಂತ ಪೇಚಾಡಿಕೊಂಡ. ನನ್ನ ಮುಂದಿನ ಚಿತ್ರದಲ್ಲಿ ನಲವತ್ತು ವರ್ಷದ ಶೋಷಿತ ವರ್ಗದ ಪ್ರತಿನಿಧಿಯಾಗಿ ಕಲ್ಲುಕುಟಿಗನ ಪಾತ್ರ ಅವನದು. ಪಾತ್ರವನ್ನು ಅಭ್ಯಾಸಪೂರ್ವಕವಾಗಿ ಹಾಗು ಉಪೇಕ್ಷೆ ತಿರಸ್ಕಾರವಿಲ್ಲದೆ ನಿರ್ವಹಿಸಬಲ್ಲ. ಇನ್ನು ಬಜೆಟ್ ವಿಚಾರಾನ ಪ್ರೊಡ್ಯೂಸರ್ ಹೇಳಬೇಕು. ಬಡ್ಜೆಟ್ಟಿಗೆ ತಕ್ಕ ಚಿತ್ರ…”- ಅವರ ದೀರ್ಘವಾದ ವಿವರಣೆಯ ನಂತರ- ನಟರಾಜ್ -“ನೋಡಿ ಮಿ.ಚಂದ್ರು, ಈಗ ಕರುಪ್ಪಯ್ಯನ ಬಗ್ಗೆ ಮಾತನಾಡ್ತ ಇದ್ದೆವಲ್ಲ, ನಾನು ನನ್ನ ಪಾತ್ರದ ರೀತಿ ನೀತಿ, ನಡವಳಿಕೆ ಸ್ವಭಾವ ಎಲ್ಲದರ ಅಧ್ಯಯನಕ್ಕೆಂದೇ ಅವನನ್ನು ಆರಿಸಿದ್ದೇನೆ. ಅವನು ಬರದಿದ್ದರೂ ಅವನನ್ನು ಕಷ್ಟ ಪಟ್ಟು ಒಪ್ಪಿಸಲೆಂದೇ ಈಗ ಹೋಗುತ್ತಿರುವುದು. ಲೊಕೇಷನ್ ಬೇರೆ ಸೆಲೆಕ್ಟ್ ಮಾಡಬೇಕು….” ಎಂದು ನನ್ನ ಮೊಂಡು ಪ್ರಶ್ನೆಯ ದಡ್ಡತನವನ್ನು ನಿರೂಪಿಸಿ ನರಿ ಬುದ್ಧಿಯಾದ ನನ್ನದನ್ನು ಗಿಣಿ ಬುದ್ಧಿಯನ್ನಾಗಿಸಿದ [ಸಾರಿ, ನಾನೊಬ್ಬ ಫ್ರೀಲಾನ್ಸ್ ಜರ್ನಲಿಸ್ಟ್].
ಆ ವೇಳೆಗಾಗಲೆ ಕಾರುಗಳು ಒಂದು ಕ್ವಾರಿಯ ಬಳಿ ಬಂದವು. ಕಲ್ಲು ಕುಟಿಗರ ಉದ್ಯಮದ ಬಿಸಿ ಹೊಡೆತಗಳ ಧ್ವನಿ ಮರುಧ್ವನಿಸುತ್ತಿತ್ತು. ನಮ್ಮ ಕಾರನ್ನು ಕಂಡು ಕ್ವಾರಿಯ ಮಾಲಿಕ ರೆಡ್ಡಿ ಓಡೋಡಿ ಬಂದು ಹಲ್ಲುಗಿಂಜುತ್ತಲೆ ಕಾರುಬಾಗಿಲನ್ನು ತೆಗೆದು ಸೆನ್‌ರವರನ್ನು, ನಟರಾಜನನ್ನು ನೋಡಿ-
“ಸಾರ್ ಕರುಪ್ಪಯ್ಯ ನಿಮ್ಮ ಜೊತೆ ಬರೋಲ್ಲಾಂತಾನೆ. ನಾನೂನು ಎಷ್ಟೋ ಬಾಯ್ಮಾತಲ್ಲಿ ಹೇಳಿ ನೋಡಿದೆ, ಹೆದರಿಸಿಯೂ ಹೇಳಿದೆ. ಬಗ್ಗೋಲ್ಲಾಂತಾನೆ..”- ಎಂದ. ನಟರಾಜ “ಯಾಕಂತೆ” ಎಂದು ಕೇಳಿದಾಗ “ಅವನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡೂನು ಕಿತ್ತೋದವು. ಅಪ್ಪ ಅನ್ನಿಸ್ಕೊಂಡಿರೋನ್ನ ಮುಂದೇನೆ ಎಲ್ಲ ಆಟ ಆಡಿದ್ರೂ ಕಂಡು ಕಾಣದಂಗೆ ಸುಮ್ಮನೆ ಇದ್ದಾನೆ. ಅವುಗಳನ್ನ ಬಿಟ್ಟಿರೋಲ್ಲಾಂತಾನೆ…”- ಎಂದು ರೆಡ್ಡಿ ವ್ಯಂಗ್ಯದ ಒತ್ತಡ ಬೆರೆಸಿ ಹೇಳಿದ. ಸೆನ್‌ರವರು “ಮಿ.ರೆಡ್ಡಿ, ನಮ್ಮ ಚಿತ್ರ ತಯಾರಿಕೆಗೆ ಅವನ ಅಗತ್ಯ ಹೆಚ್ಚು. ನೀವೇನಾದರೂ ಮಾಡಲೇಬೇಕು…ಅಂದ್ಹಾಗೆ ಲೊಕೇಶನ್ ನೋಡ್ಬೇಕೂಂತ ನಮ್ಮ ಕ್ಯಾಮರಾಮನ್, ಕೋಡೈರೆಕ್ಟರ್ ಎಲ್ಲ ಬಂದಿದ್ದಾರೆ. ಅವರಿಗೆ ಕ್ವಾರಿಯ ಕಾರ್ಯಕಲಾಪಗಳನ್ನೆಲ್ಲ ತೋರಿಸಿಬಿಡಿ.”- ಎಂದರು. “ನಡೀರಿ ಸಾರ್, ತೋಟದ ಬಂಗ್ಲೇಲಿ ಸುಧಾರಿಸಿಕೊಳ್ಳಿ, ಬಿಸಿಲು ತಗ್ಗಲಿ” ಎಂದು ಹೇಳಿ ಜೋರಾಗಿ ಕೂಗು ಹಾಕಿ ಕ್ವಾರಿಯ ಮೇಸ್ತ್ರಿಯನ್ನ ಕರೆದು ಕರುಪ್ಪಯ್ಯನ್ನ ಬಂಗೆಲೆಗೆ ಕಳುಹಿಸುವಂತೆ ಹೇಳಿ ನಮಗೆ ದಾರಿ ತೋರಿಸುತ್ತ ಮುಂದೆ ನಡೆದ. ದಾರಿಯಲ್ಲಿ ಮಿ.ಸೆನ್‌ರವರು ತಮ್ಮ ಸಹೊದ್ಯೋಗಿಗಳೊಂದಿಗೆ ತಮ್ಮ ಈ ಚಿತ್ರದ ಸ್ಕ್ರಿಪ್ಟನ್ನು ಹೇಗೆ ಅಂತಾರಾಷ್ಟ್ರೀಯ ಶ್ರೇಷ್ಠ ಮಟ್ಟದ ಚಿತ್ರದ ಗುಣಗಳೊಂದಿಗೆ ಹೆಣೆದಿರುವರೆಂಬುದನ್ನು ಚರ್ಚಿಸತೊಡಗಿದರು.
ತೋಟದ ಬಂಗಲೆ ತಲುಪಿದಾಗ ರೆಡ್ಡಿ ತರಿಸಿಟ್ಟಿದ್ದ ತಂಪು ಪಾನೀಯ, ಎಳನೀರು ಇತ್ಯಾದಿಯನ್ನ ಎಲ್ಲರಿಗೂ ಹಂಚಿದ. ಆದರೆ ಸೆನ್‌ರವರು ಮಾತ್ರ ಅದಾವುದನ್ನು ಮುಟ್ಟದೆ ತಾವು ತಂದಿದ್ದ ಕ್ಯಾನಿನಲ್ಲಿದ್ದ ಸ್ಕಾಚನ್ನೆ ಹೀರತೊಡಗಿದರು. ಸ್ಪೂರ್ತಿ ಬಂದವರಂತೆ ಶೋಷಿತ ವರ್ಗದ ಬಗೆಗಿನ ತಮ್ಮ ಮುಂದಿನ ಚಿತ್ರವಾದ “ಶೋಷಣೆ” ಕಥೆಯನ್ನು ನನ್ಗೆ ಹೇಳತೊಡಗಿದರು. ಮೇಸ್ತ್ರಿ ಕರುಪ್ಪಯ್ಯನನ್ನ ಕರೆತಂದ.
ನಟರಾಜನಂತೂ ಅವನಿಗೆ “ಯಾವುದಕ್ಕೂ ಹೆದರಬೇಕಾಗಿಲ್ಲ” ವೆಂಬ ಆಶ್ವಾಸನೆಯನ್ನ ತುಂಬಲು ಪ್ರಯತ್ನಿಸುತ್ತಿದಂತೆ ಮಿಕ್ಕೆಲ್ಲರೂ ಅವನಿಗೆ ಬುದ್ಧಿವಾದ ಹೇಳತೊಡಗಿದರು. ರೆಡ್ಡಿ ಕರುಪ್ಪಯ್ಯನಿಗೆ “ನೋಡು, ನೀನು ಇಲ್ಲಿ ದಿನಕ್ಕೆ ಆರು ರೂಪಾಯ್ ಸಂಪಾದಿಸ್ತಿದ್ದಿ, ಅವರ ಜೊತೆ ಒಂದು ವಾರ ಹೋಗು. ಏನೂ ಮಾಡ್ಬೇಕಾಗಿಲ್ಲ, ಸುಂನಿರು. ಮುನ್ನೂರು ರೂಪಾಯಿ ಕೊಡ್ತಾರೆ. ನೀನು ಇಲ್ಲಿ ಬರಿ ಕಳ್ಳು ಸಾರಾಯಿ ಕುಡೀತ ನನ್ನನ್ನ ಒಂದು ಗುಟುಕು ಬ್ರಾಂದಿ ಕೊಡೀಂತ ಬೇಳಾಡ್ತಿದ್ದೆ. ಅಲ್ಲಿ ಹೋಗು, ಬ್ರಾಂದಿ ಮಳೇನೆ ಸುರುಸ್ತಾರೆ… ನಿನಗೆ ಯಾತರ ಭಯವೂ ಇಲ್ಲ. ಎಲ್ಲದಕ್ಕೂ ನಾನಿದ್ದೀನಿ. ಬೇಕಾದರೆ ಒಂದು ವಾರ ಕಳೆದ ಮೇಲೆ ನೀನು ಇಲ್ಲಿಗೆ ಬಂದು ಬಿಡಬಹುದು…” ಹಾಗೆ ಹೀಗೆ ಎಂದು ಉಬ್ಬಿಸತೊಡಗಿದ.
ಕಠಿಣ ಪರಿಶ್ರಮದಲ್ಲೇ ಕರಿಮೈಯನ್ನು ಕರಗಿಸಿದ್ದ ಕರುಪ್ಪಯ್ಯ ಮೂಕನಾಗಿ ತಲೆ ತಗ್ಗಿಸಿ ಎಲ್ಲರೂ ಹೇಳುವುದನ್ನು ಕೇಳುತ್ತಲಿದ್ದ. “ಮುನ್ನೂರು..” “ಬ್ರಾಂದಿ..” ಶಬ್ಧಗಳು ಬಂದಾಗ ತಲೆ ಎತ್ತಿ ಕಣ್ಣಲ್ಲಿ ಬೆಳಕನ್ನು ಚಿಮ್ಮಿಸುತ್ತಿದ್ದ. ಒಮ್ಮೊಮ್ಮೆ ತನಗೆ ಅಪರಿಚಿತವಾದ ಸಾಂಸ್ಕೃತಿಕ – ನಾಗರಿಕ ಸಮ್ಮುಖನಕ್ಕೆ ಹೆದರಿ ಭೀತಿಯಿಂದ ತಲ್ಲಣಿಸುತ್ತಿದ್ದ. ಎಲ್ಲರ ಮಾತುಗಳನ್ನು ಕೇಳಿ ಕೇಳಿ ಕೊನೆಗೆ ತನ್ನ ಸಮ್ಮತಿಯನ್ನು ಮೌನವಾಗಿ ತಲೆಯಾಡಿಸುವುದರ ಮೂಲಕ ಸೂಚಿಸಿದಾಗ ಎಲ್ಲರಿಗೂ ಸಂತೋಷವಾಯಿತು. ಕರುಪ್ಪಯ್ಯ, ರೆಡ್ಡಿಗೆ ತನ್ನ ಭಾಷೆಯಲ್ಲಿ ತಾನು ತನ್ನ ಹೆಣ್ಣು ಮಕ್ಕಳನ್ನು ಬಿಟ್ಟಿರುವುದಿಲ್ಲವೆಂಬುದನ್ನೂ, ತನೊಂದಿಗೆ ಕರೆದೊಯ್ಯಲು ಸಮ್ಮತಿಸಿದರೆ ಮಾತ್ರ ತಾನು ಸೆನ್‌ರಿಗೂ, ನಟರಾಜನಿಗೂ ಸಹಾಯ ಮಾಡ್ಲು ತಯಾರಿದ್ದೇನೆಂದು ತಿಳಿಸಿದಾಗ, ರೆಡ್ಡಿ ಅದನ್ನು ಸೆನ್‌ರರಿಗೂ ನಟರಾಜನಿಗೂ ಹೇಳಿದ ಮೇಲೆ ಅವರಿಬ್ಬರೂ ಸಮ್ಮತಿಸಿದರು. ಅಲ್ಲಿಯೇ ಕರುಪ್ಪಯ್ಯನ ಕೈಗೆ ನೂರು ರೂ. ಅಡ್ವಾನ್ಸ್ ಸೇರಿತು. ಪ್ರಶ್ನಿಸಿ – ಪ್ರಶ್ನಿಸಿ ಅವನಿಂದ ತಿಳಿದುಕೊಂಡ ವಿಷಯಗಳೊಂದಿಗೆ, ಸಂಗ್ರಹಿಸಿದ ಮಾಹಿತಿಗಳೊಂದಿಗೆ ತಮ್ಮ ಚಿತ್ರದ ಸ್ಕ್ರಿಪ್ಟನ್ನು ಅಲ್ಲಲ್ಲಿ ಪ್ರಮುಖವಾದ ಅಂಶಗಳನ್ನು ಬದಲಿಸಿದರು.
ಶೂಟಿಂಗ್ ಪ್ರಾರಂಭವಾಯಿತು. ನಟರಾಜನು ಕರುಪ್ಪಯ್ಯನ ಮಾರ್ಗದರ್ಶನದಲ್ಲೆ ಅಭಿನಯಿಸಲಾರಂಭಿಸಿ, ಪಾತ್ರದಲ್ಲೇ ತನ್ಮಯಗೊಂಡನು. ಆರು ವಾರಗಳನಂತರ ಚಿತ್ರ “ಏ” ಸರ್ಟಿಫಿಕೇಟ್‌ನೊಂದಿಗೆ ಬಿಡುಗಡೆಯಾಯಿತು. ವಿಮರ್ಶಕರೆಲ್ಲ ಅದನ್ನು ಹೊಗಳಿದರು. ಸ್ವಲ್ಪ ದಿನಗಳಲ್ಲೇ ಕ್ಯಾನೆ ಚಿತ್ರೋತ್ಸವದಲ್ಲಿ ಭಾಗವಹಿಸಲು ಆ ಚಿತ್ರಕ್ಕೆ ವಿಶೇಷ ಆಹ್ವಾನ ಬಂತು. ಸೆನ್‌ರವರು ಬಹಳ ಶ್ರಮವಹಿಸಿ ತಮ್ಮ ಚಿತ್ರಕ್ಕೆ ಸಬ್ ಟೈಟ್ಲಿಂಗ್ ಮಾಡಿಸಿದರು. ಪತ್ರಿಕೆಗಳಲ್ಲಿ ಸೆನ್‌ರವರ – ನಟರಾಜನ ವಿಶೇಷ ಸಂದರ್ಶನಗಳು ಪ್ರಕಟವಾದವು. ಸೆನ್‌ರೊಂದಿಗೆ ನನ್ನ ಸಂದರ್ಶನವೂ ಪ್ರಕಟವಾಯ್ತೆನ್ನಿ. ‘ಶೋಷಿತ ವರ್ಗವು ಶೋಷಕರ ವಿರುದ್ಧ ಸಿಡಿದೇಳುವ ಸನ್ನಿವೇಶಗಳು ತೀರಾ ಪ್ರಚೋದಕವಾಗಿದ್ದವು.’ – ಎಂಬ ಸಿಂಬಾಲಿಕಲ್ ಅಪ್ರೋಚನ್ನು ಎಲ್ಲ ಪತ್ರಿಕೆಗಳು ಗುರುತಿಸಿದ್ದವು- ಮಾತ್ರವಲ್ಲ. ಇಂಥ ಚಿತ್ರಗಳ ಮುಖಾಂತರ ಭಾರತೀಯ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟಕ್ಕೇರುವುದೆಂದು ಹೇಳಿದ್ದವು.
ಆಕಸ್ಮಿಕವಾಗಿ ಒಮ್ಮೆ ಸಿಕ್ಕಿದ ಕರುಪ್ಪಯ್ಯನನ್ನು “ಚಿತ್ರವನ್ನು ನೋಡಿದೆಯ” ಎಂದು ಕೇಳಿದ್ದಕ್ಕೆ , ಅದಿನ್ನೂ ನಮ್ಮ ಮಾರತ್‌ಹಳ್ಳಿ ಟೂರಿಂಗ್ ಟಾಕೀಸಿಗೆ ಬಂದಿಲ್ಲವೆಂದು, ಮೊನ್ನೆ ತಾನೆ ದಾನವೀರ ಶೂರ ಕರ್ಣ ನೋಡಿದನೆಂದು, ತಮ್ಮ ಹೆಣ್ಣು ಮಕ್ಕಳಿಬ್ಬರೂ ಸಿಟಿಯಲ್ಲಿ “ಶೋಷಣೆ”ಯನ್ನು ನೋಡಿದುದಾಗಿಯೂ, ಏನೂ ಅರ್ಥವಾಗದೆ ಬೋರ್ ಹೊಡೆಸಿತೆಂದು ಹೇಳಿದರೆಂದು ಗೋಗರೆದ. ತನ್ನ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಕಿರುವುದಾಗಿಯೂ “ಶೋಷಣೆ” ಚಿತ್ರದ ನಿರ್ಮಾಪಕರು ತನಗೆ ಇನ್ನೂರು ರೂಪಾಯ್ ಕೊಡಬೇಕಾಗಿರುವುದನ್ನು ಹೇಳಿ ತನಗೆ ಕೊಡಿಸಬೇಕೆಂದು ಕೇಳಿದ. ನಾನು, ಅಷ್ಟು ಚಿಕ್ಕ ಹುಡುಗಿಗೆ ಈಗಾಗಲೆ ಮದುವೆ ಮಾಡಲು ಏನವಸರವಯ್ಯ ಎಂದುಕೇಳಿದ್ದಕ್ಕೆ , ನಟರಾಜ್ ಮಾಡಿದ್ದ ಇನ್ನಿತರ ಚಿತ್ರಗಳನ್ನು ನೋಡಿ ಮೆಚ್ಚಿಕೊಂಡಿದ್ದ ಗಣೇಶನ್ ಎಂಬ ಯುವಕನೊಂದಿಗೆ ‘ಕಾದಲ್’ (ಪ್ರೀತಿ) ಕೊಂಡಿದ್ದ ತನ್ನ ಮಗಳಿಗೆ ‘ಕಾದಲ್’ ವಿರುದ್ಧ ಎಚ್ಚರಿಸಿ ಬೇರೊಬ್ಬನಿಗೆ ತಕ್ಷಣ ಮದುವೆ ಮಾಡದಿದ್ದರೆ, ಆಕೆ ಕೆಟ್ಟು ಹೋಗಬಹುದೆಂದು ಹೇಳಿದ.
ಕ್ಯಾನೆ ಚಿತ್ರೋತ್ಸವದ ವರದಿ ಮಾಡಿದ್ದ ಟೈಂ, ಸೈಟ್ ಅಂಡ್ ಸೌಂಡ್ , ನ್ಯೂಸ್ವೀಕ್, ಪ್ಲೇಹೌಸ್- ಇನ್ನಿತರ ಪತ್ರಿಕೆಗಳು ಸೆನ್‌ರವರ ಚಿತ್ರದ ಬಗ್ಗೆ ‘ಶೋಶಿತ ವರ್ಗದ ಕಲಾತ್ಮಕ ವೈಭವೀಕರಣ ಯಾ ಬ್ಲೋ ಅಪ್ , ಅದರಲ್ಲೆ ಸೆನ್‌ರವರ ವಿಶಿಷ್ಠತೆ ಅಡಗಿರುವುದು’ ಎಂಬರ್ಥದಲ್ಲಿ ಎರಡು ಸಾಲು ಬರೆದಿದ್ದವು. ಅದರಲ್ಲಿನ ವ್ಯಂಗ್ಯ ನಮ್ಮವರಿಗೆ ಅರ್ಥವಾಗಲಿಲ್ಲ. ಪ್ರಸಿದ್ದ ವಿಮರ್ಶಕ ಡೇವಿಡ್ ರಾಬಿನ್‌ಸನ್ “ದಾನ ವೀರ ಶೂರ ಕರ್ಣ” ಚಿತ್ರವನ್ನು ಮೆಚ್ಚಿ ಬರೆದಿದ್ದನ್ನು ಕಂಡು ನನಗೆ ಕರುಪ್ಪಯ್ಯ ಜ್ಞಾಪಕಕ್ಕೆ ಬಂದ.
ಕರುಪ್ಪಯ್ಯ ಈಗಲೂ ಕ್ವಾರಿಯಲ್ಲಿ ಕಲ್ಲು ಬಂಡೆಗಳನ್ನು ಕುಟ್ಟುತ್ತಲೇ ಇದ್ದಾನೆ. ಕಳ್ಳಂಗಡಿಗೆ ಹೋಗುತ್ತಲೇ ಇದ್ದಾನೆ. ಟೂರಿಂಗ್ ಟಾಕೀಸಿನಲ್ಲಿ ಸೆಕೆಂಡ್ ಶೋಗೆ ವಾರಕ್ಕೆರಡು ಬಾರಿ ಹೋಗುತ್ತಲೇ ಇದ್ದಾನೆ. ಬಹುಶಃ ಇನ್ನೂ ಹತ್ತು ವರ್ಷ ಬಿಟ್ಟು ನೀವು ಅಲ್ಲಿಗೆ ಹೋದರು ನಿಮಗೆ ಅವನು ಸಿಗಬಹುದು.
ಅವನ ಮಗಳಿಗೆ ಮದುವೆಯಾಯ್ತೊ ಇಲ್ಲವೊ ಗೊತ್ತಿಲ್ಲ.
*****
೩೧.೮.೧೯೦ – ಪ್ರಜಾವಾಣಿಯಲ್ಲಿ ಪ್ರಕಟವಾದ ಕತೆ.