“ಚಿರಂಜೀವಿ” ಕ್ಲಿನಿಕ್ ಮಲೆನಾಡು ಭಾಗದಲ್ಲಿ ಹೆಸರು ಮಾಡಿದ ಡಾಕ್ಟ್ರು ಶಾಪ್. ಚಿರಂಜೀವಿ ಕ್ಲಿನಿಕ್ ಇರುವುದು ಮಳೆ ಕಾಡಿಗಳಿಂದಲೇ ತುಂಬಿದ ಆಗುಂಬೆಯ ಪರಿಸರದಲ್ಲಿ. ವರ್‍ಷದ ಸುಮಾರು ಆರು ತಿಂಗಳುಗಳ ಕಾಲ ಭೋರ್‌ಗರೆವ ಮಳೆಗಾಲ. ಆಕಾಶವೇ ತೂತಾಗಿ ನೀರು ಸೋರುತ್ತಾ ಇದೆಯೇನೋ ಎನ್ನುವ ಭಾವನೆ ಹೊರಗಿನವರಿಗೆ ಮೂಡಿದರೆ ತಪ್ಪೇನಿಲ್ಲ. ಅಡಿಕೆ, ಕಾಫಿ ತೋಟ, ಗಿರಿಕಾನನ ಗಳ ನಡುವೆ ಇರುವ ಪುಟ್ಟ ಊರು. ಆಗುಂಬೆ, ಶಿವಮೊಗ್ಗದಿಂದ ಉಡುಪಿ, ಮಂಗಳೂರು, ಕಾರ್ಕಳ ಕಡೆ ಹೋಗುವಾಗ ‘ಆಗುಂಬೆ’ ನಿಮ್ಮ ಕಣಿಗೆ ಬೀಳುವುದು. ಈಗೆ ಸುಮಾರು ಮೂರು ನಾಲ್ಕು ದಶಕದ ಕೆಳಗೆ ಆಗುಂಬೆ ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗುವುದು ಪ್ರಯಾಸದ ಕೆಲಸವೇ ಆಗಿತು. ಆಗುಂಬೆ ವರೆಗೆ ಮಾತ್ರ ಬಸ್ಸು ಸೌಕರ್ಯವಿದ್ದು ಅಲ್ಲಿಂದ ಘಾಟಿಯಲ್ಲಿ ಜೀಪುಗಳು ಮಾತ್ರ ಓಡಾಡುತ್ತಿದ್ದವು. ಆಗೆಲ್ಲಾ ಬರಿಯ ಕಲ್ಲಿದ್ದಲಿನಿಂದ ಓಡುವ ಬಸ್ಸುಗಳು ಮಾತ್ರ ಇದ್ದವು, ಹಾಗೇ ಬಸ್ಸಿನಲ್ಲಿ ಬರಿಯ ಶ್ರೀಮಂತರು ಮಾತ್ರ ಪ್ರಯಾಣವನ್ನು ಮಾಡುತ್ತಿದ್ದರು. ಬಡವರಿಗೆ ಕಾಲು ನಡಿಗೆ ಪ್ರಯಾಣ ಮಾಮೂಲು. ಇಂತಹ ಆಗುಂಬೆಯಲ್ಲಿ ಆ ಕಾಲದಲ್ಲಿ ಹೆಸರು ಮಾಡಿತ್ತು ‘ಚಿರಂಜೀವಿ’ ಕ್ಲಿನಿಕ್.
‘ಚಿರಂಜೀವಿ’ ಕ್ಲಿನಿಕ್‌ನ ಮಾಲೀಕನ ಹೆಸರು ಮಾತ್ರ ತುಂಬಾ ವಿಚಿತ್ರ ಹೆಸರು ಮಾತ್ರವಲ್ಲ ಆಸಾಮಿ ಕೂಡ ವಿಚಿತ್ರ ಅವನ ಹೆಸರು ‘ಕೃಪಾಕರ’ ಆದರೆ ಅವನು ಮಾತ್ರ ಹಣವಿಲ್ಲದೇ ಯಾರಿಗೂ ಕೃಪೆ ತೋರಿದವನೇ ಅಲ್ಲ. ಅವನ ಕ್ಲಿನಿಕ್ ತಿಂಗಳಿಡೀ ಜನರಿಂದ ಗಿಜಿಗುಡುತ್ತಿತ್ತು.
ಅದೊಂದು ಭಾನುವಾರ ಅದು ಮಧ್ಯ ಮಳೆಗಾಲದ ದಿನ. ದಿನವಿಡೀ ಮಳೆ ಸುರಿಯುತ್ತಲೇ ಇತ್ತು. ಆ ದಿನ ಡಾಕ್ಟ್ರ ಕ್ಲಿನಿಕ್‌ಗೆ ಜನಸಂದಣಿ ಸ್ವಲ್ಪ ಕಡಿಮೆ ಇತ್ತು. ಆಗ ಹತ್ತಾರು ಮಂದಿ ರೋಗಿಗಳು ಬಂದು ಕಾಯುತ್ತಾ ಕುಳಿತಿದ್ದಾರೆ. ಕೃಪಾಕರ ಡಾಕ್ಟ್ರು ರೋಗಿಗಳನ್ನು ನೋಡುತ್ತಾ ಔಷಧಿಯ ಚೀಟಿ ಬರೆದು ಕೊಡುತ್ತಾ ಇದ್ದರು. ಜನರನ್ನೆಲ್ಲಾ ನೋಡಿ ಕೊನೆಯಲ್ಲಿ ವೃದ್ದೆಯೊಬ್ಬಳು ಡಾಕ್ಟ್ರು ಹತ್ತಿರ ಬಂದಳು. ಅವಳು ತನ್ನ ರೋಗದ ಕುರಿತಾಗಿ ಡಾಕ್ಟ್ರಿಗೆ ಹೇಳತೊಡಗಿದಳು. ಅವಳ ಕೈ ಕಾಲು ಊದಿಕೊಂಡು ದಪ್ಪವಾಗಿತ್ತು. ದಮ್ಮು ಇತ್ತು. ಡಾಕ್ಟ್ರು ಕೇಳಿದರು –
“ಏನಮ್ಮ ನಿನ್ನ ಹೆಸರು?”
ಆಕೆ ಹೇಳಿದಳು – “ಸೀತಮ್ಮ”
“ನಿಮ್ಮ ಊರು ಯಾವುದು?”
“ನಮ್ಮ ಊರು ಇಲ್ಲಿಂದ ಹತ್ತು ಮೈಲಿ ದೂರದಲ್ಲಿರುವ ಮೇಲುಸುಂಕ ಸಾರ್”
“ನೀನು ಒಬ್ಬಳೇ ಬಂದೆಯಾ?”
“ಹೌದು ಸಾ. ನನಗೆ ಇಬ್ಬರು ಗಂಡು ಮಕ್ಕಳು. ಅವರು ಉದ್ಯೋಗವರಿಸಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ” ಡಾಕ್ಟ್ರು ಆಕೆಯನ್ನು ಪರೀಕ್ಷೆ ಮಾಡಿ ಕೊನೆಗೆ ಹೇಳಿದರು.
“ನೋಡಮ್ಮ ನಿನ್ನ ಖಾಯಿಲೆಗೆ ತಕ್ಕ ಮದ್ದು ನನ್ನ ಬಳಿ ಇಲ್ಲ. ನಿನ್ನ ಖಾಯಿಲೆ ಉಲ್ಬಣಿಸಿದೆ. ನೀನು ಈಗ ಮಣಿಪಾಲಿಗೆ ಹೋಗಬೇಕು. ಆಕೆ ಅಳುತ್ತಾ ಡಾಕ್ಟ್ರ ಕಾಲನ್ನು ಹಿಡಿಯಲು ಬಂದಳು. –
“ಸ್ವಾಮಿ ನಾವು ಬಡವರು, ನನ್ನ ಬಳಿ ಕಾಸಿಲ್ಲ. ಈ ಎರಡು ಬಂಗಾರದ ಬಳೆಗಳೇ ನನ್ನ ಆಸ್ತಿ. ನೀವು ದೊಡ್ಡ ಮನಸ್ಸು ಮಾಡಿ ಔಷಧಿ ಕೊಡಿ” ಅಂತ ಪ್ರಾರ್ಥಿಸಿದಳು.
ದಿನಾಲೂ ಸಮಯ ಕಳೆಯಲು ನಾನು ಚಿರಂಜೀವಿ ಕ್ಲಿನಿಕ್‌ನಲ್ಲೇ ಇರುತ್ತಿದ್ದೇ. ಈ ಅಸಾಮಿ ಯಾವುದೇ ರೋಗಿಗಳೊಂದಿಗೆ ವ್ಯಾವಹಾರಿಕ ವಿಚಾರ ಬಿಟ್ಟು ಬೇರೆ ಮಾತಾಡಿದವನೇ ಅಲ್ಲ. ಅವನ ಫೀಸ್ ಸಹ ಒಂದು ಪೈಸೆ ಬಿಡಲಾರದಷ್ಟು ಜಿಪುಣನಿಗೆ ಯಾಕೆ ಈ ತಾಯಿಯ ಕನಿಕರ.
ಕೃಪಾಕರ ಸೀತಮ್ಮನಿಗೆ ಒಂದಿಷ್ಟು ಔಷದಿ ಬರೆದುಕೊಟ್ಟು ಕಳಿಸಿದರು. ಇನ್ನು ಹದಿನೈದು ದಿವಸ ಬಿಟ್ಟು ಬರುವಂತೆ ಹೇಳಿ ಕಳಿಸಿದರು.
ಕೃಪಕರರ ಚಿರಂಜೀವಿ ಕ್ಲಿನಿಕ್‌ನಲ್ಲಿ ಈಗ ಜನ ಖಾಲಿಯಾಗಿತ್ತು. ನಾನು ಮತ್ತು ಕೃಪಕರ ಇಬ್ಬರೇ ಉಳಿದಿದ್ದೆವು. ನಾನು ಇಷ್ಟು ದಿನಗಳ ಕಾಲ ಇವರನ್ನು ನೋಡಿದ್ದರು ಕೃಪಕರ ಮುಖದಲ್ಲಿ ಅಂದಿನಷ್ಟು ಚಿಂತೆ ಬೇರೆ ಯಾವ ದಿನವು ನಾನು ಕಂಡಿರಲಿಲ್ಲ. ನಾನು ನೇರವಾಗಿ ಕೇಳಿದೆ.
“ಡಾಕ್ಟ್ರೆ ಯಾವುದೋ ಚಿಂತೆ ನಿಮ್ಮನ್ನು ತುಂಬಾ ಕಾಡುವಂತಿದೆ”
“ಹೌದು”
“ಏನಾಯಿತು ಇವತ್ತು ನಿಮಗೆ”
“ಈಗ ಬಂದ ವೃದ್ಧೆಗೆ ರಕ್ತದ ಕ್ಯಾನ್ಸರ್ ಇದೆ”
“ಆಕೆ ನಿಮ್ಮ ಸಂಬಂಧಿಯ?”
“ಅಲ್ಲ”
“ಮತ್ಯಾಕೆ ಈ ಮಮಕಾರ?”
ಕೃಪಕರ ಡಾಕ್ಟ್ರು ಮಾತಾಡಲಾಗದೇ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದರು. ಈಗ ಕೃಪಕಾರ ತೀರ ಚಿಕ್ಕ ಮಗುವಿನ ತರಹ ಅಳಲಾರಂಭಿಸಿದ್ದು ನೋಡಿ ನಾನಂತು ತುಂಬಾ ಗಾಬರಿಯಾಗಿ ಹೋದೆ.
ಅರ್‍ಧ ತಾಸು ಡಾಕ್ಟ್ರು ಅಳುತ್ತಲೇ ಇದ್ದರು. ನಂತರ ಸಮಾಧಾನಗೊಂಡವರಂತೆ ಕಂಡರು. ನಾನು ಅವರನ್ನು ಮತ್ತೆ ಪ್ರಶ್ನೆ ಕೇಳುವ ಗೋಜಿಗೆ ಹೋಗಲಿಲ್ಲ. ಮತ್ತೆ ಅವರೇ ಹೇಳಲಾರಂಭಿಸಿದರು. –
“ನೋಡು ‘ಮಾಯೆ’ ಎಂಬುದು ತುಂಬಾ ಕೆಟ್ಟದ್ದು, ಈಗ ಬಂದು ಹೋದಳಲ್ಲಾ ಆ ಮುದುಕಿ , ಅವಳ ಮುಖ ನನ್ನಮ್ಮನ ಮುಖದ ಪಡಿಯಚ್ಚಿನಂತೆ ಇತ್ತು…”
ನಾನು ದಿಗ್ಭ್ರಾಂತನಾಗಿ ಡಾಕ್ಟ್ರ ಮುಖವನ್ನು ನೋಡುತ್ತಾ ಇದ್ದೆ.
“ನಮ್ಮಪ್ಪ ಕೋಟ್ಯಾಧಿಶರಾಗಿದ್ದರು ಸಹ ಆ ಭೀಕರ ವ್ಯಾದಿಯಿಂದ ನನ್ನ ಅಮ್ಮನನ್ನು ಉಳಿಸಿಕೊಳ್ಳಲು ಆಗಲೇ ಇಲ್ಲ. ನಾನು ಸಂಪೂರ್‍ಣ ಮರೆತಿದ್ದ ನನ್ನಮ್ಮ ಮುಖ ಈಗ ಮತ್ತೆ ನನ ಕಣ್ಣ ಮುಂದೆ ಬಂತು. ಹೀಗಾಗಿ ನನಗೆ ದುಃಖವನು ತಡೆಯಲಾಗಲಿಲ್ಲ” ಎಂದಾಗ ನಾನು ಇಂತಹ ಜಿಪುಣಗ್ರೇಸರನ ಮನಸ್ಸಿನಲ್ಲೂ ದುಃಖದ ಕಟ್ಟೆ ಒಡೆದು ಹೋಗಿರುವುದನ್ನು ನೋಡಿ ನಾನು ಸಹ ಅಚ್ಚರಿಯಿಂದ ಅವರ ಮುಖ ನೋಡುತ್ತಾ ಕುಳಿತೆ.
*****
(ರಾಗಸಂಗಮ ಪತ್ರಿಕೆಯಲ್ಲಿ ಪ್ರಕಟಿತ ಕಥೆ)