ಮಳೆಗೆ ಸಿಗದಂತೆ ನಿಂತಿದ್ದರೂ ಈಗ
ಮುರಿದೊಂದು ಮರದ ಕೆಳಗೆ,
ಎಲ್ಲ ಕುರ್‍ಚಿಗೂ ಮೊದಲು ಬೆಚ್ಚನೆಯ ಜಾಗದಲಿ
ಕಾದಿರುತ್ತಿತ್ತೊಂದು ಕುರ್‍ಚಿ ನನಗೆ
ರಾಜಕಾರಣ, ಪ್ರೇಮ ಇತ್ಯಾದಿ ಚರ್‍ಚಿಸುವ ಗೋಷ್ಠಿಯೊಳಗೆ,
ಕಾಲ ಏಕಾಏಕಿ ನನ್ನ ಪರಿವರ್‍ತಿಸುವ ಮುಂಚೆ ಹೀಗೆ.
ಭಲ್ಲೆಗಳ ಸಿದ್ಧಮಾಡುತ್ತಿದ್ದರೂ ಹುಡುಗರು
ಮತ್ತೊಮ್ಮೆ ಯಾವುದೋ ಸಂಚಿಗೆ,
ಹುಚ್ಚು ಪೋಕರಿಗಳು ದಬ್ಬಾಳಿಕೆಯ ಜರಿದು
ಹಳಿದರೂ ಮನ ಬಂದ ಹಾಗೆ,
ನನ್ನ ಯೋಚನೆಯೆಲ್ಲ ನನ್ನ ಬದಲಿಸಿಬಿಟ್ಟ
ಕಾಲಕೌಶಲ್ಯದ ಬಗೆಗೆ.
ಮುರಿದ ಈ ಮರದ ಕಡೆ ದೃಷ್ಟಿ ಚೆಲ್ಲುವ ಹೆಣ್ಣು
ಇಲ್ಲ ಒಂದೂ,
ನಾನೊಲಿದ ಚೆಲುವೆಯರು ಮಾತ್ರ ನೆನಪಿನಲಿ
ಮಾಸಿಲ್ಲ ಇಂದೂ;
ಹೀಗೆ ಪರಿವರ್‍ತಿಸಿದ ಕಾಲನ ಮುಖಕ್ಕೆ
ಉಗಿವೆ ಥೂ ಎಂದು.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್