ಮೂಲ: ವಿಲಿಯಂ ಬಟ್ಲರ್ ಏಟ್ಸ್
ಕುಲೀನ ಯುವತಿ ನುಡಿದಳು ಪ್ರೇಮಿಗೆ :
‘ತಕ್ಕ ತಿನಿಸನ್ನು ಉಣಿಸದ ಪ್ರೇಮವ
ಯಾರು ನೆಚ್ಚುವರು, ಹೇಗೆ?
ಅದಕ್ಕೆ ಪ್ರೇಮವೆ ಅಳಿಯುವುದಾದರೆ
ಹಾಡುವಿ ಪ್ರೇಮವ ಹೇಗೆ? ಆಗ
ನಾ ಗುರಿಯಾಗುವೆ ನಿಂದೆಗೆ.
ಓ ನನ್ನೊಲವೇ, ಓ ನನ್ನೊಲವೇ,
‘ಬೆಳಕು ಇರದಿರಲಿ ನಿನ್ನ ಕೋಣೆಯಲಿ’
ನುಡಿದಳು ಪ್ರೇಮಿಗೆ ಚೆಲುವೆ,
‘ನಟ್ಟಿರುಳಲ್ಲಿ ನನಗೆ ನುಸುಳಿ ಬರ
ಲಾಗುವ ಹಾಗೆ ಶಯ್ಯೆಗೆ,
ನುಸುಳುತ ನನ್ನನ್ನು ಕಂಡರೆ ನಾನೇ
ಕುಸಿದೇ ಹೋಗುವೆ. ಒಮ್ಮೆಗೇ’
ಓ ನನ್ನೊಲವೇ, ಓ ನನ್ನೊಲವೇ.
‘ಗುಟ್ಟಿನಲ್ಲಿ ಒಲಿದಿರುವೆ ಒಬ್ಬನನು’,
ಯುವತಿ ಹೇಳಿದಳು ದಾಸಿಗೆ.
‘ಕಳೆದುಕೊಂಡೆನೋ ಅವನೊಲವನ್ನ
ಕುಸಿದೇ ಹೋಗುವೆ ಮಣ್ಣಿಗೆ – ಹಾಗೇ
ನೀಗಿಕೊಂಡರೂ ನನ್ನ ಕನ್ನೆತನ
ಕುಸಿದೇ ಹೋಗುವ ಒಮ್ಮೆಗೇ.
ಓ ನನ್ನೊಲವೇ, ಓ ನನ್ನೊಲವೇ.
‘ಮಲಗು ನೀನವನ ಬದಿಯಲ್ಲಿ
ನಾನೇ ಎನ್ನಿಸುವಂತೆ’
ಬೆಳಕೇ ಇಲ್ಲದ ಕಡೆಯಲಿ, ಹೆಣ್ಣೇ
ಎಲ್ಲದೇಹ ಸಮವಂತೆ,
ಬೆತ್ತಲೆಯಾಗುವ ಮೈಗಳಲಿ
ವ್ಯತ್ಯಾಸವೆ ಇರದಂತೆ’.
ಓ ನನ್ನೊಲವೇ, ಓ ನನ್ನೊಲವೇ.
ಯಾವ ನಾಯಿಯೂ ಬೊಗಳಲಿಲ್ಲ ನಡು-
ರಾತ್ರಿ ಎಂಥ ಮೊಳಗು,
‘ಎಂಥ ಒಳ್ಳೆ ಆಲೋಚನೆ, ನಲ್ಲನ
ಮುಖದೊಳೆಂಥ ಬೆಳಗು’;
ಎನ್ನಿಸಿಯೂ ನಿಟ್ಟುಸಿರು, ದಾಸಿ ಇಡಿ
ದಿನ ಆಕಳಿಸುತ್ತಿರಲು.
ಓ ನನ್ನೊಲವೇ, ಓ ನನ್ನೊಲವೇ.
‘ಬೇಡ ಬೇರೊಂದು ಹಾಡಿನ ಹಂಗು’
ಎಂದನು ಆ ಯುವಕ,
‘ನಲ್ಲೆ ಮೊದಲ ಸಲ ಕೂಡಿ ಹಾಡಿದಳು
ಇಂದಿಗಾಯ್ತು ವರುಷ
ಗಂಟೆ ಬಡಿಯಿತೋ ಹೊದಿಕೆಯೊಳೊಬ್ಬನೆ
ಉಳಿಯುವೆ ನಲ್ಲೆಗೆ ಕಾಯುತ’.
ಓ ನನ್ನೊಲವೇ, ಓ ನನ್ನೊಲವೇ.
‘ನಗುವ, ಅಳುವ, ಪವಿತ್ರಗೀತೆ
ವ್ಯಭಿಚಾರೀ ಗೀತೆ’,
ಎಂದರು ಜನ. ಹಿಂದೆಂದೂ ಇಲ್ಲ
ಇಂಥದ ಕೇಳಿದ್ದಿಂದೇ;
ಇಂಥ ಸವಾರಿಯ ಮಾಡಿದ್ದವನೇ
ಯಾರೂ ಮಾಡಿಲ್ಲ ಹಿಂದೆ.
ಓ ನನ್ನೊಲವೇ, ಓ ನನ್ನೊಲವೇ.
ಆದರೆ ಓಡುತ ಕುದುರೆ ಕಾಲನ್ನು
ಇಟ್ಟಿತು ಮೊಲಬಿಲದೊಳಗೆ
ಕೆಳಗೆ ಉರುಳಿ ಸತ್ತನು ಆ ಯುವಕ
ಯುವತಿ ಕಂಡಳದ ತಾನೇ,
ಅವನಾತ್ಮವನೇ ಒಲಿದವಳಲ್ಲವೆ?
ತಾನೂ ಸತ್ತಳು ಒಡನೆ.
ಓ ನನ್ನೊಲವೇ, ಓ ನನ್ನೊಲವೇ.
ದಾಸಿ ಬಾಳಿದಳು ಮುಂದೂ – ಬಂದುವು
ಗೋರಿಗಳವಳ ವಶಕ್ಕೆ,
ನೆಟ್ಟಳು ಎರಡು ಗುಲಾಬಿಯ, ಬೆಳೆದುವು
ದೊಡ್ಡದಾಗಿ ಮೇಲಕ್ಕೆ,
ಒಂದೇ ಮೂಲದ ಎರಡು ಟಿಸಿಲಂತೆ
ಹಾಕಿಕೊಂಡವು ತೆಕ್ಕೆ.
ಓ ನನ್ನೊಲವೇ, ಓ ನನ್ನೊಲವೇ.
ಮುದುಕಿಯಾಗಿ ಕಡೆಯುಸಿರ ಬಿಡುವಾಗ
ಬಂದನು ಪಾದ್ರಿ ಬಳಿಗೆ,
ತೋಡಿಕೊಂಡಳು ಕಥೆಯನ್ನೆಲ್ಲಾ
ಮರುಗಿದ ಪಾದ್ರಿ ಒಳಗೇ,
ಒಳ್ಳೆಯ ಜೀವ ಒಳ್ಳೆಯ ಹೃದಯವ
ಅರಿಯದಿದ್ದೀತು ಹೇಗೆ?
ಓ ನನ್ನೊಲವೇ, ಓ ನನ್ನೊಲವೇ.
ಒಡತಿಯ, ನಲ್ಲನ ಗೋರಿಯ ಬದಿಗೇ
ಅವಳದೂ ಇರುವಂತೆ
ಪಾದ್ರಿ ಮಾಡಿಸಿದ ಗೋರಿಯ, ಮೇಲೆ
ನೆಡಿಸಿದ ಗುಲಾಬಿ ಟೊಂಗೆ,
ಹೂವು ಸುರಿಸುವುವು ಮೂರು ಗಿಡಗಳೂ
ಹೆಣೆದಿವೆ ಒಂದಕ್ಕೊಂದು,
ಯಾವ ಗಿಡದ ಹೂ ಯಾವುದು ತಿಳಿಯದು
ಕೀಳುವ ಜನಕ್ಕೆ ಇಂದೂ.
ಓ ನನ್ನೊಲವೇ, ಓ ನನ್ನೊಲವೇ.
*****