ಮೇಳ
ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ
ಇಂದೆ ಚಂದ್ರಗ್ರಹಣೋ !
ಇಂದೆ ಚಂದ್ರಗ್ರಹಣ.
ಮೇಳದ ಹಿರಿಯ
ಕೆನೆವೆಳಕಿನ ಸೊನೆಯ ಚಂದ್ರ-
ನಾದನು ಕಪ್ಪಿಡಿದ ಲಾಂದ್ರ
ಪವನವಾಯ್ತು ತಾಮ್ರದ ವೈ
ಕತ್ತಲೆಯೇ ಎತ್ತಿದ ಕೈ.
ಮರುಳೆಂದವು – ಸೈ, ಸೈ, ಸೈ!
ದೆವ್ವ ಕುಣಿಯೆ : ಹೈ, ಹೈ, ಹೈ!
ತಬ್ಬಿಬ್ಬಾದವು ತಾರೆ
ಮಬ್ಬಿಡಿಯಲು ಹೌಹಾರೆ!
ಮೇಳ
ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ.
ಇಂದೆ ಚಂದ್ರಗ್ರಹಣೋ!
ಇಂದೆ ಚಂದ್ರಗ್ರಹಣ.
ಮೇಳದ ಹಿರಿಯ
ತುಂಬುದೆರೆಯ ತಂಬುಲವನು
ತುಂಬ ಮೆಲುವ ಹಂಬಲವನು
ತಳೆದರಂತೆ ರಾಹು ಕೇತು :
ನೋಡಿದೆಂಧ ಹೇತು, ಬೇತು !
ಕಾಡಿನಲ್ಲಿ ಕಗ್ಗತ್ತಲೆ,
ಮನೆ ಮನೆಯಲಿ ಮಡಿಬತ್ತಲೆ !
ಬಂದಿತಾವುದೋ ವಿಪತ್ತು
ಮಂದಿ ತಿಳಿಯರದರ ಗತ್ತು.
ಮೇಳ
ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ.
ಇಂದೆ ಚಂದ್ರಗ್ರಹಣೋ !
ಇಂದೆ ಚಂದ್ರಗ್ರಹಣ.
ಮೇಳದ ಹಿರಿಯ
ರಾಹು ಕೇತು ರಗಳೆ, ಕಂತೆ;
ಅಂಜಿಕೆಗಳ ಬಂಜೆ ಸಂತೆ.
ಮಣ್ಣಿಗರಿಗೆ ಹೊಳೆದಿರುವುದು,-
ಸತ್ಯಕಥೆಯು ತಿಳಿದಿರುವುದು :
ಹೊಂಗದಿರನಿಗೆದುರಾಗಿ
ಭೂಮಿಯು ಬರುತಿರಲಾಗಿ
ಬೀಳುತಿರುವ ಕಪ್ಪುನೆಳಲು-
ಅದುವೆ ಚಂದ್ರನಳಲು-ಬಳಲು
ಹುಣ್ಣಿಮೆಯನೆ ನುಂಗುವಂಥ
ರಾಹು ನಾವು, ನಮ್ಮ ಪಂಥ
ಪಂಧಾನವ ಸುತ್ತಿದೆ,
ಮುದ್ದು ಮುಗಿಲ ಮುತ್ತಿದೆ :
ಭೂಮಂಡಲ ಕೆಣಕುತಿದೆ,
ಗ್ರಹಮಂಡಲ ಹೆಣಗುತಿದೆ :
ಸಾಯ್ವೆಳಕದು ಮಿಣುಕುತಿದೆ:-
ಮೇಳ
ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ
ಉಳಿದವಕೂ ತುಂಬಿದೆ ದಿನ.
ನಾಳೆ ಸೂರ್‍ಯಗ್ರಹಣ.
ಮೇಳದ ಹಿರಿಯ
ದೇ ದಾನ್ ! ಸುಟೇ ಗ್ರಾನ್ !
ದೇ ದಾನ್ ! ಸುಟೇ ಗ್ರಾನ್ !
*****