ಆಶ್ರಮದಲ್ಲಿ ಅರಳಿಯ ಮರದ ಕೆಳಗೆ ಒಂದು ಜಿಂಕೆಯ ಚರ್‍ಮದ ಮೇಲೆ ವಿಶ್ವಾಮಿತ್ರರು ಕುಳಿತಿದ್ದರು. ಆಗ ಒಬ್ಬ ಹುಡುಗನು ಏದುತ್ತಾ ಓಡಿಬಂದು ಅವರ ಕಾಲಿಗೆ ಬಿದ್ದನು. ಅವರೂ “ಯಾರು? ಶುನಶ್ಶೇಫನೇನೋ? ಎಲಾ! ಕೊನೆಗೆ ಬದುಕಿಕೂಂಡೆಯಾ? ಭಲೆ! ಸಂತೋಷ! ಬಾ! ಕುಳಿತುಕೋ” ಎಂದರು. ಅವನೂ ಕೈ ಮುಗಿದು ಗುರುಗಳೇ! ತಮ್ಮ ಕೃಪೆಯಿಂದ ನಾನು ಉಳಿದುಕೊಂಡೆನು. ಇನ್ನು ಮುಂದಕ್ಕೆ ತಾಯಿ, ತಂದೆ, ಬಂಧು, ಬಳಗಗಳೆಲ್ಲವೂ ತಾವೇ! ನಾನೂ ತಮ್ಮ ಮಕ್ಕಳಲ್ಲಿ ಒಬ್ಬನಾಗಿ ಸೇವೆ ಮಾಡಿಕೊಂಡು ಇರುತ್ತೇನೆ. ಅಪ್ಪಣೆಯಾಗಬೇಕು” ಎಂದು ಕೇಳಿಕೊಂಡನು. ಅವನ ಕಣ್ಣುಗಳಿಂದ ನೀರು ಹರಿಯುತ್ತ ಇತ್ತು. ಅದನ್ನು ನೋಡಿ ವಿಶ್ವಾಮಿತ್ರರಿಗೆ ಮನಸ್ಸು ಕರಗಿ ಹೋಯಿತು. “ಹೂ! ಹಾಗೆಯೇ ಆಗಲಿ ಇರು!” ಎಂದರು. ಅವನನ್ನು ಕೊಲ್ಲಬೇಕೆಂದು ಯಾರೋ ಹಿಡಿದುಕೊಂಡು ಹೋಗಿದ್ದರು. ವಿಶ್ವಾಮಿತ್ರರ ಕೃಪೆಯಿಂದ ಅವನು ಅವರ ಕಯ್ಯಿಂದ ತಪ್ಪಿಸಿಕೊಂಡು ಬದುಕಿ ಬಂದಿದ್ದನು.
ಅವರಿಗೆ ಆವೇಳೆಗಾಗಲೆ ಆರು ಜನ ಮಕ್ಕಳಿದ್ದರು. ಮೊದಲಿನ ಮೂವರು ಯಾವಾಗಲೂ ತಂದೆಯು ಹೇಳಿದಕ್ಕೆ ಪ್ರತಿಯನ್ನೇ ಹೇಳುವರು. ಕೊನೆಯ ಮೂವರು ತಂದೆಯ ಮಾತು ಎಂದರೆ, ಏನೇ ಆಗಲಿ ಎರಡು ಮಾತು ಆಡುತ್ತಿರಲಿಲ್ಲ. ಆರು ಜನರನ್ನೂ ಕರೆಸಿ “ಅಯ್ಯಾ! ಈ ಶುನಶ್ಶೇಫನು ಗುರುಹಿರಿಯರಲ್ಲಿ ಭಕ್ತಿಯುಳ್ಳವನು. ಇವನು ನಿಮ್ಮೆಲ್ಲರಿಗಿಂತಲೂ ವಿದ್ಯೆಯಲ್ಲಿಯೂ, ತಪಸ್ಸಿನಲ್ಲಿಯೂ ಹಿರಿಯನು. ಇವನೂ ನಿಮ್ಮಲ್ಲಿ ಒಬ್ಬನಾಗಿ ಇದ್ದು ಕೊಂಡಿರಲಿ” ಎಂದು ಹೇಳಿದರು.
ಮೊದಲ ಮೂವರು ಎಂದಿನಂತೆ ಎದುರು ಆಡಿದರು. ವಿಶ್ವಾಮಿತ್ರರೂ ಒಂದು ಸಲ ಹೇಳಿದರು. ಎರಡು ಸಲ ಹೇಳಿದರು. ಮೂರನೆಯ ಸಲವೂ ಹೇಳಿದರು. ಅವರು ಕೇಳಲಿಲ್ಲ. “ನಿಮ್ಮ ಮನೆಯೇ ಬೇಡ” ಎಂದು ಎಲ್ಲಿಗೋ ಹೊರಟು ಹೋದರು.
ಕೊನೆಯ ಮೂವರು “ತಂದೆಯೇ! ನೀನೇ ನಮಗೆ ದೇವರು. ನೀನು ಹೇಳಿದುದೇ ನಮಗೆ ವೇದವಾಕ್ಯವು. ನಿನ್ನ ಇಷ್ಟದಂತೆಯೇ ಆಗಲಿ. ಶುನಶ್ಶೇಫನೇ ನಮಗೆಲ್ಲ ಹಿರಿಯವನಾಗಲಿ” ಎಂದು ಒಪ್ಪಿಕೊಂಡರು. ವಿಶ್ವಾಮಿತ್ರರಿಗೆ ಸಂತೋಷವಾಯಿತು. ಆ ನಾಲ್ವರಿಗೂ ಸಕಲ ವಿದ್ಯೆಗಳನ್ನೂ ಉಪದೇಶಿಸಿ, ಸಿದ್ಧಿಯಾಗುವಂತೆ ಅನುಗ್ರಹಿಸಿದರು.
*****