ಹಿಂದೆ ಈ ನಮ್ಮ ಮೈಸೂರು ರಾಜ್ಯವನ್ನು ರಾಜವೊಡೆಯರು ಆಳುತ್ತಿದ್ದರು. ಆಗ ವೀರಾಜಯ್ಯನೆಂಬುವವನು ಒಬ್ಬನು ಇದ್ದನು. ಮಹಾರಾಜರು ಅವನು ಬದುಕಲೆಂದು ಕಾರುಗಳ್ಳಿಯನ್ನು ಅವನಿಗೆ ಮಾನ್ಯವಾಗಿ ಕೊಟ್ಟಿದ್ದರು.
ವೀರಾಜಯ್ಯನು ಬಹಳ ಜಂಭಗಾರನು. ಯಾರನ್ನು ಕಂಡರೂ ಲಕ್ಷ್ಯವಿರಲಿಲ್ಲ. ಒಂದು ದಿನ ಮಹಾರಾಜರ ಎದುರಿಗೆ ಪಲ್ಲಕ್ಕಿಯಲ್ಲಿ ಕುಳಿತುಕೊಂಡು ಆಟ್ಟಹಾಸದಿಂದ ಬಂದನು. ಮಹಾರಾಜರ ಮಗ್ಗುಲಲ್ಲಿ ಇದ್ದ ಇತರ ದೊಡ್ಡ ಅಧಿಕಾರಿಗಳಗಿ ಇದು ಸರಿ ಬೀಳಲಿಲ್ಲ. “ಮಹರಾಜರೆಂದರೆ ನಮಗೆಲ್ಲಾ ದೊಡ್ಡವರು. ಅವರ ಸನ್ನಿಧಿಯಲ್ಲಿ ನಯ ಭಯಗಳಂದ ನಡೆದುಕೊಳ್ಳಬೇಕು. ಇಲ್ಲವಾದರೆ ನಿನಗೆ ಒಳ್ಳೆಯದಾಗುವುದಿಲ್ಲ” ಎಂದು ಮಂತ್ರಿಯು ಹೇಳಿ ಕಳುಹಿಸಿದನು. ವೀರಾಜಯ್ಯನು ಕೇಳಲಿಲ್ಲ.
ಮತ್ತೊಂದು ಸಲವೂ ಹೀಗೆಯೇ ಆಯಿತು. ಆ ಸಲವೂ ಮಂತ್ರಿಯು ಮತ್ತೆ ಬೇಡವೆಂದು ಹೇಳಿದನು. ಇನ್ನೊಂದು ಸಲವೂ ಹೀಗೆಯೇ ಆಯಿತು. ಮಂತ್ರಿಯು ಮಹಾರಾಜರ ಬಳಿಗೆ ಹೋಗಿ “ಮಹಾಸ್ವಾಮಿಯವರು ಮನ್ನಿಸಬೇಕು. ವೀರಾಜಯ್ಯನು ಪ್ರಭುಗಳನ್ನು ಕಂಡರೆ ಅಲಕ್ಷ್ಯಮಾಡುತ್ತಿರುವನು. ಇತರರು ಇವನನ್ನು ನೋಡಿ ಕೆಟ್ಟು ಹೋದಾರು. ಅದರಿಂದ ಅವನಿಗೆ ಶಿಕ್ಷೆಯಾಗಬೇಕು” ಎಂದು ಅರಿಕೆ ಮಾಡಿದನು. ಮಹಾರಾಜರು “ಅಹುದು, ಎರಡು ಸಲ ಮನ್ನಿಸಿದರೂ ಅವನಿಗೆ ಬುದ್ಧಿ ಬರಲಿಲ್ಲ. ಅವನ ಮಾನ್ಯವನ್ನೂ ಪಲ್ಲಕ್ಕಿಯನ್ನೂ ಕಿತ್ತುಕೊಂಡು ಓಡಿಸಿ ಬಿಡಿ” ಎಂದು ಅಪ್ಪಣೆ ಮಾಡಿದರು. ಮಂತ್ರಿಯು ಹಾಗೆಯೇ ಮಾಡಿದನು.
*****