ಮಬ್ಬುಗವಿದು ಕತ್ತಲಾಗೆ
ಎತ್ತ ಏನು ಕಾಣದಾಗೆ
ಮಳೆಯ ಹನಿಯು ಮೊತ್ತವಾಗಿ
ಬಂದು ಮೊಗವ ತಿವಿಯುತಿರಲು
ಸತ್ತು ಬಿದ್ದ ಬಂಟನಂತೆ
ಇಳೆಯು ಸುಮ್ಮನೊರಗುತಿರಲು
ಕತ್ತನೆತ್ತಿ ಅತ್ತ ಇತ್ತ
ನೋಡುತಿಹುದು ಗುಬ್ಬಿ ಎತ್ತ
ತನ್ನ ಪಯಣ ಬೆಳೆಸಿತೋ!
ತನ್ನ ಮನವ ಕಳಿಸಿತೋ!
ಮೇಲಿನಿಂದ ಬಿದ್ದ ಮರಿ!
ಸುತ್ತಲಿಹವು ನಾಯಿ ನರಿ!
ಭೋರೆಂದು ಗಾಳಿಮೊಳಗು!
ನೀರೆ ನೀರು ಮೇಲು ಕೆಳಗು!
ಎತ್ತಣಿಂದೆತ್ತ ಪಯಣ?
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು!
ಮೋಡದಾಚೆ ತಮ್ಮ ಬೆಳಕ
ಬಯ್ತಿರಿಸಿತು ಅರಿಲ ಗಣವು.
ಮನೆಯೊಳೆಲ್ಲ ನಗೆಯ ಬೀರಿ
ನಲಿಯುತಿತ್ತು ಮರ್‍ತ್ಯಗಣವು.
ಮರಿಯು ನಿಲ್ಲಲದರ ಸಾವು
ಬರಲದೊಂದೆ, ಒಂದೆ, ಕ್ಷಣವು!
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು!
ರಕ್ತಪಾತದಿಂದ ಬಲಿತ
ರಾಜ್ಯಗಳಿಗೆ ಸಾವೆ ಇಲ್ಲ!
ವ್ಯರ್‍ಥವಿರುವನರ್‍ಥಗಳಾ
ಮೊನೆಗೆ ಕೊನೆಯೆ ಕೊನೆಯೆ ಇಲ್ಲ!
ನಿರಪರಾಧಿಯಾದ ಬಾಳು
ಏಕೊ ಏನೊ! ಹಾಳು ಎಲ್ಲ!
ನಾಣ್ದೊರೆದನೊ ಲೋಕದೊಡೆಯ?
ಸಣ್ಣ ಮರಿಯ ಕಾವರಿಲ್ಲ!
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು
ಎತ್ತಿಕೊಂಡೆ ಸಣ್ಣ ಮರಿಯ,
ಅದುವೆ ಕಿರಿಯ, ನಾನು ಹಿರಿಯ!
ಚಳಿಗೆ ಮರಿಯ ಮೈ ಮುದುಡಿತು
ಅದಕೆ ನನ್ನ ಬಗೆ ಕದಡಿತು
ಕೈಯ್ಯಲಿಟ್ಟು ಕೊಂಡೆ ಇನ್ನು
ತೆರೆಯದಿರುವದದರ ಕಣ್ಣು
ನೆಲಮುಗಿಲಿನ ನಡುವೆ, ಮರಿಯೆ!
ಕೂಡಿ ನಡೆವೆವೆಂದೆನು!
ಇದ್ದ ದೇವನೆಡೆಗೆ ಹೋಗಿ
ಮೊರೆಯಿಡೋಣವೆಂದೆನು.
*****