– ಪಲ್ಲವಿ –
ನಮನವಿದೋ, ನಮನವಿದೋ, ನಮನ ಸಹಜಯೋಗಿ !
ಸಮತೆಗಾಗಿ ಬಾಳ್ವೆಯನೇ ಬೇಳ್ದ ನವವಿರಾಗಿ !
೧
ಕತ್ತಲಲಿಯು ಗುರಿಯ ದಾರಿ ಕಾಂಬ ಕಣ್ಣು ನಿನ್ನ ದೊ,
ತತ್ತ್ವಮಾತೆಯಶ್ರುತ ರವ ಕೇಳ್ವ ಕಿವಿಯು ನಿನ್ನದೊ,
ವಿಗಡ ರಜದೊಳಿದ್ದು ಸೊವಡು ತಗಲದ ಮನ ನಿನ್ನದೊ,
ಜಗದ ಸೌಖ್ಯಕೆಂದೆ ಬೆರಳನೆಣಿಪ ಬುದ್ದಿ ನಿನ್ನದೊ….
ನಮನವಿದೋ, ನವನವಿದೋ ನಮನ ಸಹಜಯೋಗಿ !
೨
ನಿನ್ನ ಉಸಿರದೊಂದೊಂದೂ ಜಡಕೆ ಜೀವವಿತ್ತಿತೊ,
ನಿನ್ನ ಧಮನಿಮಿಡಿತವಹಹ ಚೈತನ್ಯವ ಬಿತ್ತಿತೊ,
ನಿನ್ನ ವಾಣಿ ದಿಗ್‌ದೇಶಕೆ ನನ್ನಿಯ ನೆಲೆ ತಿಳುಹಿತೊ,
ನಿನ್ನ ಗೆಯ್ಮೆ ಸಾವ ಜೀವಜಂಗುಳಿಯನ್ನುಳುಹಿತೊ….
ನಮನವಿದೋ, ನಮನವಿದೋ, ನಮನ ಸಹಜಯೋಗಿ !
೩
ಮೈತ್ರಿಯಿಂದೆ ಶತ್ರುಗಳನ್ನು ಸೋಲಿಸಿರುವ ವೀರ,
ಮೃತ್ಯುವನೂ ಮಿತ್ರನಂತೆ ಸ್ವಾಗತಿಸಿದ ಧೀರ,
ನಿನ್ನ ನೌಕೆ ನಂಬಿದರನು ತಲ್ಪಿಸಿತೈ ತೀರ-
ನೀನು ನಡೆದ ದಾರಿಯದೇ ಸತ್ಯ ಧರ್ಮ ಸಾರ….
ನಮನವಿದೋ, ನಮನವಿದೋ, ನಮನ ಸಹಜಯೋಗಿ !
೪
ಬಲುಮೆ-ಮೋಸಗಳನು ಹಣಿಯೆ ಕಲಹಗೈದೆ ರಾಜ !
ಕಲಿಸಿದೆ ಜೀವನವ ಚೆಲ್ವುಗೊಳಿಪ ಕಲೆಯನೋಜ !
ನಿಲಿಸಿದೆ ನಾಡಿಗರ ಹೃದಯದೊಳಗೆ ದಿವ್ಯ ತೇಜ-
ಸಲಿಪುದೆಂತು ಶ್ರದ್ಧಾಂಜಲಿ ಎಲ್ಲರಂತೆ ಸಾಜ !….
ನಮನವಿದೋ, ನಮನವಿದೋ, ನಮನ ಸಹಜಯೋಗಿ !
* * *
ನಮನವಿದೋ, ನಮನವಿದೋ, ನಮನ ಸಹಜಯೋಗಿ,
ಸಮತೆಗಾಗಿ ಸರ್ವಸ್ವವ ತತ್ವ ಮಹಾತ್ಯಾಗಿ!
*****