ಮೈಸೂರು ಮಲ್ಲಿಗೆ (೧೯೪೨) ಬಂದಿದ್ದು ಈಗ್ಗೆ ಏಳು ದಶಕಗಳ ಹಿಂದೆ. ಓದುಗರಲ್ಲಿ ಅದು ಆಗ ಹುಟ್ಟಿಸಿದ ಮಧುರ ಭಾವ ಇನ್ನೂ ಹಳತಾಗಿಲ್ಲ. ಕಾಲ ಸಂದಂತೆ ಮೈಸೂರ ಮಲ್ಲಿಗೆ ಕನ್ನಡದ ಒಂದು ಪ್ರಾತಿನಿಧಿಕ ಸಂಕಲನವಾಗಿದೆ. ನಾಡಿಗರು ಮತ್ತು ಹೊರನಾಡಿಗರೊಳಗೆ ಮತ್ತೆ ಮತ್ತೆ ಕನ್ನಡ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವುದಕ್ಕೆ ಕಾರಣವಾಗಿಯೂ ಲಲಿತವಾದ ಈ ಸಂಕಲನ ಉಳಿದುಕೊಂಡಿದ್ದು ಆ ಮೂಲಕ ಸಾಂಸ್ಕೃತಿಕ ರಾಯಭಾರಿಯಂತೆಯೂ ಕಾಣುತ್ತಿದ್ದರೆ ಆಶ್ಚರ್‍ಯವೇನೂ ಇಲ್ಲ. ‘ಮೈಸೂರ ಮಲ್ಲಿಗೆ’ ಸಂಕಲನವನ್ನು ವೈಭವೀಕರಿಸುವುದು ತಪ್ಪು. ಅದರ ನಾವೀನ್ಯವನ್ನೂ, ಚೆಲುವನ್ನೂ ಖಂಡಿಸುವುದು ಪೂರ್‍ವಾಗ್ರಹ ಎನ್ನಿಸುವಂತದ್ದು. ಈ ಎರಡು ಪಥಗಳ ಹೊರತಾಗಿ ಅನ್ಯಮಾರ್‍ಗವೇ ಇಲ್ಲ ಎಂಬಂತೆ ಭಾವಿಸುವುದು ಸರಿಯಾದ ಮಾರ್‍ಗವಲ್ಲವೇ ಅಲ್ಲ. ಕಾಲದ ತಾಳಿಕೆಗಳನ್ನು ಹೊಂದಿದ ಕಾವ್ಯವು ಸಾಂದರ್‍ಭಿಕವೂ ಸಾರ್‍ವಕಾಲಿಕವೂ ಆಗಿರುತ್ತದೆ ಎನ್ನುವುದಕ್ಕೆ ‘ಮೈಸೂರ ಮಲ್ಲಿಗೆ’ ಸಾಕ್ಷಿಯಾಗಿದೆ.
‘ಮೈಸೂರ ಮಲ್ಲಿಗೆ’ಯ ನವಿರು, ಹೊಸ ಕಾವ್ಯ ಭಾಷೆ ಅದನ್ನು ಸಾರ್‍ವಕಾಲಿಕ ಎನ್ನಿಸುವವಂತೆ ಮಾಡಿತು ಎನ್ನವುದೀಗ ಇತಿಹಾಸ. ಆದರೆ ಅದನ್ನು ಅಡಿಗರು ಕೆಣಕಿದರು. ತಮ್ಮನ್ನು ‘ಪುಷ್ಪಕವಿ’ ಎಂದು ಕರೆದ ಕೊಂಕಿಗೆ ತಕ್ಕ ಉತ್ತರ ಕೊಡುವುದಕ್ಕೋ ಎಂಬಂತೆ ನರಸಿಂಹಸ್ವಾಮಿ ತಮ್ಮ ಕಾವ್ಯದ ದಾರಿಯನ್ನೇ ಬದಲು ಮಾಡಿಕೊಂಡ ಸಂಗತಿಯೂ ಕಾವ್ಯದ ಇತಿಹಾಸದಲ್ಲಿ ದಾಖಲಾಯಿತು. ನವೋದಯ ಮತ್ತು ನವ್ಯದ ಕಾವ್ಯಗಳು ಬಿಟ್ಟುಕೊಟ್ಟ ಎಳೆಗಳು ನರಸಿಂಹಸ್ವಾಮಿಯವರಲ್ಲಿ ಕೂಡಿಕೊಂಡವು. ಕಾವ್ಯದ ರಮ್ಯತೆ ಮತ್ತು ವಾಸ್ತವದ ಒರೆಗಲ್ಲುಗಳೆರಡನ್ನೂ ಏಕಕಾಲಕ್ಕೆ ಬಳಸಿದ ಕವಿ ನರಸಿಂಹಸ್ವಾಮಿಯವರ ಕಾವೋದ್ಯೋಗಕ್ಕೆ ಬೀಜರೂಪದಂತೆ ‘ಮೈಸೂರ ಮಲ್ಲಿಗೆ’ ಸಂಕಲನ ಹುಟ್ಟಿದೆ. ‘ಮೈಸೂರ ಮಲ್ಲಿಗೆ’ಯ ಯಶಸ್ಸು ಸಾಂದರ್‍ಭಿಕವೇನೂ ಆಗದೆ ಕಾವ್ಯವನ್ನು ತನ್ನಂದಕ್ಕೆ ತಿದ್ದಿಕೊಂಡ ಕವಿಯ ಸಂವೇದನೆಯನ್ನೂ ಪರಿಚಯಿಸುವುದರಲ್ಲಿ ಯಶಸ್ವಿಯಾಯಿತು.
ಮೈಸೂರ ಮಲ್ಲಿಗೆ ಕವಿತೆಗಳು ಪ್ರೇಮಕವಿತೆಗಳೆಂದು ಕರೆಯುವಾಗ ಅದರಲ್ಲಿ ಅನೇಕ ಕ್ಲೀಷೆಗಳು ಸಿಲುಕಿಕೊಂಡಿರುತ್ತವೆ. ನನ್ನ ಮಟ್ಟಿಗೆ ‘ಮೈಸೂರ ಮಲ್ಲಿಗೆ’ಯ ಕವಿತೆಗಳಲ್ಲಿ ಗಾಢವಾದ ಮೆಟಫಿಸಿಕಲ್ ಅಂಶಗಳಿದ್ದು ಅವನ್ನು ಜಾರಿಕೆಯಲ್ಲಿ ಪ್ರೇಮಕವಿತೆಗಳೆಂದು ಕರೆದುಕೊಳ್ಳಲಾಗದು. ಎರಡನೆಯದಾಗಿ, ರಮ್ಯತೆಯನ್ನು ಇಷ್ಟು ಚೆನ್ನಾಗಿ ದುಡಿಸಿಕೊಂಡ ಕವಿ ಸಂವೇದನೆಯು ಈ ಸಂಕಲನದ ಕವಿತೆಗಳಿಂದಲೇ ಹೊರಹೊಮ್ಮಿದ್ದು ಮುಖ್ಯವಾಗಿದೆ.
ಮೈಸೂರ ಮಲ್ಲಿಗೆ ಕವಿತೆಗಳನ್ನು ಒಟ್ಟಾರೆ ಪ್ರೇಮ ಕವಿತೆಗಳೆಂದು ಗುರುತಿಸುವುದು ವಾಡಿಕೆ. ಸಾಂಪ್ರದಾಯಿಕವಾಗಿ ಶೃಂಗಾರ ರಸವನ್ನು ಹೊಂದಿದ್ದ ಸಂಸ್ಕೃತ ಕಾವ್ಯ ಮತ್ತು ಗಜಲ್ ರಚನೆಗಳು ಪ್ರೇಮವನ್ನು ಒಂದು ವರ್ಗಕ್ಕೆ/ಗಳಿಗೆ ಸೀಮಿತ ಗೊಳಿಸಿಕೊಂಡಂತೆ ಇದ್ದಾಗ ಕಾವ್ಯದಲ್ಲಿ ‘ಎರೋಟಿಕ್’ ಎನ್ನಬಹುದಾದ ಪ್ರೇಮದ ಅಭಿವ್ಯಕ್ತಿ ಮುಕ್ತವಾಗಿರಲಿಲ್ಲ. ಎಪಿಕ್ಯೂರಿಯನ್ ಆದ ಅನುಭವಗಳ ನೆಲೆಯನ್ನು ಹೇಗೆ ಸ್ವೀಕರಿಸಬಹುದಿತ್ತೋ ಎಂಬುದರ ಬಗ್ಗೆ ಕೆಲವು ಸ್ಥಳಿಯವಾದ ಆತಂಕಗಳಿರುವಂತೆ ಕಾಣುತ್ತವೆ. ಇಷ್ಟಾಗಿಯೂ ಪ್ರೇಮವೆನ್ನುವುದು ಆಧುನಿಕವೇ ಆದ ಸಂವೇದನೆಯೇನೂ ಅಲ್ಲ. ಕನ್ನಡದಲ್ಲಿ ‘ಮೈಸೂರ ಮಲ್ಲಿಗೆ’ಗಿಂತಲೂ ಮುಂಚೆ ಒಂದು ಪ್ರೇಮ ಕವಿತೆಗಳ ರಚನೆಗೆ ನೆಲ ಹದವಾಗಿತ್ತು. ಬಿಎಂಶ್ರೀ ಅವರು ಇಂಗ್ಲಿಷನಿಂದ ಕನ್ನಡಕ್ಕೆ ಅನೇಕ ಭಾವಗೀತೆಗಳನ್ನೂ ಹಾಡುಗಳನ್ನೂ ತಂದು ಆಧುನಿಕವಾದ ಒಂದು ಸಂವೇದನೆಯನ್ನು ಹುಟ್ಟುಹಾಕಿದ್ದರು. ‘ಮೈಸೂರ ಮಲ್ಲಿಗೆ’ ಬರುವ ಸರಿಸುಮಾರು ಒಂದು ದಶಕದ ಹಿಂದೆ ತೀನಂಶ್ರೀ ಅವರ ‘ಒಲುಮೆ’(೧೯೩೧) ಕಾವ್ಯ ಬಂದಿತ್ತು. ಅದು ಸಹ ಮಧ್ಯಮವರ್‍ಗದ ಪ್ರೇಮದ ಅಭಿವ್ಯಕ್ತಿಯಾಗುಳ್ಳ ಸಂಕಲನ ಎನ್ನುವುದನ್ನಿಲ್ಲಿ ನೆನೆಯಬೇಕು. ಭಾರತೀಯ ಸಮಾಜಕ್ಕೆ ಹೊಸದೆನಿಸಿದ್ದ ಪ್ರೇಮಾಲಾಪ ಅಥವಾ ವ್ಯಕ್ತಿನಿಷ್ಠ ಭಾವನಿವೇದನೆಯು ಹೊಸ ಶಿಕ್ಷಿತ ಸಮುದಾಯದಲ್ಲಿ ಸೇರಿಕೊಂಡು ಬರುತ್ತಿದ್ದ ಹೊಸ ಸಮಾಜದ ಅರುಣೋದಯದ ಕಾಲದಲ್ಲಿ ಯುಗಧರ್‍ಮವು ಬದಲಾಗುತ್ತಿದ್ದ ಇದೇ ವೇಳೆಯಲ್ಲಿ ಮೈಸೂರ ಮಲ್ಲಿಗೆ ಕವನಗಳು ಹುಟ್ಟಿವೆ ಎನ್ನುವುದು ಚಾರಿತ್ರಿಕವಾಗಿ ಮುಖ್ಯವಾಗುತ್ತದೆ.
‘ಮೈಸೂರ ಮಲ್ಲಿಗೆ’ ಕವಿತೆಗಳು ಪ್ರೇಮ ಕವಿತೆಗಳಿಗೆ ಇನ್ನೊಂದು ಹೆಸರೆಂಬಂತೆ ಚರ್‍ಚಿತವಾಗಿವೆಯಾದರೂ ಅವು ಪ್ರೇಮಕವಿತೆಗಳಲ್ಲ, ದಾಂಪತ್ಯ ಗೀತೆಗಳು ಎಂಬ ವ್ಯಾಖ್ಯಾನ ಮೂಡಿಬಂದಿತ್ತು. ಸ್ವತಃ ಕವಿ ನರಸಿಂಹಸ್ವಾಮಿ ಅವರೇ ತಾವು ಬರೆದಿದ್ದು ದಾಂಪತ್ಯ ಗೀತೆಗಳು ಎಂದು ಗುರುತಿಸಿಕೊಂಡರು. ದಾಂಪತ್ಯದ ಸುಂದರ ಚಿತ್ರಗಳನ್ನೇ ಹೆಚ್ಚಾಗಿ ಹೊಂದಿದ ಕವಿತೆಗಳು ಅದನ್ನು ಸಮರ್‍ಥಿಸುವಂತೆಯೂ ಇದ್ದವು. ಪ್ರೇಮವೆನ್ನುವುದು ದಾಂಪತ್ಯದ ಚೌಕಟ್ಟಿನಲ್ಲಿ ನೋಡುವ ಸಂದರ್‍ಭದಲ್ಲಿ ಕೆಲವು ಸಂದಿಗ್ಧಗಳಿವೆ. ಪ್ರೇಮದ ಅನುಭೂತಿಯ ಸಮಯದಲ್ಲಿ ಪ್ರೇಮವು ನೆಲವನ್ನು ಬಿಟ್ಟು ಹಾರಿರುತ್ತದೆ. ಲೋಕೋತ್ತರವಾದ ಮಾಧುರ್‍ಯಕ್ಕೆ ಎಳಸುತ್ತಾ ತನ್ನನ್ನು ಪರಿಮಳದಂತೆ ಅಮೂರ್‍ತವಾಗಿ ನಿರೂಪಿಸಿಕೊಳ್ಳುತ್ತಿರುತ್ತದೆ. ಆದರೆ ದಾಂಪತ್ಯ ಎಂದಾಗ ಅದು ಲೋಕದ ಒಂದು ಸಂಸ್ಥೆ, ವಾಸ್ತವ. ಅದರೊಳಗೆ ಇರುವ ಅನೇಕ ಸಂಗತಿಗಳಲ್ಲಿ ಪ್ರೇಮವೂ ಒಂದಾಗಿರಬಹುದು. ಕಾಮವನ್ನು ಒಂದು ಪುರುಷಾರ್‍ಥವಾಗಿ ಸ್ವೀಕರಿಸಿದ ಈ ಸಾಂಸ್ಥಿಕ ವ್ಯವಸ್ಥೆಯಲ್ಲಿ ಕಾಮದ ಮೂಲಕ ಪ್ರೇಮವನ್ನು ಅರಿಯುವ ವಿಧಾನವು ಹೊಳೆಯುತ್ತದೆ. ವಾಸ್ತವವನ್ನು ಮರೆಯಗೊಡದೆ ನೆಲದ ನೈತಿಕ ಎಚ್ಚರದಲ್ಲಿ ಪ್ರೇಮವನ್ನು ಹಾಯಿಸಲು ಸಾಧ್ಯವಿದೆಯೇ ಎಂದು ನೋಡಲು ಇಲ್ಲಿ ಅವಕಾಶವಿದೆ. ಇಹದ ಹಂಗು ತೊರೆಯ ಬಯಸುವ ಪ್ರೇಮ ಇನ್ನೊಂದೆಡೆ ಇಹದಲ್ಲಿ ನಿಲ್ಲವಂತಹ ಸಂಬಂಧಗಳಲ್ಲಿ ಕೆ.ಎಸ್.ನರಸಿಂಹಸ್ವಾಮಿ ಅವರ ಆಯ್ಕೆ ಅವರು ಹೇಳಿದಂತೆ ದಾಂಪತ್ಯ ಪ್ರೇಮವೇ.
‘ಮೈಸೂರ ಮಲ್ಲಿಗೆ’ಯ ಕವನಗಳು ಬಹುಮಟ್ಟಿಗೆ ಪ್ರೇಮ ಕವಿತೆಗಳೇನೋ ಹೌದು ಆದರೆ ಅವು ದಾಂಪತ್ಯದ ಚೌಕಟ್ಟಿನಲ್ಲಿರುವ ಗಂಡು ಹೆಂಡಿರ ಪ್ರೇಮ, ಸಲ್ಲಾಪಗಳನ್ನು ನವಿರಾಗಿ ಕಟ್ಟಿಕೊಡುವಂತವು. ಇಲ್ಲಿನ ಬಹುತೇಕ ಕವಿತೆಗಳು ಮದುವೆಗೆ ಬಂದಿರುವ ಹೆಣ್ಣಿನಿಂದ ಹಿಡಿದು ಹೊಸದಾಗಿ ಮದುವೆಯಾದ ಜೋಡಿ, ಅವರ ಫಲವಂತಿಕೆ, ತವರು ಮನೆಗೆ ಹೋದ ಹೆಣ್ಣಿನ ವಿರಹ ಇತ್ಯಾದಿಗಳನ್ನು ಸುಕುಮಾರವಾಗಿ ಬಣ್ಣಿಸುತ್ತವೆ. ದೇಹದ ಆಕರ್‍ಷಣೆಯನ್ನೂ ಆನಂತರ ಅದೇ ಆಕರ್‍ಷಣೆಯು ಮಾಗಿ, ಫಲವಂತಿಕೆಯಲ್ಲಿ ಸಾರ್‍ಥಕಗೊಳ್ಳುವುದನ್ನೂ ಅವು ಒಳಗೊಳ್ಳುತ್ತವೆ. ‘ಬಾರೆ ನನ್ನ ಶಾರದೆ’ ಹಾಗೂ ‘ರಾಯರು ಬಂದರು’ ಎಂಬ ಬಹುಶ್ರುತ ಕವಿತೆಗಳು ಗಂಡು ಹೆಣ್ಣಿನ ದೇಹಾಕರ್‍ಷಣೆಯ ತಹತಹವನ್ನು ಎಷ್ಟು ಚೆನ್ನಾಗಿ ತೋರುತ್ತಿವೆ! ಶಾರದೆಯನ್ನು ಕರೆಯುವಾಗಿನ ಸುತ್ತಲ ಜನರ ಕುಶಾಲುಗಳನ್ನು (ಕೋಣೆಯೊಳಗೆ ಬಳೆಯ ಸದ್ದು, ನಗುವರತ್ತೆ ಬಿದ್ದು ಬಿದ್ದು, ಸುಮ್ಮನಿರಲು ಮಾವನವರು, ಒಳಗೆ ಅಕ್ಕ ಭಾವನವರು) ಹೇಳುತ್ತಲೇ ಹೊಸ ಗಂಡು ಹೆಂಡಿರ ದೇಹಕಾತುರಗಳನ್ನು ಹೇಳುತ್ತದೆ ಕವಿತೆ. ಆದರೆ ಈ ಕವಿತೆ ದೇಹಕ್ಕೆ ನಿಲ್ಲುವುದಿಲ್ಲ, ಮುಂದೆ ಹೋಗುತ್ತಾ ‘ಒಂದು ಗಂಡಿಗೊಂದು ಹೆಣ್ಣು, ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದು ಕನಸ ಕಂಡು, ದುಃಖ ಹಗುರವೆನುತಿರೆ, ಪ್ರೇಮವೆನಲು ಹಾಸ್ಯವೇ?’ ಎಂಬ ಔನ್ನತ್ಯಕ್ಕೆ ಎಳಸುತ್ತದೆ. ಪ್ರೇಮವೆಂಬ ಸುವರ್‍ಣ ಚಿತ್ರಕ್ಕೆ ದಾಂಪತ್ಯವೆಂಬ ಸಾಮಾನ್ಯಕೃತ ಚೌಕಟ್ಟು! ಆದ್ದರಿಂದಲೇ ಇಂತಹ ಕವಿತೆಗಳು ಅಶ್ಲೀಲವೆನಿಸದೆ, ಮದುವೆಯೆಂಬ ಸಾಮಾನ್ಯ ಸಾಂಸ್ಥಿಕ ರೂಢಿಯಲ್ಲಿ ಹೊಸ ಸಂವೇದನೆಯನ್ನು ಕಾಣಲು ಬಯಸುತ್ತದೆ. ಆದರೆ ಪ್ರೇಮದ ಆಶಯವು ಮಾಗುವ ಹದದಲ್ಲಿ ದಾಂಪತ್ಯದ ಕಾಲಾನುಕ್ರಮದ ಅನುಭವದಲ್ಲಿ ಕಾಣೆಯಾಗಿ ಬರುತ್ತದೆ ಎನ್ನುವುದು ಈ ಸಂಕಲನದ ಅನೇಕ ಕವಿತೆಗಳಲ್ಲಿ ವ್ಯಕ್ತವಾಗುತ್ತದೆ. ಉದಾಹರಣೆಗೆ,
ಬಂದಿಹೆನು ಬಲುದೂರ, ಉರುಳಿಹುದು ಬಹುಕಾಲ,
ಕಾಮಭೋಗದ ಕನಸ ಕಂಡೆವಲ್ಲ!
ಸುತ್ತಿದೆವು ಕಂಬಗಳ, ಬಳಸಿದೆವು ದೇಗುಲವ,
ಒಳಗುಡಿಯ ಮೂರ್‍ತಿಯನು ನೋಡಲಿಲ್ಲ.
(ಎರಡನೆಯ ಮೆಟ್ಟಿಲು)
ಈ ತಿಳಿವಳಿಕೆ ತುಂಬ ಮುಖ್ಯವೆನಿಸುವಂತದ್ದು.
ಮೈಸೂರ ಮಲ್ಲಿಗೆಯ ಕವಿತೆಗಳು ಜೀವನದ ಹದದೆಡೆಗೆ ಹೊರಟ ಕವಿತೆಗಳು ಎನ್ನಿಸುವುದಕ್ಕೆ ಹೆಣ್ಣು ಗಂಡಿನ ದಾಂಪತ್ಯದ ಸರಸ-ವಿರಸಗಳಲ್ಲಿ ಮಾತ್ರ ಅವು ಆಸಕ್ತವಾಗಿಲ್ಲ ಎನ್ನುವುದು. ಅವುಗಳ ವ್ಯಾಪ್ತಿ ವಿಸ್ತಾರವಾಗುತ್ತಾ ಹೋಗಿದೆ. ಇಲ್ಲಿ ಮದುವೆಗಾಗಿ ಕಾದವರು, ಬಾಣಂತನಕ್ಕೆ ಹೋಗುವ ಗರ್‍ಭಿಣಿಯರು, ಮಗುವಿನೊಂದಿಗೆ ಬರುವ ತಾಯಂದಿರು, ಗೃಹಲಕ್ಷ್ಮಿಯರು ಒಂದೊಂದು ಹಂತದಲ್ಲಿ ಮಾಗುವಿಕೆಯನ್ನು ತೋರುತ್ತಿದ್ದಾರೆ. ಈ ಹದಗೊಳ್ಳುವಿಕೆ ಕಾಲದ ಬದ್ಧತೆಯಿಂದ ಸಾಧಿತವಾಗಿದೆ. ಈ ದೇಶಕಾಲಗಳ ಬದ್ಧತೆಯಲ್ಲಿಯೇ ಪ್ರೇಮವೆಂಬ ಅಮೂರ್‍ತ ಭಾವವನ್ನು ಉಕ್ಕಿಸುವ ಕಡೆ ಈ ಕವಿತೆಗಳು ಆಸಕ್ತವಾಗಿವೆ (ಪ್ರೇಮ ಬಂದಿತು ಹೇಗೊ ಕಾಣದಂತೆ/ಕಂಡು ಕೇಳಿರಬೇಕೆ? ಕೂಡಿ ಆಡಿರಬೇಕೆ? (ಮದುವಣಗಿತ್ತಿಯ ಮನಸು).
ಹಾಗೆ ನೋಡಿದರೆ ಈ ಸಂಕಲನವು ಕಾವ್ಯದ ಸೌಂದರ್‍ಯದ ಸಂತುಲತೆಯನ್ನು ವಿವೇಚಿಸುವ ಆಶಯವನ್ನೂ ತನ್ನೊಳಗೆ ಹೊಂದಿದೆ. ಕಾವ್ಯದಲ್ಲಿ ಸಾವನ್ನು, ಕೇಡನ್ನು ಗೆದ್ದುಕೊಳ್ಳುವ ಆಶಯವಿರುವಂತೆಯೇ ಕಾವ್ಯಕ್ಕೆ ಬೇಕಾದ ವಾಸ್ತವದ ದೂರವನ್ನು ಕಾಯ್ದುಕೊಳ್ಳಬೇಕಾಗಿದೆ. ಈ ಕಾರಣದಿಂದ ಕಾವ್ಯದ ಒಂದು ಮೀಮಾಂಸೆಯನ್ನೇ ಅದು ತೆರೆದಿಡುತ್ತಿದೆ. ಕಾವ್ಯವಸ್ತುವಿನ ಆಯ್ಕೆಯಿಂದಲೇ ಆ ಆಶಯ ಒಂದು ರೀತಿಯಲ್ಲಿ ಸಾಧಿತವಾಗಿದ್ದು, ಕಾವ್ಯವು ವಾಸ್ತವದ ಪರಿಕರಗಳನ್ನು ಬಳಸಿಕೊಂಡು ಮತ್ತೆ ಅದನ್ನು ಮೀರುವ ಕ್ರಿಯೆಯಲ್ಲಿ ಏನು ಪರಿಕರಗಳು ಬೇಕೋ ಅವನ್ನು ಇಲ್ಲಿ ಬಳಸಿಕೊಳ್ಳುತ್ತಿದೆ. ಈ ಸಂಕಲನದ ಕವಿತೆಗಳನ್ನು ಗಮನಿಸಿದರೆ ಸಾಮರಸ್ಯದ ನೇಯ್ಗೆ ಇದ್ದು, ಅವು ಹದವನ್ನು ಕಾಣುತ್ತಿರುವಂತಿವೆ. ಮಲ್ಲಿಗೆಯ ಬೆಸೆಯುವ ಪರಿಮಳ, ಇನಿದಾದ ಪ್ರಕೃತಿಯ ವಾತಾವರಣ, ಸರಸಕ್ಕಾಗಲಿ ವಿರಸಕ್ಕಾಗಲಿ ಅತಿಗೆ ಹೋಗದ ಗಂಡು ಹೆಣ್ಣುಗಳು- ಈ ಎಲ್ಲವೂ ಒಂದು ಸಮರಸದ ನೇಯ್ಗೆಯನ್ನು ಮಾಡಿವೆ. ಕಾವ್ಯಕ್ಕೆ ಇರಬಹುದಾದ ರಸಾಸ್ವಾದನೆಯ ಪ್ರಯೋಜನಕ್ಕಾಗಿ ಇವನ್ನು ತರುವುದು ಮುಖ್ಯವಾದ ಸಂಗತಿ. ಕಾವೋದ್ಯೋಗದ ಬಗ್ಗೆ ಸಾಂಪ್ರದಾಯಿಕವಾಗಿದ್ದುಕೊಂಡೇ ಜಡವಾದ ಅಭಿವ್ಯಕ್ತಿಯ ದಾರಿಯಿಂದ ತಿರುಗಿದಂತೆ, ಆದರೆ ಕಾವ್ಯದ ಮೂಲಭೂತ ತತ್ವಗಳ ಬಗ್ಗೆ ಅರಿವನ್ನು ಮತ್ತೊಮ್ಮೆ ಪ್ರಸ್ತುತ ಪಡಿಸುವಂತೆ ಮೈಸೂರ ಮಲ್ಲಿಗೆಯ ಕವನಗಳು ಮೂಡುತ್ತವೆ. ಪರಂಪರೆಯ ಸೌಕರ್‍ಯಗಳನ್ನು ಪಡೆದುಕೊಂಡರೂ ಇಲ್ಲಿ ಕವಿ ಕೆ.ಎಸ್.ನರಸಿಂಹಸ್ವಾಮಿ ತಮ್ಮತನವನ್ನು ಬಿಟ್ಟುಕೊಟ್ಟಿಲ್ಲ. ಎಲ್ಲ ನಿಯಮಗಳ ನಡುವೆಯೇ ಅವರು ತಮ್ಮದಾದ ಅಸ್ತಿತ್ವವಾದಿ ನೆಲೆಯನ್ನು ಮುಂದಿಡುತ್ತಾರೆ. ರಮ್ಯವಾದೀ ನೆಲೆಯನ್ನು ಬೆನ್ನು ಹತ್ತಿಹೋದ ಕವಿ ಮಾತ್ರ ಇಲ್ಲಿರದೆ, ಯಾವೊಂದು ಸಾಮರಸ್ಯದ ಅಂಶವನ್ನು ಮುನ್ನೆಲೆಗೆ ತರುತ್ತಿದ್ದಾರೋ ಅದರಲ್ಲಿ ಅನೇಕ ಬಿರುಕುಗಳಿರುವುದನ್ನು ಗುರುತಿಸಿಕೊಳ್ಳುತ್ತಿದ್ದಾರೆ. ಇಲ್ಲಿ ‘ಎಚ್ಚರಿಕೆ’ ಪದ್ಯವನ್ನು ಗಮನಿಸುವುದಾದರೆ,
ಮಧುರ ವೀಣಾಗಾನ ನಿರ್‍ಮಿಸುವ ನಾಕದಲೆ
ರಾಗಗಳ ಸಿಂಚಿಸುತ ಬಹುದು ಸಿಡಿಲು
…..
ಹರಿಣಾಕ್ಷಿ, ಬಗೆಯದಿರು ನಿನ್ನೊಲುಮೆ ಹರ್‍ಷವೆಂದು!
ಇದೇ ಅವರ ಕಾವ್ಯದ ಹೆಗ್ಗಳಿಕೆ. ರಮ್ಯದ ಆಟಿಕೆಯನ್ನು ಬಳಸಿ ಮಂತ್ರ ಹಾಕುತ್ತಿರುವಾಗಲೂ ವಾಸ್ತವದ ಬಗ್ಗೆ ಎಚ್ಚರವನ್ನು ಅದು ಕೊಡದೇ ಇಲ್ಲ. ಇದನ್ನು ವೈರುಧ್ಯದ ವಿನ್ಯಾಸವೆಂದು ಕರೆಯಬಹುದಾದರೆ ಈ ಬಗೆಯ ವಿನ್ಯಾಸದಲ್ಲೇ ಅವರ ಕಾವ್ಯ ಶಕ್ತಿಯು ಎದ್ದು ಕಾಣುತ್ತದೆ.
*****