ಪಾಂಡವರು ಹನ್ನೆರಡು ವರ್‍ಷ ಕಾಡಿನಲ್ಲಿ ವಾಸ ಮಾಡಿದರು. ಆಗ ಒಂದು ದಿನ ಭೀಮಸೇನನು, ಆನೆಯ ಗಾತ್ರವಿದ್ದ ಒಂದು ನೇರಿಲು ಹಣ್ಣನ್ನು ತಂದನು. ಧರ್‍ಮರಾಯನು ಅಷ್ಟು ದೊಡ್ಡ ಹಣ್ಣನ್ನು ಕಂದು ಆಶ್ಚರ್‍ಯಪಟ್ಟು, “ಇದೇನು? ಇಷ್ಟು ದೊಡ್ಡದಾಗಿರುವುದಲ್ಲ!” ಎಂದು ಅಲ್ಲಿದ್ದ ಋಷಿಗಳನ್ನು ವಿಚಾರಿಸಿದನು. ಅವರು, “ಅಯ್ಯಾ! ಇದು ಕಣ್ವಋಷಿಯ ಆಶ್ರಮದ ಹಣ್ಣು. ಆಲ್ಲಿ ವರ್‍ಷಕ್ಕೊಂದು ಸಲ ಇಂತಹುದೊಂದು ದೊಡ್ಡ ಹಣ್ಣಾಗುವುದು. ಆಗ ಋಷಿಯು ಕಣ್ಣು ಬಿಟ್ಟು ಕೈ ಚಾಚುವನು. ಹಣ್ಣು ಹೋಗಿ ಅವನ ಕೈಯ್ಯಲ್ಲಿ ಕೂಡುವುದು. ಆತನು ಇದನ್ನು ತಿಂದು, ಮತ್ತೆ ತಪಸ್ಸಿಗೆ ಕುಳಿತುಕೊಳ್ಳುವನು” ಎಂದರು.
ಇದನ್ನು ಕೇಳಿ ಧರ್‍ಮರಾಯನಿಗೆ “ಭೀಮನು ಋಷಿಯ ಹಣ್ಣನ್ನು ತಂದು ಬಿಟ್ಟನು. ಇನ್ನಾತನು ಕಣ್ಣು ತೆರೆವ ವೇಳಗೆ ಹಣ್ಣು ಇಲ್ಲದೆ ಇರಲು, ಆತನು ಎಷ್ಟುನೊಂದು ಕೊಳ್ಳುವನೋ! ಇನ್ನೇನು ಗತಿ?” ಎಂದು ದಿಗಿಲಾಯಿತು. ಕೂಡಲೆ ತನಗೆ ದಿಕ್ಕಾದ ಶ್ರೀಕೃಷ್ಣನನ್ನು ನೆನೆದನು. ಆತನೂ ಮಾಡುತ್ತಿದ್ದ ಕೆಲಸವನ್ನು ಬಿಟ್ಟುಬಂದನು. ಕೂಡಲೆ ಧರ್‍ಮರಾಯನು “ಕೃಷ್ಣಾ! ಹೀಗಾಗಿ ಹೋಯಿತು. ಭೀಮನು ಹಣ್ಣು ತಂದು ಬಿಟ್ಟನು. ಇನ್ನೇನು ಗತಿ” ಎಂದು ಅತ್ತನು. ಶ್ರೀಕೃಷ್ಣನು “ಇರಲಿ. ಬಾ” ಎಂದು ಅವರನ್ನೆಲ್ಲಾ ಆ ಮರದ ಬಳಿಗೆ ಕರೆದುಕೊಂಡು ಹೋದನು. ಅಲ್ಲಿ ಪಾಂಡವರನ್ನು ಕುರಿತು “ಅಯ್ಯಾ! ಈ ಹಣ್ಣು ಮೊದಲಿನಂತೆ ತೊಟ್ಟಿಗೆ ಸೇರಿತೊಳ್ಳಬೇಕಾದರೆ, ನಿಮ್ಮ ನಿಮ್ಮ ಮನಸ್ಸಿನಲ್ಲಿರುವುದನ್ನು ಮುಚ್ಚು ಮರೆಯಿಲ್ಲದೆ ಹೇಳಬೇಕು. ನೀವು ಹಾಗೆ ದಿಟ ಹೇಳಿದರೆ, ಅದು ತಾನೇ ಹೋಗಿ ತೊಟ್ಟಿಗೆ ಸೇರಿಕೊಳ್ಳುತ್ತದೆ. ಸುಳ್ಳು ಹೇಳಿದರೆ ಬಿದ್ದು ಹೋಗುತ್ತದೆ” ಎಂದನು.
ಎಲ್ಲರೂ “ಹಾಗೆ ಆಗಲಿ” ಎಂದರು. ಧರ್ಮರಾಯನು ತನ್ನ ಮನಸ್ಸಿನಲ್ಲಿದ್ದುದನ್ನು ಹೇಳಿದನು. ಹಣ್ಣು ಒಂದಾಳು ಎತ್ತರ ಮೇಲಕ್ಕೆ ಹೋಯಿತು. ಭೀಮನು ನಿಜವನ್ನೇ ನುಡಿದನು. ಇನ್ನೂ ಒಂದಾಳು ಎತ್ತರ ಮೇಲಕ್ಕೆ ಹೋಯಿತು. ಅರ್‍ಜುನನು ಸತ್ಯವನ್ನು ಆಡಿದನು. ಮತ್ತೂ ಒಂದಾಳು ಎತ್ತರ ಹತ್ತಿತು. ನಕುಲ ಸಹದೇವರೂ ನಿಶ್ಚಯವನ್ನೇ ನುಡಿದರು. ದ್ರೌಪದಿಯೂ ತನ್ನ ಮನಸ್ಸಿನಲ್ಲಿ ಇದ್ದುದನ್ನು ಕೊಂಚವೂ ಮುಚ್ಚದೆ ಹೇಳಿದಳು. ಹಣ್ಣು ಹೋಗಿ ತನ್ನ ಎಡೆಯನ್ನು ಸೇರಿತು.
ಪಾಂಡವರು ಬದುಕಿದೆವೆಂದು ಕೃಷ್ಣನನ್ನು ಕೊಂಡಾಡಿದರು. ಕೃಷ್ಣನು “ಅಯ್ಯಾ! ನನ್ನನ್ನು ಏಕೆ ಹೊಗಳುವಿರಿ? ಇದು ನೀವು ಆಡಿದ ದಿಟದ ಮಹಿಮೆ!” ಎಂದು ಹೇಳಿದನು.
*****