ಅಲ್ಲಿ ಬೆಳಗುವ ರವಿಯೆ ಇಲ್ಲಿ ಬೆಳಗುವ ; ಹಗಲು
ಬೇರೆ. ಆ ತಾರೆಗಳೆ ಇಲ್ಲೂ ಹೊಳೆವುವು ; ಇರುಳು
ಬೇರೆ. ಅದೆ ಮಳೆಗಾಳಿ ಕೊರೆವ ಚಳಿ ಮರಿಬಿಸಿಲು;
ಹದ ಬೇರೆ. ಒಂದೆ ಅನುಭವ, ಬೇರೆ ಮೈ ಹಲವು.
ಉಂಡ ಮನಸಿನ ರಾಗ ಸುಖ ದುಃಖ ಧಗೆಯೆಲ್ಲ
ಒಂದೆ ಇಡಿ ಲೋಕಕ್ಕೆ. ಭಾಷೆ ಬೇರಾದರೂ,
ಫರದೆ ತೆಳು, ಕಾಣುವುವು ಆಚೆ ನೋಟಗಳೆಲ್ಲ,
ಪೂರ ನೆಚ್ಚಿದ ಜೀವ ಒಳಗೊಳಗೆ ಕೈಬಿಡಲು
ಏನು ಉಳಿಯಿತು? ಭಾವಗೆಡಲು ಎದೆ, ಮನೆಯೊಳಗೆ,
ಹಾವು ಎಲ್ಲೋ ಅಡಗಿದಂತೆ. ಬಗೆ ಬಗೆ ಶಂಕೆ
ತೋಡುವುವು ಮನವ; ಬೆಳೆವುದು ಕಾಡೆ ಎದೆಯೊಳಗೆ,
ಕೂಗಿ ಹಾಯುವುವು ಬೆಚ್ಚಿಸಿ ತೋಳ ಹುಲಿ ಚಿರತೆ.
ಗೆದ್ದೆ ಹೋರಾಡಿ ಬಿಡು; ಸುಡಲೆದ್ದ ಕಿಚ್ಚನ್ನು
ಮಣಿಹಾರ ಮಾಡಿ ಕವಿಸಿದೆ ನಮಗೆ ಹುಚ್ಚನ್ನು.
*****