ನರಿಯ ಮದುವೆಯ ಮಂಗ-
ಲೋತ್ಸವದ ಸಮಯವೆನೆ
ಹೂಬಿಸಿಲುಮಳೆಯಾಗ ಸುರಿಯುತಿತ್ತು.
‘ಇರುವೆ ನಿಬ್ಬೆರಗಾಗಿ’
ಎಂದು ಮುಗಿಲೆಂದಂತೆ
ನೀರದದ ಕಪ್ಪುಗೆರೆ ಸರಿಯುತಿತ್ತು.
ಮೊರಡಿಯೊಂದರ ಬಳಿಗೆ
ಸಾಗಿಹಳು ಬೇಡತಿಯು.
ಅವಳ ಬಣ್ಣವು ಸುತ್ತಿನೆರೆಯ ಕಪ್ಪು
ಬಡ ಜಾಲಿ ಮರದಂತೆ
ಬಡಕವಾಗಿಹ ದೇಹ
ಬಾಗಿಹುದು. ಯೌವ್ವನದಲಿಹುದು ಮುಪ್ಪು!
ಮುಳ್ಳುಗಂಟಿಯ ಮುರಿದು
ತುಂಡುಗಳ ಜೋಡಿಸುತ
ಬಂದಿಹಳು ಉರವಲದ ಹೊರೆಯ ಹೊತ್ತು.
ಹಾಯ್ದು ಹೊರೆಯೊಳಗಿಂದ
ಇದೊ! ಸೀಳುಬಿದಿರೊಂದು
ಉಳಿದ ಉರವಲವದರ ಸುತ್ತು ಮುತ್ತು
ತುಸು ತಡೆದು ನಡೆಯಲೆನೆ
ಹೊರೆಯ ಕೆಳಗಿಳಿಸಿಹಳು,
ಆ ಸೀಳು ಬಿದಿರನ್ನೆ ನಿಲಿಸಿಬಿಟ್ಟು
ಊರಿ ನಿಂತಿದೆ ಬಿದಿರು,
ಅವಳೆಡೆಗೆ ಬಾಗಿಹುದು
ತುದಿಗಿರುವ ಒಣಗಿದ ಕರಿಯ ಕಟ್ಟು
ಹೆಣ್ಣೆ ಹೊರೆಯಾಗಿಹುದೊ?
ಹೊರೆಯೆ ಹೆಣ್ಣಾಗಿಹುದೊ?
ಒಂದಕೊಂದೊಲಿಯುವದ ನೋಡಿ ಕಣ್ಣು
ತಾನೆ ಮಂಕಾಗಿಹುದೊ?
ಹೆಣ್ಣಿರಲಿ ಹೊರೆಯಿರಲಿ,-
ಇವಕೆ ತುದಿಮೊದಲಹುದು ಕಾಡುಮಣ್ಣು.
ಅಕ್ಕ ತಂಗಿಯರಂತೆ
ಹಾಸುಹೊಕ್ಕಾಗಿಹವು
ನಿಂತಿದಿರುಬದಿರೊಂದೆ ಬಟ್ಟೆಯಲ್ಲಿ.
ಎಲುಬು – ಪಲುಬಿನ ಕಟ್ಟು
ಇದರದರದು ಗುಟ್ಟು.
ಏನಿಲ್ಲ ಯಾವುದರ ಹೊಟ್ಟೆಯಲ್ಲಿ!
ಬೇಡರಾಕೆಯ ಮುಂದೆ
ಕಾಡುಹೊರೆ ನಿಂದಿತ್ತು
ಕೇಳಿತ್ತು: ದಾರಿ ಕೊನೆ ಮುಟ್ಟಿತೆಲ್ಲಿ?
ಒಂದು ಕ್ಷಣ ಮೌನದಲಿ
ಹೆಣ್ಣು ವಡಿನುಡಿದಿತ್ತು :
‘ಕೆಟ್ಟೆವಿಲ್ಲಿಯು! ನಾವು ಅಟ್ಟೆವಲ್ಲಿ!’
ಮರುಕ್ಷಣವೆ ಹೊರೆಯೆತ್ತಿ
ಮುಂದೆ ಸಾಗಿದಳಾಕೆ
ದೂರ ತನ್ನ ವರ ಗುಡಿಸಿಲವ ಕಂಡು
ಮೊರಡಿಯೊಂದರ ಬಳಿಗೆ
ನಡೆದಿಹಳು ಬೇಡತಿಯು
ಉರವಲದ ಕಿರಿಹೊರೆಯ ಹೊತ್ತುಕೊಂಡು.
*****