`Who breaks a butterfly upon a wheel?’
-Pope
ಚಳಿಗೆ ಕಾತರಗೊಂಡು ರಾಜವೀಧಿಯಲಲೆದು
ನೆಲಕಂಟಗೊಂಡ ಬಣ್ಣದ ಚಿಟ್ಟೆಯ
ನಸುಕಿನಲಿ ನೋಡಿದೆನು,- ಬಂಡಿಗಾಲಿಯದುರುಳಿ
ಕೊಲಲದನು ಮಾಡಿ ಮೂರಾಬಟ್ಟೆಯ.
ಬಣ್ಣ ಬಣ್ಣದ ಪಕ್ಕಗಳನು ಮಣ್ಣಾಗಿಸಿದ
ನರನವನ ಕಣಾಲಿ,- ಬಂಡಿಗಾಲಿ!
ಇಳೆಯೆಂಬ ನಂದನದಿ ಪುಂಡಾಟವಾಡುವನು:
ಹುಲಿಯಬ್ಬರವು ನಿಲಲು ಇವನ ಹೂಲಿ!
ಸ್ವಾರ್‍ಥವಿದ್ದರೆ ಕೊಲುವ, ಸ್ವಾರ್‍ಥವಿಲ್ಲದೆ ಕೊಲುವ
ಮೋಜಿಗೆನಿಮ್ಮೊಮ್ಮೆ ಬಂದು ಕೊಲುವ
ಮತ್ತೆ ದೇವರ ದಿವ್ಯ ಸೃಷ್ಟಿಯಲ್ಲಿನ ಮೇಲು
ಕೋಡು ಮೂಡಿಹವಿವಗೆ : ಇವನೆ ಚೆಲುವ.
*****