೧
ಸಾಸಿರ ವಕ್ತ್ರದ ಸಾಸಿರ ನೇತ್ರದ
ಸಾಸಿರ ಪದಗಳ ವ್ಯಕ್ತಿ-
ಸಾಸಿರ ಚಿತ್ತದ ಸಾಸಿರ ಹೃದಯದ
ಸಾಸಿರ ಬುದ್ಧಿಯ ಶಕ್ತಿ!
೨
ಈ ಶಕ್ತಿಯೆ ದಿಟವಿಂದಿನ ದೈವತ,
ಪೂಜೆಯಿದಕೆ ಬೇಕು-
ಪೂಜೆ ದೊರೆಯದಿರೆ ದೈವತವಲ್ಲಿದು,
ದೆವ್ವವಯ್ಯೊ ! ಸಾಕು !!
೩
ಕಲ್ಲು-ಕಂಚು-ಕಟ್ಟಿಗೆಯ ಮೂರ್ತಿಗಳೆ
ದೇವರೆಂಬಿರೇನು ?
ಅಲ್ಲವಲ್ಲವವು ಬರಿಯ ಗೊಂಬೆಗಳೆ,
ಮಾಡಬಲ್ಲವೇನು ?
೪
ಒಳಿತು-ಹದುಳಗಳ ಗೆಲವು-ಮೇಲುಗಳ
ಸೆಳೆದು ತರುವುದೀ ಶಕ್ತಿ-
ಮುಳಿದರೆ ಇದು ಮನುವಿನ ಕುನ್ನಿಗಳಿಗೆ
ಇರುವುದೆಲ್ಲಿಯಾ ಮುಕ್ತಿ?
೫
ಚೆಲುವು-ಚೆನ್ನಿನಲಿ ಇಳೆಯನು ತುಳುಕಿಸಿ
ನಲಿಸಲು ಬಲ್ಲದಿದು ;
ಪ್ರಳಯದ ಬಳಗವ ಕರೆದು ಲೋಕಗಳ-
ನಳಿಸಲು ಬಲ್ಲದಿದು !
೬
ವಿಷಮತೆಯಿಂದಿದನರ್ಚಿಸೆ ಮೆಚ್ಚದೆ
ಮುಳಿದೆದಾಡುವುದು-
ಸಮತೆಯ ಪೂಜೆಯ ಸಲಿಸಿದರಿದು ಸುಖ-
ಶಾಂತಿಯ ನೀಡುವುದು.
೭
ಸಾಸಿರ ವಕ್ತ್ರದ ಸಾಸಿರ ನೇತ್ರದ
ಸಾಸಿರ ಪದಗಳ ವ್ಯಕ್ತಿ-
ನಾಶವನರಿಯದ ಕಡೆ-ಮೊದಲಿಲ್ಲದ
ಭೀಕರ ಶಂಕರ ಶಕ್ತಿ!
*****