ಇದೋ ಎದ್ದೆ ನಾನೀಗಲೆ ಹೋಗುವೆ ಇನ್ನಿಸ್ ಫ್ರೀ ದ್ವೀಪಕ್ಕೆ
ಕಟ್ಟುವೆನಲ್ಲಿ ಮಣ್ಣಿನದೊಂದು ಪುಟ್ಟ ಮನೆಯನ್ನು ವಾಸಕ್ಕೆ;
ಚಪ್ಪರದವರೆಯ ಬಳ್ಳಿಮಾಡಗಳ, ಜೇನುಗೂಡಗಳ ಹಬ್ಬಿಸುವೆ
ತುಂಬಿಯ ಗುಂಜಾರವದಲಿ ತುಂಬಿದ ಬಯಲಲ್ಲೊಬ್ಬನೆ ವಾಸಿಸುವೆ.
ಶಾಂತಿ ಸಿಕ್ಕುವುದು ಅಂಥಲ್ಲೇ, ಅದು ತುಂತುರು ಹನಿಯುವ ಬಾಳಿನಲೇ
ನಸುಕನು ಕವಿದ ಮುಸುಕಿನಿಂದ ಜೀರುಂಡೆಯ ಜಿರ್ರನೆ ದನಿವರೆಗೆ;
ಮಬ್ಬು ಮಿನುಗುವುದು ನಟ್ಟಿರುಳು ಮಧ್ಯಾಹ್ನಕೆ ನೇರಳೆ ಹೊಳಪಲ್ಲಿ
ತುಂಬಿ ನಿಲ್ಲುವುವು ಸಂಜೆಗಳು ಕೋಗಿಲೆಗಳ ರೆಕ್ಕೆಯ ಬಡಿತದಲಿ.
ಹೋಗುವೆನೀಗಲೆ ಅಲ್ಲಿಗೆಂದು, ಯಾಕೆಂದರೆ ಹಗಲಿರುಳೂ ಅಲ್ಲಿ
ಸರೋವರದ ತೆರೆ ಗುಣುಗುಣಿಸುವುವು ಸವರುತ ದಡವನು ಅಂಚಿನಲಿ;
ನಿಲ್ಲುವೆ ದಾರಿಯ ನಡುವೆಯೆ, ಇಲ್ಲವೆ ಪಾದಚಾರಿಗಳ ಹಾದಿಯಲಿ,
ಹೃದಯದಿಂದಲೇ ಎದ್ದು ಬರುವ ಆ ಸದ್ದನು ಆಲಿಸಿ ಕೇಳುತಲಿ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಟಿಪ್ಪಣಿ:
ಏಟ್ಸ್ ತನ್ನ ಕಾವ್ಯಜೀವನದ ಆರಂಭದ ದಿನಗಳಲ್ಲಿ ಬರೆದ ಭಾವಗೀತಾತ್ಮಕವಾದ ಕವಿತೆ. ರೊಮ್ಯಾಂಟಿಕ್ ಮನೋಧರ್‍ಮವನ್ನು ಬಿಂಬಿಸುವ ಈ ಕವನ ಏಟ್ಸ್ ಮುಂದೆ ಬರೆದ ಪ್ರಸಿದ್ಧ ಕವನಗಳ ಶೈಲಿ ರುಚಿಗಳಿಗೆ ಹೊರತಾದದ್ದು. ಆದರೂ ಕವಿಗೆ ಮುಜುಗರ ತರುವಷ್ಟು ಜನಪ್ರಿಯವಾದದ್ದು. ‘ನನ್ನದೇ ಆದ ಗೀತಲಯ ಕೊಂಚವಾದರೂ ಇರುವ ನನ್ನ ಮೊದಲ ಭಾವಗೀತೆ’ ಎಂದು ಏಟ್ಸ್ ಅದರ ಬಗ್ಗೆ ಹೇಳುತ್ತಾನೆ. ಕವಿಯ ಸ್ವಂತ ಪದ್ಯಗಳ ವಾಚನದ ಧ್ವನಿಸುರುಳಿಯೊಂದರಲ್ಲಿ ಈ ಪದ್ಯವೂ ಸೇರಿದೆ.