ನೀ ಮುದುಕಿಯಾಗಿ ಕೂದಲು ನರೆತು ಕಣ್ಣಲ್ಲಿ ನಿದ್ದೆ ತುಂಬಿರಲು,
ಬೆಂಕಿಗೂಡಿನ ಬದಿಗೆ ಕುಳಿತು ಈ ಪುಸ್ತಕವ ಕೈಗೆತ್ತಿಕೊ.
ಓದು ನಿಧಾನವಾಗಿ, ಪ್ರಾಯದ ದಿನಗಳಲ್ಲಿ ನಿನ್ನ ಕಣ್ಣಲ್ಲಿ
ಹೊಮ್ಮುತ್ತಿದ್ದ ಮಧುರ ನೋಟ, ದಟ್ಟನೆ ನೆರಳ ಸ್ಮರಿಸು ಮನದಲ್ಲಿ.
ಪ್ರೀತಿಸಿದ್ದೆಷ್ಟು ಜನ ನಿನ್ನ ಹರ್‍ಷೋಲ್ಲಾಸಭರಿತ ಗಳಿಗೆಗಳನ್ನ?
ನಿಜದ ಪ್ರೀತಿಯೊ ಸುಳ್ಳೊ, ಪ್ರೀತಿಸಿದ್ದರು ಅವರು ನಿನ್ನ ಚೆಲುವನ್ನ
ಪ್ರೀತಿಸಿದ್ದೊಬ್ಬನೇ ನಿನ್ನಲ್ಲಿ ಹುದುಗಿದ್ದ ಯಾತ್ರಿಕ ಪವಿತ್ರಾತ್ಮವನ್ನ
ಪ್ರೀತಿಸಿದ ಹಾಗೆಯೇ, ಬದಲುತ್ತಿದ್ದ ನಿನ್ನ ಮುಖದ ದುಗುಡಗಳನ್ನ
ಜಗಜಗಿಸಿ ಹೊಳೆವ ಉರಿ ಸರಳುಗಳ ಬಳಿ ಕೂತು ಮುಖ ಬಾಗಿಸಿ,
ಉಸುರಿಕೋ ನಿನ್ನೊಳಗೆ ನೀನೆ ವ್ಯಥೆದನಿಯಲ್ಲಿ, ಹೇಗೆ ಪ್ರೀತಿ
ಓಡಿಹೋಯಿತು ಎಂದು ದೂರದಲ್ಲಿರುವ ಗಿರಿಶಿಖರವೇರಿ
ಮರೆಸಿಕೊಂಡಿತು ತನ್ನ ಮುಖವ ನಕ್ಷತ್ರಗಳ ಮಧ್ಯೆ ತೂರಿ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಟಿಪ್ಪಣಿ:
ಕವಿ ತಾನು ಪ್ರೇಮಿಸಿದ ಹೆಣ್ಣು ಮಾಡ್ ಗಾನಳನ್ನು ಕೇಂದ್ರವಾಗಿಟ್ಟುಕೊಂಡು ಕೆಲವು ಪದ್ಯಗಳನ್ನು ಬರೆದಿದ್ದಾನೆ.