ತಿತಿ ಮಾಡಿಸೋರ್‍ಗ್ ಏನ್ ಗೊತ್ತೈತೊ
ಚೆಡ್ಡಿ ವೊಲಿಯೋ ಕೆಲಸ?
ಓದ್ಸೊ ಐಗೋಳ್ ಕಟ್ಕೋಂತಾರ
ಸೂಳೇ ಕಾಲೀನ್ ಗೊಲಸ? ೧
ಬೇವಾರ್‍ಸಿ! ನಿಂಗ್ ಏನ್ ಗೊತ್ತೈತೊ
ಯೆಂಡ ಕುಡಿಯೊ ಬಾಬ್ತು?
ಯೇಸರ್‍ಗತ್ತೇಗ್ ಆದಂಗೇನೆ
ನಿಂಗೂ ವಯಸ್ಸ್ ದಬ್ತು! ೨
ಯೆಂಡ ಕುಡಿಯೋದ್ ಕೆಟ್ದು ಗೊತ್ತು.
ನಿನ್ ಯಾರ್ ಕೇಳೀದ್ರ್ ಅದನ?
ಹತ್ರ ಬಾಂದ್ರೆ ಹತ್ತೀ ಮೇಲೆ?
ನಾನ್ ಯಾರ್ ಗೊತ್ತೊ? ರತ್ನ! ೩
ಬಾಯ್ಗೆ ಬೀಗ ತಗಲೀಸ್ಕೊಂಡಿ
ಬರಿಯೋದಿದ್ರೆ ಬರಕೊ!
ಮುಗ್ಗಲ್ ಕಂತೆ ಬಿಚ್ಚೋದಿದ್ರೆ
ನೀ ಬಂದಂಗೆ ತಿರಕ್ಕೊ! ೪
*****