ಹೈಕಮಾಂಡ್! ಹೈಕಮಾಂಡ್!

ಹೈಕಮಾಂಡ್! ಹೈಕಮಾಂಡ್!

ರಾಜಕಾರಣದಲ್ಲಿ ಸಂಭವಿಸುವ ಕೆಲವು ಮುಖ್ಯ ಘಟನೆಗಳು ಮಾಧ್ಯಮ ದೇವರ ಮೂಲಕ ವಿಶೇಷ ಭಾಷಾ-ಪರಿಭಾಷೆಗಳು ಹುಟ್ಟಿಗೆ ಕಾರಣವಾಗುವುದುಂಟು. ಕೆಲವೊಮ್ಮೆ ಚಮತ್ಕಾರಕ್ಕೆ ಹುಟ್ಟಿದ ಪದಗಳು ಪರಿಕಲ್ಪನೆಯಾಗಿ ಬೆಳೆದು ತಮಗೆ ತಾವೇ ಅರ್ಥವಿಸ್ತರಣೆ ಅವಕಾಶ ಮಾಡಿ ಕೊಟ್ಟಿರುವುದು ಉಂಟು. ೧೯೬೯ ರಲ್ಲಿ ಸಂಭವಿಸಿದ ಕಾಂಗ್ರೆಸ್ ಇಬ್ಭಾಗ ಸಂದರ್ಭವನ್ನೇ ನೋಡಿ. ಕಾಂಗ್ರೆಸ್‌ನ ಹಳೆಯ ತಲೆಗಳನ್ನು ಧಿಕ್ಕರಿಸಿದ ಇಂದಿರಾ ಗಾಂಧಿಯವರು ಹೊಸ ಹುರುಪಿನಿಂದ ರಾಜಕೀಯ ವೈರುಧ್ಯಗಳನ್ನು ಹುಟ್ಟುಹಾಕಿದರು. ರಾಷ್ಟ್ರಪತಿ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ವಿ. ವಿ. ಗಿರಿ ಅವರಿಗೆ ಆತ್ಮಸಾಕ್ಷಿ ಮತ ನೀಡಲು ಕೊಟ್ಟ ಕರೆ, ರಾಜಧನ ರದ್ದತಿ, ಬ್ಯಾಂಕ್ ರಾಷ್ಟ್ರೀಕರಣ ಮುಂತಾದ ಕ್ರಮಗಳಿಗೆ ಮುಂದಾದ ಹಿನ್ನೆಲೆಯಲ್ಲಿ ಅಂದಿನ ಹಿರಿಯ ಕಾಂಗ್ರೆಸ್ ನಾಯಕರನ್ನು ಎದುರುಹಾಕಿಕೊಂಡರು, ಎಸ್. ನಿಜಲಿಂಗಪ್ಪ ಅವರಾದಿಯಾಗಿ ನಾಲ್ಕೈದು ಜನ ಹಿರಿಯರ ಗುಂಪಿಗೆ ಪತ್ರಿಕೆಗಳು ‘ಸಿಂಡಿಕೇಟ್’ ಎಂದು ಕರೆದವು. ಈ ಸಿಂಡಿಕೇಟ್‌ಗೆ ಎದುರು ಬಿದ್ದ ಇಂದಿರಾ ಗಾಂಧಿಯವರ ಗುಂಪು ‘ಇಂಡಿಕೇಟ್’ ಎಂದು ಪತ್ರಿಕೆಗಳ ಮೂಲಕ ಪ್ರಸಿದ್ಧವಾಯಿತು. ಕಾಂಗ್ರೆಸ್ (ಐ) ಎಂಬುದು ಕನ್ನಡ ಪತ್ರಿಕೆಗಳಲ್ಲಿ ‘ಕಾಂಗೈ’ ಆಯಿತು. ಕಾಂಗ್ರೆಸ್ (ಓ) ಪಕ್ಷವು ‘ಕಾಂಗೊ’ ಆಯಿತು. ಸಿಂಡಿಕೇಟ್, ಸ್ವಾಭಾವಿಕವಾಗಿ ಸೊರಗಿ ಸುಣ್ಣವಾಗುವಂತೆ ಇಂಡಿಕೇಟ್ ವಿಜೃಂಭಿಸತೊಡಗಿದಾಗ, ಇಂದಿರಾ ಗಾಂಧಿಯವರಲ್ಲಿ ‘ಹೈಕಮಾಂಡ್’ ಶಕ್ತಿ ಸಂಚಯವಾಯಿತು. ಸಿಂಡಿಕೇಟ್, ಇಂಡಿಕೇಟ್ ಹೈಕಮಾಂಡ್‌ಗಳು ಮೊದಲು ಚಮತ್ಕಾರಕ-ಸಾಂಕೇತಿಕ ಪದಗಳಾಗಿ ಕಾಣಿಸಿಕೊಂಡು ನಂತರ ಈ ಪದಗಳು ಪ್ರವೃತ್ತಿಯನ್ನು ಪ್ರತಿನಿಧಿಸತೊಡಗಿದ್ದು ಈಗ ಇತಿಹಾಸ. ಈಗ ಹೈಕಮಾಂಡ್ ಎನ್ನುವುದು ಪದವೂ ಹೌದು, ಪ್ರವೃತ್ತಿಯ ಹೌದು, ಪರಿಕಲ್ಪನೆಯೂ ಹೌದು.

ಕಾಂಗ್ರೆಸ್ ರಾಜಕೀಯದ ಫಲವಾಗಿ ರೂಪುಗೊಂಡ ‘ಹೈಕಮಾಂಡ್’ ಪದವು ಪರಿಕಲ್ಪನೆಯವರೆಗೆ ಬೆಳೆಯಲು ಕಾರಣವಾದ ಸಂಗತಿಗಳು ನಮ್ಮ ಸಮಕಾಲೀನ ಸಂದರ್ಭದಲ್ಲಿ ಸಂಭವಿಸಿದೆ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಹೇರಿಕೆ ಮತ್ತು ಮಕ್ಕಳಿಗೆ ಅಧಿಕಾರ ವಹಿಸಿದ ವೈಖರಿಗಳು ಜನ ವಿರೋಧಿಯಾಗಿದ್ದವೆಂದು ಒಪ್ಪಬಹುದಾದರೂ ‘ಸಿಂಡಿಕೇಟ್’ನವರು ಜನಪರವಾಗಿದ್ದರೆಂದು ಒಪ್ಪಲಾಗದು. ಯಾಕೆಂದರೆ ‘ಸಿಂಡಿಕೇಟ್’ ಎನ್ನುವುದು ಬೆರಳೆಣಿಕೆಯ ಸ್ವಘೋಷಿತ ಮೌಲ್ಯಸಂರಕ್ಷರ ಗುಂಪಾಗಿದ್ದು ಬದಲಾವಣೆಯು ಆರೋಗ್ಯಕರ ನೆಲೆಗಳಿಗೆ ಸರಿಯಾಗಿ ಸ್ಪಂದಿಸಿದ ಮನೋಧರ್ಮವನ್ನು ಪಡೆದಿರಲಿಲ್ಲ. ಇಂದಿರಾ ಗಾಂಧಿಯವರ ಅನಪೇಕ್ಷಿತ ಮೇಲುಗೈ ಆಟವನ್ನು ವಿರೋಧಿಸುವುದಕ್ಕಷ್ಟೇ ಸೀಮಿತಗೊಳ್ಳದ ಸಿಂಡಿಕೇಟ್ ಬ್ಯಾಂಕ್ ರಾಷ್ಟ್ರೀಕರಣದಂಥ ಪ್ರಗತಿಪರ ಕ್ರಮಗಳನ್ನು ಸ್ವಾಗತಿಸುವ ಸ್ಥೈರ್ಯವನ್ನು ಪಡೆದಿರಲಿಲ್ಲ. ಸಾಮಾಜಿಕ ಅಸಮಾನತೆ ವಿಷಯಕ್ಕೆ ಬಂದರೆ ಈಗಲೂ ಮೀಸಲಾತಿಯನ್ನು ಮೆಚ್ಚದ ನಿಜಲಿಂಗಪ್ಪನವರನ್ನು, ಆರ್ಥಿಕ ಅಸಮಾನತೆ ವಿಷಯಕ್ಕೆ ಬಂದಾಗ ಬ್ಯಾಂಕ್ ರಾಷ್ಟ್ರೀಕರಣದಂಥ ಕ್ರಮಗಳ ಬಗ್ಗೆ ತಾತ್ವಿಕ ಬದ್ಧತೆಯಿಲ್ಲದ ಮೊರಾರ್ಜಿಯವರನ್ನೂ ಇಂದು ಉದಾಹರಿಸಬಹುದಾಗಿದೆ. ಇಂಥ ಸಿಂಡಿಕೇಟಿಗರ ಎದುರು ಸಮಾಜವಾದದ ಮೇಲ್‌ಹೊದಿಕೆ ಹೊದ್ದು ವಿಜೃಂಭಿಸ ತೊಡಗಿದ ಇಂದಿರಾ ಗಾಂಧಿಯವರು ಬಡವರ ಆರಾಧ್ಯದೈವದಂತೆ ಕಾಣಿಸಿಕೊಳ್ಳ ತೊಡಗಿದ್ದು ಸಹಜವಾಗಿತ್ತು. ೧೯೬೯ರ ಕಾಂಗ್ರೆಸ್ ಇಬ್ಭಾಗ ನಂತರ ನಡೆದ ಮೊದಲ ಚುನಾವಣೆಯಲ್ಲಿ ಇಂದಿರಾ ನೇತೃತ್ವದ ಕಾಂಗ್ರೆಸ್ ಜಯಭೇರಿ ಬಾರಿಸಿದಾಗ ಶಕ್ತಿ, ರಾಜಕೀಯ ಏರಿಳಿತಗಳು ಕಾಣಿಸಿಕೊಳ್ಳತೊಡಗಿದವು. ಚುನಾವಣೆಯಲ್ಲಿ ಗೆಲ್ಲಿಸಿಕೊಡುವ ಶಕ್ತಿಯಾದ ಇಂದಿರಾ ಗಾಂಧಿ ಹೈಕಮಾಂಡ್ ಆದರು. ಹೆಸರಿಗೆ ಕೆಲವರು ಹೈಕಮಾಂಡ್ ಪಟ್ಟಿಯಲ್ಲಿದ್ದರು. ಅವರು ಪ್ರಮುಖ ಸಲಹೆಗಾರರು ಅಥವಾ ಪ್ರಮುಖ ಆಜ್ಞಾಪಾಲಕರು, ಪ್ರಜಾ ಪ್ರಭುತ್ವದಲ್ಲಿ ಉಗ್ರರೂಪದ ಹೇರಿಕೆ ಪ್ರಾರಂಭವಾದದ್ದು ಇಂದಿರಾ ಗಾಂಧೀಜಿಯವರ ಕಾಲದಲ್ಲಾದರೂ ಅದನ್ನು ಜನತೆ ವಿರೋಧಿಸಲಿಲ್ಲ. ಇದೇ ನಮ್ಮ ಕಾಲದ ಒಂದು ವೈರುಧ್ಯ. ತಮ್ಮ ಬಗೆಗೆ ಯಾವತ್ತೂ ಗಟ್ಟಿಯಾಗಿ ಚಿಂತಿಸದ ಅನೇಕ ಹಳೆಯ ತಲೆಗಳ ನಡುವೆ ‘ಗರೀಬಿ ಹಟಾವೋ’ ಘೋಷಣೆಯ ಮೂಲಕ ಬಡವರ ಎದೆಯಲ್ಲಿ ಆಸೆ ಬತ್ತದಂತೆ ನೋಡಿಕೊಂಡ ಇಂದಿರಾ ಗಾಂಧಿಯವರು ಪ್ರಜಾಪ್ರಭುತ್ವವಾದಿಯೋ ಅಥವಾ ಪ್ರಜಾಪ್ರಭುತ್ವದ ಹೆಸರಿನಲ್ಲಿ ಹುಟ್ಟಿದ ಸರ್ವಾಧಿಕಾರಿಯೊ ಎಂಬ ಪ್ರಶ್ನೆ ಸಾಮಾನ್ಯ ಜನಕ್ಕೆ ಅಪ್ರಸ್ತುತವಾಯಿತು ಎಂಬುದೇ ನಮ್ಮ ಸಂದರ್ಭದ ಕಟುವಾಸ್ತವ. ನೆಹರು ಅವರು ಕಾಂಗ್ರೆಸ್ ಪಕ್ಷದಲ್ಲಿ ಹಿಡಿತ ಸಾಧಿಸಿದರೂ ಇಂದಿರಾ ಗಾಂಧೀಯವರಂತಹ ಹೈಕಮಾಂಡ್ ಆಗಿರಲಿಲ್ಲ. ಅಂದಿನ ನಾಯಕತ್ವ ಸಮೀಪಕ್ಕೆ ಬರುವ ಶಕ್ತಿ ಪಡೆದ ಅನೇಕರಿದ್ದುದೂ ಇದಕ್ಕೆ ಒಂದು ಕಾರಣವಿರಬಹುದು, ಆದರೆ ಇಂದಿರಾ ಗಾಂಧೀಜಿಯವರು ಹೈಕಮಾಂಡ್ ಆಗಿ ರೂಪುಗೊಂಡ ಸಂದರ್ಭದಲ್ಲಿ ಇದ್ದ ವಾತಾವರಣವೇ ಬೇರೆ. ಇಂದಿರಾ ಗಾಂಧಿಯವರ ಹಿಂದೆ ಅನೇಕ ಅನಾಮಧೇಯರು ನಾಮಕರಣ ಮುಹೂರ್ತಕ್ಕಾಗಿ ಕಾದು ನಿಂತಿದ್ದರು. ಪ್ರಜಾ ಪ್ರಭುತ್ವವೆನ್ನುವುದು ಚುನಾವಣೆ ಮಟ್ಟಕ್ಕೆ ಮಾತ್ರ ಇಳಿದಾಗ, ಓಟನ್ನು ದೊರಕಿಸುವ ವ್ಯಕ್ತಿ, ಅಂತಿಮ ಶಕ್ತಿಯಾಗಿ, ಅದನ್ನು ಆರಾಧಿಸುವ ಅನಾಮಧೇಯರ ತಂಡವೇ ಹುಟ್ಟುತ್ತದೆ. ಇಲ್ಲಿ ‘ನಾಮಕರಣ’ವೇ ಪ್ರಧಾನ ಆಚರಣೆ ಆಗುತ್ತದೆ. ಕಾಂಗ್ರೆಸ್ ಟಿಕೆಟ್ ಕೊಡುವುದು ಮೊದಲ ನಾಮಕರಣವಾದರೆ, ಮುಖ್ಯಮಂತ್ರಿಯನ್ನು ಹೆಸರಿಸುವುದು ಎರಡನೇ ನಾಮಕರಣ. ಯಾರಾರು ಮಂತ್ರಿಗಳಿರಬೇಕೆಂದು ಸೂಚಿಸುವುದು ಮೂರನೇ ನಾಮಕರಣ ಹೀಗೆ ಹೈಕಮಾಂಡ್ ಪ್ರಬಲಗೊಳ್ಳುತ್ತಿದ್ದ ಪಕ್ಷದ ಪ್ರಜಾಪ್ರಭುತ್ವವನ್ನು ಹಿಡಿಯಲ್ಲಿ ಬಿಗಿಹಿಡಿದು ನಿಯಂತ್ರಿಸುತ್ತದೆ. ಮೊದಲು ಕಾಂಗ್ರೆಸ್ ಪಕ್ಷದ ಗುತ್ತಿಗೆಯಂತೆ ಕಾಣುತ್ತಿದ್ದ ಹೈಕಮಾಂಡ್ ಕಲ್ಪನೆ ಈಗ ಒಂದಲ್ಲ ಒಂದು ರೀತಿಯಲ್ಲಿ ಬಹುಪಾಲು ಪಕ್ಷಗಳಲ್ಲಿ ಇರುವುದು ಕಂಡುಬರುತ್ತದೆ. ಹೈಕಮಾಂಡಾಗುವ ಆಸೆ ಹೊತ್ತ ಅನೇಕರನ್ನು ಕಟ್ಟಿಕೊಂಡಿರುವ ಜನತಾದಳದಂಥ ಪಕ್ಷಗಳಲ್ಲಿ ನಡೆಯುತ್ತಿರುವುದು ಹೈಕಮಾಂಡ್ ಆಕಾಂಕ್ಷಿಗಳ ಅತೃಪ್ತ ನೆಲೆಯ ಸ್ಪರ್ಧೆಯೆಂದು ಹೇಳಬಹುದಾಗಿದೆ. ಕಮ್ಯುನಿಸ್ಟ್ ಪಕ್ಷಗಳಲ್ಲಿ ಸಿದ್ಧಾಂತವೇ ಹೈಕಮಾಂಡ್ ಆಗಿದ್ದು, ಅದರ ವ್ಯಾಖ್ಯಾನವನ್ನು ಹೊಟ್ಟೆಯಲ್ಲಿಟ್ಟುಕೊಂಡವರು ಕಟ್ಟ ಕಡೆಯವರೆಗೂ ಕಮಾಂಡ್ ಮಾಡಲು ಸಾಧ್ಯವಾಗಿದೆ: ಶಿಸ್ತನ್ನು ಪಕ್ಷದ ಪಟ್ಟ ಮತ್ತು ಭದ್ರ -ಎರಡನ್ನೂ ಮಾಡಲು ಹವಣಿಸುವ ಆಕಾಂಕ್ಷೆ ಅನೂಚಾನವಾಗಿ ನಡೆದುಬಂದಿದೆ. ಇಲ್ಲಿ ಒಂದು ಮಾತನ್ನು ಹೇಳಬೇಕು. ಹೈಕಮಾಂಡ್ ಮತ್ತು ಶಿಸ್ತು, ಪ್ರತ್ಯೇಕವಾದ ನೆಲೆಗಳು, ಯಾವುದೇ ಪಕ್ಷಕ್ಕೆ ಶಿಸ್ತು ಬೇಕೇಬೇಕು. ಆದರೆ ಶಿಸ್ತು ಏಕ ವ್ಯಕ್ತಿ ಕೇಂದ್ರಿತ ಕಲ್ಪನೆ ಯಾದಾಗ ಹೈಕಮಾಂಡ್ ರೂಪ ಪಡೆಯುತ್ತದೆ. ಆದ್ದರಿಂದ ಹೈಕಮಾಂಡ್ ಕಲ್ಪನೆಯನ್ನು ವಿರೋಧಿಸುವವರು ಶಿಸ್ತನ್ನು ವಿರೋಧಿಸಬೇಕಾಗಿದೆ. ಯಾವುದೇ ಪಕ್ಷದಲ್ಲಿ ಶಿಸ್ತನ್ನು ಒಪ್ಪುವವರು ಹೈಕಮಾಂಡ್ ದಾಸಾನುದಾಸರಾಗ ಬೇಕಾಗಿಲ್ಲ. ಎಡಪಕ್ಷಗಳು ಶಿಸ್ತನ್ನು ಹೈಕಮಾಂಡನ್ನಾಗಿ ಪರಿವರ್ತಿಸಬಾರದು. ಅದೇ ಸಂದರ್ಭದಲ್ಲಿ ಕೆಲವು ಸಮಾಜವಾದಿಗಳಂತೆ ಶಿಸ್ತಿನ ಕಲ್ಪನೆಯ ಕಟ್ಟೊಡೆದು ಅರಾಜಕತೆಯನ್ನು ವಿಧಿವಿಧಾನ ಮಾಡಿಕೊಳ್ಳಬಾರದು.

ನಮ್ಮ ಸಂದರ್ಭದಲ್ಲಿ ಶಿಸ್ತು ಹೆಸರು ಹೇಳಿ ಹೈಕಮಾಂಡ್ ಆಗಿರುವ ನಿದರ್ಶನಗಳಿರುವಂತೆಯೇ ಸೈದ್ಧಾಂತಿಕ ಶಿಸ್ತನ್ನು ಕಟ್ಟಿಕೊಂಡ ಪಕ್ಷಗಳಿವೆ. ಹೈಕಮಾಂಡ್ ಮತ್ತು ಶಿಸ್ತು ಎರಡನ್ನೂ ಬಿಟ್ಟು ಆರಾಜಕವಾಗಿ ಅಲೆದಾಡುವ ರಾಜಕೀಯ ಮನಸ್ಥಿತಿಗಳು ಇವೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಕಲ್ಪನೆಯ ಪ್ರಾಬಲ್ಯ ಕೇಂದ್ರಸ್ಥಾನದಲ್ಲಿದೆ. ಈ ಕಾರಣದಿಂದ ಹೈಕಮಾಂಡ್ ಎಂದ ಕೂಡಲೇ ಕಾಂಗ್ರೆಸ್ ಪಕ್ಷದ ನೆನಪು ಬಂದುಬಿಡುತ್ತದೆ. ಯಾವುದೇ ನೆಲೆಯಿಂದ ನೋಡಿದರೂ ಇಂದಿರಾ ಗಾಂಧಿಯವರೊಂದಿಗೆ ಹೋಲಿಸುವ ಸಾಧ್ಯವಿಲ್ಲದ, ನಿಧಾನವೇ ವಿಧಾನವಾದ ಪ್ರಧಾನಿ ಪಿ. ವಿ. ನರಸಿಂಹರಾಯರು ಲಕೋಟೆಯಲ್ಲಿ ಹೆಸರು ಕಳಿಸಿ ಮುಖ್ಯಮಂತ್ರಿಗಳನ್ನು ನಾಮಕರಣ ಮಾಡುವಷ್ಟು ‘ಶಕ್ತಿ’ ಸಂಪಾದಿಸಿದ್ದಾರೆಂದರೆ ಹೈಕಮಾಂಡ್ ಅಪಾಯ ಅನಾವರಣಗೊಳ್ಳುತ್ತದೆ. ಶಾಸಕಾಂಗ ಪಕ್ಷಗಳು ಪ್ರಧಾನಿಗೆ ಮುಖ್ಯಮಂತ್ರಿಯ ಆಯ್ಕೆ ಅಧಿಕಾರ ಕೊಡುವುದಕ್ಕೆ ಸಭೆ ಸೇರುತ್ತಿರುವ ಇಂದಿನ ಪರಿಸ್ಥಿತಿ ಪ್ರಜಾಸತ್ತಾತ್ಮಕ ಶಿಸ್ತಿನ ವ್ಯಂಗ್ಯವಾಗಿದೆ. ಮತ್ತೊಂದು ಅಂಶವನ್ನು ನಾವಿಲ್ಲಿ ಗಮನಿಸಬೇಕು. ಹೈಕಮಾಂಡ್ ಎನ್ನುವುದು ಏಕವ್ಯಕ್ತಿಯ ಶಕ್ತಿಯಾದಂತೆ ಪಕ್ಷವೊಂದರ ದೌರ್ಬಲ್ಯವೂ ಆಗುತ್ತದೆ. ಏಕವ್ಯಕ್ತಿ ಕೇಂದ್ರಿತ ಅಧಿಕಾರಕ್ಕೆ ಅವಕಾಶ ಮಾಡಿಕೊಡುತ್ತ ಪ್ರಜಾಪ್ರಭುತ್ವದ ಹೊರ ಚೌಕಟ್ಟಿನಲ್ಲಿ ಫ್ಯೂಡಲ್ ಪದ್ಧತಿಯನ್ನು ಪ್ರತಿಷ್ಠಾಪಿಸುವ ಒಳಸಂಚಾಗುತ್ತದೆ. ಈ ಒಳಸಂಚು ಒಂದು ಪಕ್ಷವನ್ನು ದುರ್ಬಲಗೊಳಿಸುತ್ತ, ಅದು ಪಕ್ಷದ ಒಬ್ಬ ವ್ಯಕ್ತಿಯನ್ನು ಸಬಲ ಗೊಳಿಸುವ ಹಂತಕ್ಕಷ್ಟೇ ನಿಲ್ಲುವುದಿಲ್ಲ. ಸಂವೇದನೆ ಮತ್ತು ಚಿಂತನೆಗಳನ್ನು ನಾಶಮಾಡುವ ರೋಗಿಷ್ಟ ಸಾಧನವಾಗುತ್ತದೆ. ಯಾಕೆಂದರೆ ಆ ಪಕ್ಷದಲ್ಲಿ ಯಾರು ಎಷ್ಟೇ ಚಿಂತನೆ ಮಾಡಿದರೂ ಕಡೆಗೆ ನಿರ್ಧರಿಸುವ ವ್ಯಕ್ತಿ ಕೇಂದ್ರವೇ ಬೇರೆಯಿರುತ್ತದೆ; ವಿಶಿಷ್ಟ ಸಂದರ್ಭಗಳಲ್ಲಿ ಸಂವೇದನಾಶೀಲರಾಗಲು ಪ್ರಯತ್ನಿಸಿದರೂ ಫಲ ಕೊಡದ ಆರಣ್ಯರೋಧನವಾಗುವ ಅಪಾಯವಿದೆ. ಬಹಿರಂಗ ಸ್ವಾತಂತ್ರ್ಯವನ್ನಷ್ಟೇ ಅಲ್ಲ, ಅಂತರಂಗಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಹೈಕಮಾಂಡ್‌ನ ಆಶ್ರಯದಲ್ಲಿ ಸಂವೇದನೆಯ ಸಸಿಗಳು ಹೇಗೆ ಬೆಳೆಯುತ್ತವೆ? ಚಿಂತನೆಗಳು ಹೇಗೆ ಚಿಗುರುತ್ತವೆ?

ಯಾವಾಗ ರಾಜಕೀಯ ಪಕ್ಷಗಳಲ್ಲಿ ಚಿಂತನೆ ಮತ್ತು ಸಂವೇದನೆಗಳು ಸರ್ವನಾಶವಾಗತೊಡಗುತ್ತವೆಯೊ ಆಗ ಹೊಸ ಸಂಸ್ಕೃತಿ ಆಶಯಗಳು ಅರ್ಥ ಕಳೆದುಕೊಂಡು ಹುಸಿ ಸಂಸ್ಕೃತಿಯ ವಯ್ಯಾರಗಳು ವಿಜೃಂಭಿಸುತ್ತದೆ; ಶಕ್ತಿ ರಾಜಕೀಯವೇ (ಪವರ್ ಪಾಲಿಟಿಕ್ಸ್) ಸರ್ವಸ್ವವಾಗುವ ಸ್ಥಿತಿ ನಿರ್ಮಾಣಗೊಂಡು ‘ರಾಜಕೀಯ’ ಎಂಬುದು ಒಂದು ಅಣಕು ಪದವಾಗಿ ಬಿಡುತ್ತದೆ. ಇಂದು ‘ರಾಜಕೀಯ ಮಾಡುವುದು’ ಎಂದರೆ ಗಂಭೀರ ರಾಜಕೀಯ ಕ್ರಿಯೆಯೆಂಬ ಅರ್ಥದ ಬದಲು ಚಿಲ್ಲರೆ ಕೆಲಸವೆಂಬ ಅರ್ಥ ಹೊರಡುತ್ತದೆ. ರಾಜಕಾರಣದಲ್ಲಿ ಚಿಂತನೆ ಮತ್ತು ಸಂವೇದನೆಗಳು ಸ್ಥಾನ ಪಡೆಯಲು ಸಾಧ್ಯವಿಲ್ಲದ ಅನಾರೋಗ್ಯಕರ ವಾತಾವರಣದಲ್ಲಿ ಮಾತ್ರ ಇಂಥ ಅರ್ಥ ವೈಪರೀತ್ಯಗಳು ಉಂಟಾಗುತ್ತದೆ. ಇದು ಒಂದು ಅಪಾಯವಾದರೆ ದಾಸ್ಯ ದಾಸೋಹದ ಮತ್ತೊಂದು ಅಪಾಯವನ್ನು ಹೈಕಮಾಂಡ್ ಉಂಟುಮಾಡುತ್ತದೆ.

ದೈಹಿಕ ದಾಸ್ಯದಿಂದ ಮಾನಸಿಕ ದಾಸ್ಯದವರೆಗೆ ವ್ಯಾಪಿಸುವ ಈ ಹೈಕಮಾಂಡ್ ವಿಷವನ್ನು ನುಂಗಿ ನಗುವ ನಂಜುಂಡ ಸ್ಥಿತಿಯನ್ನು ರಾಜಕೀಯ ಪಕ್ಷಗಳು ಪಡೆದುಕೊಳ್ಳುತ್ತಲೇ ಆಂತರಿಕ ಶಿಸ್ತನ್ನು ಅಂತರ್ಗತ ಮಾಡಿಕೊಂಡಾಗ, ಪ್ರಜಾಪ್ರಭುತ್ವದ ಪ್ರಮುಖ ಪಾಠ ಪ್ರಾರಂಭವಾಗುತ್ತದೆ; ದಾಸ್ಯದಾಸೋಹ ನಿಲ್ಲುತ್ತದೆ.
*****
೨೭-೦೩-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರುಚಿ
Next post ಗಾಳಿ ಬೀಸಲು

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…