ಒಂದಿದ್ದರೊಂದಿಲ್ಲ; ಇಂದಿಗೂ ಎರಡು ಹೊಂ-
ದಿಲ್ಲ; ನಡೆದಿದೆ ಸೃಷ್ಟಿ; ಫಲವೀವ ಅಮೃತ ವೃ-
ಷ್ಟಿಯ ಬಯಸಿ, ಕೊನರುತಿದೆ ಕಮರುತಿದೆ. ಎಲೆಯ ಪಸ-
ರದಲಿ ಕಾಣದಿದೆ ಹೂ-ಹಣ್ಣು, ಪ್ರಥಮ ಪ್ರಾಯ-
ದಲ್ಲಿ ನಾಚಿಗೆ ಮುಸುಗಿ ಸುಕುಮಾರ ಕುಸುಮಸಮ-
ಸಿಂಗಾರವಡಗೆ, ಪುರುಷನನುರಾಗವು ಬಣ್ಣ-
ಗುಂದಿ, ಹಿಮಧವಲ ಶಾಂತಿಯಲಿ, ಚಂದಿರನ ಪಡಿ-
ನೆಳಲ ಕಾಂತಿಯಲಿಹುದು. ಸ್ವಗತ-ತೃಪ್ತನೊ ನಲ್ಲ.
ಹಣ್ಣೆಲೆಯು ಉದುರಲಿರುವಾಗ, ಶಾರದ ಶುಭ್ರ
ಕೌಮುದಿಯು ಕೆಣಕುತಿದೆ ವಿರಸ ಶಿಶಿರವನು, ಮಾ-
ಗಿಯ ದಾಟಿ ಸುಗ್ಗಿ ಕೆಂದಳಿರ, ಹದ ಪಡೆದ ಹೃದ-
ಯದ ಹವಣುಗೊಂಡ ಸತಿ ನೇತ್ರಪಲ್ಲವಿಸೀಗ
ಕರೆಯುವಳು. ಹತವಿಧಿಯೆ! ಕದ ತೆರೆಯಲಿಲ್ಲ, ಕದ
ತಟೆದಾಗ; ಕದ ತೆರೆಯೆ, ಆ ಪುರುಷ ಬರಲೊಲ್ಲ.
*****