ಪ್ರಗತಿಶೀಲತೆಯ ದೃಷ್ಟಿಯಿಂದ ಮುಮ್ಮುಖ ಚಲನೆಯಲ್ಲಿ ಸಾಗುತ್ತಿರುವ ಭಾರತದಲ್ಲಿ ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಮುಂತಾದ ಅಭಿಯಾನಗಳು ದೇಶದಾಭಿವೃದ್ಧಿಗೆ ಬೆಳಕಿನ ಸೂಡಿ ಹಿಡಿಯ ಹೊರಟಿವೆ. ಆದರೆ ಸ್ತ್ರೀಯರ ಸ್ಥಾನಮಾನ ಹಾಗೂ ಅವಕಾಶ ಸಮತೆಯ ವಿಚಾರದಲ್ಲಿ ಹಲವು ಪ್ರಶ್ನೆಗಳು ನಮ್ಮೆದುರು ನಿಲ್ಲುತ್ತವೆ. ವಸ್ತ್ರಸಂಹಿತೆ, ಸಾಮಾಜಿಕ ನಿರ್‍ಬಂಧಗಳು, ಕಡ್ಡಾಯ ವಿವಾಹ, ಮುಂತಾದ ಸಂಗತಿಗಳು ಹೆಣ್ಣಿನ ವ್ಯಕ್ತಿತ್ವ ಹಿಡಿಗೊಳಿಸುವಲ್ಲಿ ಪ್ರಮುಖವಾಗಿವೆ. ಭಾರತದಲ್ಲಿ ಪ್ರಮುಖವಾಗಿ ಹಳ್ಳಿ ಪಟ್ಟಣವೆನ್ನದೇ ಎಲ್ಲ ಕಡೆಗಳಲ್ಲೂ ಸ್ತ್ರೀಯರ ಸ್ಥಾನಮಾನ ಇಂದಿಗೂ ಅಂತಹ ಬದಲಾವಣೆಯನ್ನು ಕಂಡಿಲ್ಲ. ಇದಕ್ಕೆ ಉದಾಹರಣೆಗಳು ಹಲವಾರು, ವಿಧವೆ ಪಟ್ಟ, ಋತುಮತಿಗೆ ತಿಂಗಳ ಮೂರು ದಿನಗಳ ಅಸ್ಪೃಶ್ಯತೆ, ಬಾಲ್ಯ ವಿವಾಹಗಳು, ದೇವದಾಸಿ ಪದ್ಧತಿಗಳು ಹೀಗೆ ಪಟ್ಟಿ ಬೆಳೆಯುತ್ತದೆ.
ಋತುಮತಿಯಾದವಳನ್ನು ಮೂರು ದಿನಗಳವರೆಗೆ ಮನೆಯಿಂದ ಹೊರಗೆ ಇಡುವ ಪದ್ಧತಿ ಭಾರತದ ಅದರಲ್ಲೂ ಹಿಂದೂ ಸಂಸ್ಕೃತಿಯ ಪುರಾತನ ಸಂಪ್ರದಾಯ. ಆ ಪದ್ಧತಿಯು ಇಂದಿಗೂ ಭಾರತದಲ್ಲಿ ಆಚರಣೆಯಲ್ಲಿದೆ. ಭಾರತದಂತೆ ಹಿಂದೂ ರಾಷ್ಟ್ರವಾದ ನೇಪಾಳದಲ್ಲಿ ಈದೀಗ ಹೊಸ ಕಾಯ್ದೆಯನ್ನು ಪಾಸು ಮಾಡಿದೆಯಂತೆ. ಅದೆಂದರೆ ಮಹಿಳೆಯರನ್ನು ಈ ಮೂರು ದಿನಗಳು ಒತ್ತಾಯದಿಂದ ಮನೆಯಿಂದ ಹೊರಗಿಡುವುದು ಅಪರಾಧವೆಂದು. ಹಾಗೊಮ್ಮೆ ಇರುವಂತೆ ಹೇಳಿದರೆ ಅಂಥವರಿಗೆ ಮೂರು ತಿಂಗಳ ಶಿಕ್ಷೆ ಇಲ್ಲವೇ ಮೂರು ಸಾವಿರ ರೂಪಾಯಿ ದಂಡ ವಿಧಿಸುವ ಕಾಯ್ದೆ ಇದಾಗಿದ್ದು, ಕಾಯ್ದೆಗೆ ಸಂಸತ್ತಿನಲ್ಲಿ ಅವಿರೋಧ ಅಂಗೀಕಾರ ದೊರೆತಿದೆಯಂತೆ. ಯಾಕೆಂದರೆ ನೇಪಾಳದ ಅನೇಕ ಜನಾಂಗಗಳಲ್ಲಿ ಈ ಪದ್ಧತಿ ಇನ್ನೂ ಜೀವಂತವಾಗಿದೆ ಎಂಬುದು. ಋತುಮತಿಯಾದ ಹೆಣ್ಣನ್ನು ಅಶ್ಪೃಶ್ಯಳಂತೆ ಕಾಣುವುದು ಸಾಮಾಜಿಕ ತಾರತಮ್ಯದ ಇನ್ನೊಂದು ಮುಖವೇ ಆಗಿದೆ. ಈ ಕಾಯಿದೆ ಬಲಿಷ್ಟ ಪ್ರಜಾಪ್ರಭುತ್ವ ರಾಷ್ಟ್ರವಾದ ಜಾತ್ಯಾತೀತ ಭಾರತಕ್ಕೂ ಆದರ್‍ಶಪ್ರಾಯವಾದರೆ ಒಳಿತು.
ಆದರೆ ಭಾರತದಲ್ಲಿ ಈ ಪದ್ಧತಿಯನ್ನು ಬರಿಯ ಹಿಂದೂಗಳೆನ್ನದೇ ಕೆಲವೊಂದು ಅನ್ಯ ಧರ್‍ಮೀಯರೂ ಅನುಸರಿಸುತ್ತಿರುವುದು ಇನ್ನೂ ಸೋಜಿಗ. ಹೀಗಾಗೇ ಭಾರತದಲ್ಲಿ ಸ್ತ್ರೀ ಸ್ಥಾನದ ಸ್ಪಷ್ಟ ಚಿತ್ರಣ ದೊರೆಯುತ್ತದೆ ಅಲ್ಲವೇ? ಹಿಂದೆಲ್ಲಾ ಅದೇ ತಿಂಗಳ ಮೂರು ದಿನಗಳು ಅಮ್ಮಂದಿರೆಲ್ಲಾ ಪ್ರತಿ ತಿಂಗಳು ಕಾಗೆ ಮುಟ್ಟಿತೆಂದು ಹೊರಗೆ ಕುಳಿತುಕೊಳ್ಳುತ್ತಿದ್ದರು. ಆ ಮೂರು ದಿನಗಳು ಅವರಿಗೆ ಮನೆಗೆಲಸದ ಹೊರೆಯಿಂದ ಮುಕ್ತಿ ಸಿಗುತ್ತಿತ್ತು ಎಂದರೆ ಅದು ಸುಳ್ಳೆ ಆಗಿರುತ್ತಿತ್ತು. ಹೊಲ ಗದ್ದೆಗಳ ಕೆಲಸಗಳ ಒತ್ತಡ ಕಡಿಮೆಯಿರಲಿಲ್ಲ. ಅದು ಹೇಗೋ ಏಗುತ್ತ ಬೀಳುತ್ತಾ ಬದುಕ ಸವೆಸಿದ ಅವರೆಲ್ಲ ಪುರುಷ ಪ್ರಧಾನತೆಯ ದಮನಕಾರಿ ಪ್ರವೃತ್ತಿಯಿಂದ ಸ್ವಂತಿಕೆಯನ್ನು ವ್ಯಕ್ತಗೊಳಿಸಲು ಸಾಧ್ಯವಾಗದೇ ಮಹಾನ್ ಸಹನಾಶೀಲ ಮಹಿಳೆಯರು ಎಂದೆನ್ನಿಸಿಕೊಂಡರು. ಇಂದಿಗೂ ಈ ಪದ್ಧತಿ ಬುಡಸಮೇತವಾಗಿ ನಿರ್‍ನಾಮವಾಗಿಲ್ಲ. ಅನೇಕ ಸಮುದಾಯಗಳಲ್ಲಿ ಹಳ್ಳಿಗಳಲ್ಲಿ ಜೀವಂತವಾಗೇ ಇರುವುದು.
ಇನ್ನು ಮನೆಗಳಲ್ಲಿ ಸ್ವಚ್ಚತೆಯ ಕಾರಣ ನೀಡಿ ಋತುಮತಿಯಾದ ಹೆಣ್ಣು ಆ ಮೂರುದಿನಗಳು ಅನ್ಯರ ಸಂಗದಿಂದ ಹೊರಗುಳಿಯುವಂತೆ ಮಾಡುವ ಪ್ರಯತ್ನವಾಗಿತ್ತೆಂದು, ಪತಿಪತ್ನಿ ಆ ಸಂದರ್‍ಭದಲ್ಲಿ ಕೂಡುವುದು ಅಹಿತಕರವಾದ ಕಾರಣ ಆ ಹಿನ್ನೆಲೆಯಲ್ಲಿ ಹುಟ್ಟಿದ ಸಂಪ್ರದಾಯವೆಂದು ಹೇಳಿ ಸಂಪ್ರದಾಯತ್ವವನ್ನು ಎತ್ತಿಹಿಡಿವ, ಮತ್ತು ಇಂತಹ ಹುರುಳಿಲ್ಲದ ವೈಜ್ಞಾನಿಕ ಕಾರಣ ನೀಡಿ ಅದನ್ನು ಸಮರ್‍ಥಿಸುವ ಪ್ರತಿಪಾದಕರು ಇಲ್ಲದಿಲ್ಲ. ಹಾಗಿದ್ದರೆ ಅವಿವಾಹಿತ ಮುಗ್ಧ ಬಾಲೆಯರಿಗೂ ಈ ಶಿಕ್ಷೆಯೇಕೆ? ಎಂಬ ಪ್ರಶ್ನೆಗೆ ಉತ್ತರವಿದೆಯೇ? ಅವರೇನೆ ವಾದಿಸಿದರೂ ಅದರ ಮೂಲ ಕಾರಣ ಸ್ತ್ರೀಯ ವ್ಯಕ್ತಿತ್ವವನ್ನು ಕೀಳರಿಮೆಗೆ ಗುರಿಪಡಿಸುವುದೇ ಆಗಿತ್ತೆಂಬುದು ಅಷ್ಟೇ ಸತ್ಯ. ಗಂಡೇನೂ ಪ್ರಾಣಿಯಲ್ಲ. ಅವನಿಗೂ ಪತ್ನಿಯ ದೈಹಿಕ ಬಾಧೆಗಳ ಅರಿವಿರುವುದು. ಅಂತಹ ಹೆಣ್ಣನ್ನು ಭೋಗಿಸಲು ಆತನೇನು ಮತಿಭ್ರಮಣನೇ? ಎಂಬ ಪ್ರಶ್ನೆ ಕೇಳಬೇಕಾದೀತು. ಹಾಗಿದ್ದ ಮೇಲೆ ಮುಟ್ಟಾದ ಹೆಣ್ಣನ್ನು ಮನೆಯಿಂದ ಹೊರಗಿಡುವುದು ಅವೈಜ್ಞಾನಿಕ. ರೋಗಿಯನ್ನು ಒಳಗಿಟ್ಟು ಶುಷ್ರೂಷೆ ಮಾಡುವ ಸಮಾಜ ಮುಟ್ಟಾದ ಹೆಣ್ಣನ್ನು ರೋಗಾಣುಗಳ ಗೂಡೆಂದು ಕರೆದು ಹೊರಗಿಡುವುದು ಪ್ರತ್ಯೇಕತೆಯ ತಂತ್ರವೇ ಅಲ್ಲವೇ? ಇನ್ನು ದೇವಾಲಯಗಳಲ್ಲಿ ಬಹಿಷ್ಠೆಯಾದ ಹೆಣ್ಣು ಒಳಹೋಗುವಂತಿಲ್ಲ. ಈ ಆಚಾರ ನಮ್ಮಲ್ಲಿ ಪರಂಪರಾಗತವಾಗಿ ರೂಢಿಯಲ್ಲಿದೆ. ನೈರ್‍ಮಲ್ಯದ ಕಾರಣ ಸರಿಯಾದರೂ ಪುರುಷ ಶರೀರವೂ ಕೂಡ ಅನೇಕ ತ್ಯಾಜ್ಯಗಳ ವಿಸರ್‍ಜಿಸುವುದಿಲ್ಲವೇ? ಬೆವರು ಕೂಡಾ ಅಂತಹ ಮಲೀನವೇ ಅಲ್ಲವೇ? ಯಾವ ಮಲೀನತೆ ಉಂಟಾಗದಂತೆ ಮುತುವರ್‍ಜಿ ವಹಿಸಿಯೇ ಹೆಣ್ಣು ನಡೆದುಕೊಳ್ಳುತ್ತಾಳೆ. ಆದರೂ ತಿಂಗಳ ಮುಟ್ಟು ಆಕೆಯನ್ನು ಸಾಮಾಜಿಕ ವಾಗಿ ಬಹಿಕರಿಸುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಋತುಮತಿಯಾದ ಹೆಣ್ಣಿನ ಉಪಸ್ಥಿತಿ ನಿಷಿದ್ಧ.
ಬಹಿಷ್ಠೆಯಾದ ಚಿಕ್ಕ ಬಾಲಕಿಯರನ್ನು ಹಿಂದೆ ಮನೆಯಿಂದ ಹೊರಗೆ ಕುಳ್ಳರಿಸುತ್ತಿದ್ದರು. ಇಂದಿಗೂ ಆ ಪದ್ಧತಿ ನಮ್ಮಲ್ಲಿ ಕೆಲವು ಕಡೆ ಜೀವಂತವಿದೆ. ಇನ್ನು ಚಿಕ್ಕ ಬಾಲೆಯರಿಗೆ ತಿಂಗಳ ಮುಟ್ಟು ನಿಜಕ್ಕೂ ಕಿರಿಕಿರಿಯ ಸಂಗತಿ. ಅಂತಹ ಎಳೆಯ ಪ್ರಾಯದ ಮಗುವನ್ನು ಬಾಲ್ಯದಲ್ಲಿಯೇ ನೀನು ಹೊರಗೆ ಕೂತು ಮೂರುದಿನಗಳ ಕಳೆಯ ಬೇಕೆಂದರೆ ಸಹಜವಾಗೇ ಆಕೆಯ ಮಾನಸಿಕ ಜಗತ್ತು ಏರುಪೇರಾಗುತ್ತದೆ. ತಾನೇನು ತಪ್ಪುಮಾಡದೇ ಇದ್ದರೂ ಹೆತ್ತವರ ನಡುವೆ ಹುದುಗಿ ಮಲಗುತ್ತಿದ್ದ ಕಂದ ಪ್ರಾಯದ ಪ್ರಕೃತಿ ಸಹಜ ಪೃಕ್ರಿಯೆಗೆ ತೆರೆದುಕೊಳ್ಳುವುದು ಅನಿವಾರ್‍ಯ. ಈ ನಿಸರ್‍ಗದ ಸಹಜ ಪ್ರಕ್ರಿಯೆಗೆ ಹುಡುಗಿ ಸಿದ್ಧಳಾದರೂ ಈ ಸಮಾಜದ ಕಟ್ಟಳೆಗಳಿಗೆ ಆ ಮುಗ್ಧ ಹೃದಯ ಬಲಿಪಶುವಾಗುವುದು ಎಷ್ಟು ನ್ಯಾಯ? ತನ್ನನ್ನು ಅಸ್ಪೃಶ್ಯಳಂತೆ ನಡೆಸಿಕೊಳ್ಳುವ ಜನರ ಮುಂದೆ ಹೊರಗೆ ನಿಲ್ಲುವ ಆ ಸಮಯ ಬಂತೆಂದರೆ ಆಕೆ ಕುಗ್ಗಿ ಹೋಗುತ್ತಾಳೆ. ಸಧೃಢ ಮನಸ್ಸು ಕ್ರಮೇಣ ದುರ್‍ಬಲಗೊಳ್ಳಬಹುದು. ಇವೆಲ್ಲವೂ ಉದ್ದೇಶಪೂರ್‍ವಕ ಕಟ್ಟಳೆಗಳೆಂಬುದು ಗೋಚರಿಸುತ್ತದೆ. ಚಿಕ್ಕ ಮಗುವಿಗೆ ಋತುಸ್ರಾವದ ಬಗ್ಗೆ ಅನುಭವವಿಲ್ಲದ ಮೊದಲ ಹಂತ ಅದು. ಬಿಂದಾಸ ಆಗಿ ಬದುಕುತ್ತಿದ್ದ ಹೆಣ್ಣು ಮಗು ಕ್ರಮೇಣ ಹೆಣ್ಣಾಗುವ ಹೆಣ್ಣಿನ ನಯವಿನಯ ಆವಾಹಿಸಿಕೊಳ್ಳುವ ಸಮಯ. ಆಗ ತಿಂಗಳು ತಿಂಗಳು ಆ ದಿನಗಳ ಕಳೆಯುವುದೆಂದರೆ ಎಂತಹ ಹಿಂಸೆ. ಮತ್ತು ಆ ಪ್ರಾಯದಲ್ಲಿ ಅದು ಎಲ್ಲರಿಗೂ ಮೂರು ದಿನಗಳಿಗೆ ಸೀಮಿತವಾಗಿರುವುದಿಲ್ಲ. ಏಳೆಂಟು ದಿನಗಳಾದರೂ ನೋವು, ಹಿಂಸೆ, ಅಸಹಾಯಕತೆ ಅನುಭವಿಸಲೇಬೇಕು. ಅದನ್ನೂ ತಿಂಗಳು ತಿಂಗಳೂ ಉಣ್ಣಬೇಕು. ಯಾರ ಹತ್ತಿರವೂ ಹೇಳಿಕೊಳ್ಳದೇ ನುಂಗುತ್ತಾ ನವೆಯುತ್ತಾ ಹೆಣ್ಣು ಮಕ್ಕಳೂ ಅದು ಹೇಗೆ ಬದುಕು ಸವೆಯುತ್ತಾರೆ. ಪಾಪ. ಆದರೆ ಕ್ರಮೇಣ ಆ ಚಕ್ರಕ್ಕೆ ಹೊಂದಿಕೊಳ್ಳುತ್ತಲೇ ಹೋದರೂ ಅದು ದೈಹಿಕ ಕೀಳಿರಿಮೆಯನ್ನಷ್ಟಲ್ಲದೇ ಮಾನಸಿಕ ಖಿನ್ನತೆಯನ್ನು ಮೂಡಿಸುತ್ತವೆ.
ಇಂತಹ ದೈಹಿಕ ಪೀಡನೆಯ ಆ ಸಮಯದಲ್ಲಿ ಸಮಾಜದ ಗೊಡ್ಡು ಸಂಪ್ರದಾಯಗಳು ಆಕೆಯ ವ್ಯಕ್ತಿತ್ವವನ್ನು ಪ್ರಫುಲ್ಲಿತಗೊಳ್ಳಲು ಬಿಡದೆ ಸಂಕೋಲೆಗಳಿಂದಲೇ ಬಂಧಿಸಬಯಸುವುದು ಎಷ್ಟು ಸಮಂಜಸ? ಬದುಕಿನ ಆಸರೆಗೆ ಅನುಕೂಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ಅಗತ್ಯತೆಯ ಅರಿವು ನಮಗೆ ನಮ್ಮ ಕನಸುಗಳ ಸಾಕಾರಕ್ಕೆ ಕೃತಿಯನ್ನು ಸಿದ್ಧಗೊಳಿಸಿಕೊಳ್ಳುವ ಸಾಮರ್‍ಥ್ಯವನ್ನು ಆಂತರಿಕ ಸ್ಥೈರ್‍ಯ ಸ್ಫುರಿಸುವಂತಿರಬೇಕು. ಆದರೆ ಇಲ್ಲಿ ಹಾಗಾಗದೇ ಹೆಣ್ಣು ಕುಬ್ಜಳಾಗುತ್ತ ಹೋಗುವಂತೆ ವಲಯವನ್ನು ನಿರ್‍ಮಿಸಲಾಗುತ್ತದೆ. ಹೆಣ್ಣು ನಿಸರ್‍ಗದ ಸುಂದರ ಸೃಷ್ಟಿ. ಆಕೆ ಪ್ರಕೃತಿ. ಹೊರುವ ಹೆರುವ ಸಾಮರ್‍ಥ್ಯ ಇರುವವಳು. ತಾಳಿಕೆ ಸಹನೆ ಹೀಗೆ ಇತ್ಯಾದಿ ಇತ್ಯಾದಿ ಆಕೆಯ ಬಗ್ಗೆ ಉಪಮೆ ರೂಪಕಗಳು ಹೇರಳ. ಹೋದಲ್ಲಿ ಬಂದಲ್ಲಿ ಇವುಗಳ ಕೇಳಿದಾಗಲೆಲ್ಲಾ ಹೆಣ್ಣು ಹಿಗ್ಗುತ್ತಾಳೆ. ಯಾಕೆಂದರೆ ಪ್ರಕೃತಿಯ ದೃಷ್ಟಿಯಲ್ಲಿ ಪುರುಷನಿಗಿಂತ ಸ್ತ್ರೀ ಶ್ರೇಷ್ಟಳು. ಆದರೆ ಅದೇ ಸಾಮಾಜಿಕ ಕಟ್ಟಳೆಗಳಿಂದ ಪ್ರಕೃತಿಯ ಪಡಿಪಾಟಲೋ ಆಕೆ ಮಾತ್ರ ಬಲ್ಲಳು. ಹೀಗಾಗಿ ಆಕೆಯ ಪರಿಪೂರ್‍ಣ ವ್ಯಕ್ತಿತ್ವ ಪ್ರಫುಲ್ಲಿಸಲು ಬೇಕಾದ ಅಗತ್ಯತೆಯ ಇನ್ನೊಂದು ಹೆಣ್ಣು ಅರ್‍ಥೈಸಿಕೊಂಡು ಆಕೆಗೆ ಬೆಂಬಲವಾಗಿ ನಿಲ್ಲಬೇಕಾಗಿದೆ. ಪುರುಷನಿಗೆ ಹೆಗಲೆಣೆಯಾಗುವಲ್ಲಿ ಪುರುಷ ಕೂಡಾ ಆಕೆಯ ಉದ್ಧಾರಕ್ಕೆ ಕೈಜೋಡಿಸಿದರೆ ಸರ್‍ವತೋಮುಖ ಅಭಿವೃದ್ದಿಯ ಕನಸು ನನಸಾಗಬಹುದು.
*****