ಗತ ಶತಮಾನದ ಕೊನೆಯ ದಿನಗಳ ಮಾತು. ಸೂಳೆಗಾರಿಕೆಯನ್ನು ತೊಡೆದು ಹಾಕಬೇಕೆಂಬ ಒಂದು ಉದ್ರೇಕದ ಭಾವ ಸಮಾಜವನ್ನೆಲ್ಲಾ ಅವರಿಸಿತ್ತು. ಚೆನ್ನ ರಾಷ್ಟ್ರ (ಹಳೆಯ ಮದ್ರಾಸು ರಾಷ್ಟ್ರ) ದ ತುಂಬಾ ಇದೇ ಚಳುವಳಿ. ತರಂಗದಂತೆ ದೇಶವನ್ನೆಲ್ಲಾ ಮುಳುಗಿಸಿ ಒಳ್ಳೆಯ ಸಮಯವನ್ನು ನೋಡಿಕೊಂಡೇ ಮೇಲೇರಿ ಬಂದಿದೆ. ಓ ಎಂಬ ಪಟ್ಟಣಕ್ಕೆ, ಓ ಎಂಬುದು ಆ ಜಿಲ್ಲೆಯಕೇಂದ್ರ ನಗರ. ಈ ನಾಚ್ ಸಮಸ್ಯೆಯ ಬಗ್ಗೆ ಕಾಲೇಜ್ ಎಂಗ್ ಮೆನ್ಸ್ ಯೂನಿಯನ್ ರವರು ವಾರಗಳ ಗಟ್ಟಲೇ ತೀವ್ರವಾಗಿ ಚರ್ಚೆ ನಡೆಸುತ್ತಿದ್ದರು. ವಾದ ಪ್ರತಿಪಾದಗಳು. ಖಂಡನೆ ಮಂಡನೆಗಳು ಹೆಚ್ಚುಹೆಚ್ಚಾಗಿ ನಡೆಯುತ್ತಿದ್ದವು. ಕಟ್ಟೆಕಡೆಗೆ ಪಟ್ಟಣದಿಂದ ಯಾರೋ ಒಬ್ಬ ಮಹಾ ವಾಜ್ಞ್ಮಿ ಉದ್ರೇಕಿ ಬಂದ, ಅನರ್ಗಳವಾಗಿ ಪ್ರಸಂಗಮಾಡಿ, ಈ ತಂಟೆಯನ್ನು ತೇಲಿಸಿ ಬಿಡುತ್ತಿದ್ದ. ಅವರ ಪ್ರಸಂಗವನ್ನು ಕೇಳಿದ ಎದುರುಪಕ್ಷದವರಿಗೆ ಎದೆಗಳು ಅಲುಗಾಡುವಂತೆ ಆಗುತ್ತಿತ್ತು. ಸ್ವಪಕ್ಷದವರು ಬಲಗೊಳ್ಳುತ್ತಿದ್ದರು. ಓ ನಗರದ ನಾಚ್ ಸಮಸ್ಯಗೆ ವ್ಯತಿರಿಕ್ತವಾದ ಸಿದ್ಧಾಂತಗಳೆಲ್ಲವೂ ಪೂರ್ವಪಕ್ಷ ವಾಗುತ್ತಿದ್ದವು. ಅಷ್ಟರಿಂದ ಯುವಜನಾಂಗಕ್ಕೆ ಎಲ್ಲಿಲ್ಲದ ಉತ್ಸಾಹವು ಉಕ್ಕಿ ಬಂದು ನಾಚ್ ಸಮಸ್ಯೆ ಎಂದರೇನೇ ಸಾಕು ಕಿವಿ ಕತ್ತರಿಸಿಕೊಳ್ಳುತ್ತಿದ್ದರು.
ಯುವಜನಾಂಗದಲ್ಲಿ ಏರ್ಪಡುತಿದ್ದ ಏಕಾಭಿಪ್ರಾಯವು ದೂಡ್ಡವರಲ್ಲಿ ಮಾತ್ರ ಕುದುರುತ್ತಲೇ ಇರಲಿಲ್ಲ. ಹಿಂದೂ ಕಾಲೇಜ್ ಪ್ರಿನ್ಸ್ ಪಾಲರು ಅಂತಹಾ ವಿದ್ಯಾಸಂಪನ್ನನಹುದಲ್ಲವೇ! ಮರ್ಯಾದೆ, ಮಪ್ಪಿತ, ಸರಳಸ್ವಭಾವ ದೊಡ್ಡ ಹುದ್ದೆ, ಹುದ್ದೆಗೆ ತಕ್ಕಂತ ಆದರ್ಶ ಎಲ್ಲವನ್ನೂ ಉಳ್ಳವರೇ! ಅವರ ನಡವಣೆ ನೋಡಿ ಎಲ್ಲರೂ ಅವರನ್ನು ಗೌರವಿಸ್ತುತ್ತಾರೆ. ಶೀಲಸಂಪನ್ನನೆಂದು ಮನ್ನಣೆ ನೀಡುತ್ತಾರೆ. ಆದರೆ ಅವರಿಂದ ಈ ಚಳುವಳಿ ದೂರವಾಗಿಯೇ ಉಳಿದಿದೆ. ಯಾಂಟೀನಾಚ್ ಎಂಬುದು ಇರಲೇಬೇಕಾದ ಸೆಂಟಿಮೆಂಟೇ! ಅದರಲ್ಲಾವ ಆಕ್ಷೇಪಣೆಯೂ ಇಲ್ಲ. ಆದರೆ ಅದಕ್ಕಾಗಿ ಯಾವು ಯಾವೋ ನಿಯಮಗಳು, ಶಪಥಗಳು ಮಾಡುವುದೆಂದರೆ ಪರಮ ಹೇಸಿಗೆ. ಸೆಂಟಿಮೆಂಟು ಒಳ್ಳೆಯದೆಂದು ಹೇಳುತ್ತಲೇ ಮತ್ತೆ ಇದೇನು ವೇಷ? ವಿಚಿತ್ರವಾಗಿದ್ದ ಈ ಧೋರಣಿ ಯಿಂದ ಸಮಾಜ ಸುಧಾರಕರು ಪ್ರಿನ್ಸಿಪಾಲರನ್ನು ತಮ್ಮ ಪಂಗಡದವನೆಂದು ಜಮಮಾಡಿಕೊಳ್ಳಲಿಲ್ಲ. ಮೇಲಾಗಿ ಖರ್ಚು ಬರೆದಿದ್ದರು.
ವಕೀಲರಲ್ಲಿ ಕೆಲವರಿಗೆ ಈ ಚಳುವಳಿ ಬಹಳ ಉನ್ನತವಾದದ್ದೆಂದೇ ಕಂಡಿತ್ತು. ಆಶಯಗಳೆಷ್ಟು ಮಹತ್ತರವಾದಂತವುಗಳಾದರೂ, ತಾವು ಮಾತ್ರ, ಈ ವಾದದ ಬಗ್ಗೆ ಸುಮುಖತೆ ಯನ್ನು ವ್ಯಕ್ತಪಡಿಸಲಾರೆವೆಂದು ಕೆಲವರು ತಿಳಿಸಿದರು. ಅದೇನೆಂದರೇ “ನಮಗೆ ಬರುವ ಕಕ್ಷಿಗಳಲ್ಲಿ ಅತ್ಯಧಿಕ ಬಾಗವು ಈ ಭೋಗದ ಹೆಣ್ಣುಗಳೇ ಅಲ್ಲವೇನೂ! ಅಂದಾಗ ಸುಧಾರಣೆಗೆ ತೊಡುಗುವುದೆಂದರೆ ಆ ಹೆಣ್ಣುಗಳ ಕಂಠಗಳನ್ನು ಒದ್ದೆ ಬಟ್ಟೆಯಿಂದ ಕೋಯುವದೇ ಅಲ್ಲವೇನು? ” ಎಂದು ಬದುಲಿತ್ತರು.
ಸೀತಾಪುರದ ಬಾರ್ ನಲ್ಲಿ ಸ್ವಲ್ಪ ಗೊಂದಲವಾಯಿತು. ಬಾರ್ ನ ನಾಯಕ ತಕ್ಕ ಮಟ್ಟಿಗೆ ಒಳ್ಳೆಯವನೇ! ಇದ್ದುದಿದ್ದಂತೆ ತನ್ನ ಮನದಲ್ಲಿಯ ಅಭಿಪ್ರಾಯವನ್ನು ಹೇಳಬಲ್ಲ ಅವನ ಧೈರ್ಯವನ್ನು ಎಲ್ಲರೂ ಮೆಚ್ಚುತ್ತಾರೆ. ಒಂದು ದಿನದ ಸಂಜೆ ಟೆನ್ನಿಸ್ ಕ್ಲಬ್ ನಲ್ಲಿ ಈ ವಿಷಯವು ಪ್ರಸ್ತಾಪಕ್ಕೆ ಬರಲು, ಹಗಲೆಲ್ಲಾ ತಾನು ಯಾಂಟೀನಾಚ್ ಎಂದು ರಾತ್ರಿಯಲ್ಲಿ ಪ್ರೋನಾಚ್ ಎಂದೂ ಯಾವ ಬೇಷಜವೂ ಇಲ್ಲದೆ ಖಂಡಿತವಾಗಿ ಹೇಳಿಬಿಟ್ಟನು. ಎರಡು ಕಡೆಯ ಪಕ್ಷದದವರಿಗೆ ಇದು ಗೌರವಪ್ರದವಾದ ಹೊಂದಿಕೆ ಎಂದು ಮಿತ್ರರೆಲ್ಲಾ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬಾರ್ ನಾಯಕನ ತಿಳುವಳಿಕೆಯನ್ನು ಅಭಿನಂದಿಸಿದರು.
ಆ ಊರಿನ ಕಾಲೇಜ್ ನಲ್ಲಿ ರಂಗನಾಥಯ್ಯನವರು ಪ್ರೊಫೆಸರಾಗಿ ಕೆಲಸ ಮಾಡಿತ್ತಿದ್ದಾರೆ. ಒಳ್ಳೆಯ ಸಂಸ್ಕಾರವಂತರು. ಉನ್ನತ ಭಾವೋದ್ರೇಕಿ, ಸಮಾಜ ಸಂಸ್ಕರಣೋತ್ಸಾಹಿ. ಮಾನವರಲ್ಲಿ ಶಾರೀರಕ ಮತ್ತು ಮಾನಸಿಕ ದೌರ್ಬಲ್ಯಗಳು ಇವೆ ಎಂದು ಕೇಳುವುದೂ ಅವರಿಗೆ ಜಿಗುಪ್ಸೆಯಾಗಿತ್ತು. ಅನ್ಯಾಯವನ್ನೂ, ಅನೀತಿಯನ್ನೂ ಯಾವ ರೂಪದಲ್ಲಿದ್ದರೂ ಆಯ್ದು ಎಸೆಯಬೇಕೆಂಬುವ ಛಲವು ಅವರ ಕಣಕಣದಲ್ಲೂ ಕಾಣುತ್ತದೆ. ಊರಿನಲ್ಲಿ ಕೆಲವರು ವಿದ್ಯಾವಂತರೇ, ವಕೀಲರೇ, ಪ್ರೋನಾಚ್ ರೆಂದು ಕೇಳುತ್ತಲೇ ಅವರಿಗೆ ಕತ್ತು ಹಿಚುಕುತ್ತಿದ್ದಂತೆ ಭಾಸವಾಯಿತು. ಅದು ಸಹಜವೇ ಇದೆ. ವಕೀಲರ ನೈತಿಕವಾದ ಪತನಾವಸ್ಥೆ ಯನ್ನು ಕಂಡು ಮನಸ್ಸಿನಲ್ಲಿ ಅಲ್ಲಕಲ್ಲೋಲವಾಯಿತು! ಕೂಡಲೇ ಕ್ಲಾಸ್ ರೂಂನಲ್ಲಿ ನೀತಿನಿಯಮಗಳಿಲ್ಲದ ವಕೀಲರ ಕಸುಬಿನ ಮೇಲೆ ಸುನಾಮಿಯಂತೆ ಎರಗಿ ವಿಮರ್ಶೆ ಮಾಡಲಾರಂಭಿಸಿದನು. ತಮ್ಮ ಕ್ಲಾಸ್ ರೂಂ ನಲ್ಲಿ ರಂಗನಾಥಯ್ಯರು ತಮ್ಮನು ಅಲ್ಲಗೆಳೆಯುತ್ತಿದ್ದಾನೆಂಬ ವಿಷಯ ಊರಲ್ಲಿ ತಿಳಿದುಬಂತು. ಜಿಲ್ಲಾ ಮುನ್ಸೀಫರ ಕಿವಿಗೂ ಅದು ತಾಕಿತು. ಅವನಿಗೆ ಅರಿಕಾಲಿನ ಉರಿ ತಲೆಯಮೇಲೇರಿ ಕುಣಿಯಲಾರಂಭಿಸಿದನು. ಅರ್ಥಪರ್ಥವಿರದ ಮಾತುಗಾರರು ಶಾಲೆಯ ಹುಡುಗರು ಅತ್ಯಂತ ಪ್ರಾಮುಖ್ಯತೆ ಯುಳ್ಳ ಸಾಮಾಜಿಕ ಸಮಸ್ಯೆಗಳ ಮೇಲೆ ತಾವೇ ತಕ್ಕವರಂತೆ ಅಭಿಪ್ರಾಯಗಳು ಹೊರಡಿಸುವುದು, ಪ್ರಮಾದಕರ , ಶಾಲೆಯ ಪುಸ್ತಗಳ ಮೇರೆಗಳನ್ನಾದರೂ ದಾಟಿದ ಇವರು ಇಂತಹ ಸಮಸ್ಯೆಗಳಲ್ಲಿ ತಲೆ ದೂರಿಸುವುದು ಏಕೆ ಎಂಬ ಆಶ್ಚರ್ಯವನ್ನು ಪ್ರಕಟಿಸಿದನು. ಆಶ್ಚರ್ಯವು ಕ್ರೋಧವಾಗಿ ಮಾರ್ಪಟ್ಟಿತ್ತು. ಇದಕ್ಕೆ ತಕ್ಕ ಕಾರಣ ವಿಲ್ಲದೆ ಇಲ್ಲ. ಅವರ ಹೆಂಡತಿ ಬಹಳ ಒಳ್ಳೆಯಯವಳು. ನೆಮ್ಮದಿ ಉಳ್ಳವಳು. ಪರದೆಯನ್ನು ಸರಿಸಿ ಹೊರಗೆ ಇಣಿಕಿ ನೋಡದ ಮಾನವತಿ. ಅವಳ ಜನಾನಾ ಜೀವನದಲ್ಲಿ ಇಷ್ಟೊಂದು ನಿಸ್ತಬ್ದತೆ ಹೆಪ್ಪುಗಟ್ಟಿರುವುದು ಮುನ್ಸೀಫರಿಗೆ ಎಳ್ಳಷ್ಟೂ ಇಷ್ಟವಾಗಿರಲಿಲ್ಲ. ಅದಕ್ಕೆ ಮದ್ದೆಂಬಂತೆ ನಾಜೂಕಾದ ಸಾನಿಯಾದ ಹುಡಿಗಿಯನ್ನು ಸಂಪಾದಿಸಿ ಕಾಲಕ್ಷೇಪಕ್ಕಾಗಿ ಹೆಂಡತಿಯ ಜೊತೆಗಿರಿಸಿ ಕೊಂಡಿದ್ದರು. ಒಬ್ಬಾನೊಬ್ಬ ಜಿಲ್ಲಾ ಮುನ್ಸಿಫರ ಮೂಢಭಾವಗಳೆಂದು ಅಲ್ಲಗೆಳೆಯುತ್ತಾ ತೀವ್ರವಾದ ವಿಮರ್ಶನಾ ಪ್ರಬಂಧವೊಂದು ಮರುದಿನ ಸ್ಥಾನಿಕ ದೈನಿಕದಲ್ಲಿ ಹೊರಬಂತು! ಮುನ್ಸಿಫರೊಬ್ಬರನ್ನೇ ಅಲ್ಲದೇ ಪ್ರೋನಾಚ್ ವಕೀಲರನ್ನೆಲ್ಲಾ ಮಾತೃದೇಶ ವಿದ್ರೋಹಿಗಳಂತೆ ಆ ದೈನಿಕ ಚಿತ್ರಿಸುವುದು ಆರಂಭಿಸಿತು. ಆ ಪ್ರಬಂಧ ಕರ್ತರು ಪ್ರೊಫೆಸರರೇ ಆಗಿದ್ದರು.
ಆ ಪ್ರಬಂಧವು ಹಿರಿಯರಲ್ಲಿ ದೊಡ್ಡ ಸಂಚಲನವನ್ನೇ ಉಂಟುಮಾಡಿತು. ಊರಿನಲ್ಲಿ ಗೊಂದಲ ಹೆಚ್ಚಾಯಿತು. ಎಲ್ಲಿ ನೋಡಿದರೂ ಇದೇ ಚರ್ಚಿಯಾಗಲಾರಂಭಿಸಿತು. ಅದರಿಂದ ಊರೇ ಗೊಂದಲಮಯವಾಯಿತು. ಮುನ್ಸಿಪಲ್ ಕೌನ್ಸಿಲ್ನಲ್ಲಿ ದೇವಸ್ಥಾನದ ಬೋರ್ಡುಗಳಲ್ಲಿ ಸದಸ್ಯರ ನಡಿವೆ ವಾದೋಪವಾದಗಳೆದ್ದು ಎರಡು ಬಣಗಲಾಗಿ ಸೀಳಿ ಹೋದವು. ಕೆಲವರು ಪ್ರೋನಾಚ್ ಯವರು ಮತ್ತು ಕೆಲವರು ಯಾಂಟೀ ನಾಚ್ ಯವರು. ಎರಡು ಬಣಗಳಲ್ಲಿ ವಾದವು ಮೀರಿ ಹೋಗಿ ಕಟ್ಟಕಡೆಗೆ ಕೈಕೈ ಮಿಳಾಯಿಸುವವರೆಗೂ ಸಾಗಿತು. ಈ ಉದ್ರಿಕ್ತ ಪರಿಸ್ಥಿತಿಗಳನ್ನು ತಾಳಲಾರದೆ ಊರೊಳಗಿದ್ದ ಆ ಒಂದು ಕ್ಲಬ್ಬೂ ಎರಡು ಕ್ಲಬ್ಬುಗಳಾಗಿ ಹಣದ ಕೊರೆತೆಯಿಂದ ದಿವಾಳ ತೆಗೆಯುವವೆಂಬ ಸ್ಥಿತಿಯನ್ನು ತಲುಪಿತು. ಏನಾಗುವುದೋ ಎಂದು ಭಯ ತೋರಿಕೊಂಡಿತು. ಭೋಗದ ಹುಡಿಗಿಯರಿಗೆ ಪ್ರೋನಾಚ್ ವಕೀಲರೆಂದರೆ ತಮ್ಮ ಒಡಲನು ಕುಯ್ದು ಕೊಡುವಷ್ಟು ಅಭಿಮಾನವು ಹುಟ್ಟಿಬಂತು . ತಮಗಾಗಿ ತಮ್ಮ ಪ್ರತಿಷ್ಠೆಗಳಿಗಾಕಿ ಎರಡು ಬಣಗಳಾಗಿ ಸೀಳಿಹೋಗಿ ಎಷ್ಟೋ ಸಾಹಸವನ್ನು ತೋರುತ್ತಿರುವರು. ತಮ ಪ್ರಿಯಾಂಗನೆಯರ ಮೇಲೆ ಅವರಿಗೆಷ್ಟು ದಯೆ ಮತ್ತು ಅಭಿಮಾನಗಳೋ! ಇದಕ್ಕೆ ತಕ್ಕ ಪ್ರತಿಫಲವಾಗಿ ಯಥೋಚಿತ ಆನಂದವನ್ನೂ ಪ್ರೋನಾಚ ರವರಿಗೆ ಸಾನಿ ಹುಡಿಗಿಯರು ಅಗಾಗ ಅರ್ಪಿಸ್ತುತ್ತಲೇ ಇದ್ದಾರೆ. ಆದರೆ ಸಂಸ್ಕರಣೆಯ ಸುಧಾರಕರ ಹೆಸರೆಂದರೆ ಸಾನಿ ಹುಡಿಗಿಯರ ಮೈ ಸುಡುತ್ತಲಿತ್ತು. ಅವರಲ್ಲಿ ಅವರು ಸಮಾಜ ಸುಧಾರಕರ ಬಗ್ಗೆ ವ್ಯಂಗ್ಯವಾಗಿ ಮಾತಾಡುತ್ತಿದ್ದರು. ಬಾಜಾಬಜಾಯಿಸುತ್ತಿದ್ದಾರೆ ಯಾಂಟೀನಾಚೆಯರು ಸರಸವರಿಯದ ಮೊರಟು ಮನುಷ್ಯರು. ಇಂದೆಂತಾ ಕರ್ಮ ಇವರ ಮುಖಕ್ಕೆ ಬೆಂಕಿಬಿತ್ತು! ಸೂಳೆಗಾರಿಕೆಯನ್ನು ತೊಡೆದು ಹಾಕುತ್ತಾರೆಂದು ಹೇಳುತ್ತಾರೆಯೇ. ಶೃಂಗಾರ ರಸಾಸ್ವಾದನೆ ಮಾಡಲಾರದ ಪರಮ ಭಭ್ರಾಜಮಾನರೇ ಇವರು! ದುಷ್ಟರಮ್ಮಾ ದುಷ್ಟರಿವರು’ ಎಂಬ ಪ್ರಚಾರಬೆಳಯಲಾರಂಭಿಸಿತು.
ಈ ಪ್ರಚಾರವನ್ನು ರಂಗನಾಥಯ್ಯರು ಎಳ್ಳಷ್ಟೂ ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ. ಹೇಗೋ ಅವಕಾಶವನ್ನು ಮಾಡಿಕೊಂಡು, ಪಾಠವನ್ನು ಮಧ್ಯದಲ್ಲಿ ನಿಲ್ಲಿಸಿ, ವಿದಾರ್ಥಿಗಳ ಮಾನಸಗಳನ್ನು “ಸಾಲ್ಟ್ರ್ ಸೊಲ್ಯೂಷನ್ಸ್” ಗಳಿಂದ ಮರಳಿಸಿ ನೇರವಾಗಿ ಸೂಳೆಗಾರಿಕೆ ವೃತ್ತಿಯನ್ನು ಕೈ ಮರಗಳೆಂದು ಕೆರೆಯುತ್ತಾ ವಿಮರ್ಶಿಸುತ್ತಿದ್ದರು. ಸಮಾಜದಲ್ಲಿ ಈ ಹಾದರದ ಹುಡಿಗಿಯರು ಸೇಫ್ಟೀವಾಲ್ವ್ಸ್ ನಂಥವರು, ಪ್ಲೇಗಿನಂತೇ ಹಬ್ಬಿರುವ ಈ ಅನೀತಿ ಕೊನೆಗಾಣಲೇಬೇಕು. ಇದಕ್ಕೆ ಯುವಕರು ಸಂಸಿದ್ಧರಾಗಬೇಕು. ನೈತಿಕ ಪತನಾವಸ್ಥೆ ಯಿಂದ ದೇಶವನ್ನು ವಿದ್ಯಾರ್ಥಿಗಳು ಉದ್ಧರಿಸಬೇಕು. ಇದೂ ಆತನ ಪ್ರಭೋದನೆಯ ಸಾರಾಂಶ.
ಅವರ ಪ್ರಭೋಧನೆಯನ್ನು ಕ್ಲಾಸಿನ ವಿದ್ಯಾರ್ಥಿಗಳು ಎಚ್ಚರಿಕೆ ಯಿಂದ ಕೇಳುತ್ತಿದ್ದರು. ಆದರೆ ಚಂದರ್ ಎಂಬ ವಿದ್ಯಾರ್ಥಿಗೆ ಮಾತ್ರ ಇದು ರುಚಿಸಲಿಲ್ಲ. ಚಂದರ್ ಒಬ್ಬ ದೊಡ್ಡ ಸಾಹುಕಾರನ ಮಗ. ಯಾವಾಗಲೂ ಕೈಯಲ್ಲಿ ಹಣ ಝಣಝಣತ್ಕಾರ ಮಾಡುತ್ತಿತ್ತು. ಕುರುಡೆತ್ತು ಹೊಲದಲ್ಲಿ ಬಿದ್ದಂತೆ ಪ್ರೊಫೆಸರ್ ಹೇಳುವ ಪ್ರತಿ ಮಾತಿಗೂ ತಲೆಯಾಡಿಸುತ್ತಾ ಕ್ಲಾಸಿನಲ್ಲಿ ಕೊಡುವುದೆಂದರೆ ಅವನಿಗ ತಲೆನೋವು. ಅವರು ಹೇಳುವ ಪ್ರತಿ ವಿಷಯವನ್ನು ಅಳತೆಮಾಡಿ, ಪರೀಕ್ಷಿಸಿ ಸತ್ಯಾಂಶವನ್ನು ಹೊರತೆಗೆಯಬೇಕು. ಇದು ಎಷ್ಟರ ಮಟ್ಟಿಗೆ ಆಚರಣ ಯೋಗ್ಯ? ಇದರ ಯಾವಾವ ಭಾಗಗಳು ಅನಂಗೀಕಾರವೋ, ಒಂದು ಹಾದರದ ಹುಡಿಗಿಯನ್ನು ಮೈಕ್ರೋ ಸ್ಕೋಪಿನ ಮುಂದಿರಿಸಿ ಎನಲೈಜ್ ಮಾಡಿ ನೋಡಿದರೇ ಹೊರತು ನಿರ್ಧಾರಕ್ಕೆ ಬರಬಾರದು. ಪ್ರಯೋಗ, ಪರಿಶೀಲನೆ, ರುಜುವಾತು, ಸಾಧ್ಯಮಾಡದೇ ಯಾವುದನ್ನೂ ಸಿದ್ಧಾಂತವನ್ನಾಗಿ ಹೇಳಬಾರದು. ಈ ಛಲದ ಮೂಲದಿಂದಲೇ ಕಣ್ಣಿಗೆ ಸೊಗಸಾಗಿ ಕಾಣುತ್ತಿದ್ದ ಸರಳ ಎಂಬ ಹುಡಿಗಿಗೆ ಆಶ್ರಯಕೊಟ್ಟು ಸಮೀಪಕ್ಕೆ ತೆಗೆದುಕೊಂಡ. ಊರಿನವರೆಲ್ಲರ ಕಣ್ಣಲ್ಲಿಯೂ ಬಿದ್ದ ಹುಡಿಗಿ, ಸೊಗಸಾದ ಬಾಲೆ, ಮಧುರವಾದ ಕಂಠಸ್ವರ, ಶಾಸ್ತ್ರೀಯ ಸಂಗೀತವನ್ನು ಚೆನ್ನಾಗಿ ಅಭ್ಯಾಸಮಾಡಿದ್ದಳು. ತನ್ನ ನಾಜೂಕಾದ ಬೆರಳುಗಳ ತುದಿಯಿಂದ ವೀಣೆ ಮೀಟುತ್ತಿದ್ದಳು. ಯಾವಯಾವ ಸಮಯಗಳಲ್ಲಿ, ಉತ್ಸವಗಳಲ್ಲಿ ಯಾವಯಾವ ಹಾಡುಗಳನ್ನು ಹಾಡಬೇಕೋ ಜಾಣತನದಿಂದ ಕಲಿತಿರುವಳು. ಯಾರಿಗೂ ಬಾರದಷ್ಟು ಸಂಸ್ಕೃತ ಶ್ಲೋಕಗಳು (ಕನ್ನಡ) ತೆಲುಗು ಪದ್ಯಗಳು, ಕೃತಿಗಳು ಕೀರ್ತನಗಳು ಧಾರಾಳವಾಗಿ ಬಾಯಿಗೆ ಬರುವವು. ಈ ಬಾಲೆಯ ಮೇಲೆ ಚಂದರ್ ಮಾನವನ ಪರಿಣಾಮ ಶಾಸ್ತ್ರ ಪರಿಶೋಧನೆಗಾಗಿ ಪ್ರಯೋಗಗಳನ್ನು ನಡೆಸುತ್ತಿದ್ದನು. ಪರಿಶೋಧನೆ ಇನ್ನೂ ಪೂರ್ತಿಯಾಗಿಲ್ಲ. ದಿಕ್ಕೆಟ್ಟಿದ್ದು ಆಗಿಂದಾಗ ಹೊಚ್ಚಹೊಸ ಸಮಸ್ಯೆಗಳು ಸಾಲಾಗಿ ಹುಟ್ಟಿಕೊಂಡು ಬರುತ್ತಿದ್ದರಿಂದ ದೊಡ್ಡ ಆತಂಕ ಉಂಟಾಯಿತು. ಅಂತೆಯೇ ಶಾಸ್ತ್ರ ತೃಷ್ಣೆ ಹೆಚ್ಚಾಗಲಾರಂಭಿಸಿತು.
ಸರಳಯೊಂದಿಗೆ ತಮ್ಮ ಸಹ ವಿದ್ಯಾರ್ಥಿ ಎಕ್ಸ್ ಪೆರಿಮೆಂಟ್ ಮಾಡುತ್ತಿರುವ ವಿಷಯ ಕೆಲ ವಿದ್ಯಾರ್ಥಿಗಳು ಪತ್ತೆ ಹಚ್ಚಿದರು. ಇವರಲ್ಲಿ ಕೆಲವರನ್ನು ಚಂದರ್ ತನ್ನ ಅನುಯಾಯಿಗಳನ್ನಾಗಿ ಮಾಡಿಕೊಳ್ಳುವುದರಲ್ಲಿ ಸಫಲನಾದ. ಹಿರಿಯರಲ್ಲಿ ಕೆಲವರು ಅವನ ಪ್ರಯತ್ನಗಳನ್ನು ಅಭಿನಂದಿಸಿದರು. ಲೇಬರೇಟರಿಯಲ್ಲಿ ಪರಿಶೋಧನೆಗೆ ತಕ್ಕ ವಾತಾವರಣವಿಲ್ಲ. ಈ ವಾತಾವರಣದಲ್ಲಿ ಎಲ್ಲವೂ ಸದುಪಾಯಗಳೇ ಎಂದು ಗೆಳೆಯರು ಅವನನ್ನು ಅನೇಕ ರೀತಿಯಲ್ಲಿ ಮೆಚ್ಚುತ್ತಿದ್ದರು. ಈ ನೂತನ ಪರಿಶೋಧನೆಗಾಗಿ ಚಂದರ್ ತಯಾರಿಸಿದ ಸೂತ್ರವಿವರಣೆ ಅಮೋಘವಾದುದೆಂದೊ, ಲೇಬರೇಟರೀಯಲ್ಲಿ ಸೊಸುವ ಸಲ್ಫ್ಯೂರಿಕ್ ಯಾಸಿಡ್, ಹೈಡ್ರೋಜನ್ ಗಳಿಗಿಂತ ಅಗರು, ಅತ್ತರುಗಳ ವಾಸನೆಗಳು ಹೊಚ್ಚ ಹೊಸ ಮಾರ್ಪಾಟುಗಳೆಂದು ಒಪ್ಪಿಕೊಂಡರು. ಆದರೆ ಕ್ಲಾಸಿನಲ್ಲಿ ಮಾತ್ರ ದೊಡ್ಡ ಆಪತ್ತು ಬಂದೊದಿಗಿತು. ನೀತಿವಾದಗಳಿಗೆ ಇವರ ಪದ್ಧತಿ ಸರಿಯೆನಿಸಲಿಲ್ಲ. ಮಧ್ಯದಲ್ಲಿ ಒಂದು ಬೆಂಚನ್ನು ಖಾಲಿಯಾಗಿ ಬಿಟ್ಟುಕೊಟ್ಟು, ದೂರವಾಗಿ ಬೇರೇ ಒಂದು ಮೂಲೆಗೆ ಸೇರಿದರು. ಕ್ಲಾಸಿನಲ್ಲೆ ಎರಡು ಬಣಗಳು ಆರಂಭವಾದವು. ಇದರ ಕಾರಣವರಿಯದೆ ಮೊದಲು ಪ್ರೊಫೆಸರ್ ತಳಮಳಗೊಂಡರು. ತಿಳಿದಮೇಲೆ ಉರಿದೆದ್ದರು. ಸೂಳೆಗಾರಿಕೆಯ ಮೇಲೆ ಸಾಧಾರಣವಾಗಿ ಅವರಿಗಿರುವ ಸಿಟ್ಟು. ಅಸಾಧಾರಣವಾಗಿ ಹೆಣ್ಣುಗಳಲ್ಲಿನ ಅಲಸತ್ವವನ್ನು ನೋಡಿ ಉಪಯೋಗಿಸಿಕೊಳ್ಳುತ್ತಿದ್ದ ಪ್ರೋನಾಚ್ ವಾದಿಗಳ ಮೇಲೆ ಬೆಂಕಿಗರೆಯುತ್ತಿದ್ದರು.
-೨-
ರಂಗನಾಥಚಾರ್ಯರು ಗ್ರೀಕರಂತೆ ಸೌಂದರ್ಯಾರಾಧಕರು. ಅನುದಿನವೂ ಸ್ವರ್ಣಲೇಖ ನದಿಯ ದಂಡೆಯಲ್ಲಿ ಷಿಕಾರು ತಿರುಗುತ್ತಿದ್ದರು. ಕಣಿವೆಯ ಸುತ್ತಲೂ ಕ್ರಮವಿಲ್ಲದೆ ಬೆಳೆದ ಹುಲ್ಲುನಿಂದ ಹಸುರಾದ ಕಲ್ಲು ಬಂಡೆಗಳಿವೆ. ಅಲ್ಲಿಯೇ ದೊಡ್ಡ ಮಾವಿನ ತೋಟಗಳು, ಹುಣಿಸೇ ಮರಗಳು, ಭೀತಾವಹವಾಗಿ ಕಾಣುತ್ತಿದ್ದವು. ತೋಟವನ್ನು ದಾಟಿದ ಮೇಲೆ ಚೆನ್ನಾಗಿ ಸಮನಾಗಿ ಬೆಳೆದ ಹಸಿರು ಬಯಲು ಸಮುದ್ರದಂತೆ ಕಾಣುವುದು. ಅದರ ಕೊನೆಯಲ್ಲಿ ಹಡಗಿನಂತೆ ಒಂದು ದೊಡ್ಡ ಬೆಟ್ಟ, ಬೆಟ್ಟದ ಮೆಲೆ ಪುರಾತನ ದೇವಾಲಯ , ಗಾಳಿಗೋಪುರಗಳಿಂದ ಅನೇಕ ಶಿಖರಗಳೊಂದಿಗೆ ವಿಮಾನಗಳಿಂದ ರೂಪುಗೊಂಡಿತ್ತು, ಈ ಪರಿಸರ ಪ್ರೊಫೆಸರವರನ್ನು ಬಹಳಷ್ಟು ಸೆಳೆದಿತ್ತು. ಪ್ರತೀ ಸಾಯಂಕಾಲವೂ ಅಲ್ಲೆ ತಚ್ಚಾಡುತ್ತಾ, ಗೆಳೆಯರೊಂದಿಗೆ ಹಗುರವಾದ ಸಂಭಾಷಣೆ ನಡೆಸುತ್ತಿದ್ದರು. ಕವಿತೆ, ವಿಜ್ಞಾನ, ಮುಂತಾದ ವಿಷಯಗಳ ಮೇಲೆ ಶಿಷ್ಯರೊಂದಿಗೆ ಚರ್ಚೆ ನಡೆಸುತ್ತಿದ್ದರು. ತನ್ನ ಹೆಂಡತಿಗೆ ತಾನು ತಲೆಗೆತ್ತಿಕೊಂಡ ಸುಧಾರಾಣೆಗಳು ಹಿಡಿಸಲಿಲ್ಲ. ಅಷ್ಟಕ್ಕೆ ಸುಮ್ಮನಿದ್ದರೆ ಚೆನ್ನಾಗಿತ್ತು. ಇಲ್ಲಸಲ್ಲದ ಗೊಡವೆಗಳಿಗೆ ತನ್ನ ಗಂಡ ಹೋಗುತ್ತಿರುವುದಾಗಿ ಆಕೆ ಕಸಿವಿಸಿ ಆಗುತ್ತಿದ್ದಳು. ಅವರನ್ನು ಸಾಧಿಸುತ್ತಿದ್ದಳು. ಮನೆಗೆ ಈಗಿಂದೀಗಲೇ ಹೋಗಿ ಗಯ್ಯಾಳೆ… ಹೆಂಡತಿ ಯೊಂದಿಗೆ ತಗಾದೆಗಳಿಗೆ ಅವಕಾಶ ನೀಡಬಾರದೆಂದು, ಪ್ರೊಫೆಸರ್ ಚೆನ್ನಾಗಿ ಕತ್ತಲು ಬೀಳುವವರೆಗೂ, ಅಲ್ಲಿಯೇ ತಿರುಗಾಡಿಕೊಂಡಿರುತ್ತಿದ್ದರು. ಈ ಸಮಯದಲ್ಲೇ ಒಬ್ಬಳು ತುಂಬು ಜವ್ವನಿ ಅದೇ ದೇವಾಲಯಕ್ಕೆ ಬಂದು ಸ್ವಾಮಿಯ ದರ್ಶನ ಪಡೆಯುತ್ತಿದ್ದಳು. ಆ ಹುಡಿಗಿ ಸರಳಳೇ ಎಂದು ತಿಳಿದು ಸಮಾಜ ಸುಧಾರಕರೆಲ್ಲರೂ ಆನಂದಪಟ್ಟರು. ಆ ಬಾಲೆಯಲ್ಲಿ ಇಂತಹ ಹಠಾತ್ಪರಿಣಾಮ ಉಂಟಾಗಲು ತಮ್ಮ ಚಳುವಳಿಯ ಪ್ರಭಾವವೆಂದು ಗರ್ವಿಸಿದರು. ಅನುಮಾನವಿಲ್ಲ. ತಾನು ಮಾಡಿದ ಪಾಪಗಳಿಗೆ ಆ ಹುಡಿಗಿಗೆ ಪಶ್ಚಾತ್ತಾಪವಾಗಿದೆ. ಬರುವ ಜನ್ಮದಲ್ಲಾದರೂ ಸರಳ ಗೌರವಪ್ರದವಾದ ಗೃಹಿಣಿ ಯಾಗಿ ಹುಟ್ಟುವಳೆಂದು ಆಶೆಪಟ್ಟರು. ಆದರೆ…..ಹರಿಹರೀ! ಸರಳೆಯಲ್ಲಿ ಅಂತಹ ಯೋಚನೆಯೇ ಇಲ್ಲವೆಂದೂ, ಅವಳು ದೇವಾಲಯಕ್ಕೆ ಬರುತ್ತಿದ್ದದು, ಆ ಪ್ರೊಫೆಸರನ್ನೂ, ಅವರ ಗೆಳೆಯರನ್ನೂ ತನ್ನಡೆಗೆ ಸೆಳೆಯಲೆಂದೇ ಎಂಬುದನ್ನು ನಾನು ತಿಳಿದು ತಿಳಿಯದಂತೆ ಹೇಳಾಬೇಕಾಗಿ ಬಂದುದಕ್ಕೆ ನನ್ನ ಪಾಪವೂ ಶಮಿಸುವಂತಾಗಲಿ.
ಒಂದು ದಿನ ಸಂಜೆ. ರವಿಯ ಕನಕಮಯ ಕಾಂತಿ ಸುತ್ತಲು ಪಸರಿಸುತ್ತಿದೆ. ಸೊಗಸಾದ ಮೊಖಮಲ್ ನಂಥಾ ಊದಾ ರಂಗಿನ ಸೀರೆಯನ್ನುಟ್ಟು ಹಸಿರು ಬಣ್ಣದ ರೇಷ್ಮೆ ಮುಸುಗನ್ನು ಧರಿಸಿ, ಥಳಥಳಾ ಹೊಳೆಯುವ ಜರೀ ಅಂಚುಗಳ ನಡುವೆ ನೋಡಲು ಒಳ್ಳೆಯ ಸುಂದರಿ ದೇವಾಲಯಕ್ಕೆ ಬಂದಳು. ಬರುವಾಗ ಬೆಟ್ಟದ ಮೆಟ್ಟುಗಳನ್ನು ದಾಟುತ್ತಾ ಕೆಳಗೆ ನೋಡಿದಳು. “ಓಹೋ! ಎಂತಹ ಸೌಂದರ್ಯ ರಾಶಿ” ಪ್ರೊಫೆಸರರ ಅಚ್ಚರಿಯನ್ನು ನೋಡಿ ಎಲ್ಲರೂ ಮೌನವನ್ನು ತಾಳಿದರು. ಆಹಾ! ಪ್ರೇಮದಿಂದ ತುಳುಕುತ್ತಿರುವ ಆ ದೃಶ್ಯವನ್ನು, ಬಣ್ಣಗಳಲ್ಲಿ ಮಾರ್ಪಡಿಸಲು ಚಿತ್ರಕಾರನಿಗೆ ಎಂತಹ ಪ್ರತಿಭೆಯಿರಬೇಕು? ಅವನ ಊಹೆಗೆ ಸಿಲುಕದ ದೃಶ್ಯವದು! ರಂಗನಾಥಯ್ಯರು ತಮ್ಮ ಆನಂದವನ್ನು ಹತ್ತಿಕ್ಕಲಾರದವರಾದರು. ಉದ್ರೇಕವು ಉಕ್ಕಿಉಕ್ಕಿ ಬರುತ್ತಿತ್ತು. ಜತೆಯಲ್ಲಿದ್ದ ಪಂಡಿತ ಮಿತ್ರರನನ್ನು ಉತ್ಸಾಹಗೊಳಿಸಬೇಕೆಂಬ ಸಂತೋಷದಿಂದ ನಾಲ್ಕು ಶ್ಲೋಕಗಳು ಪಠಿಸಿ ಕೇಳಿಸಿದರು. ವನದೇವತೆಗಳ, ನದೀಕನ್ಯೆಯರ, ಸೌಂದರ್ಯವನ್ನು ಬಣ್ಣಿಸುತ್ತಾ ಅವರಿಗೆ ಆಹ್ಲಾದವನ್ನು ನೀಡಿದರು. ಅವರೇನೂ ರಸಾಯನ ಶಾಸ್ತ್ರಜ್ಞರು. ಕೆಮಿಸ್ಟ್ರೀಗೆ ಸಂಬಂಧಿಸಿದಂತೆ ಮಾಮೂಲಾದ ಸಿದ್ಧಾಂತಗಳು, ಅಂಕಗಳು , ಗಣಿತವನ್ನು ಹಚ್ಚಿಕೊಂಡಿರಲಾರದೆ ಅತನಿಂತಹ ವಿಷಯಗಳಲ್ಲಿ ಇಳಿಯಬಾರದೆಂಬುದು ನನ್ನ ಅಭಿಪ್ರಾಯ. ಆದರೆ ಸೆಳೆಯುವ ಸೌಂದರ್ಯ ರಾಣಿ ಎದುರಿನಲ್ಲಿ ಕಾಣುತ್ತಿರುವಾಗ ಕವಿಯ ಹೃದಯವುಳ್ಳ ಎಂತಹ ಆ ಜನ್ಮ ವೇದಾಂತಿಗಾದರೂ ಮನ ಚೆದುರಿ ಹೋಗದಿರದು.
ಇಷ್ಟು ಸುಂದರಿಯಾದ ಮಾನವ ಕಾಂತೆಯ ವಿಷಯವನ್ನು ಸಂಪೂರ್ಣವಾಗಿ ತಿಳಿದು ಕೊಳ್ಳಬೇಕೆಂಬ ಕುತೂಹಲ ಬರಬರುತ್ತಾ ಆತನಿಗೆ ಬಹಳವಾಯಿತು. ಕುತೂಹಲವೂ ಕೋರಿಕೆಯಾಗಿ ಮಾರ್ಪಟ್ಟಿತು. ಅತನಿಗೆ ಮನವು ಮನದಲ್ಲಿಲ್ಲ. ಅಷ್ಟರಲ್ಲಿ ಆತನ ಅಂತರಾತ್ಮ ಹೀಂಗೆಂದು ಪ್ರಶ್ನಿಸ್ತಿತು.
“ಅವಳಾರೋ ತಿಳಿದುಕೊಳ್ಳುವ ಆರಾಟವು ನಿನಗೇಕೆ?”
“ಏಕೆಂದರೆ…..ಸೌಂದರ್ಯವೆಂಬುದು ಸ್ತುತಿಸ ತಕ್ಕದ್ದು. ಅದರಿಂದ ಪ್ರಮಾದವೇನು ಬಂತು?” ತನಗೆ ತಾನು ಸ್ವಾಂತನ ಹೇಳಿಕೊಂಡ. ಅಂತರಾತ್ಮ ಮತ್ತೇನೂ ಪ್ರಶ್ನಿಸಲಿಲ್ಲ. ಆ ದಿನದ ಸಾಯಂಕಾಲವೆಲ್ಲಾ ಅಲ್ಲಿಯೇ ಇದ್ದುಬಿಟ್ಟ. ಗುಡಿಯಲ್ಲಿ ದೇವರಿಗೆ ಶಯನ ಸೇವೆ ಆದಮೇಲೆ ಗುಡಿಯ ಬಾಗಿಲನ್ನು ಮುಚ್ಚುತ್ತಾರೆ. ಅಲ್ಲಿಯವರೆಗೂ ಅವಳನ್ನು ನೋಡಬೇಕೆಂಬ ಆಶೆಯಿಂದ ಅಲ್ಲಿಯೇ ಏನೋ ಮಾತಾಡುತ್ತಾ ಉಳಿದ. ಆದರೆ ಅವಳು ಕಂಡುಬರಲಿಲ್ಲ.
ನಿರಾಶೆಗೊಂಡು ಮನೆಯ ಕಡೆಗೆ ಕಾಲು ಬೆಳಿಸಿದ. ಎಲ್ಲೆಲ್ಲೂ ನಿಶ್ಶಬ್ದ. ಯಾರೂ ಬಾಯಿ ತೆಗೆಯುತ್ತಿಲ್ಲ. ದಾರಿ ಸವೆಸ್ತುತ್ತಾ ನಡುದಾರಿಯಲ್ಲಿ ಹೀಗೆ ತನ್ನನ್ನು ಪ್ರಶ್ನಿಸಿಕೊಂಡ. “ಮತ್ತೇ ಬರುವ ಸೋಮವಾರ ಆ ಹುಡಿಗಿ ಗುಡಿಗೆ ಬರುವಳೆನ್ನುವಿಯೋ! ಬರುವುದಿಲ್ಲವೆನ್ನುವೆಯೋ?”
“ಖಬರ್ದಾರ್! ಪಾಪ, ಪುಣ್ಯವೆಂಬುವು ಪ್ರಪಂಚದಲ್ಲಿವೆ ಎಂಬುದನ್ನು ಸ್ಮರಿಸಿಕೋ” ಎಂದು ತನ್ನನ್ನು ಗಟ್ಟಿಯಾಗಿ ಎಚ್ಚರಿಸಿದಂತಾಯಿತು ಆತನ ಅಂತರಾತ್ಮ ಎಲ್ಲಿಲ್ಲದ ಆತ್ಮಾಭಿಮಾನ ಹೊರಗೆ ಬಂದು” ರಂಗನಾಥಯ್ಯರು ಇಂತಹ ಮನಃಚಾಂಚಲ್ಯಗಳಿಗೆ ಅತೀತನು ಎಂದು ಸಮಾಧಾನಕೊಟ್ಟ.
ಸೋಮವಾರ ಮತ್ತೆ ಬಂತು. ಮಿತ್ರರನ್ನು ಕೂಡಿಸಿ ಪ್ರೊಫೆಸರ್ ಕೊಂಬೆಟ್ಟದ ಮೇಲೆಗೆ ಷಿಕಾರು ಹೊರಟ. ನಿಸರ್ಗ ನಿಶ್ಚಲವಾಗಿದೆ. ಕಲೆಗೂ ಶಿಲ್ಪಗಳಿಗೂ ನಡುವಿನ ಭೇದವನ್ನು ವಿವರಿಸುತ್ತಾ ಮಾತಾಡುತ್ತಿದ್ದನಾತ. ಎದುರಿಗೆ ಬೆಟ್ಟ, ಅದಕ್ಕೆ ಕಿರೀಟವಿಟ್ಟಂತೆ ಅದರ ಶಿಖರದಮೇಲೆ ದೇಗುಲ. ಬಹಳ ಸುಂದರವಾಗಿ ಕಣ್ಣಿಗೆ ಕಾಣುತ್ತಿದೆ. “ತಿರುಗೀ ಆ ಸೌಂದರ್ಯರಾಶಿ ಕಣ್ಣಿಗೆ ಬಿದ್ದರೆ ಎಷ್ಟು ಚೆನ್ನಾಗಿರುತ್ತದೆ.” ಎಂದುಕೊಳ್ಳುತ್ತಾ ಎವೆಯಿಕ್ಕದೆ ದೇಗುಲದ ಕಡೆಗೆ ನೋಡುತ್ತಿದ್ದ. ಆದರೆ ಆ ಕ್ಷಣದಲ್ಲಿ ಅವನ ಆತ್ಮಾಭಿಮಾನಕ್ಕೆ ಹೊಡೆತ ಬಿದ್ದಂತೆ ಆನಿಸಿತು. ಮನೋಗರ್ವ ಅತಿಶಯವಾಯಿತು. “ಇಂತಹವೇನೂ ನಾನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.” ಎಂದುಕೊಂಡ. ಅವಳು ಯಾರೋ ತಿಳಿದುಕೊಳ್ಳಲು ಆಸಕ್ತಿಯೇ ಹೊರತು ಇದರಲ್ಲಿ ದೋಷವೆಲ್ಲಿಂದ ಬಂತು ಎಂದು ತನಗೇನೆ ಎದುರು ಪ್ರಶ್ನಿಸಿಕೊಂಡ. ಸ್ವಲ್ಪಹೊತ್ತು ಅತ್ತಿತ್ತ ಅಲೆದಾಡುತ್ತಿರುವಾಗಲೇ ಸರಳ ಪ್ರತ್ಯಕ್ಷವಾದಳು. ಎದೆ ನಡುಗಲಾರಂಭಿಸಿತು. ಎರಡು ನಿಮಿಷಗಳ ಕಾಲ ಬೆಟ್ಟದ ಶಿಖರ ಮೇಲೆ ನಿಂತು ಸರಳ ಅತ್ತ ಇತ್ತ ಕಣ್ಣು ಹಾಯಿಸಿದಳು. ಕೆಳಗಡ ಸ್ವರ್ಣಲೇಖಾ ನದಿ ಪ್ರವಹಿಸುತ್ತಾ ಒಂದು ದೊಡ್ಡಕಲ್ಲು ಬಂಡೆಯ ಸುತ್ತಲೂ ಸಣ್ಣದಾಗಿ ಬೇರ್ಪಟ್ಟಿತ್ತು. ಆ ಕಲ್ಲು ಬಂಡೆಯ ಮೇಲೆ ಕುಳಿತು ಮಾತಾಡುತ್ತಿದ್ದ ಪ್ರೊಫೆಸರ್, ಆತನ ಗೆಳಯರೂ ಸರಳಗೆ ಕಾಣಿಸಿಕೊಂಡರು. ಸರಳಳನ್ನು ನೋಡಿ ಅತನಿನ್ನು ತಡೆಯಲಾರದೆ ಹೋದ. “ಆ ಸುಂದರಿ ಯಾರಾಗಿರಬಹುದಯ್ಯಾ” ಎಂದು ಹೊರಕ್ಕೆ ಮಾತಾಡಿ ಬಿಟ್ಟ. ಅರ್ಥಪೂರ್ಣವಾದ ದೃಕ್ಕುಗಳಿಂದ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ ಗೆಳೆಯರು ಮೌನವನ್ನು ಆಶ್ರಯಿಸಿದರು. ಕಂಠವನ್ನು ಸರಿಪಡಿಸಿಕೊಂಡು ಅಯ್ಯರು ವರ್ಡ್ಸ್ ವರ್ತ್ ನ ಗೀತವನ್ನು ಹಾಡುತ್ತಾ ಉದಹರಿಸಿದರು.
“ಮೊದಲು ಅವಳೆನ್ನೆ ನೋಟದಲಿ ಉರುಳುತಿರಲು
ಕಾಂತೆ ಕಂಡಳಾನಂದ ಸ್ವರೂಪಳಂತೆ”
ಕಂಗಳು ಮುಚ್ಚಿ ಹೋಗಿ ಯೋಗ ನಿದ್ರೆಯಲ್ಲಿರುವಂತೆ ಬಾಸವಾಯಿತು. ಬೌದ್ಧದೇಗುಲಗಳ, ಆರಾಮಗಳನ್ನು ಕುರಿತು ಮಾತಾಡುತ್ತಿದ್ದ ವ್ಯಕ್ತಿ ತಟಕ್ಕನೆ ನಿಲ್ಲಿಸಿಬಿಟ್ಟ. ಎದುರಿನಲ್ಲಿ ನಿಂತ ಆ ಚೆಲುವಾಂತ ಚೆನ್ನೆ ಯಾರೋ ತಿಳಿದುಕೊಂಡರಲ್ಲದೇ ಪ್ರಾಣವು ಕುದುರಾಗಿ ನಿಲ್ಲುವಂತೆ ಕಾಣಲಿಲ್ಲ. ಮನಶ್ಶಾಂತಿ ಇಲ್ಲವಾಯಿತು. ನಿಲ್ಲಿಸಿದ್ದ ಪ್ರಸಂಗ ಮುಂದುವರಿಯುವುವಂತೆ ಕಾಣಲಿಲ್ಲ. ಅದ್ದರಿಂದ ಸಾಹಸಮಾಡಿ ಗೆಳೆಯನೊಬ್ಬ “ಅದಾ? ಅದು ಬರೀ ಹದರದಗಿತ್ತಿ! ಹೆಸರು ಸರಳ” ಎಂದ. ಆ ಮಾತು ಕಿವಿಗೆ ಬೀಳುತ್ತಲೇ ಅತನ ಎದೆ ಬಡಿತೆ ಬಿದ್ದು ಹೋದಂತಾಯಿತು. “ಅಂತಹ ಸುಂದರವಾದ ಸೂರ್ಯ ತೇಜಸ್ಸಿನ ಹಿಂದೆ ಎಂತಹ ಕತ್ತಲು” ಅತನ ವಿಭ್ರಾಂತಿಗೆ ಮೇರೆಯೇ ಇರಲಿಲ್ಲ. ಪಾಪಪಂಕಿಲವಾದ ಆ ಲಲನೆಯ ಬಗ್ಗೆ ತನ್ನ ಅಮೂಲ್ಯ ಸೌಂದರ್ಯ ಸಂಪತ್ತನೆಲ್ಲಾ ವಿನಿಯೋಗಿಸುವ ನಿಸರ್ಗ ಎಷ್ಟು ಅಸಂಬದ್ಧ!”
ಹೃದಯವೆಲ್ಲಾ ನೀರಸವಾವರಿಸಿದಂತಾಯಿತು. ಆತನಲ್ಲಿ ಯಾವುದೋ ಅಸ್ಪಷ್ಟವಾದ ಭಾವವೊಂದು ಹುಟ್ಟಿ ಬಂತು. ದೂರದಿಂದ ಕೇಳಿಬರುವ ಧ್ವನಿಯಂತೆ ಕೇಳಿಸಲಾರಂಭವಾಯಿತು. ನೆನೆಸಿಕೊಂಡರೆ ಈ ಭಾವ ಚೆನ್ನಾಗಿರುವಂತೆ ಕಂಡಿತು. ಮನದಲ್ಲಿ ಅದಾವುದೋ ತೃಪ್ತಿ ನೀಡುತ್ತಿತ್ತು. ಆಶೆಯನ್ನು ಕಲ್ಪಿಸುತ್ತಾ ಉನ್ಮಾದಿಯನ್ನಾಗಿ ಮಾಡುತ್ತಿದೆ. ತನಗೆ ಸರಳ ಸುನಾಯಾಸವಾಗಿ ಲಭಿಸಿದರೇ?…… ಈ ಭಾವವು ತನ್ನಲ್ಲೇ ಜನಿಸಿ ಕ್ರಮೇಣ ಗೆಲ್ಲುತ್ತಿದ್ದಂತೇ ಅತನಿಗೇ ತಿಳಿಯಲಿಲ್ಲ.
-೩-
ಸರಳ! ಎಂಥಾ ಅಂದಚಂದಗಳರಾಸಿ! ಯಾರೋ ಅಲ್ಲ. ವಿದ್ಯಾರ್ಥಿಗಳ ತೀವ್ರ ವಿಮರ್ಶಗೆ ಲಕ್ಷ್ಯವಾಗಿದ್ದ ಹುಡಿಗಿ. ಆ ಹುಡಿಗಿಯನ್ನು ನೋಡಿದ ಮೊದಲು, ವಿಶೇಷವಾಗಿ ಅವಳು ಸರಳಳೇ ಎಂಬುದು ತಿಳಿದಮೇಲೆ, ಪ್ರೊಫೆಸರರ ಮನದಲ್ಲಿ ಅಲ್ಲಕಲ್ಲೋಲವಾಯಿತು. ಹೃದಯದಲ್ಲಿ ಸಂಘರ್ಷಣೆ ಆರಂಭವಾಯಿತು. ಗತಕಾಲದ ತನ್ನ ಬಾಲ್ಯದ ದಿನಗಳು ಅಂದಿನ ನೆನಪುಗಳು ಮರುಕಳಿಸಿದವು.
ಮನೆಬಿಟ್ಟು, ಹುಟ್ಟಿದ ಊರು ಬಿಟ್ಟು, ದೂರದಲಿ ಎಲ್ಲೋ ಓದು. ಏಕಾಕಿಯ ಜೀವನ, ತೆರೆದದ್ದು ಮೊದಲು ಮುಚ್ಚುವವರೆಗೂ ಪುಸ್ತಕದ ಮೇಲೆಯೇ ತನ್ನ ಏಕಾಗ್ರತೆ! ತನ್ನ ಓದೂ, ತಾನೂ ತಪ್ಪಿಸಿ ಮತ್ತೊಂದು ಪ್ರಪಂಚ ಕಾಣಿಸಿಲಿಲ್ಲ. ಮತ್ತೂ ಕೇಳಿಸಲಿಲ್ಲ. ಆದರೇನೂ? ಪರೀಕ್ಷೆಗಳಲ್ಲಿ ರಾಂಕುಗಳು ಬಂದವು. ಜೀವದಲ್ಲಿ ಒಳ್ಳೆಯ ಉದ್ಯೋಗ ಲಭಿಸಿತ್ತು. ನಿಕ್ಷೇಪದಂತಹ ಜೀವನ, ವಿದ್ಯಾರ್ಥಿ ಯಾಗಿರುತ್ತಿದ್ದಾಗ ಜೀವನದಲ್ಲಿ ಒಮ್ಮೊಮ್ಮೆ ನಿಸರ್ಗದಲ್ಲಿ ತನ್ಮಯೀ ಭಾವ ಉಂಟಾಗುತ್ತಿತ್ತು. ನಿಸರ್ಗ ಮತ್ತು ಜೀವನ ಶೃಂಗಾರಮಯವಾಗಿ ತೋರುತ್ತಿತ್ತು. ಆ ಶೃಂಗಾರ ಭಾವವು ಇಷ್ಟರಲ್ಲೇ ಹುಟ್ಟಿ ಅಷ್ಟರಲ್ಲೇ ಮಾಯವಾಗುತ್ತಿತ್ತು. ವಿಜ್ಞಾನ ಶಾಸ್ತ್ರಗಳ ಒಣೆಕೆಯ ಹಾಡು, ಉತ್ಸಾಹವಾರಿದ ಜೀವನ.. ಈ ತನ್ನಯೀ ಭಾವವನ್ನು ನಾಶಪಡಿಸಿದವು. ಸಮಾಜ ಸುಧಾರಣಾ ಹೋರಾಟಗಳನ್ನು, ವೇದಿಕೆಗಳ ಮೇಲೆ, ಪ್ರತಿಕಗಳಲ್ಲಿ ಮುಂದುವರಿಸುತ್ತಾ ಕೀರ್ತಿಗಳಿಸಲು ನೋಡುತ್ತಿದ್ದ ಹಿಂದೂ ವಿದ್ಯಾವಂತರ ಆಲೋಚನಗಳನ್ನೇ ಅತನ ಬುದ್ಧಿ ಇಂದಿಗೂ ಅಪ್ಪಿಕೊಂಡಿದೆ. ಗುರುಗಳ ಬೋಧನೆಯನ್ನು ಯಥಾವತ್ತಾಗಿ ನಿಜಗಳೆಂದು ನಂಬಿ ಸ್ವೀಕರಿಸಿದರು. ಮದರಾಸಿನಲ್ಲೆ ತನ್ನೊಂದಿಗೆ ತಿರುಗುವ ಗೆಳೆಯರ ಭಾವಗಳೆಲ್ಲವೂ ಅತನಿಗೆ ಪಥ್ಯವಾಗಿ ಕಾಣಿಸುವುದು ಸುರುವಾಯಿತು. ಪುಸ್ತಕದಲ್ಲಿಯ ರೆಡೀಮೇಡ್ ಅಭಿಪ್ರಾಯಗಳನು ಸಿದ್ಧಾಂತಗಳಂತೆ ಸ್ವೀಕರಿಸುತ್ತಾ ಆ ಆಲೋಚನೆಗಳ ಪರಿಸರದಲ್ಲಿಯೇ ಉಳಿದುಕೊಂಡಿದ್ದಾನೆ. ಇದಕ್ಕೆ ಭಿನ್ನವಾದ ಅಭಿರುಚಿಗಳನ್ನು ಅವರ ಜೀವನದಲ್ಲಿ ಸವಿ ನೋಡಿದ್ದಿಲ್ಲ. ಕೆಲವೊಂದು ಸಿದ್ಧಾಂತಗಳು, ನಂಬಿಕೆಗಳು ಪ್ರೊಫೆಸರರಿಗಿದ್ದ ಮಾತು ವಾಸ್ತವವೇ. ಆದರೆ ಅವು ಅನಂತವಾದ ಜೀವನ ಸಂಘರ್ಷಣೆಗಳಲ್ಲಿಂದ ಹುಟ್ಟಿದ್ದುವಲ್ಲ. ಆದ್ದರಿಂದ ಬಲವತ್ತರವಾದುದಲ್ಲಿ ಇಲ್ಲೇ ಇದ್ರೇ ಹಾದರದ ಹುಡಿಗಿ ಸರಳ ಕಾಣಿಸಿಕೊಂಡ ಕೂಡಲೇ ಇಷ್ಟು ಸುಲಭವಾಗಿ ಆತನ ಮನಸ್ಸಿಗೆ ಎರೆ ಹಾಕಿದಂತಾಗುತ್ತಿತ್ತಾ? ಜೀವನದಲ್ಲಿ ಸಂಘರ್ಷಣೆ ಪ್ರಾರಂಭವಾಗಿದೆ. ಅದು ಕೇವಲ ಸಂಘರ್ಷಣೆ ಮಾತ್ರವೇ ಅಲ್ಲ. ನೀನೂ – ನಾನೂ ಎಂಬುದನ್ನು ನಿಶ್ಚಯಿಸಬೇಕಾದ ಪರೀಕ್ಷೆ!
ಅವಳ ಮೂರ್ತಿ ಕಣ್ಣಿಗೆ ಕಟ್ಟಿದಂತಾಯಿತು. ಸರಳೆ ಕೋಮಲ ತನುವಿಗಾಗಿ ಆತನ ಮನಸ್ಸು ಹಂಬಲಿಸುತ್ತಿದೆ. ಆಲೋಚನೆಗಳಿಂದ ವೇಧಿಸುತ್ತಾ ಇದೆ. ವಿಶ್ವಾಸಗಳನ್ನು ಹಿಚುಕಿ ಹಾಕುತ್ತಿದೆ. “ಸುಂದರವಾದ ವಸ್ತು ಸತತವಾನಂದದಾಯಕ ವಹುದು ಎಂದು ತಾನೆಲ್ಲೋ ಓದಿದ ರಸಾತ್ಮಕ ವಾಕ್ಯ ನೆನಪಿನಲ್ಲಿ ಸುಳಿಯಿತು. ಈ ಆನಂದ ಜನಕವಾದ ವಸ್ತು ಒಬ್ಬ ಹಾದರಗಿತ್ತಿ ಯಾದರೇನು? ಅವಳು ತಿಳಿಯದೆಯೇ ಒಂದು ಹಾದರದವರ ಕುಲದಲ್ಲಿ ಹುಟ್ಟಿದ್ದ ಮಾತ್ರಕ್ಕೆ ಮಾನವರು ಅವಳನ್ನು ಅಸಹ್ಯವಾಗಿ ಕಂಡು ತಪ್ಪಿತಸ್ಥಳಂತೆ ಶಿಕ್ಷಗೊಳಪಡಿಸಬಹುದೇ? ಲೋಕದಲ್ಲಿ ಅನೇಕರು ದುರದೃಷ್ಟವಂತರಿರುವರಲ್ಲವೇ, ಅವರನ್ನು ನಾವು ಕನಿಕರದಿಂದ ನೋಡುವೆವಲ್ಲವೇ? ಹೋಗಲಿ ಅವರನ್ನಂತೆ ಹಾದರದವರನ್ನು ಜನರು ಯಾಕೆ ದಯಾಮಯರಾಗಿ ಕಾಣಬಾರದು? ಅದರಲ್ಲೂ ಸರಳಳಂಥಾ ಹುಡಿಗಿಯನ್ನು! ಇಂತಹ ಸುಂದರಿಯನ್ನು ಯಾರ ಹಂಗಿಲ್ಲದಂತೆ ತಿರುಗಲು ಬಿಟ್ಟರೆ ಸಮಾಜ ಕೆಟ್ಟುಹೋಗುತ್ತದೆ. ಅವಳೂ ಕೆಟ್ಟು ಹೋಗುತ್ತಾಳೆ. ಹಾಗಿರುವಾಗ ಅವಳಾನ್ನು ನಿರ್ಲಕ್ಷ್ಯದಿಂದ ಕಾಣಲಾಗದು. ಪ್ರೀತಿಯನ್ನು , ಕರುಣೆಯನ್ನು, ಅರಿವನ್ನು, ಧನವನ್ನಾದರೂ ಆಯಿತು ಧಾರೆ ಎರೆದು ಅವಳನ್ನು ಉದ್ದರಿಸಬೇಕಾಗಿದೆ. ಹಾದರಗಿತ್ತಿ ಯೊಡನೆ ಮಾತಾಡುವುದೇ ಮಹಾಪಾಪವೆಂದು ಕೊಳ್ಳುವುದು ಅದೆಂಥಾ ತಪ್ಪು. ಸಮಾಜದ ರೋಗಗಳಿಗೆ ಚಿಕಿತ್ಸೆ ಮಾಡಬೇಕಾದ ವೈದ್ಯನು ಸಮಾಜಸುಧಾರಕನೇ! ಈ ಸಲವೂ ಮತ್ತೆ ಕಾಣಿಸಿದಳು ಸರಳ. ಬಿಳುಪಿನ ಸೀರೆಯನ್ನುಟ್ಟಿದ್ದಾಳೆ. ಕೈಯಲ್ಲಿ ಬೆಳ್ಳಿಯ ಹೂವಿನ ಕರಂಡವನ್ನು ಹಿಡಿದಿದ್ದಾಳೆ. ಗುಡಿಯೊಳಕ್ಕೆ ವಯ್ಯಾರದಿಂದ ನಡೆಯುತ್ತಾ ಹೋಗುತ್ತಿದ್ದಾಳೆ. ಆಲಯದಲ್ಲಿ ಪೂಜೆ ಮಾಡಿಸುವ ಲೋಸುಗ ಸರಳ ಹೋಗುತ್ತಿರುವಳೆಂದು ಆತ ಊಹೆ ಮಾಡಿದ. ಈಗಾಗಲೇ ಮೂರ್ತಿಯ ಎದುರಿನಲ್ಲಿ ನಿಂತಿರಬಹುದೆಂದು ಭಾವಿಸಿದ. ನಿಜಕ್ಕೆ ಆಕೆ ಹೇಗಿರುವಳೋ? ದೂರದ ಬೆಟ್ಟವು ಕಣ್ಣಿಗೆ ನುಣ್ಣಗೆ! ಸನಿಹಕ್ಕೆ ಹೋದರೆ ಸರಿ, ಹೆಚ್ಚುತಗ್ಗುಗಳು, ಲೋಪ ದೋಷಾದಿಗಳು ತಿಳಿದು ಬರುತ್ತವೆ. ಅವಳು ಕುರೂಪಿ ಯಾಗಿರಬಹುದೇ? ಅವಳ ಮುಖದ ಚಹರೆಗಳು ವಿಕೃತವಾಗಿ ತೋರಬಹುದೇನೋ, ದೂರವು ಇವುಗಳನ್ನು ಮುಚ್ಚಿಡುತ್ತದೆ. ಅವಳು ಅಂದವಿಕಾರವಾಗಿದ್ದರೆ ತಾನಾಗಿ ಮಾಡಬಲ್ಲುದೇನೂ ಇಲ್ಲ. ಹಾಗಲ್ಲದೇ ಸುಂದರವಾಗಿದ್ದರೇ? ಆಹಾ! ಆದರ್ಶಪ್ರಾಯವಾದ ಸೌಂದರ್ಯ ಹಾದರದ ಹುಡಿಗಿಯಲ್ಲಿರುವುದು ಅಸಂಭವ. ಸುಂದರಿ ಎಂಬುವ ಸತ್ಯವನ್ನು ಮರೆಮಾಚಲಾಗುವುದಿಲ್ಲ. ಇಷ್ಟಕ್ಕೂ ಪ್ರಯೋಜನವೇನು? ಯಾವುದು ಹೇಗಾದರೂ ಈ ಹಾದರದ ಹುಡಿಗಿಯನ್ನ ತಾನು ಸಂಸ್ಕರಿಸಲೇ ಬೇಕು!
ಭಾವನೆಗಳನ್ನು ಹೊಂದಿಸಿ ನೋಡುತ್ತಾ ರಂಗನಾಥಯ್ಯರು ಗುಡ್ಡದ ಮೇಲೆ ದಾರಿತೆಗೆದರು. ಸಮೀಪದ ದಾರಿಯಿಂದ ಆಲಯದೊಳಗೆ ಅಡಿ ಇಟ್ಟರು. ಭಕ್ತರೊಂದಿಗೆ ಗುಡಿ ಕೋಲಾಹಲದಿಂದ ತುಂಬಿದೆ. ಸಂದು ಮಾಡಿಕೊಳ್ಳುತ್ತಾ ಹೋಗಿ ಸರಳಳಗೆ ಸ್ವಲ್ಪ ಪಕ್ಕದಲ್ಲಿ ನಿಂತು ನೋಡುತ್ತಿದ್ದಾನೆ.
ಜೀವನದಲ್ಲಿ ಒಬ್ಬ ಹಾದರದ ಹುಡಿಗಿಯ ಪಕ್ಕದಲ್ಲಿ ನಿಲ್ಲುವುದು ಇದೇ ಮೊದಲನೆಯ ಬಾರಿ. ಮೊಗವೆತ್ತಿ ಸರಳಾನ್ನು ನೋಡುತ್ತಿದ್ದಂತೆ ಹಠಾತ್ತನೆ ಮೂರು ವಿಷಯಗಳು ಸ್ಫುರಿಸಿದವು. ಮೊದಲನೆಯದು ದೇವತಾಂಗನೆಯರ ಸೌಂದರ್ಯವನ್ನು ಸರಳೆಯಲ್ಲಿ ಅಚ್ಚೊತ್ತಿದಂತೆ ಕಾಣುತ್ತದೆ. ಎರಡನೆಯದು, ಅವಳ ದೈವಭಕ್ತಿ ಅಪಾರ. ಮೂರನೆಯ ವಿಷಯ: ಮಹಾಶಿವನು ಅರ್ಧ ನಾರೀಶ್ವರನಾಗಿ ಸ್ತ್ರೀ ಪುರುಷ ಸಮಾನ ಹಕ್ಕುಗಳನ್ನು ಲೋಕಕ್ಕೆ ಸಾರುತ್ತಿರುವನು. ಹೆಣ್ಣು ಗಂಡೂ ಸಮಾನವೇ! ಅದಕ್ಕೆ ಅರ್ಧ ನಾರೀಶ್ವರನೇ ಸಾಕ್ಷಿ. ಸರಳೆಯ ಸಹಚರ್ಯ ಭಾಗಸಿಕ್ಕರೆ ಎಷ್ಟೋ ಚೆನ್ನಾಗಿರುತ್ತದೆ. ಆ ಆನಂದವನ್ನು ಅನುಭವಿಸಬೇಕೆಂಬ ಕೋರಿಕೆ ಆತನಲ್ಲಿ ಆಶೆಯಾಗಿ ಪರಿಣಮಿಸಿತು. ಆತ್ಮನನ್ನು ಲತೆಯಂತೆ ತಬ್ಬಿಕೊಂಡಿತು. ಅಂತಹ ಮನೋಹರ ವಿಗ್ರಹದಲ್ಲಿ ಯಾವ ಕ್ರೂರತ್ವವೂ ಅಳಕವಾಗಿರುವುದಿಲ್ಲ. ಸರಳಳಲ್ಲೇ ದುಷ್ಟ ಸ್ವಭಾವವಿದ್ದಲ್ಲಿ ಆಗಸದಲ್ಲಿ ಹೊಳೆಯುವ ನಕ್ಷತ್ರಗಳಲ್ಲೂ ಸ್ವಚ್ಛತೆಯಿಲ್ಲವೆಂದೇ ತಿಳಿಯಬೇಕು. ಸೂರ್ಯನ ತೇಜವು ಕತ್ತಲಾಗುವುದೆಂಬುದೇ ಅದರ ಅರ್ಥ. ಉದಾರತಾ ಜನ್ಯವಾದ ಅವಳ ಸೌಂದರ್ಯ ನಿರ್ಮಲಾನಂದಮಯ. ಅದನ್ನು ಇನ್ನೂ ಉದಾತ್ತವಾಗಿ ಗಂಭೀರವಾದುದನ್ನಾಗಿ ಬದಲಿಸುವುದೇ ಮಾನವನ ಕರ್ತವ್ಯ.
ಅಂದಿನ ರಾತ್ರಿ ಆತನಿಗೆ ನಿದ್ರೆ ಹತ್ತಲಿಲ್ಲ. ರಾತ್ರಿ ಎಲ್ಲಾ ಶಿವರಾತ್ರಿಯಂತೆ ದೂಡುತ್ತಾ ಎಷ್ಟೊಂದು ಕಲ್ಪನೆಗಳಿಂದ ಹಾದರದ ಸೂಳೆಗಾರಿಕೆಯ ಹುಡಿಗಿಯರನ್ನು ಹೇಗೆ ಸುಧಾರಿಸಬೇಕೆಂಬ ಆಲೋಚನೆಗಳಿಂದ ಯೋಜನೆಗಳ ರಚಿಸುತ್ತಾ ಕೆದಡಿಹೋದ. ನಿಜಪತ್ನಿ ನೆನಪಿಗ ಬಂದಳು. ಆಕೆಯನ್ನು ಪ್ರೀತಿಸುವುದು ತನ್ನ ಧರ್ಮ. ತೌರು ಮನೆಗೆ ಕಳುಹಿಸಬೇಕೆಂದು ಬಗೆಬಗೆ ಯಾಗಿ ತನ್ನನ್ನು ಕೇಳುತ್ತಿದ್ದಾಳೆ. ತೌರಿಗೆ ಹೋಗಿ ಎಷ್ಟು ದಿನಳಾದವೋ ಪಾಪ! ಕಳಿಸೋಣವೆಂದರೇ ದೂರವಲ್ಲವೇ! ದೂರವಾದರೂ ಭಾರವಾದರು ಸರಿಯೇ ಈ ಸಲ ಕಳಿಸಲೇ ಬೇಕು. ತಪ್ಪದೆ ಅಂದುಕೊಂಡನು.
ಆ ಮರುದಿನ ಮುಂಜಾನೆ ಕಾಲೇಜೀ ನಲ್ಲಿ ಪ್ರಿನ್ಸಿಪಾಲರನ್ನು ಭೆಟ್ಟಿ ಮಾಡಿದ. ಅವರೊಂದಿಗೆ ಮಾತಾಡುತ್ತಾ “ಸೂಳೆಗಾರಿಕೆಯನ್ನು ತಡೆವುದು ಹೇಗೆ ಎಂಬ ವಿಷಯವನ್ನು ಪ್ರಸ್ತಾವನೆ ಮಾಡಿದ. ನಗರದಲ್ಲಿ ತನ್ನ ತಮ್ಮನೊಬ್ಬನಿದ್ದಾನೆ. ಅವನಿಗೆ ಈ ವಿಷಯವಾಗಿ ಸಭೆಯೊಂದನ್ನು ಏರ್ಪಡಿಸಲು ಪತ್ರ ಬರೆಯೋಣವೆಂದ. ಆ ಸಭೆಯಲ್ಲಿ ವಿಮುಕ್ತಿ ಸೈನ್ಯವನ್ನು ದಳದಳಾಗಿ ರೂಪಿಸಬಹುದು. ಅಷ್ಟರೊಳಗೆ ಕೆಲವು ಪ್ರಯೋಗಗಳು, ಪರಿಶೋಧನೆಗಳು ಸ್ಥಾನಿಕವಾಗಿ ಮಾಡಿ ನೋಡಿಕೊಳ್ಳಬಹುದು.
ಸಮಾಜಕ್ಕೆ ಅತ್ಯಂತ ಪ್ರಮಾದಕಾರಿಯಾಗಿ ಪರಿಣಮಿಸಿದ ಹಾದರದ ಹುಡಿಗಿಯನ್ನು ನೋಡಿ ಸ್ವಲ್ಪ ಪರೀಕ್ಷೆ ಮಾಡುತ್ತೇನೆ.”
“ಯಾರನ್ನು? ಹಾದರದ ಹುಡಿಗಿಯನ್ನೇ?” ಕಕ್ಕಾವಿಕ್ಕಿ ಯಾದ ಪ್ರಿನ್ಸಿಪಾಲರು ಕೇಳಿದರು.
“ಹೌದು”
“ಸರಳಳನ್ನೇನಾ?”
“ಹೋಗಲಿ ಸ್ವಲ್ಪ ಪ್ರಯತ್ನಿಸಿ ನೋಡುತ್ತೇನೆ.”
“ಮನೋವಿಕಾರಗಳಿಗೆ ಒಳಗಾಗಬಾರದು ಪ್ರೊಫೆಸರ್! ನಮ್ಮಂಥವರು ಆಕರ್ಷಣೆಗಳ ಸನಿಹಕ್ಕೂ ಹೋಗಬಾರದು. ಸಜ್ಜನರಿಗೆ ಈ ಪದ್ಧತಿ ತಕ್ಕುದಲ್ಲ!”
ಪ್ರೊಫೆಸರರ ಮುಖ ವಿವರ್ಣವಾಗಿ ಹೋಯಿತು. ಕಂಠದಲ್ಲಿ ಉಕ್ರೋಷ ಪ್ರತಿಧ್ವನಿಸಿತು.
“ನನ್ನ ದಾರಿಯನ್ನು ಎಂತಹ ವಿಷಯಲೋಲುಪನು ಅನುಸರಿಸಿದರೂ ಬದಲಾಗಲೇಬೇಕು.”
ಇಷ್ಟುಕಾಲ ಪ್ರಿನ್ಸಿಪಾಲರು ಪ್ರೊಫೆಸರರನ್ನು ತನ್ನ ಸೋದರವಂತೆ, ಹೆತ್ತ ಮಗನಂತೆ ಪ್ರೀತಿಸುತ್ತಿದ್ದರು. ಪ್ರೊಫೆಸರರದು ರಸಾರ್ದ್ರ ಹೃದಯ. ಯಾವ ಆತಂಕವನ್ನು ತಂದಿಡುವುದೋ ಎಂಬುದು ಪ್ರಿನ್ಸುಪಾಲರ ಭಯ.
“ಆತಂಕಗಳೇನೂ ಬರಬಾರದೆಂಬ ಆಶೀರ್ವಚನಗಳು ಎಚ್ಚರಿಕೆಯಂತೆ ತೋರಿ ಮನವನ್ನು ಕಲಕಿದಂತಾಯಿತು. ಬೇಸರಿಕೆ ಉಂಟಾಯಿತು. ತನ್ನ ಆತ್ಮಗೌರವಕ್ಕೆ ಕುಂದಾದಂತೆ ಕಂಡಿತು. ಆಲೋಚನೆಗಳ ಮಧ್ಯದಲ್ಲಿ ನಿಗೂಢವಾದ ಒಂದು ಕೋರಿಕೆ ಆತನಿಗೆ ತಿಳಿಯದಂತೆ ಹುಟ್ಟಿ ಬಂತು. ಆ ಇಚ್ಛೆ ಬಲವಾಗಿ ಬೆಳೆದು ಸರಳೆಯ ಕಡೆಗೆ ಪ್ರವಾಹದಂತೆ ಓಟ ತೆಗೆಯಿತು.
ತನಗೆ ಬದಲಾಗಿ ಯಾರನ್ನಾದರೂ ಈ ಸತ್ಕಾರ್ಯ ಸಾಧನೆಗೆ ವಿನಿಯೋಗಿಸಿಕೊಳ್ಳಬೇಕು. ಈ ಆಲೋಚನೆ ಆತನಿಗೆ ಎಷ್ಟೋ ಸಮಾಧಾನವನ್ನು ನೀಡಿತು…..
-೪-
ಈ ರಾಜಕಾರ್ಯವನ್ನು ‘ಚದುರಂಗ’ ದಂತೆ ನಡೆಸಬಲ್ಲ ಯುಕ್ತಿಪರರಾರು? ಸಾಲಾಗಿ ಗೆಳೆಯರನ್ನು ಜ್ಞಪ್ತಿಗೆ ತಂದುಕೊಳ್ಳಲು, ಅವನ ಮನಸ್ಸಿಗೆ ವಿಶ್ವನಾಥ ಶಾಸ್ತ್ರಿ ತಟ್ಟಿದ. ಆತನು ಒಳ್ಳೆಯ ಪಂಡಿತ, ಸಮಯಾಸಮಯಗಳನ್ನು ನೋಡಿ ಎಚ್ಚರಿಕೆಯಿಂದ ನಡೆಯ ಬಲ್ಲವ್ಯಕ್ತಿ. ಎದಿರಿನವರ ಅಭಿಪ್ರಾಯಗಳು ಅವೆಷ್ಟು ಅಡ್ಡದಿಡ್ಡವಾಗಿದ್ದರೂ ಸರೇ ಒಮ್ಮಲೇ ಅಮೋದಿಸುತ್ತಾ, ತಿಳಿದವನೆಂದು ಕೀರ್ತಿಯನ್ನು ಪಡೆದಿದ್ದಾನೆ. ಆಂಗ್ಲ ವಿದ್ಯಾಧಿಕರೊಂದಿಗೆ ಸಮಾನವಾಗಿ ನಡೆದುಕೊಳ್ಳುತ್ತಿರುವನು. ಎಲ್ಲದಕ್ಕೂ ಹೌದನ್ನುತ್ತಲೇ ತನ್ನ ಕೆಲಸವನ್ನು ಪೂರೈಸುಕೊಳ್ಳುವಲ್ಲಿ ನುರಿತ ಘನಾಪಾಠಿ. ಇವನೇ ತನ್ನ ವಿಮುಕ್ತಿ ಸೈನ್ಯದ ಪ್ರಪ್ರಥಮ ಸೈನಿಕನು. ವಿಶ್ವನಾಥ ಶಾಸ್ತ್ರಿ ಯನ್ನು ರಿಕ್ರೂಟ್ ಮಾಡಿದರೆ ತನ್ನ ಕೆಲಸ ಸುಗಮವಾಗುತ್ತೆಂದು ಪ್ರೊಫೆಸರ್ ಆಶೆ ಪಡುತ್ತಿದ್ದನು. ಆದರೆ ಇದೆಲ್ಲಾ ಕೇಳಿದ ಶಾಸ್ತ್ರಿಗೆ ಈ ಯೋಜನೆ ಯಾವಕೆಲಸಕ್ಕೂ ಬಾರದ್ದೆಂದೆನಿಸಿತು. ರಂಗನಾಥಯ್ಯರಿನಂತ ಹುಚ್ಚು ಮನುಷ್ಯ ಎಲ್ಲಾದರೂ ಇದ್ದಾನೆಯೇ? ಆದರೆ, ಇದು ಕೈಗೆಟುಕುವ ವ್ಯವಹಾರವೇ? ಎಟುಕದ್ದೋ? ಎಂದು ಶಾಸ್ತ್ರಿ ಆಲೋಚಿಸಿದೆ.
ಹಣದೊಂದಿಗೆ ಕೂಡಿದ ವ್ಯವಹಾರ. ಹಣವೇನು ಕಹಿಯೇ? ಝಣಝಣವೆನ್ನುತ್ತಾ ಅದು ಕೈಗಳಲ್ಲಿ ಬಿದ್ದವೆಂದರೆ ಶಾಸ್ತ್ರಿಗೆ ಸಾಧಿಸಲಾಗದ ಕೆಲಸವಿಲ್ಲ. ಎಂತಹ ಮತ ವಿರುದ್ಧವನ್ನಾದರೂ ಶಾಸ್ತ್ರ ಸಮ್ಮತವೆಂದು ಸಮರ್ಥಿಸಬಲ್ಲ ಪಂಡಿತನವನು. ಗ್ರಂಥಗಳಿಂದ ಅನೇಕ ಸೂತ್ರಗಳನ್ನು, ಉಕ್ತಿಗಳನ್ನೂ ಎತ್ತಿ ತೋರಿ ತನ್ನ ವಾದವನ್ನು ಸಪ್ರಮಾಣಕವೆಂದು ನಿರೂಪಣೆಮಾಡಲೂ ಬಲ್ಲ, ವೇದಗಳು ಬ್ರಹ್ಮನ ಸೃಷ್ಟಿಯಲ್ಲವೆಂತಲೂ ಕೇವಲ ಮಾನವ ಪ್ರೋಕ್ತಗಳೆಂದೂ ಎಂದೋ ಅಂಗೀಕರಿಸಿದವನು ಪುರಾಣಗಳು ಬರೀ ಅಭೂತ ಕಲ್ಪನೆಗಳೆಂದು ತೇಲಿಸಿ ಬಿಟ್ಟಿದ್ದ. ಮಾನವ ಪರಿಣಾಮವಾದದಲ್ಲಿ ತನಗಿರುವ ನಂಬಿಕೆಯನ್ನು ನಾಕು ಮಂದಿಯ ಮುಂದೆ ಜಾಹಿರಾತು ಮಾಡಿದವ. ಆದರೆ ಮನುಷ್ಯನನ್ನೂ ಕಪಿಯನ್ನೂ ಒಂದೇ ವಂಶವೃಕ್ಷಕ್ಕೆ ಸೇರಿಸಿದ್ದು ಅವನಿಗೆ ಅಚ್ಚರಿಯಾಗಿ ತನ್ನಲ್ಲಿ ತಾನೇ ನಕ್ಕ.
ಸೂಳೆಗಾರಿಕೆಯ ನಿರ್ಮೂಲನೆಯ ವಾದ ಯಾವುದೋ ಒಂದು ರೀತಿಯಲ್ಲಿ ಅವನಿಗೆ ಹಿಡಿಸಿತು. ಚಳುವಳಿ ನಾಲ್ಕು ಕಡೆಗೂ ವಿಸ್ತರಿಸಬೇಕಾದ್ದೇ! ದೇಶದಲ್ಲಿ ಸೂಳೆಯರಿರಬಾರದು. ಮುಂದಕ್ಕೆ ಜಿಗಿಯುತ್ತಿರುವ ನಾಗರಿಕತೆಗೆ ಸೂಳೆಯರ ಇರುವಿಕೆ ಆತಂಕವಾಗುತ್ತದೆ. ಈ ಆತಂಕವನ್ನು ತೂಲಗಿಸಲು ಪ್ರಚಾರ ಅವಸರವೇ.
ಒಂದು ಶುಭದಿನದಂದು ಈ ಪವಿತ್ರ ಪ್ರಚಾರಕಾರ್ಯದ ಭಾರ ಶಾಸ್ತ್ರಿಯ ಮೇಲೆ ಬಿತ್ತು. ಆಗಿನಿಂದ ಸಮಾಜ ಸುಧಾರಣೆಗೆ ಉಪಕ್ರಮಿಸಿದ. ನವಜೀವನದ ಗೃಹಪ್ರವೇಶದಲ್ಲೇ ಐವತ್ತು ರೂಪಾಯಿಗಳ ಸಂಭಾವನೆ ಕೈ ಸೇರಿತ್ತು. ತನಗೆ ಪ್ರೊಫೆಸರನೇಕೆ ಇಷ್ಟು ಮೊತ್ತವನ್ನು ಕೊಡುತ್ತಿರುವನೆಂಬ ಸಂಶಯ ಶಾಸ್ತ್ರಿಗೆ ಬಾರದಿರಲಿಲ್ಲ. ಸಮಾಜ ಸುಧಾರಣೆಗಿಂತಲೂ ಇದರಲ್ಲಿ ಯಾವುದೋ ಸ್ವಾರ್ಥವಿರದಿದ್ದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಯಾಕೆ ಕೊಡುತ್ತಾರೆ.
ಎರಡು ವಾರಗಳ ಕಾಲ ಸರಳೆಗೆ ಭಗವದ್ಗೀತೆ ಯನ್ನು ಓದಿ ವಾಖ್ಯಾನ ಮಾಡಿದ ಸ್ತ್ರೀಯರ ಪಾತಿವ್ರತ್ಯಗಳನ್ನು ಸಾರುವ ಪುರಾಣ ಘಟ್ಟಗಳನ್ನು ಇಬ್ಬರೂ ಸೇರಿ ಓದಿದರು. ಆದರೆ ಈ ಎರಡುವಾರಗಳಲ್ಲಿ ಪಟ್ಟ ಶ್ರಮ ನಿಷ್ಫಲವಾಯಿತು. ಸೂಳೆಗಾರಿಕೆಯ ಮೇಲೆ ಸಾಗಿದ ಚರ್ಚೆಗಳಲ್ಲಿ ಅವಳದೇ ಮೇಲುಗೈಯಾಗಿ ಕಂಡುಬಂತು.
ಅವಳವೆಲ್ಲಾ ಯಕ್ಷಪ್ರಶ್ನೆಗಳು “ಚಂದ್ರವಂಶದ ರಾಜರ ರಕ್ತ ಸೂಳೆಯರದೆ ಅಲ್ಲವೇನ್ರೀ” ಎಂದಾಕೆ ಕೇಳುವಲ್ಲಿ ನನ್ನ ಬಾಯಿ ಬಿದ್ದೇ ಹೋಯಿತ್ತೆಂದರೆ ನಂಬಿ.
“ಹಾಗಾದರೆ ಏನೆಂದು ಸಮಾಧಾನವಿತ್ತಿರಿ?”
“ಪುರಾಣಗಳೆಲ್ಲಾ ಅಸತ್ಯಗಳೆಂದೂ! ಮಂಗಗಳಿಂದ ಮಾನವರು ಬಂದರೆಂಬ ಪರಿಣಾಮ ಸಿದ್ಧಾಂತವೇ ಸತ್ಯವೆಂದೂ ಹೇಳಿಬಿಡೋಣವೆಂದುಕೊಂಡೆ, ಆದರೆ ಸುಮ್ಮನಿದ್ದು ಬಿಟ್ಟೆ.
ಸ್ವಲ್ಪ ಮುಜುಗರದಿಂದ ಅತ್ತಿತ್ತ ನೋಡಿ ಶಾಸ್ತ್ರಿ ಪ್ರೊಫೆಸರರನ್ನು ನೋಡುತಾ-
“ಈ ಪರಿಣಾಮವಾದ ಪ್ರಕಾರ ಹಾದರಗಿತ್ತಿಯರಿಗೆ ಸ್ಥಾನವಿಲ್ಲವೆಂದು ರುಜುವಾತು ಮಾಡಬೇಕೆಂದೇ ನನ್ನ ತಾಪತ್ರಯ”
“ಅವುಗಳ ಗೊಡವಗೆ ಈಗಾಗಲೇ ಹೋಗಬೇಡಿ. ಕಪಿಗಳಿಂದ ಪ್ರಸಂಗ ಪ್ರಾರಂಭಿಸಿದರೆ ಗಲಾಟೆಯಾಗಬಹುದು.”
“ಆದೆರೆ ಮತ್ತೇನು ಸಾಧನೆ ಇದೆ?”
“ಸ್ವಲ್ಪ ಮಟ್ಟಿಗಾದರೂ ಲೋಕಜ್ಞಾನವಿರದಿದ್ದಾಗ ಪರಿಣಾಮವಾದ ಸುಲಭವಾಗಿ ಅರಿಯಲಾಗದು. ಮುಂದೆ ಸ್ವಲ್ಪ ಕಾಗೆ ಗುಬ್ಬಿ ಕಥೆಗಳು ಹೇಳಿ ಆಕರ್ಷಿಸಬಾರದೇಕೆ?”
“ಆ ಕೆಲಸ ಹೇಳುವುದೇನೂ ಸುಲಭವೇ! ಮಾಡುವುದೇ ಕಷ್ಟ. ನಿಮ್ಮಂತೆ ನಾನು ಇಂಗ್ಲೀಷು ಬಲ್ಲವನಲ್ಲ! ಸರಳೆಯೊಂದಿಗೆ ಮಹಾ ಕಷ್ಟ. ಅವಳ ತಲೆಯಲ್ಲಿ ಎಲ್ಲವೂ ಸಂದೇಹಗಳೆ ಸರಸಿನಲ್ಲಿ ವಿಕಾಸಹೊಂದುವ ವಸಂತಕಾಲದ ಪದ್ಮಗಳಂತೆ.”
ಕೆಲವು ವಾರಗಳು ಕಳೆದವು. ಸರಳಳಿಗೆ ತನ್ನ ಪಾಂಡಿತ್ಯವನ್ನು ಕಲಿಯಲಾಗುತ್ತಿದೆಯೇ ಹೊರತು ಅನ್ಯಥಾ ಯಾವ ಬದಲಾವಣೆಯೂ ಇಲ್ಲ. ಶಾಸ್ತ್ರಿಗಿದು ಮನಸ್ತಾಪವನ್ನುಂಟು ಮಾಡಿತು. ಇವಳನ್ನು ಯಾರು ಮಾರ್ಪಡಿಸಿಯಾರು? ಒಬ್ಬನೇ ಒಬ್ಬ! ಇವಳಲ್ಲಿ ಬದಲಾವಣೆ ತರಬಲ್ಲವನಿದ್ದಾನೆ. ಆತನೇ ಇವಳನ್ನು ಪವಿತ್ರಳನ್ನಾಗಿ ಮಾಡಬಲ್ಲ. ಆದರೆ ಈ ಕೆಲಸವನ್ನು ಮಾಡಲು ಅವನು ಸಂಶಯಪಡುತ್ತಾನೇನೋ? ಸರಳ ಆತನನ್ನು ಗೌರವಿಸುತ್ತಿದ್ದಾಳೇ. ಪ್ರೀತಿಸುತ್ತಿದ್ದಾಳೇ. ಸರಳಳ ಬಗ್ಗೆ ಯಾರೂ ಲೋಕದಲ್ಲಿ ತೆಗೆದುಕೊಳ್ಳದ ಆಸಕ್ತಿಯನ್ನು ಈತನು ತೋರಿಸುತ್ತಿದ್ದಾನೆ. ಅದಕ್ಕಂತಲೇ ಆತನೆಂದರೆ ಅವಳಿಗೆ ಪ್ರೇಮ. ತನ್ನ ತುಟಿಗಳಿಂದ ಒಂದು ಮಾತು ಜಾರಿಬಂತೆಂದರೆ ಸಾಕು. ಅವಳು ತಪ್ಪದೆ ಬದಲಾಗುವಳು.
ವಿಶ್ವನಾಥ ಶಾಸ್ತ್ರಿ ಸರಳಳ ಮನೆಗೆ ಹೋಗುತ್ತಿದ್ದ ದಿನದಿಂದಲೂ ಅವಳು ಗುಡಿಗೆ ಬರುವುದು ಬಿಟ್ಟುಬಿಟ್ಟಿದ್ದಾಳೆ. ಇದು ರಂಗನಾಥಯ್ಯರ್ ಅವರಿಗೆ ಸೋಜಿಗವೆನಿಸಿತು. ನದಿಯ ದಂಡೆಯ ಮೇಲೆ ಪ್ರತಿವಾರವೂ ಷಿಕಾರಿಗಾಗಿ ಹೋಗುತ್ತಿದ್ದಾನೆ. ಸರಳಳ ದರ್ಶನ ದುರ್ಲಭವಾಗಿ ಹೋಗಿದೆ. ಇದೆಲ್ಲಾ ಶಾಸ್ತ್ರಿಯ ಗುರುತ್ವದ ಪ್ರಭಾವವೇ ಎಂದುಕೊಂಡ. ಇನ್ನು ಶಾಸ್ತ್ರಿ ಅವಳನ್ನು ಮಾರ್ಪಡಿಸುವುದೇನು? ಇದ್ದ ಆ ದೈವ ಭಕ್ತಿಯು ಸರಳಳಲ್ಲಿ ಮಾಯವಾಗುತ್ತಿರುವಾಗ ತಾನೇ ತಾನಾಗಿ ಹೋಗಿ ಸಂತೈಸಿ ಲೋಕದ ದಾರಿ ದಿಸೆಗಳ ಬಗ್ಗೆ ತಿಳಿಯ ಹೇಳಿ ಅವಳನ್ನೊಬ್ಬ ಗೃಹಿಣಿಯನ್ನಾಗಿ ಏಕೆ ಮಾರ್ಪಡಿಸಬಾರದೂ? ಆತನಲ್ಲಿ ಈ ಆಲೋಚನೆ ಹೊಳಯುವ ಹೊತ್ತಿಗೆ ಎದುರಿಗೆ ಶಾಸ್ತ್ರಿ ಬಂದು ‘ಮಾಡಬಹುದು, ಆದರೆ ನೀನೊಬ್ಬ ನೈತಿಕವಾಗಿ ಹೇಡಿ!’ ಅಂದಂತಾಯಿತು. ಚಳುವಳಿಯು ಉದಾತ್ತವಾದುದಾದಾಗ ಸಂಶಯವೇಕೆ? ಅದರಲ್ಲಿ ರಹಸ್ಯವೇಕೆ? ಸೋಕ್ರಟೀಸ್ ನಿರ್ಭಯನಾಗಿ ಹೆಣ್ಣುಗಳೊಂದಿಗೆ ಮಾತನಾಡುತ್ತಿರಲ್ಲಿವೇ, ಬೆಲೆವೆಣ್ಣೆಂದು ಅವಳ ಅಹ್ವಾನವನ್ನು ಬುದ್ಧನು ತಿರಸ್ಕರಿಸಲಿಲ್ಲವಲ್ಲವೇ, ಮಾನವರ ಅವಸ್ಥೆಗಳನ್ನು ತಿಳಿಯಬೇಕಾದರೆ ಅವರೊಂದಿಗೆ ಬೆರೆತು ಹೋಗಬೇಕು. ಕವಿಗಳು ಕಲೆತು ಹೋಗಬೇಕು. ಕವಿಗಳಗೇನೇ ವಿಶೇಷಾಧಿಕಾರವಿದೆ. ಜೀವನವನ್ನು ಪರಿಪೂರ್ಣತೆಯಿಂದ ಕಾಣಬೇಕೆಂದು ಬಯಕೆ ನ್ಯಾಯವಾದದ್ದು.
ಈ ವರೆಗೂ ಆತನು ಸಂಶಯವಾದಿಯೇ! ದೇವನಿದ್ದಾನೋ ಇಲ್ಲವೋ ಎಂಬ ತರ್ಕದಿಂದ ಪರಿಶೋಧನೆ ಮಾಡುತ್ತಿದ್ದಾನೆ. ಆದರೆ ಈ ಬಾರಿಗೆ ದೇವರಿದ್ದನೆಂಬ ನಂಬಿಕೆ ಸ್ವಲ್ಪಸ್ವಲ್ಪವಾಗಿ ಉಂಟಾಗಲಾರಂಭಿಸಿತು. ಪೂರ್ವದ ನಂಬಿಕೆಗಳು ಸಡಿಲವಾಗುತ್ತಾ ಹೋಗುತ್ತಿವೆ. ಆತ್ಮಪರಮಾತ್ಮ, ಜೀವಿಗೆ ಬೇರೆ ಲೋಕಗಳಿವೆ. ಸಾಪತ್ಯವುಳ್ಳ ಜೀವಿಗಳ ನಡುವಣ ಅದ್ಭುತಾಕರ್ಷಣೆ ಇದ್ದಿರಬೇಕು. ಮಹಾ ಉದ್ರೇಕ, ಈಶ್ವರ ಪ್ರೇರಿತವಾದಂತಾ ಉದ್ರೇಕ. ಬ್ರೌನಿಂಗ್ ಮಹಾಕವಿಯನ್ನು ತುಂಬಿಕೊಂಡಿತ್ತು. ಆದ್ದರಿಂದಲೇ ನಿಜವಾದ ಪ್ರೇಮ ಎಂದೆಂದಿಗೂ ವ್ಯರ್ಥವಾಗುವುದಿಲ್ಲವೆಂದು ಆಲಾಪಿಸಿದ್ದಾನೆ. ಇದು ಗಂಭೀರವಾದ ಸತ್ಯವೇ.
ರಂಗನಾಥಯ್ಯರು ವಿಚಿತ್ರವಾದ ಮನಸ್ತತ್ವದಲ್ಲಿ ಗುದ್ದಾಡುತ್ತಿದ್ದಾರೆ. ವಿಜ್ಞಾನ ಶಾಸ್ತ್ರಾಭ್ಯಾಸ, ಸಂಶಯನಿವೃತ್ತಿಗೆ ಬದಲು, ಸಂದೇಹಗಳನ್ನು ಹುಟ್ಟಿಸುತ್ತಿದೆ. ಸಂಶಯಗಳ ಮೋಡಗಳ ಪರದೆ ಕಣ್ಣಿನ ಮೇಲೆ ಹಾಯ್ದು ಬರುತ್ತಿದೆ. ಸಲ್ಲದ ಅನುಭವಗಳ ಆನಂದಕ್ಕಾಗಿ ಹಾತೊರೆಯುತ್ತಾ ಮೋಸ ಮಾಡುತ್ತಿದೆ. ಎದುರಿಸಲು ಅಸಾಧ್ಯವಾದ, ಅತ್ಯಂತ ಆಕರ್ಷಣೀಯವಾದ, ವಸ್ತುವಾವುದೋ ತನ್ನನ್ನು ತನ್ನೆಡೆಗೆ ಸೆಳೆಯುತ್ತಿದೆ. ಇದಕ್ಕೆ ಕಾರಣವಾದರೂ ಏನು? ಆಲೋಚನೆ ಮಾಡಿ ನೋಡಿದರೆ ಆಕರ್ಷಣೆ ಎಂಬುದಕ್ಕೆ ಅರ್ಥ ವಿಲ್ಲವಲ್ಲವೇ? ಅಡಿಗಡಿಗೆಗೆ ಇದೇ ತರ್ಕ ಆತನನ್ನು ಪೀಡಿಸುತ್ತಿದೆ. ದುಃಖಿತನನ್ನಾಗಿ ಮಾಡುತ್ತದೆ. ಬೇಸರಿಕೆ ತರುತ್ತದೆ.
-೫-
ಕ್ರಿಶ್ಮಸ್ ರಜೆಗಳು ಬಂದವು. ‘ಪೀ’ ಎಂಬ ಪಟ್ಟಣದಲ್ಲಿ ಸಮಾಜ ಸುಧಾರಕರು ಸಭೆಯನ್ನು ನಡೆಸುತ್ತಿದ್ದರೆ, ಅದರಲ್ಲಿ ರಂಗನಾಥಯ್ಯರು, ಸೂಳೆಗಾರಿಕೆಯ ಮೇಲೆ, ಪ್ರಧಾನವಾದ ಒಂದು ತೀರ್ಮಾನ ಪ್ರತಿಪಾದನೆ ಮಾಡಬೇಕಾಗಿದೆ. ಆದಾಗ್ಯೋ ಅವರೀ ಮೀಟಿಂಗಿಗೆ ಹಾಜರಾಗಲಾಗದೆ ಹೋದರು. ಕೇವಲ ಲಾಬೋರೇಟರಿಯಲ್ಲಿ ಕುಳಿತು ಏಕಾಂತವಾಸದಲ್ಲಿದ್ದಾರೆ. ಎಲೆಕ್ಟ್ರಿಸಿಟೀ ಮೇಲೆ ಪ್ರಯೋಗಗಳನ್ನು ಮಾಡುತ್ತಾ ತನ್ನನ್ನು ತಾನೇ ಮರೆಯುತ್ತಿದ್ದಾರೆ. ಅನೇಕ ದಿನಗಳಿಂದಲೂ ಇದೇ ಪರಿಶೋಧನೆ.
ಒಂದು ದಿನದ ಸಾಯಂಕಾಲ. ನಡೆದ ಪ್ರಯೋಗವನ್ನು ನೋಡಿಕೊಳ್ಳುತ್ತಾ ಹಿಡಿಸಲಾರದ ಸಂತೋಷದಿಂದ ಉಬ್ಬಿ ಹೋಗುತ್ತಿದ್ದರು. ಆತನ ಮುಖವು ಉಜ್ಜ್ವಲವಾಗಿದೆ. ಕಂಗಳಲ್ಲಿ ಸಂತೃಪ್ತಿ ಮನೆ ಮಾಡಿಕೊಂಡಿದೆ. ಎಲ್ಲರೂ ಬಯಸಿದ್ದ ಪರಿಶೋಧನೆ ವಿಜಯವಂತವಾಗಿ ಮುಗಿಯಲು ಬಂದಿದೆ. ಆನಂದದಿಂದ, ಆವೇಶದಿಂದ ಕುರ್ಚಿಯ ಮೇಲೆ ಕುಳಿತ. ಎದುರಿನಲ್ಲಿರುವ ಬೆಂಚಿನಮೇಲೆ ಒಬ್ಬ ಸೊಗಸಾದ, ಮುದ್ದಾದ, ಯವ್ವನದ ಹುಡಿಗಿ ಕೂತಿದ್ದಾಳೆ. ಆ ಬಾಲೆಯ ಕಪ್ಪಿನ ಕಣ್ಣು, ಗಾಳಿಗೆ ತೂಗಿತ್ತಿರುವ ಮುಂಗುರುಳು, ಆಗಲೇ ನಸುಕತ್ತಲು ಹಾಯುತ್ತಿದೆ. ಎದುರಿನಲ್ಲಿದ್ದವರು ಯಾರೆಂದು ನೋಡಿದನು. ಏನೋ ಭ್ರಮೆ! ಮತ್ತೇನೂ ಇಲ್ಲ ಕಣ್ಣು ಹಿಚಿಕಿಕೊಂಡು ಮತ್ತೇ ನೋಡಿದ. ಭ್ರಮೆ ಯಲ್ಲ. ನುಣ್ಣಗೆ ಜಾರಿ ಬೀಳುತ್ತಿರುವ ಉಂಗುರುಂಗರಗಳ ಕೂದಲಿರುವ ಒಬ್ಬ ಅತಿ ಸುಂದರ ತರುಣಿ! ಆ ಬಾಲೆಯನ್ನು ಕಂಡ ಕೂಡಲೇ ಕವಿತಾವೇಶ ಉಕ್ಕಿ ಬಂದು ಇಂಗ್ಲೀಷಿನಲ್ಲಿ ಹಾಡಲಾರಂಭಿಸಿದ.
ಪ್ರೇಮವೆಂಬುದು ಏನೂ ತಿಳಿಯದು.
ಮುದ್ದು ಸೂಸುವ ಹಸು ಗೂಸಿಗೆ
ಸಾವೆ, ಒಳೆತೆಂದು ಪ್ರೇಮಕಿಂತಲು
ಸ್ವಲ್ಪವಾದರು ತಿಳಿಯದಾಯಿತು.
ಹಾಡು ನಿಲ್ಲಿಸಿ ಆ ಬಾಲೆಯನ್ನು ಸಮೀಪಿಸಿ ಇಂಗ್ಲೀಷಿನಲ್ಲೇ, ಅವಳಿಗೆ ಅರ್ಥವಾಗುವುದೆಂದು ತಿಳಿದವರಂತೆ ಕೇಳಿದ.
“ಇಲ್ಲಿ ನಿನಗಿರುವ ಕೆಲಸವೇನು ಬಾಲೇ?” ಆ ಹುಡುಗಿ ಬಿತ್ತರ ಹೋದಳು. ಅದೇನನ್ನು ಗಮನಿಸದೇ ಇಂದ್ರಲೋಕದಿಂದ ಅಮೃತವನ್ನು ತಂದಿರುವೆಯಾ? ನರಕದಿಂದ ಯಮಪಾಶವನ್ನು ತಂದಿರುವೆಯಾ?”
ಆ ಚಿಕ್ಕ ಹುಡಿಗಿ ಮತ್ತಷ್ಟು ಬೆದರಿ ಹೋಗುತ್ತಿದ್ದಳು. ನಡುಗುತ್ತಾ ಆತನ ಕೈಗೊಂದು ಪ್ರತವನ್ನು ಕೊಡುತ್ತಾ “ಇದು ನಮ್ಮ ಅಕ್ಕ….” ಎಂದು ನಿಲ್ಲಿಸಿದಳು. ಪತ್ರ ಬಿಚ್ಚಿ ನೋಡಿಕೊಂಡ.
“ನೀನು ಸರಳಳ ತಂಗಿಯೇನು?”
“ಹೌದು.”
“ಹೆಸರು?”
“ತರಳ”
“ತರಳಾ?”
ರಂಗನಾಥಯ್ಯರು ಪತ್ರವನ್ನು ಒಳಗೊಳಗೇ ಓದಲಾರಂಭಿಸಿದ. ಕೈ ಬರಹವೋ ಮುತ್ತಿನ ಹಾರದಂತಿದೆ. ಪತ್ರದಲ್ಲಿ ಸರಳ ಎರಡು ಸಂಸ್ಕೃತಶ್ಲೋಕಗಳನ್ನು ಬರೆದಿದ್ದಾಳೆ. ರಮ್ಯಾರ್ಥ ಪ್ರತಿಪಾದಕಗಳಾದ ಆ ಶ್ಲೋಕಗಳು ಅಗಾಧಗಳ ತಳಕ್ಕೆ ದಾರಿ ತೋರಿಸುತ್ತಿವೆ. ಓದಿಕೊಂಡಿದ್ದನ್ನೇ ಮತ್ತೊಮ್ಮೆ ಮಗದೊಮ್ಮೆ ಓದಿಕೊಂಡ. ಅರ್ಥವಾದಾಗ ಚಮತ್ಕಾರವಾಗಿ ಕಂಡಿತು. ಚಂದ್ರಕಾಂತಿಯನ್ನು ಆಸ್ವಾದಿಸುವ ಚಕೋರ ಇತರ ಖಾದ್ಯ ಪದಾರ್ಥಗಳನ್ನು ತಿರಸ್ಕರಿಸುತ್ತದೆ. ಆದರೆ ಅಯ್ಯೋ! ಮೇಡಗಳ ಸಾಲುಗಳು ರಾತ್ರಿಯ ರಾಜನನ್ನು ಮುಚ್ಚಿಬಿಟ್ಟಿವೆ. ಮಿಣಕುಹುಳ “ನಾನೇ ನಿನಗಾನಂದವನ್ನು ಕೊಡುತ್ತೇನೆ. ಇಲ್ಲಿಯೇ ಇದ್ದೇನೇ ಎಂದು ಕತ್ತಲಿನೊಡನೆ ಕೇಳುತ್ತಿದೆ. ಆದರೆ ರಾತ್ರಿಗೆ ಸಾಂತ್ವನ ಸಿಗಲಿಲ್ಲ. ಅವಳು ಚಂದ್ರಮನಿಗಾಗಿ ನಿರೀಕ್ಷಣೆಯಲ್ಲಿದ್ದಾಳೆ. ಚಂದ್ರಮನೊಬ್ಬನೇ ಅವಳ ಕತ್ತಲನ್ನು ಹೊಡದೋಡಿಸಬಲ್ಲನು.”
ಈ ಶ್ಲೋಕಗಳಲ್ಲಿದ್ದ ತಾತ್ಪರ್ಯ ಆತನ ಹೃದಯವನ್ನು ಕರಗಿಸಿ ಬಿಟ್ಟಿತು. ಸರಳಳ ಆತ್ಮ ಈ ಪತ್ರದಲ್ಲಿ ಬೆರೆತಿದೆ. ಅವಳ ಆತ್ಮ ಅವಳ ದೇಹಕ್ಕಿಂತಲೂ ಸುಂದರವಾದದು. ನಿರ್ಮಲವಾದುದು. ಉಜ್ವಲ ತೇಜೋಮಯವಾದುದು. ಒಂದು ನೀಚಕುಲದಲ್ಲಿ ಜನಿಸಿದ ಹೆಣ್ಣಿನಲ್ಲಿ ಇಂತಹ ದೇವತಾ ಸ್ತ್ರೀ ಲಕ್ಷಣಗಳಿರುವುದು ಅತ್ಯಾಶ್ಚರ್ಯ!
“ನಿನ್ನ ಹೆಸರೇನಮ್ಮಾ? ತರಳ ಅಲ್ಲವೇ? ತರಳಾ ನಿನಗಿಂಗ್ಲೀಷು ಬರುತ್ತಾ?”
“ಸ್ವಲ್ಪ ಮಟ್ಟಿಗೇನ್ರಿ” “ಸ್ಕೂಲಿನಲ್ಲೇ ಓದುತ್ತಿದ್ದೀಯಾ?”
“ಹೌದು.”
ಈ ಸಮಾಧಾನವನ್ನು ಕೇಳಿ ರಂಗನಾಥಯ್ಯರು ಮೊದಲಿಗೆ ಅಚ್ಚರಿಗೊಂಡರು. ಸೂಳೆಯರ ಮಕ್ಕಳಿಗೆ ಗರಲ್ಸ್ ಸ್ಕೂಲುಗಳಲ್ಲಿ ಪ್ರವೇಶವೆಂತು ಸಿಕ್ಕಿದೆ ಎಂಬುದು ಆತನ ಸಂದೇಹ! ಆಹಾ! ಇದರಲ್ಲೇನಿದೇ? ತಾನು ಗರ್ಭಗುಡಿಯಂತೆ ನೋಡಿಕೊಳ್ಳುತ್ತಿದ್ದ ಲೇಬೊರೇಟರಿ ಯೊಳಕ್ಕೆ ಈ ಬಾಲೆ ಎಷ್ಟು ನಿರ್ಭಯಳಾಗಿ ದಾಳಿ ಮಾಡಿದಳು? ಇನ್ನು ಶಾಲೆಯಲ್ಲಿ ಪ್ರವೇಶಿಸುವುದೇನಿದೆ. ಇಲ್ಲಿಗೆ ಬರುವುದೇ ದೊಡ್ಡದು. ಆ ಬಾಲೆಗೆ ಸ್ವಾಗತ! ತಾನಿಂಗ್ಲೀಷ್ನಲ್ಲಿ ಮಾತಾಡಿದರೆ ಅರ್ಥವಾಗದೇನೋ? ಕನ್ನಡದಲ್ಲೇ ಪ್ರಶ್ನೆ ಹಾಕಿದ.
“ಈ ರಹಸ್ಯವನ್ನು ಈಷಣ್ಮಾತ್ರವೂ ಹೊರಗೆ ಬರಬಾರದು! ಏನು?”
“ಹಾಗಂತಲೇ ಹೇಳಿ ನನ್ನ ಕಳಿಸಿದ್ದಾಳೆರೀ”
“ಬಹಳ ಒಳ್ಳೆಯ ಹುಡಿಗಿ. ನಿಮ್ಮಕ್ಕನಿಗೆ ಇಂದು ಬರುತ್ತೇನೆಂದು ಹೇಳಿಬಿಡು. ಬಂದು ನಾಕು ವಿಷಯಗಳನ್ನು ಬೋಧಿಸುವೆನೆಂದು ಹೇಳು.”
“ಹಾಗೆಯೇ ಸಾರ್!”
“ಅಚ್ಛಾ! ನಿಮ್ಮಕ್ಕನೆ ಜೊತೆ ನನಗೆ ಕೆಲಸವಿದೆ. ಯಾರನ್ನೂ ಬರಗೋಡಬೇಡ. ನಿಮ್ಮಮ್ಮನನ್ನು ಸಹ.”
“ಯಾರನ್ನೂ ಬರಗೊಡುವುದಿಲ್ಲ. ನೀವೊಬ್ಬರೇ ಮಾತಡುವಿರಿಯಂತೆ.”
“ಅದೇ ಮತ್ತೆ, ನೀನು ಸರಳಾ ಬಿಟ್ಟು ಬೇರಾರೂ ಇರಬಾರದು.”
ಹಾಗೆಯೇ ಎಂದು ತರಳ ತಲೆ ಅಲ್ಲಾಡಿಸಿ ಹೋಗಿಬಿಟ್ಟಳು. ಆ ಸಂಜೆ ರಂಗನಾಥಯ್ಯರಿಗೆ ಸಂತಾಪವೂ ಉಂಟಾಯಿತು. ಉಲ್ಲಾಸವೂ ಉಂಟಾಯಿತು. ಸರಳಳಾ ಮನೆಗೆ ಬರುವೆ ನೆಂದು ವಾಗ್ದಾನ ಕೊಡುವಷ್ಟು ಅಲಸತ್ವವು ಏಕೆ ತನಗಾಯಿತು? ಏನಿದು ? ದೌರ್ಭಾಗ್ಯವೆಂದು ಕಸಿವಿಸಿ ಯಾದ. ತಾನೊಬ್ಬ ಒಂದು ಘನಕಾರ್ಯಾರ್ಥವಾಗಿ ಪ್ರಾಣಗಳನ್ನೇ ಅರ್ಪಿಸುವ ಮಹಾತ್ಯಾಗಿಯೆಂದೇ ಭಾವಿಸಿಕೊಂಡ. ಸರಳಳೊಂದಿಗೆ ಐಕ್ಯತೆಗಾಗಿ ಸ್ವರ್ಗಾನಂದಕ್ಕಾಗಿ ಯಾವುದನ್ನಾದರೂ ಬಿಟ್ಟುಬಿಡಬೇಕು. ಜೀವಿತದಲ್ಲಿ ಯಾವುದು ಶಾಶ್ವತ? ನಿರ್ಮಲವಾದ ಪ್ರೇಮ ಪವಿತ್ರವಾದದ್ದು. ಪ್ರೇಮಿಕರ ಹೃದಯಗಳ ನಡುವೆ ತನ್ನ ಕ್ರೂರ ಸಂಪ್ರದಾಯಗಳಿಂದ ಪ್ರಪಂಚವೇ ಅಡ್ಡಾಗಿ ನಿಲ್ಲುತ್ತದೆ. ಸಮಾಜವು ಹುಟ್ಟಿನಂದಿನಿಂದ ಇದೇ ವಿಧಾನ. ಸಾಟಿ ಆತ್ಮಕ್ಕಾಗಿ ಹೃದಯ ಪರಿತಪಿಸುತ್ತಿದೆ. ಪೆರಿಕ್ಲಿಸ್ಸು ಪಾಪ ಎಸ್ಟೇಸಿಯಾಳಂತಹ ದೇವತೆಗಾಗಿ ಪರಿತಪಿಸಿಹೋದ. ಆದರೆ ಪ್ರಪಂಚ ಆ ಪ್ರೇಮಿಕರ ಹೃದಯಗಳನ್ನು ಬೇರಾಗಿಸಿತು. ಮಾನವರ ಆನಂದವನ್ನು ನೋಡಿ ಗ್ರೀಕು ದೇವತೆಗಳಿಗಿಂತಲೂ ಕೂಡಾ ಅಧಿಕವಾಗಿ ಈ ಲೋಕ ಕಣ್ಣು ಬಿಡುತ್ತಿದೆ. ಎಂತಹ ನೋಡಲಾರದಪರಿ!
-೬-
ಕತ್ತಲಾಯಿತು. ಸಣ್ಣ ಸಣ್ಣ ತುಂತುರು ಹನಿಗಳು ಬೀಳುತ್ತಿವೆ. ಜನ ಸಂದಣಿ ಕಡಿಮೆಯಾಗಿ ಬೀದಿಗಳು ನಿಶ್ಶಬ್ದವಾಗಿವೆ. ಸಂದುಗೊಂದಿಗಳನ್ನು ಸುತ್ತಿ, ಸುತ್ತು ದಾರಿಯಲ್ಲಿ ಅಯ್ಯರು ಸರಳಳ ಮನೆಗೆ ಹೋಗುತ್ತಿದ್ದಾನೆ. ಅವಳ ಮನೆಯ ಮುಂದೆ ಪ್ರತ್ಯೇಕವಾಗಿ ಜರ್ಮನ್ ಗೆಳೆಯ ಹಾಕಿಸಿದ ಬೀದಿ ದೀಪ ಬೆಳಗುತ್ತದೆ. ಆ ಮನೆಯ ಪಕ್ಕದನೆರಳಲ್ಲಿ ನಿಂತಿದ್ದಾನೆ. ಯಾರಾದರೂ ನೋಡುವರೇನೋ ಎಂಬ ಭೀತಿಯಿಂದ ಎದೆ ಡವಡವಗುಟ್ಟುತ್ತಿದೆ. ನರಗಳು ಸಂಯ್ ಸಂಯ್ ಎಂದು ಸೆಳೆಯುತ್ತವೆ. ಬೀದಿಯದೀಪ ದೆವ್ವದಂತೆ ನೋಡುತ್ತಿದೆ. ಎಂದೂ ಯಾವುದಕ್ಕೂ ಚೆದರಿ ಹೋಗದ ಆತನ ಎದೆ ಝಲ್ಲೆಂದಿತು. ಬೇಗನೆ ಮನೆಗೆ ಮರುಳುವುದು ಒಳಿತೇನೋ ಅಂತಲೂ ಅಂದುಕೊಂಡ. ಯಾಕೆ ಬಂದ ತಂಟಿ ಇದು? ಹಾಯಾಗಿ ಮನೆಗೆ ಹೋಗಿ ಮಲಗಿಕೊಳ್ಳದೆ? ….ಇಷ್ಟು ದೂರ ಬಂದಮೇಲೆ ಬರಿಯ ಕೈಯಿಂದ ಮನೆಗೆ ತೆರಳುವುದೇ? ಈ ಮನೆ ಹೊಕ್ಕು ಒಳಗೆ ಹೋಗಿ ಅವಳೊಂದಿಗೆ ಮಾತನಾಡಿದರೆ ಬರುವ ಅಘಾತವಾದರೂ ಏನಿದೆ?
ಆತನ ಹೃದಯ ಜೋಕಾಲಿಯಂತೆ ಅತ್ತಿತ್ತ ಊಗುತ್ತಿದೆ. ಮನೆಯ ಮೆಟ್ಟಲು ಗಬಗಬ ಹತ್ತಿ ಮತ್ತೆ ಸಂಶಯದಿಂದ ಸರ್ರನ ಹಿಂತಿರಿಗಿ ಇಳಿದು ಹೋಗುತ್ತಿದ್ದ. ಮನೆಗೆ ಹೋಗಿಬಿಡಲು ಮುಖ ಹಿಂದು ಮಾಡಿ ನಾಲ್ಕು ಅಡಿಗಳಿಡುವಷ್ಟರಲ್ಲೇ ಯಾರೋ ಕರೆದಂತಾಯಿತು. ಅಹುದು ಆ ಕಂಠಸ್ವರ ಸರಳೆಯ ತಂಗಿ ತರಳದಿದ್ದಂತಿದೆ. ಆತನನ್ನು ಕರೆಯುತ್ತಾ ಸಲಿಗೆಯಿಂದ ಸಮೀಪಕ್ಕೆ ಬಂದು ನಿಂತಳು. ಇಷ್ಟು ಹೊತ್ತೂ ತನ್ನ ಗಾಬರಿ ನೋಡಿ ಈ ಹುಡಿಗಿ ತನ್ನನ್ನೊಬ್ಬ ಹುಚ್ಚನಂದೆಣಿಸಿದಳೋ ಏನೋ? ಆ ಹುಡಿಗಿ ಸಲೀಸಾಗಿ ಮಾತಾಡುತ್ತಾ ಒಳಕ್ಕೆ ಕರೆದುಕೊಂಡು ಹೋದಳು. ಮಾಡಿಯ ಮೆಟ್ಟಲನ್ನು ತೋರಿಸಿದಳು. ಪ್ರೊಫೆಸರರು ಮಾಡಿಯ ಮೆಟ್ಟಲು ಹತ್ತುತ್ತಿದ್ದಂತೆ ಕೋಣೆಯೊಳಗಿನಿಂದ ಗುಪ್ಪೆಂದು ಹೂಗಳ ವಾಸನೆ ಹೊಡೆಯಿತು. ಅಗರು ಧೂಪವು ಹಬ್ಬಿಕೊಂಡಿತು. ಚಿತ್ರ ವಿಚಿತ್ರವಾದ ಪರಿಮಳಗಳು ಸ್ವಾಗತವನ್ನು ನೀಡುತ್ತಿರುವಂತೆ ಕಂಡಿತು. ಸ್ವಾಗತವನ್ನು ಸ್ವೀಕರಿಸಿ, ಎರಡನೆಯ ಅಂತಸ್ಥಿನೊಳಗೆ ಹೋಗುವ ಮಟ್ಟಿಗೆ ತಂಬಾಕಿನ ವಾಸನೆ, ಹೆಂಡದನಾತ, ಮೂಗಗಿನ ಗೋಡೆಗಳನ್ನು ಹೊಡೆಯುತ್ತಿರುವಷ್ಟು ತೀವ್ರವಾಗಿ ಮೇಲೆ ಬಂತು. ಶರೀರದಲ್ಲೆಲ್ಲಾ ನಡುಕ ಹುಟ್ಟಿಕೊಂಡಿತು. ಆ ಹಾಲ್ ನಲ್ಲಿ ಒಂದು ಮೂಲೆಯಲ್ಲಿ ತೈಲದ ದೀಪ ಬೆಳೆಗುತ್ತಿದೆ. ಬೀರುವಾ, ಸೋಫಾ, ಕುರ್ಚೀ ಕೋಣೆಯ ತುಂಬಾ ಹರಡಿವೆ. ಅಲಂಕರಣೆ ಸ್ವಲ್ಪ ಹಳೆ ಕಾಲದ್ದು. ಇನ್ನೂ ಸ್ವಲ್ಪ ಇತ್ತೀಚಿನದು. ರವಿ ವರ್ಮನ ಬಣ್ಣ ಬಣ್ಣದ ಚಿತ್ರಪಟಗಳು, ತಂಜಾವೂರು ನಾಯಕರಾಜರ ಕಾಲದ ಪೌರಾಣಿಕ ಪಟಗಳು ಗೋಡೆಗಳಿಗೆ ನೇತಾಡುತ್ತಿವೆ. ಅಧುನಾತನ ಶತಮಾನದಲ್ಲಿ ಇರತಕ್ಕವಲ್ಲದ ಅವೆಲ್ಲಾ ಅಲ್ಲಿ ಅನಾಗರಿಕವಾಗಿ ಕಾಣುತ್ತವೆ. ಗೋಡೆಗಳ ಉದ್ದಕ್ಕೂ ಅಲ್ಲಲ್ಲಿ ಕುಶಲ ಕೆಲಸದ ಗೂಡುಗಳಿವೆ. ಅವುಗಳಲ್ಲಿ ಕಟ್ಟಿಗೆಯ, ಅರಗಿನ, ಪಿಂಗಾಣಿಯ ಗೊಂಬಿಗಳು, ವಸ್ತುಗಳು ಚಿಲ್ಲಿಪಿಲ್ಲಿಯಾಗಿ ಬಿದ್ದಿವೆ. ಮಚಿಲೀಪಟ್ಟಣದಲ್ಲಿ ತಯಾರಾದ ತೆಳ್ಳೆನೆಯ ಬಿಳಿ ಬಟ್ಟಿ ಸೀಲಿಂಗಿನ ಮೇಲೆ ಹಾಸಲಾಗಿದೆ. ಅದರ ಮೇಲೆ ಶ್ರೀ ಕೃಷ್ಣನ ರಾಸಕ್ರೀಡೆ ಚಿತ್ರಿತವಾಗಿದೆ. ಬಣ್ಣಬಣ್ಣದ ಗ್ಲೋಬುಗಳ, ಜಿಗಜಿಗ ಹೊಳೆಯುವ ಗಾಜಿನ ವಸ್ತುಗಳು ಸೀಲಿಂಗ್ ಲಿಂದ ಜೋತಾಡುತ್ತಿವೆ. ಒಂದು ದೊಡ್ಡ ಚಂದನದ ಹಂದರದ ಮಂಚ ಹಾಲಿನಲ್ಲಿ ಒಂದು ಮೂಲೆಯನ್ನು ಆಕ್ರಮಿಸಿದೆ. ಅದರ ಮೇಲೆ ಬೆಲೆ ಬಾಳುವ ಹಚ್ಚಡಗಳು, ಹಾಸಿಗೆಗಳು ಹಾಸಿವೆ. ನೆಲದಮೇಲೆ ಸವೆದುಹೋದ ಏಲೂರಿನ ತಿವಾಸೀ ಇದೆ. ತಿವಾಸಿಯಮೇಲೆ ಬೀಸಿದ ಬೆಂಕಿ ಕಡ್ಡಿಗಳು, ಸಿಗರೆಟ್ ತುಂಡುಗಳು, ಗ್ಲಾಸುಗಳು, ಹುಕ್ಕಾ ಕೋವಿಗಳು, ಪಾನ್ ಬೀಡಾದ ತುಂಡುಗಳು. ಪೀಕದಾನೆಗಳು (ಎಲೆ ಎಂಜಲುಗುಳುವ ಪಾತ್ರೆ) ಚೆಲ್ಲಾಪಿಲ್ಲಿಯಾಗಿ ಕೋಣೆಯಲ್ಲೆಲ್ಲಾ ಕಂಡುಬರುತ್ತಿವೆ. ಏಹ್ಯವಾದ ಈ ಕೋಣೆಯ ವಾತಾವರಣವು ಅತನಿಗೆ ಬಹು ಜುಗುಪ್ಸೆಯನ್ನುಂಟು ಮಾಡಿದವು. ತಲೆಮಾರುಗಳಿಂದ ಪಾಪಪಂಕಿಲವಾದ ಅತಿ ನೀಚದ ಕಾಮಕಲಾಪಗಳಿಗೆ ಇದು ನಿಲಯ. ಲೆಕ್ಕವಿಲ್ಲದಷ್ಟು ಜೀವನಗಳನ್ನು ನಾಶನಮಾಡಿ ತನ್ನ ಹೊಟ್ಟೆಯಲ್ಲಿ ಹಾಕಿಕೊಂಡ ಈ ಕೋಣೆಯಕ್ಕಿಂತ ಅಪವಿತ್ರವಾದ ಸ್ಥಳವು ಮತ್ತೆಲ್ಲಿ ಯಾದರು ಇದ್ದೀತೆ? ಇಲ್ಲಿಯೇ ಜೀವನವನ್ನು ನಡೆಸುತ್ತಾ ಸರಳ ತನ್ನ ಉದಾತ್ತತೆ ಯನ್ನು ಹೇಗೆ ಕಾಪಾಡಿಕೊಂಡಿದ್ದಳೋ? ಇಷ್ಟಕ್ಕೂ ನಾನು ದುಸ್ಸಾಧ್ಯವಾದ ಕೆಲಸಕ್ಕೆ ಕೈಹಚ್ಚಲಿಲ್ಲವಲ್ಲವೇ?
ರಂಗನಾಥಯ್ಯರು ಸರಳಳ ತಂಗಿಯನ್ನು “ಈ ನರಕ ಕೂಪದಲ್ಲಿ ನೀವೆಂತು ಜೀವಿಸುತ್ತಿದ್ದೀರಮ್ಮಾ?” ಎಂದು ಕೇಳಿದ.
“ಅಲ್ಲರೀ! ಇದು ನಮ್ಮ ತಾಯಿಯ ಮಲಗುವ ಕೋಣೆ” ತರಳ ಅಮಾಯಕತನದಲ್ಲಿ ಬದುಲಿತ್ತಳು.’
“ಇದರಲ್ಲಿ ಆಶ್ಚರ್ಯವಿಲ್ಲ ಬಿಡು. ಈ ಕೊಳೆಯ ಕೂಪದಿಂದ ಬೇಗನೆ ಆಚಿಗೆ ಕರೆದುಕೊಂಡು ಹೋಗಮ್ಮಾ!” ಈ ಮಾತು ಕೇಳಿ ಆ ಹುಡಿಗಿ ಹಾಲಿನಿಂದ ನಡೆದು ಹೋಗಿ ಬಾಗಿಲಿ ತೆಗೆದಳು. “ಇತ್ತ ಬನ್ನಿ ಹೀಗೆ ಹೀಗೆ.”
-೭-
ಸರಳಳ ಕೋಣೆಯೊಳಗೆ ಹೋಗುತ್ತಾ ರಂಗನಾಥಯ್ಯರು ’ಹಮ್ಮಯ್ಯ! ನರಕದಿಂದ ಸ್ವರ್ಗಕ್ಕೆ” ಎಂದ. ಆತನು ಮೊದಲು ನೋಡಿದ ಕೋಣೆಗೂ ಇದಕ್ಕೂ ಎಷ್ಟು ವ್ಯತ್ಯಾಸವಿದೆ. ಗೋಡೆಗಳು ಅಂದವಾಗಿ ಕನ್ನಡಿಗಳಂತೆ ಹೊಳಿಯುತ್ತಿವೆ. ಕೋಣೆಗೆ ನಾಲ್ಕುದ್ವಾರಗಳು. ಆರು ದೊಡ್ಡ ಕಿಟಿಕಿಗಳು ಇರುವುದರಿಂದ ಗಾಳಿ ಧಾರಾಳಾವಾಗಿ ಬೀಸುತ್ತಿದೆ. ಡೋಮು ಹಾಕಿದ ಪೆಟ್ರೋಮಾಕ್ಸು ಲೈಟ್ ಬೆಳಿದಿಂಗಳ ಬೆಳೆಕಂತೆ ಕೋಣೆಯಲ್ಲಾ ಕಾಂತಿ ಪ್ರಸರಿಸುತ್ತಿದೆ. ದ್ವಾರಬಂಧಗಳಿಗೆ ಮಾವಿನ ಎಲೆಯ ತೋರಣೆಗಳು ಚೆಂಡುಹೂವಿನ ಹಾರಗಳು, ವಿಚಿತ್ರ ಶೋಭೆಯನ್ನು ನೀಡುತ್ತಿವೆ. ಕೋಣೆಯಲ್ಲಿ ಬೆಳ್ಳನೆಯ ಅಮೃತ ಶಿಲೆಯ ಟೇಬಲ್ ಇದೆ. ಅದರ ಮೇಲೆ ಅವಾಗಲೇ ಹಾರಿಬಂದು ಕುಳಿತಿದೆಯೇನೋ ಎನ್ನುವಂತ ಒಂದು ಎನಾಮಿಲ್ ನವಿಲುನ ವಿಗ್ರಹ ಪುಚ್ಛವನ್ನು ಬಿಚ್ಚಿಟ್ಟು ಅದರೊಳಗಿಂದ ಅಗರು ಸುವಾಸನೆ ಬೀರುತ್ತದೆ. ಕೋಣೆಯನ್ನು ತುಂಬುತ್ತಿದೆ. ಚಿತ್ರಪಟಗಳು, ರಾಮಾಯಣ…. ಭಾರತ ಕಥೆಗಳಿಗೆ ಸಂಬಂಧಪಟ್ಟ ಚಿತ್ರಗಳು ಕೋಣೆಯತುಂಬಾ ಅಲಂಕರಿಸಲಾಗಿದೆ. ಗೋಡೆಗಳಲ್ಲಿ ಎರಡು ನಿಲುವು ಕನ್ನಡಿಗಳು ಅಮರಿಸಲ್ಪಟ್ಟು ಅಲ್ಲಿನ ಶೋಭೆಯನ್ನು ಎರಡು ಪಟ್ಟು ಮಾಡುತ್ತಿದೆ. ಕೋಣೆಯ ಮಧ್ಯದಲ್ಲಿ ಒಂದು ಸೋಫಾ, ಅವರ ಸುತ್ತಲೂ ಕುಷನ್ನಿನ ಕುರ್ಚೀಗಳು ಪವ್ವಳಿಸುವ ಮಂಚವು ಇದೆ. ಓಕ್ ಕಟ್ಟಿಗೆಯಿಂದ ಮಾಡಿ ಪಾಲಿಷ್ ಮಾಡಿಸಿದ ರಿವಾಲ್ವಿಂಗ್ ಬುಕ್ ಷೆಲ್ಫ಼್ ಒಂದು ಅಲ್ಲಿದೆ. ಅದರ ಮೇಲೆ ಪ್ರಪಂಚದ ಮಹಾ ಮೇಧಾವಿಗಳ, ವೀರರ ಬಸ್ಟ್ ಸೈಜು ವಿಗ್ರಹಗಳಿವೆ. ಕಿಟಿಕಿಯ ಹತ್ತಿರ ಕಪ್ಪುಬಣ್ಣದ ಮೇಜಾ ಒಂದಿದೆ. ಅದರ ಮೇಲೆ ಒಂದು ವೀಣೆ, ಗುಲಾಬೀ ಹೂಗಳ ನಡುವೆ ಇಟ್ಟಿದ್ದಾರೆ. ರಂಗನಾಥಯ್ಯರು ಆ ಕಡೆ ನೋಡಿದರು. ಆಶ್ಚರ್ಯ! ಟೇಬಲ್ ಮೇಲೆ ತನ್ನ ಫೋಟೋ ಕಂಡುಬಂತು. ‘ಈ ಸೊಗಸುಗಿತ್ತಿಯ ಹೃದಯವನ್ನು ವಶಪಡಿಸಿಕೊಳ್ಳುವ ಆಕರ್ಷಣೆ ಈ ರಂಗನಾಥಯ್ಯರಿನಲ್ಲೇನಿದೆ?” ಎಂದು ತನ್ನನೇ ತಾನು ಕೇಳಿಕೊಂಡ. ನನ್ನಲಿಯ ಅಂದಚಂದಗಳಲ್ಲ! ನನ್ನೊಳಗಿನ ಮೇಧಾಶಕ್ತಿ ಅವಳಿಗೆ ಹಿಡಿಸಿರಬೇಕು. ಪ್ರೇಮದ ದ್ವಾರಗಳನ್ನು ಪ್ರೇಮವೇ ತೆರೆಯಬೇಕು. ಪಾಪ! ಸರಳ ಹುಚ್ಚು ಹುಡಿಗಿ. ಯಾರ ಅಭಿಮಾನವನ್ನೂ ಅರಿಯಳು! ಪ್ರೇಮವನ್ನು ಕೂಡಾ!”
ಪಕ್ಕದ ಹಾಲಿನಿಂದ ಯಾರದೋ ಭಾರವಾದ ಪದಧ್ವನಿ ಕೇಳಿಬಂದು ಆ ಕಡೆ ತಿರುಗಿ ನೋಡಿದ. ಯಾರು ಬರುತ್ತಿಲ್ಲ. ಬಾಗಿಲುಗಳು ಸದ್ವಾಗದಂತೆ ಮುಚ್ಚಿಬಿಟ್ಟ. ಆ ಕಡೆಯ ಹಾಲಿನಲ್ಲಿ ಅನಾಗರಿಕತೆ, ವಿಕೃತ, ಜುಗುಪ್ಸೆ. ಈ ಕಡೆಯ ಕೋಣೆಯಲ್ಲಿ ಸೌಂದರ್ಯ, ಕಲಾಮಯ ನೈರ್ಮಲ್ಯ ವಾತಾವರಣ. ನಿಸರ್ಗದಲ್ಲಿ ದ್ವಂದ್ವಶಕ್ತಿಗಳ ಸಂಪುಟೀಕರಣ ಇಲ್ಲಿಯೇ ಕಂಡುಬರುತ್ತಿದೆ.” ಅಂದುಕೊಳುತ್ತಾ ತರಳಳನ್ನು ಕರೆದ.
“ಆ ಬಾಗಿಲು ಮುಚ್ಚಿಬಿಡಬಾರದೇ, ನಿನಗೆ ಪುಣ್ಯ ಬಂದೀತು. ದುರ್ನಾತಕೊಂದುಹಾಕುತ್ತಿದೆ.”
ಸೃಷ್ಟಿಯಲ್ಲಿ ಅನಾದಿನಿಂದಲೂ ಪಾಪ, ಪುಣ್ಯಗಳು ಒಂದರ ಬಗಲಿನಲ್ಲಿ ಇನ್ನೊಂದು ಇರುತ್ತಲೇ ಇರುತ್ತದೆ. ಎಂಬ ಸಮಾಧಾನವೂ ಬಂತು. ಅಯ್ಯರು ನಿರ್ಘಾಂತ ಹೋದ. ಸಣ್ಣಹುಡಿಗಿಗೆ ಇಷ್ಟು ದೊಡ್ಡ ಭಾರದ ಮಾತುಗಳೇ! ಸ್ವಲ್ಪಕಾಲ ನಿಂತು ನೋಡುತ್ತಿದಂತೆ ಸರಳಳೇ ಪ್ರತ್ಯಕ್ಷವಾದಳು.
ತಕ್ಕ ಮಾತ್ರದ ಅಲಂಕರಣೆಗಳು ಅವಳ ಅಭಿರುಚಿ ಘನವಾದದ್ದೆಂದು ವ್ಯಕ್ತಪಡಿಸುತ್ತಿವೆ. ಸರಳ ಬರುತ್ತಲೇ ನಮಸ್ಕರಿಸಿ ಕುಳಿತುಕೊಳ್ಳಲು ಕುರ್ಚಿಯನ್ನು ತೋರಿದಳು. ಆತನು ಕುಂತ ಕೂಡಲೇ ತರಳ ಹೊರಗೆ ನಡೆದಳು. ಸರಳ ಎದುರಿಗೆ ಬಂದು ಎದುರಿನಲ್ಲಿದ್ದ ಟೇಬಲ್ಲಿನ ಮೇಲೆ ಒರಗಿ, ಮೊಣ ಕೈಗಳ ಮೇಲೆ ಭಾರವಿಟ್ಟು ಕೈಗಳ ಮೇಲೆ ಮೊಗವನ್ನಿಟ್ಟುಕೊಂಡು ನಿಂತು ನೋಡುತ್ತಿದ್ದಾಳೆ. ಅವಳ ಸೊಗಸನ್ನು ಕಂಗಳ ಮೂಲಕ ಕುಡಿಯುತ್ತಿದ್ದಾನೆಯೇ ಎಂಬಂತೆ ಆತನು ತದೇಕ ದೀಕ್ಷೆ ಯಿಂದೆ ಅವಳಕಡೆ ನೋಡುತ್ತಿದ್ದಾನೆ. ಸರಳ ನಾಚಿಕೆಯಿಂದ ತಲೆ ತಗ್ಗಿಸಿದಳು. ಕಾಲಿನ ಹೆಬ್ಬೆರಳಿ ನಿಂದ ನೆಲದಮೇಲೆ ಬರೆಯುತ್ತಿದ್ದಾಳೆ. ತಾನು ಆ ರೀತಿ ನೋಡುವುದು ಒರಟುತನವೆಂಬುದನ್ನು ಅತನಿಗೆ ನೆನಪಾಗಲಿಲ್ಲ. ಸರಳ ಕಾಣಿಸಿದ ಕೂಡಲೇ ಇದಕ್ಕು ಮುಂಚೆ ತಾನು ಸಿದ್ಧಪಡಿಸಿಕೊಂಡಿದ್ದ ಪ್ರಸಂಗವನ್ನು ಮರೆತುಹೋದ. ಈಗ ಅತನಿಗೆ ಒಂದೆ ಕೋರಿಕೆ. ಲಲಿತವಾದ ಅವಳ ತುಟಿಗಳ ಮೇಲೆ ಮುದ್ರಿಸಿದಂತೆ ಒಂದು ಮುತ್ತು ಇಟ್ಟರೆ ಯಾರು ಅಡ್ಡುವರು? ಎಷ್ಟೋ ಕಷ್ಟದಮೇಲೆ ತನ್ನ ಬಯಕೆಯನ್ನು ಒಳಗೆ ಹತ್ತಿಕ್ಕಿದ. ಸರಳ ಅಂದ ಕಡೆಯ ಮಾತುಗಳನ್ನು ಜ್ಞಾಪಿಸಿಕೊಳ್ಳುತ್ತಾ ಅದೆಲ್ಲಾ ನಿಜವೇ! ಆದರೆ ಅನೀತಿಯನ್ನು ಬಯಸ ತಕ್ಕದ್ದೇನಾ? ನೀವು ಹೇಳಿದಂತೆ ನೀತಿಯ ಪಕ್ಕದಲ್ಲೇ ಅನೀತಿ ನಿಂತಿದೆ ಎಂದರೆ ಅದನ್ನು ನೋಡಿ ಸಹಿಸಬೇಕೆಂದು ಅರ್ಥವಲ್ಲ. ಸಂಪೂರ್ಣವಾಗಿ ತೊಡೆದು ಹಾಕಬೇಕೆಂದು.”
“ನಿಮ್ಮಂತಹ ವಿಜ್ಞಾನಿಗಳ ಮುಂದೆ ನಮ್ಮಂತಹ ಅಜ್ಞಾನಿಗಳು ಬಾಯಿ ತೆರೆಯಲಾದೀತೆ?”
“ಬಾಯಿ ತೆರೆಯಲಾರಿರಿ. ಆದರೆ ನಿಮ್ಮಂತಹ ಶಿಷ್ಯಯರು ನಮ್ಮಂತಹ ಗುರುಗಳಿಂದ ನಾನಾ ಅಸಂದರ್ಭಗಳನ್ನು ಮಾತನಾಡಿಸಬಲ್ಲರು.”
“ಕೆಟ್ಟದು ಬೆಳೆಯುತ್ತಿದ್ದಂತೆ ಒಳಿತೆಂಬುದು ಕ್ಷೀಣಿಸುತ್ತಲೇ ಇರುತ್ತದೆ. ಇದು ಲೋಕ ಸಹಜವಾದದ್ದೇ ಮತ್ತೆ.”
“ಅದಕ್ಕೆಂದೇ ಅನೀತಿಯನ್ನು ಮಟಮಾಯಮಾಡಿಬಿಡಬೇಕು”
“ಹೇಗೆ ಹೋಗಲಾಡಿಸುವುದೋ ಹೇಳಿ? ವಿಜ್ಞಾನದ ಉದಯವಾಗುವವರೆಗೂ ಒಳ್ಳೆಯದು ಕೆಟ್ಟದೂ ಒಂದೆ ಕಡೆ ಬೆಳೆದವಲ್ಲವೇ? ಮಾಯ ಎಂಬುದೊಂದಿದೆ ಅನ್ನುತ್ತೇನೆ ನಾನು. ಆ ಮಾಯೆಗೆ ನೀತಿ, ಅನೀತಿ ಅಂಬುವವೆರಡೂ ಅವಳಿಜವಳಿ ಮಕ್ಕಳು…ಮತ್ತೆ ಮಾಯೆ ಇಲ್ಲದ ಸೃಷ್ಟಿಯೇ ಇಲ್ಲ.”
ಸರಳಳಾಡಿದ ಈ ಮಾತುಗಳಿಗೆ ಅರ್ಥವೂ ತಿಳಿಯದ ರಂಗನಾಥಯ್ಯರು ಸ್ವಲ್ಪ ಗೊಂದಲಕ್ಕೊಳಗಾದರು. ಒಂದು ಕ್ಷಣದ ನಿಶ್ಶಬ್ದದ ಮೇಲೆ ಆತನು ಸರಳಳನ್ನುದ್ದೇಶಿಸಿ, “ದೇವತಾ ಸ್ತ್ರೀಯಂತೆ ಕಾಣುತ್ತಿ ಸರಳಾ! ನಾನು ಸೊಕ್ರಟೀಸು ನೆಂದು ಹೇಳಲು ಹೋಗುವುದಿಲ್ಲ. ಆದರೆ ನೀನೀಗ ಹೇಳಿದ್ದೆಲ್ಲಾ ವೇದಗಳೊಳಗಿನ ಮಿಸ್ಟಿಸಿಜಂ. ಅದು ವೇದ ಪಂಡಿತರಿಗೆ ಅರ್ಥ ವಾಗದ ವಿಷಯ. ಪ್ರತ್ಯಕ್ಷ ಜೀವನದಲ್ಲಿ ನಮಗೆ ಎದುರಾಗುವ ವಿಷಮ ಸಮಸ್ಯೆಗಳನ್ನು ಪರಿಷ್ಕರಿಸಿ, ಕೊಳ್ಳಲು ಈ ವೇದ ವಿಜ್ಞಾನ ಎಳ್ಳಷ್ಟಾದರೂ ಉಪಯೋಗಕ್ಕೆ ಬರುವುದಿಲ್ಲ. ಯಾವ ಜ್ಞಾನದ ಬಗ್ಗೆ ಪಂಡಿತರು ಮಾತಾಡುವರೋ ಆ ವಿಜ್ಞಾನ ಎಲ್ಲರಿಗೂ ಎಟುಕುವುದಿಲ್ಲ. ಕೆಲವು ಜನರಿಗೆ ಸಾಧ್ಯ ಅದು ಕೂಡಾ ಸಂಶಯವೇ?”
“ಅಂದಮೇಲೆ ನಮಗೆ ಕೆಲಸಕ್ಕೆ ಬರುವ ಜ್ಞಾನವೆಂತಹುದೆನ್ನುವಿರಿ?”
“ಅದು ಒಂದೇ ಒಂದು. ಯುಗ ಯುಗಗಳ ಜೀವನಾನುಭವ! ಈ ವಿಜ್ಞಾನವೇ ನಮ್ಮದೈನಂದಿನ ಜೀವನದಲ್ಲಿ ಸಹಕಾರಿಯಾಗುತ್ತದೆ. ಕತ್ತಿಲಿನಿಂದ ಬೆಳಕಿಗೆ ಕೊಂಡೊಯ್ಯುತ್ತದೆ.”
ನಿಮ್ಮಂಥಾ ಗುರುಗಳ ಉಪದೇಶವನ್ನು ಪಡೆಯುತ್ತಾ ಈ ಜೀವನವನ್ನು ಕಳೆಯುತ್ತೇನೆ.”
“ನಾನೇನು ಮಹಾನುಭಾವನಲ್ಲ. ನನ್ನ ಮೇಲಿನ ಅಭಿಮಾನದಿಂದ ನೀನು ಹಾಗೆಂದು ಭಾವಿಸುತ್ತಿರುವೆ. ಆದರೆ ನಾನು ಹೊಗಳಿಕೆಗೆ ಪಾತ್ರನಲ್ಲ. ಸರಳಾ! ನಾನೊಂದು ಕಾಲೇಜೆ ನಲ್ಲಿ ಮಾಸ್ತರ. ಆದರೆ ನಿನ್ನ ಮನೋನಿಶ್ಚಯ ದೊಡ್ಡದು. ಈ ಜೀವನದಿಂದ ಹೊರಗೆ ಬಾ! ಅದಕ್ಕೆ ನನ್ನ ಕೈಲಾದ ಸಹಾಯ ಮಾಡುತ್ತೇನೆ.”
“ಧನ್ಯಳಾದೆ. ದೇವರದಯ ನನ್ನ ಮೇಲಿದೆ. ಇಲ್ಲದಿದ್ದಲ್ಲಿ ನೀವು ನನ್ನಲ್ಲಿಗೆ ಹೇಗೆ ಬರುತ್ತಿದ್ದಿರಿ? ನನ್ನದು ಅಪವಿತ್ರವಾದ ಜೀವನವೆಂದು ಈಗೀಗಲೇ ನಿಮ್ಮಿಂದ ತಿಳಿದುಕೊಳ್ಳುತ್ತಿದ್ದೇನೆ. ನನ್ನ ಬದುಕಿನ ಮೇಲೆ ನನಗೇ ಹೇಸಿಗೆ ಯಾಗುತ್ತಿದೆ. ಛೀ! ಛೀ! ನನ್ನನ್ನೀ ಕೊಳೆಯ ಕೂಪದಿಂದ ಹೊರಕ್ಕೆ ತೆಗೆದುಕೊಂಡು ಹೋಗಲಾರಿರಾ? ನನ್ನನ್ನು ಕನಿಕರಿಸಿ ಪ್ರಭೋದಿಸಿರಿ. ನಿಮ್ಮೊಂದಿಗೆ ಪ್ರಪಂಚದ ಕೊನೆಗಾದರೊ ಪ್ರಯಾಣಮಾಡಲು ಸಿದ್ಧ. ರಕ್ಷಿಸಿರಿ.”
‘ಪ್ರಪಂಚದ ಕೊನೆಯ ವರೆಗೂ’ ಅವಳು ತನ್ನೊಡನೆ ಪ್ರಯಾಣಿಸುವುದು! ಇದಲ್ಲ ಪ್ರೊಫೆಸರ್ ಅವಳಿಂದ ಬಯಸಿದ್ದು.
“ನನ್ನ ಉದ್ದೇಶವದಲ್ಲ ಸರಳಾ! ನೀನೀ ಜೀವನ ವಿಧಾನವನ್ನು ತ್ಯಜಿಸಬೇಕೆಂದು ನನ್ನ ಕೋರಿಕೆ. ಇದನ್ನು ಬಿಟ್ಟು….”
“ಏನು ಮಾಡಬೇಕೆನ್ನುತ್ತೀರಿ?”
“ನಿನ್ನಾರು ಪ್ರೀತಿಸುತ್ತಿಲ್ಲವೆ?”
“ನನ್ನನೇ? ಪ್ರೀತಿಸುವುದೇ? ಪ್ರೇಮಿಸುವುದೇ? ಎಂಥ ವಿಚಿತ್ರ ಮಾತುಗಳನ್ನಾಡುತ್ತಿದ್ದೀರ್ರೀ ನೀವು?”
“ಏನು?”
“ನೀವು ತೆಗೆದು ಕೊಳ್ಳುತ್ತಿರುವ ಇದರಷ್ಟು ಸ್ವಲ್ಪ ಶ್ರದ್ಧೆಯನ್ನೂ ಯಾರೂ ತೆಗೆದುಕೊಳ್ಳಲಿಲ್ಲ. ತಾಯಿ ಇದ್ದಾಳೆಂದರೆ ಅದು ನನ್ನ ತಾಯಿಯೇ ಅಲ್ಲ. ಹೋಗಲಿ ನಮ್ಮ ಮನೆಗೆ ಬರುವ ಮನುಷ್ಯರೋ? ಅಂದರೆ ಅವರು ಪ್ರೀತಿ ಎಂಬದೊಂದಿದೆ ಎಂಬ ವಿಷಯವನ್ನೇ ಕೇಳದಂಥವರು?”
ಅವಳ ಕಪ್ಪು ಬಣ್ಣದ ಕಣ್ರೆಪ್ಪಗಳ ತುಂಬಾ ನೀರು ತುಂಬಿಕೊಂಡಿತು. ಕಣ್ಣೀರ ಹನಿಗಳು ಜುಳುಜುಳು ಜಾರಿಬೀಳುತ್ತಿವೆ. ಅವಳ ಸ್ಥಿತಿಯನ್ನು ನೋಡುತ್ತಿದ್ದಂತೆ ಪ್ರೊಫೆಸರರ ಕರುಣೆ ತುಂಬಿದ ಹೃದಯ ಕರಗಲಾರಂಭಿಸಿತು. ಆದರೆ ಅವಳನ್ನು ತಾನೇನು ಮಾಡುವುದು? ತನ್ನ ಹಿಂದೆ ಲೋಕದ ಮಧ್ಯಕ್ಕೆ ಹೋಗುವ ಧೈರ್ಯವೂ ಇಲ್ಲವಲ್ಲಾ?
“ಯಾರನ್ನಾದರೂ ಮದುವೆ ಮಾಡಿಕೊಂಡರೆ ಒಳ್ಳೆಯದು ಸರಳಾ!”
“ಅಂದರೆ ಯಾರೋ ಒಬ್ಬ ಚಂಡಾಲನಿಗೆ ಕಲಕಾಲವೂ ನಾನು ಪೂರ್ತಿ ಯಾಗಿ ತೊತ್ತಾಗಿ ಬಿದ್ದಿರಬೇಕೆಂದು ನಿಮ್ಮ ತಾತ್ಪರ್ಯವೇ?” ಸರಳ ಮಂದಹಾಸವನ್ನು ಬೀರಿದಳು. ಸ್ವಲ್ಪಸಮಯ ಸುಮ್ಮನಿದ್ದು ಮತ್ತೆ ಹೀಗೆಂದಳು. “ನನ್ನಂಥಾ ಹಾದರದ ಹುಡಿಗಿಯನ್ನು ಯಾವ ಮರ್ಯಾದಸ್ತನು ತಾನೇ ಮದುವೆ ಯಾಗುವನೋ ನೀವೇ ಹೇಳಿ?”
ಸರಳ ಕೇಳಿದ ಪ್ರಶ್ನೆ ರಂಗನಾಥರಿಯ್ಯರಿಗೆ ಹಿಂದೆಂದೂ ತಟ್ಟಿ ಇರಲಿಲ್ಲ. ಈ ಸಮಸ್ಯೆಯನ್ನು ಸಂಪೂರ್ಣವಾಗಿ ಎಂದೂ ಚರ್ಚಿ ಮಾಡಿರಲಿಲ್ಲ. ವ್ಯಭಿಚಾರ ನಿರ್ಮೂಲನೆ ಹೇಗೆ ಸಾಧ್ಯವೋ, ಹೇಗೆ ಅಸಾಧ್ಯವೋ ಆತನು ಯೋಚಿಸಿರಲೇ ಇಲ್ಲ. ಪುಸ್ತಕಗಳ ಸಿದ್ಧಾಂತಗಳನ್ನು ಮತ್ತೆ ಮತ್ತೆ ಒಪ್ಪಿಸುವುದು, ಬಿಟ್ಟು ಅವುಗಳನ್ನು ಬದುಕಿನಲ್ಲಿ ಹೇಗೆ ಪರಿವರ್ತಿಸಿಕೊಳ್ಳಬೇಕೋ ಊಹಿಸಿಯೂ ಇರಲಿಲ್ಲ. ಹಾದರದ ಹುಡಿಗಿಯರೆಂದರೇ ಒಂದೇ ನಿರ್ವಚನೆ! ಅವರು ಜೀವನದಲ್ಲಿ ಸೋತು ಹೋದ ಹೆಂಗಸರು. ಸೂಳೆಗಾರಿಕೆಗೆ ವ್ಯತಿರಿಕ್ತವಾದ ವಾದಗಳನ್ನು ಕಲಿಯಹಾಕುವದರಲ್ಲೇ ಕಾಲವೂ ಕಳೆದು ಹೋಯಿತು. ಸೈನಿಕನಂತೆ ಈ ಪುಸ್ತಕ ವಿಜ್ಞಾನದ ಮಧ್ಯ ಕವಾಯತು ನಡೆಸುತ್ತಿದ್ದಾನೆ. ಇದೀಗ ಅವನ ಅಲಸತ್ವದ ಬಗ್ಗೆ ಅವನಿಗೇ ಅರ್ಥವಾಗಿ ಶರೀರದ ನೀರೆಲ್ಲಾ ಆವಿಯಾದಂತಾಯಿತು…..ಕಟ್ಟೆಕಡೆಗೆ ಆತನು ಅಂದುಕೊಂಡನಲ್ಲಾ! ನಾನೇ ರಾಜನಾಗಿದ್ದಲ್ಲಿ ರೊಕ್ಕವನ್ನು ತೋರಿಸಿ ಎಲ್ಲವನ್ನೂ ಗೆಲ್ಲ ಬಹುದಿತ್ತು. ಸರಳಗೆ ಓದಿಕೊಂಡ ಹುಡುಗನನ್ನು ನೋಡಿ, ಧನಾಸೆ ತೋರಿಸಿ ಮದುವೆ ಮಾಡುತ್ತಿದ್ದೆನು… ಹೋಗಲಿ, ಮಾತಿನ ನೆಪಕ್ಕಾದರೂ ತಾನೊಬ್ಬ ರಾಜನಾಗಿ ಹುಟ್ಟಿದನೆಂದುಕೊಳ್ಳೋಣ! ಆಗಲೂಕೂಡಾ ಸರಳಳನ್ನು ಮದಿವೆಯಾಗಬಲ್ಲ ವಿದ್ಯಾವಂತ, ಯುವಕ, ಚೆಲುವ ಸಿಗಬೇಕಲ್ಲವೇ, ತನಗೆ ಮದುವೆ ಯಾಗದಿದ್ದಲ್ಲಿ ಎಷ್ಟು ಚೆನ್ನಾಗಿರುತ್ತಿತ್ತು. ಪ್ರಪಂಚವನ್ನು ಧಿಕ್ಕರಿಸಿ ಯಾದರೂ ಸರಳಳನ್ನು ಮದುವೆ ಮಾಡಿಕೊಳ್ಳುತ್ತಿದ್ದ.
ಇಬ್ಬರ ನಡುವನ ಸಂಭಾಷಣೆ ನಿಂತು ಹೋಯಿತು. ಅವನು ಮೌನವಾಗಿ ಕುಳಿತ. ಮುಖವು ಕಳೆ ತಪ್ಪಿತು. ಈ ನಿಶ್ಶಬ್ದ ಬಹಳ ಅಸಹನೆ ಉಂಟುಮಾಡುತ್ತಿದೆ. ಸರಳ ಯಥಾಲಾಪವಾಗಿ ಮೇಜಾ ಮೇಲಿದ್ದ ವೀಣೆಯನ್ನು ಕೈಗೆತ್ತುಕೊಂಡಳು. ಸೋಫಾದ ಕೊನೆಗೆ ಹೋಗಿ ಕುಸಿಬಿದ್ದು ಮಧುರವಾದ ಕೃತಿಯೊಂದನ್ನು ಅಷ್ಟೇ ಮಧುರವಾಗಿ ಹಾಡಲಾರಂಭಿಸಿದಳು. ಆತನಿಗೆ ಸಂಗೀತ ವೆಂದರೆ ಪ್ರಾಣ. ಕೃತಿ ಬಹು ಚೆನ್ನಾಗಿದೆ. ರಾಗವು ಸರಾಗವಾಗಿ ಕೇಳಿಬರುತ್ತಿದೆ. ಹಾವು ಹೆಡೆಯೆನೆತಿ ಆಡಿದಂತೆ, ಹರಿಣಬಾಲೆ ಜಿಗಿಯುತ್ತಿದ್ದಂತೆ, ಅವನ ಹೃದಯ ಸಂತೋಷದಿಂದ ಕುಣಿಯುತ್ತಿತ್ತು. ನಾಜೂಕಾದ ಬೆರಳುಗಳಿಂದ ವೀಣೆಯನ್ನು ಮೀಟುತ್ತಿದ್ದರೆ ಸರಳ ಗಂಧರ್ವ ಕನ್ಯೆಯಂತೆ ಸ್ಫುರಿಸಿತು. ವೀಣೆಯ ಮೆಟ್ಟೆಲುಗಳ ಮೇಲೆ ನರ್ತಿಸುತ್ತಿದ್ದ ಅವಳ ಬೆರಳು ಅವೆಷ್ಟು ಸೊಗುಸಾಗಿವೆ! ನಿಸ್ತಬ್ದತೆ ಯಿದ್ದ ಆ ವಾತಾವರಣದಲ್ಲಿ ಕೇಳಿ ಬರುತ್ತಿದ್ದ ಸಂಗೀತವೂ ಆತನನ್ನು ಬಾಹುಗಳನ್ನು ಸಾಚಿ ಬಂಧಿಸಿಟ್ಟಿಂತೆ ಅನ್ನಿಸಿತು. ನಿಸ್ಸಹಾಯಕಳಾದ ಒಬ್ಬ ಸುಕುಮಾರಿಯನ್ನು ಉದ್ಧರಿಸುವ ಬಗೆ ಹೇಗೆಂಬ ಆತನ ಆಲೋಚನಾಹಾರವು ಹರಿದು ಹೋಯಿತು. ಮುಳುಗಿ ಹೋಗುತ್ತಿದ್ದಾನೆ. ಆತ್ಮವನ್ನು ಕರಗಿಸುವ ಸಂಗೀತದಲ್ಲಿ ತೇಲುತ್ತಿದ್ದಾನೆ. ಇದಕ್ಕಿಂತಲೂ ಬೇರೇ ಸ್ವರ್ಗ ಎಲ್ಲಾದರೂ ಇರಬಲ್ಲುದೇ? ಅರ್ಥವಿಲ್ಲದ ಪುರಾಣಕಲ್ಪನೆಗಳು. ದೇವತೆಗಳಂತೆ ಇರುವ ಅವಳ ತುಟಿಗಳನ್ನು ಮುತ್ತನೀಡುವುದೇ ನಿರ್ವಾಣ. ಚಿದಾನಂದವೆಂಬ ಹುಚ್ಚು ವೇದಾಂತದಲ್ಲಿಬಿದ್ದು ಮಹರ್ಷಿಗಳು ಈ ನಿರ್ವಾಣವನ್ನು ಹೊಂದಲಾರದೇ ಹೋದರು.
ಸರಳಳ ಬೆರಳುಗಳು ವೀಣೆಯ ಮೇಲೆ ನರ್ತಿಸುತ್ತಲೇ ಇವೆ. ಹಾಡುತ್ತಿದ್ದ ಜಾವಳೀ ರಸವತ್ತರವಾಗಿ ಮುಗಿಯಲು ಬರುತ್ತದೆ. ತೆಳ್ಳನೆಯ ಸಿಹಿಯಾದ ಸಂಗೀತದ ಪೂರೆ ಕೋಣೆಯನ್ನೆಲ್ಲಾ ಮುಳುಗಿ ಹೋಗುವಂತೆ ಹರಡಿತ್ತು. ನಿಜವಾಗಿ ಪ್ರಪಂಚದ ತುದಿಯವರೆಗೂ ನನ್ನೊಡೆನೆ ಬರಬಲ್ಲೆಯಾ ಸರಳಾ? ಪ್ರೊಫೆಸರ್ ತಟಕ್ಕನೆ ಎದ್ದು ಮುಂದೆ ನಡೆದ. ಅವಳ ತುಟಿಗಳನ್ನು ಮುದ್ದಾಡಿದ. ಸರಳ ಕೈಗಳಲ್ಲಿಯ ವೀಣೆ ಜಾರಿಹೋಯಿತು.
ಹೊರಗಿನ ವರಾಂಡಾದಿಂದ ವಿಕಟಾಟ್ಟಹಾಸ ಕೇಳಲು ಸುರುವಾಯಿತು. ರಂಗನಾಥಯ್ಯರು ಗಾಬರಿಗೊಂಡು ಬೆದರುತ್ತಾ ನೋಡಿದ. “ಸುಧಾರಣೆ ಅಂದರೆ ಇದೇ! ಒಬ್ಬರನ್ನು ಎತ್ತಲು ಹೋಗಿ ನಾವೇ ಕೆಳಗೆ ಬೀಳುವುದು.” ಎಂಬ ಮಾತುಗಳು ಕೇಳಿಬಂದು ಪ್ರೊಫೆಸರ್ ಕಕ್ಕಾಬಿಕ್ಕಿಯಾದರು. ಹಲ್ಲಲ್ಲಾ ಹೊರಕ್ಕೆ ಕಾಣುವಂತೆ ನಗುತ್ತಾ ’ವಂಚನೆಯಲ್ಲಿ ಬಿದ್ದೆ, ಮೋಸ ಮೋಸ’ ಎಂದು ವಿಕೃತವಾಗಿ ಕಿರುಚಿದ, ವಂಚನೆ ಯಲ್ಲಿ ಬಿದ್ದನೆಂಬ ಮಾತುಕೇಳಿ ಸರಳ ನಾಚಿದಳು. ಅಚ್ಚರಿಗೊಂಡಳು. ಅಮಾಯಕವಾಗಿ ನಕ್ಕಳು. ಬೆಚ್ಚಿಬಿದ್ದು ನೋಡಿದಳು. ಪ್ರೊಫೆಸರ್ ಮೆಲ್ಲನೆ ಮಾಡಿಯ ಮೆಟ್ಟೆಲು ಇಳಿದು ಮನೆಯ ಕಡೆ ಓಡಲಾರಂಭಿಸಿದ.
ಬೇಗ ಬೇಗ ಹೆಜ್ಜಗಳನ್ನಿಡುತ್ತಾ ಬೀದಿಗೆ ಬರುವ ವೇಳೆಗೆ ಮಾಡಿಯ ಮೇಲಿಂದ ಕಳ್ಳಕಳ್ಳ ಎಂದು ಕೂಗಿದ್ದು ಕೇಳಿಸಿತು. ಪೋಲೀಸರ ಟಾರ್ಚು ಲೈಟಿನ ಬೆಳಕು ಆತನ ಮುಖದ ಮೇಲೆ ಬೀಳುವಲ್ಲಿಯೇ ತಪ್ಪಿಸಿಕೊಂಡು ರಂಗನಾಥಯ್ಯರು ಮನೆಗೆ ಓಡಿಹೋದ.
ಸ್ವಲ್ಪದೂರ ನಡೆದಮೇಲೆ ಪರಿಚಯಸ್ಥರು ಎದುರು ಬಂದು ಇಂತಹ ಕತ್ತಲಿನ ವೇಳೆಯಲ್ಲಿ ಎಲ್ಲಿಂದ ಪ್ರೊಫೆಸರ್? ಆ ರಾತ್ರಿ ಅರ್ಜೆಂಟಾಗಿ ಯಾವುದೋ ಸ್ವಂತ ಕೆಲಸದ ಮೇಲೆ ರಂಗನಾಥಯ್ಯರು ಊರು ಬಿಟ್ಟು ಎಲ್ಲಿಗೋ ಹೋಗಿಬಿಟ್ಟನು.
ಮಾರನೆಯ ದಿನದ ಮುಂಜಾನೆ, ಅಮಿತ ಗೌರವನೀಯರು, ಸಹಚರರು, ಪ್ರೊಫೆಸರ್ ರಂಗನಾಥಯ್ಯರು ಕಳಿಸಿದ ರಾಜೀನಾಮೆಯ ಪತ್ರವನ್ನು ಪ್ರಿನ್ಸಿಪಾಲರು ನೋಡಿ ಕಣ್ಣಲ್ಲಿ ನೀರು ತಂದುಕೊಂಡರು. ತಾನನುಭವಿಸಿದ ದುರವಸ್ಥೆಯನ್ನು ವಿವರಿಸುತ್ತಾ ಪ್ರೊಫೆಸರ್ ಪ್ರತ್ಯೇಕವಾಗಿ ಪ್ರಿನ್ಸಿಪಾಲರಿಗೆ ಬರೆದ ಪತ್ರದಲ್ಲಿ ಪಂಕ್ತಿಗಳನ್ನು ಓದುತ್ತಿರುವಾಗ ಅವರ ಕಣ್ಣಲ್ಲಿ ನೀರು ಗಿರ್ರೆಂದು ತಿರುಗಿದವು.
*****
ಕನ್ನಡಕ್ಕೆ: ಗುತ್ತಿ (ಜೋಳದರಾಶಿ) ಚಂದ್ರಶೇಖರ ರೆಡ್ಡಿ