ಆ ದೇವರೇ ವರವಿತ್ತಂತೆ
ಆ ಊರಿಗೆ ಅದೇ ದೊಡ್ಡ ಮರ
ನಾಲ್ಕು ಹೆಗಲುಗಳು, ನೂರು ಕೈಗಳು
ಸಾವಿರ ಸಾವಿರ ಬೆರಳುಗಳು
ಸೂರ್ಯ ಚಂದ್ರ ನಕ್ಷತ್ರ ಗಣಗಳು
ಬಿಡುಗಣ್ಣಾಗಿ ನೋಡುವಷ್ಟು
ಅಷ್ಟು ದೊಡ್ಡ ಮರ
ಬೆಳಕು-ಮಳೆ-ಮಣ್ಣಿನ ಆಟದಲ್ಲಿ
ಬಯಸಿದ ಗರ ಬಿದ್ದಂತೆ
ಭರಭರ ಬೆಳೆದು ನಿಂತಿದೆ
ಅದೇ ಆ ದೊಡ್ಡ ಮರ
ಆ ಹಾದಿಯಲ್ಲಿ ಹಾರಿ ಹೋಗುವ
ಪ್ರತಿ ಹಳ್ಳಿಯೂ ತಿರುಗಿ ನೋಡುವಂತೆ
ಆ ಹಾದಿಯಲ್ಲಿ ಹಾದು ಹೋಗುವ
ಪ್ರತಿ ದಾರಿಹೋಕನು ಅದರ
ನೆರಳಿಗೆ ಆಶೆ ಪಡುವಂತೆ-
ಅಷ್ಟು ದೊಡ್ಡ ಮರ
ಊರ ಹೆಂಗಳೆಯರ
ಮುಡಿಗೇರುವುದದರ ಹೂವು
ಊರ ಮಂದಿಯ ಹಳೆಯ
ರೋಗಕ್ಕೂ ನಾಟುವುದು ಅದರ ಬೇರು
ಜಾತ್ರೆ, ಸಂತೆ, ವ್ಯಾಜ್ಯ, ಪುರಾಣ,
ಪ್ರವಚನ, ಹಬ್ಬ, ಹಾದರ, ಮದುವೆ,
ಮರಣ, ಸಕಲಕ್ಕೂ ಸಂಗಮ ಸ್ಥಳ
ಅದೇ ಆ ದೊಡ್ಡ ಮರ
ಇದೀಗ…
ಗೇಣುದ್ದ ಹಕ್ಕಿಯ ಹಿಕ್ಕೆಯ ಮೂಲಕ
ಈ ಮರದ ಅಂದ-ಚಂದ-ಗಂಧ
ಯಾವುದೋ ದೇಶದಲ್ಲಿ…
ಯಾವುದೋ ವೇಷದಲ್ಲಿ…
ಎಷ್ಟು ಸೋಜಿಗ!
*****